Vaidehi‘s Birthday: ಹೆಣ್ತನವೆಂದರೇನು ಮೀನಾಕ್ಷತ್ತೆ, ಮಾಕಾಳಿ, ಲಿಲ್ಲೀಬಾಯಿ, ಪುಟ್ಟಮ್ಮತ್ತೆ, ವಾರಿಜಾ, ವಿಶಾಖಾ ಬೆನ್, ಮೂಕತ್ತೆ

|

Updated on: Feb 12, 2022 | 11:09 PM

Kannada Writer Vaidehi : ‘ನನಗೆ ಉಡುಪಿಯ ಕಡೆಂಗೋಡ್ಲು ಶಂಕರಭಟ್ಟರ ಕಾವ್ಯ ಪ್ರಶಸ್ತಿ ಬಂದಾಗ ಅವರು ನನಗೆ ಒಂದು ಮೆಸೇಜು ಕಳಿಸಿ ಶುಭ ಹಾರೈಸಿದ್ದರು; ಅಷ್ಟೇ ಅಲ್ಲ ತಾವು ಆ ಸಮಯದಲ್ಲಿ ಮಣಿಪಾಲದಲ್ಲಿ ಇಲ್ಲದ ಕಾರಣ ನನ್ನ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುದದಕ್ಕೆ ಕ್ಷಮೆ ಕೇಳಿದ್ದರು! ಇದು ಅವರ ಸೌಜನ್ಯ.’ ಡಾ. ತಾರಿಣಿ ಶುಭದಾಯಿನಿ

Vaidehi‘s Birthday: ಹೆಣ್ತನವೆಂದರೇನು ಮೀನಾಕ್ಷತ್ತೆ, ಮಾಕಾಳಿ, ಲಿಲ್ಲೀಬಾಯಿ, ಪುಟ್ಟಮ್ಮತ್ತೆ, ವಾರಿಜಾ, ವಿಶಾಖಾ ಬೆನ್, ಮೂಕತ್ತೆ
ಡಾ. ಆರ್. ತಾರಿಣಿ ಶುಭದಾಯಿನಿ ಮತ್ತು ವೈದೇಹಿ
Follow us on

ವೈದೇಹಿ | Vaidehi : ಸ್ತ್ರೀವಾದ ಇತ್ಯಾದಿ ಎಲ್ಲ ತಲೆ ಹೊಗುವುದಕ್ಕೂ ಮೊದಲೇ ವೈದೇಹಿ ನನ್ನ ಓದಿನಲ್ಲಿ ಬಂದುಬಿಟ್ಟಿದ್ದರು. ಅವರ ಕುಂದಾಪುರ ಕನ್ನಡದ ಕಥನಗಳನ್ನು ಅಗೆದು, ಕರಗದ್ದನ್ನು ನುಂಗಿ ಆಸ್ವಾದಿಸಿದ ಯೌವನದ ದಿನಗಳಲ್ಲಿ ವೈದೇಹಿ ಎಂದರೆ ಕಾಣೆವು. ಆದರೆ ರಾಮಾಯಣ ಓದುತ್ತಾ ಓದುತ್ತಾ ಸೀತೆ ಆಪ್ತಳಾಗುವ ಹಾಗೆ ಈ ಲೇಖಕಿ ಮನಸ್ಸಿಗೆ ಒಗ್ಗಿದರಲ್ವ. ಎಳೆಎಳೆಯಾಗಿ ಮನಸ್ಸಿನ ಮಾತುಗಳನ್ನೆಲ್ಲ ಕದ್ದು ಕೇಳಿದವರಂತೆ ಅವರು ಬರೆಯುತ್ತಾ ಹೋಗಿದ್ದರೆ ಅದನ್ನು ನಮ್ಮ ಸಮಕಾಲೀನ ಜಗತ್ತಿಗೆ ಅನ್ವಯಿಸಿಕೊಂಡು, ‘ಹಾ ಇದು ಇದೇ ನಮ್ಮ ಮನೆಯಲ್ಲಿ ಆಯ್ತಲ್ಲ ಹಾಗೇ’ ಎಂದು ನನಗನಿಸುತ್ತಿತ್ತು. ಅವಿಭಕ್ತ ಕುಟುಂಬದಲ್ಲಿ ಹೆಣ್ಣಾಗಿ ಹುಟ್ಟಿದ ಮೇಲೆ ನಮಗರಿವಿಲ್ಲದಂತೆ ನಡೆಯುವ ಲಿಂಗ ತಾರತಮ್ಯವು ವೈದೇಹಿ ಬಿಚ್ಚಿಡುವ ಕಥನಗಳ ಮೂಲಕ ಅನಾವರಣಗೊಳ್ಳುತ್ತಿದೆ ಎಂಬ ಆಶ್ಚರ್ಯವೇ ನನ್ನನ್ನು ಸಾಹಿತ್ಯದತ್ತ ಇನ್ನಷ್ಟು ಮತ್ತಷ್ಟು ವಾಲುವಂತೆ ಮಾಡಿತು. ‘ಲಂಕೇಶ್ ಪತ್ರಿಕೆ’ಯಲ್ಲಿ ವೈದೇಹಿ ಅವರು ಬರೆಯತೊಡಗಿದಾಗ ಅವರು ಇನ್ನಷ್ಟು ಹತ್ತಿರ ಬಂದರು.

ಡಾ. ಆರ್. ತಾರಿಣಿ ಶುಭದಾಯಿನಿ, ಲೇಖಕಿ, ಅನುವಾದಕಿ

*

ಪ್ರಾಯಶಃ ವೈದೇಹಿ ಅವರಿಗೆ ವಯಸ್ಸಾಗುವುದಿಲ್ಲ. ತೆಳ್ಳನೆಯ ಶರೀರದ, ಈಗಲೂ ಸಣ್ಣ ತುರುಬು ಹಾಕಿ ನಗುವ ಅವರ ಚಂದದ ಫೋಟೊ ನೋಡಿದವರಿಗೆ ಇವರಿಗೆ ಇನ್ನೂ ಪ್ರಾಯ ಇದೆಯೇ? ಎಂದು ಆಶ್ಚರ್ಯವಾಗುವಷ್ಟು. ಎಲ್ಲ ತಲೆಮಾರಿಗೂ ಒದಗಬಲ್ಲಂತೆ ಇರುವ ಅವರಿಗೆ ವಯಸ್ಸಾಗುವುದು ಸಾಧ್ಯವೇ? ಒಂದು ದೃಷ್ಟಿಯಿಂದ ವೈದೇಹಿ ಸದಾ ಸಮಕಾಲೀನೆ! ವೈದೇಹಿ ಬರವಣಿಗೆ ತುಂಬ ಲವಲವಿಕೆಯದು.

ಲೇಖಕಿಯಾಗಿ ಪ್ರಸಿದ್ಧರಾದರೂ ಎಲ್ಲ ವಯೋಮಾನದ ಲೇಖಕಿಯರನ್ನು ಅವರು ಸಮಕಾಲೀನಗೊಳಿಸಿಕೊಳ್ಳುತ್ತಿದ್ದ ರೀತಿ ನನ್ನ ಅನುಭವಕ್ಕೆ ಬಂದಿದ್ದು ಸ್ವಲ್ಪ ಸಮಯದ ಹಿಂದೆ. ನಾನು ಸಂಕೋಚ ಸ್ವಭಾವದಿಂದ ಅವರನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಕಾರ್ಯಕ್ರಮದಲ್ಲಿ ಕಂಡರೂ ಅವರನ್ನು ಮಾತನಾಡಿಸುವುದಕ್ಕೆ ಹೋಗಿರಲಿಲ್ಲ. ಆದರೆ ನನಗೆ ಉಡುಪಿಯ ಕಡೆಂಗೋಡ್ಲು ಶಂಕರಭಟ್ಟರ ಕಾವ್ಯ ಪ್ರಶಸ್ತಿ ಬಂದಾಗ ಅವರು ನನಗೆ ಒಂದು ಮೆಸೇಜು ಕಳಿಸಿ ಶುಭ ಹಾರೈಸಿದ್ದರು; ಅಷ್ಟೇ ಅಲ್ಲ ತಾವು ಆ ಸಮಯದಲ್ಲಿ ಮಣಿಪಾಲದಲ್ಲಿ ಇಲ್ಲದ ಕಾರಣ ನನ್ನ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುದದಕ್ಕೆ ಕ್ಷಮೆ ಕೇಳಿದ್ದರು! ಇದು ಅವರ ಸೌಜನ್ಯ.

ತದನಂತರ ಮಣಿಪಾಲದಲ್ಲಿ ಪೈ ಸೆಂಟರ್ ವತಿಯಿಂದ ಅಡುಗೆಯ ಮೇಲೆ ಸೆಮಿನಾರ್ ಇತ್ತು ಎಂದು ಕಾಣುತ್ತದೆ. ಅದಕ್ಕೆ ಅವರು ವೈಯಕ್ತಿಕವಾಗಿ ನನ್ನನ್ನೂ ಸೇರಿದಂತೆ ಕೆಲವು ಲೇಖಕಿಯರ ಹೆಸರುಗಳನ್ನು ಸೂಚಿಸಿ, ‘ಎಲ್ಲರೂ ರ‍್ರೆ’ ಎಂದು ಹಾಕಿದ್ದರು. ಇದು ಅವರ ವಾತ್ಸಲ್ಯ.

ವೈದೇಹಿ ಅವರ ಮನೆಗೇ ಹೋಗುವ ಪ್ರಸಂಗ ಒದಗಿ ಬಂದಿದ್ದು ನಾನು ಸವಿತಾ ನಾಗಭೂಷಣ ಆಲೋಚಿಸಿದ್ದ ವೈದೇಹಿ ಗೌರವ ಗ್ರಂಥದಲ್ಲಿ ಸಂಪಾದಕಿಯಾಗಿ ಕೆಲಸ ಮಾಡುವ ಸಂದರ್ಭದಲ್ಲಿ. ವೈದೇಹಿ ಅವರು ಸವಿತಾ ಅವರ ಜೊತೆಗೂಡಿ ನಾವು ಬರಲು ಒಂದು ದಿನವನ್ನು ಗೊತ್ತು ಮಾಡಿದರು. ನಮಗೆ ಭಯ, ಸಣ್ಣಗೆ ಆತಂಕ. ಅವರಂತಹ ಹಿರಿಯ ಲೇಖಕಿಯ ಸಮಯದ ಬಗ್ಗೆ. ಆದರೆ ಆಮೇಲೆ ಕಾರಣ ಗೊತ್ತಾಯಿತು. ಅವರು ನಮ್ಮನ್ನೆಲ್ಲ ಉಪಚರಿಸಲು ಅಡುಗೆ ಮಾಡಬೇಕೆಂದು ಮುಂಬಯಿಯಲ್ಲಿರುವ ತಮ್ಮ ಮಗಳು ಬರುವ ವೇಳೆಗೆ ಬರಲು ಹೇಳಿದ್ದರು! ‘ಇರುವಂತಿಗೆ’ಗೆ ಕಾಲಿಟ್ಟಾಗಿನಿಂದ ಒಂದಲ್ಲ ಒಂದು ಬಗೆ ಉಪಚಾರ. ನಾವು ನಾಲ್ಕು ಜನ ಮಹಿಳೆಯರು, ವೈದೇಹಿ ಅವರ ಮಗಳು ಬಿಟ್ಟರೆ ಅಲ್ಲಿದ್ದುದು ಅವರ ಪತಿ ಹಾಗು ಮೊಮ್ಮಗ ಮಾತ್ರ. ನಮ್ಮದೇ ಕುಶಾಲು, ಮಾತು ಹರಟೆ ಎಲ್ಲ. ನಾನಂತೂ ಕೆಳಗೆ ಕೂತುಬಿಟ್ಟಿದ್ದೆ, ನಮ್ಮದೇ ಮನೆಯ ತರ. ಆಗವರು ನನ್ನನ್ನು ನೋಡಿ ನಕ್ಕಿದ್ದೇ ನಕ್ಕಿದ್ದು, ;ನೋಡೇ ಇವಳನ್ನ ಎಂದು. ಆಮೇಲೆ ಊಟ. ಅಬ್ಬಾ ಆ ನಮೂನೆ ಊಟ ಮಾಡಲು ಎರಡು ಮೂರು ಹೊಟ್ಟೆ ಬೇಕು! ದಕ್ಷಿಣ ಕನ್ನಡದ ವಿಶೇಷ ಅಡುಗೆಗಳನ್ನೆಲ್ಲ ತಾಯಿ ಮಗಳು ಸೇರಿ ಮಾಡಿದ್ದರು. ಆ ಕೈ ಈ ಕೈ ತುಂಬ ಬಡಿಸಿದ್ದೇ ಬಡಿಸಿದ್ದು. ಅದನ್ನು ರುಚಿ ನೋಡಲು ಸಹ ಆಗದಷ್ಟು ವೈರೈಟಿ ಅಡುಗೆಗಳು. ಅದಾದ ನಂತರ ಮಜ್ಜಿಗೆಯಲ್ಲೂ ಹಲವಾರು ಬಗೆ. ಇಷ್ಟಕ್ಕೆ ಸುಸ್ತು ಹೊಡೆದ ನಾವು ಸಂದರ್ಶನಕ್ಕೆ ಹೋದವರು ಅದನ್ನೇ ಮರೆತವರಂತೆ, ಯಾರದೋ ಹಳೆಯ ಬಂಧುವಿನ ಮನೆಗೆ ಬಂದವರಂತೆ ಕೂತು, ಪಟ್ಟಾಂಗ ಹೊಡೆದು ಆರಾಮಾಗಿ ಕಾಲ ಕಳೆಯುತ್ತಿದ್ದೆವು.

ಇದನ್ನೂ ಓದಿ : Vaidehi’s Birthday: ‘ಪೂರ್ವಗ್ರಹಗಳಿಲ್ಲದೆ ನಾವು ಕಂಡ ಸತ್ಯವನ್ನು ನಿರ್ಭಯವಾಗಿ ಹೇಳಬೇಕು’ ನುಡಿಗೂ ಬೆಳಕಿದೆ

ವೈದೇಹಿಯವರ ಕೃತಿಗಳು

ಆನಂತರ ಒಂದು ಫೋಟೊ ಸೆಷನ್ ಬೇರೆ ಇತ್ತಲ್ಲವ. ಅದಕ್ಕಾಗಿ ಸೀರೆ ಉಡುವ ಸಂಭ್ರಮ! ನಾನು ಸೀರೆ ಒಯ್ದಿರಲಿಲ್ಲ. ಆಗ ಸೀರೆ ಒದಗಿಸಿದ್ದು ವೈದೇಹಿಯವರೇ. ಒಂದಿಷ್ಟು ರಾಶಿ ಸೀರೆ ಹಾಕಿ ‘ಯಾವುದಾದರೂ ತೆಗೆದು ಉಡು’ ಎಂದು ಹಾಕಿದ್ದರು. ಅದರಲ್ಲಿ ನಾನೊಂದು ಕಾಟನ್ ಸೀರೆ ಆರಿಸಿ ನನ್ನ ಚೂಡಿದಾರ್ ಮೇಲೆಯೇ ಉಟ್ಟೆ. ಅದನ್ನು ನೋಡಿದ ಮೇಲಂತೂ ಅವರಿಗೆ ನಗುವೇ ನಗು. ಹೀಗೂ ಉಂಟನಾ ಅಂತ. ಫೋಟೊ ಗೀಟೊ ಎಲ್ಲ ಆದ ಮೇಲೆ ಮತ್ತೆ ರೂಮಿಗೆ ಕರೆದೊಯ್ದು ಹೊಸ ಸೀರೆಗಳನ್ನೆಲ್ಲ ಹರವಿ ಎಲ್ಲರೂ ತಮಗೆ ಬೇಕಾದ ಸೀರೆ ಒಯ್ಯಲು ಹೇಳಿದರು. ಕೆಲವು ಸೀರೆ ಮಾತ್ರ ತಮ್ಮ ನೆನಪಿಗೆಂದು ಇಟ್ಟುಕೊಂಡು ಉಳಿದವನ್ನೆಲ್ಲ ನಮ್ಮ ಇಷ್ಟಕ್ಕೇ ಬಿಟ್ಟಿದ್ದರು. ಆಮೇಲೆ ಹೆಂಗಸರ ಬದುಕುಗಳ ಬಗ್ಗೆ ಕೊನೆ ಮೊದಲ್ಲಿಲ್ಲದ ಮಾತು. ಅವರ ಅನುಭವದ ನೆಲೆಯಲ್ಲಿ ನಿಂತು ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ಅನಾಚಾರಗಳ ಬಗ್ಗೆ ತುಂಬ ನೋವಿನಿಂದ ಆ ಹಿರಿಯ ಜೀವ ಮಾತನಾಡಿದ್ದು ಇನ್ನೂ ಕಣ್ಣ ಮುಂದಿದೆ. ಇದು ವೈದೇಹಿ.

ಮಾನುಷಿಯಾಗಿ ಮನುಷ್ಯತ್ವವನ್ನು ಹಿಡಿಯುವ ಗೌರಿಯ ಆರ್ದ್ರಗುಣ. ಗೃಹಿಣಿಯ ಅಚ್ಚುಕಟ್ಟುತನ, ಅಕಾಡೆಮಿಕ್ ಶಿಸ್ತು, ಮೆಲ್ಲನೆಯ ದನಿಯ ಬಂಡಾಯ, ಒಳಬಾಳುಗಳ ಬಗ್ಗೆ ತಿಳಿವಳಿಕೆ ಇವನ್ನೆಲ್ಲ ಅವರ ಸಾಹಿತ್ಯ, ಬದುಕುಗಳಿಂದ ನೋಡಿ, ನೋಡಿ ಎಷ್ಟೊ ಸತ್ಯಗಳನ್ನು ಕಲಿತಂತೆ ಆಗಿದೆ. ಎಷ್ಟೊಂದು ಬಗೆಯ ಹೆಣ್ಣು ವಿನ್ಯಾಸಗಳು ಅವರಲ್ಲಿ-‘ಗೂಡಿನೊಳಗಿನ ಹಕ್ಕಿ’ ಯಲ್ಲಿನ ನಾಯಕಿ ಸ್ವಾತಂತ್ರ್ಯ ಬಯಸಿ ಗಂಡನಿಗೆ ಬೀಗ ಹಾಕಿಕೊಂಡು ಹೋಗಲು ಹೇಳುತ್ತಾಳೆ; ಆದರೆ ಸ್ವಾತಂತ್ರ್ಯವೇ ಪಂಜರವಾಗುತ್ತದೆ. ‘ಆರತಿ ತಟ್ಟೆ’ ಯ ಮೀನಾಕ್ಷತ್ತೆ ಗಂಡ ಕರೆತರುವ ಹೆಣ್ಣುಗಳಿಗೆ ಆರತಿ ಮಾಡಿ ಮಲಗುವ ಮನೆಗೆ ಕಳಿಸುವ ಸ್ವಭಾವದವರು, ಮೇಲ್ನೋಟಕ್ಕೆ. ಒಳಕೋಣೆಯಲ್ಲಿ ಮಲಗಲು ಹೋದವರಿಗೆ ಇರುವೆ ಕಾಟ ಹತ್ತಿ ಓಡಿ ಬರುವ ತಂತ್ರ ಮಾತ್ರ ಅತ್ತೆಯದಲ್ಲವೇ ಎನ್ನುವಂತೆ ಇದ್ದವರು. ಎಲ್ಲರ ಸತ್ಯಗಳನ್ನು ತನ್ನ ಹುಚ್ಚಿನಲ್ಲಿ ಬಿಚ್ಚಿಡುವ ಅಕ್ಕು, ಯೌವನಕ್ಕೆ ಬೇಲಿ ಹಾಕಿದ ಸಮಾಜ ನೋಡಿ ನಿಟ್ಟುಸಿರು ಬಿಡುವ ಸೌಗಂಧಿ. ..ಹೀಗೆ ಎಷ್ಟು ಜನ, ಎಷ್ಟು ಜನ ಹೆಂಗಸರು. ಇವರ ಒಳ ಸತ್ವಗಳ ಕಂಡು ಹೆಣ್ತನ ಎನ್ನುವುದು ಬಾಗಿ, ಬಳುಕಿ ಇರುವುದಲ್ಲ, ಅದರೊಳಗೆ ಇರುವ ದುಃಖದ ಸತ್ವ, ಪುಟಿಯುವ ಬದುಕಿನ ಚೈತನ್ಯ ಇದೆ ಎಂದು ತೋರಿದ ಲೇಖಕಿ ನನಗಿಷ್ಟವಾದದ್ದು ಪ್ರಾಯಶಃ ಆಕಸ್ಮಿಕವಲ್ಲ.

ಇದನ್ನೂ ಓದಿ : Vaidehi’s Birthday: ‘ದೈನಿಕದ ದಾರದಲ್ಲಿ ಘಮಘಮಿಸುವ ಮಲ್ಲಿಗೆಯನ್ನೂ, ಪರಿಮಳವೇ ಇಲ್ಲದ ಅಬ್ಬಲಿಗೆಯನ್ನೂ ಕಟ್ಟುತ್ತಾರೆ’

Published On - 11:06 pm, Sat, 12 February 22