ದೂರು ಸ್ವೀಕರಿಸದಿದ್ದರೆ ಎದುರಾಳಿಯನ್ನು ಕೊಲ್ಲುವೆ: ಪೊಲೀಸ್ ಮಹಾನಿರ್ದೇಶಕರನ್ನೇ ಟ್ಯಾಗ್ ಮಾಡಿ ವ್ಯಕ್ತಿ ಟ್ವೀಟ್
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಶರೀಫ್ ಅವರ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಒಂದು ತಿಂಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಆಕ್ರೋಶಗೊಂಡ ಶರೀಫ್, ತನ್ನ ಎದುರಾಳಿಗಳನ್ನು ಕೊಲ್ಲುವುದಾಗಿ ಎಕ್ಸ್ ನಲ್ಲಿ ಬರೆದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ.
ಯಾದಗಿರಿ, ಜನವರಿ 20: ಠಾಣೆಯಲ್ಲಿ (Police Station) ದೂರು ಸ್ವೀಕರಿಸದಿದ್ದಕ್ಕೆ ಆಕ್ರೋಶಗೊಂಡಿರುವ ವ್ಯಕ್ತಿಯೋರ್ವ ತನ್ನ ಎದುರಾಳಿಗಳನ್ನು ತಲವಾರ್ನಿಂದ ಕೊಲೆ ಮಾಡುವುದಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಾಕಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ ವಿಚಿತ್ರ ಘಟನೆ ನಡೆದಿದೆ. ಯಾದಗಿರಿ (Yadgiri) ಜಿಲ್ಲೆಯ ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮದ ಶರೀಫ್ ತನ್ನೂರಿನಲ್ಲಿ ಮನೆ ಕಟ್ಟಿಸುತ್ತಿದ್ದಾರೆ.
ಇದಕ್ಕೆ ಗ್ರಾಮದ ಕೆಲವರಿಂದ ಅಡಚಣೆ ವ್ಯಕ್ತಪಡಿಸಿದ್ದರು. ಎಲ್ಲ ದಾಖಲೆಗಳು ಸರಿಯಾಗಿದ್ದರೂ ಅಡಚಣೆ ಮಾಡುತ್ತಿದ್ದಾರೆ, ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಕೊಡೆಕಲ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಶರೀಫ್ ಅವರ ತಂದೆ ಕಳೆದ ಒಂದು ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ.
ಇದನ್ನೂ ಓದಿ: ಶಾಸಕ ಶರಣಗೌಡ ಕಂದಕೂರನಿಂದ ಕಿರುಕುಳ ಆರೋಪ: ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ
ಸುರಪುರ ಶಾಸಕರ ಪಿಎ ಪೊಲೀಸರಿಗೆ ಕರೆ ಮಾಡಿ ಹೇಳಿದ್ದಕ್ಕೆ ದೂರು ಪಡೆಯುತ್ತಿಲ್ಲ. ಒಂದು ವೇಳೆ ನೀವು ದೂರು ಪಡೆಯದಿದ್ದರೆ ನನ್ನ ಎದುರಾಳಿಗಳನ್ನು ತಲ್ವಾರ್ನಿಂದ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ತಲ್ವಾರ್ಗಳ ಫೋಟೋವನ್ನು ಟ್ವೀಟ್ ಮಾಡಿ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದಾರೆ.
ಟ್ವಿಟರ್ ಪೋಸ್ಟ್
ನಮ್ಮ್ ಮನೆಯ ಎಲ್ಲಾ ಧಾಖಲೆ ಇದೆ ನಮ್ಮ್ ಮನೆ ಕಟ್ಟುತಿರುವಾಗ ಜೀವ ಬೆದರಿಕೆ ಹಾಕತಾರ
ನಾವು police station complaint ಕೊಡೋಕೆ ಹೋದ್ರೆ ಅಲ್ಲಿ ಯಾರು ಕೇರ್ ಮಾಡಲ್ಲ
Station ಗೆ MLA P. A ಯಿಂದ ಹೇಳ್ತೆಸರ police ಯಾರು ಕೇರ್ ಮಾಡಲ್
ಅದ್ಕೆ ನಾ ಇದೆ ತಲ್ವಾರ್ ಯಿಂದ ಮರ್ಡರ್ ಮಾಡತೀನಿ 👇👇
ಇಲ್ಲಾ FIR ತೊಗೋಳಿ pic.twitter.com/Fwc1sbWrhw
— shareef (@LoverBoy1381979) January 19, 2025
ಶರೀಫ್ ಟ್ವಿಟ್ಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಯಾವ ಠಾಣೆಗೆ ದೂರು ನೀಡಲು ಹೋಗಿದ್ರಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಶರೀಫ್, “ಕೊಡೇಕಲ್ ಪೊಲೀಸ್ ಠಾಣೆ ಅಧಿಕಾರಿಗಳಿಗೆ ದಯವಿಟ್ಟು ಕ್ರಮ ಕೈಗೊಳಲು ಹೇಳಿ. ನಮ್ಮ ತಂದೆ ಒಂದು ತಿಂಗಳಿನಿಂದ ಪೊಲೀಸ್ ಠಾಣೆಗೆ ತಿರುಗಾಡಿದರೂ, ಯಾರು ಕೂಡ ಗಮನಹರಿಸುತ್ತಿಲ್ಲ. ಇಲ್ಲದಿದ್ದರೇ ನಾನು ನನ್ನ ಕಾನೂನು (ಮರ್ಡರ್) ಮಾಡಬೇಕಾಗುತ್ತದೆ” ಎಂದು ಉತ್ತರ ನೀಡಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:35 pm, Mon, 20 January 25