Vaidehi‘s Birthday: ವಾರದೊಳಗೆ ‘ಅಕ್ಕು’ವಿಗೆ ಕುಂದಾಪುರ ಭಾಷೆಯಲ್ಲಿ ವೈದೇಹಿ ಸಂಭಾಷಣೆ ರಚಿಸಿದರು
Champa Shetty : ಕಥೆಗಾರರು ನಾಟಕ ನೋಡಲೇಬಾರದು, ನಿರ್ದೇಶಕರಿಗೆ ತೊಂದರೆ, ಹಾಗಾಗಿ ನನ್ನನ್ನು ಕರೆಯಬೇಡ ಎಂದು ಪ್ರೀತಿಯಿಂದಲೇ ಬರುವುದಿಲ್ಲವೆಂದಿದ್ದ ವೈದೇಹಿಯವರು, ಮುಂದೆ ರಂಗಶಂಕರದಲ್ಲಿ ತಮ್ಮ ಖರ್ಚಿನಿಂದಲೇ ವಿಮಾನದಲ್ಲಿ ಬೆಂಗಳೂರಿಗೆ ಬಂದು ಒಂದೇ ದಿನ ಎರಡು ಪ್ರದರ್ಶನ ವೀಕ್ಷಿಸಿದ್ದರು.’ ಚಂಪಾ ಶೆಟ್ಟಿ
ವೈದೇಹಿ | Vaidehi : ಒಂದು ನಾಟಕದಲ್ಲಿ ಶುದ್ಧ ಕುಂದಾಪುರ ಭಾಷೆ ಬಳಸಬೇಕು. ಇನ್ನೊಂದು ನಾಟಕ ನೋಡಲು ಅವರನ್ನು ಕರೆಯಬಾರದು ಎಂದು. ಇವೆರಡೂ ಅವರ ಷರತ್ತುಗಳಾಗಿದ್ದವು. ಅದಕ್ಕೆ ಒಪ್ಪಿದೆ. ಕುಂದಾಪುರ ಭಾಷೆಯಲ್ಲಿ ನೀವೇ ಸಂಭಾಷಣೆ ಬರೆದು ಕೊಡುತ್ತೀರಾ ಎಂದು ಆತಂಕದಲ್ಲಿಯೇ ಕೇಳಿದ ನನಗೆ ಪ್ರೀತಿಯಿಂದಲೇ ಒಪ್ಪಿಗೆ ಸೂಚಿಸಿದರು ವೈದೇಹಿ. ‘ಅಕ್ಕು’ ರಂಗದ ಮೇಲೆ ಬರಲು ತಯಾರಿ ಭರದಿಂದ ಸಾಗಿತು. ಆದರೆ ಆ ಕಥೆ ಕೆಲವು ಘಟನಾವಳಿಗಳನ್ನೊಳಗೊಂಡಿದ್ದರಿಂದ ಅದನ್ನು ನಾಟಕವಾಗಿಸುವುದು ಹೇಗೆ? ಎಂಬ ಪ್ರಶ್ನೆ ಕಾಡಿತು. ಅದಕ್ಕೆ ಹಿನ್ನೆಲೆ ಅಥವಾ ಮುನ್ನೆಲೆ ಸೇರಿದರೆ ಎಂಬ ಆಲೋಚನೆ ಬಂದಿತು. ಹಾಗೆ ಮಾಡಿದರೆ ನಿಜಕ್ಕೂ ಅಕ್ಕುವನ್ನು ಹಾಳುಗೆಡವುತ್ತೇನೆ ಎಂದೂ ಅನ್ನಿಸಿತು. ನನ್ನ ಯಾವ ಕಲ್ಪನೆಗಳನ್ನೂ ಸೇರಿಸದೆ ಕತೆಯನ್ನು ಇದ್ದ ಹಾಗೇ ತರಬೇಕೆಂಬ ಹಟದಲ್ಲಿ ಯೋಚಿಸಿದಾಗ ನನಗೆ ಹೊಳೆದದ್ದು ಅಕ್ಕು, ಜೊತೆ ಅಂತಹುದೇ ಅದ್ಭುತ ಪಾತ್ರಗಳಾದ ಪುಟ್ಟಮ್ಮತ್ತೆ ಮತ್ತು ಅಮ್ಮಚ್ಚಿ. ಹಾಗಾಗಿ ಈ ಮೂರು ಕಥೆಗಳನ್ನು ಸೇರಿಸಿ ಚಿತ್ರಕಥೆ ಸಿದ್ಧಪಡಿಸಿಕೊಂಡು ಮತ್ತೆ ಮಣಿಪಾಲ್ಗೆ ಹೊರಟೆ.
ಚಂಪಾ ಶೆಟ್ಟಿ, ರಂಗಕಲಾವಿದೆ, ನಿರ್ದೇಶಕಿ
(ಭಾಗ 2)
ಚಿತ್ರಕಥೆ ನೋಡಿ ವೈದೇಹಿ ಏನನ್ನುವರೋ ಎಂಬ ದೊಡ್ಡ ಆತಂಕದಲ್ಲಿಯೇ ಗೀತಾ ಮತ್ತು ನಾನು ವೈದೇಹಿಯವರ ಮನೆ ಮುಟ್ಟಿದೆವು. ಆದರೆ ಚಿತ್ರಕತೆ ನನ್ನಿಂದಲೇ ಓದಿ ಕೇಳಿ ಇಷ್ಟಪಟ್ಟು ವಾರದೊಳಗೆ ಸಂಭಾಷಣೆಯನ್ನೂ ಬರೆದು ಅದ್ಭುತವಾದ ನಾಟಕ ರಚಿಸಿಕೊಟ್ಟದ್ದು ಮರೆಯಲಾಗದ ಘಟನೆ!
ನಾಟಕ ಸಿದ್ಧಗೊಂಡಿತು. ಮೊದಲ ಪ್ರದರ್ಶನವೇ ಅಪಾರ ಜನಮೆಚ್ಚುಗೆ ಗಳಿಸಿದರೂ ನನಗೆ ಎರಡು ದೊಡ್ಡ ಬೇಸರದ ಸಂಗತಿಗಳು ಘಟಿಸಿದವು. ಒಂದು ಮೊದಲ ಪ್ರದರ್ಶನದ ಹಿಂದಿನ ದಿನವೇ ನನ್ನ ‘ಅಮ್ಮ’ ನನ್ನು ಕಳೆದುಕೊಂಡದ್ದು. ಮತ್ತೊಂದು ಷರತ್ತಿನಂತೆ ವೈದೇಹಿಯವರು ಮೊದಲ ಪ್ರದರ್ಶನಕ್ಕೆ ಬಾರದೆ ಇದ್ದದ್ದು. ಆದರೆ ಆ ಬೇಸರ ದೂರವಾದದ್ದು ಮುಂದೆ ಮುಂಬೈ ಕನ್ನಡ ಸಂಘದಲ್ಲಿ ಮೂರನೆಯ ಪ್ರದರ್ಶನವಾದಾಗ, ಅಲ್ಲಿ ಅತಿಥಿಯಾಗಿದ್ದ ವೈದೇಹಿಯವರು ಅನಿವಾರ್ಯವಾಗಿ ನಾಟಕ ನೋಡಿದಾಗ. ನಾಟಕದ ಪ್ರದರ್ಶನದ ನಂತರ ನನ್ನನ್ನು ಆಲಂಗಿಸಿ, ವೈದೇಹಿಯವರು ಕಣ್ತುಂಬಿ ಹೇಳಿದ ಮೆಚ್ಚುಗೆಯ ಮಾತುಗಳಿಂದ ನನ್ನ ಕಣ್ಣುಗಳೂ ತುಂಬಿದ್ದವು. ಕತೆಗಾರರು ನಾಟಕ ನೋಡಲೇಬಾರದು, ನಿರ್ದೇಶಕರಿಗೆ ತೊಂದರೆ, ಹಾಗಾಗಿ ನನ್ನನ್ನು ಕರೆಯಬೇಡ ಎಂದು ಪ್ರೀತಿಯಿಂದಲೇ ನಾಟಕಕ್ಕೆ ಬರುವುದಿಲ್ಲವೆಂದಿದ್ದ ವೈದೇಹಿಯವರು ಮುಂದೆ ರಂಗಶಂಕರದಲ್ಲಿ ನೀವು ನಾಟಕ ನೋಡಬೇಕು ಎಂಬ ನನ್ನ ಆಸೆಗೆ ತಮ್ಮ ಖರ್ಚಿನಿಂದಲೇ ವಿಮಾನದಲ್ಲಿ ಬೆಂಗಳೂರಿಗೆ ಬಂದು ಒಂದೇ ದಿನ ಎರಡು ಪ್ರದರ್ಶನ ವೀಕ್ಷಿಸಿದ್ದು ನಮ್ಮ “ರಂಗ ಮಂಟಪ” ತಂಡದ ಪುಣ್ಯ.
ಇದನ್ನೂ ಓದಿ : Vaidehi‘s Birthday : ವೈದೇಹಿ ಎಂಬ ‘ಇರುವಂತಿಗೆ’ ಅರಳಿದ ಕಥೆ ಇಲ್ಲಿದೆ, ಓದಿ ಸವಿತಾ ನಾಗಭೂಷಣ ಬರಹ
ನನ್ನ ಕಿರಿದಾದ ಅನುಭವದಲ್ಲಿ ನಾನು ನಿರ್ದೇಶಿಸಿದ್ದ ನಾಟಕವನ್ನು ಮೆಚ್ಚಿ ಬೆನ್ನು ತಟ್ಟಿದ್ದು ಪ್ರೋತ್ಸಾಹಿಸಿದ್ದು ವೈದೇಹಿಯವರ ಹಿರಿತನ. ಅವರ ಆ ನಿರಂತರ ಪ್ರೋತ್ಸಾಹದಿಂದಲೇ ಅಕ್ಕು 49 ಯಶಸ್ವಿ ಪ್ರದರ್ಶನಗಳನ್ನು ಕಂಡು 50 ಕ್ಕೆ ಕಾಲಿಟ್ಟಿದ್ದಾಳೆ. ಇದೇ ಪ್ರೋತ್ಸಾಹದಿಂದಲೇ ನಾನು ಅಮ್ಮಚ್ಚಿಯನ್ನು ಬೆಳ್ಳಿತೆರೆಗೆ ತರುವ ದೊಡ್ಡ ಸಾಹಸಕ್ಕೆ ಕೈಹಾಕಿದೆ.
(ಮುಗಿಯಿತು)
ಭಾಗ 1 : Vaidehi‘s Birthday: ವೈದೇಹಿಯವರ ‘ಅಕ್ಕು’ ಚಂಪಾ ಶೆಟ್ಟಿಯವರೊಂದಿಗೆ ರಂಗದ ಮೇಲೆ ಬಂದಿದ್ದು ಹೀಗೆ