AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ನಾದಿಟ್ಟ ಹಿಟ್ಟಿನ ಉಂಡೆಯಂತೆ ಏನನ್ನೂ ಹೊರಗೆ ತೋರಿಸದಂತಿದೆ

Indraneela Story by A. Vennila : ಈ ದೇಹವನ್ನು ಎಷ್ಟು ಸಲ ಸಂಪೂರ್ಣವಾಗಿ ನೋಡಿದ್ದೇನೆ? ಹದಿನೈದು ವಯಸ್ಸಿನವರೆಗೆ ಮನೆಯಲ್ಲಿ ಸ್ನಾನದ ಕೊಠಡಿ ಇರಲಿಲ್ಲ. ಮನೆಯೊಳಗಿರುವ ನಡುಅಂಗಳದಲ್ಲೇ ಸ್ನಾನ. ಕೂಡುಕುಟುಂಬದಲ್ಲಿ ಸದಾ ಜನರ ಓಡಾಟ.

Literature: ನೆರೆನಾಡ ನುಡಿಯೊಳಗಾಡಿ; ನಾದಿಟ್ಟ ಹಿಟ್ಟಿನ ಉಂಡೆಯಂತೆ ಏನನ್ನೂ ಹೊರಗೆ ತೋರಿಸದಂತಿದೆ
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
ಶ್ರೀದೇವಿ ಕಳಸದ
|

Updated on: Mar 18, 2022 | 10:37 AM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಒಂಭತ್ತನೆಯ ತರಗತಿಯಲ್ಲಿ ರಕ್ತನಾಳಗಳ ಬಗ್ಗೆ ಮೊದಮೊದಲು ನೋಡಿದ ನಕ್ಷೆ ಕಣ್ಣಮುಂದೆ ನಿಂತಿತು. ರಕ್ತ ನಾಳಗಳು ಗೋಜಲಾದ ದಾರದ ಉಂಡೆಗಳಂತೆ ದೇಹ ಪೂರ್ತಿ ಹೆಣೆದುಕೊಂಡಿರುತ್ತವೆ. ಪ್ರತಿ ನಾಳವೂ ಎಲ್ಲಿಂದ ಎಲ್ಲಿಗೆ ಹೋಗುತ್ತದೆ? ಯಾವುದು ಪ್ರಾರಂಭ? ಯಾವುದು ಕೊನೆ? ಮೇಲಿಂದ ಕೆಳಗೆ ಹೋಗುತ್ತಿದೆಯೇ? ಕೆಳಗಿಂದ ಮೇಲಕ್ಕೆ ಹೋಗುತ್ತಿದೆಯೇ? ಓದಿ ಮುಗಿಸುವವರೆಗೆ ಅರ್ಥಮಾಡಿಕೊಳ್ಳಲಾಗಲಿಲ್ಲ. ಸ್ನಾಯುಗಳಿಲ್ಲದ ರಕ್ತಮಂಡಲದಲ್ಲಿ ನಾಳಗಳ ಓಟವೇ ನನಗೆ ನೋವಾಗಿ ಕಾಣುತ್ತಿದೆಯೇ? ಸಣ್ಣ ಸೂಜಿ ಚುಚ್ಚಿದರೂ ನೋವನ್ನು ಎತ್ತಿ ತೋರಿಸುತ್ತದೆ ದೇಹ. ನಾದಿಟ್ಟ ಹಿಟ್ಟಿನ ಉಂಡೆಯಂತೆ ಏನನ್ನೂ ಹೊರಗೆ ತೋರಿಸದಂತಿದೆ. ಗಮನವನ್ನು ಇನ್ನೂ ಕೇಂದ್ರೀಕರಿಸಿದೆ. ಈ ದೇಹವನ್ನು ಎಷ್ಟು ಸಲ ಸಂಪೂರ್ಣವಾಗಿ ನೋಡಿದ್ದೇನೆ? ಹದಿನೈದು ವಯಸ್ಸಿನವರೆಗೆ ಮನೆಯಲ್ಲಿ ಸ್ನಾನದ ಕೊಠಡಿ ಇರಲಿಲ್ಲ. ಮನೆಯೊಳಗಿರುವ ನಡುಅಂಗಳದಲ್ಲೇ ಸ್ನಾನ. ಕೂಡುಕುಟುಂಬದಲ್ಲಿ ಸದಾ ಜನರ ಓಡಾಟ. ಅಮ್ಮ, ಚಿಕ್ಕಮ್ಮ, ಅಕ್ಕ ಎಲ್ಲರೂ ಹೊಸಿಲಿಗೆ ಆತುಕೊಂಡಿರುವ ಅಡುಗೆಯಮನೆಯಲ್ಲೇ ಕೆಲಸ. ಮನೆಪೂರ್ತಿ ಮಕ್ಕಳ ಓಡಾಟ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 2)

ಅಕ್ಕಪಕ್ಕದ ಹೆಂಗಸರು ಸಾಸುವೆ, ಹಸಿಮೆಣಸಿನಕಾಯಿ, ಕರಿಬೇವಿನಸೊಪ್ಪು ಸಾಲ ಪಡೆದು ಹೋಗಲು ಬಂದು ಹೋಗುತ್ತಿರುತ್ತಾರೆ. ಅಷ್ಟು ಜನರ ಮುಂದೆ ನಾನು ಸ್ನಾನ ಮಾಡಬೇಕು. ತೊಟ್ಟಿಯಿಂದ ದೊಡ್ಡ ಬಕೆಟ್ಟಿನಲ್ಲಿ ನೀರು ಮೊಗೆದು, ಎದೆಯ ಮೇಲಕ್ಕೆ ಲಂಗವನ್ನು ಏರಿಸಿ, ಸ್ನಾನ ಮಾಡಲು ಕೂರುವಾಗ ದೇಹ ಮುದುಡಿ ಹೋಗುತ್ತದೆ. ದೊಡ್ಡ ಅನ್ನದ ಕುಕ್ಕೆಯ ಹಿಂದೆ ಮರೆಮಾಚಿಕೊಳ್ಳಲು ದೇಹ ತವಕಿಸುತ್ತದೆ. ಎಲ್ಲರೂ ಕೆಲಸ ಮಾಡುವಂತೆ ಕಾಣುತ್ತದೆ. ಕಣ್ಣು ಸ್ನಾನ ಮಾಡುವ ಅಸಾಮಿಯನ್ನು ಒಂದು ನೋಟ ನೋಡುತ್ತದೆ. ಪಕ್ಕದ ಮನೆಯ ಹುಡುಗರು ಆ ಸಮಯದಲ್ಲಿ ಖಂಡಿತವಾಗಿ ಒಂದೆರಡು ಸಲ ಮನೆಯೊಳಗೆ ಬಂದು ಹೋಗುತ್ತಾರೆ. ಯಾಕೆ ಬಂದರು, ಬಂದ ಹಾಗೆಯೇ ಯಾಕೆ ಹೊರಗೆ ಹೊರಟು ಹೋದರು? ಯಾರಿಗೂ ಪ್ರಶ್ನೆಯೇ ಏಳುವುದಿಲ್ಲ.

“ಕುತ್ತಿಗೆಯನ್ನು ನೋಡು ಕಪ್ಪಾಗಿದೆ, ಚೆನ್ನಾಗಿ ಉಜ್ಜಿ ಸ್ನಾನ ಮಾಡು” ಅಮ್ಮ ಜೋರಾಗಿ ಕೂಗಿ ಹೇಳುತ್ತಾಳೆ. ದಿನ ಈ ಮಾತನ್ನು ಮರೆಯುವುದಿಲ್ಲ. ಕುಕ್ಕರಗಾಲು ಹಾಕಿಕೊಂಡು ಕುಳಿತಿರುವ ದೇಹದಲ್ಲಿ ಎದೆಯ ಮೇಲೆ ಇರುವ ಭಾಗವೇ ಹೊರಗೆ ಕಾಣುತ್ತದೆ. ಅವಸರವಾಗಿ ಕುತ್ತಿಗೆಗೂ ಮುಖಕ್ಕೂ ಕೈಗಳಿಗೂ ಸೋಪು ಹಾಕಿ ಉಜ್ಜಿಕೊಳ್ಳುತ್ತೇನೆ. ಪಾದಗಳನ್ನು ಹೊರಗೆ ಚಾಚಿ, ಹೆಸರಿಗೆ ಉಜ್ಜಿದ ಹಾಗೆ ಮಾಡಿ, ನೀರು ಸುರಿದುಕೊಳ್ಳುತ್ತೇನೆ. ದೇಹವನ್ನು ಪೂರ್ತಿಯಾಗಿ ಉಜ್ಜಿ ಸ್ನಾನ ಮಾಡುವ ಅಭ್ಯಾಸ, ಪ್ರತ್ಯೇಕ ಸ್ನಾನದ ಕೊಠಡಿ ಬಂದ ಮೇಲೆಯೇ ಸಾಧ್ಯವಾಯಿತು. ಬೆಳದ ದೇಹವನ್ನು ಸ್ನಾನದ ಕೊಠಡಿಯೊಳಗೆ ಮೊದಮೊದಲು ನೋಡಿದೆ. “ಇನ್ನು ಮುಂದೆ ಪೆಟ್ಟಿಕೋಟ್ ಹಾಕಿಕೊಳ್ಳಕೂಡದು. ಒಳಬಾಡಿ ಹಾಕಿಕೋ. ಎದೆ ಇಳಿದುಹೋದರೇ ಮುದುಕಿಯಂತೆ ಇರುತ್ತೆ” ಎಂದು ಚಿಕ್ಕಮ್ಮನ ಮುಂದೆಯೇ ಅಮ್ಮ ಕೂಗಿ ಹೇಳುತ್ತಾಳೆ. ಬೆಳೆದ ಮೊಲೆಗಳನ್ನು ನೋಡಿದೆ. ಕಾಯಿ ಮಾವಿನಂತೆ ಕಲ್ಲಾಗಿತ್ತು. ಮುಟ್ಟಲು ನಾಚಿಕೆಯಾಯಿತು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಯಾವದರಲ್ಲಿಯೂ ನಿನ್ನ ಜೀವ ಇಡಬ್ಯಾಡ ಬೇಟ್ಯಾ ’

‘ಕಣ್ಣಗಿಗೆ ಹೊರಗೆ ಕಾಣುವುದಿಲ್ಲ. ಯಾವ ಅಂಗಿ ತೊಟ್ಟರೂ, ಮುಂದಕ್ಕೆ ಚಾಚಿಕೊಂಡು ನಿಲ್ಲುವುದಿಲ್ಲ. ನನಗೆ ಯಾಕೆ ಇಷ್ಟು ದೊಡ್ಡದಾಗಿ ಬೆಳೆಯಿತೋ?’ ಬೈದುಕೊಂಡೇ ದಿನ ಸ್ನಾನ ಮಾಡುತ್ತೇನೆ. ಚೆನ್ನಾಗಿ ಉಜ್ಜಿ ಸಹ ಸ್ನಾನ ಮಾಡುವುದಿಲ್ಲ. ಅಸಹ್ಯವಾದ ಒಂದು ವಸ್ತುವಂತೆ ಮೊಲೆಯನ್ನು ಮುಟ್ಟಲೂ ಸಹ ನಾಚಿಕೊಳ್ಳುತ್ತೇನೆ. ‘ನಾನಿದ್ದೇನೆ’ ಎಂದು ಮುಂದೆ ಚಾಚಿಕೊಂಡಿರುವ ಮೊಲೆಗಳು ವೈರಿಯಂತೆ ನಿಂತಿದ್ದವು.

ಮದುವೆಯ ನಂತರ ಕಣ್ಣ ಕೈ ಇಡಲು ಬಂದಾಗ ಕೈಗಳನ್ನು ದೂರ ತಳ್ಳಿದೆ. “ಎಷ್ಟು ಸುಂದರವಾದ ಮೊಲೆಗಳು ನಿನಗೆ. ಅಮೃತ ಕಲಶದಂತೆ, ಯಾಕೆ ಮುಟ್ಟಲು ಬಿಡುವುದಿಲ್ಲ” ಎಂದು ಕೋಪಿಸಿಕೊಳ್ಳುತ್ತಿದ್ದ. ಶ್ರೀರಂಗಂ ದೇವಸ್ಥಾನಕ್ಕೆ ಹೋದಾಗ, ಕೈಯಲ್ಲಿ ಕನ್ನಡಿಯೊಂದಿಗೆ, ದಿಬ್ಬದಂತಹ ಮೊಲೆಗಳೊಂದಿಗಿದ್ದ ಪ್ರತಿಮೆಯನ್ನು ನೋಡಿದಾಗ ನನ್ನನ್ನು ನೋಡಿ ಕಣ್ಣು ಮಿಟುಕಿಸಿದ. ನಿದ್ರೆ ಮಾಡುವಾಗ ಯಾವಾಗಲೂ ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. “ಹೀಗೆ ಬೆಚ್ಚಗಿದ್ದರೆ ಮಾತ್ರ ನಿದ್ರೆ ಬರುತ್ತದೆ” ಎನ್ನುತ್ತಾನೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

ಭಾಗ 1 : Literature; ನೆರೆನಾಡ ನುಡಿಯೊಳಗಾಡಿ; ತಮಿಳು ಲೇಖಕಿ ಅ. ವೆನ್ನಿಲಾ ಬರೆದ ಕಥೆ ‘ಇಂದ್ರನೀಲ’