ಕಾಡೇ ಕಾಡತಾವ ಕಾಡ | Kaade Kaadataava Kaada : ಹಾಗೇ ತಂಡ ಮಾಡಿಕೊಂಡು ನಿಧಾನವಾಗಿ ಬಯಲು ಪ್ರದೇಶದಲ್ಲಿ ನಡೆಯುತ್ತಾ ಬೆಟ್ಟದ ಅಂಚಿಗೆ ತಲುಪಿದರು. ಮಂಚೂಣಿಯಲ್ಲಿದ್ದ ತಂಡದಲ್ಲಿ ಎಸಿಎಫ್, ಸಂತೋಷ್ ಮತ್ತು ಮನು ಒಂದು ಕಡೆ ಕುಳಿತು ಕೆಳಗಿನ ಪ್ರದೇಶವನ್ನು ಪರಿಶೀಲಿಸಿದರು. ದೂರದಲ್ಲಿ ಒಂದ ಸಣ್ಣ ಗುಡಿಸಲು, ಅದರ ಪಕ್ಕದಿಂದಲೇ ಹೊಗೆ ಬರುತ್ತಿದ್ದುದು. ಸುತ್ತಾ ಯಾವುದೇ ವ್ಯಕ್ತಿಗಳು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು, ಎಸಿಎಫ್ ಎಲ್ಲಾ ತಂಡಗಳಿಗೂ ನಿಧಾನವಾಗಿ ಕೆಳಗಿಳಿಯಲು ಸೂಚಿಸಿದರು. ಒಂದೊಂದು ಕಡೆಯಿಂದ ನಿಧಾನವಾಗಿ ಕೆಳಗಿಳಿಯತೊಡಗಿದರು. ಗುಡಿಸಲಿಗೆ ಅಂದಾಜು 30 ಮೀಟರ್ ದೂರದಲ್ಲಿ ಎಲ್ಲರೂ ಕವರ್ ಆಗಿ ನಿಂತರು. ಗುಡಿಸಲಿನಲ್ಲಿ ಇರುವ ಕಳ್ಳರು ಆಚೆ ಬರುತ್ತಿದ್ದಂತೇ ಹಿಡಿಯುವುದು ಪ್ಲಾನ್. ಆದರೆ 30 ನಿಮಿಷಗಳು ಕಳೆದರೂ ಗುಡಿಸಲಿನಿಂದ ಯಾರೂ ಹೊರಬರಲಿಲ್ಲ. ಎಸಿಎಫ್ ಮುಖದ ಮೇಲೆ ಬೆವರು ಮೂಡತೊಡಗಿತು.
ವಿ.ಕೆ. ವಿನೋದ್ ಕುಮಾರ್ (V. K. Vinod Kumar)
*
(ಕಥೆ 5, ಭಾಗ 4)
ಏನಿದು? ನಮ್ ಪ್ಲಾನ್ ಏನಾದ್ರೂ ಲೀಕ್ ಆಯ್ತಾ? ಹೇಗೆ ಸಾಧ್ಯ? ನಾನು ಯಾರಿಗೂ ಹೇಳೇ ಇಲ್ವಲ್ಲಾ? ಹೇಳಿದ್ದು ಸಂತೋಷನಿಗೆ ಮಾತ್ರ. ಬಾಕಿ ಎಲ್ಲರಿಗೂ, ಖುದ್ದು ಈ ಏರಿಯಾದ ರೇಂಜರ್ಗೂ ಸಹ ಇವತ್ತು ಬೆಳಿಗ್ಗೆಯೇ ಹೇಳಿದ್ದು. ಸೋ ಲೀಕ್ ಆಗುವ ಸಾಧ್ಯತೆ ಕಮ್ಮಿಯೇ. ಆದರೂ… ಏನೋ ಮಿಸ್ ಹೊಡೀತಿದೆ ಅಂದುಕೊಳ್ಳುತ್ತಾ, ಮನು, ಸಂತೋಷ್ ನಡೀರಿ, ಕೋವಿ ತಗೋಳಿ, ಗುಡಿಸಲಿನ ಕಡೆ ಹೋಗೋಣ ಅಂದರು.
ಸಂತೋಷ್ ಮತ್ತು ಮನು, ಕೋವಿಯನ್ನು ರೆಡಿ ಮಾಡಿಕೊಂಡು ನಿಧಾನವಾಗಿ ಗುಡಿಸಲಿನ ಕಡೆ ನಡೆಯತೊಡಗಿದರು, ಕೈಲಿ ಟಾರ್ಚ್ ಹಿಡಿದು ಮುಂದೆ ಎಸಿಎಫ್ ನಡೆಯುತ್ತಿದ್ದರು. ಗುಡಿಸಲಿನ ಹತ್ತಿರ ತಲುಪಿದರು. ಸಂತೋಷ್ ಮತ್ತು ಮನು ಕೋವಿಯನ್ನು ಹಿಡಿದು ಗುಡಿಸಲಿನ ಬಾಗಿಲನ್ನು ಜಾಡಿಸಿ ಒದ್ದು ಒಳನುಗ್ಗಿದರು. ಒಳ ನುಗ್ಗುತ್ತಿದ್ದಂತೇ ಶಾಕ್ ಆದರು. ಕನಿಷ್ಠ ನಾಕೈದು ಮಂದಿ ಇರುತ್ತಾರೆ ಅಂದುಕೊಂಡ ಇವ್ರಿಗೆ ಒಳಗೆ ಯಾರೂ ಕಾಣಲಿಲ್ಲ. ಗುಡಿಸಲು ಖಾಲಿ ಖಾಲಿ! ಬಿಯರ್ ಬಾಟಲಿಗಳು, ಊಟದ ತಟ್ಟೆಗಳು ನೆಲದ ಮೇಲಿದ್ದವು. ಮನುಷ್ಯರೇ ಇಲ್ಲ!
ಭಾಗ 2 : Forest Stories: ಕಾಡೇ ಕಾಡತಾವ ಕಾಡ; ರಾತ್ರಿ ಸಣ್ಣ ಬೆಳಕಿನ ಕಿರಣ ಕಂಡರೂ ಕಳ್ಳರು ಹುಷಾರಾಗಿಬಿಡ್ತಾರೆ
ಸಾರ್! ಅನ್ನುತ್ತಾ ಕೂಗಿದ ಮನು, ಒಳ ನುಗ್ಗಿದ ಎಸಿಎಫ್ ಕೂಡಾ ಶಾಕ್ ಆಗಿ ನಿಂತರು.
ಹೇಗೆ? ಹೇಗಾಯ್ತು ಇದು? ನಾವು ಬರುತ್ತಿರುವುದು ಹೇಗೆ ಗೊತ್ತಾಯ್ತು? ಬೆಂಕಿ ಹಾಕಿರುವುದು, ಮತ್ತು ಅದರು ಇನ್ನೂ ಕೆಂಡ ಬಾಕಿ ಇರುವುದು ನೋಡಿದರೆ ಅವರು ರಾತ್ರಿ ಇಲ್ಲಿ ಇದ್ದಿದ್ದು ಕನ್ಫರ್ಮ್! ಮತ್ತೆ ಬೆಳಗಿನ ಜಾವ ಎಲ್ಲಿ ಹೋದರು? ಇದು ಪಕ್ಕಾ ಮಾಹಿತಿ ಲೀಕ್ ಆಗಿಯೇ ಹೋಗಿರುವುದು. ಹೇಗೆ ಗೊತ್ತಾಯ್ತು? ಟೆನ್ಷನ್ ಆಗಿ ಹೊರ ಬಂದವರೇ ಸಿಗರೇಟ್ ಹಚ್ಚಿ ದೂರದಲ್ಲಿ ನಿಂತರು.
ದೂರದಲ್ಲಿ ಬೆಟ್ಟದ ನಡುವಿನಿಂದ ನೇಸರ ಉದಯಿಸಿದ, ಬೆಳಗಿನ ಬೆಳಕ ಕಿರಣಗಳು ನಿಧಾನಕ್ಕೆ ಆ ಪ್ರದೇಶವನ್ನು ಆವರಿಸಿತೊಡಗಿತು. ಅದುವರೆಗೂ ಅಸ್ಪಷ್ಟವಾಗಿ ಕಾಣುತ್ತಿದ್ದ ಜಾಗವೀಗ ನಿಚ್ಚಳವಾಗಿ ಕಾಣತೊಡಗಿತು. ಎಕರೆಗಟ್ಟಲೆ ಪ್ರದೇಶವನ್ನು ಅಗೆದು, ಸಾಲು ಮಾಡಿ ಅದರ ಮೇಲೆ ಮಣ್ಣು ಕೂಡಿಸಿ ಬೆಳೆ ಬೆಳೆದಿದ್ದರು. ಮಾಮೂಲಿ ಬೆಳೆಯಲ್ಲ ಅದು. ಗಾಂಜಾ! ಕಳ್ಳ ಮಾರುಕಟ್ಟೆಯಲ್ಲಿ ಕೋಟಿಗಟ್ಟಲೆ ಹಣ ತಂದುಕೊಡುವ ಮಾದಕ ವಸ್ತು.
(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)
ಭಾಗ 3 : Forest Stories: ಕಾಡೇ ಕಾಡತಾವ ಕಾಡ; ಅಲ್ಲಿ ಹೊಗೆ ಕಾಣಿಸುತ್ತಿದೆ ಎಂದರೆ ಅವರಲ್ಲಿ ಇಲ್ಲವೆಂದರ್ಥ
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kaade-kaadataava-kaada
Published On - 11:30 am, Sat, 12 March 22