Zakir Hussain’s Birthday: ‘ಝಾಕೀರ್ ಹದಿನೆಂಟು ವರ್ಷಗಳ ಕಾಲ ಮಾನಸ ಗುರುವಾಗಿದ್ದರು’ ಮುತ್ತುಕುಮಾರ್

|

Updated on: Mar 09, 2022 | 2:21 PM

Indian Musician Alla Rakha : ‘ನಾಲ್ಕೈದು ವರ್ಷದವನಿದ್ದಾಗ ಝಾಕೀರರ ವಿಡಿಯೋ ಕ್ಯಾಸೆಟ್ ಸಿಕ್ಕಿತು. ದಿನವೂ ಅದನ್ನು ನೋಡುವುದು ಕುಂತಲ್ಲಿ ನಿಂತಲ್ಲಿ ಬೆರಳಾಡಿಸುವುದು. ಅಲ್ಲಾರಖಾ, ಝಾಕೀರ್​ ಅವರ ಬಳಿ ಹೋಗುವವರೆಗೂ ಏಕಲವ್ಯನಂತಿದ್ದೆ.’

Zakir Hussain’s Birthday: ‘ಝಾಕೀರ್ ಹದಿನೆಂಟು ವರ್ಷಗಳ ಕಾಲ ಮಾನಸ ಗುರುವಾಗಿದ್ದರು’ ಮುತ್ತುಕುಮಾರ್
ತಬಲಾಮಾಂತ್ರಿಕ, ಗುರು ಝಾಕೀರ್ ಹುಸೇನ್ ಅವರೊಂದಿಗೆ ಬೆಂಗಳೂರಿನ ಶಿಷ್ಯ ಮುತ್ತುಕುಮಾರ್
Follow us on

ಝಾಕೀರ್ ಹುಸೇನ್ | Zakir Hussian : ಒಮ್ಮೆ ಪುಟ್ಟಪರ್ತಿಯಲ್ಲಿ ಝಾಕೀರ್ ಹುಸೇನ್ ಅವರ ತಬಲಾವಾದನವಿತ್ತು. ಆಗ ನಾನು ಆ ಕಾರ್ಯಕ್ರಮವನ್ನು ಏರ್ಪಡಿಸಿದ್ದ ಸಂಸ್ಥೆಯ ಭಾಗವಾಗಿದ್ದೆನಾದ್ದರಿಂದ ಝಾಕೀರ್ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು. ಮಾನಸಗುರುವನ್ನು ನೇರವಾಗಿ ಮೊದಲ ಸಲ ಭೇಟಿಯಾಗುವ ಮಾತನಾಡುವ ಸೌಭಾಗ್ಯ, ಪುಳಕ ಎಲ್ಲವನ್ನೂ ನಾನವತ್ತು ಅನುಭವಿಸಿದೆ. ಅವರ ಮುಖಲಕ್ಷಣದಲ್ಲೇ ಗಾಢ ಸೆಳೆತವಿದೆ, ಎಂಥವರಿಗೂ ಅವರನ್ನು ಒಂದು ಕ್ಷಣ ನೋಡಿದರೆ ಸಾಕು ಸ್ಫೂರ್ತಿಯುಕ್ಕಿಬಿಡುತ್ತದೆ. ಅವಕಾಶ ನೋಡಿಕೊಂಡು, ನನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬಹುದಾ? ಎಂದು ಕೇಳಿದೆ. ಬಹುಶಃ ಕಲಾವಿದರಿಗೆ ದಿವ್ಯದೃಷ್ಟಿ ಇರುತ್ತದೆ. ಮೊದಲ ನೋಟದಲ್ಲೇ ತನ್ನ ಎದುರಿನ ವ್ಯಕ್ತಿಯನ್ನು ಗ್ರಹಿಸಿಬಿಡುತ್ತಾರೆ. ಝಾಕೀರ್ ಕೂಡ ಇದಕ್ಕೆ ಹೊರತಾಗಿಲ್ಲ. ಬಹಳ ಸರಳ ವ್ಯಕ್ತಿತ್ವದ ಅವರು ಒಂದೇ ಮಾತಿನಲ್ಲಿ, ನಾನು ಅಮೆರಿಕದಲ್ಲಿ ವಾಸವಾಗಿರುತ್ತೆನಾದ್ದರಿಂದ ಮುಂಬೈಯಲ್ಲಿ ನನ್ನ ತಂದೆ ಅಲ್ಲಾರಖಾ ಅವರ ಬಳಿ ನೀನು ಕಲಿಯಬಹುದು ಎಂದರು. 1995ರಿಂದ 2000ರ ವರೆಗೆ, ಅಂದರೆ ಅಲ್ಲಾರಖಾ ಬದುಕಿರುವವರೆಗೂ ಕಲಿತೆ.
ಮುತ್ತುಕುಮಾರ್, ಬೆಂಗಳೂರು, ತಬಲಾವಾದಕ

ತಬಲಾವಾದಕ ಮುತ್ತುಕುಮಾರ್ ಬೆಂಗಳೂರು ಮೂಲದವರು. ತಮಿಳಿನ ಮಾಯಾಬಝಾರ್, ನಂದನಾರ್, ವೇಣುಗಾನಮ್, ಭಕ್ತಿ, ಸುಂದರಮೂರ್ತಿ ನಯನಾರ್, ಪಾದುಕಾ ಪಟ್ಟಾಭಿಷೇಕಮ್ ಮುಂತಾದ ಪ್ರಸಿದ್ದ ಚಲನಚಿತ್ರಗಳನ್ನು ನಿರ್ದೇಶಿಸಿದ ಮುರುಗದಾಸ್ (ಮುತ್ತುಸ್ವಾಮಿ ಅಯ್ಯರ್) ಅವರ ಮೊಮ್ಮಗ. ಅಲ್ಲಾರಖಾ ಮತ್ತು ಝಾಕೀರ್ ಅವರ ನೇರಶಿಷ್ಯರಾದ ಮುತ್ತುಕುಮಾರ್ ವಾಸಿಸುವುದು ಬೆಂಗಳೂರಿನಲ್ಲಿ.

ಇವರ ಬಾಲ್ಯ ಕಳೆದಿದ್ದು ಪುಟ್ಟಪರ್ತಿಯಲ್ಲಿ. ಒಮ್ಮೆ ನಾಲ್ಕೈದು ವರ್ಷದ ಮುತ್ತುಕುಮಾರ್​ ಕೈಗೆ ಝಾಕೀರ್ ಹುಸೇನರ ವಿಡಿಯೋ ಸಿಕ್ಕಿತು. ಅದನ್ನು ಪ್ಲೇ ಮಾಡಿ ನೋಡುತ್ತಾ ಹೋದಂತೆ ಅವರಿಗರಿವಿಲ್ಲದೆಯೇ ಬೆರಳುಗಳಾಡತೊಡಗಿದವು. ದಿನವೂ ಹೀಗೇ ವಿಡಿಯೋ, ಆಡಿಯೋ ಕ್ಯಾಸೆಟ್ ಪ್ಲೇ ಮಾಡುವುದು ನಿಂತಲ್ಲಿ ಕುಳಿತಲ್ಲಿ ಬೆರಳುಗಳಾಡಿಸುವುದು ದಿನಚರಿಯಂತೆ ಸಾಗಿತು. ಹೀಗೆ ಝಾಕೀರ್ ಎಂಬ ಮಹಾಮಾಂತ್ರಿಕ ಗುರುವನ್ನು ಚಿತ್ತದಲ್ಲಿ ಸ್ಥಾಪಿಸಿಕೊಂಡು ಏಕಲವ್ಯನಂತೆ ಮಾನಸ ಗುರುಗಳನ್ನಾಗಿಸಿಕೊಂಡರು ಮುತ್ತುಕುಮಾರ್. ಇದು ಸಾಗಿದ್ದು ಹದಿನೆಂಟು ವರ್ಷಗಳ ಕಾಲ!

ಅಲ್ಲಾರಖಾರ ಬಳಿ ಐದು ವರ್ಷಗಳ ಕಾಲ ತಬಲಾ ಕಲಿತ ನಂತರ ಪ್ರತೀ ವರ್ಷಕ್ಕೊಮ್ಮೆ ಅಮೆರಿಕದಲ್ಲಿ ವಾಸಿಸುತ್ತಿರುವ ಝಾಕೀರರ ಬಳಿ ಕಲಿಕೆಗಾಗಿ ಪ್ರಯಾಣಿಸತೊಡಗಿದರು. ‘ಪ್ರತೀ ವರ್ಷ ಅಮೆರಿಕದಲ್ಲಿ ಝಾಕೀರ್ ಅವರು ಒಂದು ವಾರದ ಮಟ್ಟಿಗೆ ತಬಲಾ ಕಾರ್ಯಾಗಾರ ಏರ್ಪಡಿಸುತ್ತಾರೆ. ನಾನು ಪ್ರತೀ ವರ್ಷ ಅಲ್ಲಿಗೆ ಹೋಗಿಬರುತ್ತಿದೆ. ದಿನಕ್ಕೆ 5-7 ತಾಸುಗಳವರೆಗೆ ಕಲಿಕೆ ಇರುತ್ತದೆ. ಕೋವಿಡ್​ ಬಂದಮೇಲೆ ಈ ಕಾರ್ಯಾಗಾರ ಆನ್​ಲೈನ್​ನಲ್ಲಿ ಸಾಗಿದೆ. ಇದನ್ನು ಹೊರತುಪಡಿಸಿದರೆ, ಅವರು ಭಾರತಕ್ಕೆ ಬಂದಾಗೆಲ್ಲ ಕಾರ್ಯಕ್ರಮವಿದ್ದಲ್ಲಿ ಹೋಗಿ ಭೇಟಿಯಾಗುತ್ತೇನೆ, ಅವರ ಸಾಮೀಪ್ಯವನ್ನು ಅನುಭವಿಸುತ್ತೇನೆ. ಕಲೆಯಲ್ಲಿ ಕಲಿಕೆ ಎಂದರೆ ಇಂತಿಷ್ಟು ತಾಸು ಗುರುಗಳೊಂದಿಗೆ ತರಗತಿಯಲ್ಲಿ ಮುಖಾಮುಖಿಯಾಗಿರುವುದು ಅಂತಲ್ಲವೇ ಅಲ್ಲ. ಶಾಸ್ತ್ರ, ಪ್ರಯೋಗದ ಕಲಿಕೆಯ ಹೊರತಾಗಿಯೂ ಗುರುಗಳ ವ್ಯಕ್ತಿತ್ವದೊಂದಿಗೆ ನಮ್ಮ ವ್ಯಕ್ತಿತ್ವ ಚೆಂದನೆಯ ತಿಕ್ಕಾಟಕ್ಕೆ ಬೀಳುತ್ತಿರಬೇಕು. ಅದು ಬಹಳ ಮುಖ್ಯ ಕಲಾವಿದರಿಗೆ’ ಎನ್ನುತ್ತಾರೆ ಮುತ್ತುಕುಮಾರ್.

ಇದನ್ನೂ ಓದಿ : Kunnakkudi Vaidyanathan Birth Anniversary: ತಂದೆಯನ್ನು ಬದುಕಿಸಿಕೊಳ್ಳಲು ಕುನ್ನಕ್ಕುಡಿ ನುಡಿಸಿದ್ದು ಈ ರಾಗ

ಗುರು ಝಾಕೀರರೊಂದಿಗೆ ಮುತ್ತುಕುಮಾರ್

ಮಾತನ್ನು ಮುಂದುವರಿಸಿದ ಅವರು, ‘ಝಾಕೀರರ ಸ್ಮರಣ ಶಕ್ತಿಯನ್ನು ಆನೆಯ ಸ್ಮರಣಶಕ್ತಿಗೆ ಹೋಲಿಸಬಹುದು. ಒಮ್ಮೆ ಬೆಂಗಳೂರಿಗೆ ಕಾರ್ಯಕ್ರಮಕ್ಕೆ ಬಂದಾಗ ಒಂದಿಷ್ಟು ಲೆನಿನ್ ಶರ್ಟ್​ ತೆಗೆದುಕೊಂಡು ಹೋಗಿದ್ದೆ. ಎಂಥಾ ಪರ್ಫೆಕ್ಟ್​ ಸೈಝ್​! ಎಂದು ಅಚ್ಚರಿಪಟ್ಟಿದ್ದರು. ಎಷ್ಟೋ ವರ್ಷಗಳ ನಂತರ ಚೆನ್ನೈನಲ್ಲಿ ಬಾಲಮುರಳಿಕೃಷ್ಣ ಅವರೊಂದಿಗೆ ಅವರ ಕಾರ್ಯಕ್ರಮವಿತ್ತು. ಬಾಲಮುರಳಿಯವರಿಗೆ, ಅವರು ಧರಿಸಿದ ಕುರ್ತಾ ಬಿಗಿಯಾಗುತ್ತಿತ್ತು. ಪರ್ಫೆಕ್ಟ್ ಸೈಝ್ ಸೆಲೆಕ್ಟ್​ ಮಾಡುವುದು ಹೇಗೆ ಅಂತ ಮುತ್ತುಗೆ ಚೆನ್ನಾಗಿ ಗೊತ್ತು ಎಂದು ಆ ಗಳಿಗೆಗಳನ್ನು ನೆನಪಿಸಿಕೊಂಡಿದ್ದರು. ಹೀಗೆ ಅವರು ಸಣ್ಣ ಸಣ್ಣ ಸಂಗತಿಗಳ್ನೂ ಬಹಳ ಆಪ್ತವಾಗಿ ಹಂಚಿಕೊಳ್ಳುವ ಸರಳ ಮನಸ್ಸಿಗ.’   ​

ಇನ್ನು ಕಲಿಸುವ ವಿಷಯಕ್ಕೆ ಬಂದರೆ, ಕೆಲ ಗುರುಗಳು ಶಿಷ್ಯನೆದುರು ತಮ್ಮ ಪಾಂಡಿತ್ಯ ತೋರಿಸುತ್ತಾರೆ. ಆಗ ಮೊದಲ ಸಲ ಶಿಷ್ಯ ಅಚ್ಚರಿಯಿಂದ ಗಮನಿಸುತ್ತಾನೆ. ಎರಡನೇ ಸಲ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ನೋಡುತ್ತಾನೆ. ಮೂರನೇ ಸಲ ನುಡಿಸಲು ಹೆಣಗಾಡಿ ವಿಫಲನಾಗುತ್ತಾನೆ. ನಾಲ್ಕನೇ ಸಲ ಆಸಕ್ತಿಯನ್ನೇ ಕಳೆದುಕೊಂಡುಬಿಡುತ್ತಾನೆ. ‘ಇಂಥ ಕಲಿಕಾ ವಿಧಾನ ಶಿಷ್ಯನಲ್ಲಿ ನಿರುತ್ಸಾಹವನ್ನು ತುಂಬುತ್ತದೆ. ಆದರೆ ಝಾಕೀರ್ ಅವರ ಕಲಿಕಾ ವಿಧಾನ ಮುದಗೊಳಿಸುವಂಥದ್ದು. ಶಿಷ್ಯನ ನುಡಿಸುವ ಮಟ್ಟಕ್ಕೆ ತಮ್ಮ ಮಟ್ಟವನ್ನೂ ಇಳಿಸಿ ನುಡಿಸಿ ತೋರಿಸುತ್ತಾರೆ, ಯಾವ ವಯಸ್ಸಿನವರಿಗೂ ಬಹಳ ಸಮಾಧಾನದಿಂದ ಕಲಿಸುತ್ತಾರೆ’ ಎಂದು ಮನದುಂಬಿ ಗುರುವನ್ನು ನೆನೆಯುತ್ತಾರೆ. ಹೀಗಿದ್ದಾಗ ಶಿಷ್ಯನಲ್ಲಿ ಆತ್ಮವಿಶ್ವಾಸ, ಪ್ರೀತಿ ಗರಿಗೆದರದೇ ಇರುತ್ತದೆಯೇ?

ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಸಾಮಾನ್ಯವಾಗಿ ಗುರುಗಳು, ಶಿಷ್ಯರಿಗೆ ಸಾಕಷ್ಟು ವಿಷಯಗಳಲ್ಲಿ ಸಾಕಷ್ಟು ರೀತಿಯ ನಿರ್ಬಂಧಗಳನ್ನು ಹೇರುತ್ತ ಬಂದಿರುವುದನ್ನು ಗಮನಿಸಿದ್ದೇವೆ. ‘ಸಭಾ ಕಾರ್ಯಕ್ರಮಗಳವಿಷಯವಾಗಿ ಅಲ್ಲಾರಖಾ ಆಗಲಿ, ಝಾಕೀರ್ ಅವರಾಗಲೀ ತಮ್ಮ ಶಿಷ್ಯಂದಿರಿಗೆ ಯಾವುದೇ ರೀತಿಯ ನಿರ್ಬಂಧ ಹೇರಿದ್ದೇ ಇಲ್ಲ. ಆದರೆ ಕಲಿಸುವಾಗ ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯ ಅಡಿಪಾಯವನ್ನು ಭದ್ರಗೊಳಿಸುವ ವಿಷಯದಲ್ಲಿ ವಿಶೇಷ ಗಮನ ವಹಿಸುತ್ತಾರೆ. ನಂತರ ಯಾರೂ ಅವರೆದುರು ಯಾವ ಪ್ರಕಾರವನ್ನು ನುಡಿಸಬಹುದು, ಪ್ರಯೋಗಿಸಿ ತೋರಿಸಬಹುದು. ಅದೆಲ್ಲವನ್ನೂ ಅವರು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈಗಾಗಲೇ ನೀವೆಲ್ಲ ಅವರ ಇಂಥ ಪ್ರಯೋಗಗಳನ್ನೂ ನೋಡಿದ್ದೀರಿ. ಸಾಮಾನ್ಯ ಶ್ರೋತೃವಿನಿಂದ ಅಪ್ಪಟ ಶಾಸ್ತ್ರೀಯ ಕೇಳುಗರನ್ನೂ ಅವರು ಆವಾಹಿಸಿಕೊಳ್ಳುವುದು ಇಂಥ ಕಾರಣದಿಂದಲೇ’ ಎನ್ನುತ್ತಾರೆ ಮುತ್ತುಕುಮಾರ್.

ಕಲೆಯೊಳಗಿನ ಭಿನ್ನರುಚಿಯನ್ನು ಗುರುತಿಸುವುದು, ಗೌರವಿಸುವುದು, ಶಿಷ್ಯರನ್ನು ಆಪ್ತವಾಗಿ ಕಾಣುವುದು, ಪ್ರತಿಭೆಯನ್ನು ಗುರುತಿಸುವುದು ಮಹಾನ್​ ಕಲಾವಿದರಿಗೆ ಮಾತ್ರ ಸಾಧ್ಯ. ಅದಕ್ಕೆ ಅವರು ಎಲ್ಲ ಗಡಿಗಳನ್ನೂ ಮೀರಿ ಮನಸ್ಸನ್ನು ಆವರಿಸಿಕೊಳ್ಳುತ್ತಾರೆ. ಬಂಧನಗಳಿಂದ ಬಿಡಿಸಿಕೊಳ್ಳುವ ದಾರಿ ತೋರುತ್ತಾರೆ. ಆಳದಲ್ಲಿ ಸಂಗೀತ ಮಾತ್ರ ಅನುರಣಿಸುವಂಥ ಶಕ್ತಿಯನ್ನು ಕರುಣಿಸುತ್ತಾರೆ.

ಇದನ್ನೂ ಓದಿ : Music : ನಾಕುತಂತಿಯ ಮಿಡಿತ ; ‘ರಿಯಾಝಿನಲ್ಲಿ ನಮಗೇನು ಗೊತ್ತಿಲ್ಲವೋ ಅದನ್ನು ನುಡಿಸುತ್ತೇವೆ’ ರಾಜೀವ ತಾರಾನಾಥ

Published On - 1:26 pm, Wed, 9 March 22