Literature: ನೆರೆನಾಡ ನುಡಿಯೊಳಗಾಡಿ; ಹೊಟ್ಟೆ ತುಂಬಿದಾಗ ಅಂದಿನ ಬೇಟೆಯಲ್ಲಿ ತಾಯಿ ತೋರಿಸಿದ ಜಾಣ್ಮೆ ಹೊಗಳಿದರು
Rahul Sankrityayana‘s Ganga Volga : ಆ ಕಾಲದ ಮಾನವ ಧರ್ಮದಂತೆ ಒಬ್ಬ ವ್ಯಕ್ತಿಗಾಗಿ ಸಂಪೂರ್ಣ ಪರಿವಾರವನ್ನೇ ಅಪಾಯಕ್ಕೆ ನೂಕದೆ ಉಳಿಸಲು ಹೆಣಗುವುದು ಬಳಗದೊಡತಿ ತಾಯಿಯ ಕರ್ತವ್ಯ. ಇಲ್ಲಿ ಮಾತ್ರ ಆಕೆಯ ಮನಸ್ಸು ಒಡಂಬಡಲಿಲ್ಲ. ಅದು ತನ್ನ ಅಬಲತೆ ತೋರಿಸಿಯೇ ತೋರಿಸಿತು.
ನೆರೆನಾಡ ನುಡಿಯೊಳಗಾಡಿ : NereNaada Nudiyolagaadi ; ದೊಡ್ಡ ಕರಡಿಯನ್ನು ಅತ್ತಿತ್ತ ಮಗುಚಿ ಹಾಕಿ ತನ್ನ ಹೊದಿಕೆಯ ತೊಗಲಿನೆಡೆಯಿಂದ ಹೊಳೆಯುವ ಹರಿತವಾದ ಕಲ್ಲು ಕತ್ತಿಯನ್ನು ತಾಯಿ ತೆಗೆದಳು. ಮತ್ತೆ ಕರಡಿಯ ಗಾಯಕ್ಕೆ ಕತ್ತಿಯಿಟ್ಟು ತೊಗಲನ್ನು ಸೀಳಿದಳು. ಕಲ್ಲು ಕತ್ತಿಯಿಂದ ತೊಗಲು ಕತ್ತರಿಸುವ ಕೆಲಸದಲ್ಲಿ ಆಕೆಯ ತೋಳುಗಳು ಅಷ್ಟು ಪಳಗಿವೆ. ಮತ್ತೆ ಮೆತ್ತನೆಯ ಮಾಂಸದ ತುಂಡೊಂದನ್ನು ತೆಗೆದುಕೊಂಡು ತನ್ನ ಬಾಯಿಗಿಟ್ಟುಕೊಂಡಳು. ಎಲ್ಲರೂ ಸುತ್ತುಮುತ್ತು ಮಂಡಿಸತೊಡಗಿದರು. ತಾಯಿ ಮಾಂಸ ಕಡಿದು ಕಡಿದು ತಿನ್ನಿಸತೊಡಗಿದಳು. ದೊಡ್ಡ ಕರಡಿಯ ಮಾಂಸವೆಲ್ಲ ಮುಗಿದಾಗ ಇನ್ನೊಂದರ ಮೇಲೆ ಕತ್ತಿಯಿಟ್ಟಳು. ಆಗ ಆ ಹರೆಯ ಹದಿನಾರರ ತರುಣಿ ಅಲ್ಲಿಂದೆದ್ದು ತುಸು ದೂರ ಹೋಗಿ ಮಂಜುಗಡ್ಡೆಯ ತುಂಡೊಂದನ್ನು ಆರಿಸಿ ಬಾಯಿಗಿಟ್ಟುಕೊಂಡಳು. ಹಿರಿಯ ಗಂಡಸು ಅಲ್ಲಿಗೆ ಬಂದ. ಮಂಜಿನ ತುಂಡೊದನ್ನು ಬಾಯಿಗಿಟ್ಟುಕೊಂಡು ತರುಣಿಯ ಕೈ ಹಿಡಿದುಕೊಂಡ. ಆಕೆ ತುಸು ಹಿಂದೆ ಸರಿದು ಮತ್ತೆ ಸುಮ್ಮನೆ ನಿಂತಳು. ಗಂಡಸು ತರುಣಿಯ ಹೆಗಲ ಮೇಲೆ ಕೈಯಿರಿಸಿಕೊಂಡು ಎಲ್ಲಿಗೋ ಕರೆದೊಯ್ದ.
ಕಥೆ : ನಿಶಾ (ಕ್ರಿ. ಪೂ. 6000) | ಹಿಂದಿ ಮೂಲ : ರಾಹುಲ ಸಾಂಕೃತ್ಯಾಯನ | ಕನ್ನಡಕ್ಕೆ : ಬಿ. ಎಂ. ಶರ್ಮಾ | ಕೃತಿ ಸೌಜನ್ಯ : ‘ವೋಲ್ಗಾ ಗಂಗಾ’ ನವಕರ್ನಾಟಕ ಪ್ರಕಾಶನ
(ಭಾಗ 3)
ತುಸುಹೊತ್ತಿನಲ್ಲಿ ಆ ಗಂಡಸೂ ತರುಣಿಯೂ ಕೈಗಳಲ್ಲಿ ದೊಡ್ಡದೊಡ್ಡ ಮಂಜುಗಡ್ಡೆಗಳನ್ನೆತ್ತಿಕೊಂಡು ಹಿಂತಿರುಗಿ ಕರಡಿಯ ಬಳಿ ಬಂದರು. ಈಗ ಇಬ್ಬರ ಕಣ್ಣುಗಳೂ ಕೆನ್ನೆಗಳೂ ಕೆಂಪೇರಿದ್ದವು. ಬಳಿ ಬಂದ ಗಂಡಸು ತಾಯಿಯೊಡನೆ ‘‘ನಾನು ಕಡಿಯುತ್ತೇನಮ್ಮ! ನೀನು ಬಲು ಬಳಲಿರುವೆ’’ ಎಂದ. ತನ್ನ ಕತ್ತಿಯನ್ನು ಗಂಡಿನ ಕೈಗಿತ್ತಳು ತಾಯಿ. ಮತ್ತೆ ಆಕೆ ಕಿರಿಯ ತರುಣನನ್ನೊಮ್ಮೆ ಚುಂಬಿಸಿ ಆತನ ಹೆಗಲ ಮೇಲೆ ತೋಳಿರಿಸಿಕೊಂಡು ಗುಹೆಯ ಹೊರಬಂದಳು.
ಹೀಗೆ ಆ ಮಾನವ ಬಳಗ ಮಾಂಸದಲ್ಲಿ ರುಚಿರುಚಿಯಾದ ಭಾಗವನ್ನೆಲ್ಲ ತಿಂದು ಮುಗಿಸಿತು. ನಾಲ್ಕು ತಿಂಗಳ ಕಾಲ ಆಹಾರವಿಲ್ಲದೆ ಮಲಗಿದ್ದ ಆ ಪ್ರಾಣಿಗಳ ಮೈಯಲ್ಲಿ ಮಾಂಸವಾದರೂ ಎಷ್ಟಿದ್ದೀತು! ಆದರೂ ಮರಿಕರಡಿಯ ಮಾಂಸ ತುಂಬಾ ಮೆದುವಾಗಿ ಸವಿಯಾಗಿದ್ದಿರಬೇಕು. ಆದುದರಿಂದಲೇ ಅದರ ಎಲುಬು ಚರ್ಮಗಳು ಮಾತ್ರ ಉಳಿದಿದ್ದವು. ಮತ್ತೆ ಎಲ್ಲರೂ ಅಲ್ಲೇ ಹತ್ತಿರ ಹತ್ತಿರ ಬಳಲಿಕೆ ಕಳೆಯಲೆಂದು ಮಲಗಿಕೊಂಡರು. ಇನ್ನು ಆ ಬಳಗ ತಮ್ಮ ಬೀಡಿಗೆ ಹಿಂದಿರುಗಬೇಕು. ತಿಂದುಳಿದ ಹೆಣ್ಣು ಗಂಡು ಕರಡಿಗಳನ್ನು ಮರಿಕರಡಿಯ ತೊಗಲಿನ ಹಗ್ಗದಿಂದ ಕಾಲು ಕಟ್ಟಿ, ಕಟ್ಟಿಗೆಯ ಸಹಾಯದಿಂದ ನಾಲ್ವರು ಹೆಗಲಿಗೆ ಏರಿಸಿದರು. ಮರಿ ಕರಡಿಯ ಎಲುಬು ಚರ್ಮಗಳನ್ನು ತರುಣಿಯೊಬ್ಬಳೇ ಹೊತ್ತಳು. ತಾಯಿ ತನ್ನ ಕಲ್ಲು ಕೊಡಲಿ ಹಿಡಿದು ಮುಂದೆ ನಡೆದಳು.
ಆ ಕಾಡು ಮನುಷ್ಯರಿಗೆ ಗಂಟೆ ಗಳಿಗೆಗಳ ಅರಿವಾದರೂ ಎಲ್ಲಿಂದ ? ಆದರೆ ಈ ದಿನ ತಿಂಗಳು ಬೆಳಕಿದೆ ಎಂದಿಷ್ಟು ಅವರಿಗೆ ತಿಳಿದಿದೆ. ಎಲ್ಲರೂ ತುಸು ದೂರ ನಡೆದಾಗ ನೇಸರು ದಿಗಂತದಲ್ಲಿಳಿದುದು ಕಂಡಿತು. ಇನ್ನೂ ಆಳಕ್ಕೆ ಇಳಿದಿರಲಿಲ್ಲ. ಬಾನಿನ ಕೆಂಬಣ್ಣ ಇನ್ನೂ ಮಾಸಿರಲಿಲ್ಲ. ಕೆಂಬಣ್ಣ ಮಾಸಿದಾಗ ಆಗಸದಲ್ಲೆಲ್ಲ ತಿಂಗಳ ಬೆಳಕು ಪಸರಿಸಿ ಚಂದ್ರನ ಆಳ್ತನಕ್ಕೆ ಮೊದಲಾಯಿತು.
ಇನ್ನೂ ಮುಂದುವರಿಯುತ್ತಲೇ ಇತ್ತು ಆ ಬಳಗ. ಗುಹಾಗೃಹಕ್ಕೆ ಮತ್ತೂ ದೂರವಿದೆ. ನಡೆಯುತ್ತಿದ್ದಂತೆಯೇ ತಾಯಿ ಒಮ್ಮೆಲೆ ನಿಂತುಬಿಟ್ಟಳು. ಹಿಂಬಾಲಿಸುವವರೂ ಇರಿಸಿದ ಹೆಜ್ಜೆ ಎತ್ತಲಿಲ್ಲ. ಹರೆಯ ಇಪ್ಪತ್ತಾರರ ಸುಂದರ ತರುಣನ ಬಳಿ ಬಂದು ‘‘ಗುರ್ಯೂ! ಗುರ್ಯೂ, ವೃಕ, ವೃಕ!’’ ಎಂದು ಮೆಲ್ಲನೆ ಉಸುರಿದಳು ತಾಯಿ. ಅದನ್ನು ಕೇಳಿದ ತರುಣ ತಲೆಯಲ್ಲಾಡಿಸುತ್ತ ‘‘ಗುರ್ಯೂ, ಗುರ್ಯೂ, ವೃಕ, ಬಹಳ ಇವೆ, ವೃಕ!’’ ಎಂದು ಮರು ನುಡಿದ. ಮತ್ತೆ ತಾಯಿ ಎಲ್ಲರಿಗೂ ‘‘ಎಚ್ಚರ! ಸಿದ್ಧವಾಗಿರಿ ಎಲ್ಲಾ’’ ಎಂದಳು.
ಕರಡಿಗಳ ಹೊರೆಯನ್ನು ನೆಲದ ಮೇಲಿರಿಸಿದರು. ಎಲ್ಲರೂ ಕೈಯ ಕೈದುಗಳನ್ನು ಸರಿಪಡಿಸಿಕೊಂಡು ಬೆನ್ನಿಗೆ ಬೆನ್ನು ತಾಗಿಸಿ ನಾಲ್ಕೆಡೆಗೂ ಮೋರೆ ಮಾಡಿ ನಿಂತುಕೊಂಡರು. ಅಷ್ಟರಲ್ಲೆ ಏಳೆಂಟು ತೋಳಗಳ ಹಿಂಡು ಕೆನ್ನಾಲಗೆ ನೀಡುತ್ತ ಕಾಣಬಂತು. ಗುರುಗುಟ್ಟುತ್ತ ಹತ್ತಿರ ಬಂದು, ಆ ಮಾನವ ಬಳಗದ ಸುತ್ತಲೂ ತಿರುಗತೊಡಗಿತು. ಮಾನವರ ಕೈಯಲ್ಲಿ ಮರದ ಬರ್ಚಿ ಕಲ್ಲು ಕೊಡಲಿಗಳನ್ನು ಕಂಡು ಒಮ್ಮೆಯೇ ಮೇಲೇರಲು ಅವು ಹೆದರಿದುವು. ಅಷ್ಟರೊಳಗೆ ಇಪ್ಪತ್ತಾರರ ಹರೆಯದ ಈ ತರುಣ ಬಳಗದ ನಡುವಿದ್ದು ತನ್ನಲ್ಲಿದ್ದ ಕಟ್ಟಿಗೆಯೊಂದನ್ನು ತೆಗೆದು ಸೊಂಟಕ್ಕೆ ಕಟ್ಟಿಕೊಂಡಿದ್ದ ತೊಗಲಿನ ಹಗ್ಗ ಬಿಗಿದು ಬಿಲ್ಲು ತಯಾರಿಸಿದ. ಮತ್ತೆ ತನ್ನ ಹೊದಿಕೆಯೊಳಗೆ ಅಡಗಿಸಿಟ್ಟಿದ್ದ ಹರಿತವಾದ ಕಲ್ಲಿನ ತುದಿಯುಳ್ಳ ಕಡ್ಡಿಯೊಂದನ್ನು ಹೊರತೆಗೆದ. ಎದುರಿಗಿದ್ದ ಹರೆಯದ ಗಂಡನ್ನು ಒಳಗೆ ಮಾಡಿ ತಾನವನ ಸ್ಥಳದಲ್ಲಿ ಹೊರಮೊಗವಾಗಿ ನಿಂತುಕೊಂಡ. ನಿಂತವನೇ ತಡೆಯದೇ ಹೆದೆಯೇರಿಸಿ ಠೇಂಕಾರದೊಡನೆ ಬಾಣ ಹೊಡೆದ. ಬಾಣ ತೋಳವೊಂದರ ಪಕ್ಕಕ್ಕೆ ನಾಟಿಕೊಂಡಿತು. ಗಾಯಗೊಂಡ ತೋಳ ಅದೇ ತರುಣನ ಮೇಲೇರಿ ಬಂತು. ಬರುವಾಗಲೇ ಇನ್ನೊಂದು ಕಡ್ಡಿ ಹೂಡಿದ. ಈ ಸಲ ನೆಲಕ್ಕುರುಳಿತು ತೋಳ. ನೆಲಕ್ಕುರುಳಿದ ತಮ್ಮ ಜೊತೆಗಾರ ಅಲುಗಾಡದಿರುವುದನ್ನು ದಿಟ್ಟಿಸಿ ಉಳಿದ ತೋಳಗಳು ಅದರ ಬಳಿಗೆ ಸರಿದವು. ಗಾಯದಿಂದ ಹರಿಯುತ್ತಿದ್ದ ಬಿಸಿ ನೆತ್ತರನ್ನು ನೆಕ್ಕತೊಡಗಿದವು. ಮತ್ತೆ ಜೊತೆಗಾರನನ್ನೆ ಕಚ್ಚಿ ಎಳೆದು ತಿನ್ನತೊಡಗಿದುವು.
ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಮಾಲತಿ ಮುದಕವಿ ಅನುವಾದಿಸಿದ ವಿಜಯಾ ಬ್ರಾಹ್ಮಣಕರ ಕಥೆ ‘ಋಣಾನುಬಂಧ’
ತೋಳಗಳು ತಿನ್ನುವುದರಲ್ಲೆ ಬಿದ್ದಿರುವುದನ್ನು ಕಂಡು ಆ ಮಾನವ ಬಳಗ ತಮ್ಮ ಕರಡಿಗಳನ್ನು ಹೊತ್ತುಕೊಂಡು ಹೆಜ್ಜೆಯ ಮೇಲೆ ಹೆಜ್ಜೆಯಿರಿಸುತ್ತ ಸದ್ದಿಲ್ಲದೆ ಅಲ್ಲಿಂದ ಜಾರಿತು. ತುಸು ದೂರದವರೆಗೆ ಮೆಲ್ಲಗೆ ನಡೆದು ಮತ್ತೆ ರಭಸದಿಂದ ಓಡತೊಡಗಿತು. ಈಗ ಎಲ್ಲರಿಗಿಂತಲೂ ಹಿಂದಿನಿಂದ ಓಡುವವಳು ತಾಯಿ. ಓಡುತ್ತಿದ್ದಂತೆಯೇ ಆಗಾಗ ಹಿಂತಿರುಗಿ ದಿಟ್ಟಿಸುವಳು. ಆ ಇರುಳು ಮಂಜು ಬೀಳುತ್ತಿದ್ದಿಲ್ಲ. ಅದರಿಂದಾಗಿ ತಿಂಗಳು ಬೆಳಕಿಗೆ ಹೆಜ್ಜೆಗಳ ಗುರುತಿನಿಂದ ಹೋದ ದಾರಿ ತಿಳಿಯುತ್ತಿತ್ತು. ಗುಹೆಗೆ, ತಲುಪಲು ತುಸು ದೂರವಿದೆ ಎನ್ನುವಾಗಲೇ ತೋಳಗಳ ಹಿಂಡು ಅವರನ್ನು ಬೆನ್ನಟ್ಟಿ ಬಂತೇ ಬಂತು. ಮತ್ತೆ ಆ ಮಾನವರು ಕರಡಿಗಳ ಹೊರೆಯಿಳಿಸಿ ಕೈದುಕೊಂಡು ಮೊದಲಿನಂತೆಯೇ ನಿಂತುಕೊಂಡರು. ಈಗಲೂ ಅದೇ ಬಿಲ್ಲುಗಾರ ತರುಣ ಬಾಣ ಹೊಡೆದ. ಆದರೆ ಕ್ಷಣ ಹೊತ್ತು ನಿಲ್ಲದೆ ಅತ್ತಿತ್ತ ಸುತ್ತುತ್ತಿದ್ದ ತೋಳಗಳಿಗೆ ಅವನ ಒಂದೇ ಒಂದು ಕಡ್ಡಿ ತಗಲಲಿಲ್ಲ. ಎಷ್ಟೋ ಹೊತ್ತು ಸುತ್ತಿಸುತ್ತಿ ಕಡೆಗೆ ನಾಲ್ಕು ತೋಳಗಳೂ ಒಮ್ಮೆಗೆ ಷೋಡಶಿ ತರುಣಿಯ ಮೇಲೆ ಹಾಯ್ದವು.
ಆಕೆಯ ಬದಿಯಲ್ಲೆ ನಿಂತಿದ್ದ ತಾಯಿ ತನ್ನ ಬರ್ಚಿಯನ್ನೆತ್ತಿ ತೋಳದ ಪಕ್ಕಕ್ಕೆ ಇರಿದಳು. ತೋಳ ನೆಲಕ್ಕುರುಳಿತು. ಆದರೆ ಉಳಿದ ಮೂರು ತೋಳಗಳೂ ತರುಣಿಯ ತೊಡೆ ಸೀಳಿ ಆಕೆಯನ್ನು ಬೀಳಿಸಿದವು. ನಿಮಿಷದಲ್ಲಿ ಅವಳ ಹೊಟ್ಟೆಯೊಳಗಿನ ಕರಳನ್ನು ಹೊರಕ್ಕೆಳೆದವು. ಉಳಿದವರೆಲ್ಲ ತರುಣಿಯನ್ನು ಉಳಿಸುವುದರಲ್ಲೇ ತೊಡಗಿದ್ದಾಗ ಇಪ್ಪಾತ್ತಾರು ವರ್ಷದ ತರುಣನ ಮೇಲೆ ಮೂರು ತೋಳಗಳೂ ಹಾರಿಬಿದ್ದವು. ಎಲ್ಲರಿಗೂ ಹಿಂದಿದ್ದ ತರುಣ ನೆಲಕ್ಕೊರಗಿದ. ಕೈಕಾಲು ಕೂಡ ಆಡಿಸಲು ಅವನಿಗೆ ಎಡೆಕೊಡದೆ ತೋಳುಗಳು ಅವನ ಹೊಟ್ಟೆಯನ್ನು ಬಗಿದು ಕರುಳೆಳೆದೇಬಿಟ್ಟುವು. ಅವರೆಲ್ಲರ ದೃಷ್ಟಿ ಇತ್ತ ಹರಿದಾಗ ಮೂರು ತೋಳಗಳೂ ತರುಣಿಯನ್ನು ಎಳೆದುಕೊಂಡು ಐವತ್ತು ಮಾರು ದೂರ ಹೋಗಿಯೂ ಆಯಿತು. ಹರೆಯ ಇಪ್ಪತ್ತಾರರ ತರುಣ ಅರ್ಧ ಸತ್ತ ತೋಳದೊಡನೆ ತಾನೂ ಕೊನೆಯುಸಿರುಬಿಡುತ್ತಿದ್ದ. ತಮ್ಮಿಬ್ಬರು ಜೊತೆಗಾರರು ಹೋದರೂ ಅದರ ಪರಿವೆಯೇ ಇಲ್ಲದವರಂತೆ ಅವರಲ್ಲೊಬ್ಬ ಸತ್ತ ತೋಳದ ಬಾಯಿಗೆ ಬರ್ಚಿ ಹೊಗಿಸತೊಡಗಿದ. ಇನ್ನೊಬ್ಬ ಅದರ ಹಿಂಗಾಲುಗಳನ್ನು ಹಿಡಿದೆಳೆದ. ಉಳಿದವರು ಗಾಯಕ್ಕೆ ಬಾಯಿಟ್ಟು ನೆತ್ತರು ಹೀರತೊಡಗಿದರು. ತೋಳದ ಕೊರಳ ರಕ್ತನಾಳವನ್ನೇ ಕಡಿದು ನೆತ್ತರು ಕುಡಿಯುವವರಿಗೆ ನೆರವಾದಳು ತಾಯಿ. ಇಷ್ಟೆಲ್ಲ ಕೆಲಸಗಳು ಕೆಲವೇ ನಿಮಿಷಗಳಲ್ಲಿ ನಡೆದವು. ಅತ್ತ ತೋಳಗಳೆಲ್ಲ ತರುಣಿಯ ಹೆಣವನ್ನು ತಿನ್ನುವುದರಲ್ಲಿಯೇ ತೊಡಗಿವೆ. ಅವಳ ಹೆಣ ತೀರದೆ ತೋಳಗಳು ತಮ್ಮೆಡೆಗೆ ಬರಲಾರವೆಂದು ತಿಳಿದಿದ್ದ ಆ ಕಾಡು ಜನ ತರುಣನನ್ನಲ್ಲೆ ಬಿಟ್ಟು ಕರಡಿಯ ಹೊರೆಯನ್ನು ಸತ್ತ ತೋಳವನ್ನೂ ಹೆಗಲಿಗೇರಿಸಿ ಓಡತೊಡಗಿದರು. ಓಡೋಡಿ ಕಡೆಗೆ ಗುಹೆಯನ್ನು ತಲುಪಿದರು.
ಗುಹೆಯೊಳಗೆ ಕೆನ್ನಾಲಗೆ ಚಾಚಿ ಉರಿಯುತ್ತಿತ್ತು ಬೆಂಕಿ. ಅಲ್ಲೇ ಮಲಗಿರುವ ಮಕ್ಕಳೂ ತರುಣಿಯರೂ ಕಾಣಬರುತ್ತಾರೆ. ಹೆಜ್ಜೆಯ ಸದ್ದು ಕೇಳಿದ ಮುದುಕಿ ಗಂಭೀರ ಸ್ವರದಿಂದ ‘‘ನಿಶಾ! ಬಂದಿರಾ?’’ ಎಂದಳು. ‘‘ಹಾಂ’’ ಎನ್ನುತ್ತ ತಾಯಿ ಮೊದಲು ಕೈದುಗಳನ್ನು ನೆಲದ ಮೇಲೊಗೆದು ಮತ್ತೆ ತೊಗಲಿನ ಉಡುಪು ಕಳಚಿ ದಿಗಂಬರೆಯಾದಳು. ಬಳಗದ ಉಳಿದ ಮಂದಿಯೂ ಹೊರೆಯಿಳಿಸಿ, ಚರ್ಮ ಪರಿಧಾನಗಳನ್ನು ಕಳೆದು ಅಗ್ನಿಯ ಉಷ್ಣವನ್ನು ರೋಮರೋಮಗಳಿಂದಲೂ ಹೀರಿಕೊಳ್ಳತೊಡಗಿದರು.
ಮಲಗಿದ್ದ ಮಂದಿಯೆಲ್ಲ ಎದ್ದು ಕುಳಿತುಕೊಳ್ಳತೊಡಗಿದರು. ತುಸು ಸದ್ದಾದರೂ ಗಕ್ಕನೆ ಎಚ್ಚೆತ್ತುಬಿಡುವುದು ಎಳವೆಯಿಂದಲೇ ಅವರಿಗೆ ಅಭ್ಯಾಸ. ಬಲು ಜಾಗರೂಕತೆಯಿಂದ ಈ ಬಳಗವನ್ನು ಈ ತನಕವೂ ಸಾಕಿ ಸಲಹಿ ಬಂದಿದ್ದಾಳೆ ಆ ತಾಯಿ. ಜಿಂಕೆ, ಮೊಲ, ದನ, ಕುರಿ, ಆಡು, ಕುದುರೆ ಮೊದಲಾದವುಗಳ ಬೇಟೆ ಚಳಿಗಾಲ ತೊಡಗುವ ಮೊದಲೇ ನಿಂತು ಹೋಗುವುದು. ಚಳಿ ಬಂತೆಂದರೆ ಈ ಪ್ರಾಣಿಗಳೆಲ್ಲ ದಕ್ಷಿಣಕ್ಕೆ ಬೆಚ್ಚನೆಯ ಅಡವಿಯ ಕಡೆಗೆ ನಡೆಯುವುವು. ಆ ತಾಯಿ ತನ್ನ ಬಳಗ ಕಟ್ಟಿಕೊಂಡು ಈ ಮೊದಲೇ ದಕ್ಷಿಣಕ್ಕೆ ಪ್ರಯಾಣ ಬೆಳೆಸ ಬೇಕೆಂದಿದ್ದಳು. ಆದರೆ ಆಕೆ ಹೋಗಲೆಂದು ಹೊರಟ ಹೊತ್ತಿನಲ್ಲೆ ಷೋಡಷಿ ತೋಳನಿಗೆ ತುತ್ತಾದ ಆ ಹರೆಯದಾಕೆ ಬೇನೆ ಬಿದ್ದಳು. ಆದರೆ ಆ ಕಾಲದ ಮಾನವ ಧರ್ಮದಂತೆ ಒಬ್ಬ ವ್ಯಕ್ತಿಗಾಗಿ ಸಂಪೂರ್ಣ ಪರಿವಾರವನ್ನೇ ಅಪಾಯಕ್ಕೆ ನೂಕದೆ ಉಳಿಸಲು ಹೆಣಗುವುದು ಬಳಗದೊಡತಿ ತಾಯಿಯ ಕರ್ತವ್ಯ. ಇಲ್ಲಿ ಮಾತ್ರ ಆಕೆಯ ಮನಸ್ಸು ಒಡಂಬಡಲಿಲ್ಲ. ಅದು ತನ್ನ ಅಬಲತೆ ತೋರಿಸಿಯೇ ತೋರಿಸಿತು. ಅದರಿಂದಾಗಿ ಒಂದಕ್ಕೆ ಬದಲು ಎರಡು ಜೀವ ಕಳೆದುಕೊಳ್ಳಬೇಕಾಯಿತು ಆ ಬಳಗ. ಇನ್ನೂ ಆ ಅಡವಿಗೆ ಕಾಡು ಪ್ರಾಣಿಗಳು ಹಿಂದಿರುಗಿ ಬರಲು ಎರಡು ತಿಂಗಳ ಕಾಲ ಹಿಡಿದೀತು. ಆ ನಡುವೆ ಎಷ್ಟು ಮಂದಿಯ ಜೀವಕ್ಕೆ ಸಂಚಕಾರ ಬರಲಿದೆಯೋ! ತಿಂದುಳಿದ ಮೂರು ಕರಡಿ, ಒಂದು ತೋಳ, ಇಷ್ಟು ಮಾತ್ರ ಚಳಿಗಾಲ ಕಳೆಯಲು ಸಾಕಾಗದು ಆ ಬಳಗಕ್ಕೆ.
ಬರಿ ಹೊಟ್ಟೆಯಿಂದ ಮಲಗಿದ್ದರೂ ಮಕ್ಕಳೆಲ್ಲ ಗೆಲುವಾಗಿಯೇ ಇದ್ದುವು. ಮೊದಲು ತಾಯಿ ಮಕ್ಕಳಿಗೆಲ್ಲ ತೋಳದ ಮಾಂಸ ಕಡಿದುಕೊಟ್ಟಳು. ಮಕ್ಕಳೆಲ್ಲ ಕಚಕಚ ಅಗಿದು ತಿನ್ನತೊಡಗಿದುವು. ಹರಿದುಹೋಗದಂತೆ ಜೋಕೆಯಿಂದ ಕರಡಿಗಳ ತೊಗಲು ಸುಲಿದಳು. ತೊಗಲು ಅವರಿಗೆ ತುಂಬಾ ಪ್ರಯೋಜನಕ್ಕೆ ಬೀಳುವುದು. ಮತ್ತೆ ಮಾಂಸ ಕಡಿದು ಎಲ್ಲರಿಗೂ ಹಂಚಿದಳು. ತುಂಬಾ ಹಸಿದವರು ಹಸಿಯಾಗಿಯೇ ತಿಂದರು. ಉಳಿದವರು ಬೆಂಕಿಯಲ್ಲಿ ಸುಟ್ಟು ತಿನ್ನತೊಡಗಿದರು. ಹೊಟ್ಟೆ ತುಂಬಿದಾಗ ಎಲ್ಲರೂ ಸೇರಿ ಅಂದಿನ ಬೇಟೆಯಲ್ಲಿ ತಾಯಿ ತೋರಿಸಿದ ಜಾಣ್ಮೆಯನ್ನು ಹೊಗಳಿದರು. ‘‘ಸಾಕು ಈ ದಿನ ಅಷ್ಟು , ಹೊಟ್ಟೆ ತುಂಬ ತಿಂದುಬಿಡಿ. ನಾಳೆಯಿಂದ ಏನು ಸಿಗುವುದೂ ಕಷ್ಟ !’’ ಎಂದಳು ತಾಯಿ.
(ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ವೋಲ್ಗಾ ನದಿಯ ಮಂಜಿನ ನೀರು ಮೈಯಲ್ಲಿ ಮುಳ್ಳಿನಂತೆ ಚುಚ್ಚುತ್ತಿದೆ
ಪ್ರತಿಕ್ರಿಯೆಗಾಗಿ : tv9kannadaditigal@gmail.com
ಈ ಕಥೆಯ ಎಲ್ಲಾ ಭಾಗಗಳನ್ನೂ ಮತ್ತು ಈ ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi
Published On - 11:47 am, Fri, 29 April 22