AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ನನಗೆ ಬೀರು ಕೊಂಡುಕೊಂಡರೆ ಕನ್ನಡಿ ಇರುವುದೇ ಆಗಬೇಕು

Indraneela Story by A. Vennila : ಆ ಕೋಣೆಯೊಳಗೆ ಓಡಾಡುವಾಗಲೂ ಕನ್ನಡಿಯಲ್ಲಿ ನನ್ನ ಸಂಪೂರ್ಣ ಬಿಂಬ ನೋಡುತ್ತಿದ್ದೆ. ಪ್ರತಿಸಲ ನನ್ನ ಆಕಾರ ನೋಡುವಾಗ ರಸಿಕತೆಯಿಂದ ನಿಂತು ನೋಡಲು ಕನ್ನಡಿ ತೋರುತ್ತಿತ್ತು. ನಾನು ರೂಪಸಿಯೇ? ಅಲ್ಲವೇ? ಪ್ರಶ್ನೆಯೇ ಇಲ್ಲ.

Literature: ನೆರೆನಾಡ ನುಡಿಯೊಳಗಾಡಿ; ನನಗೆ ಬೀರು ಕೊಂಡುಕೊಂಡರೆ ಕನ್ನಡಿ ಇರುವುದೇ ಆಗಬೇಕು
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
ಶ್ರೀದೇವಿ ಕಳಸದ
|

Updated on: Mar 18, 2022 | 10:58 AM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಸ್ನಾನದಮನೆ ಕಟ್ಟಿದ ಮೇಲೆ ಗಂಡಸರ ನೋಟದಿಂದ ತಪ್ಪಿಸಿಕೊಂಡರೂ, ಒಂದು ದಿನವೂ ನನ್ನ ಇಷ್ಟದಂತೆ ಸ್ನಾನ ಮಾಡಲು ಅಮ್ಮಅನುಮತಿಸಲೇ ಇಲ್ಲ. ಸ್ನಾನದ ಕೊಠಡಿಗೆ ಹೋದಕೂಡಲೇ ಪ್ರಶ್ನೆಗಳನ್ನು ಕೇಳುತ್ತಾಳೆ. “ಯಾಕೆ ಬಾಗಿಲು ಚಿಲುಕ ಹಾಕಿ ಕೊಳ್ಳುತ್ತೀಯಾ. ಇಲ್ಲಿ ಯಾರಿದ್ದಾರೆ ನೋಡೋದಿಕ್ಕೆ” ಎಂದು ಚಿಲುಕ ಹಾಕುವಾಗಲೇ ನಾಲ್ಕು ಮನೆಗೆ ಕೇಳಿಸುವಂತೆ ಕಿರುಚುತ್ತಾಳೆ. ‘‘ಚಿಲುಕ ಹಾಕಿಕೊಳ್ಳದೆ ಇರುವುದಕ್ಕೆ ಯಾಕೆ ಬಾತ್​ರೂ” ಎಂದು ಕೋಪ ಬಂದರೂ ಹೊರಗೆ ತೋರಿಸಲು ಸಾಧ್ಯವಿಲ್ಲ. ಬೆನ್ನುಜ್ಜುತ್ತೇನೆ ಎಂದು ಬರುತ್ತಾಳೆ. “ನೀನೇ ಉಜ್ಜಿಕೊಂಡರೆ ಎಣ್ಣೆ ಹೋಗೋದಿಲ್ಲ. ತಿರುಗು ಈ ಕಡೆ, ನಾನು ಚೆನ್ನಾಗಿ ಉಜ್ಜುತ್ತೇನೆ” ಎಂದು ತಲೆಗೆ ಸೀಗೆಕಾಯಿ ಹಚ್ಚಿಬಿಡುತ್ತಾಳೆ. ಮದುವೆಯಾಗಿ ಮನೆಗೆ ಬಂದಾಗಲೂ ಸಹ, “ಎಲ್ಲೆಲ್ಲಾ ನೋವಿದೆಯೋ, ಬಿಸಿಯಾಗಿ ನೀರು ಸುರಿದುಕೋ” ಎಂದು ಒಳಗೆ ನುಗ್ಗಿಬಿಡುತ್ತಾಳೆ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 3)

ದೇಹವನ್ನು ಸಂಪೂರ್ಣವಾಗಿ ಗಮನಿಸಿದಾಗ ಇಪ್ಪತ್ಮೂರು ವಯಸ್ಸಾಯಿತು. ಆಳೆತ್ತರದ ಕನ್ನಡಿ ಇಟ್ಟ ಬೀರುವನ್ನೇ ಕೊಂಡುಕೊಳ್ಳಬೇಕು ಎಂದು ಅಪ್ಪನ ಬಳಿ ಹಟ ಮಾಡಿ ತೆಗೆದುಕೊಂಡೆ. “ಅದು ಯಾಕೆ ಒಂದು ವರ್ಷದಲ್ಲಿ ರಸ ಹೋಗುತ್ತದೆ, ನೋಡಲು ಚೆನ್ನಾಗಿರುವುದಿಲ್ಲ” ಎಂದು ನಿರಾಕರಿಸಿದವರ ಬಳಿ, “ಪರವಾಗಿಲ್ಲ, ನನಗೆ ಬೀರು ಕೊಂಡುಕೊಂಡರೆ ಕನ್ನಡಿ ಇರುವುದೇ ಆಗಬೇಕು” ಎಂದು ಕಡಾಖಂಡಿತವಾಗಿ ಹೇಳಿದೆ. “ಮುಖ ನೋಡಿಕೊಳ್ಳಲು ಚಿಕ್ಕ ಕನ್ನಡಿ ಇದೆಯಲ್ಲಾ, ಬೀರುವಿನಲ್ಲಿ ಯಾಕೇ ಕನ್ನಡಿ?” ಎಂದು ಅಮ್ಮ ನಿರಾಕರಿಸಿ ನೋಡಿದಳು. ಅಪ್ಪ ಕನ್ನಡಿಯ ವಿಷಯದಲ್ಲಿ ನನ್ನ ಮಾತನ್ನು ಕೇಳಿದರು.

ಅಮ್ಮನ ಬಳಿ ಒಂದು ಕೈಯಗಲದ ಕನ್ನಡಿ ಇದೆ. ಸಾಯಂಕಾಲವಾದರೆ, ಬೀದಿಯ ಜಗುಲಿಯ ಮೇಲೆ ಕುಳಿತು, ತಲೆ ಬಾಚಿ, ತುರಬು ಹಾಕಿಕೊಳ್ಳುತ್ತಾಳೆ. ಕತ್ತು, ಹಣೆಯಲ್ಲಿ ಮಿನುಗುವ ಎಣ್ಣೆಯನ್ನು ಸೆರಗಿನಿಂದ ಒರಸಿಕೊಳ್ಳುತ್ತಲೇ ಆ ಕೈಯಗಲದ ಕನ್ನಡಿಯನ್ನು ತೆಗೆಯುತ್ತಾಳೆ. ಮುಖ ಪೂರ್ತಿ ಕಾಣಿಸುವುದಿಲ್ಲ. ಒಂದಡಿ ದೂರ ಇಟ್ಟುಕೊಂಡು ನೋಡಿದರೆ ಹಣೆಯವರೆಗೆ ಕಾಣುತ್ತದೆ.

ಭಾಗ 1 : Literature; ನೆರೆನಾಡ ನುಡಿಯೊಳಗಾಡಿ; ತಮಿಳು ಲೇಖಕಿ ಅ. ವೆನ್ನಿಲಾ ಬರೆದ ಕಥೆ ‘ಇಂದ್ರನೀಲ’

ಅಮ್ಮ ಹಣೆಯಲ್ಲಿಟ್ಟಿರುವ ದೊಡ್ಡ ಕುಂಕುಮವನ್ನು, ಕನ್ನಡಿಯನ್ನು ಬಗ್ಗಿಸಿ ಹಿಡಿದುಕೊಂಡು ಸರಿಯಾಗಿದೆಯೇ ಎಂದು ನೋಡುತ್ತಾಳೆ. ಬಲಗಡೆಗೂ, ಎಡಗಡೆಗೂ ಮುಖವನ್ನು ತಿರುಗಿಸಿ ನೋಡಿಕೊಳ್ಳುತ್ತಾಳೆ. ಪೂರ್ತಿಯಾಗಿ ರಸ ಹೋದ ಆ ಕನ್ನಡಿಯಲ್ಲಿ ಅಮ್ಮ ಏನನ್ನು ನೋಡುತ್ತಾಳೆ ಎಂದು ತಿಳಿಯದು. ಅದೇ ಅಮ್ಮ ತನ್ನನ್ನು ನೋಡಿಕೊಳ್ಳುವ ಸಮಯ. ಸ್ನಾನ ಮಾಡಿ ಬರುವಾಗಲೇ ಗೂಡಲ್ಲಿರುವ ಕುಂಕುಮವನ್ನು ತೆಗೆದು, ಕನ್ನಡಿ ನೋಡದೆ ಹಣೆಯಲ್ಲಿ ಸರಿಯಾಗಿ ಇಟ್ಟುಕೊಳ್ಳುತ್ತಾಳೆ. ಹೆಸರಿಗೆ ಮಾತ್ರ ಕನ್ನಡಿ ನೋಡುವುದು. ನನ್ನ ಮದುವೆಯ ಬಾಗಿನದಲ್ಲೂ ಕೈಯಗಲದ ಕನ್ನಡಿ ಒಂದಿತ್ತು.

ಅಳೆತ್ತರದ ಕನ್ನಡಿ ಇಟ್ಟ ಬೀರು ನನ್ನೊಂದಿಗೆ ಬಂದಾಗ, ಕಳ್ಳತನದಿಂದ ಮರೆಮಾಚಿದ ಸಂತೋಷವೇ ಇತ್ತು. ಮಲಗುವ ಕೋಣೆಯಲ್ಲಿ ಮಂಚದ ಎದುರಿನಲ್ಲಿ ಬೀರುವನ್ನು ಇಡಲು ಹೇಳಿದೆ. ಬೀರುವನ್ನು ತೆರೆಯುವಾಗಲೂ, ಮುಚ್ಚುವಾಗಲೂ, ಆ ಕೋಣೆಯೊಳಗೆ ಓಡಾಡುವಾಗಲೂ ಕನ್ನಡಿಯಲ್ಲಿ ಕಾಣುವ ನನ್ನ ಸಂಪೂರ್ಣ ಬಿಂಬವನ್ನು ನೋಡುತ್ತಿದ್ದೆ. ಪ್ರತಿಸಲ ನನ್ನ ಆಕಾರವನ್ನು ನೋಡುವಾಗ ರಸಿಕತೆಯಿಂದ ನಿಂತು ನೋಡಲು ಕನ್ನಡಿ ತೋರುತ್ತಿತ್ತು. ನಾನು ರೂಪಸಿಯೇ? ರೂಪಸಿ ಅಲ್ಲವೇ? ಪ್ರಶ್ನೆಯೇ ಇಲ್ಲ. ದೇಹದ ಪೂರ್ಣತ್ವವನ್ನು ರಸಿಕತೆಯಿಂದ ನೋಡಲು ಉತ್ತೇಜನ ನೀಡಿತು. ಮುಖವನ್ನು ತಿರುಗಿಸಿ ಕನ್ನಡಿಯಲ್ಲಿ ಹಿಂದಿನ ಭಾಗವನ್ನು ನೋಡಿಕೊಂಡು ಉಡುಗೆಯನ್ನು ಸರಿ ಮಾಡಿಕೊಳ್ಳುವಾಗ ಒಂದು ಉತ್ಸಾಹ ದೊರಕುತ್ತಿತ್ತು. ಮಧ್ಯರಾತ್ರಿಯಲ್ಲಿ ಕೋಣೆಯ ಕಡಿಮೆ ಬೆಳಕಿನಲ್ಲಿ ಕಣ್ಣನೊಂದಿಗೆ ನೋಡಿದ ಮೊದಲ ನಿರ್ವಾಣ, ಗುಡಿಯ ಪ್ರತಿಮೆಯಂತೆ ಮನಸ್ಸಿನಲ್ಲಿ ನಿಂತಿದೆ. ಬಾಗಿಲ ಚಿಲುಕ ಹಾಕಿಕೊಂಡು ಬಟ್ಟೆ ಬದಲಾಯಿಸುವ ಸಮಯಗಳಲ್ಲಿ ಗಾಬರಿಯಿಂದಲೇ ದೇಹವನ್ನು ನೋಡಲು ಸಾಧ್ಯವಾಯಿತು. ಅಪರಾಧ ಮಾಡುವ ಪ್ರಜ್ಞೆ ಇರುತ್ತಿತ್ತು.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಭಾಗ 1 : Literature: ನೆರೆನಾಡ ನುಡಿಯೊಳಗಾಡಿ; ನಾದಿಟ್ಟ ಹಿಟ್ಟಿನ ಉಂಡೆಯಂತೆ ಏನನ್ನೂ ಹೊರಗೆ ತೋರಿಸದಂತಿದೆ

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi