Literature: ನೆರೆನಾಡ ನುಡಿಯೊಳಗಾಡಿ; ಯಾರ ಬಳಿಯೂ ಇಲ್ಲದ್ದೇ? ನೋಡಿದರೆ ನೋಡಿಕೊಂಡು ಹೋಗಲಿ

|

Updated on: Mar 18, 2022 | 11:40 AM

Indraneela Story by A. Vennila : ಇದು ಶುರುವಾಗುವಾಗಲೂ ಸಮಸ್ಯೆ, ನಿಲ್ಲುವಾಗಲೂ ಸಮಸ್ಯೆ. ದೇಹದ ಸಮಸ್ಯೆ ಹೇಳಿಕೊಳ್ಳಲು ಸರಿಯಾದ ಆಸಾಮಿ ಯಾರು? ಕಣ್ಣನೇ, ಡಾಕ್ಟರೇ, ಆಫೀಸಿನ ಗೆಳತಿಯರೇ, ಗಂಡು ಸ್ನೇಹಿತರೇ? ಹಾಗೆ ಯಾರಿದ್ದಾರೆ ತನಗೆ? ಅಥವಾ ಮಕ್ಕಳೇ?

Literature: ನೆರೆನಾಡ ನುಡಿಯೊಳಗಾಡಿ; ಯಾರ ಬಳಿಯೂ ಇಲ್ಲದ್ದೇ? ನೋಡಿದರೆ ನೋಡಿಕೊಂಡು ಹೋಗಲಿ
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಸೀರೆ ಯಾವಾಗಲೂ ಮೊಳಕಾಲಿಗಿಂತ ಮೇಲೆಯೇ ಎತ್ತಿರುವುದು. “ಯಾಕೆ ಅತ್ತೆ ಹೀಗೆ ಕೂರುತ್ತೀಯಾ?” ಎಂದರೆ ಸಾಕು, “ಯಾರ ಬಳಿಯೂ ಇಲ್ಲದ ಅಪೂರ್ವವಾದದ್ದೇ ಅದು? ನೋಡಿದರೆ ನೋಡಿಕೊಂಡು ಹೋಗಲಿ” ಎಂದು ಮಧ್ಯೆ ಇರುವ ಸೆರಗನ್ನು ಒಮ್ಮೆ ಎತ್ತಿ ತೋರಿಸುವಳು. ಅದಕ್ಕಿಂತ ಹೆಚ್ಚಾಗಿ ಮಾತು ಬೆಳೆದರೆ ಅತ್ತೆ ಮಾತನಾಡುವುದನ್ನು ಕಿವಿಕೊಟ್ಟು ಕೇಳಲು ಸಾಧ್ಯವಿಲ್ಲ. ಕೆಳಗಿನ ಸೀರೆಯನ್ನು ಎತ್ತಿ ತೋರಿಸುವಳು. “ನೀನು ಹುಟ್ಟಿದ ಯೋನಿಯೇ ಅಲ್ಲವೇ” ಎಂದು ಮಧ್ಯ ರಸ್ತೆಯಲ್ಲಿ ಕೂಗಿ ಕಿರುಚುವಳು. ಆಸ್ಪತ್ರೆಯ ಆಯಾಳ ಮುಂದೆ ಕಾಲನ್ನು ಆಗಲಿಸಿ ನಿಂತಾಗಲೇ, ನೀಲಾ ಅತ್ತೆಗೆ ಹೇಗೆ ದೇಹದ ನಾಚಿಕೆ ಕಳೆದುಹೋಗಿರಬಹುದು ಎಂದು ಅರ್ಥವಾಯಿತು. ನನ್ನ ಹೆಸರು ಹೇಳಿದರೆ ನೆನಪಾಗುವುದು ದೇಹವೇ. ಆ ದೇಹದ ಹೊರನೋಟವನ್ನು ಸಂಪೂರ್ಣವಾಗಿ ನೋಡಲು ಇಪ್ಪತ್ಮೂರು ವರ್ಷಗಳಾದವು. ಮಗು ಹೆತ್ತ ಮೇಲೂ, ಇನ್ನೂ ದೇಹದ ಸೂಕ್ಷ್ಮತೆ ಅರ್ಥವಾಗಲಿಲ್ಲ. ಹಸಿವಾದರೆ ತಿಳಿಯುತ್ತದೆ. ಢಿಕ್ಕಿ ಹೊಡೆದರೆ ನೋವಾಗುತ್ತದೆ. ದೇಹದ ಬಗ್ಗೆ ನನಗೆ ಬೇರೇನು ಗೊತ್ತು?

 

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 5)

ದೇಹಪೂರ್ತಿ ಹರಿದು ನಡುಕ ಉಂಟುಮಾಡುವ ಅಲೆಯನ್ನು ಏನು ಮಾಡುವುದು? ಮಧ್ಯಮ ವಯಸ್ಸನ್ನು ದಾಟುವ ನನಗೆ, ನನ್ನ ದೇಹ ಅರ್ಥವಾಗುವುದಿಲ್ಲ ಎಂಬುದು ವ್ಯಥೆಯಲ್ಲವೇ? ದೇಹದ ಮಜ್ಜೆಗಳು ಸ್ವಲ್ಪ ಸುಕ್ಕಾಗಿವೆ. ಕಣ್ಣಿನ ಕೆಳಗೆ ಕಪ್ಪು ವಲಯ ಹೆಚ್ಚಾಗಿದೆ. ನೋಡುವ ಗಂಡಸರು ಮತ್ತೊಮ್ಮೆ ಹಿಂತಿರುಗಿ ನೋಡುವ ಆಕರ್ಷಣೆಯನ್ನು ದೇಹ ಕಳೆದುಕೊಂಡಿದೆ.

ಪರ್ವ ಕಳೆದಂತೆ ದೇಹ ಯಾಕೆ ಹೀಗೆ ತತ್ತರಿಸುತ್ತಿದೆ? ಡಾಕ್ಟರುಗಳೆಲ್ಲಾ ಹೇಳುವ ಒಂದೇ ಪದ ‘ಮೆನೋಪಾಸ್ ಪ್ರಾಬ್ಲಂ.’ ಮೆನೋಪಾಸ್ ಪ್ರಾರಂಭವಾಗುವಾಗಲೂ ಪ್ರಾಬ್ಲಂ. ನಿಲ್ಲುವಾಗಲೂ ಪ್ರಾಬ್ಲಂ. ದೇಹದ ಸಮಸ್ಯೆಯನ್ನು ಹೇಳಲು ಸರಿಯಾದ ಆಸಾಮಿ ಯಾರು? ಕಣ್ಣನೇ? ಡಾಕ್ಟರೇ? ಆಫೀಸಿನ ಗೆಳತಿಯರೇ? ಗಂಡು ಸ್ನೇಹಿತರೇ? ಹಾಗೆ ಯಾರಾದರೂ ತನಗೆ ಇದ್ದಾರೆಯೇ? ಮಕ್ಕಳೇ? ಉಳಿದವರ ಬಳಿ ಹೇಳುವ ಮುನ್ನ, ನನಗೆ ನಾನೇ ಹೇಳಿಕೊಳ್ಳಲು, ನನ್ನನ್ನೇ ಅಧ್ಯಯನ ಮಾಡುತ್ತೇನೆ. ನನ್ನ ದೇಹಕ್ಕೆ ಏನಾಗಿದೆ? ಯಾಕೆ ಈ ತವಕ? ಒಳಗಿಂದ ಹಿಂಸಿಸುವ ಖಾಯಿಲೆ ಯಾವುದು?

*

ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ನನಗೆ ಬೀರು ಕೊಂಡುಕೊಂಡರೆ ಕನ್ನಡಿ ಇರುವುದೇ ಆಗಬೇಕು

ನಾನು ಸಂಪೂರ್ಣವಾಗಿ ಕೆಲಸ ಮಾಡುತ್ತಿದ್ದರೂ, ದೇಹದ ಮೇಲಿನ ಗಮನ ಬದಲಾಗಲಿಲ್ಲ. ದೇಹದೊಳಗೆ ಏನು ನಡೆಯುತ್ತಿದೆ ಎಂಬುದನ್ನು ನಾನೇ ಗಮನಿಸಲು ತೊಡಗಿದೆ. ದೇಹಕ್ಕೆ ಏನೆಂದು ಡಾಕ್ಟರ್ ನಮ್ಮನ್ನೇ ಕೇಳುತ್ತಾರೆ. ಜ್ವರ, ತಲೆನೋವು, ಹೊಟ್ಟೆ ನೋವು ಎಂದರೆ ಮಾತ್ರೆ ಕೊಟ್ಟು, ಸೂಜಿ ಚುಚ್ಚುತ್ತಾರೆ. “ಏನಾಗುತ್ತಿದೆ ಎಂದು ಗೊತ್ತಿಲ್ಲ, ಏನೋ ಆಗುತ್ತಿದೆ ಎಂದು ಹೇಳಿದರೆ”, ಮೇಲೆ ಕೆಳಗೆ ನೋಡಿ “ಏನಾಗುತ್ತಿದೆ ಎಂದು ಹೇಳಿದರಲ್ಲವೇ ತಿಳಿಯುತ್ತದೆ” ಎಂದು ಕೋಪಿಸಿಕೊಳ್ಳುತ್ತಾರೆ. ನಮ್ಮ ಬಾಯಿಂದ ಏನು ರೋಗ ಎಂಬುದನ್ನು ಕೇಳಿಯೇ ತಿಳಿದುಕೊಳ್ಳುತ್ತಾರೆ. ಪ್ರತಿಸಲವೂ ಡಾಕ್ಟರ್ ಮುಂದೆ ನಿಂತು ಏನು ಆಗುತ್ತಿದೆ ಎಂಬುದನ್ನು ಹೇಳಲು ತಿಳಿಯದೆ ಅಸಹ್ಯಪಟ್ಟುಕೊಳ್ಳಬೇಕಾಗುತ್ತದೆ. ಕಣ್ಣನಿಗೆ ಉಳಿದವರ ಮುಂದೆ ಮಾತ್ರವೇ ಕೋಪ ಬರುತ್ತದೆ. “ಏನಾಗುತ್ತಿದೆ ಎಂದು ಹೇಗೆ ತಿಳಿಯದೇ ಹೋಗುತ್ತದೆ?” ಎಂದು ಕಣ್ಣನ್ನು ಹೊರಳಿಸುತ್ತಾನೆ. ಈ ಸಲ ಯಾರ ಬಳಿಯೂ ಹೇಳಲಿಲ್ಲ. ಬೆಳಗ್ಗೆಯಿಂದ ದೇಹವನ್ನು ನಾನೇ ಎಚ್ಚರಿಕೆಯಿಂದ ಗಮನಿಸುತ್ತಿದ್ದೇನೆ.

ಹೊರ ನೋಟಕ್ಕೆ ಕಾಣುವ ದೇಹವನ್ನು ದಿಟ್ಟಿಸಿ ನೋಡುವುದು ಸುಲಭ. ಕಾಲಿನ ಉಗುರುಗಳನ್ನು ನೋಡಬಹುದು. ಮುಖವನ್ನು ನೋಡಬಹುದು. ಕುತ್ತಿಗೆಯನ್ನು ನೋಡಬಹುದು. ನೋಡಲಾಗದ ಬೆನ್ನಿನ ಭಾಗವನ್ನೂ ಸಹ ಮುಂದೆ ಒಂದು ಕನ್ನಡಿ ಇಟ್ಟುಕೊಂಡು, ಹಾಗೆ ಹೀಗೆ ತಿರುಗಿ, ಅರೆಕೊರೆಯಾಗಿ ನೋಡಿಬಿಡಬಹುದು. ದೇಹದ ಒಳಗೆ ನಡೆಯುವುದನ್ನು ಹೇಗೆ ಗಮನಿಸುವುದು? ಸ್ಕೇನ್ ಮೆಷಿನ್ ತರಹ ಮನಸ್ಸು ಕೆಲಸ ಮಾಡುತ್ತದೆಯೇ?

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ನನ್ನ ದೇಹವಲ್ಲವೇ, ನಾನು ನೋಡಿದರೆ ಏನು ತಪ್ಪು?

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi