Kunnakkudi Vaidyanathan Birth Anniversary: ತಂದೆಯನ್ನು ಬದುಕಿಸಿಕೊಳ್ಳಲು ಕುನ್ನಕ್ಕುಡಿ ನುಡಿಸಿದ್ದು ಈ ರಾಗ

Raag Bhairavi : ಮರಣ ಶಯ್ಯೆಯಲ್ಲಿರುವ ವ್ಯಕ್ತಿಗೆ ಚೈತನ್ಯ ತುಂಬುವ ಶಕ್ತಿ ಈ ರಾಗಕ್ಕಿದೆ. ಎಂಥ ಕಟುಕನನ್ನೂ ಅಲುಗಾಡಿಸುವ ಆರ್ದ್ರತೆ ಈ ರಾಗಕ್ಕಿದೆ. ಕುನ್ನಕ್ಕುಡಿಯವರು ವರ್ಷಗಳ ಕಾಲ ಮಾಡಿದ ಪವಾಡ ಸಾಧನೆಯಿದು.

Kunnakkudi Vaidyanathan Birth Anniversary: ತಂದೆಯನ್ನು ಬದುಕಿಸಿಕೊಳ್ಳಲು ಕುನ್ನಕ್ಕುಡಿ ನುಡಿಸಿದ್ದು ಈ ರಾಗ
ಪಂ. ಕೈವಲ್ಯಕುಮಾರ ಗುರವ ಮತ್ತು ವಿದ್ವಾನ್ ಕುನ್ನಕ್ಕುಡಿ ವೈದ್ಯನಾಥನ್
Follow us
ಶ್ರೀದೇವಿ ಕಳಸದ
|

Updated on:Mar 02, 2022 | 2:46 PM

Kunnakkudi Vaidyanathan (1935-2008) : ವೈದ್ಯನಾಥನ್ ಅವರಿಗೆ ಆಗ ಕೇವಲ ಹದಿನಾಲ್ಕು ವರ್ಷ. ಅವರ ತಂದೆ ಒಮ್ಮೆ ಕಾಲುಜಾರಿ ಬಿದ್ದು ತೀವ್ರವಾಗಿ ಅಸ್ವಸ್ಥಗೊಂಡಿದ್ದಲ್ಲದೆ ಕೋಮಾ ಅವಸ್ಥೆಗೂ ಒಳಗಾದರು. ಕುಟುಂಬದವರು ಆತಂಕಗೊಂಡರು. ವೈದ್ಯರು ಎಲ್ಲಾ ಪ್ರಯತ್ನಗಳನ್ನು ನಡೆಸಿದ ನಂತರ, ವೈದ್ಯನಾಥನ್​ ಅವರನ್ನು ಹತ್ತಿರ ಕರೆದು, ‘ನಮ್ಮ ಪ್ರಯತ್ನಗಳೆಲ್ಲವೂ ಮುಗಿದಿವೆ. ಇನ್ನೇನಿದ್ದರೂ ಎಲ್ಲವೂ ದೇವರೇ ಕಾಪಾಡಬೇಕು. ಆದರೂ ಒಂದು ಪ್ರಯೋಗ ಮಾಡಿ ನೋಡಬಹುದು. ಬಹುಶಃ ಅದಕ್ಕೆ ನೀನೇ ಸರಿಯಾದ ವ್ಯಕ್ತಿ’ ಎಂದರು. ನಾನೇನು ಮಾಡಬಲ್ಲೆ? ಎಂಬ ಪ್ರಶ್ನೆ ಮತ್ತು ಅಸಹಾಯಕತೆಯೊಂದಿಗೆ ವೈದ್ಯನಾಥನ್ ವೈದ್ಯರ ಮುಖ ನೋಡಿದರು. ‘ನೀನು ದಿನವೂ ಅವರ ಬಳಿ ಕುಳಿತು ವಯೋಲಿನ್​ನಲ್ಲಿ ರಾಗಗಳನ್ನು ನುಡಿಸುತ್ತಾ ಹೋಗು. ಸಂಗೀತವೇ ಒಂದು ಅಗಾಧವಾದ ಚಿಕಿತ್ಸೆ. ಪರಿಣಾಮ ಬೀರೀತೇನೋ…’ ಎಂದರು. ತಕ್ಷಣವೇ ವೈದ್ಯನಾಥನ್ ವಯೋಲಿನ್ ಎದೆಗಪ್ಪಿಕೊಂಡರು.

ಆತನಕ ಹನ್ನೆರಡು ರಾಗಗಳನ್ನು ತಂದೆ ರಾಮಸ್ವಾಮಿ ಅವರಿಂದ ವೈದ್ಯನಾಥನ್ ಕಲಿತಿದ್ದರು. ಸಂಗೀತ ಕಲಿಕೆ ಎಂದರೆ, ಅದು ಕೇವಲ ಶಾಸ್ತ್ರ ಮತ್ತು ಪ್ರಾಯೋಗಿಕಕ್ಕೆ ಮಾತ್ರ ಸೀಮಿತವಾಗಿರದೆ, ಸಂಶೋಧನಾತ್ಮಕ ನೆಲೆಯಿಂದ ಕೂಡಿತ್ತು. ಪ್ರತಿಯೊಂದು ರಾಗಕ್ಕೂ ಇರುವ ಚಿಕಿತ್ಸಕ ಗುಣವನ್ನು ಪರಿಣಾಮವನ್ನು ರಾಮಸ್ವಾಮಿ ಟಿಪ್ಪಣಿ ಮಾಡಿಟ್ಟಿದ್ದರು. ಒಂದೊಂದು ರಾಗವೂ ಮನುಷ್ಯನ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವ ವಿಷಯವನ್ನು ವೈದ್ಯನಾಥನ್ ಮನನ ಮಾಡಿಕೊಳ್ಳುತ್ತ ಹೋದರು. ಮರಣ ಶಯ್ಯೆಯಲ್ಲಿರುವ ಮನುಷ್ಯನಲ್ಲಿ ಚೈತನ್ಯ ತುಂಬುವ ಶಕ್ತಿ ಭೈರವಿ ರಾಗಕ್ಕಿದೆ ಎನ್ನುವುದು ತಿಳಿಯಿತು.

ತಂದೆಯ ಪಕ್ಕದಲ್ಲಿ ಕುಳಿತು ದಿನವೂ ನಾಲ್ಕು ಗಂಟೆಗಳ ತನಕ ಭೈರವಿಯನ್ನು ವಯೋಲಿನ್​ನಲ್ಲಿ ನುಡಿಸುತ್ತ ಹೋದರು. ಕೆಲ ದಿನಗಳು ಉರುಳಿದ ನಂತರ ವೈದ್ಯರು ಮನೆಗೆ ಬಂದಾಗ ವೈದ್ಯನಾಥನ್ ಎಂದಿನಂತೆ ಸಂಗೀತದಲ್ಲಿ ತನ್ಮಯರಾಗಿದ್ದರು. ‘ಇಲ್ಲಿ ನೋಡು ನಿನ್ನ ಸಂಗೀತದ ಫಲ’ ಎಂದು ತಂದೆಯ ಕೆನ್ನೆಯ ಮೇಲುರುಳಿದ ಕಣ್ಣೀರ ಪಸೆಯನ್ನು ತೋರಿಸಿದರು. ಕೆಲವರ್ಷಗಳ ಕಾಲ ಈ ದಿನಚರಿ ಹೀಗೇ ಸಾಗಿ ಕ್ರಮೇಣ ಅವರ ತಂದೆ ಚೇತರಿಸಿಕೊಂಡರು. ಈ ಅಗಾಧ ಅನುಭವವೇ ರಾಗಗಳ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ವೈದ್ಯನಾಥನ್ ಅವರನ್ನು ಪ್ರೇರೇಪಿಸಿತು.

ಶಾಂತ, ಕರುಣ ರಸವುಳ್ಳ ಭೈರವಿ ಯಾವಾಗಲೂ ಹೃದಯಕ್ಕೆ ಹತ್ತಿರವಾದದ್ದು. ಯಾರನ್ನೂ ಅಲುಗಾಡಿಸುವ ಶಕ್ತಿ ಈ ರಾಗಕ್ಕಿದೆ. ಎಂಥ ಕಟುಕನೂ ಮಿಸುಕಾಡಲೇಬೇಕು. ಹಾಗೆ ನುಡಿಸುವ, ಹಾಡುವ ಮತ್ತು ಆ ರಾಗವನ್ನು ಆವಾಹಿಸಿಕೊಳ್ಳುವ ತಾದಾತ್ಮ್ಯ ಕಲಾವಿದರಲ್ಲಿ ಇರಬೇಕು. ಈ ರಾಗ ಮತ್ತದರ ಅನುಭವದ ಬಗ್ಗೆ ಧಾರವಾಡದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ, ಪಂ. ಕೈವಲ್ಯಕುಮಾರ ಗುರವ ಹೀಗೆ ಹೇಳುತ್ತಾರೆ, ‘ಬಹುಶಃ ನಾವೆಲ್ಲ ಕಲಾವಿದರೂ ಹಾಡುವಾಗ ಇದರ ಪ್ರಭಾವಕ್ಕೆ ಒಳಗಾಗಿ ಹೋಗಿದ್ದೇವೆ. ಪ್ರವಚನ ಕೇಳಿದ ಮೇಲೆ ಮನುಷ್ಯ ಹೇಗೆ ದಿಗ್ಭ್ರಮೆಗೆ ಒಳಗಾಗುತ್ತಾನಲ್ಲ ಹಾಗೆ ಈ ರಾಗ. ನಮ್ಮನ್ನು ನಾವು ಮರೆಯೋದಕ್ಕೆ, ದೇವರನ್ನು ಸಮೀಪಿಸೋದಕ್ಕೆ ಈ ರಾಗ ರೂಪಿತಗೊಂಡಿದೆ ಅನ್ನಿಸಿದ್ದಿದೆ. ಟಪ್ಪಾ, ಠುಮರಿಯನ್ನು ಹಾಡುವಾಗ ಆ ಸಾಹಿತ್ಯದ ಮೂಲಕ ಬಹಳ ಸೂಕ್ಷ್ಮವಾಗಿ ವೀರರಸವನ್ನೂ ಸ್ಪರ್ಶಿಸಬಹುದಾಗಿದೆ. ‘ತೂ ಪ್ಯಾರಾ ಮೋರಾ ಜಾನೇ ಆಲಮ್…’ ಹೇ ಖುದಾ, ನನ್ನದೇನಿದ್ದರೂ ನಿನ್ನ ಜೊತೆ ಮಾತ್ರ ಗುದ್ದಾಟ. ಬೇರೆಯವರೊಂದಿಗೆ ಗುದ್ದಾಡಿ ಏನು ಪ್ರಯೋಜನವಿದೆ? ಎಂಬ ಹುಸಿಕೋಪ ಈ ಸಾಹಿತ್ಯದೊಳಗೆ ವ್ಯಕ್ತವಾಗುತ್ತದೆ.’

ಇದನ್ನೂ ಓದಿ : Art and Entertainment : ‘ಪ್ರಿಯತಮನಿಗಾಗಿ ಚಡಪಡಿಸುತ್ತಿರುವ ನನ್ನ ದುಃಖವನ್ನು ಹೇಗೆ ಹೇಳಲಿ’

‘ಬಹಳ ವೇಗವಾಗಿ ಮನುಷ್ಯನ ಮನಸ್ಸನ್ನು ಬದಲಾಯಿಸುವ ಅನುಭೂತಿ ಈ ರಾಗಕ್ಕಿದೆ. ಆದರೆ ಈ ಅನುಭೂತಿಯನ್ನು ಕೇಳುಗರಿಗೆ ದಕ್ಕಿಸಬೇಕೆಂದರೆ, ಕಲಾವಿದರು ವಿಚಾರ ಮಾಡುತ್ತ ಹಾಡಬೇಕು, ಕೇವಲ ರಿಯಾಝ್ ಮಾಡುತ್ತ ಅಲ್ಲ. ಕೇವಲ ಶಾಸ್ತ್ರದಿಂದ ಅನುಭೂತಿ ಹುಟ್ಟುವುದು ಸಾಧ್ಯವಿಲ್ಲ. ಭೈರವಿಯ Body Nature ಏನು? ನನ್ನ Body Nature ಏನು ಅದು ನನಗೆ ಹೊಂದುತ್ತದೆಯೋ ಇಲ್ಲವೋ… ಹೊಂದಿಸಿಕೊಳ್ಳಬೇಕೆಂದರೆ ಏನು ಮಾಡಬೇಕು? ಹೀಗೆ ಆಲೋಚಿಸುತ್ತ ಸ್ವರಗಳಿಗೆ ತೆರೆದುಕೊಳ್ಳುವುದು, ಶರಣಾಗುವುದು, ಪ್ರಶ್ನಿಸುವುದು, ಸಂವಾದ ನಡೆಸುವುದು. ಇದೆಲ್ಲವೂ ಮೂಲ ಸಂಗೀತದಲ್ಲಿದೆ.’

‘ನೂರಾರು ವರ್ಷಗಳಿಂದ ಕೇಳಿದ್ದನ್ನೇ, ಹಾಡಿದ್ದನ್ನೇ ಹಾಡಿದರೆ ಅದು ಹೇಗೆ ನಮ್ಮನ್ನು ಮತ್ತು ಕೇಳುಗರನ್ನು ಪ್ರಭಾವಿಸಲು ಸಾಧ್ಯ? ಹೀಗಾಗಿಯೇ ಶಾಸ್ತ್ರೀಯ ಸಂಗೀತ ಜನಸಾಮಾನ್ಯರಿಂದ ದೂರವಾಗುತ್ತ ಬಂದಿರುವುದು. ಈ ಸತ್ಯವನ್ನು ಒಪ್ಪಿಕೊಳ್ಳಿ.’

‘ಭೈರವಿಯಲ್ಲಿ ಉಸ್ತಾದ್​ ಅಬ್ದುಲ್ ಕರೀಂ ಖಾನ್ ಸಾಹೇಬರ ‘ಜಮುನಾ ಕೆ ತೀರ್’ ಕೇಳಿರುತ್ತೀರಿ. ಸಾಕಷ್ಟು ಕಲಾವಿದರೂ ಇದನ್ನು ಹಾಡಿದ್ದಾರೆ. ನಾನು ಕೂಡ ನೂರಾರು ಸಲ ಕಛೇರಿಗಳಲ್ಲಿ ಹಾಡಿದ್ದೇನೆ. ಕೇಳಿದ ಜನರೆಲ್ಲ ಸ್ತಬ್ಧರಾಗಿದ್ದಿದೆ, ಚಪ್ಪಾಳೆ ಮರೆತು. ಸಾಥಿದಾರರು ಭಾವುಕರಾಗಿದ್ದಿದೆ. ಹಾರ್ಮೋನಿಯಂ ನಿಲ್ಲಿಸಿದ್ದಿದೆ. ನನ್ನ ಕಣ್ಣಿಂದಲೂ ಕಣ್ಣೀರಿಳಿದಿದ್ದಿದೆ. ಹೀಗೆ ನಮ್ಮನ್ನು ಯಾವುದೋ ಒಂದು ಅಲೌಕಿಕ ಜಗತ್ತಿಗೆ ಎಳೆದುಕೊಳ್ಳುವಂಥ ಆರ್ದ್ರ ಶಕ್ತಿ ಭೈರವಿಗಿದೆ.’

ಬಹುಶಃ ಸಂಗೀತವೆಂದರೆ ಪವಾಡವೆನ್ನುವುದು ಇದಕ್ಕೇ ಇರಬೇಕು. ಈ ಪವಾಡ ಸಾಧನೆಯೇ ಆ ದಿನ ಕುನ್ನಕ್ಕುಡಿಯವರು ತಂದೆಯೆದುರು ನಡೆಸಿರಬೇಕು. ಪವಾಡವೆಂದರೆ ಕೇವಲ ಶಾಸ್ತ್ರ, ಮಂತ್ರ ತಂತ್ರಗಳಿಂದ ಸಿದ್ಧಿಸುವುದಲ್ಲ. ಮನಸ್ಸು, ಬುದ್ಧಿ, ಭಾವಗಳಿಂದ ಹೊಮ್ಮುವ ನಾದಲಯಸ್ಫುರಣೆ.

ಇದನ್ನೂ ಓದಿ : Kunnakkudi Vaidyanathan Birth Anniversary: ‘ಸರಿಯಾಗಿ ವಿಭೂತಿ ಕುಂಕುಮ ಹಚ್ಚಿಕೊಳ್ಳಲು ಕಲಿ’

Published On - 2:12 pm, Wed, 2 March 22

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ