Toto Awards 2022 : ‘ಕವಿತೆ ಒಳಗಿಳಿಸಿಕೊಳ್ಳಬೇಕಿತ್ತು, ಓದನ್ನು ಅರ್ಧಕ್ಕೇ ನಿಲ್ಲಿಸಿದೆ’ ಟೊಟೊ ಪುರಸ್ಕೃತ ಕೃಷ್ಣ ದೇವಾಂಗಮಠ
Krishna Devangamath : ‘ಮಕ್ಕಳನ್ನು ಯಾವ್ಯಾವುದರಿಂದ ದೂರ ಇಡುತ್ತಾರೋ ಆ ಎಲ್ಲವುಗಳಿಗೂ ನಾನು ತುಂಬಾ ಹತ್ತಿರವಿದ್ದ ಸಮಯ ಅದು. ಒಂದು ದುಃಸ್ವಪ್ನದ ಹಾಗೆ. ನಿಮ್ಮ ಮಗ ಇನ್ನು ನಿಮ್ಮ ಕೈಗೆ ಹತ್ತುವುದಿಲ್ಲಾ ಎಂದು ಊರವರೆಲ್ಲಾ ಹೇಳುತ್ತಿದ್ದರು. ಮೇಷ್ಟ್ರಿಂದ ಮೈಮುರಿ ಛಡಿ ಏಟು ಬೀಳುತ್ತಿದ್ದವು.’ ಕೃಷ್ಣ ದೇವಾಂಗಮಠ
Toto Awards 2022 : ಪ್ರಸಕ್ತ ಸಾಲಿನ ಟೊಟೊ ಪುರಸ್ಕಾರಕ್ಕೆ ಕವಿ, ಛಾಯಾಗ್ರಾಹ ಕೃಷ್ಣ ದೇವಾಂಗಮಠ (Krishna Devangamath) ಭಾಜನರಾಗಿದ್ದಾರೆ. ಕನ್ನಡ ಸೃಜನಶೀಲ ಯುವ ಬರಹಗಾರರ ವಿಭಾಗದಲ್ಲಿ ವಿಜೇತರಾದ ಇವರು ರೂ. 50,000 ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿನ್ನೆ (ಫೆ.19) ನಡೆದ ಆನ್ಲೈನ್ ಸಮಾರಂಭದಲ್ಲಿ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಈ ಪುರಸ್ಕಾರವನ್ನು ಘೋಷಿಸಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ರಾಘವಾಂಕುರ (ಕಳಕೊಂಡವರು-ಕಥೆ), ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ದಾದಾಪೀರ್ ಜೈಮನ್ (ಇಲ್ಲೇ ಎಲ್ಲೋ-ಕಥೆ) ಮತ್ತು ರಾಮದುರ್ಗದ ಕೃಷ್ಣ ದೇವಾಂಗಮಠ (ಸ್ವರ್ಗದ ಟಪಾಲು ಕಚೇರಿ-ಕವಿತೆ) ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಕಾದಂಬರಿಕಾರರಾದ ಎಚ್. ನಾಗವೇಣಿ, ಕವಿ ಚಿಂತಾಮಣಿ ಕೊಡ್ಲೆಕೆರೆ ತೀರ್ಪುಗಾರರಾಗಿದ್ದರು. ಈ ಸಂದರ್ಭದಲ್ಲಿ ಕೃಷ್ಣ ದೇವಾಂಗಮಠ ‘ಟಿವಿ9 ಕನ್ನಡ ಡಿಜಿಟಲ್’ನೊಂದಿಗೆ ಪ್ರತಿಕ್ರಿಯಿಸುತ್ತಾ ತನ್ನೊಳಗೆ ಕವಿತೆ ಇಳಿದದ್ದು ಹೇಗೆ ಎನ್ನುವುದನ್ನು ಇಲ್ಲಿ ಹಂಚಿಕೊಂಡಿದ್ದಾರೆ.
*
ತುಂಬಾ ಪ್ರಾಮಾಣಿಕ ಅನ್ನುವಂತೆ ಪಠ್ಯ , ಪಠ್ಯೇತರ ವಿಷಯಗಳಲ್ಲಿ ಮಗ್ನನಾಗಿದ್ದ ನಾನು ನಾಲ್ಕನೇ ತರಗತಿಗೆ ಬರುವ ಹೊತ್ತಿಗೆ ಗೊತ್ತೇ ಆಗದಂತೆ ಶಾಲೆಗೂ ನನಗೂ ಅಷ್ಟೇನೂ ಸಂಬಂಧವಿಲ್ಲದವನಂತೆ ಇರತೊಡಗಿದೆ. ಒಳಗೆ ತರಗತಿಗಳು ನಡೆಯುತ್ತಿದ್ದರೆ ನಾನು ಊರಿನ ಬೆಟ್ಟ, ಕೊಳ್ಳ, ಹೊಲಗಳಲ್ಲಿರುತ್ತಿದ್ದೆ. ನಾನೊಬ್ಬನೇ ಹಾಳಾಗುವುದಲ್ಲದೆ ಗೆಳೆಯರನ್ನೂ ಸೇರಿಸಿಕೊಂಡು ಸುತ್ತತೊಡಗಿದೆ. ಆಗಾಗ ನಮ್ಮ ಈ ಗುಂಪಿಗೆ ಸೇರದ ಗೆಳೆಯರು, ಅಪರೂಪಕ್ಕೆ ಶಾಲೆಯ ರಸ್ತೆಯಲ್ಲಿ ನನ್ನನ್ನು ಕಂಡಾಗ ತರಗತಿಗೆ ದರದರನೆ ಎಳೆದುಕೊಂಡು ಹೋಗುತ್ತಿದ್ದರು. ಹೀಗೆ ಹೋದಾಗೊಮ್ಮೆ ಮೇಷ್ಟ್ರಿಂದ ಮೈಮುರಿ ಛಡಿ ಏಟು ತಿನ್ನೋದು, ಮತ್ತೆ ಸಿಕ್ಕೇನೆಯೇ ಅನ್ನುವಂತೆ ದೂರ ಓಡುವುದು. ಹೀಗೆ ಸಾಹಸ ಮತ್ತು ಬೆರಗಿನಿಂದ ನನ್ನ ಬಾಲ್ಯ ಕೂಡಿತ್ತು. ಉಳಿದಂತೆ ಅಪ್ಪ ಅಮ್ಮನ ಜೊತೆ ಒಂದಷ್ಟು ಕಾಲ, ಅವರಿಂದ ದೂರ ಒಂದಷ್ಟು ಕಾಲ, ಅಜ್ಜಿ, ದೊಡ್ಡಮ್ಮ, ಅಕ್ಕ ಇವರ ಜೊತೆ ಅಷ್ಟಿಷ್ಟು ಕಾಲ, ಇನ್ನು ಯಾರೂ ಇಲ್ಲ ಅನ್ನುವಾಗ ದೇವರು! ಅಳುಬುರುಕನಾಗಿ ಇರಬಹುದಾಗಿದ್ದ ಎಲ್ಲ ಸಂದರ್ಭಗಳಲ್ಲೂ ಹಿಂಜರಿಯದೇ ತಳವೂರಿ ನಿಲ್ಲುವಂತೆ ಎದುರಾದ ಎಲ್ಲ ಘಟನೆಗಳು ನನ್ನನ್ನು ಗಟ್ಟಿಗೊಳಿಸುತ್ತ ಹೊರಟವು.
ಮಕ್ಕಳನ್ನು ಯಾವ್ಯಾವುದರಿಂದ ದೂರ ಇಡುತ್ತಾರೋ ಆ ಎಲ್ಲವುಗಳಿಗೂ ನಾನು ತುಂಬಾ ಹತ್ತಿರವಿದ್ದ ಸಮಯ ಅದು. ಒಂದು ದುಃಸ್ವಪ್ನದ ಹಾಗೆ. ನಿಮ್ಮ ಮಗ ಇನ್ನು ನಿಮ್ಮ ಕೈಗೆ ಹತ್ತುವುದಿಲ್ಲಾ ಎಂದು ಊರವರೆಲ್ಲಾ ಹೇಳುತ್ತಿದ್ದರು. ಆದರೆ ನನ್ನ ಅಂದಿನ ಸ್ಥಿತಿಗೆ ಯಾರನ್ನೂ ದೂರಲಾಗದೆ ಆ ಎಲ್ಲವುಗಳಿಂದ ಈಗ ಮುಕ್ತವಾಗಿದ್ದೇನೆ. ಯಾವಾಗ ಚೆನ್ನಾಗಿ ಓದಲು ಶುರು ಮಾಡಿದೆನೋ ಆಗಲೇ ಓದು ಬೇಡವೆಂದು ನಿರ್ಧರಿಸಿದೆ. ಹಾಗಾಗಿ ಪಿಯುಸಿಯನನ್ನು ಮೊಟಕುಗೊಳಿಸಿದೆ. ಅದಕ್ಕೆ ಕಾರಣಗಳು ಹಲವಾರು ಇದ್ದರೂ ಇಂಥ ಓದು ನನ್ನನ್ನು ನನಗೆ ಬೇಕಾದ ರೀತಿಯಲ್ಲಿ ಆಗುಮಾಡಲಾರದು ಎನ್ನಿಸಿದ್ದು ನನಗೆ ಮುಖ್ಯ ಸಂಗತಿಯಾಗಿತ್ತು. ಆದರೆ, ಓದೇ ಬೇಡ ಅಂದವನನ್ನು ಮುಂದೆ ಅಪ್ಪ ತರುತ್ತಿದ್ದ ಸಾಹಿತ್ಯದ ಪುಸ್ತಕಗಳು ಓದಿಗೆ ಮುಗಿಬೀಳುವಂತೆ ಮಾಡಿದವು. ಬದುಕು ಆಡಿಸಿದ ಎಲ್ಲ ಆಟಗಳು ಸೃಜನಶೀಲವಾಗಿಸಿದವು. ಇಂಥ ಬಾಲ್ಯವೇ ನನಗೆ ಔಟ್ ಆಫ್ ದಿ ಬಾಕ್ಸ್ ಆಗಿರಲು ಪ್ರೇರೇಪಿಸಿದವು. ಯಾವುದನ್ನು ಜನ ಖಾಲಿಪೀಲಿ ತಿರುಗಾಟ ಎಂದರೋ ಅದೇ ನನ್ನ ಆಯ್ಕೆಯಾಯಿತು.
ಕೃಷ್ಣ ಬರೆದ ಕವಿತೆಗಳು : Poetry; ಅವಿತಕವಿತೆ: ರೆಕ್ಕೆಗಳು ಮಾತ್ರ ನಿನ್ನ ಆತ್ಮಸಂಗಾತ
ಅಪ್ಪ ಅಮ್ಮನೊಂದಿಗೆ ಕೃಷ್ಣಕಾಡುಮೇಡು ಅಲೆಯುವುದು ಹೆಚ್ಚಾಯಿತು. ಇದರಿಂದ ಜನಜೀವನದ ಒಳಪದರಗಳನ್ನು ಬಲುಬೇಗ ಅರ್ಥ ಮಾಡಿಕೊಳ್ಳಲು ಅನುವಾಯಿತು. ಬರುಬರುತ್ತ ಅಕ್ಷರಗಳಿಂದಷ್ಟೇ ಜಗತ್ತನ್ನು ನೋಡಿದರೆ ಸಾಲದು ಎಂದೆನಿಸಿ ಹೆಗಲಿಗೊಂದು ಕ್ಯಾಮೆರಾ ನೇತುಹಾಕಿಕೊಂಡೆ. ಕವಿತೆಯಷ್ಟೇ, ಒಮ್ಮೊಮ್ಮೆ ಗುಲಗಂಜಿ ಗಾತ್ರ ಹೆಚ್ಚೇ ಎನ್ನುವಂತೆ ಅದು ಆಪ್ತವಾಗುತ್ತ ಹೋಯಿತು. ಸಣ್ಣವಯಸ್ಸಿನಲ್ಲಿ ಸುತ್ತಿದಂತೆ ಮತ್ತೆ ದೇಹವನ್ನು ಗಾಳಿಗೆ ಆನಿಸಿ ಹಳ್ಳ,ಕೊಳ್ಳ, ಹೊಲ, ಬಣವೆ, ಕಾಡು, ಹಳ್ಳಿ, ನಗರ ಹೀಗೆ ಎಲ್ಲೆಂದರಲ್ಲಿ ಸುತ್ತುವ ‘ಅತೀತನ’ಕ್ಕೆ ತೆರೆದುಕೊಳ್ಳುತ್ತ ಹೊರಟಿದ್ದೇನೆ. ಜೀವಲೋಕದ ಅಚ್ಚರಿಯನ್ನು, ಮನುಷ್ಯಲೋಕದ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳುವ ಹುಚ್ಚಿಗೆ ಬಿದ್ದಿದ್ದೇನೆ. ಹೀಗೆ ನಾನೇ ಮೈಮೇಲೆ ಎಳೆದುಕೊಂಡು ಸೃಷ್ಟಿಸಿಕೊಳ್ಳುವ ಕೆಲಸಗಳಲ್ಲಿ ಬಿದ್ದು ಹೊರಳಾಡುವಾಗಲೇ ಖಿನ್ನತೆಗೂ ಜಾರುತ್ತಿರುತ್ತೇನೆ. ಒಮ್ಮೆ ಪಕ್ಷಿಯಂತೆ ಹಾರುವುದು, ಓತಿಯಂತೆ ನೆಗೆಯುವುದು, ಮೊಲದಂತೆ ಪುಟಿಯುವುದು, ಆನೆಯಂತೆ ಅನುಭವಿಸುವುದು, ಹುಲಿಯಂತೆ ನಾಚುವುದು ಎಲ್ಲವೂ ಸಾಧ್ಯವಾಗಬೇಕು ಅನ್ನಿಸುತ್ತದೆ. ಅದಕ್ಕಾಗಿಯೇ ಮನಸ್ಸು ದೇಹ ತುಡಿಯುತ್ತದೆ. ಬದುಕಿನ ಧಾವಂತ ಉಸಿರುಗಟ್ಟಿಸುತ್ತಿದ್ದಂತೆ ಎಲ್ಲವೂ ಸ್ತಬ್ಧವಾಗಿಬಿಡುತ್ತದೆ. ಈ ಎಲ್ಲದರ ಮಧ್ಯೆಯೇ ಎದುರಾದ ಸನ್ನಿವೇಶಗಳಿಂದಾಗಿ ಒಂದು ಮನೆಯನ್ನು ನಡೆಸುವ ಜವಾಬ್ದಾರಿಯನ್ನೂ ಬಲುಬೇಗನೆ ಕಲಿತುಕೊಂಡೆ ಎನ್ನುವುದು ಮತ್ತೊಂದು ಕಥೆ.
ಇರಲಿ, ಸೃಜನಶೀಲ ಪ್ರಕಾರಕ್ಕೆ ಅದರಲ್ಲೂ ನನ್ನಿಷ್ಟದ ಕವಿತೆಯ ಕಾರಣಕ್ಕೆ ಈ ಬಾರಿಯ ಟೋಟೋ ಪುರಸ್ಕಾರ ದೊರೆತಿದ್ದು, ಬಹಳಷ್ಟು ಗೆಳೆಯರು, ಮನೆಯವರು ಸಂಭ್ರಮಿಸಿದ್ದಾರೆ. ಅವರೆಲ್ಲರ ಸಂಭ್ರಮ ನನ್ನ ಖುಷಿಯನ್ನೂ ಹೆಚ್ಟಿಸಿದೆ. ಅದರಲ್ಲೂ ನನಗಿಂತಲೂ ಅಪ್ಪನಿಗೆ ಕವಿತೆ ಹೆಚ್ಚು ಸಂತೋಷ ನೀಡುತ್ತದೆ. ನನ್ನ ಹೊಸ ಬರವಣಿಗೆಯ ಕುರಿತು ಅವರು ಯಾವಾಗಲೂ ಉತ್ಸುಕರು. ಒಂದು ಪ್ರಶಸ್ತಿ ಲೇಖಕನ ಸುತ್ತ ಹಲವು ರೀತಿಯಲ್ಲಿ ಹಬ್ಬಿಕೊಳ್ಳುತ್ತದೆ. ಹಲವು ಸಾಹಿತ್ಯಾಸಕ್ತರನ್ನು ಕವಿತೆಗೆ ಮುಖಾಮುಖಿಯಾಗಿಸುತ್ತದೆ. ಬರಹಕ್ಕೊಂದು ಹೊಸ ಮಗ್ಗಲು ಸಾಧ್ಯವಾಗುವಂತೆ ಮಾಡುತ್ತದೆ. ಲೇಖಕನಿಗೆ ಮತ್ತಷ್ಟು ಜವಾಬ್ದಾರಿಯನ್ನು ಜೊತೆಗೆ ಎಚ್ಚರಿಕೆಯನ್ನೂ ತರುತ್ತದೆ. ಪ್ರಶಸ್ತಿ ಒಂದು ಗರಿ ಹೇಗೋ ಹಾಗೆ ಮುಳ್ಳೂ ಹೌದು. ಗುಲಾಬಿ ಹೂವಿನ ಹಾಗೆ. ಲೇಖಕ ಪ್ರತೀ ಬಾರಿ ಅದರ ಸುರುಳಿಯಿಂದ ಆಚೆ ಜಿಗಿಯುತ್ತಲೇ ಇರಬೇಕು, ಹರಿಯುತ್ತಲೇ ಇರಬೇಕು. ಈ ಕ್ಷಣ ಕವಿತೆಯೊಂದು ನನ್ನೊಳಗಿರದಿದ್ದರೆ ನಾನು ಏನಾಗಿರುತ್ತಿದ್ದೆನೊ.
ಪ್ರಶಸ್ತಿ ಹೂವಿನ ಹಾರವಲ್ಲ ಮುಳ್ಳಿನ ಕಿರೀಟವೆಂದು ಭಾವಿಸಿ, ಏಸುವಿನಂತೆ ಇರುವುದು ಸಾಧ್ಯವಾಗಬೇಕು. ಈ ಪ್ರಜ್ಞೆಯನ್ನು ಬದುಕಿನುದ್ದಕ್ಕೂ ಜಾಗೃತವಾಗಿರಿಸಿಕೊಳ್ಳಬೇಕು.
*
ಕೃಷ್ಣ ದೇವಾಂಗಮಠ : 14.8.1995 ರಂದು ಜನನ. ಸದ್ಯ ಧಾರವಾಡದಲ್ಲಿ ವಾಸ. ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಕಾಲ ಕೆಲಸ ಮಾಡಿದ ಅನುಭವ. 2014 ರಲ್ಲಿ ಪುಸ್ತಕ ಪ್ರಾಧಿಕಾರದ ಸಹಾಯ ಧನ ಪಡೆದು ‘ನಲ್ಮೆಯ ಭಾವ ಬುತ್ತಿ’ ಕವನ ಸಂಕಲನ ಪ್ರಕಟಣೆ. ಫೋಟೋಗ್ರಫಿ, ಪ್ರವಾಸ, ಸಂಗೀತ, ರಂಗಭೂಮಿ, ಸಿನಿಮಾ ಆಸಕ್ತಿಯ ಕ್ಷೇತ್ರಗಳು. ರಾಜ್ಯದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಕವಿತೆ, ಕಥೆ ಮತ್ತು ಬರಹಗಳು ಪ್ರಕಟವಾಗಿವೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ಬರಹಗಳು ಪ್ರಕಟಗೊಂಡಿವೆ. ಫೋಟೋಗ್ರಫಿ ಮತ್ತು ಕವಿತೆಯ ಕಾರಣಕ್ಕೆ ಕೆಲವು ಪ್ರಶಸ್ತಿಗಳು ಸಂದಿವೆ.
ಕೃಷ್ಣ ತೆಗೆದ ಫೋಟೋ : ಋತುವಿಲಾಸಿನಿ: ಅನಾಥ ಕಣ್ಣೀರ ಬಿಂದುವೊಂದು ನಿಮ್ಮ ನೋಟಕ್ಕೆ ಬೀಳದೆ ಓಡಾಡುತ್ತಿದ್ದವರ ಚಪ್ಪಲಿಯಡಿ ಸತ್ತುಹೋಯಿತು
Published On - 9:40 am, Sun, 20 February 22