Literature: ನೆರೆನಾಡ ನುಡಿಯೊಳಗಾಡಿ; ಆ ನರನಾರಿಯರ ಕೈಯಲ್ಲಿ ಕಟ್ಟಿಗೆ, ಕಲ್ಲು, ಮೂಳೆಗಳ ಕೈದುಗಳಿವೆ
Rahul Sankrityayana‘s Ganga Volga : ಪುಷ್ಪ ದೇಹ. ನಾಲ್ವತ್ತರಿಂದ ಐವತ್ತರೊಳಗಿನ ಹರೆಯ. ಹೊರತೋರುವ ಆಕೆಯ ಬಲತೋಳನ್ನು ನೋಡಿಯೇ ಬಲಿಷ್ಠ ಸ್ತ್ರೀ ಎಂದರಿಯಬಹುದು. ಆಕೆಯ ಕೇಶ, ಮುಖ, ಅಂಗ ಪ್ರತ್ಯಂಗಗಳೂ ಗುಹೆಯಲ್ಲಿ ಕಂಡ ಆ ಯುವತಿಯರ ಅವಯವಗಳನ್ನೇ ಹೋಲುತ್ತಿವೆ.
ನೆರೆನಾಡ ನುಡಿಯೊಳಗಾಡಿ : NereNaada Nudiyolagaadi ; ‘‘ಅಗ್ನೀ, ಅಗ್ನೀ… ಇಲ್ಲಿ ಬಾ ಮಗು. ಇಲ್ಲಿ ಬಾ!’’ ಇನ್ನೂ ಎದ್ದು ಹೆಜ್ಜೆಯಿರಿಸತೊಡಗಿದ್ದಿಲ್ಲ ಆ ಮಗು. ಅಜ್ಜಿ ಕರೆದುದನ್ನು ಕೇಳಿ ಆ ಎಂಟು ವರ್ಷದ ಹುಡುಗ ಮಗುವನ್ನೆತ್ತಿ ಆಕೆಯ ಬಳಿ ಕೊಂಡೊಯ್ದ. ಹುಡುಗನ ಕೇಶವೂ ಮಗುವಿನ ತಲೆ ಕೂದಲಿನದಂತೆಯೇ ಹಳದಿ. ಬತ್ತಲೆ ಮೈಯೂ ಹಾಗೆಯೇ ಗೌರವರ್ಣ. ಅಲ್ಲಲ್ಲಿ ಮೈಮೇಲೆ ಕೆಸರು ಒಣಗಿ ಹಿಡಿದು ಕಪ್ಪಾಗಿ ತೋರುವುದು. ಹುಡುಗ ಮಗುವನ್ನು ಅಜ್ಜಿಯ ಬಳಿಯಲ್ಲಿ ಬಿಡುತ್ತಾ ಹೀಗೆಂದ. ‘‘ಅಜ್ಜಿ , ಅಗ್ನಿಯ ಕೈಯಲ್ಲಿದ್ದ ಎಲುಬನ್ನು ರೋಚನಾ ಕಸಿದುಕೊಂಡಳು. ಅದಕ್ಕೆ ಅಗ್ನಿ ಅಳುತ್ತಿದ್ದಾನೆ.’’ ಮತ್ತೆ ಆ ಹುಡುಗ ಅಲ್ಲಿಂದ ಹೊರಟು ಅತ್ತ ಸರಿದ. ಮುದುಕಿ ತನ್ನ ಕೊರಡು ಕೈಗಳಿಂದ ಮಗುವನ್ನೆತ್ತಿಕೊಂಡಳು. ಈಗಲೂ ಅಳು ನಿಲ್ಲಿಸಿರಲಿಲ್ಲ ಆ ಕೂಸು. ಕಣ್ಣೀರಿನ ಧಾರೆ ಇಳಿದು ಮಗುವಿನ ಕೆಸರು ತುಂಬಿದ ಕೆನ್ನೆಯಲ್ಲಿ ಕೆಂಪು ಗೆರೆಯೆಳೆದಂತಾಗಿದೆ. ಮಗುವನ್ನು ಮುದ್ದಿಸುತ್ತಾ ಆ ಮುದುಕಿ ‘‘ನೀನಳಬೇಡ ಅಗ್ನಿ! ರೋಚನೆಗೆ ಹೊಡೆಯುತ್ತೇನೆ ನಾನು’’ ಎನ್ನುತ್ತಾ ರಕ್ತ ಮಾಂಸ ಆರಿ ಹೋಗಿ ಕೊರಡು ಕಟ್ಟಿದ ಕೈಯಿಂದ ನೆಲಕ್ಕೆ ಹೊಡೆದಳು. ಅಗ್ನಿಯ ‘ಊ ಊ’ ಇನ್ನೂ ನಿಲ್ಲಲಿಲ್ಲ. ಕಂಬನಿಯೂ ಹಾಗೆಯೇ ಹರಿಯುತ್ತಿತ್ತು.
ಕಥೆ : ನಿಶಾ (ಕ್ರಿ. ಪೂ. 6000) | ಹಿಂದಿ ಮೂಲ : ರಾಹುಲ ಸಾಂಕೃತ್ಯಾಯನ | ಕನ್ನಡಕ್ಕೆ : ಬಿ. ಎಂ. ಶರ್ಮಾ | ಕೃತಿ ಸೌಜನ್ಯ : ‘ವೋಲ್ಗಾ ಗಂಗಾ’ ನವಕರ್ನಾಟಕ ಪ್ರಕಾಶನ
(ಭಾಗ 2)
ಮುದುಕಿ ತನ್ನ ಕೊಳಕು ಅಂಗೈಯಿಂದ ಮಗುವಿನ ಕಣ್ಣೀರನ್ನೊರೆಸುತ್ತ ಕೆನ್ನೆಗಳ ಕೆಂಪು ಗೆರೆಗಳನ್ನು ಕಪ್ಪಗಾಗಿಸಿದಳು. ಮತ್ತೂ ಅಳುತ್ತಲೇ ಇದ್ದ ಅಗ್ನಿಯನ್ನು ಸುಮ್ಮನಾಗಿಸಲೆಂದು ಆಕೆ ಒಣ ತೊಗಲಿನೊಳಗಿಂದ ಮೇಲೆದ್ದು ಕಾಣುವ ಎದೆಯ ಎಲುಬು ಗೂಡಿನ ಮೇಲೆ ಉದ್ದ ಕುಂಬಳ ಕಾಯಿಯಂತೆ ಅತ್ತಿತ್ತ ಹೊರಳಾಡುವ ಮೊಲೆಯನ್ನು ಅವನ ಬಾಯಿಗಿಟ್ಟಳು. ಹಾಲಿಲ್ಲದ ಮೊಲೆಯನ್ನು ಚೀಪತೊಡಗಿದ ಅಗ್ನಿ ಅಳು ನಿಲ್ಲಿಸಿದ. ಅಷ್ಟರಲ್ಲಿ ಹೊರಗೆ ಯಾರೋ ಮಾತಾಡುವುದು ಕೇಳಿಸಿತು. ಅಗ್ನಿ ಹೊರನೋಡಿದ. ಆಗಲೇ ಯಾರದೋ ಇನಿದನಿ :
‘‘ಅಗ್ನೀ!’’ ಮತ್ತೆ ಅಗ್ನಿಯ ಅಳು ಆರಂಭವಾಯಿತು. ಸ್ತ್ರೀಯರಿಬ್ಬರು ಗುಹೆಯೊಳಗೆ ಬಂದು ತಲೆಯ ಮೇಲಿನ ಸೌದೆಯ ಹೊರೆಯನ್ನೆಲ್ಲ ನೆಲದ ಮೇಲೊಗೆದರು. ಒಬ್ಬಳು ಅಗ್ನಿಯ ಬಳಿಗೂ, ಇನ್ನೊಬ್ಬಳು ರೋಚನೆಯ ಬಳಿಗೂ ಸರಿದರು. ಅಳುತ್ತಲೇ ಅಗ್ನಿ ‘ಅಮ್ಮಾ, ಅಮ್ಮಾ!’ ಎಂದು ಕರೆದ. ಎದೆಯ ಮೇಲೆ ಕಟ್ಟಿಕೊಂಡಿದ್ದ ಬಿಳಿ ರೋಮ ತುಂಬಿದ ತೊಗಲನ್ನು ಬಿಡಿಸಿ ತೆಗೆದು ಕೆಳಗಿಟ್ಟಳು ಆ ಯುವತಿ. ಚಳಿಗಾಲದಲ್ಲಿ ತಿನಿಸು ದೊರಕುವುದು ತುಸು ಕಡಿಮೆಯಾದುದರಿಂದ ಆಕೆಯ ಮೈಯಲ್ಲಿ ಮಾಂಸ ಕಡಿಮೆಯಾಗಿದ್ದರೂ ಅಸಾಧಾರಣ ಸೌಂದರ್ಯವಿತ್ತು. ಆಕೆಯ ಕೆಸರು ತುಂಬಿದ ಸ್ತನಗಳ ಕೆಂಪು ಬಿಳಿ ಛಾಯೆ, ಹಣೆಯ ಮೇಲೆಲ್ಲ ಹರಡಿದ ನಸುಬಿಳಿಗೂದಲು, ಅಲ್ಪ ಮಾಂಸದ ಪೃಥುಲ ವಕ್ಷಸ್ಥಳದಲ್ಲಿನ ಶ್ಯಾಮಲ ಮುಖದ ವೃತ್ತ ಕುಚಗಳು, ಬಡ ನಡು, ಮಧ್ಯಮ ಪರಿಮಾಣದ ಪುಷ್ಟ ನಿತಂಬ, ವೇಗದಿಂದೋಡುವುದರಲ್ಲಿ ತುಂಬಾ ನುರಿತ ಹಿಮ್ಮಡಿಗಳು – ಎಲ್ಲವೂ ಅಚ್ಚುಕಟ್ಟು.
ಹರೆಯ ಹದಿನೆಂಟರ ಆ ಜವ್ವನೆ ತನ್ನೆರಡು ಕೈಗಳಿಂದಲೂ ಅಗ್ನಿಯನ್ನೆತ್ತಿ ಮೋರೆಯ ಮೇಲೆ, ಕಣ್ಣುಗಳಿಗೆ ಎಲ್ಲಾ ಮುತ್ತು ಕೊಟ್ಟಳು. ಆಗ ಅಳುವುದನ್ನೆ ಮರೆತ ಅಗ್ನಿ. ಅವನ ಕೆಂಬಣ್ಣದ ತುಟಿಗಳೆಡೆಯಿಂದ ಬೆಳ್ಳನೆಯ ಹಲ್ಲುಗಳು ಹೊರ ತೋರಿ ಹೊಳೆಯುತ್ತಿವೆ. ಕಣ್ಣು ಅರೆತೆರೆದಿವೆ. ಕೆನ್ನೆಗಳಲ್ಲಿ ಅಲ್ಲಲ್ಲಿ ಕುಳಿ ಬೀಳುತ್ತಿದೆ. ನೆಲದ ಮೇಲೊಗೆದ ಎತ್ತಿನ ತೊಗಲ ಮೇಲೆ ಕುಳಿತಳು ಆ ತರುಣಿ. ಮತ್ತೆ ತನ್ನ ಕೋಮಲ ಕುಚಗಳನ್ನು ಅಗ್ನಿಯ ಬಾಯಿಗಿತ್ತಳು. ಅಗ್ನಿ ತನ್ನೆರಡು ಪುಟ್ಟ ಕೈಗಳಿಂದಲೂ ತಾಯಿಯ ಮೊಲೆಯನ್ನು ಹಿಡಿದುಕೊಂಡು ಹಾಲು ಹೀರತೊಡಗಿದ. ಆಗಲೇ ಇನ್ನೊಬ್ಬಳು ಜವ್ವನೆಯೂ ರೋಚನೆಯನ್ನೆತ್ತಿ ಬಳಿಯಲ್ಲಿಯೇ ಕುಳಿತಿದ್ದಳು. ಮುಖಗಳನ್ನು ನೋಡಿಯೇ ಅವರು ಅಕ್ಕ ತಂಗಿಯರೆಂದು ತಿಳಿಯಬಹುದು.
2 ಗುಹೆಯಲ್ಲಿ ಅವರೆಲ್ಲ ಹಾಗೆಯೇ ಇರಲಿ, ಹೊರಗೇನಾಗಿದೆಯೋ ನೋಡೋಣ ನಾವು. ಮಂಜಿನ ಮೇಲೆ ಹೆಜ್ಜೆಯಿರಿಸುತ್ತ ತೊಗಲು ಹೊದ್ದ ಹಲವು ವ್ಯಕ್ತಿಗಳು ಒಂದೇ ಕಡೆ ನಡೆಯುತ್ತಿವೆ. ಆ ಹೆಜ್ಜೆಗಳನ್ನನುಸರಿಸಿ ನಾವೂ ಮುಂದೊತ್ತೋಣ. ಈಗ ಆ ಹೆಜ್ಜೆಗಳೆಲ್ಲ ಸುತ್ತಿ ಬಂದು ಬೆಟ್ಟದ ಬದಿಯ ಅಡವಿಗೆ ಮುಟ್ಟಿದುವು. ನಾವು ವೇಗದಿಂದಲೇ ನಡೆಯುವೆವು. ಆದರೂ ಅವರ ಹೆಜ್ಜೆ ಇನ್ನೂ ಮುಗಿಯಲಾರವು. ಒಮ್ಮೆ ನಾವೀಗ ಮಂಜಿನ ಬಯಲಲ್ಲಿ ನಡೆಯುವೆವು. ಇನ್ನೊಮ್ಮೆ ಕಾಡಿನೊಳಗಿನ ಹೊನಲನ್ನು ಹಾಯ್ದು ಇನ್ನೊಂದು ಹಿಮಕ್ಷೇತ್ರಕ್ಕೆ ಕಾಲಿರಿಸುವೆವು. ಮತ್ತೆ ಬೇರೊಂದಡವಿ. ಹೀಗೆ ನಡೆ ನಡೆದು ಕಡೆಗೆ ಮರಮಟ್ಟುಗಳಿಲ್ಲದ ಬೆಟ್ಟದೆಡೆಯ ಬೇರೊಂದು ಬದಿಯ ತಗ್ಗಿನಲ್ಲಿ ಹೋಗಿ ನಿಲ್ಲುವುದು ನಮ್ಮ ನೋಟ. ಅಲ್ಲಿಯ ಶ್ವೇತ ಹಿಮನೋಟ ನೀಲಾಕಾಶದೊಡನೆ ಸಂಧಿಸಿದಂತೆ ಕಾಣುವುದು ನಮಗೆ. ಅಲ್ಲೇ ನಾವು ಅನುಸರಿಸಿ ಬಂದ ನಗ್ನ ಮೂರ್ತಿಗಳು ಬೆಟ್ಟದ ಬುಡದಲ್ಲಿ ಲೀನವಾಗುತ್ತವೆ. ಅವರ ಹಿಂದೆ ನೀಲ ಬಣ್ಣದ ಬಾನಿಲ್ಲದಿರುತ್ತಿದ್ದರೆ ನಾವವರನ್ನು ದಿಟ್ಟಿಸಲಾಗುತ್ತಿದ್ದಿಲ್ಲ. ಅವರ ಮೈಮೇಲೆಯೂ ಮಂಜಿನಂತೆ ಶ್ವೇತ ಚರ್ಮದ ಹೊದಿಕೆಗಳು. ಕೈಯ ಕೈದುಗಳೂ ಬೆಳ್ಳಂಬೆಳ್ಳಗಾಗಿ ಹೊಳೆಯುತ್ತಿವೆ. ಹೀಗೆ ಎಲ್ಲಾ ಶ್ವೇತವರ್ಣ. ಆಗಸವೊಂದು ಮಾತ್ರ ನೀಲವರ್ಣ, ಮತ್ತೆ ಆ ಮಹಾ ಹಿಮ ಕ್ಷೇತ್ರದಲ್ಲಿ ಚಲಿಸುತ್ತಿರುವ ಶ್ವೇತಮಾನವ ಮೂರ್ತಿಗಳನ್ನು ಗುರುತಿಸುವುದಾದರೂ ಹೇಗೆ ?
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
ಇನ್ನೂ ಮುಂದೊತ್ತಿ ದಿಟ್ಟಿಸೋಣ. ಎಲ್ಲರಿಂದಲೂ ಮುಂದೆ ಪುಷ್ಪ ದೇಹದ ಹೆಣ್ಣೊಂದು. ನಾಲ್ವತ್ತರಿಂದ ಐವತ್ತರೊಳಗಿನ ಹರೆಯ. ಹೊರತೋರುವ ಆಕೆಯ ಬಲತೋಳನ್ನು ನೋಡಿಯೇ ಎಷ್ಟೊಂದು ಬಲಿಷ್ಠ ಸ್ತ್ರೀ ಆಕೆಯಿರಬಹುದು ಎಂದರಿಯಬಹುದು. ಆಕೆಯ ಕೇಶ, ಮುಖ ಮೊದಲಾದ ಅಂಗ ಪ್ರತ್ಯಂಗಗಳೂ ಗುಹೆಯಲ್ಲಿ ನಾವು ಕಂಡ ಆ ಯುವತಿಯರ ಅವಯವಗಳನ್ನೇ ಹೋಲುತ್ತಿವೆ. ಆದರೆ ಇವಳ ಆಕಾರ ಮಾತ್ರ ಅವರಿಗಿಂತ ಎಷ್ಟೋ ಪಾಲು ಹಿರಿದು. ಅವಳ ಬಲಗೈಯಲ್ಲಿ ಮೂರು ಮೊಳದ ಚೂಪಾದ ತುದಿಯುಳ್ಳ ಭೂರ್ಜ ವೃಕ್ಷದ ಬಡಿಗೆಯಿದೆ. ಎಡದ ಕೈಯಲ್ಲಿ ಮರದ ಹಿಡಿಗೆ ತೊಗಲಿನ ಹಗ್ಗದಿಂದ ಬಿಗಿದು ಮಸೆದು ಥಳಥಳಿಸುವ ಪಾಷಾಣ ಪರಶು. ಆ ಹೆಣ್ಣಿನ ಹಿಂದೆ ನಾಲ್ಕು ಮಂದಿ ಗಂಡುಗಳೂ ಯುವತಿಯರಿಬ್ಬರೂ ನಡೆಯುತ್ತಿರುವರು. ಹೆಂಗಸಿಗಿಂತ ತುಸು ಹೆಚ್ಚಾಗಬಹುದು ಗಂಡಸಿನ ಹರೆಯ. ಉಳಿದವರೆಲ್ಲ ಹದಿನಾಲ್ಕರಿಂದ ಇಪ್ಪತ್ತಾರರ ಒಳಗಿನವರು. ಗಂಡಸಿನ ಕೇಶಪಾಶಗಳೂ ಹಾಗೆಯೇ, ಹೆಂಗಸರ ಕೂದಲುಗಳಂತೆ ದೀರ್ಘವಾಗಿ ಪಾಂಡು ಶ್ವೇತವಾಗಿದೆ. ಆತನ ಮೋರೆ ಅದೇ ಬಣ್ಣದ ಗಡ್ಡ ಮೀಸೆಗಳಿಂದ ಮುಚ್ಚಿಹೋಗಿದೆ. ದೇಹವೂ ಹೆಣ್ಣಿನ ದೇಹದಂತೆಯೇ ಬಲಿಷ್ಠ. ಎರಡು ಕೈಗಳಲ್ಲಿಯೂ ಕೈದುಗಳಿವೆ. ಉಳಿದ ಮೂರು ಮಂದಿ ಗಂಡುಗಳಲ್ಲಿ ಇಬ್ಬರು ಮೊದಲಿನವನಂತೆಯೇ ಗಡ್ಡ ಮೀಸೆ ಮುಸುಕಿದ ಮೊಗವುಳ್ಳವರು. ಆದರೆ ವಯಸ್ಸು ಮಾತ್ರ ಕಮ್ಮಿ. ತರುಣಿಯರಲ್ಲಿ ಒಬ್ಬಳಿಗೆ ಇಪ್ಪತ್ತೆರಡರ ಹರೆಯವಾಗಬಹುದು. ಇನ್ನೊಬ್ಬಳಿಗೆ ಹದಿನಾರು ಮಿಕ್ಕದು. ಗುಹೆಯಲ್ಲಿದ್ದವರ ಮುಖಗಳನ್ನು ನೋಡಿದವರು ನಾವು ಎಲ್ಲರನ್ನೂ ಹೋಲಿಸಿ ನೋಡಿದರೆ ಇವರೆಲ್ಲ ಆ ಮುದುಕಿಯ ಸಂತಾನವೆಂದು ತಿಳಿಯದಿರಲಾರದು.
ಆ ನರನಾರಿಯರ ಕೈಯಲ್ಲಿ ಕಟ್ಟಿಗೆ, ಕಲ್ಲು, ಮೂಳೆಗಳ ಕೈದುಗಳಿವೆ. ಗಂಭೀರ ಹಾವಭಾವ. ಅವರು ಏನೋ ಒಂದು ಉದ್ದೇಶದಿಂದ ಹೋಗುತ್ತಿರುವರೆಂಬುದು ಸ್ಪಷ್ಟ.
ಬೆಟ್ಟದ ನಿಟ್ಟಿನಲ್ಲಿ ಕೆಳಗಿಳಿದು ಗುಂಪಿನ ಮುಂದಾಳು ಆ ಹೆಣ್ಣು – ತಾಯಿ ಎನ್ನಬಹುದು – ಬಲತುದಿಗೆ ತಿರುಗಿದಳು. ಉಳಿದವರೆಲ್ಲ ಆಕೆಯನ್ನನುಸರಿಸಿ ಮಾತನಾಡದೆ ನಡೆಯುವರು. ಮಂಜಿನ ಮೇಲೆ ಹೆಜ್ಜೆಯಿರಿಸುತ್ತಿರುವಾಗ ಅವರು ಪಾದಗಳಿಗೆ ತೊಗಲು ಬಿಗಿದುದರಿಂದ ತುಸುವಾದರೂ ಸದ್ದಾಗದು. ಈಗ ನೋಡಿ, ಅಲ್ಲೊಂದು ಎತ್ತರಕ್ಕೆ ಮುಂದೆ ಚಾಚಿದ ಕಲ್ಲುಬಂಡೆ ಕಾಣಿಸುವುದಲ್ಲ? ಅದರ ಸುತ್ತುಮುತ್ತೆಲ್ಲ ಸಣ್ಣ ದೊಡ್ಡ ಬಂಡೆಗಳೇ. ಆ ಬೇಟೆಗಾರರ ಬಳಗ ಮಂದಗತಿಯಿಂದ ನಡೆಯತೊಡಗಿತು. ಎಲ್ಲರೂ ಜಾಗೃತರಾದರು, ಹೆಜ್ಜೆಯ ಮೇಲೆ ಹೆಜ್ಜೆಯಿರಿಸುತ್ತ ಬಂಡೆಯ ಮೇಲೆ ಕೈಯಿಟ್ಟು ಬಲುಮೆಲ್ಲನೆ ಮುಂದುವರಿಯುತ್ತಿರುವರು. ಮುಂದೆ ಚಾಚಿ ಬಂದ ಬಂಡೆಯ ಕೆಳಗೊಂದು ಗುಹೆ. ತಾಯಿ ಎಲ್ಲರಿಗೂ ಮುಂದಿದ್ದು ಗುಹೆಯ ದ್ವಾರಕ್ಕೆ ತಲುಪಿದಳು. ಹೊರಗೆ ಹರಡಿದ ಮಂಜಿನ ಮೇಲೊಮ್ಮೆ ನೆಟ್ಟ ನೋಟ ಬೀರಿದಳು. ಹೆಜ್ಜೆಯ ಗುರುತುಗಳೇ ಕಾಣಿಸಲಾರವು. ಮತ್ತೆ ಆಕೆಯೊಬ್ಬಳೇ ಉಳಿದವರನ್ನೆಲ್ಲ ಹೊರಗೆ ನಿಲ್ಲಿಸಿ ಗುಹೆಯೊಳಗೆ ಕಾಲಿರಿಸಿದಳು. ನಾಲ್ಕಾರು ಮಾರು ಒಳಗೆ ನಡೆದರೆ ಅಲ್ಲಿ ಎಡಬದಿಗೆ ತುಸು ವಿಸ್ತಾರವಾಗಿದೆ ಆ ಗುಹೆ. ಬೆಳಕು ಕಡಿಮೆ ಅಲ್ಲಿ. ಅಲ್ಲೇ ನಿಂತು ಸುತ್ತು ಮುತ್ತು ದಿಟ್ಟಿಸುತ್ತ ಮತ್ತೆ ಎಡಬದಿಯಲ್ಲೆ ಹಲವು ಹೆಜ್ಜೆ ಮುಂದಿಟ್ಟಳು. ಅಲ್ಲೇನು ನೋಡುವುದು! ಮೂರು ಬಿಳಿ ಕರಡಿಗಳು – ತಂದೆ, ತಾಯಿ, ಮರಿ – ಕೆಳಮೋರೆ ಮಾಡಿ ಮಲಗಿ ನಿದ್ರಿಸಿವೆ. ಸತ್ತಿವೆಯೋ ಏನೋ ! ಬದುಕಿರುವ ಚಿಹ್ನೆಗಳೇನೂ ಕಾಣಿಸುವುದಿಲ್ಲ. ಅಷ್ಟೊಂದು ನಿಶ್ಚಲವಾಗಿವೆ ಅವು.
ಕರಡಿಗಳನ್ನು ನೋಡಿದೊಡನೆಯೇ ತಾಯಿ ಹಿಂತಿರುಗಿದಳು. ಆಕೆಯ ಅರಳಿದ ಮೋರೆ ನೋಡಿಯೇ ಪರಿವಾರಕ್ಕೆ ತಿಳಿಯಿತು. ಮತ್ತೆ ತಾಯಿ ಹೆಬ್ಬೆಟ್ಟಿನಿಂದ ಕಿರುಬೆರಳನ್ನೊತ್ತಿ ಮೂರು ಬೆರಳುಗಳನ್ನು ತೋರಿಸಿ ಹಿಂದಿರುಗಿ ಒಳಗೆ ನಡೆದಳು. ಆಕೆಯ ಹಿಂದೆಯೇ ಗಂಡುಗಳಿಬ್ಬರು ತಮ್ಮ ಕೈದುಗಳನ್ನು ಸರಿಪಡಿಸಿಕೊಂಡು ಹಿಂಬಾಲಿಸಿದರು. ಉಳಿದವರು ಗಟ್ಟಿಯಾಗಿ ಉಸಿರು ಕೂಡ ಬಿಡದೆ ಬಾಗಿಲಲ್ಲೆ ಕಾದು ನಿಂತರು. ಒಳಗೆ ಹೋದ ತಾಯಿ ಗಂಡು ಕರಡಿಯ ಬಳಿ ನಿಂತಳು. ಗಂಡಸರಿಬ್ಬರಲ್ಲಿ ಒಬ್ಬ ಹೆಣ್ಣು ಕರಡಿಯ ಬಳಿಯೂ, ಇನ್ನೊಬ್ಬನು ಮರಿಯ ಬಳಿಯೂ ನಿಂತರು. ಮತ್ತೆ ಮೂವರೂ ಒಮ್ಮೆಯೇ ಕೈಯೆತ್ತಿ ಬರ್ಚಿಗಳಿಂದ ಕರಡಿಗಳನ್ನು ಬಲವಾಗಿ ಇರಿದುಬಿಟ್ಟರು. ಇರಿದ ಬರ್ಚಿಗಳು ಕರಡಿಗಳ ಹೊಟ್ಟೆಗೆ ಹೊಕ್ಕು ನೆಲಕ್ಕೆ ಮುಟ್ಟಿದವು. ಇನ್ನು ಅಲುಗಾಡಲಾರವು ಅವು. ಚಳಿಗಾಲದ ನಿದ್ದೆಯಿಂದೇಳಲು ಇನ್ನೂ ಒಂದು ತಿಂಗಳಿತ್ತು ಆ ಕರಡಿಗಳಿಗೆ. ಇದೇನು ಗೊತ್ತು ಆ ಮಾನವ ಬಳಗಕ್ಕೆ? ತಮ್ಮ ಕೆಲಸವನ್ನಷ್ಟು ಬಲು ಜಾಗರೂಕತೆ ಯಿಂದ ಮುಗಿಸಿದ್ದಾರೆ ಅವರು. ಮತ್ತೆ ಮತ್ತೆ ಮೂರು ನಾಲ್ಕು ಬಾರಿ ಈಟಿಗಳನ್ನೆಳೆದು ಇರಿದರು. ಅತ್ತಿತ್ತ ಮಗುಚಿ ಹಾಕಿದರು. ಜೀವವಿಲ್ಲ ಖಂಡಿತ; ಮುಂಗಾಲು, ಮುಸುಡು ಹಿಡಿದು ಎಳೆದುಕೊಂಡು ಗುಹೆಯ ಬಾಗಿಲು ಬಳಿ ತಂದರು. ಈಗ ಎಲ್ಲರಿಗೂ ಮುಚ್ಚಿದ ಬಾಯಿ ತೆರೆಯಿತು. ನಗುತ್ತ ಒಬ್ಬರಿಗೊಬ್ಬರು ಮಾತನಾಡತೊಡಗಿದರು.
*
(ಭಾಗ 3 : Literature: ನೆರೆನಾಡ ನುಡಿಯೊಳಗಾಡಿ; ಹೊಟ್ಟೆ ತುಂಬಿದಾಗ ಅಂದಿನ ಬೇಟೆಯಲ್ಲಿ ತಾಯಿ ತೋರಿಸಿದ ಜಾಣ್ಮೆ ಹೊಗಳಿದರು)
ಪ್ರತಿಕ್ರಿಯೆಗಾಗಿ : tv9kannadaditigal@gmail.com
ಈ ಕಥೆಯ ಎಲ್ಲಾ ಭಾಗಗಳನ್ನೂ ಮತ್ತು ಈ ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 10:17 am, Fri, 29 April 22