Vaidehi’s Birthday: ‘ಕಾವ್ಯದ ಬಗ್ಗೆ ದೊಡ್ಡಕೆ ತಿಳಿದವರೇ ಹೇಳಿ, ಗೊತ್ತೇ ತಿಳಿಸಾರು ನಿಮಗೆ? ಕ್ಷಮಿಸಿ ಗೊತ್ತಿಲ್ಲ ಕಾವ್ಯ ನನಗೆ’
Kannada Writers : ‘ವೈದೇಹಿ ಅವರ ಕಾಲದ ಉಳಿದ ಲೇಖಕಿಯರಂತಲ್ಲ. ರೇಗಿಸುವುದಕ್ಕೋ, ಗರ್ಜಿಸುವುದಕ್ಕೋ, ಪರಚುವುದಕ್ಕೋ ಅವರು ಬರೆಯಲಿಲ್ಲ. ತನಗನ್ನಿಸಿದ್ದನ್ನು ತನ್ನ ನಿಶ್ಶಂಕೆಯಲ್ಲಿ ಮತ್ತು ಅನುಮಾನದಲ್ಲಿ ಹಾಡುವ ಹುಡುಗಿಯಂತೆ ಬರೆದರು. ತನ್ನ ಬರಹಕ್ಕೆ ತಾನೇ ಸುಳ್ಳಾಗುತ್ತಾ ಬದುಕಲಿಲ್ಲ. ತನ್ನ ಬದುಕಿಗೇ ತಾನೇ ಎರವಾಗುತ್ತಾ ಬರೆಯಲಿಲ್ಲ.’ ಜೋಗಿ
ವೈದೇಹಿ | Vaidehi: ಸರಳವಾಗಿ ಬರೆಯುವುದನ್ನು ನೀವು ಮೆಚ್ಚಿಕೊಂಡರೆ ನಿಮಗೆ ವೈದೇಹಿ ಇಷ್ಟವಾಗುತ್ತಾರೆ. ಸರಳತೆಯೊಳಗೂ ಕಾಣದೊಂದು ಕಾಣ್ಕೆ, ದೊರಕದೊಂದು ದರ್ಶನ ಇರಬೇಕಾಗುತ್ತದೆ. ಅದು ಪ್ರತಿಸಲವೂ ನಿಮಗೆ ವೈದೇಹಿಯವರ ಕಾವ್ಯದಲ್ಲೂ ಪ್ರಬಂಧದಲ್ಲೂ ಸಿಕ್ಕುತ್ತದೆ ಅನ್ನಲಾಗದು. ಅದಕ್ಕೇ ಹೇಳಿದ್ದು ಸಹನೆ ಮತ್ತು ಶ್ರದ್ಧೆಯಿಂದ ಓದಿದರೆ ಮಾತ್ರ ವೈದೇಹಿ ನಿಮಗೆ ದಕ್ಕಬಹುದು. ಅದಕ್ಕೆ ಕಾರಣ ಸಹಜ. ವೈದೇಹಿ ಅವರ ಕಾಲದ ಉಳಿದ ಲೇಖಕಿಯರಂತಲ್ಲ. ರೇಗಿಸುವುದಕ್ಕೋ, ಗರ್ಜಿಸುವುದಕ್ಕೋ, ಪರಚುವುದಕ್ಕೋ ಅವರು ಬರೆಯಲಿಲ್ಲ. ಅವರು ತನಗನ್ನಿಸಿದ್ದನ್ನು ತನ್ನ ನಿಶ್ಶಂಕೆಯಲ್ಲಿ ಮತ್ತು ಅನುಮಾನದಲ್ಲಿ ಹಾಡುವ ಹುಡುಗಿಯಂತೆ ಬರೆದರು. ತನ್ನ ಬರಹಕ್ಕೆ ತಾನೇ ಸುಳ್ಳಾಗುತ್ತಾ ಬದುಕಲಿಲ್ಲ. ತನ್ನ ಬದುಕಿಗೇ ತಾನೇ ಎರವಾಗುತ್ತಾ ಬರೆಯಲಿಲ್ಲ.
ಜೋಗಿ, ಕಥೆಗಾರ, ಪತ್ರಕರ್ತ (Girish Rao Hatwar)
*
(ಭಾಗ 2)
ವೈದೇಹಿಯವರ ಶಕ್ತಿ ಎಲ್ಲಿದೆ? ಅವರು ಎಲ್ಲಿಂದ ತಮ್ಮ ಬರಹಕ್ಕೆ ಬೇಕಾದ ಅನುಭವಗಳನ್ನು ಮೊಗೆದುಕೊಳ್ಳುತ್ತಾರೆ? ದಕ್ಷಿಣ ಕನ್ನಡದಂಥ ಊರಲ್ಲಿ, ಶ್ರಮದ ಜಗತ್ತಿನ ಬಾಗಿಲು ತೆರೆದುಕೊಳ್ಳದ ‘ಬ್ರಾಹ್ಮಣರ ಹುಡುಗಿ’ಗೆ ಕವಿತೆಗೆ ಬೇಕಾದ ದ್ರವ್ಯ ಮತ್ತು ಗದ್ಯಕ್ಕೆ ಬೇಕಾದ ಕಸುವು ದೊರೆತದ್ದಾದರೂ ಎಲ್ಲಿಂದ? ಅದನ್ನು ಹುಡುಕಬೇಕಾದರೆ ವೈದೇಹಿಯವರ ಕೃತಿ ಪ್ರವೇಶ ಮಾಡಬೇಕು :
‘ಹುಬ್ಬಿನಂಚಿನಲಿ ಬೆವರು ಮಣಿ ಸಾಲು
ಮಣಿ ಮಣಿಯ ಹೊಳಪಿನಲಿ
ಪೋಲಿ ವನಮಾಲಿ
ಮೋಡಿಗೆಡಹುವ ಕೊಳಲ ಕೊರಳು
ಬಿಡುವೆನೇ ನಾನು, ನಿನ್ನ ಮೊಮ್ಮಗಳು?’
(-ಗೆಳತಿಯ ಗುಟ್ಟು)
ಅರೆಬರೆದ ಕವನ ತೆವಳುತ್ತಲಿರಬಹುದು
ಮುಗಿಯಲಾರದ ಕತ್ತಲಲ್ಲಿ
ಒಂದು ಬಿಸುಸುಯ್ಯಲು ಕರವಸ್ತ್ರದಲಿ ಅಡಗಿ
ಗುಸುಗುಟ್ಟುತಿರಬಹುದು ಗಂಟಲಲ್ಲೇ.
ಮನಸಿನೊಳಗಡೆ ಎಂದೂ
ಇಣುಕಲಾರಿರಿ ನೀವು. ಹುಡುಕಿ
ತೆಗೆಯಲಾರಿರಿ ಏನನೂ….
(-ನೋಡಬಾರದು ಚೀಲದೊಳಗನು)
ವೈದೇಹಿಯ ನಿಜವಾದ ಹೆಸರು ಜಾನಕಿ ಹೆಬ್ಬಾರ್. ಅದೀಗ ಮರೆತುಹೋಗುವಷ್ಟರ ಮಟ್ಟಿಗೆ ಅವರು ವೈದೇಹಿಯಾಗಿದ್ದಾರೆ. ಕುಂದಾಪುರದ ದೇಸಿಕನ್ನಡದಲ್ಲೇ ಬರೆಯುತ್ತಾರೆ. ‘ಎಣ್ಣೆ ಕತಕತವೆಂದರೆ ಛಟ್ಟನೆ ಛಟಛಟವೆಂದು ಎದುರುತ್ತರವಿತ್ತು ಪಟಪಟ ಹೊಟ್ಟಿ ಪ್ರತಿಭಟಿಸುವ’ ಎನ್ನುವಾಗ ಯಕ್ಷಗಾನದ ಲಯವೂ ಕಾಣಿಸುತ್ತದೆ. ಶಿವನ ಮೀಸುವ ಹಾಡಿನಲ್ಲಿ ಅವರಿಗಿರುವ ಕಾವ್ಯದ ಅರಿವೂ ಕಾಣುತ್ತದೆ :
ಸಂಚಾರ ಮುಗಿಸಿ ಬರುವ ಈಶ್ವರ ಜೋಗಿ
ಗೌರಿ ಕರೆವಳು ಅವನ ಸ್ನಾನಕ್ಕಾಗಿ
ಮದ್ದಿನೆಣ್ಣೆಯ ಪೂಸಿ, ಬಿದ್ದ ಕಂಗಳ ಒರೆಸಿ
ಜ್ವರ ಹಿಡಿಸಿಕೊಂಡಿರುವ ಲೋಕ ಸಂಚಾರಿಗೆ
ಕಿರಾತ ಕಡ್ಡಿಯ ಕಷಾಯ ಕುಡಿಸಿ.
‘ಕಾವ್ಯದ ಬಗ್ಗೆ ದೊಡ್ಡಕೆ ತಿಳಿದವರೇ ಹೇಳಿ. ಗೊತ್ತೇ ತಿಳಿಸಾರು ನಿಮಗೆ? ಕ್ಷಮಿಸಿ ಗೊತ್ತಿಲ್ಲ ಕಾವ್ಯ ನನಗೆ’ ಮುಂತಾದ ಸರಳ ಸಾಲುಗಳಲ್ಲೇ ವೈದೇಹಿ ಎದುರಾಗುತ್ತಾರೆ. ಆಗೊಮ್ಮೆ ಈಗೊಮ್ಮೆ ಅವರ ಪ್ರತಿಭೆ ಹನಿಕವಿತೆಗಳಂಥ ಕವಿತೆಗಳನ್ನೂ ಹನಿಯುತ್ತದೆ :
– 1 –
ಅಮ್ಮಾ
ಈ ಸೂರ್ಯ ಯಾಕೆ
ಬರುತ್ತಾನೆ? ಬಂದವ
ಗಳಿಗೆ ನಿಲ್ಲದೆ ಓಡುತ್ತಾನೆ?
ಮಗೂ,
ಅದು ಹಾಗೇ
ರಥ ಮತ್ತು ಕುದುರೆ ಇರುವವರೆಲ್ಲರ ಬಗೆ.
– 2 –
ಈಗಿಷ್ಟು ಶಾಂತ ಕಾಣುತ್ತಾನಲ್ಲ
‘ರಾತ್ರಿ ಸವಾರಿ ಹೋದದ್ದೆಲ್ಲಿಗೆ?’
ಕೇಳಿ ನೋಡು!
ಹಗಲೀಡೀ
ಉರಿದುರಿದು ಬೀಳುತ್ತಾನೆ.
ಇದನ್ನೂ ಓದಿ : Vaidehi‘s Birthday: ‘ಈ ಗೌರವ ಗೀರವ ಎಲ್ಲ ಪುರುಷಲೋಕದ್ದು, ನಂಗ್ಯಾಕೆ? ಬೇಕಾ ಇದೆಲ್ಲಾ, ಯೋಚಿಸು’ ಎಂದರು ವೈದೇಹಿ
ವೈದೇಹಿಯವರ ಗದ್ಯದ ಒಂದು ತುಣುಕು ನೋಡಿ. ಅದೂ ಪದ್ಯದಂತೆಯೇ ಕಾಣಿಸೀತು. ಅದೇ ಅವರ ಗದ್ಯದ ಸೋಲು ಮತ್ತು ಗೆಲುವು. ಗದ್ಯವೂ ಪದ್ಯದಂತಾದರೆ ಅದು ತನ್ನ ಖಚಿತತೆ ಕಳೆದುಕೊಳ್ಳುತ್ತದೆ. ಪದ್ಯ ಗದ್ಯದಂತೆ ಕಂಡರೆ ಅದು ತನ್ನ ಅನೂಹ್ಯವನ್ನು ಬಿಟ್ಟುಕೊಟ್ಟು ಬೆತ್ತಲಾಗುತ್ತದೆ. ಇಲ್ನೋಡಿ :
ಮಳೆ ಬರುತ್ತಿದೆ.
ಮಳೆ ಮಳೆ ಮತ್ತು ಮಳೆ.
ಪ್ರಾಸ ಬೆಳೆಯಲು ಬೇಕಷ್ಟು ಎಡೆ ಇದ್ದರೂ ಬೇಕೆಂದೇ ಬೆಳೆಯುವುದಿಲ್ಲ. ಕರಗುತ್ತದೆ. ಮಳೆ ಸುರಿಯುತ್ತಲೇ ಇದೆ. ನೀವೆಲ್ಲ ಹೇಳುವುದು ನಿಜ. ಮಳೆಗಿಂತ ಚಂದ ಇನ್ನೊಂದಿಲ್ಲ. ಆದರೆ ಇಂಥ ಮಳೆ ಕಂಡಿದ್ದೀರಾ? ಇದು ಅಪೂರ್ವ ಮಳೆ. ನಿನ್ನೆ ಬಂದಿರಲಿಲ್ಲ, ನಾಳೆ ಬರುತ್ತದೆಯೇ ಗೊತ್ತಿಲ್ಲ. ನಾಳೆಯೆಂಬುದು ನಿಜಕ್ಕೂ ಇದೆಯೇ? ಆ ನಾಳೆಯಲ್ಲಿ ನಾನಿರುತ್ತೇನೆಯೇ? ಇಲ್ಲದೆಯೂ ಇರಬಹುದು. ಈ ಕ್ಷಣದ್ದಾಗಿರುವುದು ಒಂದೇ. ಪರ್ಜನ್ಯನಾದಾನುಸಂಧಾನ.
ಮಳೆಯೇ ನೀ ಯಾವೂರಿಂದ ಬಂದೆ?
ಮಳೆ ಮಾತಾಡುವುದಿಲ್ಲ.
ಸುರಿಯುವುದೊಂದೇ. ಮಳೆಯೇ ನೀನೇಕೆ ಮಾತಾಡುವುದಿಲ್ಲ? ಗುಡುಗುತ್ತದೆ ಮಿಂಚುತ್ತದೆ ಧುಮ್ಮಿಕ್ಕುತ್ತದೆ….’
ಹೀಗೆ ಸರಳವಾಗಿ ಬರೆಯುವುದನ್ನು ನೀವು ಮೆಚ್ಚಿಕೊಂಡರೆ ನಿಮಗೆ ವೈದೇಹಿ ಇಷ್ಟವಾಗುತ್ತಾರೆ. ಸರಳತೆಯೊಳಗೂ ಕಾಣದೊಂದು ಕಾಣ್ಕೆ, ದೊರಕದೊಂದು ದರ್ಶನ ಇರಬೇಕಾಗುತ್ತದೆ. ಅದು ಪ್ರತಿಸಲವೂ ನಿಮಗೆ ವೈದೇಹಿಯವರ ಕಾವ್ಯದಲ್ಲೂ ಪ್ರಬಂಧದಲ್ಲೂ ಸಿಕ್ಕುತ್ತದೆ ಅನ್ನಲಾಗದು. ಅದಕ್ಕೇ ಹೇಳಿದ್ದು ಸಹನೆ ಮತ್ತು ಶ್ರದ್ಧೆಯಿಂದ ಓದಿದರೆ ಮಾತ್ರ ವೈದೇಹಿ ನಿಮಗೆ ದಕ್ಕಬಹುದು.
ಅದಕ್ಕೆ ಕಾರಣ ಸಹಜ. ವೈದೇಹಿ ಅವರ ಕಾಲದ ಉಳಿದ ಲೇಖಕಿಯರಂತಲ್ಲ. ರೇಗಿಸುವುದಕ್ಕೋ, ಗರ್ಜಿಸುವುದಕ್ಕೋ, ಪರಚುವುದಕ್ಕೋ ಅವರು ಬರೆಯಲಿಲ್ಲ. ಅವರು ತನಗನ್ನಿಸಿದ್ದನ್ನು ತನ್ನ ನಿಶ್ಶಂಕೆಯಲ್ಲಿ ಮತ್ತು ಅನುಮಾನದಲ್ಲಿ ಹಾಡುವ ಹುಡುಗಿಯಂತೆ ಬರೆದರು. ತನ್ನ ಬರಹಕ್ಕೆ ತಾನೇ ಸುಳ್ಳಾಗುತ್ತಾ ಬದುಕಲಿಲ್ಲ. ತನ್ನ ಬದುಕಿಗೇ ತಾನೇ ಎರವಾಗುತ್ತಾ ಬರೆಯಲಿಲ್ಲ.
ಅಷ್ಟು ಪ್ರಾಮಾಣಿಕತೆ ಮತ್ತು ಪ್ರತಿಭೆ ಇದ್ದರೆ ಇನ್ನೇನಾದರೂ ಬೇಕಾ?
(ಮುಗಿಯಿತು)
ಭಾಗ 1 : Vaidehi’s Birthday: ‘ದೈನಿಕದ ದಾರದಲ್ಲಿ ಘಮಘಮಿಸುವ ಮಲ್ಲಿಗೆಯನ್ನೂ, ಪರಿಮಳವೇ ಇಲ್ಲದ ಅಬ್ಬಲಿಗೆಯನ್ನೂ ಕಟ್ಟುತ್ತಾರೆ’