Jnanpith Awards: ಕೊಂಕಣಿ ಸಾಹಿತಿ ದಾಮೋದರ್​ ಮೌಜೊ, ಅಸ್ಸಾಮಿ ಕವಿ ನೀಲ್ಮಣಿ ಫೂಕನ್​ಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ

| Updated By: ಸುಷ್ಮಾ ಚಕ್ರೆ

Updated on: Dec 07, 2021 | 5:10 PM

Damodar Mauzo: ಅಸ್ಸಾಮೀಸ್ ಕವಿ ನೀಲ್ಮಣಿ ಫುಕನ್ ಅವರಿಗೆ 56ನೇ ಜ್ಞಾನಪೀಠ ಪ್ರಶಸ್ತಿ ಹಾಗೂ ಕೊಂಕಣಿ ಸಣ್ಣ ಕಥೆಗಾರ ಮತ್ತು ಕಾದಂಬರಿಕಾರ ದಾಮೋದರ್ ಮೌಜೊ ಅವರಿಗೆ 57ನೇ ಜ್ಞಾನಪೀಠ ಪ್ರಶಸ್ತಿ ಘೋಷಿಸಲಾಗಿದೆ.

Jnanpith Awards: ಕೊಂಕಣಿ ಸಾಹಿತಿ ದಾಮೋದರ್​ ಮೌಜೊ, ಅಸ್ಸಾಮಿ ಕವಿ ನೀಲ್ಮಣಿ ಫೂಕನ್​ಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆ
ದಾಮೋದರ್ ಮೌಜೊ- ನೀಲ್ಮಣಿ ಫೂಕನ್
Follow us on

ನವದೆಹಲಿ: ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ ಭಾರತದ ಅತ್ಯುನ್ನತ ಗೌರವವಾದ ಜ್ಞಾನಪೀಠ ಪ್ರಶಸ್ತಿಗೆ ಅಸ್ಸಾಂನ ಕವಿ ನೀಲ್ಮಣಿ ಫೂಕನ್ (Nilmani Phookan) ಹಾಗೂ ಕೊಂಕಣಿ ಸಣ್ಣ ಕಥೆಗಾರ ಮತ್ತು ಕಾದಂಬರಿಕಾರ ದಾಮೋದರ್ ಮೌಜೊ ಪಾತ್ರರಾಗಿದ್ದಾರೆ. ಅಸ್ಸಾಮೀಸ್ ಕವಿ ನೀಲ್ಮಣಿ ಫುಕನ್ ಅವರಿಗೆ 56ನೇ (2020) ಜ್ಞಾನಪೀಠ ಪ್ರಶಸ್ತಿ ಹಾಗೂ ಕೊಂಕಣಿ ಸಣ್ಣ ಕಥೆಗಾರ ಮತ್ತು ಕಾದಂಬರಿಕಾರ ದಾಮೋದರ್ ಮೌಜೊ (Damodar Mauzo) ಅವರಿಗೆ 57ನೇ (2021) ಜ್ಞಾನಪೀಠ ಪ್ರಶಸ್ತಿಯನ್ನು (Jnanpith Award) ಘೋಷಿಸಲಾಗಿದೆ.

ಕೊಂಕಣಿ ಕತೆಗಾರ ಹಾಗೂ ಕಾದಂಬರಿಕಾರ ದಾಮೋದರ್ ಮೌಜೊ ಹುಟ್ಟಿದ್ದು ಗೋವಾದಲ್ಲಿ. 77 ವರ್ಷ ವಯಸ್ಸಿನವರಾದ ಇವರು ಸಣ್ಣ ಕಥೆಗಾರ, ಕಾದಂಬರಿಕಾರ, ಅಂಕಣಕಾರ ಮತ್ತು ಚಿತ್ರಕಥೆ ಬರಹಗಾರರಾಗಿದ್ದು, ಮೂರು ದಶಕಗಳಿಂದ ಕೊಂಕಣಿ ಭಾಷೆಯ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೌಜೊ ಅವರು ಎರಡು ಕಾದಂಬರಿಗಳು, ನಾಲ್ಕು ಸಣ್ಣ ಕಥೆಗಳ ಸಂಗ್ರಹಗಳು ಮತ್ತು ಯುವ ವಯಸ್ಕರಿಗೆ ಮೂರು ಪುಸ್ತಕಗಳನ್ನು ರಚಿಸಿದ್ದಾರೆ. 1983 ರಲ್ಲಿ ಅವರು ತಮ್ಮ ಕಾರ್ಮೆಲಿನ್ ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು. ಇದನ್ನು ಹನ್ನೆರಡು ಭಾಷೆಗಳಿಗೆ ಅನುವಾದಿಸಲಾಗಿದೆ. ಅವರ ಹಲವಾರು ಕಥೆಗಳು ಅನೇಕ ರಾಷ್ಟ್ರೀಯ ಸಂಕಲನಗಳು ಮತ್ತು ನಿಯತಕಾಲಿಕೆಗಳಲ್ಲಿ ಅನುವಾದವಾಗಿ ಪ್ರಕಟಗೊಂಡಿವೆ. ಅವರ ಕೆಲವು ಕಥೆಗಳು ಇಂಗ್ಲಿಷ್ ಜೊತೆಗೆ ಪೋರ್ಚುಗೀಸ್ ಮತ್ತು ಫ್ರೆಂಚ್ ಭಾಷೆಗಳಿಗೆ ಕೂಡ ಅನುವಾದಗೊಂಡಿವೆ.

ದಾಮೋದರ್ ಮೌಜೊ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ರಿಯೇಟಿವ್ ಫಿಕ್ಷನ್ 1998ರ ಕಥಾ ಪ್ರಶಸ್ತಿ, 1997ರ ಗೋವಾ ರಾಜ್ಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ, ಗೋವಾ ಕಲಾ ಅಕಾಡೆಮಿ ಪ್ರಶಸ್ತಿ ಮತ್ತು ಕೊಂಕಣಿ ಭಾಷಾ ಮಂಡಲ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. ಮೌಜೊ ಅವರಿಗೆ 2011-2012ರ ಸಾಲಿನಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಹಿರಿಯ ಫೆಲೋಶಿಪ್ ಕೂಡ ನೀಡಲಾಗಿದೆ. ಅವರು 2011ರಲ್ಲಿ ತಮ್ಮ ಸುನಾಮಿ ಸೈಮನ್ ಕಾದಂಬರಿಗಾಗಿ ವಿಮಲಾ ವಿ ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಸಣ್ಣ ಕಥೆಗಳ ತೆರೇಸಾಸ್ ಮ್ಯಾನ್ ಮತ್ತು ಗೋವಾದ ಇತರ ಕಥೆಗಳ ಸಂಗ್ರಹವು 2015ರಲ್ಲಿ ಫ್ರಾಂಕ್ ಓಕಾನರ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಸಾಮಾಜಿಕ ಕಾರ್ಯಕರ್ತರೂ ಆಗಿರುವ ದಾಮೋದರ್ ಮೌಜೊ 2015ರಲ್ಲಿ ಪ್ರೊ.ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ನಂತರ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುಗ್ಗಿಸುವುದರ ವಿರುದ್ಧ ಧ್ವನಿಯೆತ್ತಿದ್ದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯ ಸಂದರ್ಭದಲ್ಲಿ ಕರ್ನಾಟಕ ಪೊಲೀಸರು ಮೌಜೊ ಅವರ ಜೀವಕ್ಕೆ ಬೆದರಿಕೆ ಇದೆ ಎಂದು ಎಚ್ಚರಿಕೆ ನೀಡಿದ್ದರು.

ಈ ಹಿಂದೆ 2008ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ಮೊದಲ ಬಾರಿಗೆ ರವೀಂದ್ರ ಕೇಳೇಕರ್ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ಕೊಂಕಣಿ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುತ್ತಿರುವ 2ನೇ ಸಾಹಿತಿ ಎಂಬ ಹೆಗ್ಗಳಿಕೆಗೆ ದಾಮೋದರ್ ಮೌಜೊ ಪಾತ್ರರಾಗಿದ್ದಾರೆ. 2019ರಲ್ಲಿ ಕೊನೆಯ ಬಾರಿಗೆ ಮಲಯಾಳಂ ಕವಿ ಅಕ್ಕಿತಮ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗಿತ್ತು. ಕಳೆದ ವರ್ಷದ ಪ್ರಶಸ್ತಿಯನ್ನು (2020) ಅಸ್ಸಾಮಿ ಕವಿ ನೀಲ್ಮಣಿ ಫೂಕನ್ ಅವರಿಗೆ ಇಂದು ಘೋಷಿಸಲಾಗಿದ್ದು, ಈ ವರ್ಷದ (2021) ಜ್ಞಾನಪೀಠ ಪ್ರಶಸ್ತಿಗೆ ದಾಮೋದರ್ ಮೌಜೊ ಪಾತ್ರರಾಗಿದ್ದಾರೆ.

ಕಳೆದ ವರ್ಷದ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿರುವ ಅಸ್ಸಾಮಿ ಕವಿ ನೀಲ್ಮಣಿ ಫೂಕನ್ 1933ರಲ್ಲಿ ಅಸ್ಸಾಂನ ದೇರ್ಗಾಂವ್​​ನಲ್ಲಿ ಹುಟ್ಟಿದರು. ಅಸ್ಸಾಮೀಸ್​ ಭಾಷೆಯಲ್ಲಿ ತಮ್ಮ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಅವರು 1981ರಲ್ಲಿ ಅಸ್ಸಾಮೀಸ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ 1990ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಖ್ಯಾತ ಅಸ್ಸಾಮಿ ಕವಿ ಮತ್ತು ಸಾಹಿತಿ ನೀಲ್ಮಣಿ ಫೂಕನ್ ಐವತ್ತರ ದಶಕದಲ್ಲಿ ಕವಿತೆ ಬರೆಯಲು ಪ್ರಾರಂಭಿಸಿದರು. ಅಸ್ಸಾಮಿ ಕಾವ್ಯದ ಆಧುನಿಕತಾವಾದದ ಪ್ರವರ್ತಕರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Masti Venkatesha Iyengar: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡದ ಆಸ್ತಿಯಾಗಿದ್ದು ಹೇಗೆ ಗೊತ್ತಾ?

ಚಾಮುಂಡಿಬೆಟ್ಟವನ್ನ ಕಾಂಕ್ರೀಟ್ ಕಾಡು ಮಾಡುವ ಯೋಜನೆ ವಿರುದ್ಧ ಸಾಹಿತಿ ಎಸ್.ಎಲ್. ಬೈರಪ್ಪ ಸಾತ್ವಿಕ ಸಿಟ್ಟು, ಪ್ರಧಾನಿ ಮೋದಿಗೆ ಪತ್ರ

Published On - 5:05 pm, Tue, 7 December 21