Literature : ಜೂನ್ 25, 26ರಂದು ‘ಕಥೆಕೂಟ’ದ ಆರನೇ ವಾರ್ಷಿಕೋತ್ಸವ ಮತ್ತು ಸಮಾವೇಶ

| Updated By: ಶ್ರೀದೇವಿ ಕಳಸದ

Updated on: Jun 15, 2022 | 4:12 PM

Social Media : ಸಾಮಾಜಿಕ ಜಾಲತಾಣಗಳೆಂದರೆ ಕಾಲಹರಣವೆಂಬ ಅಭಿಪ್ರಾಯ. ಇನ್ನೊಂದೆಡೆ ಆ ತಾಣದಿಂದಲೇ ಸೃಜನಶೀಲವಾಗಿ ತಮ್ಮ ಅಭಿವ್ಯಕ್ತಿಯನ್ನು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನ. ಎರಡನೆಯದಕ್ಕೆ ಮಾದರಿ ವಾಟ್ಸಪ್​ ಗ್ರೂಪ್​ನಿಂದ ಶುರುವಾದ ಈ ‘ಕಥೆಕೂಟ’.

Literature : ಜೂನ್ 25, 26ರಂದು ‘ಕಥೆಕೂಟ’ದ ಆರನೇ ವಾರ್ಷಿಕೋತ್ಸವ ಮತ್ತು ಸಮಾವೇಶ
ಕಥೆಕೂಟದ ಸದಸ್ಯರು ಮತ್ತು ಸೂತ್ರದಾರರಾದ ಕಥೆಗಾರ ಜೋಗಿ, ಗೋಪಾಲಕೃಷ್ಣ ಕುಂಟಿನಿ
Follow us on

Kathekuta : ಬೆಂಗಳೂರಿನ ನೆಲಮಂಗಲದ ತೊರೆಭೈರಸಂದ್ರದ ‘ಗುಬ್ಬಿಗೂಡು’ವಿನಲ್ಲಿ ಇದೇ 25, 26 ರಂದು ‘ಕಥೆಕೂಟ’ದ ಆರನೇ ವಾರ್ಷಿಕೋತ್ಸವ ಮತ್ತು ಸಮಾವೇಶ ನಡೆಯಲಿದೆ. ಹೊಸ ಕನಸಿನೊಂದಿಗೆ ಶುರುವಾದ ಈ ‘ಕಥೆಕೂಟ’ ಎಂಬ ವಾಟ್ಸಾಪ್‌ ಗುಂಪಿನ ಉದ್ದೇಶ, ಹೊಸ ಬರಹಗಾರರನ್ನು ಪರಿಚಯಿಸಬೇಕು ಈ ಮೂಲಕ ಸಾಹಿತ್ಯದ ಅಭಿರುಚಿಯನ್ನು ಓದುಗರಿಗೆ ತಲುಪಿಸಬೇಕು ಎಂಬುದು. ಜನಪ್ರಿಯ ಕಥೆಗಾರ, ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್ Jogi) ಮತ್ತು ಕಥೆಗಾರ ಗೋಪಾಲಕೃಷ್ಣ ಕುಂಟಿನಿಯವರು ಇದರ ಬೆನ್ನೆಲುಬು. ಈಗಾಗಲೇ ಕೆಲ ಪುಸ್ತಕ ಪ್ರಕಟಿಸಿರುವ ಮತ್ತು ಇಲ್ಲಿ ಸೇರಿದ ಬಳಿಕ ಪುಸ್ತಕ ಪ್ರಕಟಿಸಿದ ಯುವಬರಹಗಾರರೂ ಇದಲ್ಲಿದ್ದಾರೆ. ಒಟ್ಟು 49 ಸದಸ್ಯರ ಗುಂಪು ಇದು. ಈ ಸಮಾವೇಶದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಓದು ಚರ್ಚೆಗಳನ್ನು ಏರ್ಪಡಿಸಲಾಗಿದೆ. ಗುಂಪಿನಲ್ಲಿರುವ ಹಿರಿಕಿರಿಯ ಲೇಖಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೊರಜಗತ್ತಿಗೆ ಇದೊಂದು ಸಾಮಾನ್ಯ ವಾಟ್ಸಾಪ್‌ ಗುಂಪು. ಈ ಗುಂಪಿನ ಸದಸ್ಯರಿಗೆ ಇದೊಂದು ಪಾಠಶಾಲೆ, ಒಂದು ಮನೆ, ಒಂದು ವಿಸ್ತಾರವಾದ ಕುಟುಂಬ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸಾಪ್‌ ಹೀಗೇ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಮೂವತ್ತು ಸೆಕೆಂಡುಗಳ ರೀಲ್ಸ್‌ ಅಥವಾ ಸ್ಟೇಟಸ್‌ ಮಾತ್ರ ನೋಡುವುದಕ್ಕೆ ಸೀಮಿತವಾಗಿರುವ ಕಾಲ ಇದು. ಸಾಮಾಜಿಕ ಜಾಲತಾಣ ಎಂದರೆ ಕೇವಲ ಕಾಲಹರಣ ಎಂಬ ಮನೋಭಾವ ಗಟ್ಟಿಯಾಗಿ ಬೇರೂರಿದ ಸಂದರ್ಭ. ಆದರೆ ಇವೆಲ್ಲವನ್ನೂ ಸುಳ್ಳಾಗಿಸಿ ಸಾಮಾಜಿಕ ಜಾಲತಾಣದಿಂದ ಉಪಯೋಗ ಹೇಗೆ ಪಡೆಯಬಹುದು ಎಂಬುದಕ್ಕೆ ಮಾದರಿಯಾಗಿರುವ ಗುಂಪು ಕಥೆಕೂಟ.

ಈ ಗುಂಪಿನ ಸದಸ್ಯರಿಗೆ ಕೆಲವು ನಿಯಮಗಳಿವೆ. ಪ್ರಮುಖವಾಗಿ ಇಲ್ಲಿ ಯಾರೂ ಮೌನವಾಗಿರಬಾರದು. ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ಹೇಗೆ ಕುಟಂಬದವರೊಂದಿಗೆ ದಿನದ ವಿಶೇಷವನ್ನು ಹಂಚಿಕೊಳ್ಳುಲಾಗುತ್ತದೆಯೋ ಅದೇ ರೀತಿ ಇಲ್ಲಿಯೂ ಮಾತನಾಡುತ್ತಿರಬೇಕು. ಮನಸ್ಸಿನ ಭಾವವನ್ನು ವ್ಯಕ್ತಪಡಿಸುತ್ತಿರಬೇಕು. ಕಥೆ ಹೇಗೆ ಬರೆಯಬೇಕು, ಬರೆದ ಕತೆಯನ್ನು ಹೇಗೆ ಇನ್ನೂ ಉತ್ತಮಗೊಳಿಸಬೇಕು ಎಂಬ ಪಾಠ ಒಂದು ಕಡೆಯಾದರೆ, ಮತ್ತೊಂದು ಕಡೆ ನಮ್ಮ ಮಾತು ಹೇಗಿರಬೇಕು, ನಮ್ಮ ವ್ಯಕ್ತಿತ್ವ ಹೇಗಿರಬೇಕು ಎಂದೂ ಇಲ್ಲಿ ಕಲಿಯಬಹುದು.

ಇದನ್ನೂ ಓದಿ
ಆಗಾಗ ಅರುಂಧತಿ : ನನ್ನ ಶ್ರೀಮಂತ ತಂದೆತಾಯಿಯ ನೆರಳು ಸೋಕದಷ್ಟು ಸ್ವತಂತ್ರಳಾಬೇಕು
ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ
ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ
ಆಗಾಗ ಅರುಂಧತಿ: ಫೋನ್​ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!

ಈ ಇಮೋಜಿಗಳು ನಮ್ಮ ಕೆಲಸವನ್ನು ಸುಲಭಮಾಡಿಬಿಟ್ಟಿದೆ. ಮಾತನಾಡುವ ಬದಲು ನಾಲ್ಕು ಇಮೋಜಿ ಕಳುಹಿಸಿ ಸುಮ್ಮನಾಗಿಬಿಡಬಹುದು. ಮನಸ್ಸಿನಲ್ಲಿ ಹುಟ್ಟಿದ ಭಾವ ಅಲ್ಲಯೇ ಸಾಯಿಸಿ ಬಿಡಬಹುದು. ಆದರೆ, ಈ ಗುಂಪಿನಲ್ಲಿ ಇಮೋಜಿ ನಿಷಿದ್ಧ! ಖುಷಿಯಾಗಲಿ, ಸಿಟ್ಟಾಗಲಿ, ವಿಷಾದವಾಗಲಿ ಎಲ್ಲವೂ ಮಾತಿನಲ್ಲಿ ವ್ಯಕ್ತವಾಗಬೇಕು. ಮೊದಮೊದಲಿಗೆ ಈ ಅಭ್ಯಾಸ ಕಷ್ಟ ಎನ್ನಿಸುತ್ತದೆ ಆದರೆ ಒಮ್ಮೆ ಇದು ರೂಢಿಯಾದರೆ ಮೌನ ನೀಡುವ ನೋವು ಅರಿವಾಗುತ್ತದೆ. ಅನ್ನಿಸಿದ್ದನ್ನು ಹೇಳಬೇಕು, ಹೇಳಬೇಕಾದರೆ ಹೇಗೆ ಹೇಳಬೇಕು ಎಂದು ಕಥೆಕೂಟ ಕಲಿಸಿಕೊಡುತ್ತದೆ.

ಇದನ್ನೂ ಓದಿ : Bangalore Literature Festival : ‘ನಾನು ಪ್ರಶಸ್ತಿ ನಿರೋಧಕ ಲಸಿಕೆಯನ್ನು ಹಾಕಿಕೊಂಡೇ ಓಡಾಡುತ್ತಿದ್ದೇನೆ’ ಕಥೆಗಾರ ಜೋಗಿ

ಕಥೆಯ ವಿಷಯಕ್ಕೆ ಬಂದರೆ, ಇಲ್ಲಿ ಕಥಾಪ್ರಪಂಚದಲ್ಲಿ ಪಳಗಿದ, ಕಥೆಯನ್ನು ರಚಿಸುವ ಕಲೆಯನ್ನು ದಕ್ಕಿಸಿಕೊಂಡ ನುರಿತ ಕಥೆಗಾರರು ಇಲ್ಲಿದ್ದಾರೆ. ಆಗಾಗ ಇಲ್ಲಿ ಪ್ರತಿಯೊಬ್ಬರೂ ಕಥೆ ಬರೆದು ಹಾಕಬೇಕು. ಇಲ್ಲಿ ಪ್ರಕಟವಾದ ಕಥೆಗೆ ಎಲ್ಲರೂ ಪ್ರತಿಕ್ರಿಯೆ ನೀಡಬೇಕು. ಕಿರಿಯರು ಬರೆದ ಕಥೆಗಳಿಗೆ ಹಿರಿಯರ ಮಾರ್ಗದರ್ಶನವಿರುತ್ತದೆ. ಹಿರಿಯರ ಕಥೆಗೆ ಕಿರಿಯರ ಪ್ರತಿಕ್ರಿಯೆ ಇರುತ್ತದೆ. ಹೊಸ ಚಿಗುರು ಹಳೇ ಬೇರು ಎಂಬ ಮಾತಿನಂತೆ ಇಲ್ಲಿನ ವಾತಾವರಣವಿದೆ. ಇಲ್ಲಿನ ನಿಯಮವನ್ನು ಪಾಲಿಸುವಲ್ಲಿ ಯಾರಾದರೂ ವಿಫಲರಾದರೆ ಗುಂಪಿನ ಅಡ್ಮಿನ್‌ ಬೆತ್ತ ಹಿಡಿದು ಪೆಟ್ಟು ನೀಡಲು ಸಿದ್ಧರಿರುತ್ತಾರೆ. ನಾವು ಒಂದು ವಿಷಯದ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದು ಮಾತ್ರವೇ ಇದರ ಹಿಂದಿನ ಉದ್ದೇಶ, ಯಾವುದೇ ವೈಯಕ್ತಿಕ ಸಿಟ್ಟು ಇದರ ಹಿಂದಿಲ್ಲ. ನಮ್ಮ ಮನೆಯ ಜವಾಬ್ದಾರಿ ನಾವು ತೆಗೆದುಕೊಳ್ಳದಿದ್ದರೆ ಹೇಗೆ ಅಲ್ಲವೇ?

ಕೂಟ ಬೆಂಗಳೂರೆಂಬ ಮಾಯಾನಗರಿಯಿಂದ ಕರಾವಳಿಯ ಸಮುದ್ರತೀರದವರೆಗೂ ಈ ಕೂಟ ವಿಸ್ತಾರವಾಗಿದೆ.  ಅನೇಕ ಹಿರಿಯರು ಇಲ್ಲಿದ್ದಾರೆ. ಸಾಹಿತಿ ಸುಬ್ರಾಯ್‌ ಚೊಕ್ಕಾಡಿ, ನಿರ್ದೇಶಕ ಲಿಂಗದೇವರು, ಓದುಗ, ಕರ್ನಾಟಕ ಬ್ಯಾಂಕ್‌ ಮುಖ್ಯಸ್ಥ ಶ್ರೀನಿವಾಸ್‌ ದೇಶಪಾಂಡೆ, ಐ.ಎ.ಎಸ್‌ ಅಧಿಕಾರಿ ಹರೀಶ್‌ ಕುಮಾರ್‌, ಪೊಲೀಸ್‌ ಅಧಿಕಾರಿ ರವಿ ಚಿಕ್ಕನಾಯಕನಹಳ್ಳಿ, ವಿದ್ವಾಂಸ ಜಗದೀಶ ಶರ್ಮಾ ಸಂಪ, ಸೆಲ್ಕೊ ಸಿ.ಇ.ಓ ಮೋಹನ ಹೆಗಡೆ ಮತ್ತು ಸೂತ್ರಧಾರರಾದ ಜೋಗಿ, ಗೋಪಾಲಕೃಷ್ಣ ಕುಂಟಿನಿ.

ಇದನ್ನೂ ಓದಿ : Book Release : ಅಚ್ಚಿಗೂ ಮೊದಲು ; ಇಂದು ಕಥೆಗಾರ ಜೋಗಿ ‘ಕಥೆಪುಸ್ತಕ’ ಮತ್ತು ‘ಸು ಬಿಟ್ರೆ ಬಣ್ಣ, ಬ ಬಿಟ್ರೆ ಸುಣ್ಣ’ ಲೋಕಾರ್ಪಣೆ 

ಜೋಗಿ, ಕುಂಟಿನಿಯವರು ಪ್ರತಿಬಾರಿಯೂ ಒಂದು ಹೊಸ ಕಲ್ಪನೆಯೊಂದಿಗೆ ಗುಂಪಿನ ಸದಸ್ಯರನ್ನು ವ್ಯಸ್ಥವಾಗಿಡುತ್ತಾರೆ. ಋತುಮಾನಕ್ಕೆ ತಕ್ಕಂತೆ ಕಥಾ ಸರಣಿಯನ್ನು ಆರಂಭಿಸುತ್ತಾರೆ. ಇದಕ್ಕೆ ಸಾಕ್ಷಿ ಕಳೆದ ವರ್ಷ ಪ್ರಕಟವಾದ ‘ಮಳೆಯಲ್ಲಿ ನೆನೆದ ಕಥೆಗಳುʼ. ಜನರ ಮೆಚ್ಚುಗೆಯನ್ನು ಗಳಿಸಿದ ಈ ಪುಸ್ತಕ ಇಲ್ಲಿನ ಲೇಖಕರ ಬಗ್ಗೆಯೂ ಭರವಸೆ ಮೂಡಿಸಿದೆ. ಇಲ್ಲಿ ಸೇರಿದ ಬಳಿಕ ಅನೇಕ ಬರಹಗಾರರು ತಮ್ಮ ಮೊದಲ ಪುಸ್ತಕವನ್ನು ಪ್ರಕಟಿಸಿದ್ದಾರೆ. ಅವರ ಕೃತಿ ಜನರ ಮೆಚ್ಚುಗೆಯನ್ನೂ ಗಳಿಸಿದೆ. ವಿಕಾಸ್‌ ನೇಗಿಲೋಣಿ, ಮೇಘನಾ ಸುಧೀಂದ್ರ, ಅಜಿತ್‌ ಹರೀಶಿ, ಹರೀಶ್‌ ಕೇರ, ಸಚಿನ್‌ ತೀರ್ಥಹಳ್ಳಿ, ರಾಜೇಶ್‌ ಶೆಟ್ಟಿ, ಅನನ್ಯ ತುಷಿರಾ ಇನ್ನೂ ಅನೇಕರು ಕಥೆಕೂಟದ ಹೆಮ್ಮೆಯ ಬರಹಗಾರರು.

ಈವರೆಗೆ ಕಥೆಕೂಟ ಸಾಗಿ ಬಂದ ರೀತಿ ಒಂದು ತೂಕವಾದರೆ, ಮುಂದಿನ ಪಯಣಕ್ಕೆ ಇನ್ನೂ ದೊಡ್ಡ ಕನಸನ್ನು ನನಸು ಮಾಡುವ ಆಶಯವಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ವಿಭಿನ್ನವಾದ ಕೊಡುಗೆ ನೀಡಲು, ಗುಣಮಟ್ಟದ ಬರಹಗಾರರನ್ನು ಪರಿಚಯಿಸಲು ಈ ಗುಂಪು ನಿರಂತರವಾಗಿ ಶ್ರಮಿಸಲಿದೆ.

Published On - 4:12 pm, Wed, 15 June 22