Vaidehi’s Birthday: ‘ನಮ್ಮ ಬದುಕಿಗಿಂತ ದೊಡ್ಡ ಓದು ಬೇಕೇ ಹೇಳು, ಅದೆಷ್ಟು ಪಾತ್ರಗಳು ನಮ್ಮೆದುರು ಹಾದು ಹೋಗುತ್ತವೆ!’

|

Updated on: Feb 12, 2022 | 9:12 PM

Gulabi Talkies : ‘ವೈದೇಹಿಯವರ ಕಥೆ "ಗುಲಾಬಿ ಟಾಕೀಸ್" ಸಿನೆಮಾ ಆದಾಗ ಅದರಲ್ಲಿ ನಾನೊಂದು ಪಾತ್ರ ಮಾಡಿದ್ದೆ. ಆ ಚಿತ್ರೀಕರಣ ಸ್ಥಳಕ್ಕೆ ಬಂದ ಅವರನ್ನು ಬಹಳ ಕಾಳಜಿಯಿಂದ ಕಾಸರವಳ್ಳಿಯವರು ಮಾತನಾಡಿಸುತ್ತಿದ್ದುದು, ಸಿನೆಮಾ ಕಥೆಯ ಬಗ್ಗೆ ಚರ್ಚೆ, ಉದ್ದಕ್ಕೂ ಮಗುವಿನ ಮುಗ್ದತೆ, ವಿಷಯದ ಬಗ್ಗೆ ಪ್ರೌಢಿಮೆ, ಇವುಗಳನ್ನು ಸೋಜಿಗತುಂಬಿ ದೂರದಿಂದ ದಿಟ್ಟಿಸುತ್ತಿದ್ದೆ’ ಪೂರ್ಣಿಮಾ ಸುರೇಶ್

Vaidehi’s Birthday: ‘ನಮ್ಮ ಬದುಕಿಗಿಂತ ದೊಡ್ಡ ಓದು ಬೇಕೇ ಹೇಳು, ಅದೆಷ್ಟು ಪಾತ್ರಗಳು ನಮ್ಮೆದುರು ಹಾದು ಹೋಗುತ್ತವೆ!’
ವೈದೇಹಿಯವರೊಂದಿಗೆ ಪೂರ್ಣಿಮಾ ಸುರೇಶ್
Follow us on

ವೈದೇಹಿ | Vaidehi :  ನನ್ನ ಗದ್ಯ ಬರಹ ಕವನಗಳ ಬಗ್ಗೆ ಹಿರಿಯರೊಬ್ಬರು ಮಾತನಾಡುತ್ತ ಬರಹಗಾರನಿಗೆ ಅಗತ್ಯವಾದ ಓದಿನ ಬಗ್ಗೆ ಹೇಳಿದ್ದರು. ಜೊತೆಜೊತೆಗೆ ಮಿಲ್ಟನ್, ವರ್ಡ್ಸವರ್ತ್ ಮುಂತಾದವರನ್ನು ಓದಬೇಕು. ಓದಿನ ಹರವು ಹೆಚ್ಚಿದಂತೆ ಹೊಸಹೊಸ ಕಲ್ಪನೆಗಳು ಸೃಜಿಸಿ ಬರವಣಿಗೆಗೆ ಗಟ್ಟಿತನ ಒದಗುತ್ತದೆ ಎಂದಿದ್ದರು. ಅದನ್ನು ಹಂಚಿಕೊಂಡಾಗ, ವೈದೇಹಿಯವರು “ಇರಬಹುದು, ಅಲ್ಲಗಳೆಯಲಾರೆ‌. ಆದರೆ ನಮ್ಮ ಬದುಕಿಗಿಂತ ದೊಡ್ಡ ಓದು ಬೇಕೇ ಹೇಳು. ಅದೆಷ್ಟು ಪಾತ್ರಗಳು ನಮ್ಮೆದುರು ಹಾದು ಹೋಗುತ್ತವೆ, ಹೊಸಹೊಸ ಕಥೆಗಳು, ಕವನ, ಗದ್ಯ ಪದ್ಯ ಎಲ್ಲವೂ ನಮ್ಮ ಸುತ್ತಲೂ ಇದೆ ಕಣೆ. ಅದನ್ನು ನೋಡುವುದು ಕಲಿಯಬೇಕು. ಆ ಪಾತ್ರಗಳನ್ನು ಓದುವ ಸಂವೇದನೆ ನಮ್ಮೊಳಗೆ ಬರಬೇಕು. ಮಸೂರದೊಳಗೆ ಕಣ್ಣಿಟ್ಟು ಬೆಂಕಿ ಹುಟ್ಟಿಸಬೇಕು. ಸಾಹಿತ್ಯವೆಂದರೆ ಮರುಸೃಷ್ಟಿ. ನಾನು ಬರೆದಿರುವುದು ನನ್ನ ಬದುಕಿನಲ್ಲಿ ಕಂಡ, ಮಾತನಾಡಿಸಿದ ಪಾತ್ರಗಳನ್ನೇ, ಅದಕ್ಕೆ ಒಂದಿಷ್ಟು ಕಲೆಯ ಸ್ಪರ್ಶ. ಇಲ್ಲವಾದರೆ ಅದು ಕೇವಲ ವರದಿಯಾಗಿಬಿಡುತ್ತದೆ. ನಮಗೆ ಹೆಂಗಸರಿಗಂತೂ ವಿಷಯಗಳಿಗೆ ಬರ ಇದೆಯೇ? ನಾವು ಈ ಗಂಡಸರ ತರಹ ಗುಮ್ಮಂತ ಕೂತಿರುವುದುಂಟೆ? ಅದೆಷ್ಟು ಮಾತು. ಸೀರೆ, ಬಳೆ, ಅಡುಗೆ…’’ ಹೀಗೆಂದಿದ್ದರು ವೈದೇಹಿ.

ಪೂರ್ಣಿಮಾ ಸುರೇಶ್, ಕವಿ, ರಂಗಕಲಾವಿದೆ (Poornima Suresh)

*

(ಭಾಗ 2)

‘‘ನಮ್ಮದು ಕೂಡುಕುಟುಂಬ. ಒಂದು ಸಮಾರಂಭ, ಮದುವೆ, ಮುಂಜಿ ಅಂದರೆ ಅಷ್ಟೂ ಜನ ಹೆಂಗಸರು ಒಂದು ಕಡೆ ಸೇರಿ ಮಾತು. ಅದೆಂತ ಸೀರೆ, ಇದು ಅವಳಿಗೆ ಕೊಟ್ಟದ್ದು ನೋಡಿದೆಯಾ ಅದರಲ್ಲಿ ಹೂವಿತ್ತು, ಇದೆಂತ… ಅದಕ್ಕೆ ಎಷ್ಟು, ಅತ್ತೆಯ ತಂಗಿ ಕೊಟ್ಟದ್ದು ಇದರ ಹಿಂದೆ ಕಥೆಯಿದೆ. ಶುರು.. ಕಥೆಗಾರರಿಗೆ ಇದೆಲ್ಲ ಕಥಾಮಾಲಿಕೆ. ಇಂತಹುದು ಸಾವಿರ ಸಾವಿರ. ನಾನು ನನ್ನ ಬದುಕಿನ ಅರ್ಧದಷ್ಟು ಇನ್ನೂ ಬರೆದಾಗಿಲ್ಲ. ನಿನ್ನ ಅನುಭವಗಳು ಕಡಿಮೆ ಇಲ್ಲ. ಬರಿ… ಜಗತ್ತಿನ ಎಲ್ಲವೂ ನಮ್ಮ ಅಂಗಳದಲ್ಲೇ ಇದೆ.’’ ಹೀಗೆನ್ನುತ್ತ ಹುರಿದುಂಬಿಸುವುದು ವೈದೇಹಿಯವರ ಸಹಜ ಸ್ವಭಾವ.

“ಯಾವ ಮನಸ್ಸು ಋಣಾತ್ಮಕ ವಿಚಾರಗಳನ್ನೇ ತುಂಬಿರುತ್ತದೆಯೋ ಅದನ್ನು ಸರಿ ಮಾಡಲಾಗದಿದ್ದಾಗ ಹಿಂದೆ ಸರಿಯಬೇಕು. ಬೇಡದ ಕಸಕಡ್ಡಿ ತುಂಬಿದಾಗ ಸ್ವಚ್ಛಗೊಳಿಸುವುದು ಕಷ್ಟ” ಹೀಗೆನ್ನುವ ಅವರು ಬದುಕಿನ ಪ್ರತೀ ನೋವು ನಲಿವುಗಳನ್ನು ಅನುಭವವಾಗಿಸಿ ಅಕ್ಷರಕ್ಕಿಳಿಸುವ ಜಾದೂಗಾರರು.

ಇದನ್ನೂ ಓದಿ : Vaidehi‘s Birthday: ವಾರದೊಳಗೆ ‘ಅಕ್ಕು’ವಿಗೆ ಕುಂದಾಪುರ ಭಾಷೆಯಲ್ಲಿ ವೈದೇಹಿ ಸಂಭಾಷಣೆ ರಚಿಸಿದರು

ವೈದೇಹಿಯವರಲ್ಲಿ ನಾನು ಅತ್ಯಂತ ತೀವೃವಾಗಿ ಅನುಭವಿಸಿದ ಭಾವ… ಆ ಮಾತೃತ್ವ. ಪ್ರೀತಿಗೆ ಕರಗುವ ಮನಸ್ಸು. ಜೊತೆಗೆ ಸ್ವಾಭಿಮಾನ. ಗಂಡ, ಮನೆ, ಮಕ್ಕಳು, ಸಂಸಾರ ಎಲ್ಲವನ್ನೂ ಪ್ರೀತಿಯಿಂದ ಪ್ರೀತಿಸುವ ಆ ರೀತಿ ಅನನ್ಯ. ಅವರದ್ದು ಮನೆ ಇರುವಂತಿಗೆ ಬರೀ ಮನೆಯಲ್ಲ. ಅಲ್ಲಿನ ಕಣಕಣದಲ್ಲೂ ಜೀವಂತಿಕೆ. ಅವರ ಸೃಜನಶೀಲತೆ, ಪ್ರತಿಭೆ, ಸೂಕ್ಷ್ಮಭಾವಗಳ ಪಾಕ ಎಳೆಎಳೆಗಳು ಮೃದುವಾಗಿ ನಮ್ಮನ್ನು ಸ್ಪರ್ಶಿಸುತ್ತದೆ. ಮನೆಯೆದುರಿನ ಮಾವಿನ ಮರ, ತೆಂಗಿನಮರ, ಹೂಗಿಡ… ಜಾಜಿ, ಬೆಕ್ಕು, ಮನೆಗೆಲಸಕ್ಕೆ ಬರುವ ಹೆಣ್ಮಗಳು ಎಲ್ಲರೊಡನೆ ಆಪ್ತತೆಯಿಂದ ಸಂಭಾಷಿಸಬಲ್ಲರು. ಅಲ್ಲಿನ ನೋವು ನಲಿವು ತನ್ನದಾಗಿಸಬಲ್ಲರು. ತಾನೇ ಆಗಿ ಅನುಭವಿಸಬಲ್ಲರು. ಅದಕ್ಕೇ ಅವರ ಅಂಗಳದ ಮಾವಿನ ಮರ ತನ್ನ ಮೈತುಂಬ ಹೂವು, ಮಿಡಿಕಾಯಿ, ಹಣ್ಣು ಧರಿಸಿ ಹೆಣ್ಣಾಗಿ ಪರಿಮಳಿಸಿ ಅವರ ಜೊತೆ ಸಂಭಾಷಿಸುತ್ತದೆ. ಅವರು ತೆಳ್ಳನೆ ಕೋಲು ಹಿಡಿದು ಎಲೆಗೂ ಪೆಟ್ಟಾದಿತೇನೋ ಎಂಬ ಎಚ್ಚರದಿಂದ ಹಣ್ಣು ಉದುರಿಸಿ ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ.

” ಸಿಹಿ ಹಣ್ಣು. ಇಷ್ಟು ಸಿಹಿ ಎಲ್ಲೂ ಸಿಗಲಿಕ್ಕಿಲ್ಲ. ಬಹಳ ಒಳ್ಳೆಯವಳು. ಎಷ್ಟು ಪ್ರೀತಿಯಿಂದ ಹಣ್ಣು ಕೊಡ್ತಾಳೆ ನೋಡು” ಎಂದು ತನ್ನ ಪುರಾತನ ಗೆಳತಿಯ ಬಗ್ಗೆ ಹೇಳುವಂತೆ ವಿವರಿಸುತ್ತಾರೆ.

ತನ್ನ ವರ್ತುಲದೊಳಗೆ ಬಂದ ಪ್ರತಿಯೊಂದನ್ನೂ ಅತ್ಯಂತ ಆರ್ತಿಯಿಂದ ಒಪ್ಪಿಕೊಂಡು ಪ್ರೀತಿಸುವ ಸಿರಿ ಮನಸ್ಸು ಅವರದ್ದು. ಅವರಿಂದ ಒಂದಿಷ್ಟು ಭಾವ ಶ್ರೀಮಂತಿಕೆ ಕಲಿಯುವ ವಿದ್ಯಾರ್ಥಿನಿ ನಾನು. ಈ ಸಂವೇದನೆಯ ಮನಸ್ಸು ಇರುವುದರಿಂದಲೇ ಅವರ ಬರವಣಿಗೆಯಲ್ಲಿ, ಸಂಬಂಧಗಳ ನಿರೂಪಣೆಯಲ್ಲಿ ಆ ಸೂಕ್ಷ್ಮತೆ.

ಅರೆಗಳಿಗೆಯನ್ನೂ ಕ್ಷೀಣಿಸಲು ಬಿಡದ, ನಿರಂತರ ಚಟುಚಟಿಕೆಯ ಆತ್ಮೀಯ ವೈದೇಹಿ ಅಮ್ಮನಿಗೆ ಜನುಮದಿನದ ಶುಭಾಶಯಗಳು.

(ಮುಗಿಯಿತು)

ಭಾಗ 1 : Vaidehi’s Birthday: ‘ಬರಹಗಾರರು ವಿಷಯಗಳ ಸೂಕ್ಷ್ಮನಾಡಿ ಮುಟ್ಟಿ ಜೀವಕಲೆಯಾಗಿಸಬೇಕು’ ವೈದೇಹಿ