Literature: ನೆರೆನಾಡ ನುಡಿಯೊಳಗಾಡಿ; ಸಂಬಂಧಿಕರ ಭೇಟಿ ಅನ್ನೋ ಹುಚ್ಚು ಆಶಾ! ಇಲ್ಲಿ ಎಷ್ಟ ಅನುಕೂಲ ಮಾಡಿಕೊಟ್ರೂ..

Vijaya Brahmankar’s Marathi Short Story : ಮನುಷ್ಯಗ ತನ್ನದೇ ಪ್ರತಿಬಿಂಬದ ಮೋಹ ಭಾಳಿರತದ ಅನ್ನೋದಂತೂ ನಿನಗ ಗೊತ್ತೇ ಅದ. ಅಂತನ ಅಂವಾ ಮ್ಯಾಲಿಂದ ಮ್ಯಾಲೆ ಕನಡೀಯೊಳಗ ನೋಡಿಕೋತಾನಲ್ಲ ತನ್ನ ತಾ? ಇದರಾಗೂ ಅದೇ ಅದ.

Literature: ನೆರೆನಾಡ ನುಡಿಯೊಳಗಾಡಿ; ಸಂಬಂಧಿಕರ ಭೇಟಿ ಅನ್ನೋ ಹುಚ್ಚು ಆಶಾ! ಇಲ್ಲಿ ಎಷ್ಟ ಅನುಕೂಲ ಮಾಡಿಕೊಟ್ರೂ..
ಮರಾಠಿ ಲೇಖಕಿ ವಿಜಯಾ ಬ್ರಾಹ್ಮಣಕರ ಮತ್ತು ಅನುವಾದಕಿ ಮಾಲತಿ ಮುದಕವಿ
Follow us
ಶ್ರೀದೇವಿ ಕಳಸದ
|

Updated on: Apr 08, 2022 | 11:14 AM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : “ನಂದಾತಾಯಿ, ನಿಮ್ಮ ಮಾತು ಖರೇ ಅದ. ಆದರ ನಮ್ಮ ನಗೋ ಮುಖದ ಹಿಂದಿನ ದುಃಖಾ ನಿಮಗ ತಿಳೀಲಿಕ್ಕೆ ಸಾಧ್ಯ ಇಲ್ಲಾ. ಯಾಕಂದ್ರ ನಾವು ದುಃಖಾನ ಒಳಗೇ ಹೂತಿಡೋ ಪ್ರಯತ್ನಾ ಮಾಡತೇವಿ..”, “ದೇವರೇ, ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸಿರುವಿ ನೀನು? ಈ ಕಡೆ ಗುಡ್ಡ.. ಆ ಕಡೆ ಕಂದಕ! ಏನು ಮಾಡಲಿ? ನಮ್ಮ ಕಡೆಗೆ ನೋಡುವ ಸಮಾಜದ ದೃಷ್ಟಿಯೇ ಬದಲಾಗಿದೆ. ನಿಜಕ್ಕೂ ಬದಲಾಗುತ್ತದೆ. ನಮ್ಮ ಬಗೆಗಿನ ನಂದಾತಾಯಿಯ ಅಭಿಪ್ರಾಯವಂತೂ ಖಂಡಿತ ತಪ್ಪಾಗಿಯೇ ಇರುತ್ತದೆ. ತಪ್ಪು ಎಂದಾದರೂ ಹೇಗೆ ಹೇಳಲಿ? ಕಣ್ಣಿಗೆ ಕಾಣಿಸುವುದೆಲ್ಲವನ್ನೂ ನಿರಾಕರಿಸಲಿಕ್ಕಂತೂ ಬರುವುದಿಲ್ಲವಲ್ಲವೇ? ಅಲ್ಲದೆ ವಯಸ್ಸಾದ ಅವ್ವನನ್ನು ದೂರ ಸರಿಸುವುದು ಇದೆಂಥ ಉಪಾಯ? ಯಾವುದೇ ಸಮಸ್ಯೆಯೇ ಇದ್ದರೂ ಇಂಥದೊಂದು ಪರಿಹಾರವು ಇರಲು ಸಾಧ್ಯವೇ ಇರಲಾರದು” ಎಂದು ಮನಸ್ವಿನಿ ಎಂದುಕೊಂಡಳು. ಅಷ್ಟರಲ್ಲಿ ಪಕ್ಕದ ಗೋಡೆಯ ಮೇಲೆ ಬರೆದಂಥ ಬರೆಹದ ಮೇಲೆ ಮನಸ್ವಿನಿಯ ದೃಷ್ಟಿ ಹರಿದಿತ್ತು.

ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ

(ಭಾಗ 4)

“ಸಮಯ, ಆರೋಗ್ಯ ಹಾಗೂ ಸಂಬಂಧಗಳು-ಇವು ಮೂರನ್ನೂ ಕಳೆದಕೊಂಡ ನಂತರವೇ ನಮಗೆ ಅವುಗಳ ಮಹತ್ವದ ಅರಿವಾಗುತ್ತದೆ.”

ಮನಸ್ವಿನಿಯು ಗೋಡೆಯಿಂದ ತನ್ನ ದೃಷ್ಟಿಯನ್ನು ಆಚೆ ಹರಿಸಿದ್ದಳು. ಒಳಗಿನಿಂದ ಉಕ್ಕಿಬಂದಂಥ ದುಃಖವನ್ನು ಆಕೆ ನುಂಗಿಕೊಂಡಿದ್ದಳು. ಕೈಜೋಡಿಸಿ, “ಹೋಗಿ ಬರ‍್ತೇವಿ ನಂದಾತಾಯಿ. ನಮ್ಮ ಅವ್ವಂದು ಕಾಳಜಿ ತೊಗೋಳ್ರಿ.” ಎಂದಿದ್ದಳು. “ಇದು ಭಾರಿ ಆತಲಾ ನಿಮ್ಮದು! ನೀವು ನಿಮ್ಮ ಮಂದಿನ್ನ ದೂರ ಮಾಡರಿ. ನಾವು ಅವರ ಕಾಳಜಿ ತೊಗೋತೇವಿ! ಆದರೂ ನೀವು ನಿಶ್ಚಿಂತಿಂದಿರ‍್ರಿ. ನಾವು ಹಾಗೂ ನಮ್ಮ ಈ ವೃದ್ಧಾಶ್ರಮಾ ವೃದ್ಧರ ಕಾಳಜೀ ತೊಗೋಳಿಕ್ಕೇ ಅಂತನ ಅವ.” ಎಂದು ಹೇಳುತ್ತ ಸ್ವಲ್ಪ ತಡೆದು, “ಈ ಅಜ್ಜಿ ಇದ್ದಾರಲಾ, ಇವರ ಮಗಾ ಗೋವಾದಾಗ ಆಫೀಸರ್ ಇದ್ದಾನ. ಅಲ್ಲೆ ಮೂರು ಅಂತಸ್ತಿನ ಮನೀ ಅದ. ಮನ್ಯಾಗಿನ ಪ್ರತಿಯೊಬ್ಬರಿಗೂ ಪ್ರತ್ಯೇಕ ರೂಮು ಅವ. ಮನ್ಯಾಗಿನ ನಾಯಿಗೂ ಸುದ್ಧಾ ಬ್ಯಾರೆ ರೂಮು! ಆದರ ಆ ಮನಿಯೊಳಗ ಈ ಅಜ್ಜಿಗೆ ಜಾಗಾ ಇಲ್ಲಾ. ಅವರ ಸ್ಥಾನಾ ಇಲ್ಲೆ, ಈ ವೃದ್ಧಾಶ್ರಮದಾಗ!” ಎಂದಿದ್ದರು ನೊಂದು!

“ಆ ಕಡೆಗೆ ಕೂತಾರಲಾ, ಆ ಅಜ್ಜಿ.. ಸೊಸಿಗೆ ಈ ಅಜ್ಜಿ ಕಣ್ಣೆದುರಿಗೆ ಇರಬಾರದು. ಸೊಸೀಗೆ ಬ್ಯಾಡಂದ್ರ ಮಗನಿಗೂ ಬ್ಯಾಡಾ. ಮಗನಿಗೆ ಬ್ಯಾಡಂದ್ರ ಅವರ ಮಕ್ಕಳಿಗೂ ಬ್ಯಾಡಾ! ಅದಕ್ಕೇ ಅಜ್ಜಿನ್ನ ತಮ್ಮ ಮನಿಯಿಂದ, ತಮ್ಮ ದೃಷ್ಟಿಯಿಂದನೇ ದೂರ ಮಾಡಿದ್ರು. ಆ ಮಗಾ, ಅಂವಾ ಸಣ್ಣಾಂವಿದ್ದಾಗ ಅವನ್ನ ಕಣ್ಣಾಗ ಎಣ್ಣಿ ಹಾಕ್ಕೊಂಡು ಕಾಯತಿದ್ದರು ಈ ತಾಯಿ! ಕಣ್ಣಿಂದ ಸ್ವಲ್ಪ ಸುದ್ಧಾ ಮರಿಯಾಗಗೊಡತಿದ್ದಿಲ್ಲಾ! ಈಗ ಅದೇ ಮಕ್ಕಳಿಗೆ ಈ ಅವ್ವಾ ಕಣ್ಣ ಎದುರಿಗೂ ಬ್ಯಾಡಾ..”

“ಮ್ಯಾಲೊಬ್ಬ ಅಜ್ಜಾ ಇರತಾರ. ಹೊಟ್ಟೀಲೆ ಹುಟ್ಟಿದ ಮಗಾ ಹೋಗಿಬಿಟ್ಟಾ. ಸೊಸೀ ಇಲ್ಲೆ ತಂದು ಇಟ್ಟಾಳ. ಅವರು ಈಗ ದಿನಾಲೂ ಮಗಗ ಪತ್ರಾ ಬರಿತಾರ.. ನನ್ನ ಬಂದು ಕರಕೊಂಡ ಹೋಗು ಅಂತ. ಅವರಿಗೆ ಎಲ್ಲಾ ಮರತಹೋಗೇದ.”

“ಮೇಡಂ, ನಾವು ಈ ವೃದ್ಧರಿಗೆ ಎಷ್ಟೇ ಮಾಡಿದ್ರೂ, ಎಷ್ಟೇ ಅನುಕೂಲ ಮಾಡಿಕೊಟ್ರೂ ಅವರ ಕಣ್ಣುಗಳಲ್ಲಿ ಒಂದು ಆಶಾ ಇರತದ.. ಒಂದು ಹುಚ್ಚು ಆಶೆ. ತಮ್ಮ ಸಂಬಂಧಿಕರ ಭೆಟ್ಟಿಯ ಆಶೆ! ಮನೆಯ ಆಶೆ.. ನಾವು ನಮ್ಮ ಮನಿಯೊಳಗ ಇರತೇವಲಾ.. ಅದು ಕೇವಲ ಮನಿ ಅಲ್ಲಾ… ಇಡೀ ಮನೀನ ನಮ್ಮೊಳಗ ಇರತದ. ನಮ್ಮ ಮನಸ್ಸಿನಲ್ಲಿ ಇಡಿಯ ನಮ್ಮ ಊರ ಬೇರನ್ನೇ ಹೇಗೆ ಕಿತ್ತೊಗೀಲಿಕ್ಕೆ ಬರತದ ಹೇಳ್ರಿ? ಅಲ್ಲಿ ಇಲ್ಲಿ ಸಂಬಂಧಗಳ ಈ ಹರಡಿದ ಬೇರುಗಳನ್ನು ಕಿತ್ತೆಸೆಯಲಿಕ್ಕೆ ಈ ಮುದಿ ಜೀವಗಳಿಗೆ ಸಾಧ್ಯ ಅದ ಏನು ಹೇಳ್ರಿ.. ಹೇಳ್ರಿ ಮೇಡಮ್, ಈ ವೃದ್ಧ ಜೀವಗಳು ತಮ್ಮ ಮನೆಯನ್ನು ಬಿಟ್ಟು, ತಮ್ಮವರನ್ನು ಬಿಟ್ಟು ಹೇಗೆ ಜೀವಿಸಲಿಕ್ಕೆ ಸಾಧ್ಯ ಅದ? ಪ್ರತಿಯೊಬ್ಬ ವೃದ್ಧರಿಗೂ ತಮ್ಮ ತಮ್ಮ ಜನರೇ ಆಕ್ಸಿಜನ್ ಇದ್ದಂಗ.. ಮೇಡಂ, ನೀವು ಅವರ ಆಕ್ಸಿಜನ್ನನ್ನೇ ತೊಗೊಂಡ ಹೊರಟೀರಿ. ಅವರು ಹೆಂಗ ತಡಕೋಳಿಕ್ಕೆ ಸಾಧ್ಯ ಅದ? ಯಾವ ಆಧಾರದ ಮ್ಯಾಲೆ ಜೀವಿಸಿದ್ದಾರು?” “ಇಲ್ಲಿರೋ ಪ್ರತಿಯೊಬ್ಬರದೂ ಒಂದೊಂದು ಕಥೀ. ಒಂದೊಂದು ಕಾದಂಬರಿ.. ಪ್ರತಿಯೊಬ್ಬರೂ ಒಂದೊಂದು ಮುಚ್ಚಿರಿಸಿದ ಪೆಟಿಗಿದ್ದಂಗ. ಆ ಪೆಟ್ಟಿಗಿಯ ಬಾಯಿ ತಗೀಲಿಕ್ಕೆ ಯಾರಿಂದಲೂ ಸಾಧ್ಯ ಇಲ್ಲಾ. ಸರಿ.. ನೀವು ಹೊರಡ್ರಿ. ನಾನು ನಿಮ್ಮ ಸಾಕಷ್ಟು ಸಮಯ ತೊಗೊಂಡುಬಿಟ್ಟೆ..”

ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ಒಣಗಿದೆಲೆಗಳ ಮೇಲೆ ಸಾವಕಾಶ ಅಡಿಯಿರಿಸಿ, ಎಂದೋ ಒಮ್ಮೆ ನೆರಳು ಕೊಟ್ಟಿದ್ದವಿವು

ಮನಸ್ವಿನಿ ಕೈಜೋಡಿಸಿ “ಬರತೇವಿ” ಎಂದಿದ್ದಳು. “ಸರಿ. ಹೋಗಿ ರ‍್ರಿ. ಸಾಧ್ಯ ಆದರ ಮತ್ತೆ ರ‍್ರಿ.. ಸಾಂತ್ವನದ ಭೆಟ್ಟಿಗೆ ಅಂತ.. ವೃದ್ಧರಿಗೆ ಸಾಂತ್ವನದ ಭೆಟ್ಟಿಯ ಅವಶ್ಯಕತಾ ಇರತದ..” ನಂದಾತಾಯಿ ಮಾತನಾಡುತ್ತಲಿದ್ದರು. ಮನದುಂಬಿ ಮಾತನಾಡುತ್ತಲಿದ್ದರು. ಅವರು ಹೇಳುವುದು ತಪ್ಪಾಗಿರಲಿಲ್ಲ. ಅವರ ಉದ್ದೇಶವು ಕೇವಲ ‘ಈ ವೃದ್ಧರನ್ನು ಮನೆಯಿಂದ, ಮನದಿಂದ ಕಿತ್ತೆಸೆಯಬೇಡಿರಿ’ ಎಂದು ತಿಳಿಸಿಹೇಳುವುದಾಗಿತ್ತು.

ಎಲ್ಲರೂ ಹೊರಗೆ ಬಂದಿದ್ದರು. ಅಜ್ಜಿಯೂ ಅವರೊಂದಿಗೆ ಬಂದರು. ಹೊರಡುವಾಗ ಮಾನಸಿಯು ಎಲ್ಲೆಡೆಗೂ ದೃಷ್ಟಿ ಹಾಯಿಸಿದ್ದಳು. ನಾಲ್ಕೂ ಕಡೆಗೂ ರೂಮುಗಳು.. ನಡುವೆ ಲಾನ್. ಲಾನಿನ ಎರಡೂ ಕಡೆಯ ಗೋಡೆಗಳ ಮೇಲೆ, “ಇಂದು ನೀವು ನಿಮ್ಮ ತಾಯಿ-ತಂದೆಯರನ್ನು ಇಲ್ಲಿ ಬಿಟ್ಟು ಹೋಗುತ್ತಿರುವಿರಿ.. ಬಹುಶಃ ನಾಳೆ ನಿಮಗೂ ಇಲ್ಲಿಗೆ ಬರಬೇಕಾದೀತು..” ಎಂದು ಬರೆದಿತ್ತು.

ಹೋಗುವಾಗ ಮಾನಸಿಯು ಪಕ್ಕದ ರೂಮಿನಲ್ಲಿ ಇಣಿಕಿ ನೋಡಿದ್ದಳು. ಅಲ್ಲಿ ನಾಲ್ಕು ಕಾಟುಗಳಿದ್ದವು. ಅದು ಪುರುಷರ ರೂಮು. ಯಾರೋ ದಿನಪತ್ರಿಕೆ ಓದುತ್ತಿದ್ದರೆ, ಇನ್ನೊಬ್ಬರು ಪುಸ್ತಕವನ್ನು ಕೈಯಲ್ಲಿ ಹಿಡಿದಿದ್ದರು. “ಏನ ಓದಲಿಕ್ಕತ್ತೀರಿ ಕಾಕಾ?” ಮಾನಸಿ ಕೇಳಿದ್ದಳು. “ನಾನು ಪತ್ರಿಕೆ ಓದಲಿಕ್ಕತ್ತೇನವಾ.. ಇಡೀ ದಿನಾ ಇದನ್ನೇ ಮತ್ತ ಮತ್ತ ಹೊಳ್ಳಿ ಓದೊದು!” “ಯಾಕ?” “ಟೈಮ್ ಕಳೀಬೇಕಲಾ.. ಕಾಲು ನೋಯತಾವ.. ಹೊರಗ ಹೆಚ್ಚಿಗೀ ಓಡಾಡೋದು ಆಗಂಗಿಲ್ಲಾ..” ”ಮನ್ಯಾಗ ಯಾರೂ ಇಲ್ಲಾ. ಮಕ್ಕಳೂ ಇಲ್ಲಾ. ನನ್ನ ಮೊಮ್ಮಗಳು ನನ್ನ ಇಲ್ಲೆ ಕರಕೊಂಡಬಂದಾಳ. ನನ್ನ ರೊಕ್ಕಾನೂ ಅಕೀನ ತುಂಬತಾಳ. ದೇವ್ರು ಬೆನ್ನಿಗೆ ಇರತಾನ. ಅವನೇ ನಮ್ಮ ಕಾಳಜಿ ತೊಗೋತಾನ. ಏನರೆ ಸೌಲಭ್ಯ ಮಾಡಿರತಾನ..” “ನೀವು ಏನ ಓದಲಿಕ್ಕತ್ತೀರಿ ಕಾಕಾ?” ಪಕ್ಕದ ಕಾಟಿನ ಮೇಲೆ ಕುಳಿತಿದ್ದ ವೃದ್ಧನನ್ನು ಕೇಳಿದ್ದಳು ಮಾನಸಿ. “ನಾನು ಈ ಪುಸ್ತಕಾ ಓದಲಿಕ್ಕತ್ತೇನವಾ.. ಇದೊಂದು ಕಾದಂಬರಿ..” “ಯಾವ ವಿಷಯದ ಬಗ್ಗೆ ಅದ ಇದರಾಗ?” “ನಮ್ಮ ಬಗ್ಗೇನ ಅದ. ನಮ್ಮದೇ ದುಃಖಾ ನಾವು ಮೆಲುಕು ಹಾಕಿಧಂಗ! ಛಂದದ. ನಮ್ಮ ದುಃಖಾ.. ನಮ್ಮ ತೊಂದರೆ ಈ ಕಾದಂಬರಿಯೊಳಗ ಛಂದಾಗೇ ವಿವರಿಸ್ಯಾರ.. ಅಧೆಂಗ ಸಾಧ್ಯಾತು ಅಂತ!” “ಹೆಸರೇನದ ಕಾಕಾ, ಆ ಕಾದಂಬರೀದು?” “ಬಂಗಾರದ ಸಂಜೆ!” “ಮೊದಲನೇ ಸರತೆ ಓದಲಿಕ್ಕತ್ತೀರೇನು?” “ಇಲ್ಲವಾ ತಂಗಿ.. ಭಾಳ ಸರತೆ ಓದೇನಿ. ಬಿಡೋವಂಗನ ಆಗಂಗಿಲ್ಲಾ.. ನಮ್ಮದೇ ಪ್ರತಿಬಿಂಬಾ ಅದ ಇದರಾಗ. ಮನುಷ್ಯಗ ತನ್ನದೇ ಪ್ರತಿಬಿಂಬದ ಮೋಹ ಭಾಳಿರತದ ಅನ್ನೋದಂತೂ ನಿನಗ ಗೊತ್ತೇ ಅದ.. ಅಂತನ ಅಂವಾ ಮ್ಯಾಲಿಂದ ಮ್ಯಾಲೆ ಕನಡೀಯೊಳಗ ನೋಡಿಕೋತಾನಲ್ಲ ತನ್ನ ತಾ? ಇದರಾಗೂ ಅದೇ ಅದ.. ಇದನ್ನ ಓದಿಕೋತ ಕೂತಂಗ ನಮ್ಮ ಓದಿನ ಹಸಿವು ಹಿಂಗಿಧಂಗನಸತದ.. ಅಷ್ಟೇ..” ಮಾನಸಿಯು ರೂಮನ್ನು ದೃಷ್ಟಿಸಿದ್ದಳು. ಗೋಡೆಯ ಮೇಲೆ ಕಣ್ಣುಗಳು ಕೀಲಿಸಿದ್ದವು. ಆ ಗೋಡೆಯು ಹೇಳಿತ್ತು.. ”ವಿಚಾರ ಮಾಡಿರಿ, ನೀವು ಇಲ್ಲಿಯವರೆಗೂ ಬರುವಂತೆ ಮಾಡಿದ್ದು ಯಾವ ಸಂಗತಿ?” ಎಂದು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ಏನು ದಿನಾ ಬಂದಾವ! ಒಟ್ಟಿನ್ಯಾಗ ಮುದುಕರು ಮನಿಯೊಳಗ ಬ್ಯಾಡೇ ಬ್ಯಾಡಂತಾರ

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi