Dr. Veena Shanteshwar : ತಾನು ಲೋಕವಿರೋಧಿ ಆಗುತ್ತೇನೆ ಎಂದು ಗೊತ್ತಿದ್ದೂ ವೀಣಾ ಇಂಥ ಪ್ರಯೋಗ ನಡೆಸಿದರು

|

Updated on: Feb 24, 2022 | 2:33 PM

Literature : ‘ಈವತ್ತು ಸಮಕಾಲೀನ ಸಂದರ್ಭದಲ್ಲಿ ಹೆಣ್ಣುಮಕ್ಕಳು ಎದುರಿಸುವ ಪ್ರಶ್ನೆಗಳನ್ನು ನಾವು ವಾಸ್ತವದ ನೆಲೆಯಲ್ಲಿ ನೋಡಿದಾಗ, ಈ ಥರಹದ ಯೂ ಟರ್ನ್​ಗೆ ಯಾಕೆ ನಮ್ಮ ಹೆಣ್ಣುಮಕ್ಕಳು ಮುಂದಾಗುತ್ತಾರೆ ಎನ್ನುವುದಕ್ಕೆ ಉತ್ತರ ಸಿಗುತ್ತದೆ.’

Dr. Veena Shanteshwar : ತಾನು ಲೋಕವಿರೋಧಿ ಆಗುತ್ತೇನೆ ಎಂದು ಗೊತ್ತಿದ್ದೂ ವೀಣಾ ಇಂಥ ಪ್ರಯೋಗ ನಡೆಸಿದರು
ಡಾ. ಎಂ. ಎಸ್. ಆಶಾದೇವಿ ಮತ್ತು ಡಾ. ವೀಣಾ ಶಾಂತೇಶ್ವರ
Follow us on

ಡಾ. ವೀಣಾ ಶಾಂತೇಶ್ವರ | Dr. Veena Shanteshwar : ವೀಣಾ ಅವರ ‘ಕೊನೆಯ ದಾರಿ’ ಕಥೆಯಲ್ಲಿ ನಾಯಕಿಯ ಅಂತಿಮ ನಿರ್ಧಾರ ಗಮನಿಸಿರಬಹುದು; ತನ್ನ ತಂದೆಯ ಗೆಳೆಯನೊಂದಿಗೆ ಆಕೆ ಹೊರಡುವ ನಿರ್ಧಾರಕ್ಕೆ ಬರುತ್ತಾಳೆ. ಆಕೆಯ ಈ ನಿರ್ಧಾರ ನಿಜಕ್ಕೂ ಪ್ರಬುದ್ಧ. ಇಡೀ ಲೋಕ ಅವಳನ್ನು ನೋಡಿ ನಗಬಹುದು, ಗೇಲಿ ಮಾಡಿ ನಗಬಹುದು. ಹಣದ ಹಿಂದೆ ಹೋದಳು ಅಂತೆಲ್ಲಾ… ಲೋಕ ತನಗೆ ಬೇಕಾದ್ದನ್ನು ಮಾತನಾಡಿಕೊಳ್ಳಲಿ. ಆದರೆ ನನ್ನ ಆಯ್ಕೆ ಎನ್ನುವುದು? ನನ್ನ ಆಯ್ಕೆ ನನ್ನ ಬದುಕು ನನ್ನ ನಿರ್ಧಾರ. ಹೀಗೆ ವೀಣಾ ಅವರ ಕಥೆಗಳು ಇಂಥ ಸಾಕಷ್ಟು ಸಾಧ್ಯತೆಗಳನ್ನು ಹುಡುಕಿಕೊಳ್ಳುತ್ತಲೇ ಹೋದವು. ಈ ಹುಡುಕಾಟದ ಹೊಸತನಕ್ಕೆ ಮಾರುಹೋದವರಂತೆ ನಟಿಸಲಾಯಿತೇ ಹೊರತು ನಿಜವಾಗಿಯೂ ಅವರ ಸಾಹಿತ್ಯಕ್ಕೆ ಕಟ್ಟಬೇಕಾದ ಬೆಲೆ ಕಟ್ಟಲಾಯಿತು ಎಂದು ನನಗಂತೂ ಅನ್ನಿಸುವುದಿಲ್ಲ.
ಡಾ. ಎಂ. ಎಸ್. ಆಶಾದೇವಿ, ವಿಮರ್ಶಕಿ

*

(ಭಾಗ 4)

ವೀಣಾ ಅವರ ಇನ್ನೊಬ್ಬ ಕಥಾನಾಯಕಿಯನ್ನು ಗಮನಿಸಿ. ಅವಳ ಸಖನಾದವನು ಉದ್ದಕ್ಕೂ ಏಮಾರಿಸುತ್ತಲೇ ಹೋಗುತ್ತಾನೆ. ತಾನು ಬೇರೊಂದು ಹೆಣ್ಣಿನೊಂದಿಗೆ ಮದುವೆಯೂ ಆಗುತ್ತಾನೆ. ಇದೆಲ್ಲ ಮುಗಿದಮೇಲೆ ನಾವಿಬ್ಬರೇ ಮದುವೆಯಾಗಿ ನಮ್ಮದೇ ಆದ ಮನೆ ಮಾಡಿಕೊಂಡು ಛಂದ ಬದುಕೋಣ ಎಂದು ಹೇಳುತ್ತಲೇ, ನನಸಾಗದ ಕನಸುಗಳನ್ನು ಕಟ್ಟುತ್ತ ಅವಳ ಬದುಕನ್ನು ಹಾಳು ಮಾಡುತ್ತಾನೆ. ಆಕೆ ತನ್ನ ಬದುಕು ಇಂದು ಸಿಗಬಹುದಾ, ನಾಳೆ ಸಿಗಬಹುದಾ ಎಂದು ಹಂಬಲಿಸುತ್ತಲೇ ಸಾಗುತ್ತಾಳೆ. ಇದು ಸದ್ದಿಲ್ಲದೆ ನಡೆಯುವ ಶೋಷಣೆ. ಆದರೂ ನಾಯಕಿ ಹಾಗೆ ಅಂದುಕೊಳ್ಳುವುದಿಲ್ಲ. ಅವನಿಗೆ ಅವನದೇ ಆದ ಬದುಕಿದೆ. ಕಟ್ಟುಪಾಡು, ಕರ್ತವ್ಯ, ಜವಾಬ್ದಾರಿಗಳಿವೆ. ಅವೆಲ್ಲ ಮುಗಿಸಿಕೊಂಡು ತನ್ನ ಬಳಿ ಬರುತ್ತಾನೆ ಎಂದೇ ಕಾಯುತ್ತಾಳೆ. ಬರುತ್ತಾನಾ? ಅವ ಬರುವುದೇ ಇಲ್ಲ.

ಒಟ್ಟಾರೆಯಾಗಿ ವೀಣಾ ಅವರ ಕಥೆಗಳಲ್ಲಿ ಆಧುನಿಕ ಹೆಣ್ಣು ತನ್ನ ಆಯ್ಕೆಯ ಬದುಕನ್ನು ಕಟ್ಟಿಕೊಳ್ಳಲು ಹೋದಾಗ ತನ್ನ ಎದುರಿಗಿರುವ ಆಯ್ಕೆ, ಸಾಧ್ಯತೆಗಳನ್ನು ಹುಡುಕುತ್ತಲೇ ಹೋಗುತ್ತಾಳೆ. ಈ ದಾರಿ ಇರಬಹುದಾ ಆ ದಾರಿ ಇರಬಹುದಾ ಅಂತೆಲ್ಲ. ಈ ಹುಡುಕಾಟ ನಮ್ಮನ್ನು ಯಾವ ಸತ್ಯದ ಕಡೆಗೆ ಕರೆದುಕೊಂಡು ಹೋಗುತ್ತದೆ ಎಂದರೆ, ತನಗೆ ಬೇಕಾದ ದಾರಿಯನ್ನು ಅವಳೇ ಕಲ್ಲು ಮುಳ್ಳು ತೆಗೆದು ಮಾಡಿಕೊಳ್ಳಬೇಕೇ ಹೊರತು ಬೇರೆ ದಾರಿಯೇ ಇಲ್ಲ.  ಯಾರೂ ಅವಳಿಗೆ ದಾರಿಯನ್ನು ಮಾಡಿ ಇಟ್ಟಿಲ್ಲ.

ವೀಣಾ ಶಾಂತೇಶ್ವರ ಸಂದರ್ಶನ : Dr. Veena Shanteshwar‘s Birthday: ‘ನನ್ನ ಬದುಕಿನ ಅನುಭವ ಸಾಂದ್ರಗೊಳಿಸಿ ಬರೆಯುವ ಉದ್ದೇಶ ಖಂಡಿತ ಇದೆ’

ಇದೆಲ್ಲವನ್ನೂ ಗಮನಿಸಿದಾಗ, ವೀಣಾ ಅವರಿಗೆ ಸಹಲೇಖಕರು ಸಹಕಾರ ನೀಡಬಹುದಾಗಿತ್ತು. ಸಹಪ್ರಯಾಣಿಕರಂತೆ ಇರಬಹುದಾಗಿತ್ತು. ನೈತಿಕ ಬೆಂಬಲ ಕೊಟ್ಟು ಪ್ರೋತ್ಸಾಹಿಸಬಹುದಿತ್ತು. ಇಲ್ಲ, ಇದೆಂದಿಗೂ ಆಗಲೇ ಇಲ್ಲ. ನಾನಿದನ್ನು ನೈತಿಕ ಬಾಧ್ಯತೆ ದೃಷ್ಟಿಯಿಂದ ಪ್ರಶ್ನಿಸುತ್ತಿಲ್ಲ. ಅದೊಂದು ಸ್ಥಿತಿ ಎಂತಲೂ ಹೇಳುತ್ತಿಲ್ಲ. ಆದರೆ, ಲೇಖಕರ ವಿಷಯದಲ್ಲಿ ಸಿಕ್ಕಂಥ ಹುಸಿ ಘೋಷಣೆ ಲೇಖಕಿಯ ವಿಷಯದಲ್ಲಿ ಸಿಗಲಿಲ್ಲವಲ್ಲ? ಅವರಿಗೆ 80 ಅಂಕಗಳನ್ನು ಕೊಟ್ಟರೆ ಇವರಿಗೆ 50 ಅಂಕಗಳನ್ನು ಕೊಟ್ಟು ನಿಲ್ಲಿಸಲಾಯಿತು. ತಾನು ಲೋಕವಿರೋಧಿ ಆಗುತ್ತೇನೆ ಎಂದು ಗೊತ್ತಿದ್ದೂ ವೀಣಾ ಇಂಥ ಪ್ರಯೋಗ ನಡೆಸಿದರು. ಆ ಬದ್ಧತೆಗೆ, ಧೈರ್ಯಕ್ಕೆ, ಸಾಹಸಕ್ಕೆ, ಶಕ್ತಿಗೆ ಸಲ್ಲಬೇಕಾಗಿರುವುದು ಗೌರವ ಸಲ್ಲಲಿಲ್ಲ ಎನ್ನುವುದು ನನ್ನ ಕೊರಗು.

ಅನುವಾದದ ವಿಷಯದಲ್ಲಿಯೂ ಅಷ್ಟೇ. ಇವರ ಅದೆಷ್ಟೋ ಕಥೆಗಳು ಇತರೇ ಭಾಷೆಗೆ ಅನುವಾದಗೊಳ್ಳಬೇಕಿತ್ತು. ಬಹುಶಃ ಅವರು ತಮ್ಮ ಬದುಕಿನ ಉತ್ತರಾರ್ಧದಲ್ಲಿ ತಳೆದ ಮೌನ ಇದೆಯಲ್ಲ, ಅದೂ ಕೂಡ ಇದಕ್ಕೆ ಕಾರಣ ಆಗಿರಬಹುದು. ಥಟ್ ಅಂತ ಬರೆವಣಿಗೆ ನಿಲ್ಲಿಸಿಬಿಟ್ಟರು. ಮುಂದೆ ಯೂ ಟರ್ನ್ ತೆಗೆದುಕೊಂಡಾಗ ಇವರ ‘ತಿರುಗಿ ಹೋದಳು’ ಕಥೆ ಅನೇಕ ಪ್ರಶ್ನೆಗಳನ್ನು ಹುಟ್ಟಿಸಿದವು. ಈವತ್ತು ಸಮಕಾಲೀನ ಸಂದರ್ಭದಲ್ಲಿ ಹೆಣ್ಣುಮಕ್ಕಳು ಎದುರಿಸುವ ಪ್ರಶ್ನೆಗಳನ್ನು ನಾವು ವಾಸ್ತವದ ನೆಲೆಯಲ್ಲಿ ನೋಡಿದಾಗ, ಈ  ಥರಹದ ಯೂ ಟರ್ನ್​ಗೆ ಯಾಕೆ ನಮ್ಮ ಹೆಣ್ಣುಮಕ್ಕಳು ಮುಂದಾಗ್ತಾರೆ ಎನ್ನುವುದಕ್ಕೆ ಉತ್ತರ ಸಿಗುತ್ತದೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ) 

ಭಾಗ 3 : Dr. Veena Shanteshwar: ಆ ಗಂಡಸರೆಲ್ಲ ಅವಳಿಂದ ಯಾಕೆ ದೂರ ಸರಿದರು?