Literature: ನೆರೆನಾಡ ನುಡಿಯೊಳಗಾಡಿ; ದೇವರೇ, ಸಾವೆಂಬ ಭಾರವನ್ನು ಎಂದೆಂದಿಗೂ ಕಿತ್ತೆಸೆಯುವಂತಿದ್ದರೆ?

|

Updated on: Apr 22, 2022 | 12:23 PM

Santhosh Echikkanam‘s Malayalam Story : ಮೇಲೆ ನಿಂತಿದ್ದ ಪತ್ರಿಕಾವರದಿಗಾರನಿಗೆ ಅವ ಕೂಗಿ ಹೇಳಿದ, ‘ಗೆಳೆಯಾ, ಒಂದು ಹಾವು ಕಪ್ಪೆ ತಬ್ಬಿಕೊಂಡು ಮಲಗಿವೆ. ಜಾತಿ ಶತ್ರುಗಳ ನಡುವಿನ ಶಾಂತಿ ಸೌಹಾರ್ದದ ಉಚ್ಛ್ರಾಯ ಸ್ಥಿತಿಯಿದು. ಇದೊಂದು ಅಪರೂಪದ ದೃಶ್ಯ.’

Literature: ನೆರೆನಾಡ ನುಡಿಯೊಳಗಾಡಿ; ದೇವರೇ, ಸಾವೆಂಬ ಭಾರವನ್ನು ಎಂದೆಂದಿಗೂ ಕಿತ್ತೆಸೆಯುವಂತಿದ್ದರೆ?
ಅನುವಾದಕ ಕೆ.ಕೆ. ಗಂಗಾಧರನ್, ಮಲಯಾಳದ ಕಥೆಗಾರ ಸಂತೋಷ ಏಚ್ಚಿಕಾನಂ
Follow us on

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಅನೇಕ ದಿನಗಳಾದವು. ಹೊರಜಗತ್ತಿನಿಂದ ಯಾವುದೇ ಸದ್ದೂ ಬಾವಿಯೊಳಕ್ಕೆ ಇಳಿದು ಬರಲಿಲ್ಲ. ಅಮವಾಸ್ಯೆಯ ಕಾಲವಾಗಿದ್ದುದರಿಂದ ಬೆಳದಿಂಗಳ ಕೃಪೆಯೂ ಇರಲಿಲ್ಲ. ಅಸಹ್ಯವಾದ ದುರ್ಗಂಧದ ನಡುವೆ ಕೊಳೆತ ಮಾಂಸದ ಅಡುಗುದಾಣದಲ್ಲಿ ಮರೆಯಾಗಿ ಕಪ್ಪೆ ಅಪಾರವಾದ ಸುರಕ್ಷತೆಯನ್ನು ಘೋಷಿಸಿತು. ಹೊತ್ತು ಮಧ್ಯಾಹ್ನವಾಗಿರಬೇಕು. ಒಂದು ಗುಂಪು ಬಾವಿಯ ಮೇಲೆ ಬಂದು ನಿಲ್ಲುವುದನ್ನು ಕಪ್ಪೆ ಹೆಣದ ಮರೆಯಲ್ಲಿಯೇ ನಿಂತು ನೋಡಿತು. ಆ ಮಂದಿಯ ವಿಭ್ರಾಂತಿಯ ಧ್ವನಿಗಳೂ ಕೇಳಿಸಿದವು. ಬಾವಿಯ ಆಳಕ್ಕೆ ಬೆಟ್ಟು ಮಾಡಿ ತೋರಿಸುತ್ತಿದ್ದ ಜನರ ನೆರಳುಗಳು ಬಾವಿಯ ತಳಭಾಗದಲ್ಲಿ ಕಾರ್ಗತ್ತಲೆಯನ್ನು ಸೃಷ್ಟಿಸಿತು. ಜನರ ಗುಂಪಿನ ಸದ್ದುಗದ್ದಲದ ನಡುವೆಯಿಂದ ಸಿಂಹದಂತಿರುವ ಒಬ್ಬ ಡಾಬರ್ಮನ್ನಿನ ತಲೆ ಕಾಣಿಸಿ ಬಾವಿಯಲ್ಲಿ ನಡುಗುವ ಪ್ರತಿಬಿಂಬವಾಯಿತು. ಎರಡು ಮೂರು ಮಂದಿ ಬಾಯಿ ಮೂಗುಗಳನ್ನು ಮುಚ್ಚಿಕಟ್ಟಿ ಕೆಳಗಿಳಿಸಿದ ಕಬ್ಬಿಣದ ಏಣಿಯ ಮೂಲಕ ಬಾವಿಗೆ ಬಂದರು. ತರಾತುರಿಯಿಂದ ನಿರ್ಮಿಸಿದ ತಾತ್ಕಾಲಿಕ ರಾಟೆಯ ಮೂಲಕ, ಗಟ್ಟಿಯಾದ ಹಗ್ಗಕ್ಕೆ ಬಿಗಿದ ಖುರ್ಚಿ ಕೆಳಬಂತು. ಅತಿಕಾಯ ಮತ್ತು ಗಟ್ಟಿ ಮನಸ್ಸಿನ ಒಬ್ಬ ಯುವಕ ಮಹಿಳೆಯ ದೇಹವನ್ನು ಒದ್ದೆ ಬಟ್ಟೆಯಂತೆ ಎತ್ತಿ ಖುರ್ಚಿಯಲ್ಲಿಟ್ಟರು. ಪತ್ರಿಕಾ ಛಾಯಾಗ್ರಾಹಕರ ಕ್ಯಾಮರಾಗಳು ಹಲವು ಸಲ ಮಿಂಚಿ ಮರೆಯಾದವು.

 

ಕಥೆ : ಉಭಯ ಜೀವನ | ಮಲಯಾಳ ಮೂಲ : ಸಂತೋಷ ಏಚಿಕಾನಂ | ಕನ್ನಡಕ್ಕೆ : ಕೆ.ಕೆ. ಗಂಗಾಧರನ್ 

(ಭಾಗ 4)

ನೀರಿನ ಮೇಲ್ಪದರಿನಲ್ಲಿ ಸುಂದರವಾದ ದೇಹದ ನೆನಪುಗಳು ಎಣ್ಣೆಯಾಗಿ ಹರಡಿತು. ಆದರೆ ಕೊಳತ ದೇಹದ ದುರ್ಗಂಧ ಹಾಗೆಯೇ ಉಳಿದುಕೊಂಡಿತು. ಬಾವಿಯಾಳದಲ್ಲಿ ಯಾರಿಂದಲೂ ಪತ್ತೆಯಾಗದ ಬಂಗಾರದ ಬಳೆಗಳು ಮತ್ತಷ್ಟು ಫಳ ಫಳಿಸಿದವು. ಈ ಎಲ್ಲಾ ಸದ್ದುಗದ್ದಲಗಳ ನಡುವೆ ನೀರುಹಾವು ದೇಹವನ್ನು ಒಮ್ಮೆ ನುಲಿದಾಡಿಸಿ ಕಪ್ಪೆಯ ಸುತ್ತಲೂ ಅರ್ಧವೃತ್ತಾಕೃತಿಯಲ್ಲಿ ಭದ್ರವಾಗಿ ಮಲಗಿಕೊಂಡಿತು. ಮೃತದೇಹ ಕೊಂಡೊಯ್ದುದರಿಂದ ಕಪ್ಪೆಗೆ ಶೂನ್ಯತೆ ಆವರಿಸಿತು. ಅದಕ್ಕಿಂತಲೂ ಹೆಚ್ಚಾಗಿ ಭೀತಿಯನ್ನುಂಟು ಮಾಡಿತು.

ಬಾವಿಯ ಸುತ್ತಲೂ ಮತ್ತೆ ಸದ್ದುಗದ್ದಲ ಹೆಚ್ಚಾಗ ತೊಡಗಿತು. ಜೀಪುಗಳು ಗಕ್ಕೆಂದು ಬ್ರೇಕು ಹಾಕುವ ಸದ್ದು. ಅದೇ ಸಮಯಕ್ಕೆ ಸರಿಯಾಗಿ ಅತ್ಯಾಕರ್ಷಕ ಬಣ್ಣದ ಚಿಟ್ಟೆಯೊಂದು ಬಾವಿಯ ಅರ್ಧದಷ್ಟು ಆಳಕ್ಕೆ ಇಳಿದು ಬಂದು ಹುಲ್ಲಿನ ನಾಲಗೆಗಳನ್ನು ಸ್ವರ್ಶಿಸಿ ಮೇಲಕ್ಕೆ ಹಾರಿತು.

‘ಮನುಷ್ಯ ಸತ್ತರೆ ಚಿಟ್ಟೆಗಳಾಗುತ್ತಾರೆಯೇ?’ ಕಪ್ಪೆ ಯೋಚಿಸಿತು. ಅದರ ನಡುವೆ ಹಿಂದೊಂದು ಚೀಲವನ್ನು ತೂಗುಹಾಕಿ, ಝೂಮ್​ಲೆನ್ಸ್ ಕ್ಯಾಮರಾದೊಂದಿಗೆ ಸರ್ಕಸ್ಸಿನ ಕಸರತ್ತುಗಾರನಂತೆ ಒಬ್ಬ ಫೋಟೋಗ್ರಾಫರ್ ಹಗ್ಗದಲ್ಲಿ ತೂಗಾಡುತ್ತಾ ಬಾವಿಯೊಳಕ್ಕೆ ಇಳಿದು ಬಂದ. ಒಂದೆರಡು ಫ್ಲ್ಯಾಷ್ ಮಿಂಚಿಸಿ ಅಪರೂಪದ ಧ್ವನಿ ಹೊರಡಿಸಿದ.

ಮೇಲೆ ನಿಂತಿದ್ದ ಪತ್ರಿಕಾವರದಿಗಾರನಿಗೆ ಅವನು ಕೂಗಿ ಹೇಳಿದ, ‘ಗೆಳೆಯಾ, ಒಂದು ಹಾವು ಮತ್ತೊಂದು ಕಪ್ಪೆ ತಬ್ಬಿಕೊಂಡು ಮಲಗಿದೆ. ಜಾತಿ ಶತ್ರುಗಳ ನಡುವಿನ ಶಾಂತಿ ಸೌಹಾರ್ದದ ಉಚ್ಛ್ರಾಯ ಸ್ಥಿತಿಯಿದು. ಇದೊಂದು ಅಪರೂಪದ ದೃಶ್ಯ.’

ಹಲವಾರು ಮುಖಗಳು ಬಾವಿಯಾಳಕ್ಕೆ ಹಣಿಕಿದವು. ದುರಂತದ ಆಳದಲ್ಲಿ ಮರೆಯಾಗಿದ್ದ ಆ ನೋಟದಲ್ಲಿ ಅವರು ಎಲ್ಲವನ್ನು ಮರೆತು ಅಚ್ಚರಿ ವ್ಯಕ್ತಪಡಿಸಿದರು. ಫೋಟೋಗ್ರಾಫರ್ ವಿವಿಧ ಕೋನಗಳಿಂದ ಆ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದನು. ಸ್ವಲ್ಪ ಸಮಯದ ತರುವಾಯ ಹಗ್ಗದ ಮೂಲಕ ಬಾವಿಯ ಮೇಲಕ್ಕೆ ಹೊದನು. ಬಾವಿಯ ಮೇಲಿನ ಸದ್ದುಗದ್ದಲಗಳು ತಣ್ಣಗಾಗುತ್ತಿದ್ದಂತೆ, ಆಗಸ ಕಪ್ಪಾಗತೊಡಗಿತು. ನಿಶ್ಶಬ್ದವಾದ ಮಂಜುಕಾಲದ ರಾತ್ರೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್​ 128 ವರ್ಷಗಳ ಹಿಂದೆ ಬರೆದ ಕಥೆ

ಕಪ್ಪೆ ದೀರ್ಘವಾದ ನಿಟ್ಟುಸಿರು ಬಿಟ್ಟಿತು. ಅನಂತರ ಕಾಲುಗಳನ್ನು ನಿಡಿದಾಗಿಸಿ ಈಜುತ್ತಾ ಸೂತ್ರಹರಿದ ಗಾಳಿಪಟದಂತೆ ಬಾವಿಯ ಆಳಕ್ಕೆ ಹೋಯಿತು. ಹಾವಸೆ ಗಿಡಗಳು ಬೆಳೆದ ಕಲ್ಲಿನ ಅಗಾಧವಾದ ತಂಪಿನಲ್ಲಿ ಮುಖ ಒತ್ತಿ ಅರ್ಧ ಮುಚ್ಚಿದ ಕಣ್ಣಗಳಲ್ಲಿ ಅದು ಯೋಚಿಸತೊಡಗಿತು.

ಕೂಡಿದರೂ, ಕಳೆದರೂ ಒಂದೇ ಒಂದು, ಉತ್ತರವೂ ಸಿಗದ ಲೆಕ್ಕವೇ ಜೀವನ. ಅದು ಸಾವು. ಸಾವನ್ನು ಜಯಿಸಲು ನಡೆಸುವ ಪ್ರಯತ್ನವೇ ಇರಬೇಕು. ಒಬ್ಬಾತ ಬದುಕಿದ ಎಂಬುದರ ಗುರುತು.

ತುಂಬಿದ ಹೊಟ್ಟೆಯ ಆಲಸ್ಯದಿಂದ ನೀರುಹಾವು ಬಾವಿಯ ತಳಭಾಗಕ್ಕೆ ಇಳಿಯಿತು. ಅದು ಕಪ್ಪೆಯ ಸಮೀಪವೇ ಮಲಗಿತು. ಅದಕ್ಕೆ ನಿದ್ರೆ ಬಂದುಬಿಟ್ಟಿತು. ಆದರೆ ಕಪ್ಪೆ ಏನೇನೋ ಯೋಚಿಸುತ್ತಾ ನಿದ್ರೆಯಿಲ್ಲದೆಯೇ ಮಲಗಿತು. ಅದರ ಚಿಂತನೆಗಳೆಲ್ಲಾ ಬಾವಿಯ ದೊರಗಾದ ಗೋಡೆಗಳಿಗೆ ಬಡಿದು ಕೊನೆಗೊಂಡವು. ಬಯಸುವ ಆಕಾಶವಾಗಲಿ ಮಿಂಚುಹುಳಗಳ ರಂಗೋಲಿಯಾಗಿ ಬಹಳ ದೂರದಲ್ಲಿ ತೇವಗೊಂಡು ಮಲಗಿದವು.

ಇದ್ದಕ್ಕಿದ್ದಂತೆ ಕಪ್ಪೆಯ ಬಾಯಿ ಅಸಾಮಾನ್ಯ ರೀತಿಯಲ್ಲಿ ಅಗಲಗೊಂಡಿತು. ತುಂಬು ಹೊಟ್ಟೆಯ ಆಲಸ್ಯದಿಂದ ಮೈಮರೆತು ನಿದ್ರಿಸುತ್ತಿದ್ದ ನೀರುಹಾವಿನ ಶಿರೋಭಾಗ ನಿಮಿಷಾರ್ಧದಲ್ಲಿ ಕಪ್ಪೆಯ ಬಾಯೊಳಕ್ಕೆ ಸೇರಿತು. ತಿಳಿಯಲಾಗದ ಯಾವುದೋ ಒಂದರ ಮೇಲೆ ಕಪ್ಪೆಯ ದವಡೆಯ ಮೂಳೆಗಳು ಅದನ್ನು ನಜ್ಜುಗುಜ್ಜುಗೊಳಿಸಿತು.

ನೀರುಹಾವು ಒಮ್ಮೆ ಒದರಾಡಿತು. ಕಪ್ಪೆಯ ಹಿಡಿತ ಮತ್ತಷ್ಟು ಬಲವಾಯಿತು. ಅದರ ಕಣ್ಣುಗಳು ಭೂಮಿಯಷ್ಟು ಅಗಲಗೊಂಡವು.

ಉಸಿರುಕಟ್ಟಿದಂತಾಯಿತು. ಆದರೂ ಅದು ತನ್ನ ದೇಹಕ್ಕೆ ಅಪಾರವಾದ ಶಕ್ತಿ ಮತ್ತು ತಾಳ್ಮೆಯನ್ನು ಆವಾಹಿಸಿಕೊಂಡಿತು. ಪ್ರಕೃತಿಯ ಲಂಘಿಸಲಾಗದ ಜೈವನೀತಿಗೂ ಆಚೆ ಇರುವ ಜನುಮದ ಅಸಹನೀಯವಾದ ಪ್ರಾಣ ವೇದನೆಯಿಂದ ಕಪ್ಪೆ ಯೋಚಿಸತೊಡಗಿತು.

ಕಣ್ಣುಗಳು ವಿಸ್ತಾರಗೊಂಡರೇನಂತೆ, ಉಸಿರು ನಿಂತರೇನಂತೆ? ಈ ಏಕಾಂತತೆಯಲ್ಲಿ ತಾನೇ ಉರಿದು ಬಿದ್ದರೇನು?

ದೇವರೇ, ಬದುಕಿನ ಮೇಲಿರುವ ಸಾವೆಂಬ ಭಾರವನ್ನು ಎಂದೆಂದಿಗೂ ಕಿತ್ತೆಸೆಯುವಂತಿದ್ದರೆ?

ಇದೇ ವೇಳೆಗೆ, ಬಾವಿಯ ಹೊರವಲಯದಲ್ಲಿ ನಸುಕಿನ ಮಂಜಿನ ಆವೇಶಗಳು ತುಂಬಿ ನಲಿದಾಡುತ್ತಿದ್ದವು. ಪತ್ರಿಕೆಗಳನ್ನು ಹೊತ್ತ ವ್ಯಾನುಗಳು ಹೊರಡಲು ಸಜ್ಜಾಗಿ ನಿಂತಿದ್ದವು.

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಕಥೆಯ ಎಲ್ಲಾ ಭಾಗಗಳನ್ನು ಮತ್ತು ಅಂಕಣದ ಎಲ್ಲಾ ಅನುವಾದಿತ ಇತರೇ ಕಥೆಗಳನ್ನೂ ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Published On - 11:33 am, Fri, 22 April 22