ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಜೀವನದ ಎಲ್ಲಾ ಸಂಬಂಧಾನ ಅಕೀ ಕತ್ತರಿಸಿಕೊಂಡಂಗಾಗೇದ. ತನ್ನನ್ನ ತಾನು ಬಂಧಿಸಿ ಇಟಗೊಂಡಂಗ ಮಾಡ್ಯಾಳ. ಅದರಾಗ ಈ ಜೀವದ ಮ್ಯಾಲ ಬಂದಂಥಾ ಜಡ್ಡು ಬ್ಯಾರೆ! ಸಾವಿನ ದಾರಿ ಕಾಯಕೋತ ಕೂಡೋಹಂಗ ಮಾಡೇದ. ದಿನಾ ಡಾಯರಿ ಬರೀತಾಳ. ಅದರಾಗ ಅಕೀ ಅಪ್ಪಗ ಏನೇನರೆ ಹೇಳಕೋತ ಇರತಾಳ. ಅಂದ್ರ ಪ್ರತಿ ದಿನಾ ನಡೀತಿರೋ ಘಟನಾ.. ಸುಖಾ-ದುಃಖಾ.. ಎಲ್ಲಾ.. ಇಕೀ ಹೀಂಗ ಮಾಡಿದ್ರ ನಾ ಹೆಂಗ ಅರಾಮಿರಲಿಕ್ಕೆ ಸಾಧ್ಯದ ಹೇಳ್ರಿ.. ನನಗ ಇಕಿ ಸಲುವಾಗಿ ಕಾಳಜಿ ಆಗೇದ. ನನ್ನ ಮನಸ್ಸು ಯಾವಾಗಲೂ ಇಕೀದೇ ಚಿಂತೀ ಮಾಡತದ. ಅದರೂ ಮತ್ತ ನನ್ನನ್ನ ನಾನೇ ಸಂಭಾಳಿಸಿಕೋತೇನಿ. ನಾ ಕೈಕಾಲು ಕಳಕೊಂಡ ಕೂತ್ರ ನಡಿಯಾಂಗಿಲ್ಲಾ. ನನಗೂ ನನ್ನ ಸಂಸಾರ ಅದ. ನನ್ನನ್ನು ಜೀವದಕಿಂತಾ ಹೆಚಿಗೀ ಪ್ರೀತಿ ಮಾಡೋ ಗಂಡ ಇದ್ದಾನ. ಹೀಗೆ ಹೇಳುತ್ತ ಹೇಳುತ್ತ ಮಾನಸಿ ಒಂದು ಕ್ಷಣ ಸುಮ್ಮನಾಗಿದ್ದಳು.
ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ
(ಭಾಗ 6)
“ಆದರ ಮಾವಶೀ, ಮಾಣಿಕನಿಂದಾಗಿ ಇಬ್ಬರಿಗೂ ಛೊಲೋ ಮನರಂಜನಾ ಸಿಗತದ. ಅದು ಮಾತ್ರ ಖರೆ. ಮನಿಯೊಳಗ ಆನಂದ ಬಂತು ಇವನಿಂದಾಗಿ ಅಂತ ಇಬ್ಬರೂ ಅಂತಾರ.”
ಮಾನಸಿಯ ಮಾತುಗಳನ್ನು ಕೇಳುತ್ತಲಿದ್ದ ನಂದಾತಾಯಿ ಹೇಳಿದ್ದರು.
“ದೇವರೂ ಒಮ್ಮೊಮ್ಮೆ ಪರೀಕ್ಷಾ ಮಾಡತಾನವಾ..”
“ದೇವರು ಇದ್ದಾನೋ ಇಲ್ಲೋ ಅಂತನ್ನೋದೂ ನಮಗೂ ಅನಸೇ ಅನಸತದ. ಆದರೂ ಮನುಷ್ಯಾ ಜೀವನದಾಗ ಸ್ವಲ್ಪಿಲ್ಲಾ ಸ್ವಲ್ಪು ಅವನ ಮ್ಯಾಲೆ ಶ್ರದ್ಧಾ ಇಟ್ಟೇ ಇಟ್ಟಿರತಾನ. ಆ ದೇವರು ಜೀವನವಿಡೀ ಕಣ್ಣು ಮುಚ್ಚಾಲೆ ಆಡಿಕೋತನ ಇರತಾನ.. ಸುಖಾ ದುಃಖದ ಕಣ್ಣುಮುಚ್ಚಾಲೆ! ಎರಡರದೂ ಮೇಲಾಟ ನಡಧಂಗಿರತದ, ಯಾರು ಗೆಲ್ಲತಾರೋ ಅಂತ. ಹಂಗೂ ಗೆಲುವು ದುಃಖದ್ದನ ಆಗತದ. ಸುಖಾ ಏನೋ ಇರತದ. ಆದರ ಅದನ್ನ ಆರಿಸಿಕೋಬೇಕಾಗತದ.. ಅದು ನಮ್ಮ ಸುತ್ತಲೂ ಹರಡಿರತದ..”
“ಎಷ್ಟು ಛಂದ ಮಾತಾಡತೀಯವಾ ನೀ..”
“ಮಾವಶೀ, ಏನರೆ ಅಂತೀರಿ ನೀವೂ! ನೋಡ್ರೀ, ನಮ್ಮ ಈ ಕೂಸಿಗೆ ಆನಂದ ಅಂತ ಹೆಸರು ಇಡೋದಿತ್ತು ನನಗ. ಆದ್ರ ಅಜ್ಜಿಮುಂದ ನಂದೇನೂ ನಡಿಯಂಗಿಲ್ಲಾ. ಮಾಣಿಕಂತನ ಇಡಬೇಕಂತಿತ್ತು ಅಕಿಗೆ. ಅಜ್ಜನ ನೆನಪಿಗೆ. ನನ್ನವರಿಗೆ ಹೇಳಿದ್ರ ಅವರೂ ಹಂಗೇ ಅಂದ್ರು.. ಮಾಣಿಕ ಅಂತನ ಇಡೋಣಂತ.. ಅಜ್ಜಿಯ ಇಚ್ಛಾದ ಅನಾದರ ಮಾಡಬಾರದಂತ ಹೇಳಿದ್ರು. ನನಗೂ ಅದು ಸರಿ ಅನಿಸ್ತು..”
ನಂದಾತಾಯಿಗೆ ಮಾನಸಿಯ ತಿಳಿವಳಿಕೆಯ ಬಗ್ಗೆ ಮೆಚ್ಚುಗೆಯಾಗಿತ್ತು. ಹಾಗೆಯೇ ನೋಡದಿರುವಂಥ ಮಕರಂದನ ಬಗ್ಗೆ ಕೂಡ ಅವರಿಗೆ ಮೆಚ್ಚುಗೆಯಾಗಿತ್ತು. ಅವರು ಅದನ್ನೇ ಹೇಳಿದ್ದರು.. ಆದರೆ ಅಷ್ಟರಲ್ಲಿಯೇ ಮಾನಸಿಯು ಹೇಳಿದ್ದಳು..
“ಅಜ್ಜಿಯನ್ನ ಇಲ್ಲಿ ಕೆಲವು ದಿನಗಳ ಮಟ್ಟಿಗೆ ಇಟ್ಟು ಹೋಗತೇವಿ ಮಾವಶಿ. ಅವ್ವನ ಆರೋಗ್ಯ ಏನಾಗತದೋ ಹೇಳಲಿಕ್ಕೆ ಬರಂಗಿಲ್ಲಾ. ಆದರು ನಾವು ಆಶಾ ಇಟಗೋಬೇಕು.. ಅಷ್ಟೇ. ಬೆಂಗಳೂರಿನ್ಯಾಗ ಅಕೀದು ಟ್ರೀಟ್‌ಮೆಂಟು ಮಾಡಸತೇವಿ. ನೋಡೋಣ.. ಅಕೀ ದೇಹ ಹೆಂಗ ರಿಸ್ಪಾಂಡ್ ಮಾಡತದೋ ಅಂತ. ನಮ್ಮ ಪ್ರಯತ್ನಕ್ಕ ಮೀರಿದ್ದು ದೇವರ ಇಚ್ಛಾ. ಅವನ ಮುಂದ ಯಾರದು ಏನ ನಡೀತದ? ಪ್ರಯತ್ನ ಫಲಪ್ರದ ಆಗದೇದ್ದರ ಅವನ ಮ್ಯಾಲೆ ಭಾರಾ ಹಾಕಿಬಿಡೋದು.. ಅವನ ಹತ್ತರರೇ ಹೆಚ್ಚು ಏನದ ಮಾವಶೀ, ಕೊಡಲಿಕ್ಕೆ? ನಮ್ಮ ನಶೀಬದಾಗಿದ್ದದ್ದೇ ಅವನೂ ಕೊಡಾಂವಾ.. ಎಲ್ಲಾ ನಶೀಬದ ಕೈಯಾಗನ. ಕೊನೀಗೆ ಅವಾ ತನಗ ಏನ ಬರೋಬ್ಬರ ಅನಸತದಲಾ ಅದನೇ ಮಾಡಾಂವ.. ಹೌದಲ್ಲೋ?”
ಕೆಲಹೊತ್ತು ಮೌನವಾಗಿದ್ದಳು ಮಾನಸಿ. ಮಗುವಿನ ಮೈಮೇಲಿನ ಹೊದಿಕೆಯನ್ನು ಸರಿಪಡಿಸಿದ್ದಳು. ಮತ್ತೆ ಮುಂದುವರೆಸಿದ್ದಳು..
“ಅಜ್ಜಿ ಅಂದ್ರ ನನ್ನ ಠೇವಣಿ ಇದ್ದಂಗ. ಅಕಿನ್ನ ನಾ ನಿಮಗ ಒಪ್ಪಿಸಿಹೋಗತೇನಿ ಮಾವಶೀ. ಅವ್ವಾ ಉಳೀಲಿ, ಬಿಡಲೀ.. ಅಜ್ಜಿನ್ನ ನಾ ಕರಕೊಂಡು ಹೊಗತೇನಿ ಅಂತ ವಚನ ಕೊಡತೇನಿ ನಿಮಗ.”
ಮಾನಸಿಯು ಮತ್ತೆ ಒಂದು ಕ್ಷಣ ಶಾಂತಳಾಗಿ ಕುಳಿತಿದ್ದಳು. ಬಹುಶಃ ಅವಳು ಭೂತಕಾಲದ ಸಿಂಹಾವಲೋಕನ ಮಾಡುತ್ತಿದ್ದಳೇನೋ.. ನಂತರ ಸಾವಕಾಶವಾಗಿ ನಂದಾತಾಯಿಯತ್ತ ನೋಡುತ್ತ ಹೇಳಿದ್ದಳು..
“ಮಾವಶೀ, ನನ್ನ ಅಜ್ಜಿ ನಮ್ಮ ಅವ್ವನ ಖಾಸ ಅವ್ವ ಅಲ್ಲಾ. ಮಲತಾಯಿ. ಅವ್ವನಿಗೆ ಜನ್ಮ ಕೊಟ್ಟಂಥ ಅವ್ವಾ ಭಾಳ ಲಗೂ ತೀರಿಹೋದ್ಲಂತ. ಅವ್ವಾ ಭಾಳ ಸಣ್ಣಾಕಿ ಇದ್ಲಂತ. ಅಜ್ಜಾ ಎರಡನೇ ಮದುವೀ ಮಾಡಿಕೊಂಡರಂತ. ಈ ಅಜ್ಜಿ ನಮ್ಮ ಅವ್ವನಿಗೆ ಅವ್ವನೇ ಆದಳು. ಇವರಿಬ್ಬರೂ ಖಾಸ ತಾಯಿ ಮಗಳು ಅಲ್ಲಾ ಅಂತ ಹೇಳಿದ್ರೂ ಯಾರಿಗೂ ಖರೇ ಅನಸಂಗಿಲ್ಲಾ. ಅಜ್ಜಾನೂ ಲಗೂನ ತೀರಿಕೊಂಡ್ರಂತ. ಅಜ್ಜಿಗೆ ಮಕ್ಕಳಿರಲಿಲ್ಲಂತ. ಅಕೀ ನಮ್ಮ ಅವ್ವನ್ನ ಸಣ್ಣಾಕಿದ್ದಾಗಿನಿಂದಲೂ ಜ್ವಾಪಾನ ಮಾಡಿದಳು. ಈಗ ಅಕಿನ್ನ ನಮ್ಮ ಅವ್ವಾ ಜ್ವಾಪಾನ ಮಾಡಲಿಕ್ಕತ್ತಾಳ. ಇಬ್ಬರದೂ ಅಗದೀ ಹಾಲು ಸಕ್ಕರೀ ಹಂಗನ ಮಧುರ ಸಂಬಂಧಾ.”
ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ಸಂಬಂಧಿಕರ ಭೇಟಿ ಅನ್ನೋ ಹುಚ್ಚು ಆಶಾ! ಇಲ್ಲಿ ಎಷ್ಟ ಅನುಕೂಲ ಮಾಡಿಕೊಟ್ರೂ..
ಮಾನಸಿ ಮಾತಾಡುತ್ತಲಿದ್ದಳು. ನಂದಾತಾಯಿ ಅವಳತ್ತಲೇ ನೋಡುತ್ತಲಿದ್ದರು.. ಅವಳ ಮಾತುಗಳನ್ನು ಕೇಳುತ್ತಲಿದ್ದರು. ಅವರ ಮನಸ್ಸಿನ ಎಲ್ಲಾ ಕಶ್ಮಲವೂ ಸೋರಿಹೊಗಿತ್ತು. ಅವರು, “ಮಾನಸೀ, ನನ್ನ ಕ್ಷಮಾ ಮಾಡವಾ..” ಎಂದಿದ್ದರು.
“ಇರಲಿ ಮಾವಶೀ.. ನಿಮ್ಮ ತಪ್ಪು ತಿಳಿವಳಿಕೀ ದೂರ ಆಗೇದಲಾ.. ನನಗ ಅಷ್ಟೇ ಸಾಕು.. ಯಾರೋ ಈ ನಿಮ್ಮ ವೃದ್ಧಾಶ್ರಮದ ಬಗ್ಗೆ ಅವ್ವಗ ಹೇಳಿದ್ರು. ಅಕೀ ನನಗ ಹೇಳಿದ್ಲು. ನನಗು ಸರಿ ಎನ್ನಿಸಿತ್ತು. ಅಕೀ, ‘ಸರಿ ಹಂಗಾದ್ರ. ಕೆಲವು ದಿನಗಳ ಮಟ್ಟಿಗೆ ಇಲ್ಲಿ ಇಡೋಣ ಅಕಿನ್ನ. ನಾಲ್ಕು ಮಂದಿ ತನ್ನ ಸಮಾನವಯಸ್ಕರ ಜೋಡಿ ಇದ್ದರ ಅಕೀದೂ ಮನಸ್ಸು ಹಗುರ ಆಗತದ. ಹಂಗೂ ಅಕೀಗೆ ಒಂದಿಷ್ಟು ಮಾತೂ ಬೇಕಾಗತದ. ಎಲ್ಲಾರ ಜೋಡೇ ಲಗೂನ ಹೊಂದಿಕೋತಾಳ.’ ಅಂತ ಹೇಳಿದ್ಲು. ಆದರ ಇಲ್ಲಿ ಬಂದಮ್ಯಾಲೆ, ಅದೂ ಅವ್ವನಿಂದ ದೂರ ಇರೋದು ಅಕೀಗೆ ಒಂದಿಷ್ಟು ಕಠಿಣನ ಆಗತದ. ನಮಗೂ ಅದು ತ್ರಾಸೇ. ಮಾವಶೀ, ನಮ್ಮ ಅಜ್ಜಿ ನಮಗ ಭಾರ ಆಗಂಗಿಲ್ಲಾ. ನಿಜವಾಗೂ ಅಕೀ ಎಂದಿಗೂ ನಮಗ ಭಾರ ಅಲ್ಲಾ. ಕೇವಲ ಅಕಿಗೆ ಅವ್ವನ ಆರೋಗ್ಯದ ಬಗ್ಗೆ ತಿಳೀಬಾರದು ಅನ್ನೋದಷ್ಟೇ ನಮ್ಮ ಉದ್ದೇಶ.
ಅವ್ವನೇ ಅಜ್ಜಿಗೆ ಸರ್ವಸ್ವ ಇದ್ದಂಗ. ನನಗೂ ಸೈತ ಅಕೀನ ಎಲ್ಲಾ. ಅಕೀನ ಹೋದ್ರ ನಮ್ಮ ನಡುವಿನ ಪ್ರೀತಿಯ ತಂತು ಹರಿದು ಹೋಗತದ ಅಂತ ನನಗ ಅನಸತದ. ಹಂಗೂ ಅದು ತುಂಡಾಗಿ ಹೋಗೋದನ ಅದ. ಆದರ ಇರೋತನಕಾ ಅದನ್ನ ಜ್ವಾಪಾನ ಮಾಡಬೇಕೂ ಅಂತ ನನ್ನ ಆಶಾ.. ಮಾವಶೀ, ಖರೆ ಹೇಳಬೇಕಂದ್ರ ಅಜ್ಜಿನ್ನ ನಮ್ಮ ಜೋಡೀಗೇ ಕರಕೊಂಡು ಹೋಗಬೇಕಾಗಿತ್ತು. ಅಕಿಗೂ ಅಷ್ಟೇ ಬದಲಾವಣಿ ಆಗತಿತ್ತು. ಮೊದಲ ಹಾಗೇ ನಿಶ್ಚಯಾನೂ ಮಾಡಿಕೊಂಡಿದ್ವಿ. ಅವ್ವಾ-ಅಜ್ಜಿ ಇಬ್ಬರನೂ ನನ್ನ ಜೋಡಿಗೇ ಬೆಂಗಳೂರಿಗೆ ಕರಕೊಂಡು ಹೋಗಬೇಕಂತನಕೊಂಡಿದ್ದೆ. ಕೂಸಿನ್ನೂ ನೋಡಿಕೋತಾಳ ಅಂತ ಅನಿಸಿತ್ತು. ಆಮ್ಯಾಲೆ ನನ್ನ ಅತ್ತಿ ಬರೋವರಿದ್ದರು ಕೂಸಿನ್ನ ನೋಡಿಕೋಳಿಕ್ಕಂತ. ನಾನೂ ನವಕರಿಗೆ ಸೇರಿಕೊಂಡ್ರ ಕೂಸಿನ್ನ ನೋಡಿಕೋಳಿಕ್ಕೆ ಯಾರರೆ ಬೇಕಲಾ ಅಂತ. ನನ್ನ ಮದುವಿ ಠರಾಯಿಸಿದಾಗನ ನಾನು ಮಕರಂದಗಷ್ಟೇ ಅಲ್ಲಾ, ಮನ್ಯಾಗಿನ ಮಂದಿಗೂ ಹೇಳಿಬಿಟ್ಟಿದ್ದೆ, ‘ನಮ್ಮ ಅವ್ವಾ, ಮತ್ತ ನನ್ನ ಅಜ್ಜಿ ಇವರಿಬ್ಬರೂ ನನ್ನ ಜವಾಬ್ದಾರಿ’ ಅಂತ. ಅದಕ್ಕ ನಮ್ಮ ಅತ್ತಿ, ‘ತೊಗೋಳಲೇ ಬೇಕಲವಾ ಆ ಜವಾಬ್ದಾರೀ.. ನಾವೆಲ್ಲಾ ವಯಸ್ಸಾದವ್ರು ಜೋಡಾಗಿ ನಿಮ್ಮ ಮನ್ಯಾಗಿನ ಯಾವದರೆ ರೂಮಿನ್ಯಾಗ ಇರತೇವಿ’ ಅಂತ ನಕ್ಕಿದ್ದರು! ಮಾವಶೀ, ನಮ್ಮ ಮನ್ಯಾಗಿನ ಮಂದೀ ಭಾಳ ಛೊಲೋ ಇದ್ದಾರ.”
ಮಾನಸಿ ತನ್ನಲ್ಲಿಯೇ ತಾನು ಕಳೆದುಹೋಗಿದ್ದಳು.
“ನೀನೂ ಛೊಲೋನ ಇದ್ದೀಯವಾ..”
ನಂದಾತಾಯಿಯ ಬಾಯಿಯಿಂದ ಈ ಶಬ್ದಗಳು ತುಟಿಯ ವರೆಗೂ ಬಂದಿದ್ದವು. ಆದರೆ ಅವರು ಏನೂ ಹೇಳಲಿಲ್ಲ. ಆದರೆ ತಮ್ಮ ಎದುರಿಗೆ ಕುಳಿತಂಥ ಆ ಯುವತಿಯ ದೊಡ್ಡತನವನ್ನು ಮನದಲ್ಲಿಯೇ ಶ್ಲಾಘಿಸಿದ್ದರು. ಅವಳ ದೃಢನಿಶ್ಚಯ ಹಾಗೂ ಕುಟುಂಬದ ಬಗೆಗಿನ ಅವಳ ಬದ್ಧತೆಗಳಿಗಾಗಿ ಅವರು ಮನಸ್ಸಿನಲ್ಲಿಯೇ ತಲೆದೂಗಿದ್ದರು. ಹೊರಗೆ ಕುಳಿತಿದ್ದ ಮನಸ್ವಿನಿ ಮನಸ್ಸಿನಲ್ಲಿಯೇ ವಿಚಾರ ಮಾಡುತ್ತಲಿದ್ದಳು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 5 : Literature: ನೆರೆನಾಡ ನುಡಿಯೊಳಗಾಡಿ; ‘ಮಾವಶೀ, ನಮ್ಮನ್ನ ತಪ್ಪು ತಿಳಕೋಬ್ಯಾಡ್ರಿ, ಇದ್ದ ಸಂಗತಿ ಅಂದ್ರ..’
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 12:17 pm, Fri, 8 April 22