ಹಾಸನದ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಕೊಡಗು ಜಿಲ್ಲೆಯ ಸಂಪತ್ ಎಂಬುವರ ಮೃತದೇಹ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಪತ್ತೆಯಾಗಿದೆ. ಕೊಲೆ ಮಾಡಿ ಕಾರಲ್ಲಿ ತಂದು ಪ್ರಪಾತದಲ್ಲಿ ಎಸೆದಿರುವ ಶಂಕೆ ಇದೆ. ಏಪ್ರಿಲ್ 9 ರಂದು ಕುಶಾಲನಗರದಿಂದ ಹಾಸನಕ್ಕೆ ಬಂದಿದ್ದ ಸಂಪತ್ ಏಪ್ರಿಲ್ 10 ರಂದು ಕಾಣೆಯಾಗಿದ್ದರು.ಈ ಘಟನೆಗೆ ಸಂಬಂಧಿಸಿದ ತನಿಖೆ ಚುರುಕುಗೊಂಡಿದೆ.

ಹಾಸನ, ಮೇ 14: ಹಾಸನ (Hassan) ಜಿಲ್ಲೆಯ ಸಕಲೇಶಪುರ (Sakleshpur) ತಾಲೂಕಿನ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಕೊಡುಗು ಜಿಲ್ಲೆಯ ಸಂಪತ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇನ್ನು, ಸಂಪತ್ ಅವರ ಕಾರು ಸಂಪೂರ್ಣ ರಕ್ತಸಿಕ್ತವಾಗಿದೆ. ಮೇಲ್ನೋಟಕ್ಕೆ ಯಾರೋ ಸಂಪತ್ ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ, ಬಳಿಕ ಅವರದ್ದೇ ಕಾರಿನಲ್ಲಿ ಶವ ತಂದು ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ.
ಸಂಪತ್ ಅವರು ಏಪ್ರಿಲ್ 9 ರಂದು ಕುಶಾಲನಗರದಿಂದ ತಮ್ಮ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಬಂದಿದ್ದರು. ಏಪ್ರಿಲ್ 10 ರಂದು ಕಲ್ಲಹಳ್ಳಿ ಗ್ರಾಮದ ಬಳಿ ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತ ಹರಿದಿರುವುದನ್ನು ಗಮನಿಸಿದ್ದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಯಸಳೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಅತ್ತ, ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಸಂಪತ್ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು.
ಕೊಲೆಯಾದ ಸಂಪತ್ ಅವರು ಕುಶಾಲನಗರದ ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಎರಡು ವರ್ಷಗಳ ಹಿಂದೆ ಮಹಿಳೆಯ ಪತಿ ಮತ್ತು ಅವರ ಸಹಚರರು ಸಂಪತ್ ಅವರ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಕುಶಾಲನಗರ ಪಟ್ಟಣದಲ್ಲಿನ ಮಹಿಳೆಯ ಮನೆ ಎದುರೇ ಸಂಪತ್ ಅವರಿಗೆ ಹೊಡೆಯಲಾಗಿತ್ತು. ಅಕ್ರಮ ಸಂಬಂಧವೇ ಕೊಲೆಗೆ ಕಾರಣವಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Wed, 14 May 25