Literature: ನೆರೆನಾಡ ನುಡಿಯೊಳಗಾಡಿ; ಗಂಡನ ಬಳಿ ಕಾಮವನ್ನು ಕೇಳಿ ಪಡೆಯುವುದು ಅಸಹ್ಯ ಎನ್ನಿಸುತ್ತಿತ್ತು

|

Updated on: Mar 18, 2022 | 12:27 PM

Indraneela Story by A. Vennila : ಇಬ್ಬರೂ ಕೂಡಿರುವ ಸಮಯಗಳಲ್ಲಿ ಒಮ್ಮೆಯೂ ಸಹ ಕಣ್ಣ ನಾನು ಹೇಗಿದ್ದೇನೆ ಎಂದು ನೋಡುವುದಿಲ್ಲ. ಮುಗಿದ ತಕ್ಷಣ ಎದ್ದು ಹೊರಡುತ್ತಾನೆ. ಸಮಾಧಾನವಾಯಿತೆ, ದಡ ಹತ್ತಲಾಗದೇ ತತ್ತರಿಸುತ್ತಿದ್ದೇನೆಯೇ ಎಂಬ ಚಿಂತೆ ಅವನಿಗಿರುವುದೇ ಇಲ್ಲ.

Literature: ನೆರೆನಾಡ ನುಡಿಯೊಳಗಾಡಿ; ಗಂಡನ ಬಳಿ ಕಾಮವನ್ನು ಕೇಳಿ ಪಡೆಯುವುದು ಅಸಹ್ಯ ಎನ್ನಿಸುತ್ತಿತ್ತು
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಮಗು ಹುಟ್ಟಿ ಮೂರನೆಯ ದಿನ ಮನೆಗೆ ಬಂದ ತಕ್ಷಣ, ಕಣ್ಣ, “ಈಗಲ್ಲಾ ಆಗೋದಿಲ್ಲವೇನೇ ಭಾಮಾ?” ಎಂದು ಕೇಳಿದ. ಪರಿತಾಪವಾಗಿ ಇದ್ದುದರಿಂದ ಒಂದು ವಾರ ಕಳೆದು, ಕಣ್ಣನ ಜತೆಯಲ್ಲಿ ನಿದ್ದೆ ಮಾಡಿದೆ. ಆದಿ ಹುಟ್ಟಿದ ನಂತರ ಹಳೆಯ ಆಕರ್ಷಣೆ ಇರಲಿಲ್ಲ. ಅಗತ್ಯವಾಗಿ ಬೇಕೆಂದಾಗ ಮಾತ್ರವೇ ಕಣ್ಣ ಬರುತ್ತಿದ್ದ. ವಾರಕ್ಕೊಮ್ಮೆ, ತಿಂಗಳಿಗೆ ಎರಡು ಸಲ ಎಂಬ ಲೆಕ್ಕವೆಲ್ಲಾ ಇಲ್ಲ. ಮರೆತು ಹೋಗದೆ ಇರುವುದಕ್ಕಾಗಿ ಪಳಗಬೇಕಾಯಿತು. ಅಡುಗೆ ಮಾಡಿಕೊಡುವುದು, ಬಟ್ಟೆ ಒಗೆದುಕೊಡುವುದು, ವಿಶೇಷಗಳಿರುವ ಮನೆಗಳಿಗೆ ಅಲಂಕಾರ ಮಾಡಿಕೊಂಡು ಕಣ್ಣನ ಹೆಮ್ಮೆಗಾಗಿ ಹೋಗುವಂತೆ, ದೇಹವನ್ನು ಹಂಚಿಕೊಳ್ಳುವುದೂ ಸಹ ಒಂದು ಕರ್ತವ್ಯವಾಗಿತ್ತು. ಕಣ್ಣ ತಾನಾಗಿಯೇ ಕೇಳದ ಸಮಯಗಳಲ್ಲಿ ನನಗೆ ತೋರುವುದೇ ಇಲ್ಲ. ನಾನಾಗಿ ಬಯಸಿ ಹೋಗಿರಲಿಲ್ಲ. ಎಲ್ಲವನ್ನೂ ಕೇಳಿ ಪಡೆಯಬಹುದು. ಗಂಡನ ಬಳಿ ಕಾಮವನ್ನು ಕೇಳಿ ಪಡೆಯುವುದು ಅಸಹ್ಯ ಎಂದು ತೋರುತ್ತಿತ್ತು. ಒಮ್ಮೆ ಸಹ ನಾನಾಗಿ ಹೋಗಿರಲಿಲ್ಲ. ಇದರಲ್ಲಿ ಹೆಮ್ಮೆ ಪಟ್ಟುಕೊಳ್ಳಲು ಏನಾದರೂ ಇದೆಯೇ ಎಂದು ಯೋಚಿಸಿದೆ.

 

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 7)

ಇಬ್ಬರೂ ಕೂಡಿರುವ ಸಮಯಗಳಲ್ಲಿ ಒಮ್ಮೆಯೂ ಸಹ ಕಣ್ಣ ನಾನು ಹೇಗಿದ್ದೇನೆ ಎಂದು ನೋಡುವುದಿಲ್ಲ. ಮುಗಿದ ತಕ್ಷಣ ಎದ್ದು ಹೊರಟು ಹೋಗುತ್ತಾನೆ. ಸಮಾಧಾನವಾಯಿತೆ, ದಡ ಹತ್ತಲಾಗದೇ ತತ್ತರಿಸುತ್ತಿದ್ದೇನೆಯೇ ಎಂಬ ಚಿಂತೆಯೆಲ್ಲಾ ಅವನಿಗೆ ಇರುವುದಿಲ್ಲ. ನೀರು ಕುಡಿದು, ಕೈಗೆ ಎಟಕುವ ಕುರುಕಲು ತಿಂಡಿಯನ್ನು ತೆಗೆದಿಟ್ಟುಕೊಂಡು ತಿನ್ನುತ್ತಾನೆ. ಹಣ್ಣುಗಳಿದ್ದರೆ ಕೋತಿಗಳು ಕಿತ್ತು ತಿನ್ನುವಂತೆ ತಿನ್ನುತ್ತಾನೆ. ಖಂಡಿತವಾಗಿ ಅವನಿಗೆ ತಿನ್ನಲು ಏನಾದರೂ ಬೇಕು. ಏನೂ ಇಲ್ಲ ಎಂದರೆ ಅಡುಗೆಯ ಮನೆಯ ಡಬ್ಬಗಳನ್ನು ತೆಗೆದು ಹುಡುಕುತ್ತಾನೆ. ಗೇರುಬೀಜ, ಒಣದ್ರಾಕ್ಷಿ, ಹುರಿಗಡಲೆ ಎಂದು ಅವನಿಗೆ ಏನನ್ನಾದರೂ ತಿನ್ನಬೇಕು. ದೇಹದಲ್ಲಿ ತಗ್ಗಿದ ಶಕ್ತಿಯನ್ನು ತಕ್ಷಣ ತುಂಬಿಕೊಳ್ಳುವಂತೆ ಇರುತ್ತಿತ್ತು ಅವನ ನಡೆವಳಿಕೆ. ಕೈಗೆ ದೊರಕಿದ್ದನ್ನು ತಿಂದು ಮುಂದಿನ ಒಂದು ಗಂಟೆಯಲ್ಲಿ ಗಾಢ ನಿದ್ರೆ ಮಾಡುತ್ತಾನೆ.

ಆಸಕ್ತಿ ಇಲ್ಲದೆ ಹೋದದ್ದಕ್ಕೆ ಕಾರಣ, ದಡ ಹತ್ತಲಾಗದೆ ಅರೆಕೊರೆಯಾಗಿ ಬಿಡಲ್ಪಡುವುದೇ. ಇದ್ದಲಾಗಿಸಲು ಸೌದೆಯನ್ನು ಹಚ್ಚಿ, ಅರ್ಧ ಸೌದೆ ಉರಿದಿರುವಾಗಲೇ, ನೀರು ಸುರಿದು ಆರಿಸಿದರೆ ಹೇಗೆ ಇರುತ್ತದೆ? ಅರ್ಧ ಸೌದೆ, ಅರ್ಧ ಇದ್ದಲು. ಪಕ್ಕಕ್ಕೆ ಸರಿಸಿಡುವಂತೆಯೇ ಈ ದೇಹವೂ. ಸೀದ ವಾಸನೆಯನ್ನು ಒಮ್ಮೆಯೂ ಸಹ ಹೊರ ತೋರಿಸುವುದು ಇಲ್ಲ.

ಇದ್ದಕ್ಕಿದ್ದಂತೆ ಈ ಮೋಹದ ಮುಳ್ಳು ರೂಪತಾಳಿ ಉರುಳುವುದು ಯಾಕೆ? ಒಂದು ವರ್ಷದ ಹಿಂದೆ, ಸ್ತ್ರೀರೋಗ ತಜ್ಞರ ಬಳಿ ಹೋಗಿ ಬಂದೆ. ತಿಂಗಳ ತೊಂದರೆ ಬರುವುದಕ್ಕೆ ಒಂದು ವಾರ ಮೊದಲೇ ದೇಹ ಕುದಿಯುತ್ತದೆ, ಕೈಕಾಲುಗಳು ನಡುಗುತ್ತದೆ ಎಂದೆ. “ಮುಟ್ಟು ನಿಲ್ಲುವ ಸಮಯದಲ್ಲಿ ಹಲವು ಬದಲಾವಣೆಗಳು ಆಗುತ್ತವೆ. ಮಾತ್ರೆ ಔಷಧಿ ತಗೆದುಕೊಳ್ಳುವುದಕ್ಕಿಂತ, ಸ್ವಲ್ಪ ಸಹಿಸಿಕೊಂಡು ಕಳೆದುಬಿಡುವುದು ಒಳ್ಳೆಯದು. ಹೆಚ್ಚು ರಕ್ತ ಸ್ರಾವ, ದೇಹದ ಬೇರೆ ಸಮಸ್ಯೆಗಳು ಇದ್ದರೆ ಮಾತ್ರೆ ತೆಗೆದುಕೊಳ್ಳಬಹುದು. ಎಮೋಶನಲ್ ಇಂಬ್ಯಾಲನ್ಸ್ ನಿಮ್ಮ ಸಮಸ್ಯೆ. ನೀವು ಧೈರ್ಯವಾಗಿ ಎದುರಿಸಿದರೆ ಸರಿಯಾಗುತ್ತದೆ. ಮನೆಯಲ್ಲಿ ಇರುವವರಿಗೆ ಹೇಳಿ ಎಂದರು.

ಭಾಗ 5 : Literature: ನೆರೆನಾಡ ನುಡಿಯೊಳಗಾಡಿ; ಯಾರ ಬಳಿಯೂ ಇಲ್ಲದ್ದೇ? ನೋಡಿದರೆ ನೋಡಿಕೊಂಡು ಹೋಗಲಿ

ಕಣ್ಣನೂ ಜತೆಯಲ್ಲಿ ಬಂದ. ಆದರೆ ಒಳಗೆ ಬರಲಿಲ್ಲ. ಗಾಡಿಯಲ್ಲಿ ಮನೆಗೆ ಹಿಂತಿರುಗುವಾಗ ಡಾಕ್ಟರ್ ಹೇಳಿದ್ದನ್ನು ಹೇಳಿದ ಕೂಡಲೇ, “ದುಡ್ಡು ಕೀಳಲು ಎಲ್ಲಾ ಡಾಕ್ಟರೂ ದಾರಿ ಕಂಡುಕೊಂಡಿದ್ದಾರೆ. ಮೆನೋಪಾಸ್ ಟೆನ್ಷನ್, ಒಬೆಸಿಟಿ, ಮೈಂಡ್ ರಿಲಾಕ್ಸ್ ಇವಕ್ಕೆಲ್ಲಾ ಆಗ ಏನು ಚಿಕಿತ್ಸೆ ಮಾಡಿಕೊಂಡರು? ಯೋಗ, ಎಕ್ಸರ್ಸೈಸ್ ಅಂತ ಈಗ ದೇಹವನ್ನು ಇಟ್ಟುಕೊಂಡು ಸಂಪಾದಿಸ್ತಾರೆ. ದೇಹ ಒಂದಕ್ಕೆ ಮಾತ್ರ ನಾವು ಹೆದರೋದು!” ಎಂದು ಜಗತ್ತಿನ ರಾಜಕೀಯ ಮಾತನಾಡಿದ. ನನಗೆ ಹಪಾಹಪಿ ಹೆಚ್ಚಾಯಿತು.

ಮುಟ್ಟಾಗುವುದಕ್ಕೆ ಮೊದಲು ಒಂದು ವಾರ, ನಂತರ ಒಂದು ವಾರ, ಮುಟ್ಟಿನ ಸಮಯ ಎಂದು ತಿಂಗಳಲ್ಲಿ ಮುಕ್ಕಾಲು ಭಾಗ ಹಪಾಹಪಿಯಲ್ಲೇ ಕಳೆಯುತ್ತದೆ. “ನೀನಾಗಿ ಯಾಕೆ ದೊಡ್ಡದು ಮಾಡಿಕೊಳ್ಳುತ್ತೀಯ’’ ಎಂದು ಕಣ್ಣ ಕೇಳಲು ಇರುವ ಪ್ರಶ್ನೆಯ ಉರಿಯಲ್ಲಿ ನಾನು ಮತ್ತೆ ಆ ಸ್ತ್ರೀರೋಗ ತಜ್ಞರನ್ನು ನೋಡಲು ಹೋಗಲಿಲ್ಲ. ‘‘ಹಾಳಾದ್ದು, ಯಾವಾಗ ನಿಲ್ಲುತ್ತದೋ?’’ ಎಂಬ ನಿರೀಕ್ಷೆಯಲ್ಲಿರುವಾಗ, ಹೊಸದಾಗಿ ಈ ಊಬು ಅಂಟಿಕೊಂಡಿದೆ. ಇರುವ ಜಾಗವನ್ನು ಕಂಡು ಹಿಡಿದು ಬಿಟ್ಟೆ. ಅಷ್ಟೇ ತಾನೇ? ತೆಗೆದು ಎಸೆದು ಹೋಗುವುದಲ್ಲವೇ. ಅನ್ನ ಕುದಿಯುವಂತೆ ಕುದಿದು ತನ್ನಷ್ಟಕ್ಕೆ ಅಡಗಿಹೋಗುತ್ತದೆ.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಭಾಗ 6 : Literature: ನೆರೆನಾಡ ನುಡಿಯೊಳಗಾಡಿ; ಬೆಳೆದ ಮೇಲೂ ಆ ಭಯದ ಉಂಡೆ ತಿರುಗುವುದು ನಿಲ್ಲಲಿಲ್ಲ

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi 

Published On - 12:20 pm, Fri, 18 March 22