Gokak Falls : ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನ ಒಪ್ಪಿಸಲಾರೆವು ಹೀಗೆಲ್ಲ’ ಇನ್ನಾದರೂ ಮಾಡಿರೈ ಶಪಥ

|

Updated on: Nov 26, 2021 | 3:43 PM

Child Marriage : ‘ಪಕ್ಕದಮನೆಯ ಯುವಕ ತನ್ನ ತಂಗಿಯನ್ನು ಬೈಕ್ ಮೇಲೆ ಕರೆದುಕೊಂಡು ಬಂದ. ಅವ ಆಕೆಯನ್ನು ಕರೆದುಕೊಂಡು ಬಂದ ರೀತಿ ನೋಡಿಯೇ ಎಲ್ಲರಿಗೂ ಭಯವಾಗಿತ್ತು. ಆಕೆ ಅವನ ಬೆನ್ನಿಗೆ ಒರಗಿ ಮಲಗಿದ್ದಳು. ಅವ ಅವಳ ದುಪ್ಪಟ್ಟಾದಿಂದ ಅವಳ ಸಮೇತ ತನ್ನ ಹೊಟ್ಟೆಗೆ ಕಟ್ಟಿಕೊಂಡಿದ್ದ.’ ಸುಷ್ಮಾ ಸವಸುದ್ದಿ

Gokak Falls : ‘ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನ ಒಪ್ಪಿಸಲಾರೆವು ಹೀಗೆಲ್ಲ’ ಇನ್ನಾದರೂ ಮಾಡಿರೈ ಶಪಥ
Follow us on

Gokak Falls : ಗೋಕಾಕ ಫಾಲ್ಸ್ – ಹದಿನೈದು ವರ್ಷಕ್ಕೆ ಅವಳಿಗೆ ಮದುವೆಯಾಗಿತ್ತು, ಈಗವಳಿಗೆ ಹದಿನೆಂಟೊ-ಹತ್ತೊಂಬತ್ತೋ ಇದ್ದಿರಬೇಕು. ಮದುವೆಯಾಗಿ ಇಷ್ಟು ದಿನವಾದರೂ ಮಕ್ಕಳಾಗಿಲ್ಲ ಎಂಬ ಕಾರಣ ಕೊಟ್ಟು ಅತ್ತೆಮನೆಯವರು ದಿನಾ ಕಾಟ ಕೊಡಲು ಶುರು ಮಾಡಿದ್ದರು. ಯಾರೋ ಭವಿಷ್ಯ ಹೇಳುವವನು, ಅವಳಿಗೆ ಆ ಭಾಗ್ಯವೇ ಇಲ್ಲ ಎಂದಿದ್ದ. ಅವನ ಮಾತು ಕೇಳಿದ ಅತ್ತೆಮನೆಯವರು ಆಕೆಯನ್ನು ಬಂಜೆ ಎಂಬ ಹಣೆಪಟ್ಟಿ ಕಟ್ಟಿ ತಿರಸ್ಕಾರ ಭಾವದಿಂದ ದಿನವೂ ಚುಚ್ಚಿ ಮಾತನಾಡತೊಡಗಿದರು. ಒಂದು ದಿನ ಆಕೆ ಅದನ್ನೆಲ್ಲ ಸಹಿಸದೇ ತನ್ನ ಅಣ್ಣನಿಗೆ ಕರೆ ಮಾಡಿ ತನ್ನನ್ನು ಆ ನರಕದಿಂದ ಬಿಡಿಸಿಕೊಂಡು ಹೋಗೆಂದು ಹೇಳಿದಳು. ಹೆದರಿದ ಅಣ್ಣ ಅವಳ ಮನೆ ಮುಟ್ಟುವಷ್ಟರಲ್ಲೇ, ಗಂಡನಿಗೆ ವಿಷಯ ತಿಳಿದು ಆಕೆಯನ್ನು ಹಿಂಸಿಸಿದ್ದಾನೆ. ಅವಳ ಸ್ಥಿತಿ ನೋಡಿದ ಅಣ್ಣ, ತಂಗಿಯ ಗಂಡನ ಮೇಲೆ ಕೈ ಮಾಡಿದಾಗ, ಅವರ ಕಡೆಯವರು ಇವನಿಗೂ ಚೆನ್ನಾಗಿ ಹೊಡೆದು ಕಳಿಸಿದ್ದಾರೆ.
ಸುಷ್ಮಾ ಸವಸುದ್ದಿ

(ಹರಿವು : 3)

ಕೆಲ ದಿನಗಳ ಹಿಂದೆ ಲೇಖಕ ಎಂ.ಎಸ್. ಮಣಿ ಅವರು ಬರೆದ ‘ಬಡತನ ಮತ್ತು ಬಾಲ್ಯವಿವಾಹ’ದ ಕುರಿತಾದ ಲೇಖನವೊಂದನ್ನು ಓದುತ್ತಿದ್ದೆ. ಅದರಲ್ಲಿ ನೀಡಿರುವ ದತ್ತಾಂಶಗಳು ಮತ್ತು ನಿದರ್ಶನಗಳು ನಮ್ಮ ಸಮಾಜದ ಅಂಧಕಾರವನ್ನು ಎತ್ತಿ ತೋರಿಸುವಂತಿದ್ದವು. ಆದರೆ ನನಗೆ ಯಾವ ಆಶ್ಚರ್ಯವೂ ಕಾಣಲಿಲ್ಲ. ಲೇಖಕರಿಗೆ ಬರೆದೆ, “ನಿಮ್ಮ ಪ್ರತೀ ಲೇಖನದಲ್ಲಿನ ನಿದರ್ಶನಗಳು ನನ್ನನ್ನು ಬೆರಗಾಗಿಸಿದವು. ಆದರೆ, ಈ ಲೇಖನದಲ್ಲಿರುವ ದೈತ್ಯಾಕಾರದ ಯಾವ ದತ್ತಾಂಶಗಳೂ ನನಗೆ ಅಚ್ಚರಿ ಹುಟ್ಟಿಸಲಿಲ್ಲ. ಏಕೆಂದರೆ ನಾನು ಸ್ವತಃ ನೋಡಿದ, ಕೇಳಿದ ಬಾಲ್ಯವಿವಾಹದ ಸುದ್ದಿಗಳಿಗೆ ಲೆಕ್ಕವಿಲ್ಲ; ಓದುವ ಆಸೆ ಹೊತ್ತ ಬಾಲೆ ಮದುವೆ ಮಯಸ್ಸಿಗೆ ಬರುವ ಮುನ್ನವೇ ಎರಡು ಮಕ್ಕಳ ತಾಯಿಯಾಗಿದ್ದು, 16 ವರ್ಷದ ಹುಡುಗಿ ಹೆರಿಗೆ ಸಮಯದಲ್ಲಿ ಕಣ್ಣು ಮುಚ್ಚಿದ್ದು, 17 ವರ್ಷಕ್ಕೆ ಗಂಡನ ಮನೆಯ ಕಾಟ ತಾಳದೇ ಮರಳಿ ತವರು ಸೇರಿದ್ದು, ಜೀವನ ಆರಂಭವಾಗುವ ಮೊದಲೇ ವಿಧವೆಯಾಗಿದ್ದು, ಒಲ್ಲದವನೊಡನೆ ಬಾಳಲಾಗದೇ ಚಿಕ್ಕವಯಸ್ಸಿಗೆ ಬಾವಿಯ ಪಾಲಾಗಿದ್ದು ಇಂತಹ ಇನ್ನೂ ಅದೆಷ್ಟೋ ಸುದ್ದಿಗಳನ್ನು ಕೇಳುತ್ತಲೇ ಇದ್ದೇನೆ. ಉತ್ತರ ಕರ್ನಾಟಕದ ಹುಡುಗಿಗೆ ಇಂತಹ ವಿಷಯಗಳ ಕೊರತೆಯೇ ಇಲ್ಲ. ಮನಸ್ಸಿನೊಳಗೆ ಕಿಡಿ ಹಚ್ಚಿದ ಅನೇಕ ಸಂಗತಿಗಳಲ್ಲಿ ಎಂದಿಗೂ ಕಾಡುತ್ತಲೇ ಇರುವ ವಿಷಯವಿದು.’’

ಬಹುಶಃ ನಮ್ಮ ಜನರಿಗೆ ಬಾಲ್ಯವಿವಾಹದಿಂದಾಗುವ ಕ್ರೂರತೆಯ ಅರಿವೇ ಇಲ್ಲ. ಬಾಲ್ಯವಿವಾಹ ಎಂಬುದು ಒಂದು ಅಪರಾಧ ಎನ್ನುವುದೂ. ಊರ ದೇವರ ಜಾತ್ರೇಲಿ ನಡೆಯೋ ಸಾಮೂಹಿಕ ಮದುವೆಯಲ್ಲಿ ಚಿಕ್ಕಮಕ್ಕಳ ಮದುವೆ ಮುಗಿಸಿ ಕೈ ತೊಳೆದುಕೊಂಡವರನ್ನು ನಾನು ತೀರ ಚಿಕ್ಕ ವಯಸ್ಸಿನಿಂದ ನೋಡುತ್ತ ಬಂದಿದ್ದೇನೆ. ನಾನು 6ನೇ ಕ್ಲಾಸ್ ಓದುತ್ತಿರುವಾಗ ಸರ್ ನಮ್ಮ ಶಾಲೆಯ ಮಕ್ಕಳನ್ನೆಲ್ಲ ಸಬ್‌ಜೈಲ್, ಪೊಲೀಸ್ ಸ್ಟೇಶನ್, ಕೋರ್ಟಗಳಿಗೆ ಕರೆದುಕೊಂಡು ಹೋಗಿದ್ದರು. ಪೊಲೀಸ್ ಸ್ಟೇಶನ್‌ನಲ್ಲಿದ್ದ ಇನ್‌ಸ್ಪೆಕ್ಟರ್ ಒಬ್ಬರು ನಿಮಗೆ ಏನಾದ್ರೂ ಪ್ರಶ್ನೆಗಳಿದ್ರೆ ಕೇಳಿ ಎಂದರು. ಸರ್ ನನ್ನ ಬಳಿ ತಿರುಗಿ ಕಣ್ಣಲ್ಲೇ ಆಜ್ಞೆ, ಉತ್ತೇಜನ ಎರಡನ್ನೂ ಒಟ್ಟಿಗೆ ರವಾನಿಸಿದರು. ನನ್ನ ಎದೆ ನಡುಗುತ್ತಿತ್ತಾದರೂ ಬಹುದಿನದಿಂದ ಎದೆ ಭಾರ ಮಾಡಿದ್ದ ಪ್ರಶ್ನೆಯನ್ನು ಕೇಳಿಯೇಬಿಟ್ಟಿದ್ದೆ, “ಸರ್, ಚಿಕ್ಕ ಮಕ್ಕಳಿಗೆಲ್ಲ ಮದುವೆ ಮಾಡಿದ್ರೆ ನೀವು ಶಿಕ್ಷೆ ಕೊಡಲ್ವ?” ಅದಕ್ಕವರು ತುಂಬಾ ವಿನಯದಿಂದ ಬಾಲ್ಯವಿವಾಹ ಕಾಯ್ದೆ-ಕಾನೂನುಗಳ ಬಗ್ಗೆ ಮಾಹಿತಿ ನೀಡಲು ಆರಂಭಿಸಿದರು. ಅವರ ಮಾತು ಮುಗಿಯುವುದರ ಒಳಗೆ ನಾನು ಮತ್ತೆ ಕೇಳಿದೆ, “ಮತ್ತೆ… ನಮ್ಮ ಊರ ಜಾತ್ರೆಲಿ ಮಾಡ್ತಾರಲ್ಲ? ಪ್ರತಿ ವರ್ಷವೂ ನಾನು ಹೋದಾಗ ನೋಡಿದೀನಿ ಸರ್. ಅಲ್ಲಿ ಪೊಲೀಸರೂ ಇರ‍್ತಾರೆ” ಅದಕ್ಕವರು ಮೆಲುನಕ್ಕು, “ಹೌದಾ..? ನಮ್ಮ ಗಮನಕ್ಕದು ಬಂದೆ ಇಲ್ವಲ್ಲ” ಎನ್ನುತ್ತ ನಮಗೆಲ್ಲ ಸಹಾಯವಾಣಿಯ ನಂಬರ್ ಕೊಟ್ಟು, ನೀವು ಯಾರಾದ್ರೂ ಬಾಲ್ಯವಿವಾಹ ಆಗೋದನ್ನ ನೋಡಿದ್ರೆ ಈ ನಂಬರ್‌ಗೆ ಕರೆ ಮಾಡಿ ಎಂದು ಹೇಳಿ ಬೀಳ್ಕೊಟ್ಟರು.

ಅಲ್ಲಿಂದ ಬಂದ ಮೇಲೆ ಸರ್ ನಮಗೆಲ್ಲ ಹೇಳಿದರು, “ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳು ಜನರ ಮನಸ್ಸಿನಿಂದ ಕಿತ್ತು ಹೋಗಬೇಕು. ನೀವುಗಳು ಅಂತಹದರ ವಿರುದ್ಧ ಧ್ವನಿ ಎತ್ತಬೇಕು. ಜನರ ಮನಸ್ಥಿತಿ ಬದಲಾಗದಿದ್ದರೆ ಯಾವ ಕಾನೂನಾದರೂ ಏನು ಮಾಡಿತು, ಎಷ್ಟು ತಡದೀತು?’’ ಸತ್ಯವಾದ ಮಾತು. ಲಾಕ್‌ಡೌನ್‌ನಂತಹ ಸಂದಿಗ್ಧ ಸ್ಥಿತಿಯನ್ನೂ ಬಾಲ್ಯವಿವಾಹ ಮಾಡಲು ಬಳಸಿಕೊಳ್ಳುವವರ ಮುಂದೆ ಕಾನೂನು ಶೂನ್ಯವೇ! ಪೊಲೀಸರಿಗೆ ಗೊತ್ತಾಗದಂತೆ ರಾತ್ರಿಯೇ ಮದುವೆ ಮಾಡುವುದು, ಮನೆಯ ದೇವರ ಜಗಲಿ ಮುಂದೆ ಅಕ್ಕಿಕಾಳು ಹಾಕುವುದು ಹಳ್ಳಿಗಳಲ್ಲಿ ಸಾಮಾನ್ಯ. ನಗರಗಳೇನೂ ಇದಕ್ಕೆ ಹೊರತಾಗಿಲ್ಲ.

ಸೌಜನ್ಯ : ಅಂತರ್ಜಾಲ

ದೂರದ ಸಂಬಂಧಿಗಳ ಊರಿಗೆ ಹೋಗಿದ್ದೆ. ಊಟ-ಉಪಚಾರ ಎಲ್ಲ ಮೂಗಿಸಿಕೊಂಡು ಹೊರಗೆ ಕಟ್ಟೆ ಮೇಲೆ ಹರಟುತ್ತ ಕುಳಿತಿದ್ದೆವು. ಅಷ್ಟರಲ್ಲೇ ಪಕ್ಕದ ಮನೆಯ ಯುವಕ ತನ್ನ ತಂಗಿಯನ್ನು ಬೈಕ್ ಮೇಲೆ ಕರೆದುಕೊಂಡು ಬಂದ. ಅವ ಆಕೆಯನ್ನು ಕರೆದುಕೊಂಡು ಬಂದ ರೀತಿ ನೋಡಿಯೇ ಎಲ್ಲರಿಗೂ ಭಯವಾಗಿ ಹೋಯ್ತು. ಆಕೆ ಅವನ ಬೆನ್ನಿಗೆ ಒರಗಿ ಮಲಗಿದ್ದಳು. ಅವ ಅವಳ ದುಪ್ಪಟ್ಟಾದಿಂದ ಅವಳ ಸಮೇತ ತನ್ನ ಹೊಟ್ಟೆಗೆ ಕಟ್ಟಿಕೊಂಡಿದ್ದ. ಆಕೆ ತನ್ನಷ್ಟಕ್ಕೆ ತಾನು ಅವನ ಹಿಂದೆ ಕುಳಿತುಕೊಳ್ಳಲಾಗದಷ್ಟು ನಿತ್ರಾಣಳಾಗಿದ್ದಳು. ಬೆಳಗ್ಗೆ ಕೆಲಸಕ್ಕೆಂದು ಹೋದವ, ಇದ್ದಕ್ಕಿದ್ದಂತೆ ತಂಗಿಯನ್ನು ಈ ಸ್ಥಿತಿಯಲ್ಲಿ ಕರೆತಂದಿದ್ದ. ಅವನ ಮುಖದಲ್ಲೂ ಪೆಟ್ಟು ತಿಂದ ಗುರುತುಗಳು. ದಾರಿ ಮಧ್ಯೆ ಅಪಘಾತವಾಗಿರಬೇಕೆಂದು ಎಲ್ಲರು ಊಹಿಸಿದರು. ಆದರೆ ಆಗಿದ್ದೇ ಬೇರೆ.

ಹದಿನೈದು ವರ್ಷಕ್ಕೆ ಅವಳಿಗೆ ಮದುವೆಯಾಗಿತ್ತು, ಈಗವಳಿಗೆ ಹದಿನೆಂಟೊ-ಹತ್ತೊಂಬತ್ತೋ ಇದ್ದಿರಬೇಕು. ಮದುವೆಯಾಗಿ ಇಷ್ಟು ದಿನವಾದರೂ ಮಕ್ಕಳಾಗಿಲ್ಲ ಎಂಬ ಕಾರಣ ಕೊಟ್ಟು ಅತ್ತೆಮನೆಯವರು ದಿನಾ ಕಾಟ ಕೊಡಲು ಶುರು ಮಾಡಿದ್ದರು. ಯಾರೋ ಭವಿಷ್ಯ ಹೇಳುವವನು, ಅವಳಿಗೆ ಆ ಭಾಗ್ಯವೇ ಇಲ್ಲ ಎಂದಿದ್ದ. ಅವನ ಮಾತು ಕೇಳಿದ ಅತ್ತೆಮನೆಯವರು ಆಕೆಯನ್ನು ಬಂಜೆ ಎಂಬ ಹಣೆಪಟ್ಟಿ ಕಟ್ಟಿ ತಿರಸ್ಕಾರ ಭಾವದಿಂದ ದಿನವೂ ಚುಚ್ಚಿ ಮಾತನಾಡತೊಡಗಿದರು. ಒಂದು ದಿನ ಆಕೆ ಅದನ್ನೆಲ್ಲ ಸಹಿಸದೇ ತನ್ನ ಅಣ್ಣನಿಗೆ ಕರೆ ಮಾಡಿ ತನ್ನನ್ನು ಆ ನರಕದಿಂದ ಬಿಡಿಸಿಕೊಂಡು ಹೋಗೆಂದು ಹೇಳಿದಳು. ಹೆದರಿದ ಅಣ್ಣ ಅವಳ ಮನೆ ಮುಟ್ಟುವಷ್ಟರಲ್ಲೇ, ಗಂಡನಿಗೆ ವಿಷಯ ತಿಳಿದು ಆಕೆಯನ್ನು ಹಿಂಸಿಸಿದ್ದಾನೆ. ಅವಳ ಸ್ಥಿತಿ ನೋಡಿದ ಅಣ್ಣ, ತಂಗಿಯ ಗಂಡನ ಮೇಲೆ ಕೈ ಮಾಡಿದಾಗ, ಅವರ ಕಡೆಯವರು ಇವನಿಗೂ ಚೆನ್ನಾಗಿ ಹೊಡೆದು ಕಳಿಸಿದ್ದಾರೆ.

ಆ ಹಳ್ಳಿಗೆ ಕಾಲಿಟ್ಟಾಗ, ಆ ನಿಸರ್ಗಕ್ಕೆ ಮಾರುಹೋದ ನಾನು, ಪ್ರಕೃತಿಯೊಂದಿಗೆ ಬದುಕು ಎಷ್ಟು ಸುಂದರ ಎಂದುಕೊಂಡಿದ್ದೆ. ಆದರೆ ಈ ಘಟನೆಯಿಂದಾಗಿ, ದಡ್ಡತನಕ್ಕೆ ಇನ್ನೂ ಬಲಿಯಾಗುತ್ತಲೇ ಇರುವ ಇಂಥವರ ಬದುಕಿಗೆ ಕೊನೆ ಇಲ್ಲವೇ ಎನ್ನಿಸಿತು. ಇಲ್ಲಿ ತಪ್ಪು ಯಾರದ್ದು? ಮೊದಲೇ ಬಾಲ್ಯವಿವಾಹ. ಇನ್ನು  ಮಕ್ಕಳಾಗದ್ದಕ್ಕೆ ಅವಳೊಬ್ಬಳೇ ಕಾರಣವಾ? ಅದಕ್ಕೆ ಅವಳೊಬ್ಬಳೇ ಯಾಕೆ ತಿರಸ್ಕಾರಕ್ಕೆ ಒಳಗಾಗಬೇಕು? ಅದಕ್ಕಿಂತ ಹೆಚ್ಚಾಗಿ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಅವಳೊಬ್ಬಳೇ ಯಾಕೆ ಅನುಭವಿಸಬೇಕು? ಸದ್ಯ ಅವಳ ಅಣ್ಣ ಜೀವ ಉಳಿಸಿದ ಎಂದು ಸಮಾಧಾನಿಸಿಕೊಳ್ಳಬೇಕಾ?

ಇತ್ತೀಚೆಗೆ ನಮ್ಮ ಆ ಸಂಬಂಧಿಕರು ಕರೆ ಮಾಡಿದಾಗ ಆಕೆಯ ಬಗ್ಗೆ ವಿಚಾರಿಸಿದೆ. ಈಗ ಅವಳು ಹೊಲಿಗೆ ತರಬೇತಿ ಪಡೆದಿದ್ದಾಳೆ. ಮನೆಗೆಲಸ ಮಾಡುತ್ತ, ಹೊಲಿಗೆ ಕೆಲಸ ಮಾಡುತ್ತ ಜೀವನ ದೂಕುತ್ತಿದ್ದಾಳೆ. ಬಾಲ್ಯವಿವಾಹವಾದ್ದರಿಂದ ಇನ್ನೂ ಅವಳಿಗೆ ಗಂಡನಿಂದ ವಿಚ್ಛೇದನ ಸಿಕ್ಕಿಲ್ಲ. ಎಳೇ ವಯಸ್ಸಿನಲ್ಲಿ ಒಂಟಿತನ ನೋವು. ಹೆಣ್ಣನ್ನು ನಾಲ್ಕು ಗೋಡೆಗೆ ಸೀಮಿತ ಮಾಡಿ ಅವಳ ರೆಕ್ಕೆ ಮುರಿಯುವ ರಕ್ತಗತವಾಗಿ ಬಂದ ಪರಂಪರೆಗೆ ಪೂರಕವಾದದ್ದು ಬಾಲ್ಯವಿವಾಹ. ಇದಕ್ಕೆ ಗಂಡು-ಹೆಣ್ಣು ಇಬ್ಬರೂ ಬಲಿಯಾಗಬಹುದಾದರೂ, ಅದರೂ ಹೆಣ್ಣಿನ ಮೇಲೆ ಬಿರುವಂತಹ ವ್ಯತಿರಿಕ್ತ ಪರಿಣಾಮವನ್ನು ಗಂಡಿನ ಮೇಲೆ ಬೀರಲಾರದು. ಮದುವೆ ಎಂಬ ಬಂಧನದಲ್ಲಿ ಈಜಲು ಆತನಿಗೆ ಹೆಚ್ಚೇನೂ ತ್ಯಾಗ ಮಾಡುವ ಅವಶ್ಯಕತೆಯೇ ಇಲ್ಲ. ಇದ್ದರೂ ಆತನ ಪುರುಷತ್ವ ಅಷ್ಟು ಸುಲಭವಾಗಿ ಒಪ್ಪಲಾರದು. ಆದರೆ ಹೆಣ್ಣು ಹಾಗಲ್ಲ. ಈ ಕಾಲದಲ್ಲಿಯೂ ಆಕೆ ತನ್ನ ಮನೆ ತೊರೆದು ಬೇರೆಯವರ ಮನೆ ಜವಾಬ್ದಾರಿ ಹೊರಬೇಕು. ಅದೆಷ್ಟೋ ಬಾರಿ ತನ್ನತನವನ್ನು ತೊರೆದು ಮತ್ತೊಬ್ಬರ ಅಪೇಕ್ಷೆಗಳಿಗೆ ತಕ್ಕಂತೆ ಒಗ್ಗಿಕೊಳ್ಳಬೇಕು. ಅದು ದೈಹಿಕವಾಗಿಯೂ, ಮಾನಸಿಕವಾಗಿಯೂ ಆಗಿರಬಹುದು.

ಮದುವೆ ಎಂಬುದು ಆಕೆಯ ಬದುಕಿನ ಬದಲಾವಣೆಯ ಘಟ್ಟ ನಿಜ. ಈ ಬದಲಾವಣೆಗೆ ತೆರೆದುಕೊಳ್ಳಲು ಆಕೆ ಸಿದ್ಧಳಿರಬೇಕು ಮಾನಸಿಕವಾಗಿ, ದೈಹಿಕವಾಗಿ, ಲೈಂಗಿಕವಾಗಿ, ಬೌದ್ಧಿಕವಾಗಿಯೂ. ಆಡಿ, ಹಾಡಿ, ಓದಿ ನಲಿಯೋ ವಯಸ್ಸಿಗೆ ತಾಳಿ ಎಂಬ ಬೇಡಿ ಹಾಕಿ ಮನೆ ಎಂಬ ಸೆರೆವಾಸದಲ್ಲಿ ಬಂಧಿಸಿದರೆ ಆಕೆ ಯಾವುದಕ್ಕೂ ತೆರೆದುಕೊಳ್ಳಲಾರಳು ಎಂಬಂಥ ಸ್ಥಿತಿ ಇನ್ನೂ ನಮ್ಮಲ್ಲಿದೆ. ಇನ್ನಾದರೂ ಯೋಚಿಸಿ.

ಹಿಂದಿನ ಹರಿವು : Gokak Falls : ಕೊರಳಿಗೆ ಮೂರುಗಂಟು ಹಾಕಿದ ಮಾತ್ರಕ್ಕೆ ಇವಳ ಜೀವನದ ನಿರ್ಧಾರಗಳೆಲ್ಲ ಅವನ ಸ್ವತ್ತೇ?

Published On - 3:40 pm, Fri, 26 November 21