Poetry : ಅವಿತಕವಿತೆ; ಪ್ರೇಮವೊಂದೇ ಪ್ರಜ್ವಲಿಸುವ ಈ ಹೊತ್ತಿನಲ್ಲಿ ಯಾವ ಯೋನಿ ಹೆತ್ತು ಪಾವನವಾಯಿತೋ

Poem : ‘ಕಾಲೇಜು ದಿನಗಳಲ್ಲಿ ಶಿರಸಿಯಿಂದ ಪದೇಪದೆ ಬನವಾಸಿಗೆ ಹೋಗುತ್ತಿದ್ದೆವು. ಆಗೆಲ್ಲ ನನಗೆ ಪಂಪನ ಬದಲು ಮಧುಕೇಶ್ವರ ದೇಗುಲದಲ್ಲಿ ನಾಟ್ಯವಾಡಿದ್ದಳೆಂಬ ಐತಿಹ್ಯವಿರುವ ಮಾಯೆ ನೆನಪಾಗುತ್ತಿದ್ದಳು. ಅವಳನ್ನು ಹುಡುಕುತ್ತ ಕಾಮಲತೆಯ ಮನೆ ಎಲ್ಲಿದೆ ಎಂದು ಸ್ಥಳಿಯರನ್ನು ಕೇಳಿದಾಗ, ಇವಳಿಗೆಲ್ಲೋ ಹುಚ್ಚು ಎಂಬಂತೆ ನೋಡುತ್ತಿದ್ದರು.’ ಶ್ರೀದೇವಿ ಕೆರೆಮನೆ

Poetry : ಅವಿತಕವಿತೆ; ಪ್ರೇಮವೊಂದೇ ಪ್ರಜ್ವಲಿಸುವ ಈ ಹೊತ್ತಿನಲ್ಲಿ ಯಾವ ಯೋನಿ ಹೆತ್ತು ಪಾವನವಾಯಿತೋ
Follow us
ಶ್ರೀದೇವಿ ಕಳಸದ
|

Updated on: Feb 20, 2022 | 11:49 AM

ಅವಿತಕವಿತೆ | AvithaKavite : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ; ಕವಿ, ಲೇಖಕಿ ಶ್ರೀದೇವಿ ಕೆರೆಮನೆ ಉತ್ತರ ಕನ್ನಡ ಜಿಲ್ಲೆಯ ಹಿರೇಗುತ್ತಿಯವರಾದ ಇವರು ಪ್ರೌಢಶಾಲಾ ಶಿಕ್ಷಕಿ. ನಾನು ಗೆಲ್ಲುತ್ತೇನೆ, ಗೆಜ್ಜೆ ಕಟ್ಟದ ಕಾಲಲ್ಲಿ, ಮೌನದ ಮಹಾ ಕೋಟೆಯೊಳಗೆ, ಮೈ ಮುಚ್ಚಲೊಂದು ತುಮಡು ಬಟ್ಟೆ, ಅಂಗೈಯೊಳಗಿನ ಬೆಳಕು, ಅಲೆಯೊಳಗಿನ ಮೌನ, ನನ್ನ ದನಿಗೆ ನಿನ್ನ ದನಿಯು, ಬಿಕ್ಕೆಹಣ್ಣು, ಚಿತ್ತಚಿತ್ತಾರ ಪ್ರಕಟಿತ ಕೃತಿಗಳು. ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಶ್ರೀಗಂಧ ಹಾರ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಗ್ರಂಥ ಪುರಸ್ಕಾರ, ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಸಾರಾ ಅಬೂಬ್ಕರ ಪ್ರಶಸ್ತಿ, ಸುಮನಾ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ, ಕ್ರೈಸ್ತ ಕಾಲೇಜು ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಸಂದಿವೆ. ಸದ್ಯ ‘ಆಸೆಯೆಂಬ ಶೂಲದ ಮೇಲೆ’ (ಮಾಯೆಯ ಮಾಯಾ ಕವಿತೆಗಳು) ಪ್ರಕಟಣೆಗೆ ಸಿದ್ಧಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಇವರ ಕವಿತೆಗಳು ನಿಮ್ಮ ಓದಿಗೆ.

*

ನಿರಾಕರಣೆ ಅವಳ ಅಸ್ತಿತ್ವದಲ್ಲಿಯೇ ಇಲ್ಲ. ಸ್ವೀಕರಿಸಿ, ಸಹಕರಿಸಿ ಅಕ್ಷಯವಾಗುವ ಅವಳು ಅಕ್ಷರಗಳ ಉದಕಮಂಡಲ. ಅವಳು ಕಡಲು ಕಾಣದೆಯೂ ಕಡಲಾಗಬಲ್ಲವಳು, ಪ್ರಾಣ ಚೈತನ್ಯವನ್ನೆಲ್ಲ ಉಸುರಿಗೆ ತುಂಬಿ ಎದೆಯೊಳಗೆ ಬಿಗಿ ಹಿಡಿದವಳು. ಸಲುಹಿ, ಸಾವರಿಸಿ ಜಗವನ್ನು ಮುಟ್ಟಿಯೂ ಮುಟ್ಟದೆಯೂ ಸಾಂತ್ವಾನಿಸಿದವಳು. ಈ ಸಂದರ್ಭದಲ್ಲಿ ನಮ್ಮ ಸಮಕಾಲೀನ ಲೇಖಕಿ ಕನಕ ಹಾ.ಮ. ಅವರ ಒಂದು ಪದ್ಯ ಉಲ್ಲೇಖಾರ್ಹ- ‘ಜಗವೆಲ್ಲ ಧಿಕ್ಕರಿಸಿದಾಗ ನಾ ಬಂದು ನಿನ್ನ ಅಪ್ಪಿಕೊಳ್ಳುತ್ತೇನೆ.’ ಇದನ್ನೇ ಶ್ರೀದೇವಿ ‘ಯಾರಿಗೂ ಸೇರದ ಈ ಭೂಮಿ ನಿನಗೂ ಸೇರಿದ್ದಲ್ಲವೆ?’ ಎಂದು ಪ್ರಶ್ನಿಸಿ ಇಡೀ ಸ್ತ್ರೀಕುಲವನ್ನು ಅದರೆಲ್ಲ ಮಿತಿ-ಅಮಿತಿಗಳೊಂದಿಗೆ ಪ್ರಪಂಚ ಒಪ್ಪಿಕೊಳ್ಳುವಂತೆ ಮಾಡುತ್ತಾರೆ. ದಕ್ಕದ್ದನ್ನೂ ದಕ್ಕಿಸಿಕೊಳ್ಳುವಂತೆ ಮಾಡುವುದೇ ಕಾವ್ಯದ ಶಕ್ತಿ ಎನ್ನುವುದಾದರೆ ಅಂಥ ಹಲವು ಸತ್ಯಗಳನ್ನು ಈ ಸಂಕಲನದ ಮೂಲಕ ಶ್ರೀದೇವಿ ನಮಗೆ ದಕ್ಕಿಸಿದ್ದಾರೆ. ರಾಗಂ, ಲೇಖಕರು

*

ಪುಸ್ತಕದ ಬದನೆ

ಪ್ರೀತಿಗೆ ಸೋಲುವವನಲ್ಲ ನೀನು ಎಂಬುದು ತಿಳಿದಿದ್ದರೂ ಪ್ರೇಮಿಸಲು ಹಾತೊರೆದದ್ದು ನನ್ನದೇ ತಪ್ಪೆಂದು ಈಗ ಅರ್ಥವಾಗಿದೆ ಇಹದಲ್ಲುಳಿದೂ ಪರದ ಧ್ಯಾನ ಮಾಡುವ ಪರಸಂಗದ ಗೆಂಡೆ ತಿಮ್ಮನೊಡನೆ ಬಯಸಿದ್ದು ಒಲವಿನ ಕಣ್ಣೋಟವನ್ನು ಘನಘೋರ ಅಪರಾಧವೇ ಸರಿ

ಅದಾರೋ ಕಥೆ ಕಟ್ಟಿ ಹಾಡಿದ ಜಗದೊಡೆಯನ ಅಂಶ ನೀನೆಂಬ ಅಹಂ ವ್ಯಾಪಿಸಿದೆ ನಿನ್ನೊಳಗನ್ನೆಲ್ಲ ಜಗದೀಶನ ಹೆಸರಿಟ್ಟುಕೊಂಡರೆ ಸಾಕೆ ಶಿವೆಯನ್ನು ಅರ್ಧ ದೇಹದಲ್ಲಿ ಧರಿಸಿ ನಿಜಾರ್ಥದಲಿ ಅರ್ಧಾಂಗನಾದ ಪರಶಿವನ ಪೂಜಿಸುವ ವಿಷಯ ಬಿಡು, ಹೆಸರು ಹೇಳಲೂ ಅಯೋಗ್ಯನಾದವನನ್ನು ಒಲಿದ ನೋವು ಸದಾ ಹೆಪ್ಪುಗಟ್ಟಿರುತ್ತದೆ ನನ್ನ ವಜ್ರಕಠೋರಿಯಾದ ಎದೆಯಾಳದೊಳಗೆ

ಹೆಣ್ಣಿನ ಕೋಮಲತೆಯನ್ನೆಲ್ಲ ಪರಿಕಿಸಿ ತಟ್ಟಿ ತಡವಿ ನೇವರಿಸಿಯೂ ಏನೂ ಮಾಡದವನ ಸೋಗು ಧರಿಸಿ ಸುಭಗನಂತೆ ಲೋಕದೆದುರು ಮೆರೆಯುವುದು ಗಂಡುಲೋಕಕ್ಕೆ ಲಾಗಾಯತ್ತಿನ ರೂಢಿ ಹೊರತಾಗಲಿಲ್ಲ ನೀನೂ

ಏನು ಹೇಳಿದರೂ ವ್ಯರ್ಥವೆಂಬುದು ಅರ್ಥವಾಗಿದೆ ಇಷ್ಟು ವರ್ಷಗಳ ಒಡನಾಟದಲ್ಲಿ ವರ್ತಮಾನದ ಪ್ರೇಮವನು ದಕ್ಕಿಸಿಕೊಂಡು ಬದುಕುವುದಕ್ಕಿಂತ ದಾಖಲಾಗುವುದೇ ಮುಖ್ಯ ನಿನಗೆ ಭವಿಷ್ಯದ ಇತಿಹಾಸದಲ್ಲಿ

ಹೊರಟು ಬಿಡು ನನ್ನ ದೃಷ್ಟಿ ಪರದೆಯಿಂದಾಚೆ ಮತ್ತೆ ಉಸರಲಾರೆ ಎಂದಿಗೂ ಪ್ರೇಮವೆಂದರೆ ದೈವಿಕ ಎಂಬ ಪುಸ್ತಕದ ಬದನೆಕಾಯನ್ನು

*

ಪುರಾಣಕಥೆಗಳ ಮುಂದುವರೆಸಿ

ಹೆಜ್ಜೆ ಹೆಜ್ಜೆಗೂ ತಿರಸ್ಕರಿಸಿ ಒಲವನ್ನು ಕಾಲಡಿ ಹಾಕಿ ಹೊಸಕುವ ಪರಿಯೇನೂ ಹೊಸದಲ್ಲ ನನ್ನಂತಹ ಹೆಣ್ಣುಗಳಿಗೆ ತಾವಾಗಿಯೇ ಪ್ರೀತಿಯನು ಅರಹುವುದು ವ್ಯಭಿಚಾರವೆದುಕೊಂಡ ಈ ದೇಶದಲ್ಲಿ ನರಳುತ್ತಿದೆ ಪ್ರೇಮವನು ಕತ್ತು ಹಿಚುಕಿ ಕೊಲೆಗೈದ ದೊಡ್ಡ ಇತಿಹಾಸ

ಪುರುಷರಲ್ಲೇ ಶ್ರೇಷ್ಠನೆಂಬ ಬಿರುದಾಂಕಿತನೂ ಒಲಿದು ಬಂದ ಶೂರ್ಪನಖಿಯ ಮೂಗು, ಕಿವಿ ಮೊಲೆಯನ್ನು ಕತ್ತರಿಸಿ ರಕ್ಕಸಿಯೆಂದು ಜರಿದ ಘಟನೆ ನಡೆದದ್ದು ನಿನ್ನೆ ಮೊನ್ನೆಯೇನಲ್ಲ ಈ ದಶಕದಲ್ಲಲ್ಲ, ಶತಮಾನದಲ್ಲೂ ಅಲ್ಲ

ಕಡುಕೋಪದ ಗಂಡನೊಡನೆ ಶೃಂಗಾರವಿರದ ಬಾಳುವೆಯಲಿ ಜೋಡಿಗಂಧರ್ವರ ಸರಸ ನೋಡುತ ಮೈಮರೆತ ರೇಣುಕೆಗಂತೂ ಹೆತ್ತ ಮಗನಿಂದಲೆ ತಲೆ ತರಿದುಕೊಳ್ಳುವ ಶಿಕ್ಷೆ

ಜಟಾಧಾರಿಯ ಅಸಡ್ಡಾಳ ಮಿಲನದಲ್ಲಿ ಎಳೆದು ಸೆಳೆದು ಮೈಕೈ ಪರಚಿ, ಕಚ್ಚಿ ನೋಯಿಸುವ ವಿಪರೀತ ಕಾಮದವನ ಮರೆತು ಒಂದರೆಕ್ಷಣ ಮೈಮರೆತು ನಿಜ ಸುಖವ ಬಯಸಿದ ಅಹಲ್ಯೆ ಕುಳಿತು ಬಿಟ್ಟಳು ಅಂಗಳದೊಳಗೆ ಕಲ್ಲಾಗಿ ಶೂರ್ಪನಖಿಯ ಹೆಣ್ತನವನ್ನೇ ಕತ್ತರಿಸಿ ಹೆಂಡತಿಯ ಶಂಕಿಸಿದವನ ಪಾದಧೂಳಿಗೇ ಕಾಯಬೇಕಾಯಿತು ಕಲ್ಲಿನ ಸ್ವರೂಪ ಕಳೆದು ಮನುಜಳಾಗಿಸಲು

ಇಷ್ಟೆಲ್ಲ ಮಹಾನ್ ಪುರಾಣ ಪುಣ್ಯ ಕಥೆಗಳನು ಬೆನ್ನಿಗಿಟ್ಟುಕೊಂಡ ಭೂಪನಿಗೆ ಒಲಿದವಳು ಜಾರಿಣಿಯೆನಿಸುವುದು ಯಾವ ಕಾರಣಕೂ ಅಸಹಜವೆನಿಸದು ಬಿಡು ನಟುವರಳೆಂದು ಹೀಯಾಳಿಸಿ ಸೂಳೆಯೆಂದು ಜರಿದು ಸಂಕವ್ವಳಿಗೆ ಶರಣೆ ಎಂದು ಹೊಗಳುವಾಗ ನಿನ್ನ ಹಿರಿತನ ಕಾಣದೆ ಕುದಿಯುತ್ತದೆ ಮೈ ಮನಸು ಜೊತೆಯಾಗಿ

ಎಲ್ಲ ಇತಿಹಾಸ, ಪುರಾಣಗಳನು ಕಂಕುಳಲ್ಲಿಟ್ಟುಕೊಂಡು ಪಾಲಿಸುವವನೆ ಮೊಕ್ಷದ ದಾರಿಯಲಿ ಹೆಣ್ಣು ತೊಡಕೆಂದವನೆ ಇಂದಿಗೂ ಯೋಚಿಸುತ್ತೇನೆ ದೇಹದ ಬಯಕೆಗಳೆಲ್ಲ ಕರಕಲಾಗಿ ಪ್ರೇಮವೊಂದೇ ಪ್ರಜ್ವಲಿಸುವ ಈ ಹೊತ್ತಿನಲ್ಲಿ ಯಾವ ಯೋನಿ ಹೆತ್ತು ಪಾವನವಾಯಿತೋ ಹೆಣ್ಣನ್ನು ಹೀಗಳೆಯುವ ಶೂನ್ಯವನ್ನು

*

ಶ್ರೀದೇವಿ ಬರಹವನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಆ್ಯಟಿಟ್ಯೂಡ್ ಎಂಬ ಬ್ರಹ್ಮಾಸ್ತ್ರ ಪಡೆದುಕೊಂಡಿದ್ದು ಹೀಗೆ

AvithaKavithe Kannada Poetry Column by Shreedevi Keremane

ಕೈಬರಹದೊಂದಿಗೆ ಶ್ರೀದೇವಿ

ಕಾಲೇಜು ದಿನಗಳಲ್ಲಿ ಶಿರಸಿಯಿಂದ ಪದೇಪದೆ ಬನವಾಸಿಗೆ ಹೋಗುತ್ತಿದ್ದೆವು. ಆಗೆಲ್ಲ ನನಗೆ ಪಂಪ ನೆನಪಾಗುವ ಬದಲು ಮಧುಕೇಶ್ವರ ದೇಗುಲದ ನವರಂಗದ ವೃತ್ತದಲ್ಲಿ ನಾಟ್ಯವಾಡಿದ್ದಳು ಎಂಬ ಐತಿಹ್ಯವಿರುವ ಮಾಯೆ ನೆನಪಾಗುತ್ತಿದ್ದಳು. ಸುಮ್ಮನೆ ಮಾಯೆಯನ್ನು ಹುಡುಕುವವಳಂತೆ ದೇಗುಲವನ್ನು ಸುತ್ತುತ್ತಿದ್ದೆ. ಕಾಮಲತೆಯ ಮನೆ ಎಲ್ಲಿದೆ ಎಂದು ಸ್ಥಳಿಯರನ್ನು ಕೇಳಿದರೆ ಇವಳಿಗೆಲ್ಲೋ ಹುಚ್ಚು ಹಿಡಿದಿದೆ ಎಂಬಂತೆ ನೋಡುತ್ತಿದ್ದರು. ಸದಾ ನನ್ನ ನೆರಳಂತೆ ಇರುತ್ತಿದ್ದ ಮಧುರಾ ಹೆಗಡೆ ಹಾಗೂ ಕೃಷ್ಣಮೂರ್ತಿ ನಾಯ್ಕ ನನ್ನ ಹುಡುಕಾಟವನ್ನು ಕಂಡರೆ ಮತ್ತೆ ಬನವಾಸಿಗೆ ಬರೋದೇ ಬೇಡ ಎನ್ನುತ್ತಿದ್ದರು. ಮತ್ತೆ ತಿಂಗಳೊಳಗೇ ಬನವಾಸಿಯ ಹಾದಿ ಹಿಡಿಯುತ್ತಿದ್ದೆವು. ‘ಮಾಯೆಯ ಭೂತ ಮೆಟ್ಕೊಂಡಿದೆ ನಿನಗೆ’ ಕೆಲವೊಮ್ಮೆ ಜೊತೆಗಿರುತ್ತಿದ್ದ ನಾಗಭೂಷಣ ಹೆಗಡೆ ರೇಗುತ್ತಿದ್ದ. ಇದು ನನ್ನ ಪದವಿ ಪೂರ್ಣಗೊಳ್ಳುವವರೆಗೆ ಮೂರು ವರ್ಷಗಳ ಕಾಲ ತಿಂಗಳು ಎರಡು ತಿಂಗಳಿಗೊಮ್ಮೆ ಪುನರಾವರ್ತನೆಯಾಗಿದೆ. ಮನಸ್ಸಿಗೆ ಅಂಟಿದ ಮಾಯೆಯ ಭೂತ ನನ್ನನ್ನು ಬಿಡದೇ ಆವರಿಸಿಕೊಂಡೇ ಇರುವ ಸಮಯದಲ್ಲೇ ಗೆಳತಿ ದೀಪಾ ಹಿರೇಗುತ್ತಿಯ ಒಂದು ಕವಿತೆಯಲ್ಲಿ ಬರೆದ ಗಂಡು ಮಾಯೆ ಎನ್ನುವ ಶಬ್ದ ಓದಿದೆ. ಮಾಯೆ ಮತ್ತೊಮ್ಮೆ ಆವರಿಸಿಕೊಂಡಳು. ಅಲ್ಲಮನ ನಿರಾಕರಣೆ ಮತ್ತು ಮಾಯೆಯ ಪ್ರೇಮವನ್ನೇ ಇಟ್ಟುಕೊಂಡು ಬರೆಯಬಾರದೇಕೆ ಎಂದು ಯೋಚಿಸಿದ್ದೇ ಕವನಗಳ ಸರಣಿ ಇದು.

*

ಹೇವರಿಸಿದ ಗಂಡಸ್ತನ

ಗಂಡಸ್ತನವೆಂದರೆ ಮತ್ತೇನೂ ಅಲ್ಲ ಹೆಣ್ಣಿನ ಆತ್ಮವಿಶ್ವಾಸ ಮುರಿದು ಮೂಲೆಗುಂಪಾಗಿಸಿ ಬಿಡುವುದೆಂಬ ನಿನ್ನಂತಹ ಸಾವಿರ ಸಾವಿರ ಪುರುಷ ಪುಂಗವರು ಮಾಡಿ ತೋರಿಸಿ, ಬರೆದಿಟ್ಟ ಅರ್ಥವಿಲ್ಲದ ವ್ಯಾಖ್ಯಾನವನ್ನು ಮತ್ತೆ ಮತ್ತೆ ನವಿಕರಣ ಗೊಳಿಸಲು ಮಾಯೆಯನ್ನೂ ಮೀರಿದೆಯೆಂದ ಹೆಗ್ಗಳಿಕೆ ತೋರಿಸಲು ಬಳಸಿ ಎಸೆದ ಬಾಳೆಯನ್ನಾಗಿಸಿದ ನಿನ್ನ ಕುರಿತಾದ ಹೇವರಿಕೆಯನ್ನು ಹೇಳಲೂ ನಾಚುತ್ತಿದೆ ನನ್ನೊಳಗಿನ ಶಬ್ಧಗಳು

ಬಳಸಿ ಬಿಸಾಡುವವನಲ್ಲ ಎಂದೆಲ್ಲ ತನ್ನನ್ನೇ ತಾನು ಹೊಗಳಿಕೊಂಡು ಬಳಸಿಕೊಂಡೂ ಬಳಸಿಕೊಳ್ಳದ ಸೋಗುಹಾಕುವ ಮಾಯಾನಾಟಕ ರಂಗದ ಅದ್ಭುತ ಪಾತ್ರಧಾರಿಗೆ ಜಗತ್ತಿನ ತುಂಬ ಕಾಣುವುದು ರಂಗಮಂಚದ ಬಣ್ಣಬಣ್ಣದ ಬೆಳಕಿನ ಪ್ರಖರತೆ

ಕುತ್ತಿಗೆಗೆ ಜೋತುಬಿದ್ದ ಶಿವದಾರದ ಕರಡಿಗೆಯೊಳಗೆ ಕಣ್ತುಂಬಿಕೊಂಡು ಅಂಗೈ ಒಳಗಿಟ್ಟು ಇಷ್ಟಲಿಂಗವ ಪೂಜಿಸುವ ನಮ್ಮೊಳಗೆ ಇರುವುದಿಲ್ಲ ಸ್ವಾರ್ಥದ ಲವಲೇಶ ಎನ್ನುವ ಮೇಲರಿಮೆಯ ಮಾತುಗಳೊಳಗೆ ಹುದುಗಿದ ಬೂಟಾಟಿಕೆ ಅರ್ಥವಾಗುತ್ತಿದೆ

ಹೆಣ್ಣೆಂಬ ಹೆಣ್ಣು ಹೆಂಗಸರನ್ನೆಲ್ಲ ಶರಣೆಯರನ್ನಾಗಿಸುವ ಶಪಥ ತೊಟ್ಟವನೆ ಸ್ತ್ರೀಸಮಾನತೆಯ ಮಜಲುಗಳನ್ನೆಲ್ಲ ಅರಿದು ಕುಡಿದಂತೆ ಬೋಧಿಸುವವನೆ ಒಲಿದು ಬಂದವಳನ್ನು ಹೀಯಾಳಿಸಿ ಅವಮಾನಿವುದು ಅದೆಲ್ಲಿಯ ನ್ಯಾಯ ಒಲಿದವನಂತೆ ತೊಟ್ಟ ಛದ್ಮವೇಷದ ಉಡುಪು ಜಾರಿ ಧರಾಶಾಹಿಯಾಗುವುದಕ್ಕೆ ಉರುಳಿದವಲ್ಲ ವರ್ಷಗಳೆರಡು

ಈಗ ನಾನು ಕಾಮಲತೆಯಲ್ಲ ನೀನು ಅಲ್ಲಮನೂ ಅಲ್ಲ ನಾನು ನಿನ್ನನ್ನು ಕೆಡಿಸಲು ಹೊಂಚುಹಾಕಿದ ಮಾಯಾಂಗನೆ ನೀನು ಎಲ್ಲ ಬಂಧವ ಕಳಚಿಕೊಂಡು ಶೂನ್ಯಪೀಠವನ್ನೇರಿದ ಪ್ರಭುದೇವ

ಸೆಳೆಯಲೆತ್ನಿಸುವ ಮಾಯೆಯನ್ನು ಒಡಲೊಳಗೆ ದಹಿಸಿಕೊಂಡ ಹೇಶಾರವವನ್ನು ಆವಾಹಿಸಿಕೊಂಡವನೆ ನಿನ್ನ ಗಂಡಸ್ತನದ ಪ್ರತಿ ಅಕ್ಷರವೂ ಕೊಳಚೆಗುಂಡಿಯ ಹಂದಿಯಂತೆ ಹೊರಳಾಡುತ್ತಿದೆ ನೋಡು ನಿನ್ನೆದೆಯೊಳಗೆ

*

AvithaKavithe Kannada Poetry Column by Shreedevi Keremane

ಪ್ರಕಟಿತ ಕೃತಿಗಳು

ದಿಟ್ಟಿ ಬೆರೆಸಬೇಕಿದೆ

ಶೂನ್ಯಪೀಠದ ಉತ್ತುಂಗದಲಿ ಕುಳಿತು ಅಕ್ಕನೆಂಬೋ ಅಕ್ಕನಿಗೇ ಪ್ರಶ್ನೆಯ ಸುರಿಮಳೆಗೈದ ಸುದ್ದಿ ಬಿಜಯಂಗೈದಿದೆ ಸಂಗಮದಿಂದ ಭಲೆ ಭಲೆ ಎಂದಿತಂತೆ ನೆರೆದ ಜನಸಾಗರ ಪ್ರಭುವೆಂದರೆ ಹೀಗಿರಬೇಕೆಂದು ಹೊಗಳಿ ಅಟ್ಟಕ್ಕೇರಿಸಿ ಕೈಲಾಸದ ಬಾಗಿಲಲಿ ನಿಲ್ಲಿಸಿ ಉಧೋ ಉಧೋ ಎಂದಿದ್ದು ಪಡುವಣದ ಈ ತುದಿಯನ್ನೂ ತಲುಪಿದೆ

ಗಂಡೆಂಬ ಠೇಂಕಾರ ಕಂಡ ನನಗೆ ಅಚ್ಚರಿಯಾಗಲಿಲ್ಲ ಅಕ್ಕನನ್ನು ನಿಲಿಸಿ ಕಟಕಟೆಯಲಿ ವಿಪರೀತವಾಡಿದ್ದು ಮಧುಕೇಶ್ವರನ ಎದುರಲ್ಲಿ ನನ್ನ ಗೆಜ್ಜೆಯ ಸದ್ದನು ಹೀಗಳೆದವನಿಗೆ ಅದೇನೂ ದೊಡ್ಡ ವಿಷಯವಲ್ಲ ಬಿಡು

ಹಿಂದಿನಿಂದಲೇ ಬಂತು ಅಕ್ಕ ವಚನದ ಮೂಲಕವೆ ಉತ್ತರಿಸಿ ಬಾಯಿ ಮುಚ್ಚಿಸಿದ ಮತ್ತೊಂದು ಸಂದೇಶ ಪುರುಷೊತ್ತಮರ ಸಹವಾಸವನೆ ಒಲ್ಲೆನೆಂದು ಧಿಕ್ಕರಿಸಿ ಶೂನ್ಯ ಸಿಂಹಾಸನದ ಮೂರ್ಖತೆಯನು ಕದಳಿಗೆ ಹೊರಟ ಮಹಾ ಸುದ್ದಿ

ಊಹಿಸಿಕೊಳ್ಳಬಲ್ಲೆ ಸುಲಭವಾಗಿ ಸುಟ್ಟ ಬದನೆಕಾಯಿಯಂತಾದ ನಿನ್ನ ಮುಖದ ಚಹರೆಯನ್ನು ಅಕ್ಕ ಇಳಿಸಿದ ಅಹಂನ ಕಿರೀಟವನ್ನು ತಗ್ಗಿಸಿದ ನಿನ್ನ ಕಣ್ಣಿನ ದೃಷ್ಟಿಗೆ ಈಗಲಾದರೂ ಒಮ್ಮೆ ದಿಟ್ಟಿ ಬೆರೆಸಬೇಕಿದೆ ನನಗೆ

ಎಲ್ಲವನು ತೊರೆದು

ತಡೆದು ನಿಲ್ಲಿಸಬಾರದು ಎಂದಿಗೂ ಪ್ರೇಮದ ಕಳಶವನು ಎಡಗಾಲಲ್ಲಿ ಒದ್ದು ಹೊರಟು ನಿಂತವನನ್ನು ಜೊತೆಗಿರು ಎಂದು ಒಲವು ತುಂಬಿದ ಹೃದಯವನು ಮರೆತು ಕಣ್ಣೋಟವ ತಪ್ಪಿಸಿ ಮುಖ ತಿರುಗಿಸಿ ದೂರ ಸರಿದವನನ್ನು ಬೇಡಿಕೊಳ್ಳಬಾರದು

ಬಾಯಿ ಮಾತಿನ ತಮಾಷೆಗಾದರೂ ದೂರವಾಗುವ ಮಾತು ಹೇಳಿದರೆ ಬಿಟ್ಟುಬಿಡಬೇಕು ಜೊತೆಗಿಟ್ಟುಕೊಳ್ಳದೆ ಕೈಬೀಸಿ ಮುಖ ತಿರುವಿ ನಮ್ಮದಲ್ಲದ ವಾಂಛೆಯನ್ನು ತ್ಯಜಿಸಬೇಕು

ಸುಮ್ಮಸುಮ್ಮನೆ ಬೇಡ ಎನ್ನುವ ಮಾತು ಹಾದುಹೋಗುವುದಿಲ್ಲ ಪ್ರೀತಿಯ ನಡುವೆ ಒಮ್ಮೆಯಾದರೂ ಹುಟ್ಟಿರಬೇಕು ಎದೆಯೊಳಗೆ ಬೇಡ ಎನ್ನುವ ಭಾವ ತಿಳಿಯಬಹುದು ಹೊಗೆಯಾಡಿತೆಂದರೆ ನಿಡುಸುಯ್ಯುತ್ತಿದೆ ಸಣ್ಣ ಕಿಡಿಯೊಂದು ಒಳಗಿನ ಮಸುಕಿನಲಿ

ಗೆಜ್ಜೆಯ ರಿಂಗಣವೂ ಬೇಸರ ನಟುವರನಿಗೆ ಮದ್ದಳೆಯ ಮಿಡಿತವೂ ಇಷ್ಟವಾಗುವುದಿಲ್ಲ ಲಿಂಗಪೂಜೆಗೆ ಮನವೂ ನಿಲದಿರೆ ಹೊರನಡೆಯುವುದೊಂದೇ ದಾರಿ

ದೂರವಾಗುವುದಾದರೆ ಹೇಳಬೇಕು ಒಂದಲ್ಲ ಒಂದು ಕಾರಣ ಮಾತಿಗೆ ಮಾತು ಪೋಣಿಸಿ ಹೆಣ್ತನವ ಅಂಜಿಸಬೇಕು ಹೀಗಳೆದು ತೆಗಳಬೇಕು ಹೀಯಾಳಿಸಿದರೆ ಜಾರಿಣಿಯೆಂದು ಸೊಲ್ಲೆತ್ತುವುದಿಲ್ಲ ಬಳ್ಳಿಗಾವೆಯತ್ತ ಹೆಜ್ಜೆಯಿಡಲು

ತಡೆದೆ, ಗೋಗರೆದೆ,ಪಾದಕ್ಕೆರಗಿ ಬೇಡಿಕೊಂಡೆ ಅಗಲುವ ಮಾತು ಬೇಡವೆಂದು ನಿಂತ ಶಾಸ್ತ್ರ ಮಾಡಿ, ಒಲಿದ ನಾಟಕವಾಡಿ ಅದೋ ಅದೋ ಹೊರಟೆ ಹೋದ ಮಗುವಿನ ಕಣ್ತಪ್ಪಿಸಿ ಹೊರಟ ತಾಯಂತೆ

ದೂರದಲಿ ಶೂನ್ಯ ಸಿಂಹಾಸನವಿತ್ತು ತಲುಪಿದರೆ ಸಾಕು ಜನ ಎತ್ತಿ ಪೀಠದ ಮೇಲಿರಿಸಿ ಉಧೋಉಧೋ ಎನ್ನುವ ನಂಬಿಕೆಯಿತ್ತು ಧರ್ಮ ಸುಧಾರಣೆಯ ನೆಪದಲ್ಲಿ ಸ್ತ್ರೀ ಸಮಾನತೆಯ ತರುವ ಹುಸಿತನವಿತ್ತು ಶರಣೆಯರನ್ನೆಲ್ಲ ಸೇರಿಸಿ ಅಬಲೆಯರೆದುರು ಮೆರೆವ ಹಂಬಲವಿತ್ತು ಎಲ್ಲವನೂ ಪ್ರಶ್ನಿಸುವವ ಎದುರು ನಿಂತು ಉತ್ತರಿಸುವ ಮುಜುಗರ ತಪ್ಪಿಸಲು ಮಾಯಾ ಸರಪಳಿಯ ಕಳಚಿ ತುಚ್ಛಿಕರಿಸಿ ಹೊರಟವನ ಕಣ್ಣಲ್ಲಿ ಕುಣಿಯುತ್ತಿತ್ತು ಗೆದ್ದ ಅಹಂ ಇತ್ತ ಎಲ್ಲವನು ತೊರೆದ ನಾನು ನಿಜಾರ್ಥದಲಿ ಶರಣೆಯಾದೆ

*

ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com

*

ಡಾ. ಆರ್. ತಾರಿಣಿ ಶುಭದಾಯಿನಿ ಕವನಗಳು : Poetry: ಅವಿತಕವಿತೆ; ‘ತೊಂಬತ್ತಾದರೂ ಅಪ್ಪ ಸಾಯುತ್ತಿಲ್ಲ!’ ಆಸ್ತಿಗಾಗಿ ಕೋರ್ಟ್​ ಮೊರೆ ಹೋಗಿದ್ದ ಸೋಫೊಕ್ಲಿಸ್​ನ ಮಕ್ಕಳು

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್