The Dark Night : ತಾರಸಿಯ ಅಂಗಳದಲ್ಲಿ ಮೈ ಹರಡಿ ಅಗಸವ ಕಂಗಳಲ್ಲಿ ತುಂಬಿಕೊಂಡೆ. ಯಾವ ನಾದ ಮೊಳಗಿದವೋ? ಯಾವ ದಾರಿ ಕಂಡಾವೋ? ನೀಲಿ ಕನಸಲ್ಲೂ ಆಕಾಶ, ಮೀನ ಮನದಲ್ಲೂ ಆಕಾಶ! ಎಷ್ಟೊಂದು ವಿಸ್ಮಯ ಈ ಆಗಸದ ವೈಶಾಲ್ಯ. ಕತ್ತಲ ಮಾಯೆ ಕವಿಡಿದ್ದರೂ ಅದೆಷ್ಟು ಸುಂದರ. ಅಂದಲ್ಲಿ ಚಂದಿರನಿಲ್ಲದಿದ್ದರೂ, ಕಾರ್ಮೋಡ ದಟ್ಟ ನೋವಿನ ಹಾಗೆ ಹಬ್ಬಿದ್ದರೂ, ಅದು ಯಾರೋ ಬಾನ ಹೊಸ್ತಿಲಲ್ಲಿ ಹಣತೆಗಳ ಹಚ್ಚಿಟ್ಟಂತೆ, ಕಂಡು ಕಾಣದ ಹಾಗೆ ಮಿಣುಮಿಣುಕು ಬೆಳ್ಳಿ ಚುಕ್ಕಿ ಅಲ್ಲೊಂದು ಇಲ್ಲೊಂದು. ಹಾಗೆ ಎದ್ದು ನಿಂತು ಸುತ್ತಣ ಕಣ್ಣಾಡಿಸಿದೆ. ಎಲ್ಲೆಲ್ಲೂ ನಿರವತೆ, ಪಸರಿದ ನಿಶಾಂತತೆ. ಮೌನದ ಎದೆಯೊಳಗೆ ತಂಗಾಳಿ ಸುಯ್ಯನೆ ಹರಿಹಾಯುತ್ತಿತ್ತು. ಯಾವುದೊ ಸ್ವಯಂ ಗೀತೆಯ ಗುನುಗುತಲಿತ್ತು! ರಸ್ತೆಯ ಆಚೆ ಬದಿಯಲಿ ಲಕ್ಷ ಅರಳಿ ಎಲೆಗಳು ಸಣ್ಣಗೆ ಕಂಪಿಸುವ ಸದ್ದು, ಪಿಸು-ಗುಸು ಮಾತನುಲಿಯುವಂತಿದ್ದವು. ಛೇ…! ಅದಾವುದು ಕೇಳಿಸಲೆ ಇಲ್ಲ.
ಜಬೀವುಲ್ಲಾ ಎಂ. ಅಸದ್. ಮೊಳಕಾಲ್ಮೂರು
(ಭಾಗ 2)
ಅಲ್ಲೆ ಪಕ್ಕದ ಓಣಿಯ ಹಳೆಯ ಮಂದಿರದ ನವ ಗೋಪುರದ ತುಂಬಾ ಅಲಂಕಾರಿಕ ವಿದ್ಯುತ್ ದೀಪಗಳ ಆಭರಣ. ಮಂದಿರದೊಳಗೆ ಗರ್ಭಗುಡಿಯಲಿ ಮಾತ್ರ ಏಕಾಂಗಿ ದೈವ ಮೂರ್ತಿಯ ಸುತ್ತಣ ಬೆಳಕಿಲ್ಲದೆ ಬರಿಯ ಕತ್ತಲೇ ಭಣಭಣ. ಹೀಗನಿಸಿತು ಅದೊಂದು ವಿಸ್ಮೃತ ಘಳಿಗೆ. ಒಂದು ಚಣ ಕಣ್ಮುಚ್ಚಿ ಕನ್ನಡಕ ತೆಗೆದೆ, ಜಗವೆಲ್ಲಾ ಮಲಗಿತ್ತು; ನಾನಿನ್ನು ಎದ್ದೆ ಇದ್ದೆ! ಆಗಸ ಮತ್ತು ಭೂಮಿಯ ನಡುವೆ ನಿಂತಂತಿದ್ದೆ. ನನ್ನನ್ನು ನಾನು ಬುದ್ದನೆಂದು ಭ್ರಮಿಸಿಕೊಂಡೆ. ಬೆನ್ನು ಬಿಡದ ಬೇತಾಳನಾಗಿ ಕಾಡಿದ ಪ್ರಶ್ನೆಯ ಬೆನ್ನಹತ್ತಿದೆ. ಈ ಬದುಕಿನಿಂದ ಬೇಕಾಗಿರುವುದಾದರೂ ಏನು? ಅಗಬೇಕಾಗಿರುವುದಾದರು ಏನು?
ಹೌದು! ಈ ಬದುಕಿನಿಂದ ನನಗೆ ಚೇತನ ಬೇಕು, ಹೊಸತನಬೇಕು, ಪ್ರೇರಣೆ ಬೇಕು, ಒಂದಷ್ಟು ಪ್ರೀತಿ, ಆತ್ಮೀಯತೆ, ಸ್ನೇಹ, ಸೌಹಾರ್ದತೆ, ಪುಟ್ಟ ಪುಟ್ಟ ಸಂತಸಗಳು, ಜೊತೆಗೊಂದಷ್ಟು ನೋವು ಮತ್ತು ಕಷ್ಟಗಳು ಸಹ. ಬದುಕಿನ ತಿರುಳನ್ನು ಅರಿಯುವಷ್ಟು ಜ್ಞಾನ, ಚೂರು ಮುಗ್ಧತೆ, ಅಗಾಧ ಕುತೂಹಲ, ಎಲ್ಲಾ… ಎಲ್ಲಾ… ಬೇಕು! ಆದರೆ ಇವೆಲ್ಲಾ ಇವೆ. ಸಾವಿರ ಕನಸುಗಳಿವೆ, ಬದುಕಿನುದ್ದಕ್ಕೂ ಮೇಲುಕುಹಾಕುವಂತಹ ನೆನಪುಗಳಿವೆ. ಎಲ್ಲರಲ್ಲೂ ಇರಬಹುದು, ಇರದೆಯೂ ಇರಬಹುದು. ಈ ಇದೆ ಮತ್ತು ಇಲ್ಲದರ ನಡುವೆ ಬಾಳಿ ಬದುಕುವುದು, ಅಳಿಯುವುದು ತಪ್ಪದು. ಆಗ ಸಮಯ ಒಂದು ದಾಟಿದ್ದಿರಬಹುದು, ಗಂಟೆ ಎರಡು ಆಗಿರಲೂಬಹುದು. ಎಷ್ಟೇ ಮೈದಡವಿ ಚಳಿಯನ್ನು ನೆಲಕ್ಕೆ ಖೊಡವಿದರೂ ಅದು ಹುಚ್ಚೆದ್ದು ಮತ್ತೆ ಮತ್ತೆ ಮೇಲೆದ್ದು ಮೈಮೇಲೆರಗಿ ಬೀಳುತಲಿತ್ತು; ಹತಾಶನಾದೆ, ಅನಾಹತನಾದೆ.
ತುಂಬಾ ಹೊತ್ತಿನ ತರುವಾಯ ಮನಸ್ಸಿಗೂ ಮೆದುಳಿಗೂ ತಾಕಲಾಟ ಉಂಟಾಗಿ, ಯಾವುದರ ಮಾತು ಕೇಳಬೇಕೆಂದು ತಿಳಿಯದೆ ಒಂದು ನಿರ್ಧಾರಕ್ಕೆ ಬಂದೆ. ಹೌದು, ಈ ಬದುಕಿನಿಂದ ನನಗೆ ಬೇಕಾಗಿರುವುದು “ಅನುಭವ”. ಅಗಾಧ, ಅನಂತ ಅನುಭವ. “ಅನುಭವವೇ ಲೋಕದಲ್ಲಿ ಎಲ್ಲಾ ಅಲ್ಲದಿರಬಹುದು, ಆದರೆ ಅನುಭವ ಏನೇನೂ ಅಲ್ಲ ಅನ್ನುವುದು ಸಹ ನಿಜವಲ್ಲ”. ಯುವಕನಾದವನು ತನ್ನ ವಿವೇಕವೆ ತನ್ನ ಅನುಭವ ಎಂದುಕೊಳ್ಳುತ್ತಾನೆ. ವೃದ್ಧರು ತಮ್ಮ ವಯಸ್ಸನ್ನೆ ತಮ್ಮ ಅನುಭವ ಎಂದುಕೊಳ್ಳುವಂತೆ. ಬದುಕಿನ ದುರಂತವೆ ಇದಲ್ಲವೆ?
ಇದನ್ನೂ ಓದಿ : Dr. Veena Shanteshwar‘s Birthday: ‘ನನ್ನ ಬದುಕಿನ ಅನುಭವ ಸಾಂದ್ರಗೊಳಿಸಿ ಬರೆಯುವ ಉದ್ದೇಶ ಖಂಡಿತ ಇದೆ’
ಹೀಗೆ… ಜಗತ್ತಿನಲ್ಲಿ ಯಾವುದು ಶಾಶ್ವತವೆಂದು ಅರಿವಿಗೆ ನಿಲುಕದೆ, ಹಲವು ದಿನಗಳವರೆಗೆ ನನ್ನೊಂದಿಗೆ ನಾನು ಕಾದಾಡಿ, ಆಗಿನ ನನ್ನಿಡಿ ಅನುಭವವನ್ನು ಒಟ್ಟುಗೂಡಿಸಿ, ಅದಲ್ಲ ಇದು ಎಂತೆಲ್ಲ ಕೂಡಿ ಕಳೆದು, ಇಲ್ಲಿ ಎಲ್ಲವೂ ನಶ್ವರವೆ. ಒಂದು ದಿನ ಎಲ್ಲಾ ನಾಶವಾಗಲೇ ಬೇಕು. ಇಲ್ಲಿ ಚಲನೆಯೊಂದೆ ಶಾಶ್ವತವಾದುದುದೆಂದು ಅರಿತುಕೊಂಡೆ.
ಮಗಿಸುವ ಮುನ್ನ….
ನನ್ನ ಬದುಕಿನ ಹಲವು ರಾತ್ರಿಗಳು ಹೀಗೆ… ಪ್ರಶ್ನೆಗಳ ಸುಳಿಯಲ್ಲಿ, ಉತ್ತರಗಳ ..ಹುಡುಕಿಕೊಳ್ಳುವಲ್ಲಿ, ಕನಸುಗಳ ನಡುವಲ್ಲಿ, ನೆನಪುಗಳ ಮರೆಯಲ್ಲಿ, ಒಂಟಿತನದ ಗುಂಗಿನಲಿ, ಏಕಾಂತದ ಹಂಗಿನಲಿ, ಅಗಣಿತ ನಕ್ಷತ್ರಗಳ ನೋಟದಿ, ಕಾರಿರುಳ ಮೌನದಿ ಈ ನನ್ನ ಇರುಳುಗಳು ಕಳೆದಿವೆ, ಕಾಡಿವೆ, ಕುರುಡಾಗಿವೆ, ಕಂಗೆಟ್ಟಿವೆ, ಮಿಡಿದಿವೆ, ಮಾತಾಡಿವೆ, ಮೌನತಾಳಿವೆ, ಅಳಲನ್ನು ಕಂಡಿವೆ, ನಗೆಗೆ ಸಂಭ್ರಮಪಟ್ಟಿವೆ. ನನ್ನೊಂದಿಗೆ ಗುದ್ದಾಡಿವೆ, ಬದುಕುಳಿದಿವೆ, ಅಳಿದಿವೆ, ಹಸಿದಿವೆ, ಊಳಿಟ್ಟಿವೆ, ಹೂಬಿಟ್ಟಿವೆ, ಹಸಿರಾಗಿವೆ, ಉಸಿರಾಗಿವೆ; ನನ್ನಯ ನಿನ್ನೆ ಮತ್ತು ನಾಳೆಗಳ ನಡುವಣದಿ ತೂಗುಯ್ಯಾಲೆಯಾಡಿವೆ.
(ಮುಗಿಯಿತು)
*
ಪ್ರತಿಕ್ರಿಯೆಗಾಗಿ : tv9kannadadigital@gmail.com
*
ಭಾಗ 1 : ಅಳಿಸಬಹುದೇನು ಮೈಯ ಮೇಲಿನ ಮಚ್ಚೆಯನು? ಮನದ ಪುಟಗಳ ಮೇಲೆ ನೆನಪುಗಳ ಚಿಟ್ಟೆಗಳ ಹಚ್ಚೆಯನು?
Published On - 1:37 pm, Wed, 23 February 22