ಹಾದಿಯೇ ತೋರಿದ ಹಾದಿ: ಈ ಊರಿಗೆ ಆಸ್ಪತ್ರೆಯಿಲ್ಲ ಬಸ್ಸಿಲ್ಲ ದೇವಸ್ಥಾನವೂ ಇಲ್ಲ
Poverty in India : ‘ನಾಗರಹಾವುಗಳು, ಮಂಡಲದಹಾವುಗಳು ನೂಲುಕಟ್ಟಲು ಹಾವುಗಳು ಬರುತ್ತವೆ. ಕೋಳಿ ಸಾಕಿದರೆ ಚಿರತೆಗಳು ಬಂದು ತಿನ್ನುತ್ತವೆ. ರಾತ್ರಿ ಕಳೆಯುವುದೂ ಕಷ್ಟ. ಇನ್ನು ಚಪ್ಪಲಿ ಹೊಲೆದು ಬದುಕಲಾದರೂ ಬಂಡವಾಳ ಬೇಕಲ್ಲ?’
ಹಾದಿಯೇ ತೋರಿದ ಹಾದಿ | Haadiye Torida Haadi : ಬೆಂಗಳೂರಿನ ಬ್ಯಾಟರಾಯನಪುರದ ಮರದಡಿಯಲ್ಲಿ ನರಸಮ್ಮ ಹಣ್ಣು ಮಾರುತ್ತ ಕುಳಿತಿದ್ದಳು. ಮಾತನಾಡಿಸುತ್ತಾ ನಿಮ್ಮ ಮನೆ ಎಲ್ಲಿ ಎಂದಿದ್ದಕ್ಕೆ, ಬರ್ತೀರಾ? ಎಂದು ನಕ್ಕರು. ನಂಬರ್ ಕೊಟ್ಟು, ಊರಿಗೆ ಹೋದತಕ್ಷಣ ಪರಿಚಿತರ ಮೊಬೈಲ್ನಿಂದ ಲೊಕೇಶನ್ ಕಳಿಸಿ ಎಂದೆ. ಮಾರನೇ ದಿನ ಮಕ್ಕಳೊಂದಿಗೆ ಸ್ಕೂಟಿಯೇರಿ ಜಿಪಿಎಸ್ ತೋರಿದ ಹಾದಿಗುಂಟ ಹೊರಟೆ. 46ಕಿ.ಮೀ ನಂತರ ಹಿರೇಮುದ್ದೇನಹಳ್ಳಿ ಕಂಡಿತು. ಇವರಿರುವ ಜಾಗ ತಲುಪಿದಾಗ ಮಧ್ಯಾಹ್ನ ಎರಡೂವರೆ. ಒಂದು ಚಾಪೆಯೂ ಇಲ್ಲ ನಿಮ್ಮನ್ನು ಕೂರಿಸಲು ಎಂದು ಮುಜುಗರಪಟ್ಟುಕೊಂಡರು. ಒಲೆಯ ಬಾಯಿಗೆ ಕಟ್ಟಿಗೆ ತುರುಕುತ್ತ ಕಡ್ಡಿಗೀರಲು ಹಿಂದೆಮುಂದೆ ನೋಡಿ, ಕಾಫಿನೋ ಚಹಾನೋ ಮಾಡಿ ಕುಡಿಸಬೇಕಿತ್ತು, ಆದರೆ ನಿಮಗೆ ಹೊಗೆ… ಎಂದು ನೆಲ ನೋಡಿದರು. ಬೊಗಸೆ ರಾಗಿ, ಹುರಳಿ ಮುಂದೆ ಹಿಡಿದು ಬರಿಗೈಯಲ್ಲಿ ಹೋಗಬಾರದು ಏನಾದರೂ ಸ್ವಲ್ಪ ತಗೊಳ್ಳಿ ಅಥವಾ ನಿಮ್ಮನೆ ಅಡ್ರೆಸ್ ಕೊಡಿ, ಕೋಳಿ ತಂದುಕೊಡುತ್ತೇವೆ ಎಂದರು. ಆದರೆ ಈಗ ನೀರಾದರೂ? ಯಾಕೆ ಬಡವರ ಮನೆಯಲ್ಲಿ ಕುಡಿಯಲ್ವಾ? ಎಂದು ದೃಷ್ಟಿಗೆ ದೃಷ್ಟಿ ಕೊಟ್ಟರು. ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್, ಬೆಂಗಳೂರು (Jyothi S)
*
(ಹಾದಿ 7)
‘ದೀಪದ ಬುಡದಲ್ಲಿ ಕತ್ತಲು’ ಎನ್ನುವ ಹಾಗೆ ಬೆಂಗಳೂರಿನ ಸಮೀಪವಿರುವ ತೂಬ್ಗೆರೆ ಹೋಬಳಿ, ದೊಡ್ಡಬಳ್ಳಾಪುರ ತಾಲೂಕಿನ ಹಿರೇಮುದ್ದೇನಹಳ್ಳಿ ಗ್ರಾಮಕ್ಕೆ ಈತನಕವೂ ಸರಿಯಾಗಿ ರಸ್ತೆಯಿಲ್ಲ, ಬಸ್ಸಿಲ್ಲ. ದಿನವೂ ಬೆಂಗಳೂರು, ದೊಡ್ಡಬಳ್ಳಾಪುರಕ್ಕೆಂದು ಕೆಲಸ ಹುಡುಕಿಕೊಂಡು ಅಲೆಯುವ ಅಕ್ಕ ನರಸಮ್ಮ ಮತ್ತು ತಂಗಿ ನಾರಾಯಣಮ್ಮನ ಬದುಕಿನ ಕಥೆ ಇದು. ನರಸಮ್ಮನಿಗೆ ಮೈನೆರೆದ ಎರಡು ತಿಂಗಳಿಗೆ ಮದುವೆಯಾಯಿತು. ಲಾರಿ ಕ್ಲೀನರ್ ಆಗಿರುವ ಗಂಡ ಹದಿನೈದು ದಿನಕ್ಕೊಮ್ಮೆ ಮನೆಗೆ ಬಂದರೆ ಹೆಚ್ಚು. ಮುಂದಿನದನ್ನು ಅವರ ಮಾತಿನಲ್ಲೇ ಓದಿ.
ನಾವು ಚಿಕ್ಕಂದಿನಿಂದಲೇ ಕೂಲಿ ಕೆಲಸಕ್ಕೆ ಹೋಗ್ತಿದ್ವಿ. ಕೆಲಸಕ್ಕೆ ಹೋಗದಿದ್ರೆ ಊಟಕ್ಕೆ ಗತಿಯಿರಲಿಲ್ಲ. ಹಾಗಾಗಿ ಶಾಲೆಗೆ ಹೋಗಲು ನಮಗೆ ಅವಕಾಶವಾಗಲಿಲ್ಲ. ಅಪ್ಪ ಅಮ್ಮ ಕಾಡಿನಿಂದ ಸೌದೆ ಆಯ್ದು ಪಕ್ಕದೂರುಗಳಿಗೆ ಹೊತ್ತುಕೊಂಡು ಹೋಗಿ ಮಾರಿ ಅಕ್ಕಿಯ ನುಚ್ಚು ತರುತ್ತಿದ್ದರು. ನಾವು ಚಿಕ್ಕವರಿದ್ದಾಗ ಹಾಕಿಕೊಳ್ಳಲು ಬಟ್ಟೆಯಿಲ್ಲದೆ ಎಷ್ಟೋ ಸಲ ಫುಟ್ಪಾತ್ ಮೇಲೆ ಬಿದ್ದ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆವು. ನನಗೆ ಎರಡು ಗಂಡುಮಕ್ಕಳು. ನಮ್ಮ ಗತಿ ಅವರಿಗೂ ಬರಬಾರದಲ್ಲ ಎಂದು ಕೂಲಿನಾಲಿ ಮಾಡಿ ಓದಿಸುತ್ತಿದ್ದೇನೆ. ಎರಡನೆಯ ಮಗನಿಗೆ ಮೂರ್ಛೆರೋಗವಿದೆ. ಕೈಯಲ್ಲಿ ಹಣವಿಲ್ಲ ಆದರೆ ಮಗ ಹುಷಾರಾದ್ರೆ ಸಾಕೆಂದು ಕಂಡಕಂಡಲ್ಲಿ ಸಾಲ ಮಾಡಿ ಆಸ್ಪತ್ರೆಗೆ ತೋರಿಸುತ್ತಿದ್ದೇನೆ.
ನಮಗೆ ಇರೋಕೆ ಸ್ಥಳವಿಲ್ಲ, ಮನೆಯಿಲ್ಲ ಎಂದು ಗುಟ್ಟಲ್ಗಟ್ಟು ಎಂಬ ಬೆಟ್ಟಕ್ಕೆ ಬಂದು ನಾಲ್ಕೈದು ಟ್ರ್ಯಾಕ್ಟರ್ ಮಣ್ಣು ಹೊಡೆಸಿ, ನೆಲ ಸಮತಟ್ಟು ಮಾಡಿ ಹೊಂಗೆಕಡ್ಡಿ, ನೀಲಗಿರಿ ಕಡ್ಡಿ, ಯಲಚಿಗಿಡದ ಕವಲು ಹೀಗೆ ಸಿಕ್ಕಸಿಕ್ಕ ಗಿಡಮರಗಳ ಕಟ್ಟಿಗೆ, ಹುಲ್ಲು ತಂದು ಗುಡಿಸಲನ್ನು ಕಟ್ಟಿಕೊಂಡಿದ್ದೇವೆ. ಸಗಣಿಯಿಂದ ಸಾರಿಸಿ ಒಳ ನೆಲವನ್ನು ಸ್ವಚ್ಛ ಮಾಡಿಕೊಂಡಿದ್ದೇವೆ. ಇಲ್ಲಿ ಕರೆಂಟ್ ಇಲ್ಲ. ಒಮ್ಮೊಮ್ಮೆ ನಾಗರಹಾವುಗಳು, ಮಂಡಲದಹಾವುಗಳು ಬರುತ್ತವೆ. ಒಮ್ಮೆ ನೂಲುಕಟ್ಟಲು ಹಾವು ಕಟ್ಟಿಗೆಯೊಳಗೆ ಸುತ್ತಿಕೊಂಡು ಮಲಗಿತ್ತು. ಒಮ್ಮೆಯಂತೂ ಒಂದು ಸಣ್ಣ ಹಾವಿನಮರಿ ನಾವು ಮಲಗಿದ್ದಾಗ ನಮ್ಮ ಅಡಿಯಲ್ಲೇ ಸತ್ತು ಬಿದ್ದಿತ್ತು. ಬೆಳಗ್ಗೆ ಎದ್ದು ನೋಡಿದ್ವಿ. ಕೋಳಿ ಸಾಕಿದರೆ ಚಿರತೆಗಳು ಬಂದು ತಿನ್ನುತ್ತವೆ. ರಾತ್ರಿ ಕಳೆಯುವುದೂ ಕಷ್ಟ. ಸತ್ತರೂ ಪರವಾಗಿಲ್ಲ ಅಂತ ದೇವರ ಮೇಲೆ ಭಾರ ಹಾಕಿ ಜೀವನ ಸಾಗಿಸುತ್ತಿದ್ದೇವೆ.
ಇದನ್ನೂ ಓದಿ : ಹಾದಿ 5 : ಹಾದಿಯೇ ತೋರಿದ ಹಾದಿ; ‘ನನ್ನ ಕೈಗಳಿಲ್ಲದ್ದನ್ನು ಅಮ್ಮನಿಗೆ ಹೇಳಬೇಡಿ’ ಹನ್ನೆರಡರ ಶುಭಜಿತ್ ವೈದ್ಯರಿಗೇ ಸಲಹೆ ನೀಡಿದ್ದ!
ಮಳೆ ಬಂದರಂತೂ ನಮ್ಮ ಪಾಡು ಹೇಳತೀರದು. ಗುಡಿಸಲು ಎಲ್ಲಾ ಕಡೆಯೂ ಸೋರುತ್ತದೆ, ಸಾಲದ್ದಕ್ಕೆ ಹೊರಗಿನಿಂದಲೂ ನೀರು ಬರುತ್ತದೆ. ಮಳೆ ಸೋರುವ ಕಡೆಯೆಲ್ಲಾ ಪಾತ್ರೆ, ಪಗಡೆ, ಬಕೆಟುಗಳನ್ನು ಇಟ್ಟು ನಾವು ಟಾರ್ಪಾಲನ್ನು ಹೊದ್ದುಕೊಂಡು ತೂಕಡಿಸುತ್ತ ಬೆಳಕು ಹರಿಸಿ ಮಳೆಗಾಲದ ರಾತ್ರಿಗಳನ್ನು ಕಳೆಯುತ್ತೇವೆ. ಸ್ನಾನಕ್ಕೆ ಹೊಳೆಹೊಂಡಗಳು ಶೌಚಕ್ಕೆ ಬಯಲೇ ಗತಿ. ಚಿಕ್ಕಂದಿನಿಂದ ಹೀಗೇ ಬದುಕುತ್ತಿರುವುದರಿಂದ ರೂಢಿಯಾಗಿದೆ. ಆದರೆ, ತುಂಬ ಆತಂಕವಾಗುತ್ತದೆ. ದೇವರ ಮೇಲೆ ಭಾರ ಹಾಕಿ ಜೀವನ ಮಾಡುತ್ತಿದ್ದೇವೆ. ಕುಡಿಯುವ ನೀರನ್ನು ಕಿಲೋಮೀಟರ್ಗಟ್ಟಲೇ ದೂರದಿಂದ ಹೊತ್ತು ತರಬೇಕು. ಅಡುಗೆ ಮಾಡಲು ಕಾಡಿನಿಂದ ಸೌದೆ ಆಯ್ದು ತರಬೇಕು. ನಾವು ತಿಂಡಿಗೆ ಉಪ್ಪಿಟ್ಟು ಇಡ್ಲಿ ದೋಸೆ ಅಂತೆಲ್ಲ ಮಾಡುವುದಿಲ್ಲ. ಡಿಪೋದಲ್ಲಿ ಕೊಡುವ ಅಕ್ಕಿಯಿಂದ ಅನ್ನ, ಕೂಲಿ ಮಾಡಿ ಕೂಡಿಟ್ಟ ರಾಗಿಯಿಂದ ಅಂಬಲಿ ಮಾಡಿ ಅದಕ್ಕೆ ಗೊಜ್ಜು ಖಾರದಪುಡಿ ಹಾಕಿಕೊಂಡು ತಿನ್ನುತ್ತೇವೆ.
‘ಇನ್ನು ಸೀಸನ್ನಿಗೆ ತಕ್ಕಂತೆ ಸೀತಾಫಲ, ಯಲಚಿಹಣ್ಣುಗಳನ್ನು ಕಾಡುಗಳಿಂದ ತಂದು ದೊಡ್ಡಬಳ್ಳಾಪುರ, ಬೆಂಗಳೂರು ಕಡೆ ತಂದು ಮಾರುತ್ತೇವೆ. ಅದು ಮುಗಿದ ಬಳಿಕ ಹೊಲಗಳಲ್ಲಿ ಸಿಗುವ ಅಣ್ಣೆಸೊಪ್ಪು, ಕಾಶಿಸೊಪ್ಪನ್ನು ಮಾರುತ್ತೇವೆ. ಹೊಲಗಳೆಲ್ಲ ಒಣಗಿದ ನಂತರ ಮದುವೆ ಛತ್ರಗಳಲ್ಲಿ ಹೆಲ್ಪರ್, ಕ್ಲೀನರ್, ಟಾಯ್ಲೆಟ್ ತೊಳೆಯುವುದು ಸೇರಿದಂತೆ ಯಾವುದೇ ಕೆಲಸವಿದ್ದರೂ ಮಾಡುತ್ತೇವೆ. ನಮ್ಮೂರಿಗೆ ಇರುವುದು ಸಂಜೆ ಒಂದೇ ಬಸ್ಸು. ಕೆಲಸಕ್ಕೆ ಹೋದಾಗ ಮತ್ತು ವ್ಯಾಪಾರವಾಗದೆ ತಡವಾದಾಗ ಆ ಬಸ್ಸು ತಪ್ಪಿದರೆ ಊರಿಗೆ ಹೋಗಲು ಬೇರೆ ಬಸ್ಸುಗಳಿಲ್ಲ. ಹಾಗೇನಾದರೂ ಬಸ್ಸು ತಪ್ಪಿಹೋದರೆ ಯಾವುದಾದರೂ ಬಸ್ಟ್ಯಾಂಡಲ್ಲೋ ಬ್ರಿಡ್ಜಿನ ಕೆಳಗೋ ವಾಸ ಮಾಡಬೇಕಾದ ಪರಿಸ್ಥಿತಿ ಇರುತ್ತದೆ. ನಾವು ನಿಯತ್ತಾಗಿದ್ದರೂ ಕೆಲವರು ಇಂತಹ ಸಂದರ್ಭದಲ್ಲಿ ನಮ್ಮನ್ನು ನೋಡಿ ಅಸಹ್ಯವಾಗಿ ಮಾತನಾಡುತ್ತಾರೆ. ತಪ್ಪು ಅವರದಲ್ಲ ನಾವು ಸೃಷ್ಟಿಸಿಕೊಂಡಿರುವ ಪೂರ್ವಗ್ರಹಪೀಡಿತ ಸಮಾಜದ್ದು. ಹೀಗೆ ಕೆಟ್ಟದಾಗಿ ನೋಡುವವರಿಗೆ ಮಾತನಾಡುವವರಿಗೆ ನಮ್ಮ ಹಸಿವು, ಅಸಹಾಯಕತೆ, ಬಡತನ, ನಾವು ಪಡುವ ಪಾಡು ಗೊತ್ತಿರುವುದಿಲ್ಲ. ಇನ್ನು ಶಾಲೆ-ಕಾಲೇಜು, ವ್ಯಾಪಾರ, ಕೆಲಸಕ್ಕೆ ಹೋಗುವವರಿಗೆ ಬಸ್ಸಿನದ್ದು ಬಹಳ ಸಮಸ್ಯೆ. ಹುಟ್ಟಿದಾಗಿನಿಂದ ಇದೇ ಊರಿನಲ್ಲಿದ್ದು ಇದನ್ನೆಲ್ಲ ಅನುಭವಿಸಿದ್ದೇವೆ. ನಮ್ಮೂರಿನಲ್ಲಿ ಒಂದು ಹಾಸ್ಪಿಟಲ್ ಇಲ್ಲ, ಬಸ್ಸ್ಟ್ಯಾಂಡ್ ಇಲ್ಲ, ಅಷ್ಟೇ ಯಾಕೆ ಒಂದು ದೇವಸ್ಥಾನವೂ ಇಲ್ಲ.
ನಾವು ಆದಿ ಕರ್ನಾಟಕ (SC) ಕೊನೆ ಪಕ್ಷ ಒಂದು ಚಪ್ಪಲಿ ಹೊಲೆಯೋಣ ಅಂದುಕೊಂಡರು ಬಂಡವಾಳವಿಲ್ಲ. ಎಷ್ಟು ಸಲ ಗ್ರಾಮ ಪಂಚಾಯತ್, DC ಆಫೀಸ್, ಅಲ್ಲಿ ಇಲ್ಲಿ ಅಂತ ಸುಮಾರು 10 ವರ್ಷದಿಂದ ಅರ್ಜಿ ಹಾಕಿದರೂ ಏನೂ ಪ್ರಯೋಜನವಾಗಿಲ್ಲ. ಬಂಡಿಮೇಲೆ ಹಣ್ಣು, ಸೊಪ್ಪು, ತರಕಾರಿ ವ್ಯಾಪಾರ ಮಾಡೋಣ ಅಂದುಕೊಂಡರೆ ಲೈಸನ್ಸ್ ಕೊಡಲ್ಲ. ನಾವೇ ಸ್ವಂತಕ್ಕೆ ಒಂದು ಸಣ್ಣ ಕೆಲಸವನ್ನೋ ಅಂಗಡಿಯನ್ನೋ ಮಾಡೋಣವೆಂದರೂ ಬಂಡವಾಳದ ಸಮಸ್ಯೆ. ಇನ್ನು ಸಾಲ ಹೇಗೆ ಸಿಗುತ್ತದೆ? ಮಕ್ಕಳಿಗೊಂದು ಮನೆ ಇರಲಿ ಎಂದು ಸಾಕಷ್ಟು ಸಲ ಅರ್ಜಿ ಹಾಕಿದೆವು. ಇಲ್ಲಿ ಎಲ್ಲ ಕೆಲಸಕ್ಕೂ ಲಂಚ ಕೊಡಬೇಕು. ನಾವು ಊಟಕ್ಕೂ ಪರದಾಡುವಾಗ ಲಂಚ ಕೊಡಲು ಹೇಗೆ ಸಾಧ್ಯ?
ಇದನ್ನೂ ಓದಿ : Citizen Journalism : ಹಾದಿಯೇ ತೋರಿದ ಹಾದಿ : ‘ಇಲ್ಲೊಂದು ಶವ ಸಿಕ್ಕಿದೆ ಬನ್ನಿ’ ಯಾವ ಹೊತ್ತಿನಲ್ಲಿಯೂ ಸಿದ್ಧ ಈ ಆಶಾ ವಿ. ಸ್ವಾಮಿ
ನಾನಂತೂ ಹುಟ್ಟು ಅಂಗವಿಕಲೆ. ಒಂದು ಕಾಲು ಚಿಕ್ಕದಿದೆ ಸರಿಯಾಗಿ ನಡೆದಾಡಲು ಆಗಲ್ಲ. ನನಗಂತೂ ಕೂಲಿ ಕೆಲಸ ಸಿಗುವುದೂ ಕಷ್ಟ. ತಳ್ಳುಗಾಡಿಯಲ್ಲಿ ಸೊಪ್ಪು ತರಕಾರಿ ಮಾರುವುದಕ್ಕೂ ಲೈಸನ್ಸ್ ಕೊಡ್ತಿಲ್ಲ. ನಮ್ಮಂಥ ಕಷ್ಟ ಬೇರೆ ಯಾವ ಹೆಣ್ಮಕ್ಳಿಗೂ ಬರಬಾರದು ಎಂದು ಕಣ್ಣೀರಾಗುತ್ತಾರೆ.
ನರಸಮ್ಮನವರಿಗೆ ಈಗಲೋ ಆಗಲೋ ಬೀಳುವ ಗುಡಿಸಲಾದರೂ ಆಸರೆಯಿದೆ. ನಾರಾಯಣಮ್ಮನಿಗೆ ಅದೂ ಇಲ್ಲ. ಯಾರದೋ ಮನೆಯಲ್ಲಿ ತನ್ನೆರಡೂ ಮಕ್ಕಳನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಯಾವಾಗ ಜಾಗ ಖಾಲಿ ಮಾಡು ಎನ್ನುತ್ತಾರೋ ಆಗ ಗಂಟುಮೂಟೆ ಕಟ್ಟಲು ಸಿದ್ಧವಿರಬೇಕು.
(ಮುಂದಿನ ಹಾದಿ : 3.3.2022)
ಪ್ರತಿಕ್ರಿಯೆಗಾಗಿ : tv9kannadadigital@gmail.com
*
ಹಿಂದಿನ ಹಾದಿ : ಹಾದಿಯೇ ತೋರಿದ ಹಾದಿ; ‘ರೌಡಿ ಥರಾ ಕೈಗೊಂದು ಕಡಗ ಹಾಕಿಕೊ, ಬೆಂಗಳೂರಲ್ಲಿ ಯಾರೂ ನಿನ್ನ ತಂಟೆಗೆ ಬರಲ್ಲ!’
Published On - 11:45 am, Thu, 24 February 22