ಆಗಾಗ ಅರುಂಧತಿ: ಫೋನ್ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎಂದು ಆ ಲಂಪಟನಿಗೆ ತಿಳಿದಿಲ್ಲ!
Misbehave : ‘ನನಗೆ ಮೊದಲು ಪಾರ್ಟ್ಟೈಮ್ ನೌಕರಿ ಇತ್ತು. ಈಗ ಸರ್ಕಾರಿ ನೌಕರಿ ಖಾಯಂ ಆಗಿದೆ. ಒಂದೂವರೆ ಲಕ್ಷ ಸಂಬಳ. ನನ್ನ ಮಾತು ಕೇಳಿದರೆ, ನಿನಗೆ ಕಾರನ್ನು ಕೊಡಿಸುತ್ತೇನೆ. ನೀನು ರೆಸ್ಟೋರೆಂಟುಗಳನ್ನು ನೋಡಿಯೇ ಇಲ್ಲ ಎಂದೆನಿಸುತ್ತದೆ.’
ಆಗಾಗ ಅರುಂಧತಿ : ಬೆಳಿಗ್ಗೆ ಎದ್ದಕೂಡಲೆ ಏನೇನೋ ನೆನಪಾದವು ಒಮ್ಮೆಲೆ. ಮುಂದಿನ ತಿಂಗಳಿಂದ ಕಾಲೇಜಿಗೆ ಪಾಠ ಮಾಡಲು ತೆರಳಬೇಕು. ಹೇಗೆ ಬೇಕೋ ಹಾಗೆ ಆಡಲು ಬರುವುದಿಲ್ಲ. ಇನ್ನಷ್ಟು ಗಂಭೀರವಾಗಿರಬೇಕು. ಆದರೆ ತುಂಬ ಖುಷಿಯಾಗಿರಬೇಕು. ಏಕೆಂದರೆ ವಿದ್ಯಾರ್ಥಿಗಳು ಬಯಸುವುದು ಪರಿಪೂರ್ಣ ಪ್ರಾಧ್ಯಾಪಕರನಲ್ಲ. ಬದಲಿಗೆ ಸಂತೋಷವಾಗಿರುವ ಪ್ರಾಧ್ಯಾಪಕರನ್ನು. ಹಾಗಾಗಿ ನಮ್ಮ ಎಲ್ಲಾ ದುಗುಡ ತುಮುಲ ತಳಮಳ ಭವಿಷ್ಯದ ಬಗೆಗಿನ ಗೊಂದಲ ಎಲ್ಲವನ್ನು ತೊಡೆದುಹಾಕಿ, ಪ್ರಸನ್ನವದನರಾಗಿ ಸಂತೋಷದ ಮೊಗದಲ್ಲಿ ಹೋಗಬೇಕು. ಆಗ ಮಾತ್ರ ವಿದ್ಯಾರ್ಥಿಗಳನ್ನು ಹಿಡಿದಿಡಲು ಸಾಧ್ಯ. ನಮ್ಮ ಗಂಭೀರತೆ ಅವರಿಗೆ ಆತಂಕ ತರಬಾರದು. ಹಾಗಾಗಿ ಬೆಳಿಗ್ಗೆ ಎದ್ದವಳೇ ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ವಾಕಿಂಗ್ ಹೊರಟೆ. ಹೋಗುವಾಗ, ಮುಂದಿನ ಅಂಕಣದಲ್ಲಿ ನನ್ನ ಕಥೆಯನ್ನು ಹೇಗೆ ಮುಂದುವರಿಸಬೇಕು ಎಂಬುದನ್ನೂ ಯೋಚಿಸುತ್ತ ನಡೆದೆ. ದಾರಿಮಧ್ಯೆ ಮೂರು ವರುಷಗಳಿಂದ ಎಂದೂ ಕಾಣದ ಪ್ರೊಫೆಸರ್ ಸಿಕ್ಕಾಗ, ಎರಡೂ ಕೈಯೆತ್ತಿ ಮುಗಿದು ಔಪಚಾರಿಕ ಮಾತಾಡಿ, ಕ್ಷಮಿಸಿ ಸಾರ್ ನಿಮ್ಮ ಪುಸ್ತಕಗಳು ನನ್ನಲ್ಲೇ ಉಳಿದವು, ನಾನು ಪಿಜಿ ಓದಲು ಯೂನಿವರ್ಸಿಟಿಗೆ ಹೋದೆ ಪುಸ್ತಕಗಳನ್ನು ಕೊಡಲಾಗಲಿಲ್ಲ. ಆ ಪುಸ್ತಕಗಳು ನನ್ನ ಸಬ್ಜೆಕ್ಟಿಗೆ ಸಂಬಂಧಿಸಿದ್ದಲ್ಲ ಹಾಗಾಗಿ ಅವುಗಳನ್ನು ತೆಗೆದೂ ನೋಡಲಿಲ್ಲ ಸುಮ್ಮನೆ ಕಪಾಟಿನಲ್ಲಿ ಇಟ್ಟಿದ್ದೆ ಅಷ್ಟೆ ಎಂದೆ. ಅರುಂಧತಿ (Arundhathi)
(ಸತ್ಯ 2) ಪ್ರೊಫೆಸರ್ ತಮ್ಮ ನಂಬರ್ ಕೊಟ್ಟರು. 8ಗಂಟೆ ಸುಮಾರಿಗೆ ಫೋನ್ ಮಾಡಿ ಎಂದರು. ವಾಕಿಂಗ್ ಮಾಡಿ ಮನೆಗೆ ಹೋದವಳು, 8ಗಂಟೆಯ ಹೊತ್ತಿಗೆ ಫೋನ್ ಮಾಡಿದಾಗ ಅವರು ರಿಸೀವ್ ಮಾಡಲಿಲ್ಲ. ಮತ್ತೆ ಒಂಭತ್ತೂವರೆಗೆ ಕಾಲ್ ಮಾಡಿ, ಇಲ್ಲ ನಾನು ಅರ್ಜೆಂಟಾಗಿ ಊರಿಗೆ ಹೊರಟಿದ್ದೀನಿ. ಬೇಗ ಪುಸ್ತಕಗಳನ್ನು ತೆಗೆದುಕೊಂಡು ಬಾ ಎಂದರು. ತೆಗೆದುಕೊಂಡು ಹೋದೆ. ಏಕೆ ತುಂಬ ತೆಳ್ಳಗಾಗಿರುವೆ ಎಂದರು. ಇಲ್ಲ ಸಾರ್ ನಾನು ಇರೋದೇ ಹೀಗೆ. ಇಲ್ಲ ಇಲ್ಲ ನೀನು ತುಂಬ ತೆಳ್ಳಗಾಗಿದ್ದೀಯಾ. ಅಲ್ಲಿಂದ ತೆರಳಲು ನೋಡಿದೆ.
ನಿಂತುಕೋ ನನಗೆ ಮೊದಲು ಪಾರ್ಟ್ಟೈಮ್ ನೌಕರಿ ಇತ್ತು. ನನಗೀಗ ಸರ್ಕಾರಿ ನೌಕರಿ ಖಾಯಂ ಆಗಿದೆ. ಒಂದೂವರೆ ಲಕ್ಷ ಸಂಬಳ. ನೀನು ನನ್ನ ಮಾತು ಕೇಳಿದರೆ, ನಿನಗೆ ಕಾರನ್ನು ಕೊಡಿಸುತ್ತೇನೆ. ನೀನು ರೆಸ್ಟೋರೆಂಟುಗಳನ್ನು ನೋಡಿಯೇ ಇಲ್ಲ ಎಂದೆನಿಸುತ್ತದೆ. ಇನ್ನೂ ಏನೇನೋ ಆಮಿಷ ಒಡ್ಡಿದರು. ನನಗೆ ಒಮ್ಮೆಲೇ ದಿಗ್ಭ್ರಮೆಯಾಯಿತು. ಏನು ಮಾತನಾಡುತ್ತಿದ್ದಾರೆ ಇವರು. ಈ ಗುರುಗಳೇ ಅಲ್ಲವಾ ನಮಗೆ ಪಾಠ ಮಾಡಿದವರು! ಏನಾಗಿದೆ ಇವರ ತಲೆಗೆ. ಯಾವ ಮಂಕು ಕವಿದಿದೆಯಾ? ಎಷ್ಟು ಕ್ಷುಲ್ಲಕ ವ್ಯಕ್ತಿ ಈತ ಎನಿಸಿತು. ಏನೂ ಇಲ್ಲದೆ ಇರುವಾಗ ವ್ಯಕ್ತಿ ಖ್ಯಾತಿಗಾಗಿ ಹಣಕ್ಕಾಗಿ ಪದವಿಗಾಗಿ ಹಂಬಲಿಸುತ್ತಾನೆ. ಎಲ್ಲವೂ ಸಿಕ್ಕಮೇಲೆ ಅದೇಕೆ ಹೀಗೆ ಲಂಪಟನಾಗಿ ಬಿಡುತ್ತಾನೆ ಎಂದು ಸಿಡಿಲು ಬಡಿದಂತಾಯಿತು.
ಒಡನೆಯೇ ಬಿಗಿಯಾಗಿ ಕೈಹಿಡಿದ ಬಿಡಿಸಿಕೊಳ್ಳಲು ಆಗದಂತೆ. ಹಾಗಾಗಿ ತಪ್ಪಿಸಿಕೊಳ್ಳಲು, ಎರಡು ದಿನ ಬಿಟ್ಟು ಹೇಳುತ್ತೇನೆ ಕೈಯನ್ನು ಬಿಡಿ ಎಂದೆ. ವಿಚಾರ ಮಾಡು ಯೂನಿವರ್ಸಿಟಿ ಚಾನ್ಸಲರ್ ಆಗುವಂತೆ ಮಾಡುತ್ತೇನೆ. ನೀನು ಜಾಣೆ ಇದ್ದೀಯ ಕೂಡ. ಅಲ್ಲಿಯವರೆಗೂ ನಾನು ನಿನಗೆ ಸಲಹೆಗಳನ್ನು ಕೊಡುತ್ತೇನೆ. ನಾನು ಹೇಳಿದಂತೆ ಕೇಳಿದರೆ ನೀನಂದುಕೊಂಡ ಏನೂ ಆಗುವುದು ಬೇಡ ಎನ್ನಿಸುತ್ತದೆ ನಿನಗೆ; ಸುಮ್ಮನೆ ರೈತನನ್ನು ಮದುವೆಯಾಗಿ ಹೋದರೂ ಸಾಕು, ಎರಡು ಹೊತ್ತಿನ ಊಟ ಒಂದು ಒಳ್ಳೆಯ ನಿದ್ದೆ ಇರುತ್ತದೆ. ಅವರಿಗಿರದ ಈ ಸುಖ ನಿಮಗೆ ಇಲ್ಲದ್ದಕ್ಕೇ ಹೀಗೆ ವರ್ತಿಸುತ್ತಿದ್ದೀರಿ. ಮನಸ್ಸಿನಲ್ಲಿ ಹೀಗೆ ಯೋಚಿಸುತ್ತಿರುವಾಗ, ‘ಸರ್, ಎನ್ನಬೇಡ ನನಗೆ’ ಎಂದರು.
ನನಗೆ ಯಾವ ಪ್ರೇಮವೂ ಬೇಡ ಪ್ರೀತಿಯೂ ಬೇಡ ರೆಸ್ಟೋರೆಂಟೂ ಬೇಡ ದುಬಾರಿ ಕಾರೂ ಬೇಡ ಏನೂ ಬೇಡ . ಹೀಗೆ ಆಮಿಷವೊಡ್ಡಿ ನೀಡುವ ಚಾನ್ಸಲರ್ ಪದವಿ ಕೂಡ ನನಗೆ ಬೇಕಾಗಿಲ್ಲ. ನೀವು ನಮಗೆ ಡಿಗ್ರಿಯಲ್ಲಿ ಕಲಿಸುವಾಗ ನಿಮಗೆ ಅರೆಕಾಲಿಕ ನೌಕರಿ ಇತ್ತು. ಆಗ ನಿಮ್ಮಲ್ಲಿ ನೈತಿಕತೆಯನ್ನು ಕಂಡಿದ್ದೆ. ಈಗ ನೌಕರಿ ಖಾಯಂ ಆಗುತ್ತಿದ್ದಂತೆ ಲಂಪಟರಾಗುತ್ತಿದ್ದೀರೋ ಹೇಗೆ? ಛೆ, ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ. ನಿಮ್ಮ ಹೆಂಡತಿಯ ಬಗೆಗಾದರೂ ಚಿಂತಿಸಿದ್ದೀರಾ?
‘ನನಗವಳಿಂದ ನೆಮ್ಮದಿ, ಸ್ಫೂರ್ತಿ, ಚೈತನ್ಯ, ಸುಖ ಏನೊಂದೂ ಸಿಕ್ಕಿಲ್ಲ ಜೀವನದಲ್ಲಿ. ನೋಡು ಹಳೇ ಬೈಕನ್ನೇ ಓಡಿಸುತ್ತಿದ್ದೇನೆ. ನಿನ್ನ ನೋಡಿದ ಮೇಲೆ ಕಾರನ್ನು ತೆಗೆದುಕೊಳ್ಳಬೇಕು ಎನಿಸುತ್ತಿದೆ. ಕೊನೆಯ ಬಾರಿ ಕೇಳುತ್ತಿದ್ದೇನೆ ಹೇಳು, ಏನು ಹೇಳುತ್ತೀಯಾ?’ ಹತ್ತಿರ ಬಂದು ಕೈಹಿಡಿದುಕೊಂಡರು. ಕೈಯನ್ನು ಬಿಡಿಸಿಕೊಂಡವಳು ಇರುವ ಬರುವ ಎಲ್ಲ ಶಕ್ತಿಯನ್ನು ಒಟ್ಟುಗೂಡಿಸಿ, ಆತನ ಕಪಾಳಕ್ಕೆ ರಪ್ ಎಂದು ಹೊಡೆದೆ. ನನ್ನ ಕೈಗೇ ನೋವಾಯಿತು. ಇನ್ನು ಕಪಾಳಮೋಕ್ಷ ಮಾಡಿಸಿಕೊಂಡಿರುವ ಆತನಿಗೆ ಹೇಗಾಗಿರಬೇಕು! ತಿರುಗಿಯೂ ನೋಡದೆ ಸರಸರನೆ ಹಿಂದಿರುಗಿಬಿಟ್ಟೆ.
ಇದನ್ನೂ ಓದಿ : Meeting Point : ಹುಡುಗರೇ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೇ ಇನ್ನೂ?
ಮನೆಗೆ ಬಂದ ಕೂಡಲೇ ಊರಿನಿಂದ ಬಂದ ಸಣ್ಣ ತಮ್ಮ ತನ್ನ ಹೇರ್ ಕಟ್ ಬಗ್ಗೆ ಕೇಳುತ್ತಿತ್ತು. ಆ ಮಗುವಿಗೆ ಏನು ಹೇಳುವುದು? ತುಂಬಾ ಚೆನ್ನಾಗಿದೆ ಮಗು ಎಂದಷ್ಟೇ ಹೇಳುತ್ತ ದಿಗ್ಭ್ರಮೆಯಲ್ಲಿ ಕೂತುಬಿಟ್ಟೆ. ಎಂಥ ಅಭಿಮಾನವಿತ್ತು ಆ ಪ್ರೊಫೆಸರ್ ಬಗ್ಗೆ. ಹೊಟ್ಟೆಯಲ್ಲಿ ಕುದಿಯುತ್ತಿರುವ ಇದನ್ನು ಹೇಗೆ ಥಣ್ಣಗೆ ಮಾಡಿಕೊಳ್ಳುವುದು? ಊಟಕ್ಕೆ ಮನಸ್ಸಾಗಲಿಲ್ಲ. ನನಗಾದರೂ ಯಾರಿದ್ದಾರೆ ಅಕ್ಕತಂಗಿಯರು ಹೇಳಿಕೊಳ್ಳಲು. ಆದರೆ ಯಾಕೆ ಊಟ ಮಾಡುತ್ತಿಲ್ಲ ಎಂದು ಪದೇಪದೆ ಕೇಳುತ್ತಿದ್ದ ತಮ್ಮನಿಗೆ ಹೇಳಿಬಿಟ್ಟೆ, ನೀನು ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿರದೇ ಇದ್ದಿದ್ದರೆ ನಿನ್ನನ್ನು ಜೊತೆ ಕರೆದುಕೊಂಡು ಹೋಗುತ್ತಿದ್ದೆ. ಆಗ ಆತನ ಕಪಾಳಿಗೆ ಬಾರಿಸುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಹೇಳಿ ಸುಮ್ಮನೆ ಮಲಗಿದೆ. ಪಾಪ ಅದಕ್ಕೇನು ತಿಳಿಯಬೇಕು?
ಅಷ್ಟೊತ್ತಿಗೆ ನನ್ನ ತಾಯಿ ಒಂದೇ ಸಮ, ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಬೆನ್ನು ಹತ್ತಿದ್ದರು. ಚಿಕ್ಕ ತಮ್ಮ ತನ್ನ ದೊಡ್ಡತನ ಪ್ರದರ್ಶಿಸಿದ. ನೀನು ಏನೋ ಹೇಳಿದೆಯಲ್ಲ ಅದನ್ನು ದೊಡ್ಡಮ್ಮನಿಗೆ ಹೇಳೋಣ ಬಾ ಅಕ್ಕಾ ಎಂದು ಕರೆದ. ನಡೆದಿದ್ದನ್ನು ಹೇಳಬೇಕು ಎಂದು ಹೋಗುವಷ್ಟರಲ್ಲಿ ಆಕೆ ಅವಳ ಓಟದಲ್ಲೇ ಮುಳುಗಿದ್ದಳು ಎಂದಿನಂತೆ. ಆದರೂ ಬಿಡದೆ, ನಾನು ಎಲ್ಲ ವೃತ್ತಾಂತವನ್ನು ಅವಳಿಗೆ ಹೇಳಿದೆ. ನಿನ್ನ ಮಾತಿನಂತೆ ನಾನು ಪ್ರೀತಿಯಲ್ಲಿ ಇಂದಿಗೂ ಬೀಳಲಾಗುತ್ತಿಲ್ಲ. ಹಾಗಾಗಿ ಪ್ರೀತಿ ಮಾಡಲು ಬಂದ ಇದ್ದೂರಿನ ಹುಡುಗನನ್ನು ಓಡಿಸಿದೆ. ಮತ್ತೆ ಪಿಜಿ ಓದುತ್ತಿರುವಾಗ ಹಿಂದೆ ಬಿದ್ದ ಪ್ರೊಫೆಸರ್ ಮಗನನ್ನೂ. ರಾತ್ರಿ ಅವ ಪಿಜಿಗೆ ಬರುತ್ತೇನೆಂದಾಗೆಲ್ಲ ಅವನೊಂದಿಗೆ ಮಾತು ನಿಲ್ಲಿಸಿ ಓಡಿಸಿದೆ. ಈಗ ಈ ಪ್ರೊಫೆಸರ್! ಏನಮ್ಮ ಪ್ರೀತಿಯೆಂದರೆ? ಅಂದೆ.
ತಾಯಿ ದಿಗ್ಭ್ರಮೆಗೊಂಡಳು. ಏನೊಂದೂ ಮಾತನಾಡದೆ ಅವರ ಅವರ ಹೆಸರು ಅಡ್ರೆಸ್ ತಿಳಿದುಕೊಂಡಳು. ಮೊಬೈಲ್ ನಂಬರ್ ಕೇಳಿದಳು. ನಾನು ಡಿಲೀಟ್ ಮಾಡಿದ್ದೆ. ಮುಂಜಾನೆ ಎದ್ದು ನನ್ನ ತಾಯಿ ಆತನ ಮನೆಗೆ ಹೋದಳು. ಆದರೆ ಆತ ಬೆಂಗಳೂರಿಗೆ ಹೋಗಿದ್ದ. ತವರಿನಲ್ಲಿದ್ದ ಆತನ ಹೆಂಡತಿಯನ್ನು ಹುಡುಕಿ ಸಂಪರ್ಕಿಸಿದೆವು. ತಕ್ಷಣವೇ ಆಕೆ ಮನೆಗೆ ಬಂದರು. ನಂಬರ್ ಕೊಟ್ಟು, ಪ್ರೊಫೆಸರ್ಗೆ ಫೋನ್ ಮಾಡು ಎಂದರು. ನಿನ್ನೆ ಕಪಾಳಕ್ಕೆ ಬಾರಿಸಿ ಬಂದಿದ್ದೇನೆ. ಈಗ ಅವರು ನನ್ನ ಫೋನ್ ರಿಸೀವ್ ಮಾಡಬಹುದೇ? ಯಾಕೆ ನೀವು ಫೋನ್ ಮಾಡಲು ಹೇಳುತ್ತಿದ್ದೀರಿ ಎಂದೆ. ನಾನು ಹೇಳಿದ ಹಾಗೆ ಅವರೊಂದಿಗೆ ಮಾತನಾಡು ಎಂದರು. ಸರಿ ಎಂದು ಅವರು ಹೇಳಿದ ಹಾಗೆ ಮಾಡಿದೆ; ‘ನಾನು ನಿನ್ನೆ ಹಾಗೆ ಮಾಡಬಾರದಿತ್ತು. ಕ್ಷಮಿಸಿ. ತುಂಬಾ ವಿಚಾರ ಮಾಡಿ ನೋಡಿದೆ. ನನ್ನದೇ ತಪ್ಪು. ನಿಮ್ಮ ಮಾತೇ ಸರಿ. ನೀವು ಹೇಳಿದ ಹಾಗೆ ಕೇಳುತ್ತೇನೆ’ ಒಂದೇ ಸಮ ಉಸುರಿದೆ. ಸ್ಪೀಕರ್ ಆನ್ ಇತ್ತು. ಇಷ್ಟು ಹೇಳಿದ್ದೇ ತಡ, ಅವನು ಮನೆಗೆ ಹೋಗಿದ್ದಾಗ ಹೇಳಿದ್ದನ್ನೇ ಮತ್ತೆ ಹೇಳತೊಡಗಿದ. ಕೂಡಲೇ ತಾಯಿಗೆ ಪೋನ್ ಕೊಟ್ಟೆ. ತಾಯಿ ಪೊಲೀಸ್ ಭಾಷೆಯನ್ನು ಶುರುಮಾಡಿದಳು .
‘ಲೋ ಎಂಥಾ ಪ್ರೊಫೆಸರ್ ನೀ? ನನ್ನ ಮಗಳಿಗೆ ಹೀಗೆ ಕೇಳೋದಕ್ಕೆ ಎಷ್ಟು ಧೈರ್ಯ ನಿನಗೆ? ಎಲ್ಲಿದ್ದೀಯಾ ಹೇಳು, ನಾನೂ ಬಂದು ಕಪಾಳಕ್ಕೆ ಬಿಗಿಯುತ್ತೇನೆ.’
ಅಷ್ಟರಲ್ಲೇ ಕುಸಿದು ಹೋಗಿರಬೇಕು ಅವ. ‘ಕ್ಷಮಿಸಿ ಮೇಡಂ, ನಿಮಗೂ ನಿಮ್ಮ ಮಗಳಿಗೂ ಕಾಲು ಬೀಳುತ್ತೇನೆ. ನಾನು ಹಾಗೆ ಮಾಡಬಾರದಿತ್ತು. ಮರ್ಯಾದೆ ಮುಖ್ಯ ನನಗೆ’ ಎಂದ.
ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಅವನ ಹೆಂಡತಿಯ ಕಣ್ಣುಗಳು ತುಂಬಿಕೊಂಡಿದ್ದವು. ಆತ ತನಗೆ ಸುಮ್ಮಸುಮ್ಮನೆ ಹೊಡೆಯುತ್ತಾನೆ. ಹಾಗಾಗಿ ತಾನು ತವರಿಗೆ ತೆರಳಿದ್ದೇನೆ ಎಂದಳು. ಪಾಪ, ಕ್ಷಮೆ ಯಾಚಿಸಿ ಹೊರಟಳು. ಆದರೆ, ಫೋನಿನಲ್ಲಿ ನಡೆದ ಸಂಭಾಷಣೆಗೆ ತನ್ನ ಹೆಂಡತಿ ಸಾಕ್ಷಿಯಾಗಿದ್ದಾಳೆ ಎನ್ನುವುದು ಆ ಲಂಪಟನಿಗೆ ತಿಳಿದಿಲ್ಲ! ಆದರೆ ಅವಳು ಮನೆಗೆ ಹೋದಮೇಲೆ, ಆ ಲಂಪಟ ಮತ್ತೆ ಫೋನ್ ಮಾಡಿದ. ಮನೆಗೆ ಬಂದು ಕಾಲಿಗೆ ಬೀಳುತ್ತೇನೆಂದು ಗೋಗರೆದ.
ಥೂ, ಅವನು ನನ್ನ ಕಾಲನ್ನು ಮುಟ್ಟುವುದೇ? ಕ್ಷಮಾಪಣೆಯ ನೆಪದಲ್ಲಿ!
(ಮುಂದಿನ ಸತ್ಯ : ಅರುಂಧತಿ ಬರೆದಾಗ)
ಪ್ರತಿಕ್ರಿಯೆಗಾಗಿ : tv9kannadadigital@gmail.com
ಹಿಂದಿನ ಸತ್ಯ : New Column: ಆಗಾಗ ಅರುಂಧತಿ; ‘ನಿನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ ಏಕೆ ಗೊತ್ತೆ?’