ಕರ್ನಾಟಕದ ಈ ಜಿಲ್ಲೆಗಳಲ್ಲಿ ಗಂಡ, ಮಕ್ಕಳೊಂದಿಗೆ ನೆಲೆಸಿರುವ ಪಾಕ್ ಮಹಿಳೆಯರು ಪತ್ತೆ!
ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಯುದ್ಧ ಸಾರಿದೆ. ಜೊತೆಗೆ ಪಾಕ್ ಪ್ರಜೆಗಳನ್ನು ಗುರುತಿಸಿ ವಾಪಸ್ ಕಳುಹಿಸುವಂತೆ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಅಮಿತ್ ಶಾ ಸೂಚನೆ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಅಲರ್ಟ್ ಆದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಪಾಕ್ ಪ್ರಜೆಗಳ ಪತ್ತೆಗೆ ಮುಂದಾಗಿದ್ದಾರೆ. ತುಮಕೂರು, ಮೈಸೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪತ್ತೆ ಆಗಿದ್ದಾರೆ.

ತುಮಕೂರು, ಏಪ್ರಿಲ್ 25: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Terror Attack) ಬಳಿಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಈಗಾಗಲೇ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವೀಸಾಗಳನ್ನು ರದ್ದುಗೊಸಲಾಗಿದೆ. ಜೊತೆಗೆ ಪಾಕ್ ಪ್ರಜೆಗಳನ್ನು (Pakistani citizen) ಗುರುತಿಸಿ ವಾಪಸ್ ಕಳುಹಿಸುವಂತೆ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇತ್ತ ಕರ್ನಾಟಕದಲ್ಲಿ ಅಲರ್ಟ್ ಆದ ಜಿಲ್ಲಾಡಳಿಯ ಮತ್ತು ಪೊಲೀಸ್ ಇಲಾಖೆ, ಪಾಕಿಸ್ತಾನಿಗಳಿಗಾಗಿ ಶೋಧ ನಡೆಸಿದ್ದು, ತುಮಕೂರು, ಮೈಸೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಾಕ್ ಪ್ರಜೆಗಳು ಪತ್ತೆ ಆಗಿದ್ದಾರೆ. ಸದ್ಯ ಮದುವೆಯಾಗಿ ಇಲ್ಲೇ ನೆಲೆಸಿರುವ ಪಾಕ್ ಪ್ರಜೆಗಳಿಗೆ ಇದೀಗ ಆತಂಕ ಶುರುವಾಗಿದೆ.
ತುಮಕೂರು ಜಿಲ್ಲೆಯಲ್ಲಿ ಮೂವರು ಪಾಕಿಸ್ತಾನಿ ಮಹಿಳೆಯರು ಪತ್ತೆ
ತುಮಕೂರು ಜಿಲ್ಲೆಯಲ್ಲಿ ಇಬ್ಬರು ಯುವತಿಯರು ಸೇರಿದಂತೆ ಓರ್ವ ವೃದ್ದೆ ವಾಸವಾಗಿರುವುದು ಪತ್ತೆ ಆಗಿದೆ. ಮದುವೆಯಾಗಿ ಗಂಡ, ಮಕ್ಕಳು, ಸಂಸಾರ ಅಂತ ಪಾಕಿಸ್ತಾನಿ ಮಹಿಳೆಯರು ಇಲ್ಲೇ ನೆಲೆಸಿದ್ದಾರೆ. ಮೂವರ ಗಂಡಂದಿರೂ ಕೂಡ ತುಮಕೂರು ಜಿಲ್ಲೆಯವರಾಗಿದ್ದು, ಪಾಕಿಸ್ತಾನಿ ಮೂಲದ ಮಹಿಳೆಯರನ್ನ ಮದುವೆಯಾಗಿ ಅವರನ್ನ ತುಮಕೂರಿಗೆ ಕರೆ ತಂದು ಇಲ್ಲಿಯೇ ಸಂಸಾರ ನಡೆಸಿದ್ದರು.
ಇದನ್ನೂ ಓದಿ: ಮಗನನ್ನು ಹೆಗಲ ಮೇಲೆ ಹೊತ್ತು, ನನ್ನ ಕೈಹಿಡಿದು ಸುರಕ್ಷಿತ ಸ್ಥಾನಕ್ಕೆ ತಂದವರು ಮುಸಲ್ಮಾನರು: ಪಲ್ಲವಿ
ಒಬ್ಬ ಮಹಿಳೆ 20 ವರ್ಷಗಳಿಂದ, ಇನ್ನುಳಿದ ಇಬ್ಬರು ಹತ್ತು ಹಾಗೂ 15 ವರ್ಷಗಳಿಂದ ತುಮಕೂರಲ್ಲೇ ವಾಸವಾಗಿದ್ದಾರೆ. ಳೆದ ಐದಾರು ವರ್ಷಗಳ ಹಿಂದೆಯೇ ಭಾರತೀಯ ಪೌರತ್ವಕ್ಕಾಗಿ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಮೂವರ ಟ್ರಾಕ್ ರೆಕಾರ್ಟ್ನಲ್ಲಿ ಯಾವುದೇ ತೊಂದರೆಯಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಮೂವರ ಡೇಟಾವನ್ನ ತುಮಕೂರು ಜಿಲ್ಲಾಡಳಿತ ಸಂಗ್ರಹಿಸಿಟ್ಟುಕೊಂಡಿದೆ. ಸದ್ಯ 48 ಗಂಟೆಯೊಳಗೆ ಮಹಿಳೆಯರು ದೇಶ ಬಿಡದೇ ಇದ್ದರೆ ಸಮಸ್ಯೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ.
ಮೈಸೂರಲ್ಲಿ ಮೂವರು ಮಕ್ಕಳು ಸೇರಿದಂತೆ 8 ಜನ ಪಾಕ್ ಪ್ರಜೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾಡಳಿತ
ಇತ್ತ ಮೈಸೂರಲ್ಲಿ ಮೂವರು ಮಕ್ಕಳು ಸೇರಿದಂತೆ 8 ಜನ ಪಾಕ್ ಪ್ರಜೆಗಳ ಬಗ್ಗೆ ಪೊಲೀಸರು ಮತ್ತು ಜಿಲ್ಲಾಡಳಿತ ಮಾಹಿತಿ ಕಲೆಹಾಕಿದ್ದಾರೆ. ಮೈಸೂರಿನಲ್ಲಿ ಇನ್ಯಾರಾದರೂ ಇದ್ದಾರಾ ಎಂಬ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಅಧಿಕೃತವಾಗಿ ಯಾವುದೇ ಪಾಕ್ ಪ್ರಜೆಗಳಿಲ್ಲ.
ಭಟ್ಕಳದಲ್ಲಿ 13 ಜನ ಪಾಕಿಸ್ತಾನಿ ಪ್ರಜೆಗಳು
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 13 ಜನ ಪಾಕಿಸ್ತಾನಿ ಪ್ರಜೆಗಳನ್ನು ಪತ್ತೆ ಮಾಡಲಾಗಿದೆ. ಶಾಶ್ವತವಾಗಿ ವಿಸಾ ಪಡೆದಿರುವ ಹಿನ್ನೆಲೆ ಭಟ್ಕಳದ ಪಾಕಿಸ್ತಾನಿಗಳಿಗೆ ಗಡಿಪಾರು ಭಯವಿಲ್ಲ. ಭಟ್ಕಳ ಮತ್ತು ಪಾಕಿಸ್ತಾನಕ್ಕೆ ಹತ್ತಾರು ಜನರ ವೈವಾಹಿಕ ಸಂಬಂಧವಿದೆ. ಪುರುಷ ಹಾಗೂ ಮಹಿಳೆಯರು ಪಾಕಿಸ್ತಾನಿಗಳನ್ನ ಮದುವೆ ಆಗಿ ಸಂಸಾರ ನಡೆಸುತ್ತಿದ್ದಾರೆ. ಭಟ್ಕಳ ಮೂಲದ ವ್ಯಕ್ತಿಗಳನ್ನು ವಿವಾಹವಾಗಿ ಭಟ್ಕಳದಲ್ಲೇ 10 ಮಂದಿ ಪಾಕಿಸ್ತಾನಿ ಮಹಿಳೆಯರು ಹಾಗೂ ಅವರ ಮಕ್ಕಳು ನೆಲಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ: ಶ್ರೀನಗರದಿಂದ 178 ಕನ್ನಡಿಗರು ಬೆಂಗಳೂರಿಗೆ ವಾಪಸ್
ದೀರ್ಘಾವಧಿ ವೀಸಾ ಪಡೆದಿರುವ ಪಾಕಿಸ್ತಾನಿ ಮಹಿಳೆಯರು ಎರಡು ವರ್ಷಕ್ಕೊಮ್ಮೆ ನವೀಕರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು ಕೂಡ ಕೇಂದ್ರ ಸರ್ಕಾರ ಮಾತ್ರ ಈವರೆಗೂ ಭಾರತ ಪೌರತ್ವ ನೀಡಿಲ್ಲ. ದೀರ್ಘಾವಧಿ ವೀಸಾ ಇರುವುದರಿಂದ ಸದ್ಯ ಪಾಕಿಸ್ತಾನಿ ಮಹಿಳೆಯರು ಭಟ್ಕಳದಲ್ಲೇ ನೆಲಸಿದ್ದಾರೆ. ಸರ್ಕಾರದ ಯಾವುದೇ ಸೂಚನೆ ಬಾರದ ಹಿನ್ನಲೆಯಲ್ಲಿ ಭಟ್ಕಳದಲ್ಲೇ ಇರಲು ಪಾಕಿಸ್ತಾನಿ ಮಹಿಳೆಯರು ತೀರ್ಮಾನಿಸಿದ್ದಾರೆ. ಜೊತೆಗೆ ಜಿಲ್ಲಾ ಪೊಲೀಸರ ಸಂಪರ್ಕದಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ 6 ಪಾಕಿಸ್ತಾನ ಪ್ರಜೆಗಳು
ಬೆಳಗಾವಿ ಜಿಲ್ಲೆಯಲ್ಲಿ 6 ಪಾಕಿಸ್ತಾನಿ ಪ್ರಜೆಗಳು ನೆಲೆಸಿದ್ದಾರೆ ಎಂದು ಬೆಳಗಾವಿ ಗ್ರಾಮಾಂತರ ಎಸ್ಪಿ ಗುಳೇದ್ ಮಾಹಿತಿ ನೀಡಿದ್ದಾರೆ. ಎಲ್‌ಟಿವಿ ವೀಸಾ ಮೇಲೆ 6 ಪಾಕ್ ಪ್ರಜೆಗಳು ಬಹಳ ವರ್ಷಗಳ ಹಿಂದೆ ಬಂದು ನೆಲೆಸಿದ್ದಾರೆ. ಸದ್ಯ 6 ಪಾಕ್ ಪ್ರಜೆಗಳು ಪೊಲೀಸರ ನಿಗಾದಲ್ಲಿದ್ದಾರೆ. ಎಲ್‌ಟಿವಿ ವೀಸಾ ಮೇಲೆ ಬಂದವರ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:59 pm, Fri, 25 April 25







