Awards : ‘ಈ ಹೊತ್ತಿಗೆ’ಯಿಂದ ಕೆ ಶರೀಫಾಗೆ ಕಥಾ ಪ್ರಶಸ್ತಿ, ಮಧುರಾಣಿಗೆ ಕಾವ್ಯ ಪ್ರಶಸ್ತಿ
ಮಾರ್ಚ್ 27ರಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ನಡೆಯಲಿರುವ, ‘ಈ ಹೊತ್ತಿಗೆ’ಯ ಹೊನಲು ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ಹೊತ್ತಿಗೆ ಪ್ರಶಸ್ತಿ : 2022ನೇ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ ಮತ್ತು ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಯ ಅಂತಿಮ ಪಟ್ಟಿ ಪ್ರಕಟವಾಗಿದೆ. ಕಲಬುರಗಿ ಮೂಲದ ಕವಿ, ಲೇಖಕಿ ಡಾ. ಕೆ. ಶರೀಫಾ ಅವರ ಅಪ್ರಕಟಿತ ಕಥಾಸಂಕಲನ ‘ನೀರೊಳಣ ಕಿಚ್ಚು’, ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಭಾಜನವಾಗಿದೆ. ದಾವಣಗೆರೆ ಮೂಲದ ಮಧುರಾಣಿ ಹೆಚ್. ಎಸ್. ಅವರ ‘ನೀಲಿ ಚುಕ್ಕಿಯ ನೆರಳು’ ಅಪ್ರಕಟಿತ ಕವನ ಸಂಕಲನ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ. ಎರಡೂ ಪ್ರಶಸ್ತಿಗಳು ತಲಾ ರೂ. 10,000 ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತವೆ. ಕಥಾಸ್ಪರ್ಧೆಗೆ ಕನ್ನಡದ ಖ್ಯಾತ ಲೇಖಕಿ ಡಾ. ವೀಣಾ ಶಾಂತೇಶ್ವರ ಮತ್ತು ಕಾವ್ಯಸ್ಪರ್ಧೆಗೆ ಖ್ಯಾತ ಕವಿ ಡಾ. ಎಚ್. ಎಸ್. ಶಿವಪ್ರಕಾಶ್ ತೀರ್ಪುಗಾರರಾಗಿದ್ದರು. 160 ಕವನ ಸಂಕಲನಗಳು ಮತ್ತು 56 ಕಥೆಗಳ ಪೈಕಿ ಈ ಇಬ್ಬರನ್ನು ವಿಜೇರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಸಲದ ಸ್ಪರ್ಧೆಯಲ್ಲಿ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಗೆ ಕನ್ನಡದ ಹಿರಿಯ ಕವಿ ಮತ್ತು ಹೋರಾಟಗಾರರಾಗಿರುವ ಡಾ. ಕೆ. ಶರೀಫಾ ಅವರು ಆಯ್ಕೆಯಾಗಿದ್ದಾರೆ. ಇವರು ಕೃಷಿ ಮಾರುಕಟ್ಟೆ ಇಲಾಖೆಯಲ್ಲಿ ಮಾರುಕಟ್ಟೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ನಾಡಿನ ಖ್ಯಾತ ಕತೆಗಾರ್ತಿ ವೀಣಾ ಶಾಂತೇಶ್ವರ ಅವರು ಈ ಬಾರಿಯ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಭಾಗದ ತೀರ್ಪುಗಾರರಾಗಿದ್ದರು.
ಇದನ್ನೂ ಓದಿ : Literary Magazine : ‘ಅಕ್ಷರ ಸಂಗಾತ’ಕ್ಕೆ ನಾಲ್ಕು ತುಂಬಿದ ಹೊತ್ತಿನಲ್ಲಿ ಸುವರ್ಣಾ ಚೆಳ್ಳೂರರ ‘ಕಂಬದ ಹಕ್ಕಿ’ ನಿಮ್ಮ ಓದಿಗೆ
‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗೆ ಭಾಜನರಾಗಿರುವ ಶ್ರೀಮತಿ. ಮಧುರಾಣಿ ಹೆಚ್.ಎಸ್ ಮೂಲತಃ ದಾವಣಗೆರೆ ಸೀಮೆಯವರಾಗಿದ್ದು, ಮೈಸೂರಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಹಿರಿಯ ಕವಿ ಡಾ. ಎಚ್. ಎಸ್. ಶಿವಪ್ರಕಾಶ್ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು. ಇದು ಈ ಹೊತ್ತಿಗೆಯ ಮೊದಲ ಕಾವ್ಯ ಪ್ರಶಸ್ತಿಯಾಗಿರುವುದು ವಿಶೇಷ.
ಮಾರ್ಚ್ 27ರಂದು ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ ನಡೆಯಲಿರುವ, ‘ಈ ಹೊತ್ತಿಗೆ’ಯ ಹೊನಲು ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆ ದಿನ ಸಾಹಿತ್ಯಕ್ಕೆ ಸಂಬಂಧಿಸಿದ ವಿವಿಧ ಗೋಷ್ಠಿಗಳು ನೆರವೇರುತ್ತಿದ್ದು ವಿವಿಧ ಲೇಖಕರು, ಕವಿಗಳು ಭಾಗವಹಿಸಲಿದ್ದಾರೆ ಎಂದು ಆಯೋಜಕಿ ಜಯಲಕ್ಷ್ಮೀ ಪಾಟೀಲ ತಿಳಿಸಿದ್ದಾರೆ.
ಸುಮಾರು ಎಂಟು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ರಂಗಭೂಮಿ, ಸಿನೆಮಾ ಕಲಾವಿದೆ, ಲೇಖಕಿ ಜಯಲಕ್ಷ್ಮೀ ಪಾಟೀಲ ಕೆಲ ಸಾಹಿತ್ಯಾಸಕ್ತರನ್ನು ಸೇರಿಸಿಕೊಂಡು ‘ಈ ಹೊತ್ತಿಗೆ’ಯನ್ನು ಹುಟ್ಟುಹಾಕಿದರು. ಪ್ರತೀ ಭಾನುವಾರ ಆಹ್ವಾನಿತ ಸಾಹಿತಿಗಳ ಸೃಜನಶೀಲ ಕೃತಿಗಳ ಓದು ಮತ್ತು ಚರ್ಚೆಯೊಂದಿಗೆ ಈ ಗುಂಪು ಕಾವು ಪಡೆದುಕೊಳ್ಳುತ್ತ ಹೋಯಿತು. ನಂತರ ಕಾಲೇಜು ಮಕ್ಕಳಿಗೆ ಸೃಜನಶೀಲ ಬರೆವಣಿಗೆಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸಲು ಕಥಾ ಸ್ಪರ್ಧೆಗಳನ್ನು ಏರ್ಪಡಿಸಿತು. ಕಳೆದ ನಾಲ್ಕು ವರ್ಷಗಳಿಂದ ತನ್ನ ಪರಿಧಿಯನ್ನು ಹಿಗ್ಗಿಸಿಕೊಂಡ ಈ ಹೊತ್ತಿಗೆ, ಎಲ್ಲ ವಯೋಮಾನದವರೂ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿತು. ಈ ವರ್ಷದಿಂದ ಕಾವ್ಯ ಪ್ರಶಸ್ತಿಯನ್ನೂ ಘೋಷಿಸಿದ್ದು ಗಮನಾರ್ಹ.
ಇದನ್ನೂ ಓದಿ : Toto Awards 2022 : ‘ಕವಿತೆ ಒಳಗಿಳಿಸಿಕೊಳ್ಳಬೇಕಿತ್ತು, ಓದನ್ನು ಅರ್ಧಕ್ಕೇ ನಿಲ್ಲಿಸಿದೆ’ ಟೊಟೊ ಪುರಸ್ಕೃತ ಕೃಷ್ಣ ದೇವಾಂಗಮಠ
Published On - 11:51 am, Wed, 23 February 22