Ali Akbar Khan Birth Centenary: ನಿಮ್ಮ ಟೈಮ್​ಲೈನ್; ‘ನೀನು ಸೂರ್ಯಚಂದ್ರರನ್ನು ನೋಡಲು ಸಾಧ್ಯವಾಗುವತನಕ ಕಲಿಸು’

|

Updated on: Apr 14, 2022 | 10:02 AM

Classical Music : ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರಿಗೆ ತಲುಪಿಸಲು ಸಿನೆಮಾ ಒಳ್ಳೆಯ ಮಾಧ್ಯಮ ಎನ್ನುವ ಕಾರಣಕ್ಕೆ ಕೆಲವೊಮ್ಮೆ ಸಿನಿಮಾಕ್ಕೆ ಸಂಗೀತ ನೀಡಲು ಒಪ್ಪಿಕೊಳ್ಳುತ್ತಿದ್ದರು. ರಿಕ್ಷಾವಾಲಾ, ಟಾಂಗಾವಾಲಾಗಳೂ ಶಾಸ್ತ್ರೀಯ ಸಂಗೀತ ಕೇಳುವಂತಾಗಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು.

Ali Akbar Khan Birth Centenary: ನಿಮ್ಮ ಟೈಮ್​ಲೈನ್; ‘ನೀನು ಸೂರ್ಯಚಂದ್ರರನ್ನು ನೋಡಲು ಸಾಧ್ಯವಾಗುವತನಕ ಕಲಿಸು’
ಸರೋದ ಸಾಮ್ರಾಟ್ ಉಸ್ತಾದ ಅಲಿ ಅಕ್ಬರ್ ಖಾನ
Follow us on

Ustad Ali Akbar Khan Birth Centenary : ಚಲನಚಿತ್ರಗಳಿಗೆ  ಉಸ್ತಾದ್ ಅಲಿ ಅಕ್ಬರ್ ಖಾನ್ ಅವರು ನೀಡಿರುವ ಸಂಗೀತದಲ್ಲಿ ಚೇತನ್ ಆನಂದರ ಆಂಧಿಯಾ ಚಿತ್ರಕ್ಕೆ ನೀಡಿರುವ ಸಂಗೀತ ಅತ್ಯುತ್ತಮವಾದುದು ಎನ್ನುವ ಅಭಿಪ್ರಾಯವಿದೆ. ತಪನ್ ಸಿನ್ಹ ಅವರ ಚಿತ್ರಕ್ಕೆ ನೀಡಿದ ಸಂಗೀತಕ್ಕೆ ಇವರಿಗೆ ವರ್ಷದ ಅತ್ಯುತ್ತಮ ಸಂಗೀತಗಾರ ಪ್ರಶಸ್ತಿಯೂ ಲಭಿಸಿತು. ಠಾಕೂರರ ಸಣ್ಣ ಕಥೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. ಖಾನ್‌ಸಾಹೇಬರ ಸೂಕ್ಷ್ಮತೆ ಬಗ್ಗೆ ತಪನ್ ಸಿನ್ಹಾ ಅವರು ತುಂಬಾ ಭಾವಪರವಶರಾಗಿ ಮಾತನಾಡುತ್ತಾರೆ. ಠಾಕೂರರು ಗೆಳೆಯರು ಎನ್ನುವ ಕಾರಣಕ್ಕೆ ಖಾನ್ ಸಾಹೇಬರ ತಂದೆ ಈ ಸಿನಿಮಾವನ್ನು ನೋಡಿದರಂತೆ. ಅದರ ಸಂಗೀತ ಬಾಬಾರವರಿಗೆ ತುಂಬಾ ಮೆಚ್ಚುಗೆಯಾಗಿ ಯಾರ ಸಂಗೀತ ಅಂತ ವಿಚಾರಿಸಿಕೊಂಡರಂತೆ. ಅಲಿ ಅಕ್ಬರ್ ಖಾನರ ಸಂಗೀತ ಅಂತ ಗೊತ್ತಾದ ತಕ್ಷಣ ಮಗನಿಗೆ ಸಿನಿಮಾಗೆ ಸಂಗೀತ ನೀಡುವುದನ್ನು ಮುಂದುವರಿಸು ಅಂತ ಟೆಲಿಗ್ರಾಂ ಕಳುಹಿಸಿದರಂತೆ. ಆದರೆ ಮಗ ಆ ವೇಳೆಗಾಗಲೇ ಸಿನಿಮಾಕ್ಕೆ ಸಂಗೀತ ನೀಡುವುದನ್ನು ನಿಲ್ಲಿಸಲು ತೀರ್ಮಾನಿಸಿದ್ದರು. ಇನ್ನು ಮುಂದೆ ಸಿನಿಮಗೆ ಸಂಗೀತ ನೀಡುವುದಿಲ್ಲ ಎಂದು ಮರು ಟೆಲಿಗ್ರಾಂ ಕಳುಹಿಸಿದರು.
ಶೈಲಜ ಮತ್ತು ವೇಣುಗೋಪಾಲ್, ಲೇಖಕರು, ಅನುವಾದಕರು, ಮೈಸೂರು

 

(ಭಾಗ 2)

ಆದರೂ ನಂತರದಲ್ಲಿ ಆಗೀಗ ಸಿನಿಮಾದಲ್ಲಿ ಕೆಲಸಮಾಡಿದ್ದಾರೆ. ಅಮೆರಿಕೆಯಲ್ಲಿ 1993ರಲ್ಲಿ ಬರ್ಟಿ ಲೂಸಿಯವರ ‘ಲಿಟಲ್ ಬುದ್ಧ’ ಸಿನಿಮಾಕ್ಕೆ ಕೂಡ ಸಂಗೀತ ನೀಡಿದರು. ಶಾಸ್ತ್ರೀಯ ಸಂಗೀತವನ್ನು ಜನಸಾಮಾನ್ಯರೆಡೆಗೆ ತೆಗೆದುಕೊಂಡು ಹೋಗುವುದಕ್ಕೆ ಸಿನೆಮಾ ಒಂದು ಒಳ್ಳೆಯ ಮಾಧ್ಯಮ ಎನ್ನುವ ಕಾರಣಕ್ಕೆ ಕೆಲವೊಮ್ಮೆ ಸಿನಿಮಾಕ್ಕೆ ಸಂಗೀತ ನೀಡಲು ಒಪ್ಪಿಕೊಳ್ಳುತ್ತಿದ್ದರು. ರಿಕ್ಷಾವಾಲಾಗಳು, ಟಾಂಗಾವಾಲಾಗಳೂ ಕೂಡ ಈ ಶಾಸ್ತ್ರೀಯ ಸಂಗೀತವನ್ನು ಕೇಳುವಂತಾಗಬೇಕು ಎನ್ನುವುದು ಅವರ ಇಚ್ಛೆಯಾಗಿತ್ತು.

ಲಾರ್ಡ್ ಯಹೂದಿ ಮೆನುಹಿನ್‌ರ ಆಹ್ವಾನದ ಮೇರೆಗೆ ಖಾನ್‌ಸಾಹೇಬರು 1955ರಲ್ಲಿ ಅಮೆರಿಕಾಕ್ಕೆ ಪ್ರಯಾಣ ಮಾಡಿದರು. ನ್ಯೂಯಾರ್ಕಿನ ಮಾಡರ್ನ್ ಆರ್ಟ್ಸ್ ಮ್ಯೂಸಿಯಮ್ಮಿನಲ್ಲಿ ಕಾರ್ಯಕ್ರಮ ನೀಡಿದರು. ಇವರ ಹಲವಾರು ಧ್ವನಿಸುರುಳಿಗಳು ಹೊರಬಂದಿವೆ. ಭಾರತೀಯ ಶಾಸ್ತ್ರೀಯ ಸಂಗೀತದ ಮೊಟ್ಟ ಮೊದಲ ಎಲ್‌ಪಿ ರೆಕಾರ್ಡಿಂಗ್ ಖಾನ್ ಸಾಹೇಬರದ್ದೇ. ಭಾರತೀಯ ಶಾಸ್ತ್ರಿಯ ಸಂಗೀತವನ್ನು ಪಾಶ್ಚಾತ್ಯ ಟಿವಿಯಲ್ಲಿ ಮೊತ್ತಮೊದಲು ನೀಡಿದವರೂ ಖಾನ್‌ಸಾಹೇಬರೆ. ಇವೆಲ್ಲವೂ 1960ರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವು ಪಾಶ್ಚಿಮಾತ್ಯ ಪ್ರಪಂಚದಲ್ಲಿ ಜನಪ್ರಿಯವಾಗಲು ಕಾರಣವಾದವು.

ಖಾನ್ ಸಾಹೇಬರು ಕಲ್ಕತ್ತೆಯಲ್ಲಿ 1956ರಲ್ಲಿ ಅಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಕ್ ಪ್ರಾರಂಭಿಸಿದರು. ನಂತರ ಪಾಶ್ಚಾತ್ಯ ವಿದ್ಯಾರ್ಥಿಗಳಲ್ಲಿ ಇರುವ ಅಸಾಧಾರಣ ಆಸಕ್ತಿ ಹಾಗೂ ಸಾಮರ್ಥ್ಯವನ್ನು ಗಮನಿಸಿ ಅಮೇರಿಕಾದಲ್ಲಿ 1965ರಿಂದ ಪಾಠಮಾಡಲು ಪ್ರಾರಂಭಿಸಿದರು. ಕ್ಯಾಲಿಫೋರ್ನಿಯಾದ ಸ್ಯಾನ್ ರಾಫೆಲ್‌ನಲ್ಲಿ 1967ರಲ್ಲಿ ಅಲಿ ಆಕ್ಬರ್ ಕಾಲೇಜ್ ಆಫ್ ಮ್ಯೂಸಿಕ್ ಪ್ರಾರಂಭಿಸಿದರು. ಅದು ಪ್ರಪಂಚದಲ್ಲೇ ಹಿಂದೂಸ್ತಾನಿ ಸಂಗೀತ ಕಲಿಸುವ ಅತ್ಯುತ್ತಮ ಶಾಲೆಯಾಯಿತು. ಮುಂದೆ ಯಾರಾದರೂ ಹಿಂದೂಸ್ತಾನಿ ಸಂಗೀತ ಕಲಿಯಬೇಕಾದರೆ, ಇಲ್ಲಿಗೇ ಬರಬೇಕಾಗುತ್ತದೆ ಎಂದು ಖಾನ್ ಸಾಹೇಬರು ಹೆಮ್ಮೆಯಿಂದ ಹೇಳಿಕೊಂಡಿದ್ದೂ ಇದೆ. ಮುಂದೆ ಬೇಸಲ್, ಸ್ವಿಟ್ಜರ್‌ಲ್ಯಾಂಡ್ ಮೊದಲಾದ ಕಡೆಗಳಲ್ಲಿ ಅಲ್ಲಿನ ಆಸಕ್ತರಿಗಾಗಿ ಶಾಖೆಗಳನ್ನು ಪ್ರಾರಂಭಿಸಿದರು. ತಂದೆಯವರ ಆದರ್ಶಕ್ಕೆ ಸ್ವಲ್ಪವೂ ಕುಂದಾಗದಂತೆ ಕೊನೆಯವರೆಗೂ ಅವರು ವಿದ್ಯಾದಾನ ಮಾಡುತ್ತಾ ಇದ್ದರು.

ಇದನ್ನೂ ಓದಿ : Music : ಅಭಿಜ್ಞಾನ; ನಮ್ಮ ಭೇಟಿ ಅಪರೂಪ ಹಾಗಾಗಿ ಇಬ್ಬರ ಕಣ್ಣುಗಳೂ ತುಂಬಿಕೊಂಡುಬಿಡುತ್ತಿದ್ದವು

ಅಮೆರಿಕೆಯ ವಾತಾವರಣವನ್ನು ನೆನಪಿಸಿಕೊಳ್ಳುತ್ತಾ, ಭಾರತದಲ್ಲಿ ಶಾಸ್ತ್ರೀಯ ಸಂಗೀತದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರಬಹುದು. ಆದರೆ ಅಮೆರಿಕಾದಲ್ಲಿ ಅವರು ಪಾಶ್ಚಾತ್ಯ ಸಂಗೀತವನ್ನು ಮಾತ್ರವಲ್ಲ ಭಾರತೀಯ ಸಂಗೀತವನ್ನೂ ಕೇಳುತ್ತಾರೆ. ನನ್ನ ಬಳಿಗೆ ಸಂಗೀತ ಕಲಿಯಲು ಹಲವಾರು ಅಮೆರಿಕಾ ಹಾಗೂ ಯೂರೋಪಿನ ಹಲವರು ಬರುತ್ತಾರೆ. ತಮಾಷೆ ಅಂದರೆ ಭಾರತೀಯರೇ ಕಡಿಮೆ. …ಬಹುಶಃ ಅದಕ್ಕೆ ಕಾರಣ ಪಾಪ ಅವರು ಇಲ್ಲಿಗೆ ಬರುವುದೇ ಹಣ ಸಂಪಾದಿಸುವುದಕ್ಕೆ, ಸಂಗೀತ ಕಲಿಯುವುದಕ್ಕಲ್ಲ ಒಂದು ಸಂದರ್ಶನವೊಂದರಲ್ಲಿ ಹೇಳುತ್ತಾರೆ.
ಆದರೆ, ಭಾರತದಲ್ಲಿ ಶಾಸ್ತ್ರಿಯ ಸಂಗೀತ ಅಪಾಯದಲ್ಲಿದೆ ಎಂಬುದನ್ನು ಅವರು ಒಪ್ಪುತ್ತಿರಲಿಲ್ಲ. ಏರಿಳಿತಗಳು ಇರುತ್ತವೆ ಅಷ್ಟೆ ಎನ್ನುತ್ತಿದ್ದರು. ನಿಜವಾದ ರಸಿಕರ ಧ್ವನಿ ಇಂದು ಕ್ಷೀಣವಾಗಿರುವುದರಿಂದ ಕಲಾವಿದರು ಹೊಣೆಗೇಡಿಗಳಾಗುತ್ತಿದ್ದಾರೆ ಎಂದು ಖಾನ್ ಸಾಹೇಬರಿಗೆ ಗಾಢವಾಗಿ ಅನ್ನಿಸಿತ್ತು.

ನಾವು ಚಿಕ್ಕವರಿದ್ದಾಗ, ಮುಂದಿನ ಸಾಲಿನಲ್ಲಿ ಸಂಗೀತಗಾರರು ಹಾಗೂ ನಿಜವಾದ ಸಂಗೀತ ರಸಿಕರು ಕುಳಿತು ಸಂಗೀತ ಕೇಳುತ್ತಿದ್ದರು. ಅವರ ಮೆಚ್ಚುಗೆ, ಅಥವಾ ಅಸಂತೃಪ್ತಿಯನ್ನು ನೋಡಿಯೇ ನಮ್ಮ ಸಂಗೀತ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಿತ್ತು. ಸಂಗೀತ ಇಷ್ಟವಾಗಿಬಿಟ್ಟರೆ ವೇದಿಕೆ ಹತ್ತಿ ಸಂಗೀತಗಾರರನ್ನು ತಬ್ಬಿಕೊಂಡು ಅಭಿನಂದಿಸುತ್ತಿದ್ದರು. ಇಷ್ಟವಾಗದಿದ್ದರೆ ಅಷ್ಟೇ ನಿರ್ದಾಕ್ಷಿಣ್ಯವಾಗಿ ಟೀಕಿಸುತ್ತಿದ್ದರು. ಸಂಗೀತಕ್ಕೆ ಹಾಗೂ ಸಂಗೀತಗಾರರಿಗೆ ನಿಜವಾಗಿ ಬೇಕಾದ್ದು ಅದು. ಆದರೆ ಈಗ ಹಣವಿದ್ದವರು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ನಿಜವಾದ ರಸಿಕರು ಎಲ್ಲೋ ಮೂಲೆಯಲ್ಲಿ ಕುಳಿತಿರುತ್ತಾರೆ. ಇದರಿಂದ ಸಂಗೀತಗಾರರು ಹೊಣೆಗೇಡಿಗಳಾಗುತ್ತಾರೆ. ಜನರನ್ನು ಗಿಮಿಕ್‌ಗಳಿಂದ ರಂಜಿಸಲು ಪ್ರಯತ್ನಿಸುತ್ತಾರೆ. ಇದು ನಿಜವಾದ ಸಂಗೀತವಲ್ಲ.

60 ಮತ್ತು 70ರ ದಶಕದಲ್ಲಿ ಅಲಿ ಅಕ್ಬರ್‌ಖಾನ್ ಮತ್ತು ರವಿಶಂಕರ್ ಅವರ ಜುಗಲ್‌ಬಂದಿಗಳು ಸಂಗೀತ ಪ್ರೇಮಿಗಳನ್ನು ರೋಮಾಂಚನಗೊಳಿಸಿದ್ದವು. ಅವುಗಳ ಪೈಕಿ ಕೆಲವು ಜುಗಲ್‌ಬಂದಿಗಳ ಮುದ್ರಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು. ಅವುಗಳಲ್ಲಿ ಮುಖ್ಯವಾಗಿ ಹೇಮ್ ಬಿಹಾಗ್, ಬಿಲಾಸ್‌ಖಾನಿ ತೋಡಿ, ಸಿಂಧುಭೈರವಿ, ಪಲಾಸ್ ಕಾಪಿ, ಶ್ರೀ ಹಾಗೂ ಮಾಂಜ್ ಖಮ್ಮಾಜ್ ಇವುಗಳು ಜುಗಲ್‌ಬಂದಿಯಲ್ಲಿ ಒಬ್ಬ ವಾದ್ಯಗಾರ ಇನ್ನೊಬ್ಬ ವಾದ್ಯಗಾರನ ಮನೋಧರ್ಮವನ್ನು ಹೇಗೆ ಹೆಚ್ಚಿಸಬಲ್ಲ ಮತ್ತು ಒಬ್ಬನ ವಾದನ ಇನ್ನೊಬ್ಬನಿಗೆ ಹೇಗೆ ಪೂರಕವಾಗಿರಬಹುದು ಎನ್ನುವುದರ ಅದ್ಭುತ ಉದಾಹರಣೆಗಳಾಗಿವೆ. ಅಲಿ ಅಕ್ಬರ್ ಅವರ ಸರೋದಿನ ಪೌರುಷಕ್ಕೆ ರವಿಶಂಕರ್ ಅವರ ಸಿತಾರಿನ ಲಜ್ಜೆಯ ಬಿನ್ನಾಣ ಮಾಧುರ್ಯದ ಬೇರೆಯೇ ಒಂದು ಲೋಕವನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ : Communal Clashes; ನಿಮ್ಮ ಟೈಮ್​ಲೈನ್: ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೊಳ್ಳಿದೆವ್ವಗಳಿಗೆ ಪಾಠ ಕಲಿಸಬೇಕಾಗಿದೆ

ಅಲಿ ಅಕ್ಬರ್ ಅವರು ಅತಿಹೆಚ್ಚು ಧ್ವನಿಮುದ್ರಿತವಾಗಿರುವ ಕಲಾವಿದ ಎನಿಸುತ್ತದೆ. 1950 ಮತ್ತು 60ರ ದಶಕದಲ್ಲಿ ಎಚ್‌ಎಂವಿ ಕಂಪೆನಿ ಧ್ವನಿಮುದ್ರಿಸಿದ ಬಾಗೇಶ್ರೀ ಕಾನಡಾ ರಾಗವು ರಾಗವಿಸ್ತಾರದಲ್ಲಿ ಖಾನ್ ಸಾಹೇಬರು ಕ್ರಮಿಸಿದ ಅಭಿಜಾತ-ರಮ್ಯ ಮಾರ್ಗಕ್ಕೆ ಪ್ರಾತಿನಿಧಿಕವಾಗಿದೆ. ಅವರ ಮಾಲಕಂಸ, ತುಂಬಾ ಭಾವಪೂರ್ಣವಾದ ಜೈಜೈವಂತಿ, ಮತ್ತೆ ಮತ್ತೆ ಕಾಡುವ ಅಸಾವರಿ ಇವೆಲ್ಲವೂ ಈ ನಾದಶಿಲ್ಪಿಯ ಅದ್ಭುತ ಸೃಜನಶೀಲತೆಯ ಪ್ರತೀಕವಾಗಿವೆ. ಅತ್ಯಂತ ಕಡಿಮೆ ಉಳಿಯೇಟುಗಳಲ್ಲಿ ರಾಗದ ಪರಿಪೂರ್ಣ ಪ್ರತಿಮೆಯನ್ನು ಕೆತ್ತುವ ಅವರ ಕ್ರಮದಿಂದಾಗಿ ಈ ಧ್ವನಿಮುದ್ರಣಗಳು ಅವರ ಮೇರು ಕೃತಿಗಳೆನಿಸಿಕೊಂಡಿವೆ. ಬೈರಾಗಿ, ಮಿಯಾ ಕಿ ತೋಡಿ, ಭೂಪಾಲ್ ತೋಡಿ, ನಟ್ ಭೈರವ್ ಮುಂತಾದ ಮುಂಜಾವಿನ ರಾಗಗಳು ಅವರು ನುಡಿಸುವಾಗ ಪಡೆದುಕೊಳ್ಳುವ ಘನತೆ ಮತ್ತು ಗಾಂಭೀರ್ಯವನ್ನು ಗಮನಿಸಬಹುದು. ಬಸಂತ್ ಮುಖಾರಿ ಹಾಗೂ ಜೋಗಿಯಾ ಇವುಗಳ ನೇರ ಧ್ವನಿಮುದ್ರಣದಲ್ಲಿ ಮುಂಜಾವಿನ ರಾಗಗಳ ಆಧ್ಯಾತ್ಮಿಕತೆಯನ್ನು ಇವರು ಮೂಡಿಸಿರುವುದನ್ನು ಗಮನಿಸಬೇಕು. ಟಿ-ಸೀರೀಸ್‌ನವರು ಹೊರತಂದಿರುವ ಇವರ ದರ್ಬಾರಿ, ಪೀಲೂ, ಶ್ರೀ ಈ ರಾಗಗಳ ಆಕಾಶವಾಣಿಯ ಧ್ವನಿಮುದ್ರಣಗಳು ಅವರಲ್ಲಿರುವ ಆಳವಾದ ಅಂತಮುರ್ಖತೆಯ ಕಾಂತಿಯನ್ನು ಸೂಸುತ್ತವೆ. ಅವರ ಸಿಂಧುಭೈರವಿ ಮತ್ತು ಮಿಶ್ರ ಶಿವರಂಜನಿಯ ಮನೋಜ್ಞ ಪ್ರಸ್ತುತಿಗಳು ಧ್ಯಾನದ ಗುಣದಿಂದ ತುಂಬಿ ತುಳುಕಾಡುತ್ತಿವೆ.

ಪ್ರಶಸ್ತಿಗಳು
ಇವರಿಗೆ ದೇಶವಿದೇಶಗಳಲ್ಲಿ ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಭಾರತ ಸರ್ಕಾರ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಅಮೇರಿಕಾದಲ್ಲಿ 1991ರಲ್ಲಿ ಕೆನಡಿಯ ಇನಾಗ್ಯುರಲ್ ಸಮಾರಂಭಕ್ಕೆ ನುಡಿಸಲು ಇವರನ್ನು ಆಹ್ವಾನಿಸಲಾಗಿತ್ತು. ಹಿಂದೂಸ್ತಾನಿ ಸಂಗೀತಕ್ಕೆ ಇವರ ಕೊಡುಗೆಯನ್ನು ಗುರುತಿಸಿ ಮೆಕಾರ್ಥರ್ ಫೌಂಡೇಷನ್ ಜಿನಿಯಸ್ ಫೆಲೋಷಿಪ್ ನೀಡಲಾಯಿತು. 1993ರಲ್ಲಿ ಬಿಲ್ ಗ್ರಹಾಂ ಲೈಫ್ ಟೈಮ್ ಪ್ರಶಸ್ತಿ ದೊರಕಿತು. ಎರಡು ಸಲ ಗ್ರಾಮಿ ಪ್ರಶಸ್ತಿಗೆ ಇವರ ಹೆಸರು ನಾಮಕರಣವಾಗಿತ್ತು. ಬಾಬಾ ಅವರು “ನಿನ್ನ ತಂದೆ ಹಾಗೂ ಗುರುವಾಗಿ ನಿನಗೆ ಒಂದು ಬಿರುದನ್ನು ನೀಡುತ್ತೇನೆ ಎನ್ನುತ್ತಾ ‘ಸ್ವರ ಸಾಮ್ರಾಟ್’ ಎಂದು ಇವರನ್ನು ಕರೆದರು. ಇದೇ ತನಗೆ ಸಿಕ್ಕಿರುವ ಅತ್ಯುನ್ನತವಾದ ಬಿರುದು ಎಂಬುದಾಗಿ ಖಾನ್ ಸಾಹೇಬರು ಹೇಳಿಕೊಳ್ಳುತ್ತಿದ್ದರು.
ತಂದೆ ಅಲ್ಲಾವುದ್ದೀನ್‌ಖಾನ್ ‘ಸೂರ್ಯ ಚಂದ್ರರನ್ನು ನಿನಗೆ ನೋಡಲು ಸಾಧ್ಯವಾಗುವವರೆಗೂ ನೀನು ಸಂಗೀತವನ್ನು ಕಲಿಸು’ ಎಂದು ಆದೇಶಿಸಿದ್ದರಂತೆ. ಸಾಯುವ ಹಿಂದಿನ ದಿನವೂ ಮಕ್ಕಳನ್ನು ಪಾಠಕ್ಕೆ ಮನೆಗೆ ಕರೆದಿದ್ದರು. ಹಾರ್ಮೋನಿಯಂ ತರಲು ಮಗನಿಗೆ ಹೇಳಿದರಂತೆ. ತುಂಬಾ ಸುಸ್ತಾಗಿದ್ದರು. ತಲೆ ಎತ್ತಲೂ ಆಗುತ್ತಿರಲಿಲ್ಲ. ಆದರೂ ಹಾಡುತ್ತಾ ಹೇಳಿಕೊಡಲು ಪ್ರಾರಂಭಿಸಿದರಂತೆ. ಕೆಲವರಿಗೆ ಕಣ್ಣೀರು ಬಂತು. ಅದು ಕೊನೆಯ ನಮಸ್ಕಾರವಾಗಿತ್ತು. ಸಂಗೀತವನ್ನು, ಕಲಿಸುವುದನ್ನು ಇಷ್ಟೊಂದು ಗಂಭೀರವಾಗಿ ಪರಿಗಣಸಿದ್ದ ಮತ್ತೊಬ್ಬ ಸಂಗೀತಗಾರ ಇರಲಿಕ್ಕಿಲ್ಲ.

ಮೊದಲ ಭಾಗ : https://tv9kannada.com/tag/nimma-timeline 

ಗಮನಿಸಿ: ನಿಮ್ಮ ಟೈಮ್​ಲೈನ್ ಆಗಾಗ ಪ್ರಕಟವಾಗುವ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com