Literature: ನೆರೆನಾಡ ನುಡಿಯೊಳಗಾಡಿ; ವೋಲ್ಗಾ ನದಿಯ ಮಂಜಿನ ನೀರು ಮೈಯಲ್ಲಿ ಮುಳ್ಳಿನಂತೆ ಚುಚ್ಚುತ್ತಿದೆ

Literature: ನೆರೆನಾಡ ನುಡಿಯೊಳಗಾಡಿ; ವೋಲ್ಗಾ ನದಿಯ ಮಂಜಿನ ನೀರು ಮೈಯಲ್ಲಿ ಮುಳ್ಳಿನಂತೆ ಚುಚ್ಚುತ್ತಿದೆ
ಲೇಖಕ ರಾಹುಲ ಸಾಂಕೃತ್ಯಾಯನ ಮತ್ತು ಅನುವಾದಕ ಬಿ. ಎಂ. ಶರ್ಮಾ

Rahul Sankrityayana‘s Ganga Volga : ಪರಿವಾರದ ಒಡತಿಯೆನಿಸಿದ ಮೇಲೂ ನಿಶೆಯ ಪ್ರೇಮಾಕಾಂಕ್ಷೆಯನ್ನು ತಿರಸ್ಕರಿಸುವ ಎದೆಗಾರಿಕೆ ಆಕೆಯ ಯಾವ ಸೋದರನಲ್ಲಿಯೂ, ಮಗನಲ್ಲಿಯೂ ಇರಲಿಲ್ಲ. ಅದರಿಂದಲೇ ಇಂದು ಜೀವಿಸುತ್ತಿರುವ ಅವಳ ಏಳು ಮಂದಿ ಮಕ್ಕಳಲ್ಲಿ ಯಾರು ಯಾರಿಗೆ ಹುಟ್ಟಿದರೆಂದು ಹೇಳುವುದು ಅಸಾಧ್ಯ.

ಶ್ರೀದೇವಿ ಕಳಸದ | Shridevi Kalasad

|

Apr 29, 2022 | 12:38 PM

ನೆರೆನಾಡ ನುಡಿಯೊಳಗಾಡಿ : NereNaada Nudiyolagaadi ; ಮತ್ತೆ ಅಲ್ಲಿಂದೆದ್ದು ನಡೆದು ಗುಹೆಯ ಒಂದು ಮೂಲೆಯಲ್ಲಿದ್ದ ತೊಗಲಿನ ಬುಡ್ಡಿಯೊಂದನ್ನು ತಾಯಿ ತಂದಳು. ‘‘ಇಷ್ಟೇ ಇರುವುದು ಮಧು ಸುರೆ; ಈ ದಿನ ಕುಡಿದು ಸಂತೋಷಪಡಿ’’ ಎಂದಳು. ಕಿರಿಯರಿಗೆ ಸ್ವಲ್ಪ ಸ್ವಲ್ಪ ಕುಡಿಯಲು ಸಿಕ್ಕಿತು; ಹಿರಿಯರಿಗೆ ಹೆಚ್ಚು ಹೆಚ್ಚು. ಎಲ್ಲರಿಗೂ ಅಮಲೇರಿತು. ಕಣ್ಣು ಕೆಂಪಾಯಿತು; ಅಟ್ಟಹಾಸದ ಕಟ್ಟು ಕಡಿಯಿತು. ಹಿರಿಯ ಗಂಡಸು ಕೋಲಾಟಕ್ಕೆ ತೊಡಗಿದ. ಉಳಿದ ಮಂದಿಯೆಲ್ಲ ಕುಣಿಯತೊಡಗಿತು. ನಿಜವಾಗಿಯೂ ಇಂದವರಿಗೆ ಬಲು ಆನಂದದ ಇರುಳು. ತಾಯಿಯ ಆಳ್ತನ; ಅನ್ಯಾಯ ಅಸಮಾನತೆಗಳ ಆಳ್ವಿಕೆ ಅದಲ್ಲ. ಮುದಿಯಜ್ಜಿ ಹಾಗೂ ಆ ಹಿರಿಯ ಗಂಡಸನ್ನು ಬಿಟ್ಟು ಉಳಿದವರೆಲ್ಲ ತಾಯಿಯ ಸಂತಾನ. ತಾಯಿಯೂ ಹಿರಿಯ ಗಂಡಸೂ ಮುದುಕಿಯ ಮಕ್ಕಳು. ಆದುದರಿಂದ ಅಲ್ಲಿ ತನ್ನದು ಪರರದೆಂಬ ಮಾತಿಗೇ ಎಡೆಯಿಲ್ಲ , ತನ್ನದು ಪರರದೆಂಬ ಭೇದ ಬುದ್ಧಿಯ ಯುಗ ಬರಬೇಕಾದರೆ ಇನ್ನೂ ಎಷ್ಟೋ ಶತಮಾನ ಕಳೆಯಬೇಕು. ಬಳಗದ ಎಲ್ಲಾ ಪುರುಷರ ಮೇಲೂ ಸಮಾನವಾದ ಹಾಗೂ ಪ್ರಥಮ ಅಧಿಕಾರ ತಾಯಿಯದು.

ಕಥೆ : ನಿಶಾ (ಕ್ರಿ. ಪೂ. 6000) | ಹಿಂದಿ ಮೂಲ : ರಾಹುಲ ಸಾಂಕೃತ್ಯಾಯನ | ಕನ್ನಡಕ್ಕೆ : ಬಿ. ಎಂ. ಶರ್ಮಾ | ಕೃತಿ ಸೌಜನ್ಯ :  ‘ವೋಲ್ಗಾ ಗಂಗಾ’ ನವಕರ್ನಾಟಕ ಪ್ರಕಾಶನ

(ಭಾಗ 4)

ಮಕ್ಕಳಿಬ್ಬರು ಮಡಿದರೂ ಆ ತಾಯಿಯ ಕರುಳು ತುಸುವಾದರೂ ಮರುಗಲಿಲ್ಲವಲ್ಲ ಎನ್ನಬಹುದು ನೀವು! ಆದರೆ ಅಂದು ಆ ಮಾತಿಗೆಡೆಯಿಲ್ಲ ಅಲ್ಲಿ. ಏಕೆಂದರೆ ಅಂದಿನ ಮಾನವ ಜೀವನದಲ್ಲಿ ಭೂತ ಭವಿಷ್ಯತ್ತುಗಳ ವಿಚಾರಕ್ಕಿಂತಲೂ ವರ್ತಮಾನ ಸಮಯದ ವಿದ್ಯಮಾನದ ಚಿಂತೆಯೇ ಹೆಚ್ಚು. ತಾಯಿಯ ಇಬ್ಬರು ಗಂಡಂದಿರು ಜೀವಿಸಿದ್ದಾರೆ ಈಗ. ಇನ್ನೊಬ್ಬ ಗಂಡಸು ಗಂಡನಾಗುವ ಹರೆಯಕ್ಕೆ ಕಾಲಿರಿಸಿದ್ದಾನೆ. ಆಕೆಯ ಆಳ್ತನದ ಕಾಲದಲ್ಲಿಯೇ ಗಂಡನ ಸ್ಥಾನಕ್ಕೆ ಬರಬಹುದಾಗಿದ್ದ ಎಷ್ಟೋ ಮಂದಿ ಎಳೆಯ ಯುವಕರು ಕಳೆದುಹೋಗಿದ್ದರು. ಈಗ ಅವಳ ಅನುರಾಗಕ್ಕೆ ಪಾತ್ರನಾದವನೆಂದರೆ ಇಪ್ಪತ್ತನಾಲ್ಕರ ಹರೆಯದ ಆ ಜವ್ವನಿಗ. ಉಳಿದವನೊಬ್ಬ ಹರೆಯ ಹದಿನಾಲ್ಕರ ಹುಡುಗ. ಅದರಿಂದಾಗಿ ಹರೆಯ ಐವತ್ತರ ಆ ಹಿರಿಯ ಗಂಡಸು ತರುಣಿಯರ ಪಾಲಿಗೆ ಉಳಿದ. ಚಳಿಗಾಲ ಕಳೆಯುತ್ತ ಬಂದಾಗ ಒಂದು ದಿನ ಮಲಗಿದ ಮುದುಕಿ ಮತ್ತೆ ಏಳಲೇ ಇಲ್ಲ. ಮಕ್ಕಳಲ್ಲಿ ಮೂರನ್ನು ತೋಳಗಳು ಎತ್ತಿಕೊಂಡು ನಡೆದವು. ಹಿರಿಯ ಗಂಡಸು ಹಿಮಕರಗಿದ ನದಿಯ ನೆರೆಗೆ ತುತ್ತಾದ. ತರುಣ ತರುಣಿಯರಿಬ್ಬರು ಮೊದಲೇ ತೋಳಗಳ ಬಾಯಿಗೆ ಎರವಾಗಿದ್ದರು. ಈ ತೆರ, ಮಂದಿ ಹದಿನಾರರ ಆ ಬಳಗ ಒಂಭತ್ತರ ಲೆಕ್ಕಕ್ಕೆ ಇಳಿಯಿತು.

3 ವಸಂತ ಋತು. ಹೆಪ್ಪುಗಟ್ಟಿದ್ದ ಪ್ರಕೃತಿಯಲ್ಲಿ ನವಜೀವನ ಸಂಚಾರವಾಗತೊಡಗಿದೆ. ಮಂಜು ಕರಗಿದ ನೆಲದಲ್ಲೆಲ್ಲ ಹಚ್ಚ ಹಸುರು ಹರಡತೊಡಗಿದೆ. ವನಸ್ಪತಿಗಳ ಹಾಗೂ ಹೊಸ ಮಣ್ಣಿನ ಮಾದಕ ಗಂಧ ತಂಗಾಳಿಯಲ್ಲಿ ಸೇರಿ ಹಬ್ಬುತ್ತಿದೆ. ಜೀವ ವಿಹೀನವಾದಂತಿದ್ದ ದಿಗಂತ ಸಜೀವವಾಗುತ್ತ ಬರುತ್ತಿದೆ. ಒಂದೆಡೆ ಹಕ್ಕಿಗಳು ಮರದ ಮೇಲೆ ಇನಿದನಿ ಕೊಡುತ್ತಿವೆ. ಇನ್ನೊಂದೆಡೆ ಇರಿಂಟಿಗಳ ಕಿರಿಕಿರಿ ಸದ್ದು. ಮಂಜು ಕರಗಿದ ಹೊನಲ ದಡದೆಡೆ ಕುಳಿತ ನೀರು ಹಕ್ಕಿಗಳು ಕ್ರಿಮಿ ಭಕ್ಷಣದಲ್ಲಿ ಮಗ್ನವಾಗಿವೆ. ಕಲಹಂಸಗಳು ಪ್ರಣಯ ಕ್ರೀಡೆಗೆ ಆರಂಭಿಸಿವೆ. ಇನ್ನು ಹಚ್ಚಹಸುರಾದ ಬೆಟ್ಟದೆಡೆಯ ಬನಗಳಲ್ಲಿ ಹಿಂಡು ಹಿಂಡಾಗಿ ಓಡಾಡುತ್ತ ಜಿಂಕೆಗಳು ಮೇಯುತ್ತಿವೆ. ಅಲ್ಲಲ್ಲಿ ಕುರಿಗಳು, ಆಡುಗಳು, ದನಗಳು ಅಲೆದಾಡುತ್ತಿವೆ. ಹುಲ್ಲು ತಿನ್ನುವ ಈ ಜೀವಿಗಳಲ್ಲ್ ಕೆಲವನ್ನಾದರೂ ತಿಂದುಬಿಡಬೇಕೆಂದು ಅಡಗಿ ಕುಳಿತಿವೆ ಚಿರತೆ, ತೋಳಗಳು.

ಚಳಿಗಾಲದಲ್ಲಿ ಒಂದೇ ಕಡೆ ಹಿಮಗಟ್ಟಿ ನಿಂತಿದ್ದ ನದಿ ಪ್ರವಾಹ ಹರಿಯತೊಡಗಿದಂತೆ, ಒಂದೆಡೆ ತಂಗಿದ ಮಾನವ ಪರಿವಾರವೂ ಹೊರಟು ಚಲಿಸತೊಡಗಿದೆ ಈಗ. ತಮ್ಮ ಕೈದುಗಳು, ತೊಗಲ ಹೊದಿಕೆಗಳು, ಮಕ್ಕಳು, ಗೃಹಾಗ್ನಿ ಮೊದಲಾದವನ್ನು ಹೊತ್ತುಕೊಂಡು ಬಯಲ ಬೆಳಕಿಗೆ ಬರುತ್ತಿದೆ ಆ ಬಳಗ. ದಿನಕಳೆಯುತ್ತ ಪಶು ವನಸ್ಪತಿಗಳಂತೆ ಮಾನವರ ಒಣಮೈಗಳಲ್ಲಿಯೂ ಮಾಂಸಖಂಡಗಳೆಲ್ಲ ಮೊದಲಿನಂತೆಯೇ ಕೂಡಿಬಂದು ನೆತ್ತರು ತುಂಬಿಕೊಂಡಿವೆ. ಅಲ್ಲಲ್ಲಿ ಈ ವನಮಾನವರ ಉದ್ದ ಕೂದಲಿನ ನಾಯಿಗಳು ಕುರಿಗಳನ್ನೋ, ಆಡುಗಳನ್ನೋ ಹಿಡಿಯತೊಡಗಿವೆ. ಸ್ವತಃ ಆ ಮಾನವರೆ ಬಲೆ ಬೀಸಿಯೋ, ಬಾಣ ಹೊಡೆದೋ, ಕೊಡಲಿ ಎಸೆದೋ ಕಾಡುಜೀವಿಗಳನ್ನು ಬೇಟೆಯಾಡಲಾರಂಭಿಸಿದ್ದಾರೆ. ಈಗ ಅವರ ಆಹಾರಕ್ಕೇನೂ ಕೊರತೆಯಿಲ್ಲ. ನದಿಗಳಲ್ಲಿ ಮೀನುಗಳೂ ಬೇಕಾದಷ್ಟಿವೆ. ವೋಲ್ಗಾ ನದಿಯ ಉತ್ತರ ನಿಟ್ಟಿನ ಬಳಗದವರು ಬೀಸಿದ ಬಲೆಗಳು ಬರಿದಾಗಿ ಎಂದೂ ಹಿಂದೆ ಬರಲಾರವು; ಮೀನು ಹಿಡಿದುಕೊಂಡೇ ಅವು ಮೇಲಕ್ಕೆ ಬರುವುವು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ರೇಣುಕಾ ನಿಡಗುಂದಿ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ಕಥೆ ‘ಪುತ್ರಯಜ್ಞ’

ಇರುಳು ಈಗಲೂ ಚಳಿ ಇದೆ. ಆದರೆ ಹಗಲ ಬಿಸಿಲ ಬೇಗೆಯೂ ಕಡಿಮೆಯಿಲ್ಲ. ಈಗ ನಮ್ಮ ನಿಶಾ ಪರಿವಾರ (ತಾಯಿಯ ಹೆಸರು ನಿಶಾ) ಉಳಿದ ಮಾನವ ಪರಿವಾರದೊಡನೆ ವೋಲ್ಗಾ ದಂಡೆಯಲ್ಲೊಂದೆಡೆ ಬಿದ್ದುಕೊಂಡಿದೆ. ನಿಶಾ ಬಳಗದಂತೆ ಉಳಿದ ಬಳಗದಲ್ಲಿಯೂ ತಾಯಂದಿರ ಆಳ್ತನವಲ್ಲದೆ ತಂದೆಯರದಲ್ಲ. ಯಾರ ತಂದೆ ಯಾರೆಂದು ಅಲ್ಲಿ ನಿಶ್ಚಯಿಸಿ ಹೇಳುವುದೂ ಕಷ್ಟ. ನಿಶೆಗೆ ಎಂಟು ಮಂದಿ ಪುತ್ರಿಯರೂ, ಆರು ಮಂದಿ ಪುತ್ರರೂ ಜನಿಸಿದ್ದರು. ಅವರಲ್ಲಿ ಈಗ ಉಳಿದವರೆಂದರೆ ನಾಲ್ವರು ಹುಡುಗಿಯರು, ಮೂವರು ಹುಡುಗರು ಮಾತ್ರ. ಇವರೆಲ್ಲ ನಿಶಾ ಸಂತಾನವೆಂಬುದರಲ್ಲಿ ಸಂಶಯವಿಲ್ಲ. ಹೆರಿಗೆಯ ಸಾಕ್ಷಿಯಿದೆಯಲ್ಲ ಅದಕ್ಕೆ ? ಆದರೆ ಅವರ ತಂದೆ ಯಾರೆಂದು ಹೇಳುವುದು ಅಸಾಧ್ಯ. ನಿಶೆಯ ಆಳ್ತನಕ್ಕೆ ಮೊದಲು ಅಜ್ಜಿಯ ಒಡೆತನದ ಕಾಲದಲ್ಲಿ ಈಗ ಅಜ್ಜಿ ಎನಿಸಿದರೂ ಆಗ ಜವ್ವನೆ ಆಕೆ. ಅವಳಿಗೆ ಎಷ್ಟೋ ಮಂದಿ ಸೋದರ ಪತಿಗಳೂ, ಪುತ್ರಿಪತಿಗಳೂ ಇದ್ದರು. ಅವರೆಲ್ಲ ಎಷ್ಟೋ ಸಲ ನಿಶೆಯೊಡನೆ ಹಾಡಿ ಕುಣಿದು ಆಕೆಯ ಪ್ರೀತಿ ಪಾತ್ರರೆನಿಸುವುದರಲ್ಲಿ ಸಫಲರಾದರು. ಪರಿವಾರದ ಒಡತಿಯೆನಿಸಿದ ಮೇಲೂ ನಿಶೆಯ ಪ್ರೇಮಾಕಾಂಕ್ಷೆಯನ್ನು ತಿರಸ್ಕರಿಸುವ ಎದೆಗಾರಿಕೆ ಆಕೆಯ ಯಾವ ಸೋದರನಲ್ಲಿಯೂ, ಮಗನಲ್ಲಿಯೂ ಇರಲಿಲ್ಲ. ಅದರಿಂದಲೇ ಇಂದು ಜೀವಿಸುತ್ತಿರುವ ಅವಳ ಏಳು ಮಂದಿ ಮಕ್ಕಳಲ್ಲಿ ಯಾರು ಯಾರಿಗೆ ಹುಟ್ಟಿದರೆಂದು ಹೇಳುವುದು ಅಸಾಧ್ಯ.

ತನ್ನ ಪರಿವಾರದಲ್ಲಿ ಅವಳೇ ಎಲ್ಲರಿಗೂ ಹಿರಿಯಳೀಗ. ಎಲ್ಲರ ಮೇಲೂ ಅವಳದೇ ಆಳ್ತನ. ಆದರೆ ಆ ಆಳ್ತನ ಬಹುಕಾಲ ಉಳಿಯುವಂಥದಲ್ಲ. ಒಂದೆರಡು ವರ್ಷಗಳಲ್ಲೆ ಅಜ್ಜಿಯೆನಿಸುವಳು ನಿಶೆ. ಆಗ ನಿಶಾ ಸಂತಾನದಲ್ಲಿ ಬಲಿಷ್ಠೆಯೆನಿಸಿದ ಲೇಖೆಗೆ ಆಳ್ತನ ದೊರಕುವುದು. ಲೇಖೆಯ ಕೈಗೆ ಒಡೆತನ ದೊರೆತಾಗ ಆಕೆಗೂ ಸೋದರಿಯರಿಗೂ ಜಗಳ ನಡೆಯದೆಯೂ ಇರದು. ಅವಳ ಸೋದರಿಯರಲ್ಲಿ ಒಬ್ಬಿಬ್ಬರು ಸ್ವತಂತ್ರವಾದ ಪರಿವಾರಗಳನ್ನು ಕಟ್ಟುವುದರಲ್ಲಿ ಸಮರ್ಥ ರಾಗಲೂಬಹುದು. ಹಿಂದೆ ಎಷ್ಟೋ ತಡವೆ ಅನೇಕ ಪರಿವಾರಗಳಲ್ಲಿ ಹೀಗೆಯೇ ನಡೆದಿದೆ. ಈಗ ಅನೇಕ ವೀರ್ಯಗಳಿಗೆ ಒಂದೆ ರಜಃಕ್ಷೇತ್ರವಿರುವಂತೆ ಮುಂದೆ ಅನೇಕ ರಜಃಕ್ಷೇತ್ರಗಳಿಗೆ ಒಂದೇ ವೀರ್ಯವಾದಾಗ ಪರಿವಾರ ವೃದ್ಧಿಗೆ ತಡೆಬಂದರೂ ಬರಬಹುದು.

ಪ್ರತಿವರ್ಷವೂ ಪರಿವಾರದಲ್ಲಿ ಕೆಲಮಂದಿಯಾದರೂ ತೋಳಗಳಿಗೋ, ಚಿರತೆಗಳಿಗೋ, ಇಲ್ಲವೇ ವೋಲ್ಗಾ ಪ್ರವಾಹಕ್ಕೋ ಬಲಿ ಬೀಳಬೇಕಾಗಬಹುದು. ಅಂತಹ ಪ್ರಸಂಗಗಳಲ್ಲಿ ತನ್ನ ಬಳಗವನ್ನುಳಿಸುವುದು ತಾಯಿಯ ಕರ್ತವ್ಯ.

ತನ್ನ ಮಗಳು ಲೇಖೆ ಬೇಟೆಯಾಡುವುದರಲ್ಲಿ ಬಹು ಜಾಣೆೆಯೆಸಿರುವುದನ್ನು ಬಳಗದೊಡತಿ ನಿಶೆ ಕಂಡುಕೊಂಡಳು. ಬೆಟ್ಟಗಳನ್ನು ಜಿಂಕೆಯಂತೆ ಕ್ಷಣಮಾತ್ರದಲ್ಲಿ ಲೇಖೆ ಏರಿಬಿಡುವಳು. ಅದೊಂದು ದಿನ ಎತ್ತರದ ಬಂಡೆಯ ಕೆಳಗೆ ನೆಲದಿಂದ ಎಟಕಲಾರದಷ್ಟು ಎತ್ತರಕ್ಕೆ ಜೇನು ತಿನ್ನುವ ಕರಡಿಗಳು ಕೂಡಾ ಹೋಗಲಾರದಂತಹ ಸ್ಥಳದಲ್ಲಿ ಒಂದು ಜೇನು ಹುಟ್ಟು ಕಾಣಿಸಿತು. ಕಾಣಿಸಿದ್ದೇ ತಡ ಲೇಖೆ ಕಟ್ಟಿಗೆ ಜೋಡಿಸಿ ಸಂಜೆಯಾದೊಡನೆಯೇ ಅಳಿಲಿನಂತೆ ಮೇಲೇರಿಬಿಟ್ಟಳು. ಬೆಂಕಿ ಉರಿಸಿ ಆ ದೊಡ್ಡದೊಡ್ಡ ಜೇನುಹುಳಗಳನ್ನೆಲ್ಲಾ ಓಡಿಸಿ, ಬೀಳಿಸಿ, ಹೆಜ್ಜೇನು ಗೂಡಿಗೆ ತೂತು ಮಾಡಿದಳು. ಕೆಳಗಿರಿಸಿದ ಚರ್ಮದ ಬುಡ್ಡಿಯಲ್ಲಿ ಕಡಿಮೆಯೆಂದರೂ ಮೂವತ್ತು ನಾಲ್ವತ್ತು ಬಳ್ಳ ಜೇನು ಸುರಿಯಿತು. ಈ ಸಾಹಸದ ಕಾರ್ಯಕ್ಕಾಗಿ ಲೇಖೆಯನ್ನು ನಿಶಾ ಬಳಗದ ಮಂದಿಯೆಲ್ಲ ಹೊಗಳಿದರು. ನೆರೆಯ ಪರಿವಾರಗಳಲ್ಲಿಯೂ ಆಕೆಯ ಹೆಸರು ಹರಡಿತು. ತರುಣ ನಿಶಾ ಪುತ್ರರು ಲೇಖೆಯ ಕಡೆಗಣ್ಣ ಸನ್ನೆಗೆ ಸರಿಯಾಗಿ ಕುಣಿಯಲು ಸಿದ್ಧರಾಗಿದ್ದಷ್ಟು ಕಾಲ ತನ್ನ ಪ್ರಾರ್ಥನೆಯನ್ನು ನಡೆಸಿಕೊಡಲಾರರೆಂಬುದು ನಿಶೆಗೆ ತಿಳಿದಿತ್ತು. ಆದರೂ ಆ ತರುಣರಲ್ಲಿ ಆಕೆಯ ಬಯಕೆಯನ್ನು ತಿರಸ್ಕರಿಸಿಬಿಡುವಷ್ಟು ಎದೆಗಾರಿಕೆ ಯಾರಿಗೂ ಇಲ್ಲವೆಂಬುದು ನಿಜ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಮರಾಠಿ ಕಥೆಗಾರ ಜಿಎ ಕುಲಕರ್ಣಿಯವರ ‘ಚಂದ್ರಾವಳ’ ಕಥೆ

ಎಷ್ಟೋ ಸಮಯದಿಂದ ಲೇಖೆಯನ್ನು ಅಳಿಸಿಬಿಡಲು ದಾರಿ ಹುಡುಕುತ್ತಿರುವಳು ನಿಶಾ. ತನ್ನ ಆಳ್ವಿಕೆಯ ಹೊನಲಿಗೆ ಅಡ್ಡಬರುವ ಬಂಡೆಯನ್ನು ಕಿತ್ತೊಗೆಯದೆ ಆಕೆಗೆ ಶಾಂತಿಯಿಲ್ಲ. ವೋಲ್ಗಾ ಧಾರೆಯಲ್ಲಿ ಮುಳುಗಿಸಿ ಕೊರಳೊತ್ತಿ ಕೊಂದುಬಿಡಲೋ ಎಂದೊಮ್ಮೆ ಯೋಚಿಸುವಳು. ಆದರೆ ಲೇಖೆ ತನಗಿಂತ ಎಷ್ಟೋ ಬಲಿಷ್ಠೆ. ತಾನೊಬ್ಬಳೇ ಆಕೆಯನ್ನು ಏನೂ ಮಾಡಲು ಆಗದು. ಮತ್ತೊಮ್ಮೆ ಹೀಗೂ ಭಾವಿಸುವಳು. ಇನ್ನೊಬ್ಬರ ಸಹಾಯದಿಂದ ಲೇಖೆಯನ್ನು ಅಳಿಸಿಬಿಡಬಹು ದೆಂದರೆ, ಪರಿವಾರದ ಪುರುಷರೆಲ್ಲ ಆಕೆಯ ಒಲವನ್ನೊಲಿಸಿಕೊಳ್ಳಲು ಹಾತೊರೆಯುವರು. ಯಾರೂ ನಿಶೆಯ ಮಾತಿಗೆ ಕಿವಿಯೇ ಕೊಡರು. ನಿಶಾ ಪುತ್ರಿಯರೂ ಹಾಗೆಯೇ. ಲೇಖೆಯೆಂದರೆ ಹೆದರುವರು. ಲೇಖೆಯನ್ನು ನೀಗಿಸುವ ಕಾರ್ಯವೆಲ್ಲಿಯಾದರೂ ಕೈಗೂಡದಿದ್ದರೆ ನಿಶೆಗೆ ನೆರವಾದವರೆಲ್ಲರ ಪ್ರಾಣ ತೆಗೆಯದೆ ಬಿಡಲಾರಳು ಆಕೆ ಎಂದೇ ಆ ಹೆಣ್ಣುಮಕ್ಕಳು ಹೆದರುವುದು.

ಒಮ್ಮೆ ನಿಶೆಯೊಬ್ಬಳೆ ಕುಳಿತು ಆಲೋಚನೆಯಲ್ಲಿ ಮಗ್ನಳಾಗಿದ್ದಳು. ಇದ್ದಕ್ಕಿದ್ದಂತೆ ಮುಖ ಅರಳಿತು. ಲೇಖೆಯನ್ನು ನಿರ್ನಾಮ ಮಾಡುವ ಉಪಾಯ ಕಂಡಳು ಪ್ರೌಢೆ. ಹೊತ್ತೇರಿ ಬರುತ್ತಿದೆ. ಪರಿವಾರಗಳೆಲ್ಲ ತಂತಮ್ಮ ತೊಗಲು ಬಿಡಾರಗಳ ಹಿಂದೆ ಕುಳಿತುಕೊಂಡೋ, ಬತ್ತಲೆಯಾಗಿ ಮಲಗಿಯೋ ಬಿಸಿಲು ಕಾಯಿಸುತ್ತಿದ್ದವು. ನಿಶೆಯೊಬ್ಬಳು ಮಾತ್ರ ತನ್ನ ಗುಡಾರದ ಮುಂದೆ ಮಂಡಿಸಿದ್ದಳು. ಲೇಖೆಯ ಮೂರು ವರ್ಷದ ಗಂಡು ಕೂಸು ಅಲ್ಲೇ ಬಳಿಯಲ್ಲಿ ಆಡುತ್ತಿದೆ. ನಿಶೆಯ ಕೈಯಲ್ಲಿ ಎಲೆಯ ದೊನ್ನೆಯಲ್ಲಿ ಕೆಂಪು ಕೆಂಪಾದ ಕಾಡು ಹಣ್ಣುಗಳಿವೆ. ಬಳಿಯಲ್ಲೇ ವೋಲ್ಗಾ ನದಿ ರಭಸದಿಂದ ಹರಿಯುತ್ತಿದೆ. ನಿಶೆ ಕುಳಿತಲ್ಲಿಂದ ಹೊನಲ ತನಕವೂ ಇಳಿಜಾರಾದ ಮರಳಿನ ನೆಲ. ತನ್ನ ಕೈಯ ದೊನ್ನೆಯಿಂದ ಹರಿದುದನ್ನು ಮುಂದೊಗೆದಳು ನಿಶಾ. ಆ ಮಗು ಓಡಿಹೋಗಿ ಹಣ್ಣನ್ನು ಬಾಯಿಗಿಟ್ಟುಕೊಂಡಿತು. ಇನ್ನೊಂದು ಹರಿದೊಗೆದಳು. ಅದನ್ನೂ ಮಗು ಅಟ್ಟಿ ಹಿಡಿದು ತಿಂದುಬಿಟ್ಟಿತು. ಹೀಗೆ ಎಷ್ಟೋ ಹಣ್ಣುಗಳನ್ನು ಬೇಗ ಬೇಗನೆ ಎಸೆದಳು ನಿಶಾ. ಓಡಿಯೋಡಿ ಹಣ್ಣುಗಳನ್ನೆಲ್ಲಾ ಮಗು ಎತ್ತಿಕೊಂಡು ತಿಂದಿತು. ಕಡೆಗೊಂದು ಹಣ್ಣು ಮರಳಿನಲ್ಲಿ ಹೊರಳಿ ತುಸು ಕೆಳಗಿಳಿಯಿತು. ಅದನ್ನೂ ಹಿಡಿಯಲೆಂದೋಡಿದ ಲೇಖೆಯ ಮಗು ಕಾಲು ಜಾರಿ ಹೊರಳಾಡುತ್ತ ವೋಲ್ಗಾ ನದಿಯ ಪ್ರವಾಹವನ್ನು ಸೇರಿತು.

ಮಗು ಬಿದ್ದದ್ದೇ ತಡ ನಿಶೆ ಚೀರಿದಳು. ಅಲ್ಲೇ ಹತ್ತಿರ ಕುಳಿತುಕೊಂಡಿದ್ದ ಲೇಖೆಯೂ ಏನಾಯಿತೆಂಬುದನ್ನು ಗಮನಿಸಿ ನೀರಿಗೆ ಹಾರಿದಳು. ಜಲಪ್ರವಾಹದಲ್ಲಿ ಮುಳುಗಿ ತೇಲುತ್ತಿದ್ದ ಮಗುವನ್ನು ಹಿಡಿದೇಬಿಟ್ಟಳು ತಾಯಿ. ತುಂಬಾ ನೀರು ಕುಡಿದುಬಿಟ್ಟುದರಿಂದ ಸ್ಮೃತಿ ತಪ್ಪಿತ್ತು ಮಗುವಿಗೆ. ವೋಲ್ಗಾ ನದಿಯ ಮಂಜಿನ ನೀರು ಮೈಯಲ್ಲಿ ಮುಳ್ಳಿನಂತೆ ಚುಚ್ಚುತ್ತಿದೆ. ಹೊನಲಿನ ಹೊಯ್ಲಿಗೆ ಸಿಕ್ಕಿದ ಲೇಖೆಗೆ ದಡ ಸೇರುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಒಂದು ಕೈಯಲ್ಲಿ ಮಗುವನ್ನೆತ್ತಿ ಹಿಡಿದು ಇನ್ನೊಂದು ಕೈಯಿಂದಲೂ ಕಾಲುಗಳಿಂದಲೂ ಈಜಾಡಿ ದಡ ಸೇರಲು ಹೆಣಗಾಡುತ್ತಿದ್ದಾಳೆ. ಅಷ್ಟರಲ್ಲೆ ಅವಳ ಕೊರಳನ್ನು ಯಾರದೋ ಬಲವಾದ ಕೈಗಳು ಒತ್ತಿ ಹಿಡಿದುವು. ಯಾರು ಯಾಕೆ ಹಿಡಿದುದೆಂಬುದೂ ಆಕೆಗೆ ತಿಳಿಯಿತು. ತನ್ನ ದಾರಿಯ ಮುಳ್ಳನ್ನು ಪರಿವಾರದವರಲ್ಲೆಲ್ಲ ಪ್ರಸಿದ್ಧಳಾಗುತ್ತ ಬಂದಿದ್ದ ಲೇಖೆಯನ್ನು ಕಿತ್ತೊಗೆದು ಬಿಡಲು ಇದೇ ತಕ್ಕ ಸಂದರ್ಭವೆಂದು ನಿಶಾ ತಿಳಿದಿದ್ದಳು. ಕೊರಳನ್ನು ಅಮುಕಿ ಹಿಡಿದ ಕೈಗಳಿಂದ ಬಿಡಿಸಿಕೊಳ್ಳಲು ಲೇಖೆ ಸಾಧ್ಯವಿದ್ದಷ್ಟೂ ಹೆಣಗಾಡಿದಳು. ಆದರೂ ಆಕೆ ಏನು ಮಾಡಬಲ್ಲಳು? ಒಂದು ಕೈಯಲ್ಲಿ ಮಗುವಿದೆ. ಇನ್ನಾಕೆಯಿಂದ ತಡೆಯುವುದಾಗಲಿಲ್ಲ. ತನ್ನೆದೆಯನ್ನೇ ನಿಶೆಯ ತಲೆಯ ಮೇಲಿರಿಸಿಬಿಟ್ಟಳು. ಲೇಖೆಯ ಮೈಯಭಾರಕ್ಕೆ ಒಮ್ಮೆಯೇ ಮುಳುಗಿದಳು ನಿಶೆ. ಅಷ್ಟರಲ್ಲಿ ಲೇಖೆಯ ಮಗು ಕೈ ತಪ್ಪಿತು. ಆಗಲೇ ಸ್ಮೃತಿ ತಪ್ಪುತ್ತಾ ಬರುತ್ತಿರಲು ಲೇಖೆ ನಿಶೆಯ ಕೊರಳನ್ನೇ ಗಟ್ಟಿಯಾಗಿ ಹಿಡಿದುಕೊಂಡಳು. ಈಗ ನಿಶೆಯೂ ಈಜಾಡಲಾರಳು. ಆದರೂ ಲೇಖೆಯ ಕೈಯಿಂದ ಬಿಡಿಸಿಕೊಳ್ಳಲು ಅವಳು ಬೇಕಾದಷ್ಟು ಪ್ರಯತ್ನಪಟ್ಟಳು. ಏನು ಮಾಡಿದರೂ ಸಾಧ್ಯವಾಗಲಿಲ್ಲ. ತಾಯಿ ಮಕ್ಕಳಿಬ್ಬರೂ ವೋಲ್ಗಾ ಪ್ರವಾಹದಲ್ಲಿ ಕೊಚ್ಚಿ ಹೋದರು.

ಆಮೇಲೆ ಪರಿವಾರದಲ್ಲಿ ಬಲಿಷ್ಠ ಸ್ತ್ರೀಯೆನಿಸಿದ ರೋಚನಾ ನಿಶಾ ಪರಿವಾರದ ಒಡತಿಯಾದಳು.

(ಮುಗಿಯಿತು)

ಪ್ರತಿಕ್ರಿಯೆಗಾಗಿ : tv9kannadaditigal@gmail.com

ಈ ಕಥೆಯ ಎಲ್ಲಾ ಭಾಗಗಳನ್ನೂ ಮತ್ತು ಈ ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

Follow us on

Related Stories

Most Read Stories

Click on your DTH Provider to Add TV9 Kannada