Vaidehi’s Birthday: ‘ದೈನಿಕದ ದಾರದಲ್ಲಿ ಘಮಘಮಿಸುವ ಮಲ್ಲಿಗೆಯನ್ನೂ, ಪರಿಮಳವೇ ಇಲ್ಲದ ಅಬ್ಬಲಿಗೆಯನ್ನೂ ಕಟ್ಟುತ್ತಾರೆ’

|

Updated on: Feb 12, 2022 | 6:53 PM

U.R. Ananthamurthy : ಅಷ್ಟೇ ಸಾಹಿತ್ಯಿಕ ಮತ್ತು ಖಾಸಗಿಯಲ್ಲದ ಪ್ರಶ್ನೆ ಎಂದು ಭಾವಿಸಿದ್ದೇನೆ ಎಂದು ನಟಿಸುತ್ತಲೇ ಅನಂತಮೂರ್ತಿ ತಳ್ಳಿ ಹಾಕಿದರು; ‘ನನ್ನ ಆಪ್ತವಲಯಕ್ಕೆ ಬಂದ ಮಹಿಳೆಯರ ಪೈಕಿ ನಾನು ನನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಳ್ಳುತ್ತೇನೆ. ಅಂಥವರು ಯಾರೂ ನನ್ನ ಸಾಹಿತ್ಯಕ್ಕೆ ಸ್ಫೂರ್ತಿಯಾಗಲಿಲ್ಲ.’ ಜೋಗಿ

Vaidehi’s Birthday: ‘ದೈನಿಕದ ದಾರದಲ್ಲಿ ಘಮಘಮಿಸುವ ಮಲ್ಲಿಗೆಯನ್ನೂ, ಪರಿಮಳವೇ ಇಲ್ಲದ ಅಬ್ಬಲಿಗೆಯನ್ನೂ ಕಟ್ಟುತ್ತಾರೆ’
ಕಥೆಗಾರರಾದ ಜೋಗಿ ಮತ್ತು ವೈದೇಹಿ
Follow us on

ವೈದೇಹಿ | Vaidehi : ವೈದೇಹಿ ನವ್ಯದ ಅಬ್ಬರದಲ್ಲಿ ನಮ್ಮಿಂದ ಅನಪೇಕ್ಷಿತ ದೂರವೇ ಉಳಿದವರು. ನಾವು ಓದಲು ಶುರುಮಾಡಿದಾಗ ಲಂಕೇಶ್ ಪತ್ರಿಕೆಯಲ್ಲಿ ವೈದೇಹಿ ಬರೆಯುತ್ತಿದ್ದರು. ನಾವು ಲಂಕೇಶರನ್ನಷ್ಟೇ ಓದುತ್ತಿದ್ದೆವು. ಅವರ ಪ್ರಖರ ಚಿಂತನೆಯ ಬೆಳಕಲ್ಲಿ ಮಿಕ್ಕ ಬರಹಗಳು ಸಪ್ಪೆ ಅನ್ನಿಸುತ್ತಿದ್ದವು. ವಯಸ್ಸಾಗುತ್ತಿದ್ದ ಹಾಗೆಯೇ ಸರಳವಾಗಿ ಸಾಗುವ ಬರಹಗಳನ್ನು ನಿರುತ್ಸಾಹದಿಂದ ನಿರ್ಲಕ್ಷ್ಯ ಮಾಡಬಾರದು ಅನ್ನುವುದು ಹೊಳೆಯಿತು. ಆಮೇಲಾಮೇಲೆ ವೈದೇಹಿ ಬರಹಗಳಲ್ಲಿ ಆಪ್ತರಾದರು. ಸಾಕಷ್ಟು ಕಡೆ ಭೇಟಿಯೂ ಆದೆವು. ಟಿ. ಎನ್. ಸೀತಾರಾಮ್ ಸೀರಿಯಲ್ಲಿನ ಉಡುಪಿ ಸಂಭ್ರಮದಲ್ಲಿ, ಹೆಗ್ಗೋಡಿನ ವಾರ್ಷಿಕ ಶಿಬಿರಗಳಲ್ಲಿ, ಒಂದಷ್ಟು ಕಾರ್ಯಕ್ರಮಗಳಲ್ಲಿ, ಸಾಹಿತ್ಯ ಸಮ್ಮೇಳನಗಳಲ್ಲಿ ಕಂಡು ಮಾತಾಡಿದೆವು. ಆ ಕ್ಷಣಗಳನ್ನು ಗೆಳೆಯರು ಫೋಟೋದಲ್ಲೂ ದಾಖಲಿಸಿದರು. ಇಂದು ಅವರ ಜನ್ಮದಿನದ ಹೊತ್ತಿಗೆ ನೆನಪಿಸಿಕೊಳ್ಳಲು ನಾವಿಬ್ಬರೂ ಜತೆಗಿರುವ ಒಂದಾದರೂ ಫೋಟೋ ಸಿಕ್ಕೀತೇನೋ ಎಂದು ಹುಡುಕಾಡಿದೆ. ನನ್ನ ಸಂಗ್ರಹ ಬರಿದಾಯಿತೇ ಹೊರತು ಫೋಟೋ ಸಿಗಲಿಲ್ಲ. ಹುಡುಕಿದಾಗ ಸಿಗದೇ ಇರುವುದು ಕವಿತೆಯ ಗುಣ. 

ಜೋಗಿ, ಕಥೆಗಾರ, ಪತ್ರಕರ್ತ (Girish Rao Hatwar)

*

(ಭಾಗ 1)

‘ನೀವು ನನ್ನ ಬಗ್ಗೆ ನಿಮ್ಮ ಭಾಷಣದಲ್ಲಿ ಏನೂ ಹೇಳಲೇ ಇಲ್ಲ’

ಇಂಥದ್ದೊಂದು ಪ್ರಶ್ನೆಯನ್ನು ತುಮಕೂರು ಕನ್ನಡ ಸಾಹಿತ್ಯ ಸಮ್ಮೇಳನದ ಸಂವಾದದಲ್ಲಿ ವೈದೇಹಿ ಅತ್ಯಂತ ನಾಜೂಕಾಗಿ, ತನ್ನ ಪ್ರಶ್ನೆಯೇ ಅದಲ್ಲವೆಂಬ ಸೂಕ್ಷ್ಮದಲ್ಲಿ, ಅನಂತಮೂರ್ತಿಯವರ ಮುಂದಿಟ್ಟದ್ದು ನಿಜ. ಅದನ್ನು ಅಷ್ಟೇ ಸಾಹಿತ್ಯಿಕ ಮತ್ತು ಖಾಸಗಿಯಲ್ಲದ ಪ್ರಶ್ನೆ ಎಂದು ಭಾವಿಸಿದ್ದೇನೆ ಎಂದು ನಟಿಸುತ್ತಲೇ ಅನಂತಮೂರ್ತಿ ತಳ್ಳಿ ಹಾಕಿದರು; ‘ನನ್ನ ಆಪ್ತವಲಯಕ್ಕೆ ಬಂದ ಮಹಿಳೆಯರ ಪೈಕಿ ನಾನು ನನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಳ್ಳುತ್ತೇನೆ. ಅಂಥವರು ಯಾರೂ ನನ್ನ ಸಾಹಿತ್ಯಕ್ಕೆ ಸ್ಫೂರ್ತಿಯಾಗಲಿಲ್ಲ.’

ವೈದೇಹಿ ಕೇಳಿದ ಪ್ರಶ್ನೆ ಅವರ ಸ್ವಾಭಿಮಾನಕ್ಕೆ ಸಾಕ್ಷಿ ಎಂದು ನೀವು ಕರೆಯಬಹುದು. ಅದೇ ಸ್ವಾಭಿಮಾನ ಒಂದು ಗುಲಗಂಜಿ ತೂಕ ಹೆಚ್ಚಿಸಿಕೊಂಡರೆ ದುರಹಂಕಾರವೂ ಆಗುತ್ತದೆ ಎಂದು ಸ್ವತಃ ವೈದೇಹಿಯವರಿಗೂ ಗೊತ್ತಿದ್ದೀತು. ಆರಂಭದ ದಿನಗಳಲ್ಲಿ ಕೇವಲ ಲೇಖಕಿಯಾಗಿದ್ದ, ತನ್ನ ಸಹಜ ನಿಲುವುಗಳಲ್ಲಿ ಪ್ರಕಟಗೊಳ್ಳುತ್ತಿದ್ದ ವೈದೇಹಿ ಕ್ರಮೇಣ ಮಹಿಳಾವಾದಿಯಂತೆಯೂ ಕೆಲವರಿಗೆ ಕಾಣಿಸತೊಡಗಿದರು. ಹಾಗೆ ಕಾಣಿಸಿಕೊಳ್ಳದೇ ಹೋದರೆ ಅವರ ವ್ಯಕ್ತಿತ್ವದಲ್ಲೇ ಏನೋ ಕುಂದು ಇದೆ ಎಂಬಂತೆ ಮಹಿಳಾ ವಿಮರ್ಶಕಿಯರು ಭಾವಿಸಿದಂತಿತ್ತು.

ಅವೆಲ್ಲವನ್ನೂ ಬದಿಗಿಟ್ಟು ಗಮನಿಸಿದರೆ, ಅಪಾರ ಶ್ರದ್ಧೆ ಮತ್ತು ಸಹನೆಯಿಂದ ಓದಿದರೆ ವೈದೇಹಿ ಇಷ್ಟವಾಗುತ್ತಾರೆ. ಆಕೆ ತಮ್ಮ ಶೈಲಿಯಲ್ಲಿ ಶಿವರಾಮ ಕಾರಂತರಂಥವರು. ತುಂಬ ಸಪೂರ ಅನುಭವಗಳನ್ನು ಅಷ್ಟೇ ಸಪೂರವಾಗಿ ಹೇಳುವುದರಲ್ಲಿ ಗಟ್ಟಿಗಿತ್ತಿ. ತಮಗನ್ನಿಸಿದ್ದನ್ನು ಹೇಳುವುದಕ್ಕೆ ತಕ್ಕ ಭಾಷೆಯನ್ನು ಆಕೆ ಆರಿಸಿಕೊಳ್ಳುವುದಿಲ್ಲ. ಬದಲಾಗಿ ತನ್ನ ಮುಂದಿರುವ ಅಕ್ಷರಗಳನ್ನೇ ಹೆಕ್ಕಿಕೊಂಡು ಅನ್ನಿಸಿದ್ದಕ್ಕೆ ಆಕಾರ ಕೊಡುವುದಕ್ಕೆ ಯತ್ನಿಸುತ್ತಾರೆ. ದೈನಿಕದ ದಾರದಲ್ಲಿ ಘಮಘಮಿಸುವ ಮಲ್ಲಿಗೆಯನ್ನೂ, ಪರಿಮಳವೇ ಇಲ್ಲದ ಅಬ್ಬಲಿಗೆಯನ್ನೂ ಕಟ್ಟುತ್ತಾರೆ.

ಇದನ್ನೂ ಓದಿ : Vaidehi‘s Birthday: ವೈದೇಹಿಯವರ ‘ಅಕ್ಕು’ ಚಂಪಾ ಶೆಟ್ಟಿಯವರೊಂದಿಗೆ ರಂಗದ ಮೇಲೆ ಬಂದಿದ್ದು ಹೀಗೆ

 

ಸಾಹಿತಿ ಯು ಆರ್. ಅನಂತಮೂರ್ತಿಯವರೊಂದಿಗೆ ಸಂವಾದದಲ್ಲಿ ವೈದೇಹಿ

ಪಿ. ಲಂಕೇಶರ ‘ವಿನಾಕಾರಣ’ರ ಪಟ್ಟಿಯಿಂದ ಹೊರಗುಳಿದು ನಿಜಕ್ಕೂ ಚೆನ್ನಾಗಿ ಬರೆದು ದಕ್ಕಿಸಿಕೊಂಡವರು ವೈದೇಹಿ. ಕಾವ್ಯ, ಕತೆ, ಪ್ರಬಂಧ ಹೀಗೆ ತನ್ನ ಸಹಜ ಅಭಿವ್ಯಕ್ತಿ ಮತ್ತು ಲಹರಿಗಳಲ್ಲಿ ಬರೆಯುತ್ತಾ ಬರೆಯುತ್ತಾ ವೈದೇಹಿ ತನ್ನನ್ನೂ ಮೀರಿ ಬೆಳೆದುಬಿಟ್ಟರು. ‘ಬಿಂದು ಬಿಂದಿಗೆ’ ಕವನ ಸಂಕಲನದಲ್ಲಿ, ಮರಗಿಡಬಳ್ಳಿ, ‘ಗೋಲ’ ಮುಂತಾದ ಕತೆಗಳಲ್ಲಿ, ಅಂತರಂಗದ ಪುಟಗಳಲ್ಲಿ, ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗಳಲ್ಲಿ, ಬರೆದ ಒಂದೇ ಒಂದು ಕಾದಂಬರಿಯಲ್ಲಿ, ‘ಮಲ್ಲಿನಾಥನ ಧ್ಯಾನ’ದಲ್ಲಿ, ‘ಜಾತ್ರೆಯ ಏಕಾಂತ’ದಲ್ಲಿ ವೈದೇಹಿ ತಾನೇ ತಾನಾಗಿ ಕಾಣಿಸಿಕೊಂಡರು. ಕ್ರಮೇಣ ಲಂಕೇಶರ ಪ್ರಭಾವ, ಪ್ರಭಾವಳಿ ಎರಡನ್ನೂ ಬಿಟ್ಟು ಸ್ವಂತವಾಗಿ ಬದುಕುವುದನ್ನು ಕಲಿತವರಂತೆ ಬರೆಯತೊಡಗಿದರು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Vaidehi‘s Birthday: ವಾರದೊಳಗೆ ‘ಅಕ್ಕು’ವಿಗೆ ಕುಂದಾಪುರ ಭಾಷೆಯಲ್ಲಿ ವೈದೇಹಿ ಸಂಭಾಷಣೆ ರಚಿಸಿದರು

Published On - 6:48 pm, Sat, 12 February 22