AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ನನ್ನ ದೇಹವಲ್ಲವೇ, ನಾನು ನೋಡಿದರೆ ಏನು ತಪ್ಪು?

Indraneela Story by A. Vennila : “ತಡಿ” ಎಂದು ಹೇಳಿಹೋದವರು ಸಣ್ಣ ಬಕೆಟ್ಟಿನಲ್ಲಿ ಬಿಸಿನೀರನ್ನು ತಂದಳು. “ಕಾಲನ್ನು ಆಗಲಿಸಿ ನಿಂತುಕೋ. ಸೀರೆಯನ್ನು ಮೇಲಕ್ಕೆ ಎತ್ತು’’ ಎಂದು ಕರ್ಕಶ ದನಿಯಲ್ಲಿ ಹೇಳಿದಳು. ಅಂದೇ ದೇಹದ ನಾಚಿಕೆ ಕಳೆದುಹೋಯಿತು.

Literature: ನೆರೆನಾಡ ನುಡಿಯೊಳಗಾಡಿ; ನನ್ನ ದೇಹವಲ್ಲವೇ, ನಾನು ನೋಡಿದರೆ ಏನು ತಪ್ಪು?
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
ಶ್ರೀದೇವಿ ಕಳಸದ
|

Updated on: Mar 18, 2022 | 11:18 AM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಕನ್ನಡಿಯ ಮುಂದೆ ನಿಂತಿರುವ ಸಮಯ ನೋಡಿ, ಯಾರಾದರೂ ಬಾಗಿಲು ತಟ್ಟಿದರೆ ಭಯದಿಂದ ಪ್ರಾಣ ಹೋಗುತ್ತಿತ್ತು. ಬೆವರಿಂದ ಬೆನ್ನು ಒದ್ದೆಯಾಗುತ್ತಿತ್ತು. “ಬಂದೇ” ಎಂದು ಹೇಳುವ ಧ್ವನಿಯಲ್ಲಿ ಸಣ್ಣಗೆ ನಡುಕ ಕಾಣಿಸುತ್ತಿತ್ತು. ‘‘ನನ್ನ ದೇಹವಲ್ಲವೇ, ನಾನು ನೋಡಿದರೆ ಏನು ತಪ್ಪು?” ಎಂದು ಮನಸ್ಸಿನಲ್ಲಿ ಧೈರ್ಯ ತರಲು ನೋಡಿದರೂ, ಒಮ್ಮೆಯೂ ಬರಲೇ ಇಲ್ಲ. ಯಾಳಿನಿ ಹೊಟ್ಟೆಯಲ್ಲಿರುವಾಗ ದೊಡ್ಡ ಹಿಂಸೆ. ಡಾಕ್ಟರ್ ಬಳಿ ಹೋಗಬೇಕೆಂದರೇ, ಮೊದಲ ದಿನದಿಂದಲೇ ಮೂರ್ಛೆ ಬರುವುದು. ನಾನೇ ಪೂರ್ತಿಯಾಗಿ ನೋಡದ ನನ್ನ ದೇಹವನ್ನು, ಒಂದು ಹಾಳೆಯಂತೆ ಹೊರಳಿಸಿ ನೋಡಿಬಿಡುತ್ತಾರೆ. ಡಾಕ್ಟರ್ ಬರುವ ಮುನ್ನ, ಅಲ್ಲಿರುವ ಸಹಾಯಕರು, “ಮೇಲಕ್ಕೆ ಹತ್ತಿ ಮಲಗಿ, ಲಂಗವನ್ನು ಲೂಸ್ ಮಾಡಿ, ಕಾಲನ್ನು ಅಗಲಿಸಿಡಿ” ಎಂಬ ಕಟ್ಟಳೆಗಳಿಂದ ನನ್ನನ್ನು ಅಟ್ಟಿಸಿಕೊಂಡಿರುವಾಗ ಅವಮಾನವಾಗುತ್ತಿತ್ತು.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 4)

ನಾಚಿಕೆಯಿಂದ ದೇಹ ಸಿಂಪಿಯಂತೆ ಮುದುಡಿಕೊಳ್ಳುತ್ತಿತ್ತು. “ಫ್ರೀಯಾಗಿ ಬಿಟ್ಟರಲ್ಲವೇ ಅಮ್ಮ ನನ್ನಿಂದ ನೋಡಲು ಸಾಧ್ಯ” ಎಂದು ಗ್ಲೌಸ್ ತೊಟ್ಟ ಕೈಗಳಿಂದ ಡಾಕ್ಟರ್ ನನ್ನೊಳಗೆ ನುಸುಳುವಾಗ, ಉಸಿರು ನಿಂತುಹೋಗುತ್ತಿತ್ತು. ಮಗು ಉಂಟಾಗಿ ಹುಟ್ಟುವವರೆಗೆ, ನನ್ನ ದೇಹವನ್ನು ಎಷ್ಟು ಜನ ನೋಡಿರಬಹುದು? ಹೆರಿಗೆಯ ನೋವಿನಿಂದ ಅರಚಿದಾಗ, ನರ್ಸ್ ನನ್ನ ತೊಡೆಯ ಮೇಲೆ ಜೋರಾಗಿ ಬಾರಿಸಿದಳು. “ಮಲಗುವಾಗ ಗೊತ್ತಾಗಲಿಲ್ಲವೇ, ಈಗ ಬಾಯಿ ಬಿಡ್ತೀಯಾ?” ಎಂದಳು.

ಮಗು ಹುಟ್ಟಿದ ದಿನ ಶೌಚಾಲಯಕ್ಕೆ ಹೋದೆ. ಮೂತ್ರದಂತೆಯೇ ರಕ್ತ ಸುರಿಯಿತು. ಅಷ್ಟು ರಕ್ತ ನೋಡಿದಾಗ ತಲೆ ತಿರುಗಿತು. ತಡವರಿಸಿ ಬೀಳಲು ಹೋದ ನನ್ನನ್ನು ಆಸ್ಪತ್ರೆಯ ಆಯಾ ಒಬ್ಬಳು ಹಿಡಿದುಕೊಂಡಳು. “ತಡಿ” ಎಂದು ಹೇಳಿಹೋದವರು ಸಣ್ಣ ಬಕೆಟ್ಟಿನಲ್ಲಿ ಬಿಸಿನೀರನ್ನು ತೆಗೆದುಕೊಂಡು ಬಂದಳು. “ಕಾಲನ್ನು ಆಗಲಿಸಿ ನಿಂತುಕೋ. ಸೀರೆಯನ್ನು ಮೇಲಕ್ಕೆ ಎತ್ತು’’ ಎಂದು ಕರ್ಕಶ ದನಿಯಲ್ಲಿ ಹೇಳಿದಳು. ಅಂದೇ ದೇಹದ ನಾಚಿಕೆ ಕಳೆದುಹೋಯಿತು. ಉಗುರು ಬಿಸಿಯಾಗಿದ್ದ ನೀರನ್ನು ಮಗ್ಗಿನಿಂದ ಮೊಗೆದು ತೊಡೆಯ ಸಂಧಿಯಲ್ಲಿ ಎರಚಿದಳು. ನೋವಿನಿಂದ ನರಳುತ್ತಿದ್ದ ಜಾಗವನ್ನು ತಾಕಿದ ಬಿಸಿನೀರು, ಔಷಧಿಯಂತೆ ಹಿತವಾಗಿತ್ತು. ತೊಡೆಗಳನ್ನು ಮತ್ತಷ್ಟು ಆಗಲಿಸಿದೆ. ಬಿಸಿನೀರು ಸುರಿವಾಗ ನೋವು ಮರೆಯಾಯಿತು.

ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ನಾದಿಟ್ಟ ಹಿಟ್ಟಿನ ಉಂಡೆಯಂತೆ ಏನನ್ನೂ ಹೊರಗೆ ತೋರಿಸದಂತಿದೆ

ಅಪರಿಚಿತ ಮನುಷ್ಯರ ಮುಂದೆ ಬೆತ್ತಲೆಯಾಗಿ ನಿಲ್ಲುತ್ತಿದ್ದೇನೆ ಎಂಬ ಹಿಂಜರಿಕೆ ಇರಲಿಲ್ಲ. ರಕ್ತದಲ್ಲಿ ತೇಲುತ್ತಿದ್ದ ನನ್ನ ದೇಹ ಆಸ್ಪತ್ರೆಯ ಆಯಾಳಿಗೆ ಕಸಿವಿಸಿ ನೀಡಲಿಲ್ಲ. ನೋವು ಕಂಡ ಜಾಗಕ್ಕೆ ಚಿಕಿತ್ಸೆ ಮಾಡುವ ನಿಪುಣತೆಯಿಂದ ಅವಳು ನನಗೆ ಸೇವೆ ಮಾಡಿ ಹೋದಳು. ಬಾಯಲ್ಲಿ ವೀಳ್ಯವನ್ನು ಜಗಿಯುತ್ತಾ ಕುಳಿತಿದ್ದ ಅವಳನ್ನು ಆಸ್ಪತ್ರೆಯಲ್ಲಿದ್ದ ಮೂರು ದಿನವೂ ನೋಡುತ್ತಿದ್ದೆ. ಒಂದು ಮಗು ಹೆತ್ತ ಮೇಲೆಯೇ ನಾಚಿಕೆ ಹೋಯಿತು.

ನೀಲಾ ಅತ್ತೆಗೆ ದೊಡ್ಡ ಮೊಲೆಗಳು ಜೋತಾಡುತ್ತಿರುತ್ತವೆ. ಒಂದು ದಿನವೂ ಸೆರಗನ್ನು ಎಳೆದು ಮುಚ್ಚಿಕೊಳ್ಳುತ್ತಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಅತ್ತೆಯನ್ನು ಕಂಡರೆ ಆಗುತ್ತಿರಲಿಲ್ಲ. ‘ಯಾಕೆ ಹೀಗೆ ತೆರೆದು ಹಾಕಿಕೊಂಡು ಕುಳಿತಿದೆ’ ಎಂದು ಕೋಪ ಬರುತ್ತಿತ್ತು. ಬರುವವರು, ಹೋಗುವವವರು ಸೊಪ್ಪಿನವಳು, ರಂಗೋಲಿ ಮಾರುವವವಳು, ತಳ್ಳುಗಾಡಿಯ ಆಸಾಮಿ, ಬಳೆ ಮಾರುವ ಹುಡುಗ, ಎಣ್ಣೆ ಶೆಟ್ಟಿ, ನೀಲಾ ಅತ್ತೆಯ ಬಳಿ ಬಂದು ಮಾತನಾಡಿದರೂ, ಸೆರಗು ಜನಿವಾರದಂತೆ ಎರಡು ಮೊಲೆಗಳ ನಡುವೆಯೇ ಬಿದ್ದಿರುತ್ತಿತ್ತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ನನಗೆ ಬೀರು ಕೊಂಡುಕೊಂಡರೆ ಕನ್ನಡಿ ಇರುವುದೇ ಆಗಬೇಕು

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi