ಹಾದಿಯೇ ತೋರಿದ ಹಾದಿ; ‘ರೌಡಿ ಥರಾ ಕೈಗೊಂದು ಕಡಗ ಹಾಕಿಕೊ, ಬೆಂಗಳೂರಲ್ಲಿ ಯಾರೂ ನಿನ್ನ ತಂಟೆಗೆ ಬರಲ್ಲ!’

Junior Vishnuvardhan : ‘ಬೆಂಗಳೂರಿನ ಮೆಜೆಸ್ಟಿಕ್​ಗೆ ಬಂದಿಳಿದಾಗ ಜೇಬಲ್ಲಿ ಇದ್ದದ್ದು ಕೇವಲ ಎರಡು ರೂಪಾಯಿ. ಇಡೀ ದಿನ ಅಲ್ಲೇ ಕುಳಿತುಕೊಂಡೆ. ಕಾಲಿಗೆ ಚಪ್ಪಲಿ ಇರಲಿಲ್ಲ, ತಲೆತುಂಬ ಬೆಳೆದ ಕೂದಲು ಸಲೂನ್ ನೋಡಿರಲಿಲ್ಲ. ಹಸಿವಾದಾಗೆಲ್ಲ ಮೂರು ದಿನ ನೀರೇ ಕುಡಿದೆ.’ ನಾಗಬಸಯ್ಯ ಮಳಲೀಮಠ (ಜ್ಯೂನಿಯರ್ ವಿಷ್ಣುವರ್ಧನ್)

ಹಾದಿಯೇ ತೋರಿದ ಹಾದಿ; ‘ರೌಡಿ ಥರಾ ಕೈಗೊಂದು ಕಡಗ ಹಾಕಿಕೊ, ಬೆಂಗಳೂರಲ್ಲಿ ಯಾರೂ ನಿನ್ನ ತಂಟೆಗೆ ಬರಲ್ಲ!’
ಜ್ಯೂನಿಯರ್ ವಿಷ್ಣುವರ್ಧನ್ - ನಾಗಬಸಯ್ಯ ಮಳಲೀಮಠ
Follow us
ಶ್ರೀದೇವಿ ಕಳಸದ
|

Updated on:Feb 17, 2022 | 1:15 PM

ಹಾದಿಯೇ ತೋರಿದ ಹಾದಿ | Haadiye Torida Haadi : ‘ಜ್ಯೂನಿಯರ್ ವಿಷ್ಣುವರ್ಧನ್’ ಎಂದೇ ಹೆಸರಾದ ನಾಗಬಸಯ್ಯ ಮಳಲೀಮಠ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದವರು. ಎಂದೂ ವಿಷ್ಣುವರ್ಧನರಂತೆ ಆಗಬೇಕೆಂದುಕೊಂಡವರಲ್ಲ. ಹೆಲ್ಮೆಟ್ ಹಾಕಿದಾಗ ಕೂದಲು ಉದುರುತ್ತದೆ ಎಂದು ಬಿಳಿಬಟ್ಟೆ, ಹೆಲ್ಮೆಟ್ ಗ್ಲಾಸ್ ಒಡೆದಿದ್ದರಿಂದ ಕಣ್ಣಿಗೆ ಧೂಳು ಬೀಳಬಾರದೆಂದು ಕನ್ನಡಕ ಹಾಕಲು ಅಭ್ಯಾಸ ಮಾಡಿದರು. ನಂತರ ಅವರ ಸ್ನೇಹಿತರೊಬ್ಬರು, ‘ಬೆಂಗಳೂರಲ್ಲಿ ಜೀವನ ನಡೆಸ್ಬೇಕಂದ್ರೆ ಕೈಗೊಂದು ಕಡಗ ಹಾಕಿಕೋ ರೌಡಿ ಥರ ಕಾಣ್ತೀಯ, ಆಗ ನಿನ್ನ ತಂಟೆಗೆ ಯಾರೂ ಬರಲ್ಲ’ ಎಂದಿದ್ದಕ್ಕೆ ಕೈಗಡಗ ಹಾಕಿಕೊಂಡರು. ಆಮೇಲೆ ಹೆಲ್ಮೆಟ್​ ತೆಗೆದು ಓಡಾಡುವಾಗ ಜನ, ‘ಏನ್ರೀ ವಿಷ್ಣುವರ್ಧನ್ ಥರ ಕಾಣ್ತೀರ’ ಎಂದರು. ಸ್ನೇಹಿತ ಹೊಲೆಸಿಕೊಟ್ಟ ಹೊಸ ಬಟ್ಟೆ ಹಾಕಿಕೊಂಡು ವಿಷ್ಣುವರ್ಧನರಂತೆ ಡ್ರೆಸ್ ಮಾಡಿಕೊಂಡು ಫೋಟೋ ತೆಗೆಸಿ ನೋಡಿದರೆ ಥೇಟ್ ವಿಷ್ಣುದಾದಾ! ಸ್ವತಃ ತಾವೇ ಆಶ್ಚರ್ಯಪಟ್ಟು ಅಂದಿನಿಂದ ಅದೇ ವೇಷ ವ್ಯಕ್ತಿತ್ವ ಅನುಸರಿಸಲು ಪ್ರಾರಂಭಿಸಿದರು ನಾಗಬಸಯ್ಯ.

ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್​

*

(ಹಾದಿ : 6)

*

ಮಲ್ಲಯ್ಯ-ಸುಶೀಲಮ್ಮ ದಂಪತಿಯ 7 ಗಂಡುಮಕ್ಕಳಲ್ಲಿ ಕೊನೆಯ ಮಗನಾಗಿ 1.6.1977 ರಂದು ಹುಟ್ಟಿದ ನಾಗಬಸಯ್ಯ, ಜೂನಿಯರ್ ವಿಷ್ಣುವರ್ಧನ್ ಎಂದು ಗುರುತಿಸಿಕೊಳ್ಳುವ ತನಕ ಹಾದಿ ಕತ್ತಲಿನಿಂದಲೇ ಕೂಡಿತ್ತು. ಮುಂದಿನದು ಅವರ ಮಾತಿನಲ್ಲೇ…

ಪೋಸ್ಟ್ ಮಾಸ್ಟರ್ ಆಗಿದ್ದ ಅಪ್ಪನೇ ನಮ್ಮ ಕುಟುಂಬದ ಆಧಾರ ಸ್ತಂಭ. ನಾನು ಐದು ವರ್ಷದ ಮಗುವಿದ್ದಾಗ ಅವರು ಅನಾರೋಗ್ಯದಿಂದ ತೀರಿಕೊಂಡರು. ನಂತರದ ನಮ್ಮ ಬದುಕು ಅಕ್ಷರಶಃ ದುರ್ಗಮವಾಯ್ತು. ಹೊತ್ತು ಊಟಕ್ಕೂ ಪರದಾಟ. ನಾವು ಜಂಗಮರಾದ್ದರಿಂದ ಇಂತಹ ಸಮಯದಲ್ಲಿ ಜೋಳಿಗೆ ಹಾಕಿಕೊಂಡು ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದೆವು. ಅಮ್ಮನೂ ಒಂದಿನ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ತೀರಿಕೊಂಡರು. ಮದುವೆಯಾದ ನನ್ನ ಅಣ್ಣಂದಿರೆಲ್ಲ ಬೇರೆಯಾದರು. ಆಟೋದವರು, ಅವರಿವರು ನನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದರಿಂದ, 1 ರಿಂದ 7ನೇ ತರಗತಿಯವರೆಗೆ ಐರಣಿ ಗ್ರಾಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ, ಅಲ್ಲಿಂದ 3 ಕಿ. ಮೀ. ದೂರದಲ್ಲಿರುವ ಹಿರೇಬಿದರಿ ಶ್ರೀ ಬೀರಲಿಂಗೇಶ್ವರ ಪ್ರೌಢಶಾಲೆಯಲ್ಲಿ 8ರಿಂದ 10ನೇ ಹತ್ತನೇ ತರಗತಿವರೆಗೆ ಓದಿದೆ. ಬಡತನದಿಂದಾಗಿ ಓದನ್ನು ಮುಂದುವರಿಸಲಾಗಲಿಲ್ಲ.

ಜೀವನಕ್ಕಾಗಿ ಇಟ್ಟಿಗೆ, ಮರಳು ತುಂಬುವುದು ಇಳಿಸುವುದನ್ನು ಹಗಲು ರಾತ್ರಿಯೆನ್ನದೇ ನಾಲ್ಕು ವರ್ಷಮಾಡಿದೆ. ನಂತರ ಸಾರಾಯಿ ಅಂಗಡಿಯಲ್ಲಿ ಆರು ವರ್ಷ, ಬೇಕರಿಯಲ್ಲಿ ಐದು ವರ್ಷ ಕೆಲಸ ಮಾಡಿದೆ. ಬೇಕರಿಯವರು ನನ್ನ ಗುಣ, ಕೆಲಸದಲ್ಲಿ ನನಗಿದ್ದ ಶ್ರದ್ಧೆ ನೋಡಿ ಅವರೇ ನನಗೆ ಮದುವೆ ಮಾಡಿದರು. ಆದರೆ ಮನೆ ನಡೆಸುವುದು ಕಷ್ಟವಾಗಿತ್ತು. ಮುಂದೇನು ಮಾಡುವುದು ತಿಳಿಯದಾಗಿತ್ತು. ನಾನು ಚಿಕ್ಕವನಿದ್ದಾಗ ಹಾಸ್ಯ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದೆ ಎಲ್ಲರನ್ನೂ ನಗಿಸುತ್ತಿದ್ದೆ. ‘ಸಾಕ್ಷರತಾ ಆಂದೋಲನ’ ದಲ್ಲಿ ಸುಮಾರು 300ರಿಂದ 400 ಬೀದಿ ನಾಟಕಗಳಲ್ಲಿ ಅಭಿನಯಿಸಿದ್ದೆ. ಆಗೆಲ್ಲ ನಾಟಕ ನೋಡಿದ ಜನ ಚಪ್ಪಾಳೆ ಹೊಡೆದು ಹುರಿದುಂಬಿಸುತ್ತಿದ್ದರು. ಒಮ್ಮೆ ನನಗೆ ನನಗೆ ಟಿವಿಯಲ್ಲಿ ಬರುವ ಕುರಿಬಾಂಡ್ ಶೋದಲ್ಲಿ ಕಾಣಿಸಿಕೊಳ್ಳಬೇಕೆನಿಸಿತು.

ಇದನ್ನೂ ಓದಿ : Citizen Journalism : ಹಾದಿಯೇ ತೋರಿದ ಹಾದಿ : ‘ಇಲ್ಲೊಂದು ಶವ ಸಿಕ್ಕಿದೆ ಬನ್ನಿ’ ಯಾವ ಹೊತ್ತಿನಲ್ಲಿಯೂ ಸಿದ್ಧ ಈ ಆಶಾ ವಿ. ಸ್ವಾಮಿ

2007 ನೇ ಇಸವಿ. ಬೆಂಗಳೂರಿನ ಮೆಜೆಸ್ಟಿಕ್​ಗೆ ಬಂದಿಳಿದಾಗ ನನ್ನ ಜೇಬಲ್ಲಿ ಇದ್ದದ್ದು ಕೇವಲ ಎರಡು ರೂಪಾಯಿ.  ಇಡೀ ದಿನ ಅಲ್ಲೇ ಕುಳಿತುಕೊಂಡೆ. ಕಾಲಿಗೆ ಚಪ್ಪಲಿ ಇರಲಿಲ್ಲ, ತಲೆತುಂಬ ಬೆಳೆದ ಕೂದಲು ಸಲೂನ್ ನೋಡಿರಲಿಲ್ಲ, ಊಟಕ್ಕೂ ಹಣವಿರಲಿಲ್ಲ. ಹಸಿವಾದಾಗ ನೀರು ಕುಡಿಯುತ್ತಿದ್ದೆ. ಹಸಿವಾದಾಗಲೆಲ್ಲ ನೀರು ಕುಡಿದೇ ಎರಡುಮೂರು ದಿನ ದೂಡಿದೆ. ಹೀಗೆ ದಿಕ್ಕುಗಾಣದೆ ಕುಳಿತಾಗ ಯಾರೋ ಒಬ್ಬರು ಬಂದು ಕೆಲಸ ಬೇಕಾಗಿದೆಯಾ ಎಂದು ಕೇಳಿದರು. ನಾನು ಹೂಂ ಎನ್ನಲು ಶಕ್ತಿ ಇಲ್ಲದೆ ಗೋಣು ಅಲ್ಲಾಡಿಸಿದೆ. ಆಗ ನನ್ನನ್ನು ಅವರ ಜೊತೆ ಕರೆದೊಯ್ದರು. ನನಗೆ ತುಂಬಾ ಹಸಿವಿದ್ದಿದ್ದರಿಂದ ಏನಾದರೂ ಊಟ ಕೊಡಿಸುತ್ತಾರೇನೋ ಎಂದುಕೊಂಡಿದ್ದೆ. ಆದರವರು ನನಗೆ ನೀಟಾಗಿ ಕಟಿಂಗ್ ಶೇವಿಂಗ್ ಮಾಡಿಸಿ ಆರ್.ಪಿ.ಸಿ. ಲೇಔಟಿನ ಗಾರ್ಮೆಂಟ್ಸ್ ಒಂದರಲ್ಲಿ ಸೆಕ್ಯುರಿಟಿ ಕೆಲಸಕ್ಕೆ ಸೇರಿಸಿದರು. ಹತ್ತಿರದ ಹೋಟೆಲ್​ನಲ್ಲಿ ಊಟ ಕೊಡಲು ಹೇಳಿ, ಸಂಬಳವಾದ ನಂತರ ಹಣ ಇಸಿದುಕೊಳ್ಳಿ ಎಂದು ಹೇಳಿದರು.

ಆದರೆ ಮಲಗೋಕೆ ಜಾಗವಿರಲಿಲ್ಲ ಎರಡು ಕಟ್ಟಡಗಳ ಮಧ್ಯೆ ಮಲಗುತ್ತಿದ್ದೆ. ತಿಂಗಳಿಗೆ 1,600 ರೂಪಾಯಿ ಸಂಬಳ ಕೊಡುತ್ತಿದ್ದರು. ಮಧ್ಯಾಹ್ನ ಐದು ರೂಪಾಯಿ ಕೊಟ್ಟು ಅನ್ನ ಸಾಂಬಾರ್ ಊಟ ಮಾಡುತ್ತಿದ್ದೆ. ಆದರೆ ಬೆಳಿಗ್ಗೆ ರಾತ್ರಿಗೆ ಹೊಟ್ಟೆ ತುಂಬ ನೀರು. ನಾನು ಇಲ್ಲಿಗೆ ಕಲಾವಿದನಾಗಬೇಕೆಂದು ಬಂದವನು. ಈ ಸೆಕ್ಯುರಿಟಿ ಕೆಲಸಕ್ಕಾಗಿ  ಗೋಡೆ ಕಾಂಪೌಂಡ್ ಮಧ್ಯೆ ಗೋಣು ತಿರುಗಿಸುತ್ತ ಕುಳಿತರೆ ಕನಸು ನನಸಾಗುವುದಿಲ್ಲವೆಂದು ಅನ್ನಿಸಿತು. ಆರು ತಿಂಗಳಲ್ಲಿ ಅಷ್ಟೋ ಇಷ್ಟೋ ಹಣ ಉಳಿಸಿ ಬಾಡಿಗೆ ಮನೆ ಮಾಡಿ ಹೆಂಡತಿಯನ್ನು ಕರೆಸಿಕೊಂಡೆ. ಸೆಕ್ಯೂರಿಟಿ ಕೆಲಸ ಬಿಟ್ಟು ನಾಗಸಂದ್ರದಲ್ಲಿ ಪ್ರಿಂಟಿಂಗ್ ಕೆಲಸಕ್ಕೆ ಸೇರಿದೆ. ಈ ದಿನಗಳಲ್ಲೇ ನನ್ನ ನೋಡಿದ ಜನ ವಿಷ್ಣುವರ್ಧನರಂತೆ ಕಾಣ್ತೀರಾ ಎಂದದ್ದು. ಮೊಬೈಲ್​ನಲ್ಲಿ ವಿಷ್ಣುವರ್ಧನರ ಸಿನಿಮಾಗಳನ್ನು ನೋಡಿ ಅವರ ನಟನೆಯನ್ನು ಅನುಕರಿಸಲು ಶುರುಮಾಡಿದೆ. ನಂತರ ಅವರೇ ನನ್ನ ಆರಾಧ್ಯ ದೈವವಾದರು. ಬರುಬರುತ್ತಾ ಕಾರ್ಯಕ್ರಮಗಳಿಗೆ ಜನ ಆಹ್ವಾನಿಸಿದರು. ಕೆಲ ಪುರಸ್ಕಾರ, ಸನ್ಮಾನ, ಕಾಣಿಕೆಗಳು ಬಂದವು.

ಹಾದಿ 3 : ಹಾದಿಯೇ ತೋರಿದ ಹಾದಿ ; ಬೀದಿಯನ್ನೇ ನೋಡದ ಮಂಡ್ಯದ 105ರ ನಿಂಗಮ್ಮ ಬೀದಿಯಲ್ಲಿಯೇ ಬದುಕುವಂತಾಯಿತು

Haadiye Torida Haadi Citizen Journalist Jyothi S interviewed Junior Vishnuvardhan Nagabasaiah Malalimat

ನಾಗಬಸಯ್ಯ ತನ್ನ ಆಸ್ತಿಗಳೊಂದಿಗೆ

ಜನರ ಮೆಚ್ಚುಗೆ ನನ್ನನ್ನು ಈ ನಾಡಿಗೆ, ಮಣ್ಣಿಗೆ ಏನಾದರೂ ಒಳಿತನ್ನು ಮಾಡಬೇಕೆಂದು ಪ್ರೇರೇಪಿಸಿತು. ಆದ್ದರಿಂದ ನನ್ನ ಸ್ಕೂಟರ್​ನ ತುಂಬಾ ವಿಷ್ಣು ಸರ್ ಫೋಟೋ ಹಾಕಿ ನಮ್ಮ ನಾಡಿನ ಬಾವುಟ ಕಟ್ಟಿಕೊಂಡು ಕರ್ನಾಟಕದಾದ್ಯಂತ ಕನ್ನಡದ ಬಗ್ಗೆ ನಾಡುನುಡಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡತೊಡಗಿದೆ.  ಅಕ್ಟೋಬರ್ ತಿಂಗಳಲ್ಲಿ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಕೇರಳಗಳಲ್ಲಿ ಕನ್ನಡದ ಕುರಿತು ಕಾರ್ಯಕ್ರಮಗಳನ್ನು ಮಾಡುತ್ತೇನೆ. ಈ ಸೇವೆಗೆ ಕನ್ನಡಿಗರು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಸಹಕಾರವಿದೆ. ನನ್ನ ಬೈಕೆಂಬ ರಥದಲ್ಲಿ ನಮ್ಮ ನಾಡಬಾವುಟ ವರ್ಷಪೂರ್ತಿ ಹಾರಾಡುತ್ತದೆ. ನನ್ನ ಹೆಗಲಮೇಲೆ 365 ದಿನವೂ ಕನ್ನಡದ ಶಾಲು ಹಾಕಿಕೊಂಡೇ ಇರುತ್ತೇನೆ. ನಾನಿರುವ ಮನೆಗೆ ‘ವಿಷ್ಣು ಅರಮನೆ’ ಎಂದು ಹೆಸರಿಟ್ಟಿದ್ದೇನೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಾಕಷ್ಟು ಅವಮಾನವನ್ನೂ ಅನುಭವಿಸಿದ್ದೇನೆ. ನನ್ನ ಕನ್ನಡ ರಥವನ್ನು ತೆಗೆದುಕೊಂಡು ಹೋಗುವಾಗ ಬಸ್​ಸ್ಟಾಪ್​ಗಳಲ್ಲಿ ಕೆಲ ಜನ ವ್ಯಂಗ್ಯವಾಗಿ ನಗುತ್ತಾರೆ. ನಾನು ಸ್ವಲ್ಪ ಮುಂದೆ ಹೋದಮೇಲೆ ಕೇಕೆ ಹಾಕಿ ಹಂಗಿಸುತ್ತಾರೆ. ನಾನಿದನ್ನೆಲ್ಲ ಕನ್ನಡಿಯಲ್ಲಿ ನೋಡುತ್ತಿರುತ್ತೇನೆ. ಜನ ಎಂದರೆ ಹೀಗೇ ಅಲ್ಲವೆ? ಮೊದಲು ಅವಮಾನ ಮಾಡುತ್ತಾರೆ, ನಂತರ ಅನುಮಾನ ಪಡುತ್ತಾರೆ, ಕೊನೆಗೆ ಸನ್ಮಾನ ಮಾಡುತ್ತಾರೆ.  ಆದರೆ ಇದೆಲ್ಲ ವಿಷ್ಣು ಸರ್ ಮೇಲಿನ ಅಭಿಮಾನದ ಮುಂದೆ ಇದೆಲ್ಲ ನಗಣ್ಯ.

ಮೊದಮೊದಲು ನಮಗೆಲ್ಲಾ ಇದ್ಯಾಕೆ ಬೇಕು ನಮ್ಮ ಕೆಲಸ ನೋಡಿಕೊಂಡಿದ್ದರೆ ಸಾಕು ಎನ್ನುತ್ತಿದ್ದರು ನನ್ನ ಶ್ರೀಮತಿ ವಿದ್ಯಾ. ಇಬ್ಬರೂ ಒಮ್ಮೆ ಶಿವಮೊಗ್ಗಕ್ಕೆ ಹೋದಾಗ ಜನ ಓಡೋಡಿ ಬಂದು ನನಗೆ ಹಾರ ಹಾಕಿ ಫೋಟೋ ತೆಗೆಸಿಕೊಂಡು ಪ್ರೀತಿ ತುಂಬಿ ಕಳಿಸಿದರು. ಇದು ಪತ್ರಿಕೆಗಳಲ್ಲೂ ಬಂತು. ಜನರ ಈ ಪ್ರೀತಿ ಗೌರವ ಕಂಡು ನನ್ನ ಹೆಂಡತಿಯೂ ನನ್ನ ಖುಷಿಯಲ್ಲಿ ಪಾಲುದಾರರಾಗಿದ್ದಾರೆ. ನಾನು ಕಾರ್ಯಕ್ರಮಗಳಿಗೆ ಹೋಗುವಾಗ ಯಾವ ಹಾಡಿಗೆ ಯಾವ ಕಾಸ್ಟ್ಯೂಮ್​ ಅಂತೆಲ್ಲ ಪ್ಯಾಕ್​ ಮಾಡುವುದು, ಮನೆಗೆ ಬಂದ ವಿಷ್ಣು ಸರ್ ಅಭಿಮಾನಿಗಳಿಗೆ ಸತ್ಕಾರ ಮಾಡುವುದೆಲ್ಲ ನನ್ನ ಶ್ರೀಮತಿಯೇ. ಅವರು ಗಾರ್ಮೆಂಟ್​ ಕೆಲಸಕ್ಕೆ ಹೋಗುತ್ತಾರೆ.

ಇನ್ನೂ ನಾಡುನುಡಿಯ ಬಗ್ಗೆ ಅರಿವು ಮೂಡಿಸಬೇಕು. ಕಲಾವಿದನೊಬ್ಬನಿಗೆ ತನ್ನ ಕಲಾ ಪ್ರದರ್ಶನಕ್ಕೆ ವೇದಿಕೆ, ಜನರ ಪ್ರೋತ್ಸಾಹ ಸಿಕ್ಕಾಗ ತನ್ನ ನೋವನ್ನೆಲ್ಲ ಮರೆಯುತ್ತಾನೆ. ಅದು ಈತನಕವೂ ಸಿಕ್ಕಿದೆ. ಅಷ್ಟೇ. ಇನ್ನೇನಿದೆ?

ಪ್ರತಿಕ್ರಿಯೆಗಾಗಿ : tv9kannadadigita@gmail.com

*

ಹಿಂದಿನ ಹಾದಿ : ಹಾದಿಯೇ ತೋರಿದ ಹಾದಿ; ‘ನನ್ನ ಕೈಗಳಿಲ್ಲದ್ದನ್ನು ಅಮ್ಮನಿಗೆ ಹೇಳಬೇಡಿ’ ಹನ್ನೆರಡರ ಶುಭಜಿತ್ ವೈದ್ಯರಿಗೇ ಸಲಹೆ ನೀಡಿದ್ದ!

Published On - 1:01 pm, Thu, 17 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ