AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Literature: ನೆರೆನಾಡ ನುಡಿಯೊಳಗಾಡಿ; ‘ಮಾವಶೀ, ನಮ್ಮನ್ನ ತಪ್ಪು ತಿಳಕೋಬ್ಯಾಡ್ರಿ, ಇದ್ದ ಸಂಗತಿ ಅಂದ್ರ…’

Vijaya Brahmankar’s Marathi Short Story : "ನನಗ ದವಾಖಾನಿಗೆ ಹೋಗೋ ಮನಸಿಲ್ಲಾ. ಅಜ್ಜಿ ಭಾರೀ ಶಾಣೇಕಿದ್ದಾಳ. ಎಳೀ ಕಂಡ್ರ ಹಚ್ಚಡಾ ನುಂಗೋವಂಥಾಕಿ. ನಾವು ಎಷ್ಟೇ ಮುಚ್ಚಿಟ್ರೂ ಅಕೀಗೆ ಇದು ಗೊತ್ತಾತಂದ್ರ ಎದೀನ ಒಡಕೋತಾಳ."

Literature: ನೆರೆನಾಡ ನುಡಿಯೊಳಗಾಡಿ; ‘ಮಾವಶೀ, ನಮ್ಮನ್ನ ತಪ್ಪು ತಿಳಕೋಬ್ಯಾಡ್ರಿ, ಇದ್ದ ಸಂಗತಿ ಅಂದ್ರ...’
ಮರಾಠಿ ಲೇಖಕಿ ವಿಜಯಾ ಬ್ರಾಹ್ಮಣಕರ ಮತ್ತು ಅನುವಾದಕಿ ಮಾಲತಿ ಮುದಕವಿ
ಶ್ರೀದೇವಿ ಕಳಸದ
|

Updated on: Apr 08, 2022 | 11:43 AM

Share

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : “ಈ ವೃದ್ಧರಿಗಾಗಿಯೇ?” ಮಾನಸಿಯ ಮನಸ್ಸು ಕೇಳಿತ್ತು. ಅಜ್ಜಿ ಹಾಗೂ ಮನಸ್ವಿನಿ ಇಬ್ಬರೂ ಹೊರಗೆ ಬೆಂಚಿನ ಮೇಲೆ ಮೌನವಾಗಿ ಕುಳಿತಿದ್ದರು. ಶಬ್ದಗಳೇ ಮೂಕವಾದಂತೆನ್ನಿಸಿತ್ತು. ಆದರೆ ಇಬ್ಬರ ಮನದೊಳಗೂ ವಿಚಾರಗಳ ಸುನಾಮಿ ಎದ್ದಿತ್ತು. ಮುಂದಕ್ಕೆ ಸರಿದುಬಂದಿದ್ದ ಮಾನಸಿಯು, ನಂದಾತಾಯಿಗೆ, “ಮಾವಶೀ, ನಿಮ್ಮ ಜೋಡೆ ನನಗ ಸ್ವಲ್ಪ ಮಾತಾಡೋದದ” ಎಂದಿದ್ದಳು. “ಮಾತಾಡು.. ಮನಸ್ಸು ಬಿಚ್ಚಿ ಮಾತಾಡು.. ಅಜ್ಜಿಯ ಕಾಳಜಿ ಮಾಡಬ್ಯಾಡಾ.. ನಾ.. ನಾ ಇದ್ದೇನಲಾ ಇಲ್ಲೆ..” “ಮಾವಶೀ, ನನಗ ಗೊತ್ತದ ಅದು..” ಮಗುವನ್ನು ಎತ್ತಿಕೊಂಡು ನಿಂತಿದ್ದ ಮಾನಸಿ ಹೇಳಿದ್ದಳು. ಈ ಯುವತಿ ಬಹುಶಃ ದಣಿದಿದ್ದಾಳೆ ಎನ್ನುವ ಆಲೋಚನೆ ನಂದಾತಾಯಿಯ ಮನದಲ್ಲಿ ಬಂದಿತ್ತು. ಅವರು, “ನಡೀ.. ನಾವು ಒಳಗ ಕೂಡ್ರೋಣ.. ಇಲ್ಲೇ ಒಳಗಿನ ಹಾಲಿನ್ಯಾಗ.. ನಡೀತದಲಾ? ನಿನ್ನ ಅಜ್ಜಿ, ನಿನ್ನ ಅವ್ವಾ ಇಬ್ಬರೂ ಹೊರಗ ಕೂತಾರ..” ಎಂದಿದ್ದರು.

ಕಥೆ : ಋಣಾನುಬಂಧ | ಮರಾಠಿ : ವಿಜಯಾ ಬ್ರಾಹ್ಮಣಕರ | ಕನ್ನಡಕ್ಕೆ : ಮಾಲತಿ ಮುದಕವಿ

(ಭಾಗ 5)

“ಅವರು ಹೊರಗೇ ಇರಲಿ ಮಾವಶಿ. ನನಗ ನಿಮ್ಮ ಜೋಡೇನ ಮಾತಾಡಬೇಕಾಗೇದ..” “ನಡೀ ಹಂಗಾರ..” ಇಬ್ಬರೂ ಜೊತೆಗೂಡಿ ಹಾಲಿಗೆ ಬಂದಿದ್ದರು. ಮಾನಸಿ ಸೋಫಾದ ಮೇಲೆ ಕುಳಿತಿದ್ದಳು. ಮಗುವನ್ನು ಸೋಫಾದ ಒಂದು ತುದಿಯಲ್ಲಿ ಮಲಗಿಸಿದ್ದಳು. ಹಾಲು ಕುಡಿದಿದ್ದ ಮಗು ಕೂಡಲೆ ನಿದ್ರೆ ಹೋಗಿತ್ತು.

“ಹೂಂ.. ಆಗಲೇ ನಿದ್ದಿ ಹತ್ತೇ ಹೋತ? ನಿದ್ದೀ ಛೊಲೋ ಹೊಡೀತಾನ ನಿನ್ನ ಮಗಾ!” ಮಾನಸಿಯ ಎದುರಿಗೆ ಕುರ್ಚಿಯನ್ನು ಎಳೆದುಕೊಂಡು ಕೂಡ್ರುತ್ತ ನಂದಾತಾಯಿ ಹೇಳಿದ್ದರು.

“ಹೌದು ಮಾವಶಿ. ಅವಂದು ಏನೂ ತ್ರಾಸಿಲ್ಲಾ. ಹೊಟ್ಟಿ ತುಂಬಿದ್ರ ಆತು.. ಛಂದಾಗಿ ನಿದ್ದೀ ಮಾಡತಾನ..” ಕೆಲಹೊತ್ತು ಸುಮ್ಮನೆ ಕುಳಿತಿದ್ದಳು ಮಾನಸಿ. ಶಬ್ದಗಳನ್ನು ಜೋಡಿಸುವ ಯತ್ನದಲ್ಲಿದ್ದಳೋ ಏನೋ. ನಂತರ ಮೆಲ್ಲನೆ ಗೋಣು ಎತ್ತಿ ನಂದಾತಾಯಿಯತ್ತ ನೋಡಿದ್ದಳು. “ಮಾವಶೀ, ನಮ್ಮನ್ನ ತಪ್ಪು ತಿಳಕೋಬ್ಯಾಡ್ರಿ.. ಇದ್ದ ಸಂಗತಿ ಅಂದ್ರ..” ಇಷ್ಟು ಹೇಳುವಷ್ಟರಲ್ಲಿ ಮಾನಸಿಯ ಕಂಠ ಗದ್ಗದವಾಗಿತ್ತು. ಕಣ್ಣುಗಳು ತುಂಬಿಬಂದಿದ್ದವು.

“ಮಾವಶೀ, ನನ್ನ ಅಜ್ಜಿ ಅಂದ್ರ ನನಗ ಭಾಳ ಪ್ರೀತಿ. ನನಗಂತೂ ಅವ್ವನಕಿಂತಾ ಒಂದು ಕೈ ಹೆಚ್ಚೇ ಅನಸೂವಷ್ಟು. ಅವ್ವಗೂ ಅಕಿ ಅಂದ್ರ ಸರ್ವಸ್ವ. ನಾ ಈಗ ನನ್ನ ಬಾಣಂತನಕ್ಕಂತ ಬಂದಿದ್ದೆ. ಅವ್ವನ ಆರೋಗ್ಯ ಯಾಕೋ ಸರಿ ಇದ್ದಿರಲಿಲ್ಲಾ. ನಡುನಡುವ ಬಿಟ್ಟಬಿಟ್ಟ ಜ್ವರಾ ಬರತಿದ್ವು.. ಭಾಳ ದಣಧಂಗ ಅನಸತಿದ್ಲು. ಕೆಮ್ಮೂ ಇತ್ತು. ದವಾಖಾನಿಗೆ ಹೋಗೋಣಂದ್ರ ತಯಾರ ಇರಲಿಲ್ಲಾ. ನಾ ಈಗ ಹದನೈದ ದಿನದ ಹಿಂದ ಅಕಿನ್ನ ಒತ್ತಾಯದಿಂದ ದವಾಖಾನಿಗೆ ಕರಕೊಂಡ ಹೋಗಿದ್ದೆ. ಅದೂ ಅಕೀಗೆ ಹೊಟ್ಟೀನೋವು ಬಂತೂಂತ.. ಅಶಕ್ತನೂ ಭಾಳ ಅನಸತಿದ್ಲು.. ಡಾಕ್ಟರು ಅಕಿನ್ನ ಪರೀಕ್ಷಾ ಮಾಡಿದ್ರು. ಅಕೀಗೆ ಕ್ಯಾನ್ಸರ್ ಆಗೇದಂತ ಹೇಳಿದ್ರು. ಯುಟರಸ್ ಕ್ಯಾನ್ಸರ್. ಕಡೀ ಸ್ಟೇಜ ಅದ ಅಂತಂದ್ರು. ಅಕೀ ಆಯುಷ್ಯದಾಗ ಇನ್ನ ಎಷ್ಟು ದಿನಾ ಉಳದಾವೋ ಗೊತ್ತಿಲ್ಲಾ. ಅಕೀ ಮೆಡಿಸಿನ್ ತೊಗೋಳಿಕ್ಕೆ ತಯಾರ ಇದ್ದಾಳ. ಟ್ರೀಟ್‌ಮೆಂಟ್ ಬ್ಯಾಡಂತಾಳ. ಅಜ್ಜಿಗಂತೂ ಇದರ ಬಗ್ಗೆ ಏನೂ ತಿಳೀಬಾರದಂತ ಅಕೀ ಹಟಾ. ಅಕೀಗೆ ನಾ ಭಾಳ ಹೇಳಿದೆ, ನಿನ್ನ ಸಲುವಾಗಿಯರೇ ವಿಚಾರ ಮಾಡೂ ಅಂತಂದೆ. ಅಕೀ, “ನಾ ಏನ ಮಾಡಲಿ ಹೇಳು.. ಅವ್ವಗ ತಿಳೀತೂ ಅಂದ್ರ ನನಗಿಂತಾ ಮೊದಲ ಅಕೀನ ಹೋಗತಾಳ. ಈ ಪೆಟ್ಟು ಅಕೀ ಕಡಿಂದ ಸಹಿಸೋದು ಸಾಧ್ಯ ಇಲ್ಲಾ. ನನ್ನ ಹೊರತಾಗಿ ಅಕೀಗೆ ಯಾರಿದ್ದಾರ ಹೇಳು..” ಅಂದ್ಲು.

ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ಏನು ದಿನಾ ಬಂದಾವ! ಒಟ್ಟಿನ್ಯಾಗ ಮುದುಕರು ಮನಿಯೊಳಗ ಬ್ಯಾಡೇ ಬ್ಯಾಡಂತಾರ

ನಾನು, “ನೀ ಹೇಳೋದೇನೋ ಖರೆ. ಆದರ ಅಕೀ ಸಲುವಾಗಿಯರೆ ನೀ ಟ್ರೀಟಮೆಂಟ್ ತೊಗೋ. ಮೊದಲನ ತಡಾ ಆಗೇದ. ನಾಲ್ಕನೇ ಸ್ಟೇಜದ. ಈ ಜಡ್ಡಂದ್ರ ಒಂದು ಎರಡು ದಿನದಾಗ ಹೊಗೋವಂಥಾದಲ್ಲಾ. ಆದರೂ ಅರಾಮಾಗೂ ತನಕಾ ಮೆಡಿಸಿನ್ ತೊಗೋಳಲೇಬೇಕಲ್ಲೇನು? ನೀನೇ ಹೇಳತೀ, ಅಕಿಗೆ ನಿನ್ನ ಹೊರತೂ ಬ್ಯಾರೆ ಯಾರೂ ಇಲ್ಲಂತ.. ನನಗಾದ್ರೂ ನಿಮ್ಮಿಬ್ಬರ ಹೊರತಾಗಿ ಯಾರಿದ್ದಾರ ಹೇಳು?” ಅಂತಂದೆ. ಇದಕ್ಕ ಅಕೀ ಸುಮ್ಮನಾಗಿದ್ದಳು. ಮತ್ತ ಹೇಳಿದ್ದಳು.. “ನನಗ ದವಾಖಾನಿಗೆ ಹೋಗೋ ಮನಸಿಲ್ಲಾ.. ಅಜ್ಜಿ ಭಾರೀ ಶಾಣೇಕಿದ್ದಾಳ. ಎಳೀ ಕಂಡ್ರ ಹಚ್ಚಡಾ ನುಂಗೋವಂಥಾಕಿ ಅಕಿ. ನಾವು ಎಷ್ಟೇ ಮುಚ್ಚಿಟ್ರೂ ಅಕೀಗೆ ಇದು ಗೊತ್ತಾತಂದ್ರ ಎದೀನ ಒಡಕೋತಾಳ. ಅದನ್ನ ನನಗ ನೋಡಲಿಕ್ಕೆ ಆಗಂಗಿಲ್ಲವಾ.. ಅಕೀಗೆ ತನ್ನ ಜೀವದಕಿಂತಾ ನನ್ನ ಮ್ಯಾಲೇ ಹೆಚಿಗೀ ಪ್ರೀತಿ. ನಿನ್ನ ಮ್ಯಾಲೆ, ಈ ಕೂಸಿನ ಮ್ಯಾಲೆ ಅಕೀ ಜೀವಾನ ಇಟಗೊಂಡಾಳ.

ಮಾನಸಿ, ‘‘ನನಗ ನನ್ನ ಅಪ್ಪಂದೂ ಅಷ್ಟು ಸರಿಯಾಗಿ ನೆನಪಿಲ್ಲಾ. ನನ್ನ ಸರ್ವಸ್ವಾ ಅಂದ್ರ ನನ್ನ ಅವ್ವಾನ! ಅಕೀ ನನಗಾಗಿ ಭಾಳ ಮಾಡ್ಯಾಳವಾ..” ಸರಿ.. ಹಂಗಾರ ಅಜ್ಜಿಗೆ ಹೇಳೋದು ಬ್ಯಾಡಾ.. ನಡೀ, ಬೆಂಗಳೂರಿಗೆ ನನ್ನ ಜೋಡೀ. ಅಲ್ಲೇ ಟ್ರೀಟ್‌ಮೆಂಟ್ ತೊಗೋವಂತಿ. ಜಡ್ಡು ಈಗ ತಿಳದದ ಅಂದ್ರೂ ಇನ್ನ ತಡಾ ಮಾಡೋದು ಬ್ಯಾಡಾ..’ ಅಂತಂದೆ “ಸಾಧ್ಯವೇ ಇಲ್ಲಾ. ಅಜ್ಜಿನ್ನ ಎಲ್ಲೆ ಬಿಡೋದು?” ಅಂದ್ಲು. ನಾ ಅಕಿನ್ನೂ ಕರಕೊಂಡು ಹೋಗೋಣಂತಂದೆ. ಅಕೀ ಅದಕ್ಕೂ “ಇಲ್ಲಾ..” ಅಂತಂದ್ಲು. “ಹಂಗಾರ ಯಾರರೆ ಬಳಗದವ್ರ ಕಡೆ ಬಿಡೋಣೇನು?” ಅಂದೆ. ಅಕೀ “ಯಾರದೂ ಉಪಕಾರಾ ಬ್ಯಾಡಾ ನನಗ.. ಮಾನಸಾ, ನೀ ಏನೇ ಹೇಳು.. ನನಗಂತೂ ಅವ್ವನ್ನ ಬಿಟ್ಟು ಎಲ್ಲಿಗೂ ಬರಲಿಕ್ಕೆ ಸಾಧ್ಯ ಇಲ್ಲಾ. ನನ್ನ ಜೀವನಾನ ಅಕಿಯಿಂದ ಸುರು ಆಗೇದ.. ಅಕೀ ಹತ್ತರನ ಹೋಗಿ ನಿಲ್ಲತದ..”

“ಹಿಂಗ ಹೇಳಿ ಅವ್ವಾ ನನ್ನ ಬ್ಯಾರೇ ಏನೂ ಉತ್ತರಾ ಕೊಡಲಾರಧಂಗ ಮಾಡಿದ್ಲು ಮಾವಶೀ.. ಮತ್ತ ಅಕೀನ ನನ್ನ “ಈ ಮನೀ ಹ್ಯಾಂಗ ಬಿಟ್ಟ ಬರಲೇ” ಅಂತನೂ ಕೇಳಿದ್ಲು. ಇದಕ್ಕ ನಾ ಏನು ಹೇಳಲಿ ಮಾವಶೀ? ಆ ದೃಷ್ಟಿಂದ ನೋಡಿದ್ರ ಅಜ್ಜೀದು ಎಡ್ಜಸ್ಟ್ಮೆಂಟೂ ಅಗದೀ ಮೆಚ್ಚಿಕೊಳ್ಳೋವಂಥಾದು. ನೀವು ಹೇಳತೀರಲಾ ಹಂಗ.. ಅಪ್ಪಾ ಒಮ್ಮಿಂದೊಮ್ಮೆಲೆ ಹೋಗಿಬಿಟ್ಟರು. ನಂತರ ಅವ್ವಾ ಎಲ್ಲಾದರಾಗಿಂದೂ ಮನಸೇ ತಗದಬಿಟ್ಲೂ. ದೇವರು, ಧರ್ಮಾ, ಉಪಾಸಾ ವನವಾಸಾ… ಎಲ್ಲಾನೂ ಬಿಟ್ಟೇಬಿಟ್ಲು. ಎಲ್ಲಾ ಅಸ್ತವ್ಯಸ್ತ ಆಗಿಹೋತು. ನಾನೂ ಅಕಿಗೆ ಹೇಳೇ ಹೇಳತೇನಿ, ದೇವರು ದಿಂಡರಿಗೆ, ನಮ್ಮ ಜೀವನದಾಗ ಆಗೋ ಘಟನಾಕ್ಕ ಏನ ಸಂಬಂಧದ ಅಂತ. ನಾವು ಮಾಡೋ ಈ ಪೂಜಾ-ಪುನಸ್ಕಾರದಿಂದ ನಮಗ ಆಂತರಿಕ ಸಮಾಧಾನಾ, ಶಾಂತಿ ಸಿಗತದ. ಆದರ ನಮ್ಮ ಜೀವನದ ಘಟನಾ ಏನೇ ಇದ್ದರೂ ಅವು ವಿಧಿಲಿಖಿತ.. ಅವನ್ನ ತಪ್ಪಸಲಿಕ್ಕೆ ಸಾಧ್ಯ ಇಲ್ಲಾಂತ ಹೇಳಿದ್ರೂ ಅಕೀ ಒಪ್ಪೂದೇ ಇಲ್ಲಾ. ಅಪ್ಪನಿಲ್ಲದ ತನ್ನ ಜೀವನಾನ ಅಕೀ ಮರಳುಗಾಡು ಮಾಡಿಕೊಂಡಬಿಟ್ಟಾಳ. ಎಲ್ಲೂ ಹೋಗಂಗಿಲ್ಲಾ, ಬರಂಗಿಲ್ಲಾ.. ಯಾರ ಜೋಡೀನೂ ಮಿಕ್ಸ್ ಆಗಂಗಿಲ್ಲಾ. ಭಜನಾಮಂಡಳಕ್ಕ ಹೋಗತಿದ್ಲು. ಈಗ ಅಲ್ಲೂ ಹೋಗಂಗಿಲ್ಲಾ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ಸಂಬಂಧಿಕರ ಭೇಟಿ ಅನ್ನೋ ಹುಚ್ಚು ಆಶಾ! ಇಲ್ಲಿ ಎಷ್ಟ ಅನುಕೂಲ ಮಾಡಿಕೊಟ್ರೂ..

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?