ಟಿವಿ9 ಕನ್ನಡ ಡಿಜಿಟಲ್ ; ಮಳೆ ಬಂತು ಮಳೆ (Rain) ಇಂದಿನಿಂದ ಶುರುವಾಗುವ ಹೊಸ ಸರಣಿ. ಚಿತ್ತಬಂದಂತೆ ಸುರಿಯುತ್ತಿರುವ ಮಳೆಗೆ ಸೃಜನಶೀಲ ಆವರಣ ತೊಡಿಸುತ್ತಾರೆ ಅಕ್ಷರ ಪ್ರಿಯರು. ಅವರವರ ಸ್ಮೃತಿಗೆ ಲಹರಿಗೆ ಧಾರೆಗೆ ಮೌನಕ್ಕೆ ಮುರಿಯುವಿಕೆಗೆ ‘ಮಳೆ’ ಇಲ್ಲಿ ಯಾವ ರೂಪದಲ್ಲಿಯೂ ಹರಿಯುವ ಸಾಧ್ಯತೆ ಇರುತ್ತದೆ. ಕವಿ, ಸಂಘಟಕಿ ರೂಪಾ ಹಾಸನ ‘ಬಾಗಿಲಾಚೆಯ ಮೌನ’ದೊಳಗೂ ‘ಒಂದಿಷ್ಟು ಹಸಿ ಮಣ್ಣು’ ಆಘ್ರಾಣಿಸಿ ‘ತನ್ನಷ್ಟಕ್ಕೆ’ ತಾನಿರದೆ ‘ಗಳಿಗೆಬಟ್ಟಲ ತಿರುವುಗಳಲ್ಲಿ’ ಹರಿದಾಡುತ್ತ ‘ಕಡಲಿಗೆಷ್ಟೊಂದು ಬಾಗಿಲು’ ಎಂದು ಪ್ರಶ್ನಿಸುತ್ತ ‘ಹೇಮೆಯೊಡಲಲ್ಲಿ’ ಮುಳುಗೆದ್ದು ‘ಹೆಣ್ಣೊಳನೋಟ’ಗಳ ಅಸ್ತಿತ್ವದ ಅಲೆಗಳನ್ನು ಹರಡುತ್ತಲೇ ಇರುವ ಕ್ರಿಯಾಶೀಲ ವ್ಯಕ್ತಿತ್ವದವರು. ಉತ್ತರ ಕನ್ನಡದ ರೇಖಾ ಹೆಗಡೆ ಬಾಳೆಸರ ಕೆಲ ವರ್ಷ ಬೆಂಗಳೂರಿನಲ್ಲಿ ಪತ್ರಕರ್ತೆಯಾಗಿ, ಬಾಳಸಂಗಾತಿಯೊಂದಿಗೆ ವಿದೇಶಕ್ಕೆ ಹಾರಿ ಮತ್ತೀಗ ಬೆಂಗಳೂರಿನಲ್ಲಿ ನೆಲೆಸಿ ಕನ್ನಡವನ್ನೇ ಉಸಿರಾಡುತ್ತಿರುವಂಥವರು. ಇವರ ಕಾವ್ಯ-ಪತ್ರ ಸಂವಾದ ನಿಮ್ಮ ಓದಿಗೆ.
*
‘ಕವಿಯಾಗಿ ಮಳೆ -ಇಳೆಯ ಸಂಬಂಧ ಕಾಣುವುದು ಒಂದು ದಿವ್ಯ ಅನುಭೂತಿ. ಆದರೆ ಒಬ್ಬ ಪರಿಸರಪ್ರಿಯಳೂ, ಕಾರ್ಯಕರ್ತಳೂ ಆಗಿ ಮಳೆ ತಂದೊಡ್ಡುತ್ತಿರುವ ಇಂದಿನ ಅವಘಡಗಳನ್ನು ಕಾಣುವಾಗ ತೀವ್ರ ಆತಂಕವಾಗುತ್ತದೆ. ಹವಾಮಾನ ವೈಪರೀತ್ಯಗಳು, ಭೂಮಿ ಬಿಸಿ, ವಿಪರೀತ ಇಂಧನ ಸುಡುವ ಮೂಲಕ ಅನೈಸರ್ಗಿಕವಾಗಿ ಎಲ್ಲೆಂದರಲ್ಲಿ, ಯಾವಾಗೆಂದರೆ ಆಗ, ಮಳೆ ಸುರಿಯುವಂತಾಗಿರುವುದು ಖಂಡಿತ ಭೂಮಿಗೆ ಕ್ಷೇಮಕರವಲ್ಲ. ತನ್ಮೂಲಕ ಪ್ರವಾಹ, ಭೂ-ಗುಡ್ಡ ಕುಸಿತ, ಜನ-ಜೀವ ಹಾನಿಯನ್ನು ಕಾಣುವಾಗ ಮನುಷ್ಯರ ದುರಾಸೆ ಮತ್ತು ಸರ್ಕಾರಗಳ ಪ್ರಕೃತಿಯ ಪರವಲ್ಲದ ಅಭಿವೃದ್ಧಿ ಯೋಜನೆಗಳು ತಂದೊಡ್ಡುತ್ತಿರುವ ವಿಪತ್ತು ನೆನೆದು ಭೂಮಿಗೆ ಇನ್ನು ಹೆಚ್ಚು ಆಯಸ್ಸಿಲ್ಲವೆನಿಸಿ ವಿಷಾದ ಆವರಿಸುತ್ತದೆ.’ ವರ್ತಮಾನದ ತಲ್ಲಣಗಳ ಬಗ್ಗೆ ಯೋಚಿಸುತ್ತ ಸ್ಪಂದಿಸುತ್ತ ಇತ್ತೀಚಿನ ವರ್ಷಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ನೆಲಜಲಕಾಡಿನ ಸಂರಕ್ಷಣೆಗೆ ಹೆಚ್ಚು ತೊಡಗಿಸಿಕೊಂಡಿದ್ದಾರೆ ರೂಪಾ ಹಾಸನ. 2004ರಲ್ಲಿ ಇವರು ಬರೆದ ಕವನ ಇಲ್ಲಿದೆ.
ಹೊತ್ತಲ್ಲದ ಹೊತ್ತಲ್ಲಿ
ಇಳೆಗೆ ಹೊಸರಾಗ ಕಲಿಸುವ ಹುಚ್ಚು
ಯಾಕೆ ಬಂತೋ ಈ ಮಳೆಗೆ?
ಹೊತ್ತು -ಗೊತ್ತು
ಒಂದೂ ಇಲ್ಲದೇ ಹೀಗೆ
ಸುರಿದು ಬಿಡುವುದೇ ಇಳೆಗೆ?
ನಡೆಯುತ್ತಾ ನಡೆಯುತ್ತಾ
ಅರ್ಧದಲ್ಲೇ ಥಟ್ಟನೆ
ಎಲ್ಲಾ ನಿಂತು
ಗಾಳಿ-ನೀರು-ಬೇರುಗಳೆಲ್ಲಾ
ಇಳೆಯೊಂದಿಗೇ
ಮೌನದಾಳದಲಿ ಇಲ್ಲದೇ ಸೋತಿರುವಾಗ
ಇಳೆಗೆ ಹೊಸರಾಗ ಕಲಿಸುವ ಹುಚ್ಚು
ಯಾಕೆ ಬಂತೋ ಈ ಮಳೆಗೆ?
ಬೇಕೋ-ಬೇಡವೋ
ಆಗಲೋ-ಈಗಲೋ
ಎಂದನುಮಾನಿಸುತ್ತಲೇ
ಮೆಲ್ಲಗೆ ಕದ ತೆರೆದು
ಮುಗ್ಧತೆಯಿಂದ ಮಳೆಯ ಕಥೆಗೆ
ಕಿವಿ ನೀಡಿದ್ದ ಇಳೆಗೆ
ಸದ್ದಿಲ್ಲದೇ ರಪರಪನೆ ಬಡಿದು
ತೋಯ್ದು ತೊಪ್ಪೆಯಾಗಿಸಿದ ಮಳೆಗೆ
ಮೀಸೆಯಂಚಿನಲ್ಲೇ ನಗು
ಇಳೆಯನ್ನರಳಿಸಿದ ಬೀಗು!
ಏನೂ ಆಗಿಯೇ ಇಲ್ಲವೆಬಂತೆ
ಮಳೆ ನೀರು ಕೊಡವಿ
ಮಿಂದು ಮಡಿಯುಟ್ಟ ಇಳೆ
ತನ್ನೆದೆಯಾಳದ ಮಾತಿಗೆ
ಜೀವ ಬಂದುದ ನೋಡಿ ಹಿಗ್ಗುತ್ತದೆ
ಹಮ್ಮಿನಲಿ ದೂರ ಸರಿದು ನಿಂತ
ಮಳೆಯ ತಬ್ಬಿ
ನೂರು ಹೊಸರಾಗಗಳ ಹಾಡುತ್ತದೆ
ಕಂಡೂ ಕಾಣದಂತೆ
ಗೆಲುವಿನ ನಗೆ ನಗುತ್ತದೆ!
ಇಳೆಯ ಮೈ ಮನದ ತುಂಬೆಲ್ಲಾ
ಈಗ ಚಿಗುರು ಹೂ – ಹಣ್ಣು!
*
ರೂಪಾ ಅವರ ಆಪ್ತರಾಗವನ್ನು ತೆಕ್ಕೆಗೆಳೆದುಕೊಂಡ ರೇಖಾ, ಈಗ ಹೀಗೆ ಬೆತ್ತಹಿಡಿದು ಗದರಿಸಲಾರಂಭಿಸಿದ್ದು ಯಾಕಿರಬಹುದು?
ಓಯ್ ಮಳೆರಾಯ,
‘ಹೇಗಿರುವೆ’ ಎಂದು ಕೇಳುವುದಿಲ್ಲ. ದಿನಾ ಕಂಡು, ಕೈಬೀಸಿ ಹೋಗ್ತಾ ಇದ್ದೀಯಲ್ಲ. ನೀನು ಈಗ ಮೈದುಂಬಿರುವೆ, ಪೊಗದಸ್ತಾಗಿರುವೆ, ಸೊಕ್ಕಿರುವೆ ಎಂದು ನನಗೆ ಗೊತ್ತು. ಯಾವ ಪತ್ರಿಕೆ ಓದಿದರೂ, ಟೀವಿ ನೋಡಿದರೂ ನಿನ್ನದೇ ಸುದ್ದಿ. ನಮ್ಮೂರು, ನಮ್ಮ ದೇಶ ಮಾತ್ರವಲ್ಲ, ಜಗತ್ತಿನ ತುಂಬ ನಿನ್ನದೇ ಸುದ್ದಿ. ಅಲ್ಲಲ್ಲಿ ಬದುಕನ್ನೇ ಮುಳುಗಿಸಿದ್ದಾನಂತೆ, ಎಲ್ಲೆಲ್ಲೋ ನೆಲವನ್ನು ನುಂಗಿದ್ದಾನಂತೆ, ಇನ್ನೆಲ್ಲೋ ಕಾಡ್ಗಿಚ್ಚನ್ನು ತಣಿಸಿದ್ದಾನಂತೆ. ಅಲಾಲಲಾಲಾ, ಅದೇನು ಆಟ, ಆವೇಶ ನಿನ್ನದು!
ಏನೋ ಗೊತ್ತಿಲ್ಲ, ಬಾಲ್ಯದಿಂದಲೂ ನಿನ್ನ ಜೊತೆ ಒಂಥರಾ ಹೂಬಿಸಿ ಸಂಬಂಧ ನನಗೆ. ವೈಶಾಖ ಮಾಸ ಕಾವೇರಿದ ಹೊತ್ತಿನಲ್ಲಿ ಒಂದಿನ ಇದ್ದಕ್ಕಿದ್ದಂತೆ ಮುತ್ತಿನ ಹನಿ ಚೆಲ್ಲಿ ನೀನು ಹರಡುವ ಮಣ್ಣಿನ ವಾಸನೆ ಬಲು ಪ್ರೀತಿ. ಒಣಗಿ ಭಣಭಣ ಎನ್ನುವ ಗುಡ್ಡಬೆಟ್ಟಗಳು ನೀ ನಗೆ ಚೆಲ್ಲಿದ್ದೇ ಹಚ್ಚಹಸಿರಾಗಿ ಹೊಳೆಯುವುದು ಚಂದ. ಒಂದು ಮಳೆಗೆ ಅರಳುವ ಬಸವನ ಹೂ, ಹಣ್ಣಾಗುವ ಹಲಸು, ಸೂರುಕಾಲು ನೀರು, ಬೆಟ್ಟದಿಂದ ಬಳುಕುತ್ತ ಬರುವ ಭಾಗೀರಥಿ, ನೆಲದಲ್ಲಿ ಬುಳುಬುಳು ಏಳುವ ಒರತೆ ಎಲ್ಲ ಇಷ್ಟ. ಆದರೆ ಮೈಯೆಲ್ಲ ಒದ್ದೆ, ಥಂಡಿ ಮಾಡುವ ನಿನ್ನ ತೇವಾಂಶ, ಮುಗ್ಗಲು ಕಂಪು, ಹಸಿ ಇದ್ದಲ್ಲಿ ಹುಟ್ಟಿಕೊಳ್ಳುವ ಶಿಲೀಂಧ್ರ, ಹಾವಸೆ ಎಲ್ಲ ನೆನಪಾದೊಡನೆ ಮೈ ಜೀಕರಿಸುತ್ತದೆ. ನಿನ್ನ ನೆಪದಲ್ಲಿ ಹೊಡತಲ ಬೆಂಕಿ ಎದುರು ಕೂತು ಸುಟ್ಟು ತಿನ್ನುವ ಗೇರುಬೀಜ, ಹಲಸಿನ ಬೇಳೆ ಎಷ್ಟು ಇಷ್ಟವೋ, ನೀ ರಚ್ಚೆ ಹಿಡಿದು ಹೊಯ್ಯುವಾಗ ನಾಲ್ಕು ದಿನವಾದರೂ ಒಣಗದ ಬಟ್ಟೆ, ಅಂತೂ ಒಣಗಿದರೂ ಅವುಗಳಿಂದ ಹೊಮ್ಮುವ ಬೆಕ್ಕಿನ ಉಚ್ಚೆ ತರಹದ ವಾಸನೆ ಅಷ್ಟೇ ಕಿರಿಕಿರಿಯ ವಿಷಯ. ನೀ ನೆಲಕ್ಕೆ ತಾಕಿದ್ದೇ ಪುತುಪುತು ಎದ್ದುಬರುವ ಅಣಬೆಗಳು ಆಪ್ಯಾಯಮಾನವಾದರೆ, ನಿನ್ನ ಹಸಿಗೆ ಹುಟ್ಟಿಕೊಳ್ಳುವ ಉಂಬಳಗಳು ಅಸಹ್ಯ.
ರೂಢಿಯಲ್ಲಿ ‘ಮಳೆರಾಯ’ ಎಂದು ಸಂಬೋಧಿಸಿದರೂ ಒಮ್ಮೊಮ್ಮೆ ನೀನು ಗಂಡಾ, ಹೆಣ್ಣಾ ಎಂದು ಅನುಮಾನ ನನಗೆ. ನಮ್ಮ ಬೇಕು, ಬೇಡ ನೋಡದೇ ನಿನಗೆ ಬೇಕಾದಂತೆ ನೀನು ನಡೆಯುವಾಗ, ನಿನ್ನ ದರ್ಪವನ್ನು ನಮ್ಮ ಮೇಲೆ ಹೇರುವಾಗ ಪುರುಷಾಧಿಕಾರದ ಅಹಮಿಕೆ ಕಾಣುತ್ತದೆ. ಆದರೆ ಬೆಂದ ಭೂಮಿಗೆ ನೀರುಣಿಸಿ ಹಸಿರು ಚಿಗುರಿಸುವಾಗ, ಬಾನಲ್ಲಿ ಏಳು ಬಣ್ಣಗಳ ರಂಗೋಲಿ ಇಡುವಾಗ, ಧರೆಗಿಳಿದು ಹಳ್ಳಕೊಳ್ಳಗಳಲ್ಲಿ ಬಳುಕುತ್ತ ಹರಿಯುವಾಗ ಹೆಣ್ಣು ಎನಿಸುತ್ತದೆ. ನಮ್ಮ ಪುರಾಣಗಳಲ್ಲಿ ನೀನು ಪುರುಷರೂಪಿ, ವರುಣದೇವ. ಇಂದ್ರ ನಿನ್ನ ಅಧಿದೇವತೆ. ಆದರೆ ಜಗತ್ತಿನ ಹಲವಾರು ಸಂಸ್ಕೃತಿಗಳಲ್ಲಿ ನೀನು ಸ್ತ್ರೀರೂಪಿ ದೇವಿ. ಮಳೆರಾಯನೋ, ಮಳೆಮಾಯಿಯೋ… ಎಲ್ಲರಿಗಂತೂ ಬೇಕು.
ಒಂದೊಂದು ಸಲ ಬರುವಾಗ ಒಂದೊಂದು ಲಹರಿ ನಿನ್ನದು. ಬಿಸಿಲ ಬೇಗೆಗೆ ಬೇಯುತ್ತಿರುವ ಹೊತ್ತಿನಲ್ಲಿ ಒಮ್ಮೊಮ್ಮೆ ಹೂಮಳೆ ಸುರಿಸಿ ವಾತಾವರಣದ ಮೂಡ್ ಅನ್ನೇ ಬದಲಾಯಿಸಿ ಬಿಡುತ್ತೀಯ. ಹೂಮುತ್ತಿನಂಥ ಆ ತೇವ, ಹಸಿ ಹಸಿ ಹನಿ ಬಿದ್ದಾಗ ದೂಳಿನ ಕಣಗಳಿಂದ ಏಳುವ ಅಮೋಘ ಪರಿಮಳ ಅದೆಷ್ಟು ಆಹ್ಲಾದಕರ! ಶುರುವಿನಲ್ಲಿ ಭಾರಿ ಆರ್ಭಟ, ಆಡಂಬರ ನಿನ್ನದು. ಗುಡುಗು, ಮಿಂಚು, ಆಲಿಕಲ್ಲು…. ಹಿಮ್ಮೇಳ, ಮುಮ್ಮೇಳ, ಬಾಜಾ ಭಜಂತ್ರಿ ಎಲ್ಲ ಬಡಿವಾರ ಬೇಕು ನಿನಗೆ. ಕೆಲವೊಮ್ಮೆ ಗಾಳಿಯ ಜೊತೆ ಸೇರಿಕೊಂಡು ಒಂದ್ಸಲ ಅತ್ಲಾಗೆ, ಇನ್ನೊಂದ್ಸಲ ಇತ್ಲಾಗೆ ಒಳ್ಳೆ ತೆಳ್ಳನೆಯ ಪರದೆಯ ತರಹ ಓಲಾಡಿಕೊಂಡು ಇರ‍್ತೀಯ. ಒಂದೊಂದು ಸಲ ‘ಭರ್’ ಎಂಬ ಹಿಮ್ಮೇಳದೊಂದಿಗೆ ನೀ ಕುಣಿಯುತ್ತಿದ್ದರೆ ಯಕ್ಷಗಾನ ನೋಡಿದ ಅನುಭವ. ಮುಗಿಲು, ನೆಲ ಎಂಬ ಬೇಧ ಮಾಯವಾಗಿ ಅದು ಕರಗಿ ಇದರೆಡೆ ಹರಿದು ಬಂತೇನೋ… ಇಲ್ಲ ಎರಡೂ ಆವಿಯಾಗಿ ಒಂದರ ಜೊತೆಗೊಂದು ಮಿಳಿತವಾಗುತ್ತಿವೆಯೇನೋ ಎಂಬಂತಹ ಭ್ರಮೆ. ಆದರೂ ನಿನ್ನ ಅಡ್ಡಡ್ಡ ಚಲನೆಗೆ ಮಾರಾಯ… ಯಾವ ಛತ್ರಿಯೂ ಸಾಕಾಗುವುದಿಲ್ಲ. ಒಮ್ಮೊಮ್ಮೆ ಲಯಭರಿತವಾಗಿ ನೆಲವನ್ನು ಚುಂಬಿಸುತ್ತ ‘ಪುಳಕ್ ಪುಳಕ್’ ಸದ್ದಿನೊಂದಿನ ಮಳೆ ಪುಗ್ಗಿ ಮೂಡಿಸುತ್ತಿದ್ದರೆ ಯಾವುದೋ ಜಾನಪದ ನೃತ್ಯ ನೋಡಿದ ಭಾವ. ಕೆಲವೊಮ್ಮೆ ಮಾತ್ರ ಮುಗಿಲೂರಿಂದ ನೆಲದೂರಿಗೆ ಸೀದಾ ಬಾಣ ಬಿಟ್ಟ ಹಾಗೆ ಧಪಧಪ ಬಂದು ಬೀಳುತ್ತಿದ್ದರೆ ಕೆನ್ನೆಗೆ ರಾಚಿದಂತಾಗುತ್ತದೆ. ಅಂಥ ಅಬ್ಬರಕ್ಕೆ ಮೇಲ್ಮಣ್ಣು ಪೂರ್ತಿ ಕೊಚ್ಚಿ ಹೋಗುತ್ತದೆ ಮಾರಾಯ… ನಿನ್ನ ಹಾಗೆ ಹರಿದು ಸಮುದ್ರ ಸೇರಿ ಆವಿಯಾಗಿ ಮತ್ತೆ ವಾಪಸ್ ಬರುವ ವಸ್ತು ಅಲ್ಲ ಅದು. ಒಮ್ಮೆ ಹೋದರೆ ಹೋಯಿತು. ಸ್ವಲ್ಪ ನಯ, ನಾಜೂಕು ಇರಲಿ.
ನಾವು ಮನುಷ್ಯರು… ಹೀಗೆ ಮಾತಿನ ಲಹರಿಯಲ್ಲಿ ‘ಒಮ್ಮೆ ಅತಿವೃಷ್ಟಿ, ಒಮ್ಮೆ ಅನಾವೃಷ್ಟಿ’ ಅಂತ ಬಣ್ಣನೆ ಮಾಡುತ್ತೇವೆ. ಅದರೆ ನೀ ನಿಜಕ್ಕೂ ಹಾಗೆಯೇ ಆಡುತ್ತೀಯಲ್ಲ! ಒಮ್ಮೊಮ್ಮೆ ವರ್ಷಗಟ್ಟಲೆ ಕಾಣಿಸುವುದೇ ಇಲ್ಲ, ಅದೆಲ್ಲಿ ದೇಶಾಂತರ ಹೋಗುತ್ತೀಯೋ ಏನೋ. ಒಂದು ಪತ್ರ ಇಲ್ಲ, ಉತ್ತರ ಇಲ್ಲ. ಮೇಘಸಂದೇಶವಾದರೂ ಕಳಿಸ್ತೀಯ… ಅದೂ ಇಲ್ಲ. ನಿನ್ನ ನಿರೀಕ್ಷೆಯಲ್ಲಿ ಕತ್ತೆತ್ತಿ ಆಕಾಶ ನೋಡಿದರೆ ಕಾಣುವುದು ಖಾಲಿ ಖಾಲಿ ಬಿಳಿ ಮೋಡ. ಅದೂ ಹತ್ತಿಯಂತೆ ಹಾರಿ ಚದುರಿ ಹೋಗುತ್ತಿರುತ್ತದೆ. ಜನ ಕಪ್ಪೆ ಮದುವೆ, ಕತ್ತೆ ಮದುವೆ ಏನೇನೋ ಮಾಡ್ತಾರೆ. ನೀ ಮಾತ್ರ ಯಾವ ಮದುವೆಗೂ ಹಾಜರಾಗುವುದಿಲ್ಲ.
ಮತ್ತೊಂದಿಷ್ಟು ಸಲ ನೋಡು, ಚಾಪೆ, ದಿಂಬು ಸಮೇತ ಬಂದು ತಂಬು ಹೂಡಿ ಕುಂತು ಬಿಡುತ್ತೀಯೆ… ವಾರ ಎರಡಾದರೂ ಹೋಗುವ ಮಾತೇ ಇಲ್ಲ. ಬಂದ ದಾರಿಯೇ ಮರೆತುಹೋಯ್ತೇನೋ ಎಂಬಂತೆ ಎಡಬಿಡದೇ ಧಪಧಪ ಹೊಯ್ತಾನೇ ಇರ‍್ತೀಯೆ. ಒಂಚೂರು ಸೂರ್ಯನ ಮುಖ ಸಹಿತ ಕಾಣದಂತೆ ಭುವಿಗೂ ಬಾನಿಗೂ ನಡುವೆ ಪರದೆಯಂತೆ ಹರಡಿಕೊಳ್ತೀಯೆ. ನಿನ್ನ ರಭಸ ನೋಡಿದರೆ ಆಕಾಶದ ಮಾಡು ತೂತಾಗಿದೆಯೇನೋ ಎಂಬ ಅನುಮಾನ ಮೂಡುತ್ತದೆ. ನಮ್ಮೂರಲ್ಲಿ ಮೊದಲು ಜನ ನಿನ್ನ ಕೃಪೆಗಾಗಿ ಅರೆ ಬತ್ತಿದ ಹೊಳೆಯಿಂದ ನೀರು ತಂದು ಶಿವಲಿಂಗಕ್ಕೆ ಸುರಿದು ಪರ್ಜನ್ಯ ಮಾಡಿದ್ದರು. ಈಗ ನಿನ್ನ ಔದಾರ್ಯ ಅತಿಯಾಗಿ ಅದೇ ಹೊಳೆಯ ನೀರು ಶಿವಲಿಂಗವನ್ನು ತೋಯಿಸಿ ಹೋಗುತ್ತಿದೆಯಂತೆ. ಅತ್ತ ಉತ್ತರ ಕರ್ನಾಟಕದ ಸ್ಥಿತಿ ನೋಡು. ಈಗೊಂದಿಷ್ಟು ವರ್ಷದಿಂದ ನೀನು ಯಾವ ಪರಿ ಆಟ ಆಡಿಸ್ತಿದ್ದೀಯೆ ಎಂದರೆ ಅಲ್ಲಿ ಯಾವಾಗಲೂ ಬರಗಾಲ, ಇಲ್ಲಿ ನೆರೆಗಾಲ. ಜನ ಸುರಿಸಿದ ಕಣ್ಣೀರು ನೆಲಕ್ಕೆ ತಾಗುವುದಿಲ್ಲ, ಒಂದೋ ಅಲ್ಲಿನ ಬಿಸಿಲಿಗೆ ಆವಿಯಾಗಿ ಹೋಗುತ್ತದೆ. ಇಲ್ಲ ನಿನ್ನೊಡಲ ಸೇರಿ ನೆರೆನೀರಲ್ಲಿ ಕೊಚ್ಚಿಹೋಗುತ್ತದೆ. ಕಬ್ಬಿನ ಗದ್ದೆ, ಹತ್ತಿ ಹೊಲ, ಹಟ್ಟಿ ಕೊಟ್ಟಿಗೆ ಸಾಲದೂಂತ ಜನರ ಬದುಕನ್ನೇ ತೊಳೆದುಕೊಂಡು ಹೋಗುತ್ತಿದ್ದೀಯಲ್ಲ ನೀನು! ಇದು ನ್ಯಾಯವಾ?
ನಿನ್ನ ಚಂಚಲತೆಯ ಖಾಸಗಿ ಅನುಭವ ಸಾಕಷ್ಟಿದೆ. ಬಾಲ್ಯದ ದಿನಗಳಲ್ಲಿ ಎರಡೆರಡು ವರ್ಷ ಸತತವಾಗಿ ನಮ್ಮೂರಿಗೆ ಮುಖ ತೋರಿಸಲಿಲ್ಲ ನೀನು. ಅಪ್ಪ ಆಗ ಅರೆಬಯಲು ಸೀಮೆಯ ಮುಂಡಗೋಡದಲ್ಲಿ ಜಮೀನು ಮಾಡುತ್ತಿದ್ದ. ಆ ವರ್ಷ ಬಿತ್ತಿದ್ದ ಭತ್ತ ಎಲ್ಲ ನೆಲದಲ್ಲೇ ಕಮರಿ ಹೋಯಿತು. ಬೆಳೆಯೇ ಇಲ್ಲ. ಎರಡನೆಯ ವರ್ಷವೂ ಭತ್ತ ಮೊಳೆಯದೇ ಬಿತ್ತನೆ ಮಾಡಿದ್ದ ಗದ್ದೆಯನ್ನು ಮತ್ತೆ ಹೂಡಿ ಅಲ್ಲಿ ಹುರುಳಿ ಹಾಕಿದ, ದನಕರುಗಳಿಗಾದರೂ ಮೇವಾಗಲಿ ಎಂದು. ನಿನ್ನ ಮುನಿಸಿನ ಕಾರಣ ಅದೂ ನೆಟ್ಟಗೆ ಬೆಳೆಯಲಿಲ್ಲ. ಮೂರನೆಯ ಮಳೆಗಾಲದ ಹೊತ್ತಿಗೆ ಅಪ್ಪ ಹುಷಾರಾಗಿದ್ಶಾದ. ಆ ಸಲವೂ ನೀನು ಕೈಕೊಟ್ಟರೆ…. ಎಂದುಕೊಂಡು, ಕಡಿಮೆ ನೀರು ಬೇಡುವ ಹತ್ತಿ ಬೆಳೆಯಲು ಮುಂದಾದ. ಬೀಜ ಬಿತ್ತಿ ನಾಲ್ಕು ಕುಡಿ ಒಡೆದಿದ್ದವಷ್ಟೇ. ಇದ್ದಕ್ಕಿದ್ದಂತೆ ಅವತರಿಸಿದ ನೀನು ಝಂಡಾ ಊರಿ ಕುಂತೇಬಿಟ್ಟೆ. ವಾರದ ಮೇಲೆ ನಿನ್ನ ಆರ್ಭಟ ಇಳಿಯುವ ಹೊತ್ತಿಗೆ ಹತ್ತಿಗಿಡ ಕೊಳೆತು ನೆಲಕಚ್ಚಿದ್ದವು. ಅಪ್ಪನ ಬಯಲುಸೀಮೆ ಜೀವನ ಪೂರ್ತಿ ನಿನ್ನ ಕಾರುಣ್ಯಭಿಕ್ಷೆಯ ಮೇಲೆಯೇ ಕಳೆದುಹೋಯಿತು. ಈಗ ಅಂತೂ ಮಲೆನಾಡಿಗೆ ಮರಳಿ ತೋಟ-ತಡಿಕೆ ಮಾಡಿಕೊಂಡು ಜೀವನ ನಡೆಸುತ್ತಿರೋ ಹೊತ್ತಿನಲ್ಲಿ ಈ ವರ್ಷ ನೀನು ಮುಗಿಲು ಹರಿದುಕೊಂಡು ಸುರಿದ ಪರಿಣಾಮ ನಮ್ಮೂರ ಅಘನಾಶಿನಿ ನದಿ ಉಕ್ಕೇರಿ ತೋಟ ತೊಳೆದುಕೊಂಡು ಹೋದಳಂತೆ. ಎಂಥ ಮಳೆರಾಯನೋ, ‘ಮನಬಂದ ರಾಯ’ನೋ ನೀನು!? ಕಾಫಿ ಹೂ ಅರಳಿದಾಗ ಮಾಯವಾಗಿ, ಹತ್ತಿ ಅರಳಿಕೊಂಡಾಗ ಹಾಜರಾಗುತ್ತೀಯೆ. ಭತ್ತ ತೆನೆಕಟ್ಟುವಾಗ ಬಾ ಎಂದರೆ ಆ ತೆನೆ ಬಲಿತು ಕೊಯಿಲು ಮಾಡುವಾಗ ಬಂದು ಕಾಟ ಕೊಡುತ್ತೀಯೆ. ಈಗೀಗಂತೂ ಯಾವಾಗ ಬರುತ್ತೀಯೋ, ಏನೆಲ್ಲ ಮಾಡುತ್ತೀಯೋ ಅಂದಾಜು ಮಾಡುವುದೇ ಕಷ್ಟವಾಗಿದೆ.
ಏನೇ ಆದರೂ ಜನ ನಿನ್ನ ಭಾರಿ ಅಭಿಮಾನಿಗಳಪ್ಪ. ನಿನ್ನ ಒಂದೊಂದು ಬರುವಿಗೂ ನಕ್ಷತ್ರಗಳ ಹೆಸರಿಟ್ಟು ಹಬ್ಬ ಮಾಡುವುದೇನು, ಹಾಡು ಕಟ್ಟಿ ಹೊಗಳುವುದೇನು, ರಾಗಗಳಿಗೆ ನಿನ್ನ ಹೆಸರಿಟ್ಟು ಹಾಡುವುದೇನು…. ಗಾದೆ, ನುಡಿಗಟ್ಟು, ಕಾವ್ಯ, ಕಾದಂಬರಿ ಎಲ್ಲ ಕಡೆ ನಿನ್ನ ಪ್ರಸ್ತಾಪ ಬರಲೇಬೇಕು. ಆಷಾಢದ ಜಡಿ, ಶ್ರಾವಣದ ಸೋನೆ, ವರ್ಷಾ ಋತು, ಮಳೆ ಮೋಡ, ಕಾರ್ಮುಗಿಲು… ಇವನ್ನು ಭೂಮಿಕೆಯಾಗಿಟ್ಟುಕೊಂಡು ಬರೆದ ಕವಿಗಳೆಷ್ಟೋ, ಹುಟ್ಟಿದ ಕಾವ್ಯಗಳೆಷ್ಟೋ! ಆದರೆ ನನ್ನ ಪ್ರಕಾರ ಈ ಎಲ್ಲದಕ್ಕಿಂತ ಉತ್ಕೃಷ್ಟ ಕಾವ್ಯ ನೀನೇ! ಪ್ರಕೃತಿ ಬರೆದ ಮಾಸ್ಟರ್‌ಪೀಸ್ ನೀನು!
ಜನಪದರ ಲಾವಣಿ, ಚೌಡಿಕೆ, ಗೀಗೀ ಪದಗಳಿಂದ ಹಿಡಿದು, ಸಿನಿಮಾ ಕಿರುತೆರೆವರೆಗೂ ನಿನ್ನ ಹರವು ಉಂಟು. ‘ಮೇಘದೂತ’ದಿಂದ ಹಿಡಿದು ‘ಮುಂಗಾರು ಮಳೆ’ಯವರೆಗೆ, ಸಾನೆಟ್‌ನಿಂದ ಹಾಯ್ಕುವರೆಗೂ ಎಲ್ಲೆಲ್ಲೂ ನೀನೇ. ನೀನಿದ್ದಲ್ಲಿ ಕವಿತೆ ಹುಟ್ಟುವುದು, ನೀನಿದ್ದರೆ ಕಳೆಕಟ್ಟುವುದು, ನೀನಿದ್ದಾಗ ಕತೆಗೊಂದು ತಿರುವು, ತಾಳಕ್ಕೊಂದು ತೀವ್ರತೆ ಸಿಗುವುದು. ಬೇಕಾದರೆ ನೋಡು… ಬಿರುಬಿಸಿಲಿನಲ್ಲಿ ಬಾಡಿದ ಮುಖ ಹೊತ್ತು ನಿಂತ ನಾಯಕ/ಕಿಗಿಂತ, ರಪ್ಪಂತ ರಾಚುವ ಮಳೆಯಲ್ಲಿ ಹೊರಗಿನ ಹನಿಗೆ, ಒಳಗಿನ ದುಃಖಕ್ಕೆ ತೋಯ್ದು ತೊಪ್ಪೆಯಾಗುವ ಪಾತ್ರವೇ ನೋಡುಗರ ಹೃದಯಕ್ಕೆ ಹತ್ತಿರವಾಗುವುದು. ಪಾತ್ರವೊಂದರ ನಗು-ಖುಷಿ, ದುಃಖ ದುಮ್ಮಾನದಲ್ಲಿ ಮಳೆಯೂ ಮಿಳಿತವಾಗಿದ್ದರೆ ಅದಕ್ಕೊಂದು ಭಾವತೀವ್ರತೆ ಮೂಡುವುದು. ಕತೆಯಲ್ಲಿ ಶ್ರಾವಣದ ಮಳೆಯೂ ಒಂದು ಪಾತ್ರವಾದೊಡನೆ ಅದಕ್ಕೆ ತಂತಾನೇ ಒಂದು ರಮ್ಯ ಚೌಕಟ್ಟು ಒದಗುವುದು. ಮದುವೆ ಮನೆಯಲ್ಲಿ ಒಂದ್ನಾಲ್ಕು ಹನಿ ಹೂಮಳೆ ಸುರಿದರೆ ದೇವತೆಗಳು ಅಕ್ಷತೆ ಹಾಕಿದಂತೆ ಭಾಸವಾಗುವುದು. ಅಟ್ಟಲಲ್ಲಿ ಬಟ್ಟೆ, ಹಪ್ಪಳ-ಸಂಡಿಗೆ ಒಣಹಾಕಿದಾಗ ಅಕಸ್ಮಾತ್ ಮಳೆ ಬಂದರೆ ‘ಮಿಂಚಿನ ಸಂಚಾರ’ದ ಸಾಕ್ಷಾತ್ ದರ್ಶನವಾಗುವುದು. ಸೋಮಾರಿ ಸಂಜೆಯಲ್ಲೊಂದು ಅಬ್ಬರದ ಮಳೆ ಬಂತೆಂದರೆ ಜಿಹ್ವಾಚಾಪಲ್ಯ ಭುಗಿಲೆದ್ದು ಅಡುಗೆಮನೆಯಲ್ಲಿ ಭಜ್ಜಿ-ಬೋಂಡಾ ಬೇಯುವುದು.
ಬಲು ಬಲಶಾಲಿ ನೀನು. ಕಲ್ಲಂಥ ಕಲ್ಲನ್ನು ಕರಗಿಸುವ ಶಕ್ತಿ ಇದೆ ನಿನಗೆ. ಸಾವಿರಾರು ವರ್ಷಗಳಿಂದ ಧಿಮ್ಮನೆ ನಿಂತ ಗುಡ್ಡವೊಂದು ಏಕಾಏಕಿ ಕುಸಿದು ನಿನ್ನೊಡಲಲ್ಲಿ ಕದಡಿ ಹೋಗುವಂತೆ ಮಾಡುವ ತಾಕತ್ತು ಒಂದೆಡೆಯಾದರೆ ಬದುಕಿನ ಲವಲೇಶವೂ ಇರದಂತೆ ಒಣಗಿ ಬಿರಿದು ಬಾಯ್ತೆರೆದುಕೊಂಡ ನೆಲದಲ್ಲಿ ಹಚ್ಚ ಹಸಿರು ಚಿಗುರಿಸುವ ಕ್ಷಮತೆ ಇನ್ನೊಂದೆಡೆ. ಮನುಷ್ಯರೂ ಸೇರಿದಂತೆ ಎಲ್ಲ ಪ್ರಾಣಿಪಕ್ಷಿ, ಜೀವಜಂತುಗಳ ಜೀವ ನಿನ್ನ ಮುಷ್ಟಿಯಲ್ಲಿ, ನಿನ್ನ ಔದಾರ್ಯದಲ್ಲಿ ಅಡಗಿದೆ. ನೂರಾರು ವರ್ಷ ಮೆರೆದ ಹಲವು ನಾಗರಿಕತೆಗಳನ್ನೇ ಹೊಸಕಿ ಹಾಕಿರುವ ನೀನು, ಮರುಭೂಮಿಯಲ್ಲಿ ಬರೀ ಒಂದರ್ಧ ಗಂಟೆ ಸುರಿದು ಹೂವಿಗೆ, ಹಸಿರಿಗೆ, ಹೊಸ ಹುಟ್ಟಿಗೆ ಭಾಷ್ಯ ಬರೆಯುತ್ತೀಯೆ. ಬೇರಾವ ಗ್ರಹದಲ್ಲಿ ಇರದ, ಭೂಮಿಗೆ ಅನುಗ್ರಹಿಸಿದ ವರ ನೀನು. ಆಲಿಕಲ್ಲಾಗಿ ಚಚ್ಚುತ್ತೀಯೆ… ಹನಿಹನಿಯಾಗಿ ತಂಪೆರೆಯುತ್ತೀಯೆ… ನೀರಾಗಿ ನದಿಯಾಗಿ ಜೀವ ತುಂಬುತ್ತೀಯೆ… ಹೊರಗೆ ಸೋನೆಯಾಗಿ ಒಳಗೆ ಸುಮ್ಮಾನವಾಗಿ ಆರ್ದ್ರಗೊಳಿಸುತ್ತೀಯೆ.
ನಿಜಕ್ಕೂ, ‘ಏನು ನಿನ್ನ ಹನಿಗಳ ಲೀಲೆ?!’
ನಿನಗೆ ಶರಣು
ರೇಖಾ
(ನೀವೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕೆ? ಖಂಡಿತ ಬರೆಯಿರಿ. ಇ-ಮೇಲ್ tv9kannadadigital@gmail.com)
ಇದನ್ನೂ ಓದಿ : Rain : ಮಳೆ ಬಂತು ಮಳೆ : ನಾ ಹೋತೆ ಒಡೆಯಾ, ಕಮಲೀನಾ ನಾ ಕರಕಂಡೇ ಬತ್ತೆ