ಋತುವಿಲಾಸಿನಿ | Rutuvilaasini : ‘ಈ ಭಾವ ಮೆಲ್ಲಗೆ ಕುಡಿಯೊಡೆದ ಕಾಲ ಯಾವುದು ಎನ್ನುವುದು ಈ ಘಟ್ಟದಲ್ಲಿ ನಿಂತು ನೋಡಿದಾಗ ಕಾಣಿಸುತ್ತಿಲ್ಲ. ಕುಡಿಯೊಡೆದದ್ದು ಧೃಡವಾದದ್ದು ಮಾತ್ರ ನೆನಪಿದೆ. ಉಂಡುಟ್ಟು ನೆಮ್ಮದಿಯಾಗಿರುವ ನನ್ನ ಈ ಪರಿಸರದಲ್ಲಿ ಈ ಕುದಿ ಕೊರಗುಗಳೆಲ್ಲವೂ ಗುಂಪಿಗೆ ಸೇರದ ಪದಗಳು. ಬರೆಯುವವರೆಂದರೆ ತುಸು ಮರ್ಲು ಸ್ವಭಾವದವರು ಎನ್ನುವುದನ್ನು ನಿತ್ಯ ಕೇಳಿಸಿಕೊಳ್ಳುತ್ತಲೇ ತಳೆದವಳು ನಾನು. ಎಂಟು ವರ್ಷಗಳ ಹಿಂದೆ ಆರಂಭವಾದ ಅಕ್ಷರ ಸಖ್ಯ ಸಂಭ್ರಮದಷ್ಟೇ ಸಂಕಟವನ್ನೂ ಕೊಟ್ಟಿದೆ ಎಂದರೆ ಅಂಥದ್ಯಾಕೆ ಬೇಕು ಎನಿಸುವ ಸಹಜೀವಿಗಳ ಜೊತೆಗೆ ಬದುಕುತ್ತಿರುವ ನನಗೆ ಬರವಣಿಗೆ ನನ್ನ ನಾನು ಕಳೆದುಕೊಳ್ಳಲು ಬೇಕಿರುವ ಅನಿವಾರ್ಯ ತುರ್ತು.’ ಹೀಗೆನ್ನುವ ನಂದಿನಿ ಹೆದ್ದುರ್ಗ (Nandini Heddurga) ಸಕಲೇಶಪುರದ ಬಳಿ ಇರುವ ಹೆದ್ದುರ್ಗದವರು. ಕಾಫಿ ಬೆಳೆಗಾರ್ತಿಯಾಗಿರುವ ಇವರಿಗೆ ಅಕ್ಷರಲೋಕವೇ ಆಮ್ಲಜನಕ, ಆತ್ಮಸಂಗಾತ. ಇಂದಿನಿಂದ ಶುರುವಾಗುತ್ತಿರುವ ಇವರ ಅಂಕಣ ಋತುವಿಲಾಸಿನಿ ಹದಿನೈದು ದಿನಕ್ಕೊಮ್ಮೆ (ಮಂಗಳವಾರ) ಪ್ರಕಟವಾಗುತ್ತದೆ. ಅಂಕಣದ ಆಶಯ ಇಲ್ಲಿದೆ.
ಬಾಲ್ಯದಿಂದಲೂ ಮಣ್ಣು ಮರ ಹುಳ ಹಾವು ಎಲ್ಲದರ ಮೇಲೂ ವಿಪರೀತ ಎನಿಸುವಷ್ಟು ಮಮಕಾರ. ಎರಡನೇ ತರಗತಿಯಲ್ಲಿದ್ದಾಗ ಗುಬ್ಬಚ್ಚಿ ಮರಿ ಬೇಟೆಗಾರನ ಬಲೆಗೆ ಸಿಕ್ಕಿಬಿದ್ದ ಪಾಠ ಓದಿಸಲು ಅಪ್ಪ ಅಂಗಳದ ಕಲ್ಲುಬೆಂಚಿನ ಮೇಲೆ ಕೂರಿಸಿಕೊಂಡ ಘಳಿಗೆ ನೆನಪಾಗುತ್ತಿದೆ. ಪಕ್ಕದಲ್ಲೊಂದು ಸಣ ಬಿದಿರಿನ ಸಣಿಕೆ ಇಟ್ಟುಕೊಂಡಿದ್ದ ಅಪ್ಪನೆದಿರು ಪಟಪಟ ಪಾಠ ಓದುತ್ತಾ ಹೋದವಳು ಎರಡನೇ ಪುಟಕ್ಕೆ ಬರುವಷ್ಟರಲ್ಲಿ ಧ್ವನಿ ಹೊರಡದೆ ತಗ್ಗಿದ್ದ ಕೊರಳು ಎತ್ತಲಾಗದೇ ಬಿಕ್ಕಳಿಸಿದ ಹನಿಗಳು ಪುಸ್ತಕವನ್ನು ಒದ್ದೆಯಾಗಿಸಿದ್ದವು.
ಅಪ್ಪನಿಗೆ ಅಚ್ಚರಿಯ ಜೊತೆಗೆ ಕೋಪ. ಓದಲಾಗದೇ ಚಾಲು ಮಾಡುತ್ತಿರುವ ಮಗಳಿಗೆ ಬಾರಿಸಲು ಸಣಿಕೆ ಎತ್ತಿದ್ದೇ ಬಿಕ್ಕುತ್ತ ‘ಗುಬ್ಬಚ್ಚಿ ಮರಿ ಬಲೆಯೊಳಗೆ ಬೀಳಬಾರದು’ ಎಂದಿದ್ದೆ. ಅಷ್ಟು ಉತ್ತರಿಸುವುಷ್ಟರಲ್ಲಿ ಪುಟಾಣಿ ಮನದೊಳಗೆ ಬಲೆಯೊಳಗೆ ಸಿಕ್ಕಿದ ಗುಬ್ಬಿಮರಿಗಳ ನೋವು ವ್ಯಾಪಿಸಿಕೊಂಡಾಗಿತ್ತು. ನಾಸ್ಟಾಲ್ಜಿಕ್ ಆಗಬಾರದು ಎನ್ನುವ ಯಾವ ತಿಳಿವಳಿಕೆಯೂ ಆ ಕ್ಷಣ ನಾನು ಲೋಕದ ಜೀವಿಗಳಿಗಾಗಿ ತಳಮಳಿಸಿದ ಸುಖದ ನೋವನ್ನು ಕಿತ್ತುಕೊಳ್ಳಲಾರದು. ಇವತ್ತಿಗೂ ಗುಬ್ಬಮ್ಮಗಳು ನನ್ನೊಂದಿಗೆ ಸ್ನೇಹ ಬಿಟ್ಟಿಲ್ಲ.
ಮಣ್ಣಿನ ಪ್ರೇಮ ಜೀವಗಳ ಪ್ರೇಮ ನನ್ನನ್ನು ಭಿನ್ನ ವ್ಯಕ್ತಿಯಾಗಿಸಿದೆ ಎನ್ನುವುದು ನನ್ನ ದೃಢವಾದ ನಂಬಿಕೆ. ಇದೆಲ್ಲವೂ ಇದ್ದಿದ್ದೆ ಯಾರ ಬಾಳಿನಲ್ಲೂ. ಇದಕ್ಕೂ ಬರವಣಿಗೆಗೂ ಏನು ಅಂಟು ಎಂದರೆ ದೀಪದ ಕೆಳಗಿನ ಕತ್ತಲನ್ನು ಪ್ರತಿಮೆಯಾಗಿ ತೋರಬೇಕಾಗಬಹುದು. ಜೀವದ ತುಂಬಾ ಪ್ರೀತಿಯನ್ನೇ ಹರವಿಕೊಂಡವಳಿಗೆ ಕೊಟ್ಟ ಮುತ್ತು ತಿರುಗಿ ಬೇಕಿತ್ತು. ಬಿತ್ತಿದ ಬೀಜ ಮೊಳೆತು ತೆನೆ ತೂಗಬೇಕೆಂಬ ಹಂಬಲ. ಕಣ್ಣ ಮಾತುಗಳು ಸದ್ದುಗಳ ನೆರವಿಲ್ಲದೆ ಅರಿವಾಗಬೇಕಿತ್ತು ಜೊತೆ ಜೀವಕ್ಕೆ.
ನಂದಿನಿ ಹೆದ್ದುರ್ಗ ಬರಹ : ನಿದ್ದೆ ಎಂಬ ಪದಕವಡೆ : ನಿದ್ರಾಯೋಗ ಮತ್ತು ಮುಕ್ತ ವಿಶ್ವವಿದ್ಯಾಲಯದ ನಡುವಿನ ಬಿಟ್ಟಸ್ಥಳವಿದು
ಆದರೆ,
ವಿಧಿಯ ಲೆಕ್ಕವೇ ಬೇರೆ. ಸದಾ ಹೊಂದಿ ಹೋಗು ಎನ್ನುವದನ್ನೇ ಕಲಿಸಿದ ಬಾಳು ಹೊಂದುವ ಕಾಲದಲ್ಲಿ ಬೆಂದುಹೋದ ಇವಳ ಭಾವಗಳನ್ನು ಎಣಿಸಿ ಸುಖವಾಗಿ ತೂಕಕ್ಕೆ ಹಾಕುತ್ತದೆ! ಮತ್ತೆಮತ್ತೆ ನೀನು ಹೆಣ್ಣು, ನೀನೇ ತಿರುಗಿಬಿದ್ದರೆ ಮಕ್ಕಳ ಭವಿಷ್ಯ ಯೋಚಿಸುವವರಾರು ಎನ್ನುವ ಮಮಕಾರವೂ ಹೊರೆ ಹೊರೆಸುತ್ತದೆ. ಪ್ರೀತಿಯ ಫಾರ್ಮುಲಾಗಳಿಂದ ಮಾಡಲ್ಪಟ್ಟವಳನ್ನು ಕರುಳಬಂಧದ ಆಮಿಷ ತೋರಿ ಅವಮಾನ ನುಂಗಿಕೊಳ್ಳುವುದು ಉಸಿರಾಟದಷ್ಟೇ ಸಲೀಸಾಗಬೇಕು ಎನ್ನುತ್ತದೆ.
ಮುಳ್ಳು ಮತ್ತು ಬಟ್ಟೆ ಎಂಬ ಅತಿ ಹಳೆಯ ಪ್ರತಿಮೆಗಳಿಂದ ಮನಸ್ಸನ್ನು ನೇಣುಕುಣಿಕೆಗೆ ಏರಿಸುವ ಹೊತ್ತು ಅದು. ಸಾವಿನ ಸುಖವನ್ನು ಅತೀ ಹತ್ತಿರದಿಂದ ನೋಡುವುದೆಂದರೆ ಸುಮ್ಮನೆ ಅಲ್ಲ.
ನಿಮಗೆ ಗೊತ್ತಿರಲಿ.
ಜೀವ ಮುಗಿಯುವ ಹೊತ್ತಿನಲ್ಲಿ ಕಣ್ಣ ಮುಂದೆ ಬಣ್ಣಬಣ್ಣದ ಲೋಕ ಸೃಷ್ಟಿಯಾಗುತ್ತದೆ. ಎಂದೂ ಕಾಣದ ಹೂಗಳು ಚಿಟ್ಟೆಗಳು ನೀಲಿ ಬಣ್ಣದ ಸೂರ್ಯ ಗುಲಾಬಿ ಬಣ್ಣದ ಚಂದಿರ ಹೊಸಥರದ ಹಕ್ಕಿ… ಊಫ್.
ಆದರೆ,
ಪೂರ್ವದ ಕರ್ಮ ಬಾಕಿಯಿರುವಾಗಲೇ ಬಸವಳಿಯುವುದು ಥರವಲ್ಲ ಎಂದು ಬೋಧಿಸಿತ್ತು ವಿಧಿ. ಬಳಲಿದ ಹೊತ್ತಿನಲ್ಲೇ ಕಂಡ ಬಣ್ಣಗಳು ಬೆಳಕಾಗಿ ಎಲ್ಲೋ ಅಡಗಿದ್ದ ಅಕ್ಷರಗಳ ಮೆಲ್ಲಮೆಲ್ಲಗೆ ತೇಲಿಸಿದವು. ಯಾವುದನ್ನು ಅನುಭವಿಸಲಾಗಿಲ್ಲವೋ ಅದರ ಕುರಿತೇ ಹುಚ್ಚು ಕುತೂಹಲ ಜೀವಕ್ಕೆ. ಯಾರೆಲ್ಲಾ ಅಂತರಂಗದ ಅಂಗಳದಲ್ಲಿ ಕುಳಿತು ಮಾತಾಡಿದರೋ ಅವರಿಗೆಲ್ಲರಿಗೂ ಹಿಡಿ ಪ್ರೀತಿ ಬೇಕು ಎಂದಿತ್ತು ಕೊರಳು.
ನಂದಿನಿ ಹೆದ್ದುರ್ಗ ಕವಿತೆಗಳು : Poetry; ಅವಿತಕವಿತೆ: ಥಣಾರನೆ ಕೋಲ್ಮಿಂಚು ಕುಳಿಯೊಳಗೆ ಬೆಳಕು
ಸಂಕಟವೆಂದರೆ ‘ಪ್ರೀತಿ’ ಪದಕ್ಕೆ ಈ ಲೋಕದಲ್ಲೀಗ ಒಂದೇ ಅರ್ಥ. ಸಹಜೀವವೊಂದು ಸಹಜವಾಗಿರಲು ಬೇಕಾದ ಸ್ನೇಹ ವಾತ್ಸಲ್ಯ ಮಮಕಾರವೆನ್ನುವುದೂ ಪ್ರೀತಿಯ ವ್ಯಾಖ್ಯಾನ ಎನ್ನುವುದನ್ನು ತಿಳಿದ ಹೃದಯಗಳು ಬೆರಳೆಣಿಕೆಯಷ್ಟು ಸಿಕ್ಕವು. ಯಾವುದು ತುಟ್ಟಿಯಾಗಿತ್ತೋ ಅದು ನನ್ನ ಅಕ್ಷರಗಳಲ್ಲಿ ಮೊಳಗುತ್ತ ಮೊರೆಯುತ್ತ ಪೊರೆಯಿತು. ಪ್ರೇಮವನ್ನೇ ಎಷ್ಟು ಬಗೆಯಲ್ಲಿ ಹೇಳುತ್ತಿ ನೀನು ಎಂದವರೆದಿರು ಹಿಗ್ಗುತ್ತೇನೆ. ಬರೆದ ಸಾಲುಗಳಲ್ಲಿ ಇನ್ನಷ್ಟು ನೋವು ಮತ್ತು ಕಾವು ಹೊಳೆಯಿಸಬೇಕಿದೆ. ಕಳೆಯುವುದಕ್ಕಷ್ಟೇ ಅಲ್ಲ… ಕೂಡುವುದಕ್ಕಾಗಿಯೂ ಬರೆಯಬೇಕು ಎನ್ನುವುದು ಈ ಹೊತ್ತಿನ ಅರಿವು. ಒಗಟೆನಿಸಿದರೆ ಒಗೆಯದೆ ಮತ್ತೊಮ್ಮೆ ಓದು ಅನ್ನುತ್ತಾರೆ ತಿಳಿದವರು.
‘ಏನೋ ಆಗಲಿಕ್ಕಿದೆ ನನಗೆ’
ಈ ಅತೃಪ್ತಿ ನನ್ನ ಬಾಳಿಸುವ ನಂಬಿಕೆಯಿದೆ.
*
ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ನಂದಿಯವರ ಈ ಬರಹವನ್ನೂ ಓದಿ : Women Empowerment; ನಾನೆಂಬ ಪರಿಮಳದ ಹಾದಿಯಲಿ: ಇದು ನಾನಲ್ಲ ಇನ್ನೇನೋ ಆಗುವುದಿದೆ ಆಗಬೇಕಿದೆ