ನೆರೆನಾಡ ನುಡಿಯೊಳಗಾಡಿ : NereNaada Nudiyolagaadi ; ರಾಹುಲ ಸಾಂಕೃತ್ಯಾಯನ ಹುಟ್ಟಿದ್ದು 9.4.1893ರಲ್ಲಿ. ಆಜವ್ಯಘಡ ಜಿಲ್ಲೆಯ ಪಂದ್ಯಹಾ ಗ್ರಾಮದಲ್ಲಿ. ತಂದೆ ಗೋವರ್ಧನ ಪಾಂಡೆ, ತಾಯಿ ಕುಲಪತೀದೇವಿ. ಲಾಹೋರ್, ವಾರಣಾಸಿಯಲ್ಲಿ ಸಂಸ್ಕೃತಾಭ್ಯಾಸ. ಶ್ರೀಲಂಕೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕ, ಬೌದ್ಧ ಸಾಹಿತ್ಯಾಧ್ಯಯನ. ಟಿಬೆಟ್ ಯಾತ್ರೆ, ಬೌದ್ಧ ಗ್ರಂಥಗಳ ಹಸ್ತಪ್ರತಿ ಸಂಗ್ರಹ. ಹಲವಾರು ಪಶ್ಚಿಮ ರಾಷ್ಟ್ರಗಳ ಯಾತ್ರೆ. ರಷ್ಯನ್ ಮಹಿಳೆಯೊಂದಿಗೆ ವಿವಾಹ. ಇಗೋರ್ ರಾಹುಲೋವಿಚ್ ಪುತ್ರನ ಜನನ. ರೈತರ ಹೋರಾಟ, ಅಮಾವರಿ ಸತ್ಯಾಗ್ರಹದ ಮುಂದಾಳ್ತನ. ಮುಂದೆ ಸ್ಮೃತಿನಾಶಕ್ಕೆ ಕಾರಣವಾಗಿ ಪರಿಣಮಿಸಿದ ಲಾಠಿ ಹೊಡೆತ. ಸೆರೆಮನೆವಾಸ. ಹಜಾರಿಬಾಗ್ ಕೇಂದ್ರ ಕಾರಾಗೃಹದಲ್ಲಿ ‘ವೋಲ್ಗಾದಿಂದ ಗಂಗೆಗೆ’ ರಚನೆ. ಮೂವತ್ತನಾಲ್ಕು ವರ್ಷಗಳ ನಂತರ ಹುಟ್ಟೂರಿಗೆ ಪಯಣ. ಉತ್ತರಾಪಥದ ಯಾತ್ರೆ. ಲೆನಿನ್‌ಗ್ರಾಡಿನಲ್ಲಿ ಪ್ರಾಧ್ಯಾಪಕ ವೃತ್ತಿ, ಅಲೆಮಾರಿ ಜೀವನ ಮುಗಿಸಿ ಕಮಲಾದೇವಿಯೊಂದಿಗೆ ವಿವಾಹ. ಮಸ್ಸೂರಿಯಲ್ಲಿ ವಾಸ. ತತ್ವಶಾಸ, ವಿಜ್ಞಾನ, ರಾಜನೀತಿ, ಧರ್ಮಶಾಸ , ಕತೆ, ಕಾದಂಬರಿ, ಕೋಶಗಳು ಇತ್ಯಾದಿಯಾಗಿ 150ಕ್ಕಿಂತಲೂ ಅಧಿಕ ಗ್ರಂಥಗಳು, ಹಲವಾರು ಪ್ರಾಚೀನ ಬೌದ್ಧ ಸಾಹಿತ್ಯ ಕೃತಿಗಳ ಸಂಪಾದನೆ. ಡಾರ್ಜಿಲಿಂಗ್ನಲ್ಲಿ ನಿಧನ.
ಕಥೆ : ನಿಶಾ (ಕ್ರಿ. ಪೂ. 6000) | ಹಿಂದಿ ಮೂಲ : ರಾಹುಲ ಸಾಂಕೃತ್ಯಾಯನ | ಕನ್ನಡಕ್ಕೆ : ಬಿ. ಎಂ. ಶರ್ಮಾ | ಕೃತಿ ಸೌಜನ್ಯ : ‘ವೋಲ್ಗಾ ಗಂಗಾ’ ನವಕರ್ನಾಟಕ ಪ್ರಕಾಶನ
(ಭಾಗ 1)
ನಡು ಹಗಲ ಹೊತ್ತು. ಎಷ್ಟೋ ದಿನಗಳ ನಂತರ ಮತ್ತೆ ಇಂದು ಸೂರ್ಯ ದರ್ಶನ. ಐದೇ ಐದು ಗಂಟೆಗಳ ಈ ಹಗಲಿನಲ್ಲಿ ಬಿಸಿಲ ಬೇಗೆ ಇಲ್ಲ. ಮಂಜು, ಇಬ್ಬನಿ, ಮೋಡ, ಬಿರುಗಾಳಿಗಳ ಸುಳಿವೂ ಕಾಣದು. ನಾಲ್ಕೆಡೆಯೂ ಬೀರಿದ ಸೂರ್ಯನ ಸ್ವರ್ಣ ಕಿರಣ ನೋಟಕ್ಕೆ ಬಲು ಸೊಗಸು. ಸ್ಪರ್ಶ ಮಾತ್ರದಿಂದ ಬಗೆ ಅರಳುವುದು. ಮತ್ತೆ ನಾಲ್ಕು ದಿಕ್ಕಿನ ಆ ನೋಟಗಳೋ! ಮೋಡ ಮುಸುಕಿದ ನೀಲ ಬಣ್ಣದ ಬಾನಿನ ಕೆಳಗೆ ನೆಲವೆಲ್ಲ ಕರ್ಪೂರದಂತೆ ಬಿಳಿಯಾದ ಮಂಜಿನಿಂದ ಆವರಿಸಲ್ಪಟ್ಟಿದೆ. ದಿನವೆಲ್ಲ ಹಿಮ ಬೀಳದಿರುವುದರಿಂದ ಅಲ್ಲಲ್ಲಿ ಆಲಿಗಲ್ಲು ತುಂಬಿ ಹೋಗಿ ಹರಳು ಹರಳಾಗಿದ್ದು, ಕಾಲಿಗೊತ್ತುವಷ್ಟು ಬಿರುಸಾಗಿದೆ ನೆಲ. ಮಂಜು ಬಟ್ಟೆ ಮುಸುಕಿದ ಆ ಹಿಮಪ್ರದೇಶ ದಿಗಂತದ ತನಕ ಒಂದೇ ಸಮನಾಗಿ ಚಾಚಿಕೊಂಡಿಲ್ಲ. ಉತ್ತರದಿಂದ ದಕ್ಷಿಣಕ್ಕೆ ಅಂಕುಡೊಂಕಾದ ಬೆಳ್ಳಿಯ ಗೆರೆ ಎಳೆದಂತೆ ಕಾಣಿಸುವುದು.
ಹೀಗೆ ಚಾಚಿಕೊಂಡಿರುವ ಬಯಲು ನೆಲದ ಎರಡು ಬದಿಗಳಲ್ಲಿಯೂ ಎತ್ತರದ ಬೆಟ್ಟಗಳು. ಬೆಟ್ಟದ ತಪ್ಪಲುಗಳಲ್ಲಿ ಕಗ್ಗಾಡಿನ ಸಾಲು. ಆ ಕಾಡಿನ ಸಾಲನ್ನು ತುಸು ಸಮೀಪದಿಂದ ಕಾಣಬೇಕು. ಎರಡೇ ಎರಡು ಬಗೆಯ ಮರಗಳೇ ಹೆಚ್ಚಾಗಿ ದೃಷ್ಟಿಗೆ ಬೀಳುತ್ತವೆ. ಬಿಳಿಯ ತೊಗಟೆಗಳುಳ್ಳ, ಎಲೆಯುದುರಿದ ಭೂರ್ಜ ವೃಕ್ಷಗಳು ಒಂದು ಜಾತಿ; ಸಮಕೋನವಾಗಿ ಕೊಂಬೆಗಳನ್ನು ನೀಡಿದ ನಸು ಕಪ್ಪಾದ ಹಸರು ಬಣ್ಣದ ನೀಳ ಎಲೆಗಳುಳ್ಳ ದೇವದಾರು ಇನ್ನೊಂದು ಜಾತಿ. ಈ ಮರಗಳ ಹೆಚ್ಚಿನ ಭಾಗಗಳು ಮಂಜಿನಿಂದ ಮುಸುಕಿವೆ. ಕೊಂಬೆಗಳಲ್ಲಿಯೂ ಕಾಂಡಗಳಲ್ಲಿಯೂ ಅಲ್ಲಲ್ಲಿ ನಿಂತಿರುವ ಮಂಜು, ಕಪ್ಪು ಬಿಳುಪು ಬೆರಕೆಗೂಡಿ ನೋಟವನ್ನು ತನ್ನೆಡೆ ಸೆಳೆಯುತ್ತಿದೆ.
ಮತ್ತಲ್ಲಿ ಎದೆ ನಡುಗಿಸುವ ಅಡವಿಯ ನಾಲ್ಕೆಡೆಯೂ ನೀರವತೆ. ಇರಿಂಟಿಯ ಸದ್ದೂ ಇಲ್ಲ. ಹಕ್ಕಿಗಳ ಇನಿದನಿಯೂ ಕೇಳಿಸದು. ಮಸಣದ ವೌನ.
ಬೆಟ್ಟದ ಮೇಲುನಿಟ್ಟಿನ ದೇವದಾರು ಮರವನ್ನೇರಿ ನಾಲ್ಕೆಡೆಯೂ ನೋಟ ಬೀರೋಣ. ಮಂಜು ಮುಸುಕಿದ ನೆಲ, ದೇವದಾರು ಮರಗಳಲ್ಲದೆ ಮತ್ತೇನೂ ಕಾಣಿಸದು. ಬಾನೆತ್ತರಕ್ಕೆ ಏರಿ ಬೆಳೆದು ಮುಗಿಲುಮುಟ್ಟುವ ದೇವದಾರು ಮಾತ್ರ ಬೆಳೆಯುವುದೇ ಈ ನೆಲದಲ್ಲಿ? ಸಣ್ಣ ದೊಡ್ಡ ಗಿಡ ಗಂಟಿಗಳಿಗೂ ಹಸಿರು ಹುಲ್ಲುಗಳಿಗೂ ಎಡೆಯೇ ಇಲ್ಲವೇ? ಏನೂ ಹೇಳಬರುವುದಿಲ್ಲ. ಚಳಿಗಾಲದಲ್ಲಿ ಎರಡು ಪಾಲಷ್ಟೇ ಕಳೆದುಹೋಗಿದೆ ಈಗ. ಇನ್ನುಳಿದುದೆಂದರೆ ಒಂದೇ ಪಾಲು ಚಳಿ. ಮರಗಳನ್ನೆಲ್ಲ ಹೂತಿಟ್ಟ ಈ ಹಿಮರಾಶಿ ಎಷ್ಟೆಷ್ಟು ದಪ್ಪವಾಗಿದೆ ಎಂಬುದನ್ನು ಅಳೆದು ನೋಡೋಣ ಎಂದರೆ ನಮ್ಮಲ್ಲಿ ಯಾವ ಸಾಧನವೂ ಇಲ್ಲ ಅದಕ್ಕೆ. ಎಂಟೋ ಹತ್ತೋ ಮಾರು ದಪ್ಪವಿರಬಹುದು ಆ ಮಂಜಿನ ಹಲಗೆ ಅಥವಾ ಇನ್ನೂ ಹೆಚ್ಚು ದಪ್ಪವಿರಲೂಬಹುದು. ಆದರೆ ಈ ಕಾಲ ಮಂಜು ಬಿದ್ದುದು ಕಾಲಕಾಲಕ್ಕಿಂತಲೂ ಬಹು ಹೆಚ್ಚೆಂಬುದನ್ನು ನಾವು ತಿಳಿದಿರಬೇಕು.
ದೇವದಾರುಗಳ ಮೇಲೇರಿ ನಿಟ್ಟಿಸಿದರೆ ಕಾಣುವುದೇನು? ಅದೇ ಮಂಜು; ಅದೇ ಅಡವಿಯ ಬೆಡಗು; ಅದೇ ಎತ್ತರ ತಗ್ಗಾದ ಬೆಟ್ಟದ ನೆಲ. ಅದೋ ಅಲ್ಲಿ ಬೆಟ್ಟದ ಇನ್ನೊಂದೆಡೆಯಲ್ಲಿ ಹೊಗೆಯೇಳುವುದು ಕಾಣಿಸುತ್ತದೆಯಲ್ಲ? ಪ್ರಾಣಿಗಳ ಸದ್ದೇ ಇಲ್ಲದ ಈ ಅಡವಿಯೊಳಗೆ ನಡುವೆ ಹೊಗೆ ಕಾಣುವುದೆಂದರೆ ಅದೂ ಸೋಜಿಗವಲ್ಲವೇ? ಅಲ್ಲೇ ಹೋಗಿ ನೋಡಿದರೆ ತಿಳಿಯಬಹುದಲ್ಲ?
ಹೊಗೆಯೇಳುತ್ತಿದೆ ಬಲುದೂರ. ಆದರೆ ನಾವು ನೋಡುವಾಗ ಮಾತ್ರ ಮೋಡಗಳಿಲ್ಲದ ನೀಲಿ ಬಣ್ಣದ ಬಾನಲ್ಲಿ ಬಹು ಹತ್ತಿರವಾಗಿ ಕಾಣಿಸುವುದು. ಇನ್ನೂ ಮುಂದೆ ಸಾಗೋಣ. ಹೊಗೆಯ ಹತ್ತಿರ ಹತ್ತಿರಕ್ಕೆ ಬಂದೆವು. ಸುಡುವ ಮಾಂಸದ ವಾಸನೆ. ಉರಿಯುವ ಬೆಂಕಿಯಲ್ಲಿ ಯಾರೋ ಮಾಂಸ ಸುಡುತ್ತಿದ್ದಾರೆ. ಏನೋ ಸದ್ದು ಕೇಳಿ ಬರುತ್ತಿದೆಯಲ್ಲ? ಹೌದು ಸಣ್ಣ ಮಕ್ಕಳ ಗಲಭೆ. ಇನ್ನು ನಾವು ಬಾಯಿಮುಚ್ಚಿ , ಹೆಜ್ಜೆಯ ಸದ್ದು ಕೂಡ ಕೇಳಿಸದಂತೆ ಉಸಿರುಬಿಡುತ್ತ ನಡೆಯಬೇಕು. ಇಲ್ಲವಾದರೆ ಅಲ್ಲಿರುವವರಿಗೆ ನಮ್ಮ ಬರುವಿಕೆ ಗೊತ್ತಾಗಬಹುದು. ಆಗ ಅವರೋ, ಅವರ ನಾಯಿಗಳೋ ನಮ್ಮನ್ನು ಹೇಗೆ ಎದುರುಗೊಳ್ಳುವರೆಂಬುದು ತಿಳಿಯದು.
ಹೌದು, ಸಣ್ಣ ಸಣ್ಣ ಮಕ್ಕಳೆ ಎಲ್ಲ! ಇದ್ದವುಗಳಲ್ಲಿ ದೊಡ್ಡ ಮಗುವಿಗೆ ಎಂಟು ವರ್ಷಕ್ಕಿಂತ ಹೆಚ್ಚಾಗದು. ಎಲ್ಲವುಗಳಿಗಿಂತಲೂ ಚಿಕ್ಕ ಕೂಸು ಒಂದೂವರೆ ವರ್ಷದ್ದು. ಒಂದು ಮನೆಯಲ್ಲಿ ಆರು ಮಂದಿ ಮಕ್ಕಳು. ಅಲ್ಲ , ಮನೆಯಲ್ಲ ಇದು; ನಿಸರ್ಗದ ಗಿರಿಗುಹೆ. ಗುಹೆಯ ಎಡಬದಿ ಎಷ್ಟು ವಿಸ್ತಾರಕ್ಕೆ ಹರಡಿದೆಯೆಂದು ಕತ್ತಲಾಗಿರುವುದರಿಂದ ತಿಳಿಯುವುದೂ ಇಲ್ಲ ನಮಗೆ. ತಿಳಿಯಲು ಬಯಸುವುದೂ ಬೇಡ ನಾವು. ಮತ್ತೆ ಹರೆಯದ ಮಂದಿ ಯಾರೂ ಇಲ್ಲವೇ ಇಲ್ಲಿ? ಇರುವವಳೆಂದರೆ ಒಬ್ಬಾಕೆ; ಅವಳೂ ಮುದುಕಿ. ಆಕೆಯ ಬಣ್ಣದ ಕೂದಲು ಸಿಕ್ಕು ಗಟ್ಟಿ ಜಡೆ ಬೆಳೆದಿದೆ; ಹರಡಿಕೊಂಡು ಮೊಗವನ್ನೇ ಮುಸುಕಿಬಿಟ್ಟಿದೆ. ಅಗೋ ನೋಡಿ. ಮುಖದ ಮೇಲೆ ಹರಡಿದ ಜಡೆ ಕೂದಲುಗಳನ್ನು ಕೈಯಿಂದ ಸರಿಸಿದಳು ಮುದುಕಿ. ಇವಳ ಹುಬ್ಬೂ ಬೆಳ್ಳಗೆ. ಬಿಳಿಯ ಕೆನ್ನೆಗಳಲ್ಲೆಲ್ಲ ನೀಡಿದ ನೆರಿಗೆ, ಬಾಯಿಯಿಂದಲೇ ಹೊರಟಂತೆ ತೋರುತ್ತದೆ. ಗುಹೆಯೊಳಗೆಲ್ಲ ಹೊಗೆ, ಸೆಖೆ, ಬೆಂಕಿ ತುಂಬಿಹೋಗಿದೆ.
ಮತ್ತೆ ಆ ಮಕ್ಕಳು, ಅವರಜ್ಜಿ!
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
ಅಜ್ಜಿಯ ಮೈಮೇಲೆ ಚೂರು ಬಟ್ಟೆಯಾಗಲಿ, ಬೇರಾವ ಹೊದಿಕೆಯಾಗಲೀ ಇಲ್ಲವೇ ಇಲ್ಲ. ಆಕೆ ಕುಂದಿ ಒಣಗಿಹೋದ ಎರಡು ಕೈಗಳನ್ನು ಕಾಲಬುಡದಲ್ಲಿ ನೆಲದ ಮೇಲೆ ಚಾಚಿಕೊಂಡಿದ್ದಾಳೆ. ಕಣ್ಣುಗಳೆರಡೂ ಆಳಕ್ಕೆ ಇಳಿದುಹೋಗಿವೆ. ಆ ಆಳದಿಂದ ನೀಲಿ ಬಣ್ಣದ ಕಣ್ಣುಗುಡ್ಡೆಗಳು ಮಾತ್ರ ಕಾಂತಿಹೀನವಾಗಿ ಕಾಣುತ್ತಿವೆ. ಆಗಾಗ ಅವುಗಳಿಂದ ಮಿಂಚು ಮಿಂಚಿದಂತೆ ಹೊಳಪು ಹೊಳೆಯುತ್ತದೆ. ಅದರಿಂದ ಇನ್ನೂ ಆಕೆಯ ದೃಷ್ಟಿ ಮಂದವಾಗಿಲ್ಲವೆಂದು ತಿಳಿಯಬಹುದು. ಹಾಗೆಯೇ ಕಿವಿಗಳು ಸ್ಪಷ್ಟವಾಗಿ ಕೇಳಿಸುವುವು ಮುದುಕಿಗೆ. ಮಗು ಅಳತೊಡಗಿತು. ಆಕೆಯ ನೋಟ ಅತ್ತ ಸರಿಯಿತು. ಒಂದು ಒಂದೂವರೆ ಹರೆಯದ ಮಕ್ಕಳೆರಡು. ಒಂದು ಹೆಣ್ಣು; ಇನ್ನೊಂದು ಗಂಡು. ಎರಡೂ ನೋಡಲು ಒಂದೇ ತರ. ಮಕ್ಕಳ ಕೂದಲೂ ಹಾಗೆಯೇ ಹಳದಿ ಬೆರೆತ ಬಿಳುಪು. ಆದರೆ ಅಜ್ಜಿಯ ಕೂದಲುಗಳಿಗಿಂತ ಹೆಚ್ಚು ಹೊಳಪು. ಸಜೀವ ಮೈ ಪುಷ್ಟವಾಗಿದೆ. ಕಣ್ಣುಗಳು ದೊಡ್ಡ ದೊಡ್ಡವೆನಿಸಿದ ನೀಲ ಬಣ್ಣದ ಗುಡ್ಡೆಗಳು. ಚೀರುತ್ತ ಅಳುತ್ತ ನೆಲದ ಮೇಲೆ ಹೊರಳಾಡತೊಡಗಿತು ಗಂಡುಕೂಸು. ಹೆಣ್ಣು ಕೂಸು ಎಲುಬಿನ ತುಂಡೊಂದನ್ನು ಬಾಯಿಯಲ್ಲಿ ಇಟ್ಟು ಚೀಪುತ್ತ ದೊಡ್ಡ ಹುಡುಗನ ಬಳಿ ಕೂತಿದೆ. ಮುದುಕಿ ಮುಪ್ಪಿನ ನಡುಗು ಧ್ವನಿಯಲ್ಲಿ ಕರೆದಳು.
ಮತ್ತೆ ಆ ಮಕ್ಕಳು, ಅವರಜ್ಜಿ! ಅಜ್ಜಿಯ ಮೈಮೇಲೆ ಚೂರು ಬಟ್ಟೆಯಾಗಲಿ, ಬೇರಾವ ಹೊದಿಕೆಯಾಗಲೀ ಇಲ್ಲವೇ ಇಲ್ಲ. ಆಕೆ ಕುಂದಿ ಒಣಗಿಹೋದ ಎರಡು ಕೈಗಳನ್ನು ಕಾಲಬುಡದಲ್ಲಿ ನೆಲದ ಮೇಲೆ ಚಾಚಿಕೊಂಡಿದ್ದಾಳೆ. ಕಣ್ಣುಗಳೆರಡೂ ಆಳಕ್ಕೆ ಇಳಿದುಹೋಗಿವೆ. ಆ ಆಳದಿಂದ ನೀಲಿ ಬಣ್ಣದ ಕಣ್ಣುಗುಡ್ಡೆಗಳು ಮಾತ್ರ ಕಾಂತಿಹೀನವಾಗಿ ಕಾಣುತ್ತಿವೆ. ಆಗಾಗ ಅವುಗಳಿಂದ ಮಿಂಚು ಮಿಂಚಿದಂತೆ ಹೊಳಪು ಹೊಳೆಯುತ್ತದೆ. ಅದರಿಂದ ಇನ್ನೂ ಆಕೆಯ ದೃಷ್ಟಿ ಮಂದವಾಗಿಲ್ಲವೆಂದು ತಿಳಿಯಬಹುದು. ಹಾಗೆಯೇ ಕಿವಿಗಳು ಸ್ಪಷ್ಟವಾಗಿ ಕೇಳಿಸುವುವು ಮುದುಕಿಗೆ. ಮಗು ಅಳತೊಡಗಿತು. ಆಕೆಯ ನೋಟ ಅತ್ತ ಸರಿಯಿತು. ಒಂದು ಒಂದೂವರೆ ಹರೆಯದ ಮಕ್ಕಳೆರಡು. ಒಂದು ಹೆಣ್ಣು ; ಇನ್ನೊಂದು ಗಂಡು. ಎರಡೂ ನೋಡಲು ಒಂದೇ ತರ. ಮಕ್ಕಳ ಕೂದಲೂ ಹಾಗೆಯೇ ಹಳದಿ ಬೆರೆತ ಬಿಳುಪು. ಆದರೆ ಅಜ್ಜಿಯ ಕೂದಲುಗಳಿಗಿಂತ ಹೆಚ್ಚು ಹೊಳಪು. ಸಜೀವ ಮೈ ಪುಷ್ಟವಾಗಿದೆ. ಕಣ್ಣುಗಳು ದೊಡ್ಡ ದೊಡ್ಡವೆನಿಸಿದ ನೀಲ ಬಣ್ಣದ ಗುಡ್ಡೆಗಳು. ಚೀರುತ್ತ ಅಳುತ್ತ ನೆಲದ ಮೇಲೆ ಹೊರಳಾಡತೊಡಗಿತು ಗಂಡುಕೂಸು. ಹೆಣ್ಣು ಕೂಸು ಎಲುಬಿನ ತುಂಡೊಂದನ್ನು ಬಾಯಿಯಲ್ಲಿ ಇಟ್ಟು ಚೀಪುತ್ತ ದೊಡ್ಡ ಹುಡುಗನ ಬಳಿ ಕೂತಿದೆ. ಮುದುಕಿ ಮುಪ್ಪಿನ ನಡುಗು ಧ್ವನಿಯಲ್ಲಿ ಕರೆದಳು.
(ಭಾಗ 2 : Literature: ನೆರೆನಾಡ ನುಡಿಯೊಳಗಾಡಿ; ಆ ನರನಾರಿಯರ ಕೈಯಲ್ಲಿ ಕಟ್ಟಿಗೆ, ಕಲ್ಲು, ಮೂಳೆಗಳ ಕೈದುಗಳಿವೆ)
ಪ್ರತಿಕ್ರಿಯೆಗಾಗಿ : tv9kannadaditigal@gmail.com
ಈ ಕಥೆಯ ಎಲ್ಲಾ ಭಾಗಗಳನ್ನು ಮತ್ತು ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 9:01 am, Fri, 29 April 22