Dr. Veena Shanteshwar: ಆ ಗಂಡಸರೆಲ್ಲ ಅವಳಿಂದ ಯಾಕೆ ದೂರ ಸರಿದರು?

|

Updated on: Feb 23, 2022 | 3:58 PM

Patriarchy : ‘ಯಾವ ಪಿತೃತ್ವ ಪ್ರಧಾನ ವ್ಯವಸ್ಥೆಯಿಂದ ಹೊರಬರಲು ಅವರೆಲ್ಲಾ ಪ್ರಯತ್ನಿಸುತ್ತಿದ್ದರೋ, ಆ ಬಗ್ಗೆ ಮಾತನಾಡುತ್ತಾ, ತಮ್ಮನ್ನು ತಾವು ಪ್ರಗತಿಪರರು ಎಂದು ಗುರುತಿಸಿಕೊಳ್ಳುತ್ತಿದ್ದರೋ ಆ ಗಂಡಸರಲ್ಲಿಯೂ ಪ್ರಗತಿಪರತೆಯ ಸ್ಪರ್ಶವೇ ಇರಲಿಲ್ಲ ಎನ್ನುವುದನ್ನು ನಾಯಕಿ ಸಾಬೀತುಪಡಿಸುತ್ತಾಳೆ.’  

Dr. Veena Shanteshwar: ಆ ಗಂಡಸರೆಲ್ಲ ಅವಳಿಂದ ಯಾಕೆ ದೂರ ಸರಿದರು?
ಡಾ. ಎಂ. ಎಸ್. ಆಶಾದೇವಿ ಮತ್ತು ಡಾ. ವೀಣಾ ಶಾಂತೇಶ್ವರ
Follow us on

ಡಾ. ವೀಣಾ ಶಾಂತೇಶ್ವರ | Dr. Veena Shanteshwar : ವೀಣಾ ಅವರ ಕಥೆಯೊಂದರಲ್ಲಿ, ತನ್ನದೇ ಆದ ಆಯ್ಕೆ ಮತ್ತು ವಿನ್ಯಾಸದಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನಾಯಕಿ ಬಯಸುತ್ತಾಳೆ. ಮದುವೆಯಿಲ್ಲದೆಯೇ ತನಗೆ ಮಗು ಬೇಕು ಎಂಬ ಹಂಬಲ ಅವಳದು. ಅವಳ ಸಾಂಗತ್ಯಕ್ಕೆ ಹಾತೊರೆದ ಅನೇಕ ಗಂಡಸರು ಆ ಕಾದಂಬರಿಯಲ್ಲಿ ಬರುತ್ತಾರೆ. ಬಂದವರೆಲ್ಲರೂ ಸಂಬಂಧವಿರಿಸಿಕೊಳ್ಳಲು ಬಯಸುತ್ತಾರೆ. ಆದರೆ ಅಷ್ಟೇ ಬೇಗ ಅವಳ ಆಲೋಚನಾ ಕ್ರಮದಿಂದಾಗಿ ಅವಳ ಸಖ್ಯದಿಂದ ಕಳಚಿಕೊಳ್ಳಲು ನೋಡುತ್ತಾರೆ. ಸಂಬಂಧದ ಹೆಸರಿಲ್ಲದೆ ಮಗು ಬೇಕು ಎಂಬ ನಾಯಕಿಯ ಆಸೆಯನ್ನು ಯಾರೊಬ್ಬರೂ ಪೂರೈಸುವುದಿಲ್ಲ- ವೀಣಾ ಅವರ ಕಥಾನಾಯಕಿಯರನ್ನು ವಿದ್ಯಾವಂತ ಹೆಣ್ಣುಮಕ್ಕಳಲ್ಲಿ ಎಮರ್ಜ್ ಆದ ಒಂದು ಹೊಸ ವ್ಯಕ್ತಿತ್ವ ಎಂದು ಹೇಗೆ ನೋಡುತ್ತೇವೋ, ಇದೇ ಸ್ಥಿತಿ ಪುರುಷಪಾತ್ರಗಳಲ್ಲಿಯೂ ಪ್ರತಿಫಲಿಸಬೇಕಿತ್ತು. ಏಕೆಂದರೆ ಅವರೆಲ್ಲರೂ ವಿದ್ಯಾವಂತರಾಗಿದ್ದರು, ಹೆಣ್ಣಿನ ಹಕ್ಕುಗಳ ಬಗ್ಗೆ ತಿಳಿವಳಿಕೆ ಉಳ್ಳವರಾಗಿದ್ದರು. ತಾರ್ಕಿಕವಾಗಿ ಹೊಸ ಹೆಣ್ಣು ಬೇಕು ಎಂದು ಒಪ್ಪಬಲ್ಲವರಾಗಿದ್ದರು.
ಡಾ. ಎಂ. ಎಸ್. ಆಶಾದೇವಿ, ವಿಮರ್ಶಕಿ

*

ತಾಯ್ತನ ಪ್ರಾಕೃತಿಕ ಹಕ್ಕು. ಅದನ್ನು ಹಕ್ಕೊತ್ತಾಯದಿಂದ ಮಂಡಿಸುವುದಕ್ಕೆ ಹೊರಟ ನಾಯಕಿಯ ಬಗ್ಗೆ ಆ ಪುರುಷಪಾತ್ರಗಳಿಗೆ ಅದೆಷ್ಟು ಗಾಬರಿ! ಇನ್ನು ಅವಳ ಹೆಸರೆತ್ತುವುದೇ ಬೇಡ ಎನ್ನುವ ಮಟ್ಟಕ್ಕೆ ಹೋಗುತ್ತಾರೆ ಎಂದರೆ, ವಿದ್ಯಾವಂತ ಗಂಡು ಮತ್ತು ವಿದ್ಯಾವಂತ ಹೆಣ್ಣಿನ ನಡುವಿನ ಈ ವ್ಯತ್ಯಾಸವನ್ನು ಹೇಗೆ ಚರ್ಚಿಸಬೇಕು? ಈ ಚರ್ಚೆ ನಡೆಯಬೇಕಲ್ಲವಾ?

ಮದುವೆಯ ಹಂಗಿಲ್ಲದೆ ಆಕೆ ತಾಯ್ತನ ಬಯಸಿದ್ದಕ್ಕೆ ಅದನ್ನು ಸಾಮಾಜಿಕ, ನೈತಿಕ ಆಯಾಮಗಳಿಂದ ಚರ್ಚೆ ಮಾಡೋಣ ಬೇಕಿದ್ದರೆ. ನಾಯಕಿ ಹೇಳುತ್ತಾಳೆ, ನಾಳೆ ನಿಮ್ಮನ್ನು ಎಲ್ಲಿಯೂ ಎಳೆದಾಡುವುದಿಲ್ಲ. ಯಾವ ತೊಂದರೆಯನ್ನೂ ಕೊಡುವುದಿಲ್ಲ. ನನ್ನ ಪಾಡಿಗೆ ನಾನು ಮಗುವಿನೊಂದಿಗೆ ಇದ್ದುಬಿಡುತ್ತೇನೆ ಎಂದು. ಯೋಚಿಸುವ ಬದಲು ಗಾಬರಿ ಬೀಳುತ್ತಾರೆ! ಯಾವ ಪಿತೃತ್ವ ಪ್ರಧಾನ ವ್ಯವಸ್ಥೆಯಿಂದ ಹೊರಬರಲು ಅವರೆಲ್ಲಾ ಪ್ರಯತ್ನಿಸುತ್ತಿದ್ದರೋ, ಆ ಬಗ್ಗೆ ಮಾತನಾಡುತ್ತಾ, ತಮ್ಮನ್ನು ತಾವು ಪ್ರಗತಿಪರರು ಎಂದು ಗುರುತಿಸಿಕೊಳ್ಳುತ್ತಿದ್ದರೋ ಆ ಗಂಡಸರಲ್ಲಿಯೂ ಪ್ರಗತಿಪರತೆಯ ಸ್ಪರ್ಶವೇ ಇರಲಿಲ್ಲ ಎನ್ನುವುದನ್ನು ನಾಯಕಿ ಸಾಬೀತುಪಡಿಸುತ್ತಾಳೆ.

ವೀಣಾ ಶಾಂತೇಶ್ವರ ಸಂದರ್ಶನ : Dr. Veena Shanteshwar‘s Birthday: ‘ಹಿಂದೂ-ಮುಸ್ಲಿಂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆರೆತು ಬದುಕಿದ ಅನುಭವ ನಮ್ಮದು’

ಈ ನಾಯಕಿಯನ್ನು ನಾವು ಮೊದಲಗಿತ್ತಿಯಾಗಿ ಚರ್ಚಿಸಬೇಕಿತ್ತಲ್ಲವೆ? ಈ ಕಥೆಯ ಏಳುಬೀಳು, ಸೋಲುಗೆಲುವು, ದೌರ್ಬಲ್ಯ, ಮಿತಿಗಳೇನು? ಅದರ ಶಕ್ತಿ, ಸಾಧ್ಯತೆ, ಹೊಸತನ, ಸಾಹಸದ ಅಗತ್ಯ ಎಂಥದ್ದು? ಇಂಥದೊಂದು ಕನಸನ್ನು, ವಿಚಾರವನ್ನು ನಾಯಕಿ ಕಾಣುತ್ತಾಳೆ ಎಂದಾದರೆ ಅದು ಯಾಕೆ ಆಘಾತ, ಬೆರಗನ್ನು ತಂದಿತು? ಮತ್ತಿದು ನಮ್ಮನ್ನು ಆಂತರಿಕ ಪ್ರಯಾಣಕ್ಕೆ ಎಳೆದುಕೊಳ್ಳಬೇಕಿತ್ತಲ್ಲವಾ? ಈ ಪ್ರಯಾಣ ನಮ್ಮ ಗಂಡಸರಿಗೆ ವ್ಯಾಲ್ಯೂ ಸಿಸ್ಟಮ್ ಆಗಬೇಕಾಗಿತ್ತು. ಹಾಗಿದ್ದರೆ ಗಂಡಸರ ಮನಸ್ಸಿನೊಳಗೆ ಏನೇನು ನಡೆಯುತ್ತಿದೆ? ಇವರು ಎಷ್ಟು ಬೇಕೋ ಅಷ್ಟು ಅನಧೀಕೃತ ಮಕ್ಕಳುಗಳಿಗೆ ಅಪ್ಪಂದಿರು ಆಗಬೇಕಾದರೆ, ಕಥಾನಾಯಕಿ ತನ್ನ ಹಕ್ಕು, ಆಸೆ, ಆಯ್ಕೆಯಿಂದ, ನಿರ್ಧಾರದಿಂದ ಒಂದು ಮಗು ಮಾಡಿಕೊಳ್ಳುವುದು ಯಾಕೆ ಅಪರಾಧವಾಗಿ ಕಾಣಿಸುತ್ತಿದೆ? ಇಲ್ಲಿ ನಿಜವಾದ ಸಂಘರ್ಷವಿದೆ, ಇದನ್ನು ಸಾಹಿತ್ತ್ಯಿಕ ಚರ್ಚೆಗಳ ಮೂಲಕ ಹುಟ್ಟುಹಾಕಬೇಕಿತ್ತು. ವಿಮರ್ಶಾಲೋಕ ಇದನ್ನು ಯಾಕೆ ಗುರುತಿಸಲಿಲ್ಲ?

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Dr. Veena Shanteshwar‘s Birthday: ಅಪೂರ್ಣಗೊಂಡ ಮಾನವಾನುಭವವನ್ನು ವೀಣಾ ಪೂರ್ಣಗೊಳಿಸಿದ್ದಾರೆ