ನಾಲ್ವರ ಹತ್ಯೆ ಪ್ರಕರಣ: ಮಗನಿಗೆ ಗಲ್ಲು, ಅಪ್ಪನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಉತ್ತರ ಕನ್ನಡದ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ನಡೆದ ನಾಲ್ಕು ಜನರ ಕೊಲೆ ಪ್ರಕರಣದಲ್ಲಿ ಅಪ್ಪ ಮತ್ತು ಮಗನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಮಗನಿಗೆ ಗಲ್ಲು ಶಿಕ್ಷೆ ಮತ್ತು ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆಸ್ತಿ ವಿಚಾರಕ್ಕೆ ಒಂದು ಇಡೀ ಕುಟುಂಬದ ಸದಸ್ಯರನ್ನು ಅಪರಾಧಿಗಳು ಕೊಲೆ ಮಾಡಿದ್ದರು. 2023ರ ಫೆಬ್ರುವರಿಯಲ್ಲಿ ಕೊಲೆಯಾಗಿತ್ತು. ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಉತ್ತರ ಕನ್ನಡ, ಮೇ 13: ಆಸ್ತಿಗಾಗಿ ನಾಲ್ವರನ್ನು ಕೊಲೆ ಮಾಡಿದ್ದ ಅಪ್ಪ ಮತ್ತು ಮಗನಿಗೆ ಉತ್ತರ ಕನ್ನಡ (Uttar Kannada) ಜಿಲ್ಲಾ ನ್ಯಾಯಾಲಯ (Court) ಶಿಕ್ಷೆ ವಿಧಿಸಿದೆ. ಮಗ ವಿನಯ್ ಭಟ್ಗೆ ಗಲ್ಲು ಶಿಕ್ಷೆ ಮತ್ತು ಅಪ್ಪ ಶ್ರೀಧರ್ ಭಟ್ಗೆ ಜೀವಾವಧಿ ಶಿಕ್ಷೆ (Life Imprisonment) ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 2023 ರ ಫೆಬ್ರುವರಿ 23 ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ನಡೆದಿದ್ದ ಘೋರ ಘಟನೆಗೆ ಕೊನೆಗೂ ನ್ಯಾಯ ಸಿಕ್ಕಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿ ಗ್ರಾಮದ ನಿವಾಸಿಯಾಗಿದ್ದ ಶಂಭು ಭಟ್ ಎಂಬುವರು ಸುಮಾರು 6 ಏಕರೆ ಅಡಿಕೆ ತೋಟ ಹೊಂದಿದ್ದರು. ಶಂಭು ಭಟ್ ಅವರ ಹಿರಿಯ ಮಗ ಶ್ರೀಧರ್ ಭಟ್ ಅನಾರೋಗ್ಯದಿಂದ 2022ರ ಸೆಪ್ಟೆಂಬರ್ 8 ರಂದು ಮೃತಪಟ್ಟಿದ್ದರು. ಮೃತ ಶ್ರೀಧರ ಭಟ್ ಪತ್ನಿ ವಿದ್ಯಾ ಭಟ್ ಆಸ್ತಿಯಲ್ಲಿ ಪಾಲು ಕೊಡುವಂತೆ ಮನೆಯಲ್ಲಿ ನಿತ್ಯ ಜಗಳವಾಡಲು ಪ್ರಾರಂಭಿಸಿದ್ದರು.
ಈ ಹಿನ್ನೆಲೆಯಲ್ಲಿ ವಿದ್ಯಾ ಭಟ್ ಮಾವ ಶಂಭು ಭಟ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಎಲ್ಲರಿಗೂ ಸಮಾನವಾಗಿ ಆಸ್ತಿ ಹಂಚಿದ್ದರು. ಇದಕ್ಕೆ, “ನಾದಿನಿಯರಿಗೆ ಯಾಕೆ ಆಸ್ತಿಯಲ್ಲಿ ಪಾಲು ಕೊಡುತ್ತೀರಾ?” ಅಂತ ವಿದ್ಯಾ ಭಟ್ ನಿತ್ಯ ಕಿರುಕುಳ ಕೊಡುತ್ತಿದ್ದರು. ಆಸ್ತಿ ವಿಚಾರವಾಗಿ ವಿದ್ಯಾ ಭಟ್ ಪೋಷಕರು ಮತ್ತು ಶಂಭು ಭಟ್ ಅವರ ಕುಟುಂಬದವರ ನಡುವೆ 2023ರ ಫೇಬ್ರುವರಿ 23 ರಂದು ಗಲಾಟೆಯಾಗಿತ್ತು.
ಗಲಾಟೆ ತಾರಕಕ್ಕೇರಿದಾಗ, ಅಪರಾಧಿ ವಿನಯ್ ಭಟ್ ತನ್ನ ಕತ್ತಿಯಿಂದ ಶಂಭು ಭಟ್, ಇವರ ಪತ್ನಿ ಮಹಾದೇವಿ ಭಟ್ ಹಾಗೂ ಕಿರಿಯ ಮಗ ರಾಘವೇಂದ್ರ ಭಟ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದು ಸಾಬೀತಾಗಿದೆ. ಇನ್ನು, ರಾಘವೇಂದ್ರನ ಹೆಂಡತಿ ಕುಸುಮಾ ಭಟ್ ಅವರನ್ನು ಅಪರಾಧಿ ಶ್ರೀಧರ್ ಭಟ್ ಕತ್ತಿಯಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿದೆ.
ಇದನ್ನೂ ಓದಿ: ಉಗ್ರರಿಂದ ತರಬೇತಿ ಪಡೆದಿದ್ದ, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಅರೆಸ್ಟ್
ಒಟ್ಟಾರೆಯಾಗಿ ತನ್ನ ಪಾಲಿಗೆ ಬಂದ ಆಸ್ತಿಯಲ್ಲಿ ಒಳ್ಳೆಯ ಜೀವನ ಮಾಡುವುದರ ಬದಲು, ಅತಿ ಆಸೆಪಟ್ಟ ವಿದ್ಯಾ ಭಟ್, ಮಾವನ ಕುಟುಂಬವನ್ನ ಮಸಣಕ್ಕೆ ಕಳುಹಿಸಿ, ತಮ್ಮನಿಗೆ ಗಲ್ಲಿಗೆರಿಸಿದರೇ, ತಂದೆಗೆ ಜೀವಂತ ಪರ್ಯಂತ ಜೈಲಿನಲ್ಲೇ ಕೊಳೆಯುವಂತ ಮಾಡಿದ್ದಾರೆ.







