Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ ಪ್ರಕಾಶ್ ಪೊನ್ನಾಚಿ ಅವರ ಕವಿತೆಗಳು ನಿಮ್ಮ ಓದಿಗೆ.
ತೆಳು ಗಾಳಿಗೆ ಚಲಿಸದೆ ನಿಂತ ಇಳಿಸಂಜೆಯ ಮೋಡಗಳ ಮೇಲೆ ಪಡುವಣದಿ ಕಂತುವ ಸೂರ್ಯರಶ್ಮಿ ಎರಚಿದ ಹತ್ತಾರು ಬಣ್ಣಗಳ ವಿವಿಧ ಆಕಾರಗಳಂತೆ ಸೊಬಗು ಪ್ರಕಾಶ್ ಪೊನ್ನಾಚಿಯವರ ಕವಿತೆಗಳು. ಅಮೂರ್ತ; ಆದರೆ ಹುಡುಕಿದಷ್ಟೂ ಅರ್ಥಗಳನ್ನು ಹೊಮ್ಮಿಸಬಲ್ಲ ಸಶಕ್ತ ಕವಿತೆಗಳು. ಸಮಕಾಲೀನ ತಲ್ಲಣಗಳಿಗೆ ಸ್ಪಂದಿಸಬಲ್ಲ, ಶ್ರೀಸಾಮಾನ್ಯನ ನೋವುಗಳಿಗೆ ಬಂಡಾಯದ ದನಿ ನೀಡುವ ಆದರೆ ಆಸ್ಫೋಟಕ್ಕೆ ಎಡೆಮಾಡಿಕೊಡದ ಕವಿತೆಗಳು ಇವರವು.
ಅನಿಲ್ ಕುಮಾರ್ ಹೊಸೂರು, ಚಾಮರಾಜನಗರ, ಕವಿ
‘ಅಕ್ಕನ ಅಗರಬತ್ತಿ’ ಕವಿತೆಯು ಕೌಟುಂಬಿಕ ನಿರ್ವಹಣೆಯ ಉದ್ದೇಶದಿಂದ ಹೊಸೆವ ಅಗರಬತ್ತಿಯಿಂದ ಆರಂಭಗೊಂಡು ಗೃಹನಿರ್ಮಾಣ ವಸ್ತು ತಯಾರಿಕೆ ಮತ್ತು ಫ್ಯಾಕ್ಟರಿ ವಸ್ತು ತಯಾರಿಕೆಗಳನ್ನು ಮುಖಾಮುಖಿಯಾಗಿ ವಸ್ತುವಿನ ಗುಣಮಟ್ಟ ಅಳೆವುದರ ಜೊತೆಗೇ ಬದುಕಿನ ಗುಣಮಟ್ಟದ ವಿವೇಚನೆಗೆ ನಿಲ್ಲಿಸುತ್ತದೆ. ಉಳಿದ ಮೂರು ಕವಿತೆಗಳಾದ ಒಂದು ಮೃತ ಸಂಜೆ, ಬಣ್ಣ ಮತ್ತು ಹೊರಟವಳ ಹುಡುಕಿ ಶೋಧವನ್ನೇ ಮುಖ್ಯವಾಗಿಟ್ಟುಕೊಂಡು ರಚನೆಯಾದವುಗಳಾಗಿವೆ. ತಾತ್ವಿಕ ನಿರ್ವಚನೆಯನ್ನು ಬೇಡುತ್ತವೆ. ಕಾವ್ಯ ಮತ್ತು ಅದರ ಓದುಗರ ಮೇಲೆ ಬೀರುವ ಪರಿಣಾಮದ ದೃಷ್ಟಿಯಿಂದ ಮೊದಲ ಎರಡು ಕವನಗಳು ನನ್ನ ಓದಿಗೆ ಮುಖ್ಯ ಎನಿಸಿವೆ.
ಆರ್. ದಿಲೀಪ್ ಕುಮಾರ್, ಚಾಮರಾಜನಗರ, ಲೇಖಕರು
ಹೊರಟವಳ ಹುಡುಕಿ
ಊರಿನ ಕಡೇ ಕೇರಿಯ
ಒಂಟಿಮನೆ ಗೋಡೆಯಲ್ಲಿ
ಅಂಚೆ ಡಬ್ಬಿಯೊಂದು ನೇತುಬಿಗಿದು
ಧೂಳ್ಹಿಡಿದ ನೋಟ
ಊರು ಗುಳೇ ಹೋದ ಪುರಾವೆಗೆ
ಕ್ಲಿಕ್ಕಿಸಿದ ಫೋಟೋ ಒಂದು ಫ್ರೇಮಿಗೆ
ಇಟ್ಟಂತೆ
ಎಲ್ಲಿ ಹೋದಳು ನನ್ನ ಧಿಕ್ಕರಿಸಿ
ಹೋದ ನಮ್ಮೂರಿನ ಒಬ್ಬಳೇ ಪದ್ಮಾವತಿ?
ಕೇಳುತ್ತಿರುವೆ ನಾನು ಈಗೀಗ
ಅವಳು ಉಟ್ಟ ಮೂರು ಮೊಳದ ದಾವಣಿ
ಕಿವಿ ಭಾರವೆಂದು ಬಿಚ್ಚಿ ಮೊಳೆಗೆ ನೇತಿಟ್ಟ
ಜುಮುಕಿ
ಬೈತಲೆಗೆ ಓರೆ ಬಾರದಿರಲೆಂದು ಸಿಕ್ಕಿಸುತ್ತಿದ್ದ
ಒಂಟಿ ತಲೆಪಿನ್ನು
ಅರ್ಧ ಚಂದಿರನೆ ಹಣೆಗೆ ಒತ್ತಂತೆ ಲೇಪಿಸುತ್ತಿದ್ದ
ಬಿಳಿ ಹಣೆಬಿಂದಿ
ಎಲ್ಲಿ ಅಡಗಿಕೊಂಡವು?
ವಠಾರದ ಕಮಾನು ಬಾಗಿಲಿನಲಿ
ನಿಂತು ಬಾನ ಜಡೆಗೆ ಹೂ ಮುಡಿಯುತ್ತಿದ್ದವಳು
ದಾರಿಯಲ್ಲಿ ದಿಕ್ಕೆಟ್ಟು ದಿಣ್ಣೆಯಲಿ
ಎಡವಿದವನ ಎದೆ ಮೇಲೆ
ಮೆಲ್ಲಗೆ ನಡೆದವಳು
ಕಿರುಹುಬ್ಬು ಏರಿಸಿ ಚುಕ್ಕೆಯೊಂದ ತಾಕಿಸಿ
ಬೆಳಕ ಸಾಲ ತಂದು ಊರಿಗ್ಹಂಚಿದವಳು
ಎಲೆಯ ಸೋತ ನೋವಿಗೆ ಬೆರಳು ತಾಕಿಸಿ
ಹರಿತ್ತು ಹರಿಸಿದವಳು
ಊರನೇಕೆ ತೊರೆದಳು ಎಂದುಕೊಳ್ಳುತ್ತೇನೆ
ಒಂಟಿ ಊರಿನ ಜಂಟಿಯುಯ್ಯಾಲೆಯೊಂದು
ಒಂಟಿಯಾಗಿ ತೂಗುವಾಗ
ಈ ಊರಿಗೆ
ಇದರ ಉಸಾಬರಿಗೆ
ನಾನು ಈಗೀಗ ನನ್ನನ್ನೇ ಕೊಲ್ಲಬೇಕೆನಿಸಿದಾಗಲು
ನಾನು ಕೇಳಿಕೊಳ್ಳುತ್ತೇನೆ
ನನ್ನ ಸಾವಿನ ಋಣಕ್ಕೆ
ಈ ಬೀದಿಯ ಬೋಳುಮರದಲಿ ಕೆತ್ತಿದ
ಅವಳೊಟ್ಟಿಗೆ ಬೆರೆತ ನನ್ನೆಸರು
ಊರಿನವರೊಡನೆಯೇ ಗುಳೆ ಹೊರಟಂತೆ
ಅದೆಲ್ಲಿಗೆ ಹೊರಟು ಬಿಟ್ಟಿತು?
ಹುಡುಕುವುದು ಅದು ಬರಿ ಅವಳನ್ನಲ್ಲ
ಅವಳೊಡನೆ ಹಿಂಬಾಲಿಸಿ ಹೋದ
ಚಿಟ್ಟೆ ಹಾಡುವ ಕೂಗು
ಕತ್ತಲು ಬೆಳಕಾಗುವ ಸದ್ದು
ಗಾಳಿ ಮಾಗಿ ಹಣ್ಣಾಗುವ ನೋಟ
ಮತ್ತು
ಅಂಚೆ ಡಬ್ಬಿಯಲಿ ವಿಲೇವಾರಿಯಾಗದೆ
ಧೂಳಿಡಿದ ಎಂಟಾಣೆ ಪ್ರೇಮ ಪತ್ರಗಳನ್ನು
ಈ ಸಣ್ಣ ದ್ವೀಪದೂರಿನಲಿ
ಅವಳೇ ಹಚ್ಚಿದ ದೀಪವೊಂದು
ಇನ್ನೂ ಉರಿಯುತಿದೆ
ಅದೇ ಬೆಳಕಿನಲಿ ಕತ್ತಲೆಗೆ ಹುಡುಕುತ್ತಿರುವೆ
ನಾನು
ಅವಳು ಕತ್ತಲೆಯಲೆ ಆಂತರ್ಯವಾಗುವ
ಹಸಿ ಸದ್ದೊಂದು ಮತ್ತೆ ಕಿವಿಗೆ ಬಿದ್ದಂತಾಗಿ
*
ಅಕ್ಕನ ಅಗರಬತ್ತಿ
ಕತ್ತಲಲಿ ಲೀನವಾಗುವ ಸೂರ್ಯ
ಸುಮ್ಮನೆ ಮಲಗಲ್ಹೊರಟ ಗಾಳಿ
ತಡಬಡ ಎಂದು ಇತ್ತಲಿಂದ ಅತ್ತಲಿಗೆ
ಓಡುತ್ತಿರುವ ಜಂಗುಳಿಯಲಿ
‘ಉಣ್ಣಾಕಿಕ್ಕು ಬಾ’
ಎಂದು ಆರ್ಧರಿಸುತ್ತದೆ
ಒಂದು ವಿಪ್ಲವ ದನಿ
‘ವಸಿ ತಡಿ ಬಂದೆ’
ಇತ್ತಲಿಂದ ಸೀಳಿಕೊಂಡ ದನಿಗೆ
ಅತ್ತ ಬಾಗಿಲು ಜೋರು ಸದ್ಧಾಗುತ್ತದೆ
ಗುಡಿಸಿಲ ಜಗಲಿ ಮೇಲೆ
ಕಟ್ಟು ಕಟ್ಟಾಗಿ ಬಿದ್ದ ಎಳಸು ಬಿದಿರು
ಕಡ್ಡಿಗಳ ಎಣಿಸುತ್ತಾ
ಉಂಡೆಗೆ ಸುವಾಸಿತ ಸೆಂಟೊಂದು ಹಾಕಿ
ಮುದ್ದೆ ಮುದ್ದೆ ಬಿಡಿಸಿ
ಕಡ್ಡಿಗೆ ಉಜ್ಜಿ
ರೋಡಿನ ಇಕ್ಕೆಲಕ್ಕೆ ಒಣಗಲಿಟ್ಟರೆ
ಅದು ಸುವಾಸಿತ ಅಗರಬತ್ತಿ
ನಂಬಿ
ಇದು ನಿಜಕ್ಕೂ ಹೋಮ್ ಮೇಡ್
ತೀರಾ ಕೈಯಿಂದಲೇ ಹೊಸೆದು
ಮಾಡಿದ ಸುವಾಸಿತ ಬತ್ತಿ
ಹಚ್ಚಿದರೆ ಎರಡು ತಾಸು
ನಿಮ್ಮ ಕಾಸಿಗೆ ಮೋಸವಿಲ್ಲ
ಹೊರಗೆ
ಅಜ್ಜನ ಕೀರಲು ದನಿ ರಸ್ತೆ ದಾಟುತ್ತದೆ
ಹೊಸೆಯುತ್ತಿರುವ ಕೈಗಳ ಮೇಲೆ
ರಪ್ಪನೆ ಎದ್ದ ಬೊಬ್ಬೆಗಳು
ಇನ್ನೂ ವಿರಮಿಸಿಲ್ಲ
ಅಕ್ಕಾ ಹೊಸೆಯುತ್ತಲೇ ಇದ್ದಾಳೆ
‘ಉಣ್ಣಾಕಿಕ್ಕು ಬಾ’ ಎಂಬ
ವಿಪ್ಲವ ದನಿ ಮತ್ತೆ ಆರ್ಭಟಿಸುತ್ತದೆ
ಎಣ್ಣೆ ಖಾಲಿಯಾದರೆ ದೀಪ ಆರುತ್ತದೆ
ಹಾಳು ಗಲ್ಲಿಗೆ ಅದ್ಯಾವಾಗ ಕರೆಂಟು ಬತ್ತದೋ
ಗಲ್ಲಿ ವಾಸನೆ ವಸಿ ಸೆಂಟು ಜಾಸ್ತಿ ಹಾಕವ್ವ
ಎಂಬ ಮೌನವಾದ ಕೂಗು
ಹೀಗೇ ಕಿವಿಮುಟ್ಟುತ್ತದೆ
ಪರದೆಗಳಲಿ ಬಿತ್ತರಿಸಿಕೊಳ್ಳದ
ಬಣ್ಣದ ಕಾಗದಗಳಲಿ ರಂಜಿಸಿಕೊಳ್ಳದ
ಮೆಷೀನುಗಳ ಗುರುತು ಕಾಣದ
ಜಗಲಿಯಲೆ ಜೀವಪಡೆದುಬಿಡುವ
ಅಗರಬತ್ತಿಗಳು
ಕಾರ್ಖಾನೆಯ ಗೊಡ್ಡು ಬತ್ತಿಗಿಂತ
ಹೆಚ್ಚು ಕಾಲ ಪರಿಮಳಿಸುತ್ತವೆ
ಅರ್ಧಚಂದ್ರ ನೆತ್ತಿ ಮೇಲೆ ಧುಮುಕಿ
ಗಡಿಯಾರದ ಮುಳ್ಳಿನ ಜೀವಂತಿಕೆ
ಬಡಿದೆಬ್ಬಿಸಿ ಕೆಣಕಿ
ಬೊಬ್ಬೆ ಮೇಲೊಂದು ಬೊಬ್ಬೆ ನೋವನ್ನು
ಗುಣಿಸುವಾಗ
‘ಟೇಮ್ ಆಯ್ತು ಅವನ್ಗೆ ಉಣ್ಕಾಕಿಕ್ಕು ಹೋಗಮ್ಮಿ’
ಎಂಬ ಗಡಸು ದನಿ
ಮೂಲೆಯಲಿ ಆರ್ಭಟಿಸುತ್ತದೆ
ಸ್ಟ್ಯಾಂಡಿನ ರೇಡಿಯೋದಲಿ
‘ಈ ಅಗರಬತ್ತಿ ಇದ್ದಲ್ಲಿ ಚಿಂತೆಯ ಮಾತೆಲ್ಲಿ’
ಎಂಬ ಜಾಹೀರಾತೊಂದು ಬಿತ್ತರವಾಗುತ್ತದೆ
ಇಂತಹುದನ್ನೇ ಬರೆಯಬೇಕೆಂಬ ಯಾವ ನಿಲುವೂ ಇಲ್ಲದ ನನಗೆ ಕಾವ್ಯ ಒಂದುಮಟ್ಟಿಗೆ ಕೈ ಹಿಡಿದುಕೊಂಡದ್ದು ಹೌದು. ಕಾವ್ಯದ ಯಾವುದೋ ಒಂದು ಗಂಧದ ಪರಿಮಳ ನನ್ನೊಟ್ಟಿಗಿರುವ ಅನುಭವಕ್ಕೆ ಬರುತ್ತಿದೆ. ಆದರೆ, ಕಾವ್ಯವನ್ನು ಏಕೆ ಬರೆಯುತ್ತೇನೆಂಬ ಉದ್ದೇಶವಿನ್ನೂ ಸ್ಪಷ್ಟವಾಗಿಲ್ಲ. ಆದರೆ, ಅದು ಯಾವುದೋ ಪ್ರೇರಣೆಯಿಂದಲೋ ಅಥವಾ ಮನಸ್ಸಿಗೆ ನೋವುಂಟಾದಾಗಲೋ ಅಥವಾ ಪ್ರಯಾಣದ ಸಮಯದಲ್ಲಿ ಮನಸ್ಸಿಗೆ ಬಂದ ಯಾವುದೋ ಅನುಭವಗಳನ್ನು ಸಾಲುಗಳಲ್ಲಿ ಕಟ್ಟಿಕೊಡುವುದರಲ್ಲೋ ಒಂದು ಬಗೆಯ ಸಂತೋಷ ಮತ್ತು ಆಹ್ಲಾದ ಉಂಟಾಗುವುದಂತೂ ನಿಜ.
ಬಣ್ಣ
ನನಗೆ ಗೊತ್ತಿಲ್ಲ
ನೀನು ನೀಲಿಯನೇಕೆ ಈ ಪರಿ
ಪ್ರೀತಿಸುತ್ತೀಯೆಂದು
ಎಲ್ಲ ಬಣ್ಣಗಳಿಗೂ
ಒಂದೊಂದು ಅಸ್ತಿತ್ವವಿದೆ ನಿಜ
ಈ ನೀಲಿಯಲಿ ತುಸು ಹೆಚ್ಚು
ಅದು ನಿನಗೆ ಕಂಡದ್ದೂ ನೀ ಮೆಚ್ಚಿದ್ದು
ಎರಡೂ ಸೋಜಿಗವಲ್ಲ
ನೀನು ಯಾವಾಗಲೂ ನಿರೂಪಿಸುತ್ತೀಯ
ಬಣ್ಣಗಳೆಂದರೆ ಬದುಕೆ ಆದ ಕಥೆ
ಆ ಬದುಕಿಗೆ ಹೆಣಗಾಡುವ ವ್ಯಥೆ
ಒಟ್ಟಿನಲ್ಲಿ ಸಾಗರದ ನೀಲಿಗೂ
ಆಕಾಶದ ನೀಲಿಗೂ ನಂಟು ಬೆಸೆದದ್ದು ಮಾತ್ರ
ನಿನ್ನ ಖಯಾಲಿಗಳೇ ಎಂಬುದಂತು ಖರೆ
ನನ್ನ ಕಣ್ಣಿಗೆ
ಕಪ್ಪುಗಳೇ ಇಷ್ಟವಾಗುವುದಕ್ಕೆ
ನೂರು ಕಾರಣಗಳನು ನಾ ಹುಡುಕಲಾರೆ
ಆದರೇನು
ಬಿಳಿಯಲ್ಲೇ ಲೀನವಾದ ಎಲ್ಲಾ ಬಣ್ಣಗಳು
ಸಾಲಗಾರವೆ
ಅವು ನಿನ್ನ ನೀಲಿಯೂ
ನನ್ನ ಕಪ್ಪೂ
ಕುಂಚದಲದ್ದಿದರೆ ಎಲ್ಲವೂ ನವಿರು
ಈಗ
ಅವರಿಗೆ ಹಸಿರೋ ಕೆಂಪೋ ನೇರಳೆಯೋ
ನನಗೆ ನನ್ನ ಕಪ್ಪು
ನಿನಗೆ ನಿನ್ನ ನೀಲಿ
ಒಟ್ಟಿನಲ್ಲಿ ಹಾಳೆಗಳಿಗೋ ಮತ್ತೆ ಮತ್ತೆ
ಬೆತ್ತಲಾಗುವ ತವಕ
ಏಳರಿಂದಾಚೆ ಮತ್ತಷ್ಟು
ಕಾಣಸಿಗುವುದಿಲ್ಲ, ಸಿಕ್ಕರೆ ಅವು
ಬಣ್ಣವೂ ಅಲ್ಲ
ಮತ್ತೇನು?
ನಿನ್ನ ನೀಲಿಗೆ ಸಂಗಾತಿಯೆ?
ಇಲ್ಲ ನನ್ನದೇ ಕಪ್ಪಿಗೆ ವೈರಿಯೇ?
ಗೊತ್ತಿಲ್ಲ!
*
ಒಂದು ಮೃತ ಸಂಜೆ
ಸಣ್ಣಗೆ ಹೊತ್ತಿಕೊಂಡ ದೀಪದ ಸದ್ದು
ಈಗಷ್ಟೆ ನುಗ್ಗಿ ಬಂದಿದೆ
ಅದೇ ಶ್ವಾಸಕ್ಕೆ ಬಿಗಿದ್ಹಿಡಿದುಕೊಂಡ
ಉಸಿರುಗಳು ನಿರಾಳವಾಗಿ ಎದೆಗಚ್ಚಿಕೊಂಡು
ಈ ಮೃತ ಸಂಜೆಯಲಿ ದಾರಿ ಸವೆಸಿವೆ
ಕಣ್ಣನ್ನೇ ದೃಷ್ಟಿಸಿ ಎದುರು ಬಿರಿದುಕೊಂಡ ಹಗ್ಗದ ಕೊನೆ
ಒಂದು ಸುತ್ತು ಬೆಳಕಿನ ಬಟ್ಟೆ ತೊಟ್ಟುಕೊಂಡು
ಉಗ್ರಾಣದಲಿ ಉರಿವ ಸೂರ್ಯನ ಜೊತೆ
ಬೆತ್ತಲಾಗುವ ಪೈರುಗಳು
ಕತ್ತಲೆಯನೇಕೆ ಕರಗಿಸಿವೆ ಪ್ರಭು
ಉಕ್ಕಿಗೆ ತಾಗಿದ ಬೆಂಕಿ ಬೂದಿಯಾಗುವ ಬಣ್ಣ
ಕಪ್ಪಾಗುವ ಹಾಗೆ
ಉಸಿರಾಡುವ ಜೋಳಿಗೆಯೊಂದರಲೆ
ಸತ್ತುಮಲಗಿರುವ ರೇಶಿಮೆ ವಲ್ಲಿ
ಅಗೋ
ಮುಂಜಾವಿಗೆ ಬಸಿರುಗೊಂಡ ಭ್ರಮರದ ವೇದನೆ
ಕಿವಿಮುಟ್ಟಿದೆ
ವೀರ್ಯಚಲ್ಲಿದ ಹೂವೆ ಅಪರಾಧಿಯಾದರೆ
ವೀರರಾಳುವ ನಾಡಿನಲಿ ಕೊಳದ
ಹನಿಯನು ಗಲ್ಲಿಗೇರಿಸುವವರಾರು?
ನಾಡಿ ಮುಟ್ಟಿ ಮುಟ್ಟಾಗಿಹೋಗುವ ಅವರು
ಹಚ್ಚಿದ ದೀಪವೂ ಸೂತಕವಾಗಿ
ಸಂತೆಯಲಿ ಕರಗಿಹೋದ ವಿಧುರಗೀತೆಗೆ
ವಿನಾಶದ ಹಾದಿ ತೋರೀತೆ ಈ ಸಂಜೆ
ತಣ್ಣಗೆ ತಂಪಾಗಿ ವರಗಿದ ಗಾಳಿಯ ಮೇಲೆ
ಋಜು ಮಾಡಿದ ಅಕ್ಷರ ಮಾಸುವ ಹಾಗೆ
ಹೇ
ಮಾಗಿಹೋದ ಮನ್ವಂತರವೆ
ಅಚಾನಕ್ಕಾಗಿ ಹಡೆದುಹೋದ ಕಡಲು
ನದಿಯನ್ನಷ್ಟೆ ಹುಟ್ಟಿಸಿಲ್ಲ
ಒಂದು ತೀರ, ಒಂದು ಮೌನ
ಒಂದು ಆಳದ ಒಡಲು ದುಃಖಗೊಳ್ಳಲು
ಈ ಸಂಜೆ ಸಾವಿಗೆ ಇನ್ಯಾವ ಪುರಾವೆ ಬೇಕು?
*
ಪರಿಚಯ : ಪ್ರಕಾಶ್ ಪೊನ್ನಾಚಿ (ಜಯಪ್ರಕಾಶ ಪಿ) ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದವರು. ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹನೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಮಣ್ಣಿಗೆ ಬಿದ್ದ ಮಳೆ’ ಮೊದಲ ಕವನ ಸಂಕಲನವು 2014 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನಸಹಾಯದಲ್ಲಿ ಆಯ್ಕೆಯಾಗಿ ಬಿಡುಗಡೆಯಾಗಿದೆ. ಸದ್ಯ ಎರಡನೇ ಕವನ ಸಂಕಲನದ ಬಿಡುಗಡೆಗೆ ತಯಾರಿ ನಡೆದಿದೆ.
ಇದನ್ನೂ ಓದಿ : Poetry : ಅವಿತಕವಿತೆ ; ‘ಅವಳ ಕೇರಿಯಲ್ಲಿ ಸೇಫ್ಟಿಪಿನ್ನು ಮಾರುವ ಒಂದು ಅಂಗಡಿಯನ್ನಾದರೂ ತೆರೆಯಿರಿ!’