Communal Clashes; ನಿಮ್ಮ ಟೈಮ್​ಲೈನ್: ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೊಳ್ಳಿದೆವ್ವಗಳಿಗೆ ಪಾಠ ಕಲಿಸಬೇಕಾಗಿದೆ

Hindu Muslim : ಭಾರತದ ಗ್ರಾಮೀಣ ಸಂಸ್ಕೃತಿ, ಅಲ್ಲಿನ ವೈವಿಧ್ಯಮಯ ಭಾವನಾತ್ಮಕ ಬದುಕಿನ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ, ಎಂದಿಗೂ ತಮ್ಮ ಬೆವರನ್ನು ನೆತ್ತರವಾಗಿ ಹರಿಸಿ ದುಡಿದು ಉಣ್ಣಲಾಗದ ಮಂದಿ ಇಂದು ಭಾರತದ ಮುಸ್ಲಿಂ ಸಮುದಾಯ ಕುರಿತಂತೆ ದ್ವೇಷ ಕಾರುತ್ತಿದ್ದಾರೆ. 

Communal Clashes; ನಿಮ್ಮ ಟೈಮ್​ಲೈನ್: ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೊಳ್ಳಿದೆವ್ವಗಳಿಗೆ ಪಾಠ ಕಲಿಸಬೇಕಾಗಿದೆ
ಲೇಖಕ ಜಗದೀಶ ಕೊಪ್ಪ
Follow us
ಶ್ರೀದೇವಿ ಕಳಸದ
|

Updated on:Apr 09, 2022 | 11:31 AM

ನಿಮ್ಮ ಟೈಮ್​ಲೈನ್ | Nimma Timeline : ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ನಾನು ನನ್ನೂರಿನಲ್ಲಿ ರೈತರ ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದ ಸುಮಾರು ನಲವತ್ತು ಮುಸ್ಲಿಂ ಕುಟುಂಬಗಳನ್ನು ಬಾಲ್ಯದಲ್ಲಿ ತುಂಬಾ ಹತ್ತಿರದಿಂದ ನೋಡಿದ್ದೀನಿ. ರೈತರು ಬೆಳೆಯುತ್ತಿದ್ದ ರೇಷ್ಮೆ, ಕಬ್ಬು ಹಾಗೂ ನಮ್ಮ ತೋಟಗಳಲ್ಲಿ ಇದ್ದ ಮಾವು, ಬೇವು, ಹುಣಸೆ ಮತ್ತು ನಾವು ಸಾಕುತ್ತಿದ್ದ ಕುರಿ, ಮೇಕೆ ಸಾಕಾಣಿಕೆ ಇವುಗಳಲ್ಲಿ ನಮ್ಮ ರೈತ ಕುಟುಂಬದ ಪಾತ್ರ ಎಷ್ಟು ಮುಖ್ಯವಾಗಿತ್ತೋ, ಅಷ್ಟೇ ಪ್ರಮಾಣದಲ್ಲಿ ಮುಸ್ಲಿಂ ಸಹೋದರರ ಪಾತ್ರವೂ ನಿರ್ಣಾಯಕವಾಗಿತ್ತು. ಇದು ಕೇವಲ ನನ್ನ ಹಳ್ಳಿಯ ಕಥೆ ಮಾತ್ರವಲ್ಲ, ಕರ್ನಾಟಕದ ಪ್ರತಿಯೊಂದು ಹಳ್ಳಿಯ ಕಥೆಯೂ ಹೌದು. ಯಾವೊಬ್ಬ ರೈತನು ನನ್ನಿಂದಾಗಿ ಈ ಮುಸ್ಲಿಮ ಬದುಕಿದ್ದಾನೆ ಎಂದು ಅಹಂಕಾರ ಪಡಲಿಲ್ಲ, ಅದೇ ರೀತಿ ಮುಸ್ಲಿಂ ಸಹೋದರರು ನಮ್ಮಿಂದಾಗಿ ಈ ರೈತರು ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೆಮ್ಮೆ ಪಡಲಿಲ್ಲ. ಪರಸ್ಪರ ಎರಡು ಸಮುದಾಯಗಳ ನಡುವೆ ಇದ್ದ ಕೃತಜ್ಞತಾ ಭಾವ ಅನಕ್ಷರತೆ ಮತ್ತು ಬಡತನದ ನಡುವೆಯೂ ಅವರನ್ನು ನೆಮ್ಮದಿಯಿಂದ ಇಟ್ಟಿತ್ತು. ಜಗದೀಶ್ ಕೊಪ್ಪ, ಲೇಖಕ (Jagadish Koppa)

ನಾವು ಕಬ್ಬು ಬೆಳೆದಾಗ. ಆಲೆಮನೆಯ ಕಬ್ಬಿನ ಗಾಣದ ರಿಪೇರಿ, ಬೆಲ್ಲ ಪಾಕ ಮಾಡುವ ಕೊಪ್ಪರಿಗೆಯ ರಿಪೇರಿಯಿಂದ ಹಿಡಿದು ಗದ್ದೆಯಿಂದ ಆಲೆಮನೆಗೆ ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಿಸುವ ಮುನ್ನ ಎತ್ತುಗಳ ಕಾಲಿಗೆ ಲಾಳ ಕಟ್ಟಲು ಹುಸೇನಣ್ಣ, ಗಾಣದ ರಿಪೇರಿಗೆ ಅಮೀನಣ್ಣ ಮತ್ತು ಕೊಪ್ಪರಿಗೆಯ ತೂತು ಮುಚ್ಚಲು ಸತ್ತಾರಣ್ಣ ಇಂತಹವರು ಬರುತ್ತಿದ್ದರೇ ಹೊರತು, ನರಸಿಂಹರಾವ್, ಶ್ರೀಕಂಠಶಾಸ್ತ್ರಿ ಅಥವಾ ರಾಮಭಟ್ಟ ಬರುತ್ತಿರಲಿಲ್ಲ. ನಮ್ಮ ವಿದ್ಯುತ್ ಮೋಟಾರ್ ಅಥವಾ ಡೀಸಲ್ ಪಂಪ್ ಸೆಟ್ ಕೆಟ್ಟರೆ, ಸೈಕಲ್ ಪಂಕ್ಚರ್ ಆದರೆ, ನಮ್ಮ ಅಡುಗೆಯ ಮನೆಯ ಪಾತ್ರೆ ಸಾಮಾನುಗಳಿಗೆ ಕಲಾಯಿ ಹಾಕಲು, ನಮ್ಮ ಹಾಸಿಗೆ, ದಿಂಬು ದುರಸ್ತಿ ಮಾಡುವುದರಿಂದ ಹಿಡಿದು ನಮಗೆ ಅಂಗಿ ಚಡ್ಡಿ ಹಾಗೂ ನಮ್ಮವ್ವಂದಿರು ಹಾಗೂ ಅಕ್ಕತಂಗಿಯರಿಗೆ ರವಿಕೆ, ಲಂಗ ಹೊಲೆದು ಕೊಟ್ಟವರು ಇದೇ ಸಾಬ್ಬಣ್ಣರೇ ಹೊರತು ತೇಜಸ್ವಿ ಸೂರ್ಯ ಅಥವಾ ಹೆಂಗ್ ಪುಂಗ್ಲಿಯ ಅಪ್ಪಂದಿರು ಅಥವಾ ಚಿಕ್ಕಪ್ಪಂದಿರು ಅಲ್ಲ.

ನಮ್ಮ ಮಾವು ಅಥವಾ ಹುಣಸೆ ಮರಗಳಲ್ಲಿ ಫಲ ಕಾಣುತ್ತಿದ್ದಂತೆ ಅವುಗಳನ್ನು ತಿಂಗಳು ಗಟ್ಟಲೆ ಜತನದಿಂದ ಕಾಯ್ದು ಹಣ್ಣಾದ ನಂತರ ಮರದಿಂದ ಕಿತ್ತು ರೈತರಿಗೆ ಒಂದಿಷ್ಟು ಪಾಲು ನೀಡಿ ಉಳಿದ ಹಣ್ಣುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ರೈತರ ಕೈಗಿತ್ತು ಅವರೆದುರು ಮುಸ್ಲಿಂ ಅಣ್ಣಂದಿರು ಕೈ ಕಟ್ಟಿ ನಿಂತಾಗ ಯಾವೊಬ್ಬ ರೈತನೂ ಹಣವನ್ನು ಜೇಬಿಗಿಳಿಸುವ ಮುನ್ನ ಸಂಪೂರ್ಣ ಹಣವನ್ನು ಅವರ ಕೈಗಿತ್ತು ‘ಹೋಗ್ಲಾ ಮಗಾ ಜೀವನ ಮಾಡು, ಅದನ್ನು ತೆಗೆದುಕೊಂಡು ನಾನೇನು ಮಾಡಲಿ? ಎಂದು ನುಡಿದದ್ದನ್ನು ನನ್ನ ಅಪ್ಪನನ್ನೂ ಒಳಗೊಂಡಂತೆ ಹಲವಾರು ಮಂದಿಯನ್ನು ನಾನು ನೋಡಿದ್ದೀನಿ. ನಮ್ಮ ತೋಟದಲ್ಲಿ ಇದ್ದ ಹದಿಮೂರು ಮಾವಿನ ಮರಗಳಲ್ಲಿ ಕೇವಲ ಒಂದು ವಿದಿರು ಮಂಕ್ರಿ ಎಂದು ಕರೆಲಾಗುವ ಅಗಲವಾದ ಬುಟ್ಟಿಯ ಮಾವಿನ ಹಣ್ಣು ಮಾತ್ರ ನನ್ನಪ್ಪ ಪಡೆಯುತ್ತಿದ್ದರು. ಉಳಿದುದನ್ನು ಮುಸ್ಲಿಂ ಕುಟುಂಬಕ್ಕೆ ನೀಡುತ್ತಿದ್ದರು. ನಾನು ಜನಿಸುವ ಮೊದಲಿನಿಂದ ಹಿಡಿದು ಈಗಲೂ ಸಹ ಆ ಮುಸ್ಲಿಂ ಕುಟುಂಬ ನನ್ನ ಕುಟುಂಬದೊಂದಿಗೆ ಬಾಂಧವ್ಯ ಹೊಂದಿದೆ.

ಇದನ್ನೂ ಓದಿ : Facebook: ನಿಮ್ಮ ಟೈಮ್​ಲೈನ್; ಮೊನ್ನೆ ಹುಟ್ಟಿದ ನನ್ನ ಮಗುವಿಗೆ ಕೂಡ ಲಿಂಗಸೂಚಕ ಹೆಸರು ಇಟ್ಟಿಲ್ಲ!

ಇಂತಹ ಮಧುರ ಹಾಗೂ ಸಹೋದರ ಸಂಬಂಧಗಳನ್ನು ಕದಡಲು ಹೊರಟಿರುವ ವಿಷಜಂತುಗಳನ್ನು ಜನಸಾಮಾನ್ಯರಿಂತ ಮೊದಲು ಮಾಧ್ಯಮಗಳು ಪ್ರಶ್ನಿಸಬೇಕಿದೆ. ಮುದ್ರಣ ಮಾಧ್ಯಮಗಳನ್ನು ಹೊರತು ಪಡಿಸಿದರೆ ( ಇವುಗಳಲ್ಲಿ ಎಲ್ಲವೂ ಅಲ್ಲ) ಬಹುತೇಕ ದೃಶ್ಯ ಮಾಧ್ಯಮಗಳು ವಿಷಕಕ್ಕುವ ಅನಾಗರೀಕರ ಮಾತುಗಳನ್ನು ಪುಂಗಿಯಂತೆ ಅಥವಾ ತುತ್ತೂರಿಯಂತೆ ಊದುತ್ತಿವೆ. ಜಾತ್ರೆಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳ ಆರ್ಥಿಕ ಸ್ಥಿತಿಗತಿ, ಅವರ ಬಡತನ ಮತ್ತು ದಿನದ ಒಂದು ಹಿಡಿ ಅನ್ನಕ್ಕಾಗಿ ಉರಿಬಿಸಿಲು ಮತ್ತು ದೂಳಿನಲ್ಲಿ ನಿಂತು ಬಳೆಗಳು, ಮಕ್ಕಳ ಆಟಿಕೆಗಳು, ಬೆಲೂನ್, ತುತ್ತೂರಿ, ಹೀಗೆ ಸಣ್ಣ ವ್ಯಾಪಾರ ಮಾಡುವುದರ ಮೂಲಕ ಜೀವನ ನಡೆಸುತ್ತಿದ್ದಾರೆ. ಅಲೆಮಾರಿ ಬದುಕು ಸಾಗಿಸುವ ಈ ಅತಂತ್ರರು ಜಾತ್ರೆ ಅಥವಾ ಉತ್ಸವದ ಸಮಯದಲ್ಲಿ ವ್ಯಾಪಾರದ ಮೂಲಕ ಅಂಬಾನಿ ಮತ್ತು ಅದಾನಿ ಅವರಂತೆ ಹಣವನ್ನು ಸಂಪಾದಿಸಿ ಗುಡ್ಡೆ ಹಾಕುತ್ತಾರಾ? ಎಂದು ಒಬ್ಬ ಪತ್ರಕರ್ತ ಅಯೋಗ್ಯ ರಾಜಕಾರಣಿಗಳಿಗೆ ಮತ್ತು ಧರ್ಮ ಸಂಘಟನೆಯ ನಾಯಕರ ಮುಖಕ್ಕೆ ಜಾಡಿಸಿದ್ದರೆ ಈ ಘಟನೆ ಇಷ್ಟೋಂದು ತಾರಕಕ್ಕೆ ಏರುತ್ತಿರಲಿಲ್ಲ.

ಇವರ ಅಹಂಕಾರದ ಮತ್ತು ದ್ವೇಷ ಬಿತ್ತುವ ಮಾತುಗಳು ಈಗ ಸಮಾಜದಲ್ಲಿ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಮಾರಕವಾಗಿಲ್ಲ, ಇಡೀ ಭಾರತ ಸಮುದಾಯ ಮತ್ತು ತಳ ಸಮುದಾಯದ ಬದುಕನ್ನು ಕಸಿಯಲು ಹೊರಟಿದೆ. ಇದಕ್ಕೆ ಉದಾಹರಣೆಯಾಗಿ ಕಳೆದ ಐವತ್ತು ವರ್ಷಗಳಿಂದ ರೇಷ್ಮೆ ಕೃಷಿಯನ್ನುಅವಲಂಬಿಸಿ ಬದುಕು ಕಟ್ಟಿಕೊಂಡಿರುವ ನನ್ನ ಕುಟುಂಬ ಅನುಭವವನ್ನು ನೀಡಲು ಬಯಸುತ್ತೀನಿ.

ನಮ್ಮದು ಎಂಟು ಜನ ಮಕ್ಕಳ ಕುಟುಂಬ. 1969 ರ ವೇಳೆಗೆ ನಾನು ಹೈಸ್ಕೂಲ್ ಎಂಟನೆ ತರಗತಿ ಗೆ ಬರುವ ಬೇಳೆಗೆ ಅಪ್ಪ ಬೇಸಾಯದಲ್ಲಿ ಸೋತುಹೋಗಿದ್ದರು. ಆ ಸಂದರ್ಭದಲ್ಲಿ ನನ್ನ ಇಬ್ಬರು ಕಿರಿಯ ಸಹೋದರರು ಶಾಲೆಯತ್ತ ಮುಖ ಮಾಡದೆ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡ ಕಾರಣದಿಂದಾಗಿ ಇಂದು ನನ್ನ ಕುಟುಂಬ ನೆಮ್ಮದಿಯಿಂದ ಬದುಕುವಂತಾಗಿದೆ. ಈಗಲೂ ನನ್ನ ಮನೆಯಲ್ಲಿ ರೇಷ್ಮೆ ಕೃಷಿ ನಿರಂತರವಾಗಿ ಸಾಗಿದೆ. ಇಪ್ಪತ್ತು ಗುಂಟೆ ನೀರಾವರಿ ಭೂಮಿ ಇದ್ದರೆ ಒಂದು ಕುಟುಂಬ ನೆಮ್ಮದಿಯಿಂದ ಬದುಕಬಹುದಾಗಿದೆ.

ನಾವು ಒಂದು ಎಕರೆ ಭೂಮಿಯಲ್ಲಿ ರೇಷ್ಮೆ ಸೊಪ್ಪು ಬೆಳೆದು ಪ್ರತಿ ತಿಂಗಳು ನೂರು ಮೊಟ್ಟೆಗಳನ್ನು ತಂದು ಅವುಗಳಿಂದ ಹೊರ ಬಂದ ರೇಷ್ಮೆ ಹುಳುಗಳನ್ನು ನಾಲ್ಕುವಾರ ಸಾಕಿ ಸುಮಾರು ನಲವತ್ತರಿಂದ ಅರವತ್ತು ಕೆ.ಜಿ. ಗೂಡು ಬೆಳೆಯುತ್ತಿದ್ದವು. ನಲವತ್ತು ವರ್ಷಗಳ ಹಿಂದೆ ಒಂದು ಕೆ.ಜಿ. ಗೂಡಿಗೆ ಅರವತ್ತರಿಂದ ಎಂಬತ್ತು ರೂಪಾಯಿ ಬೆಲೆ ಇತ್ತು. ಈಗ ಎಂಟನೂರು, ಒಂದು ಸಾವಿರ ರೂಪಾಯಿ ಇದೆ. ಅರ್ಧ ಎಕರೆ ಭೂಮಿಯಲ್ಲಿ ನೂರು ಮೊಟ್ಟೆಗಳ ರೇಷ್ಮೆ ಸಾಕಾಣಿಕೆ ಮಾಡಬಹುದು.

ಇದನ್ನೂ ಓದಿ :  ಸ್ವಭಾವ ಪ್ರಭಾವ: ಗೊತ್ತಾ ಇಮಾಂಸಾಬಿಗೂ, ಗೋಕುಲಾಷ್ಟಮಿಗೂ ಇರುವ ಸಂಬಂಧ

ನಾವು ರೈತರು ಬೆಳೆದ ರೇಷ್ಮೆ ಗೂಡಿಗೆ ರಾಮನಗರ, ಚೆನ್ನಪಟ್ಟಣ, ಕೊಳ್ಳೆಗಾಲ ಹೀಗೆ ಮಾರುಕಟ್ಟೆಗಳಿವೆ. ರಾಮನಗರದ ಮಾರುಕಟ್ಟೆ ಇಡೀ ಏಷ್ಯಾದ ಅತಿದೊಡ್ಡ ಮಾರುಕಟ್ಟೆ. ಇಲ್ಲಿ ರೇಷ್ಮೆ ಗೂಡು ಕೊಳ್ಳುವವರು ಮುಸ್ಲಿಂ ವ್ಯಾಪಾರಿಗಳು. ಏಕೆಂದರೆ ಶೇ. 98ರಷ್ಟು ರೇಷ್ಮೆಗೂಡಿನಿಂದ ನೂಲು ಬಿಚ್ಚುವ ಘಟಕಗಳನ್ನು ಅವರು ಮಾತ್ರ ಹೊಂದಿದ್ದಾರೆ. ಅವರ ಘಟಕದಲ್ಲಿ ಕೊಳ್ಳೆಗಾಲ ಟಿ.ನರಸೀಪುರ ಮುಂತಾದ ಸ್ಥಳಗಳಿಂದ ಬಂದ ದಲಿತ ಹಾಗೂ ತಳಸಮುದಾಯದ ಕಾರ್ಮಿಕರು ದುಡಿಯುತ್ತಾರೆ. ರಾಮನಗರ ಪಟ್ಟಣವೊಂದರಲ್ಲಿ ಕನಿಷ್ಟ ಮುನ್ನೂರು ನೂಲು ಬಿಚ್ಚುವ ಘಟಕಗಳಿವೆ. ಪ್ರತಿ ಘಟಕದಲ್ಲಿ ಇಪ್ಪತತ್ತರಿಂದ ಐವತ್ತು ಮಂದಿ ಕಾರ್ಯ ನಿರ್ವಹಿಸುತ್ತಾರೆ. ಗೂಡಿನಿಂದ ಹೊರತೆಗೆದ ರೇಷ್ಮೆ ನೂಲನ್ನು ಮುಸ್ಲಿಂ ವ್ಯಾಪಾರಿಗಳು ಬೆಂಗಳೂರಿನ ರೇಷ್ಮೆ ನೂಲಿನ ವ್ಯಾಪಾರಿಗಳಿಗೆ ಕೆ.ಜಿ.ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಒಂದು ಎಳೆಯ ಅದೇ ರೇಷ್ಮೆ ದಾರವನ್ನು ಎರಡು ಎಳೆ ಅಥವಾ ಮೂರು ಹೀಗೆ ಹಲವು ಎಳೆಗಳಲ್ಲಿ ಸುತ್ತಿ ದಾರಮಾಡಿಕೊಡುವ ನೂರಾರು ಟ್ವಿಸ್ಟಿಂಗ್ ಕೈಗಾರಿಕೆಗಳು ರಾಮನಗರ, ಮಾಗಡಿಗಳಲ್ಲಿ ಇವೆ. ಇವುಗಳನ್ನು ಕೂಡ ಮುಸ್ಲಿಂ ಸಹೋದರರು ನಡೆಸುತ್ತಾರೆ. ಇಲ್ಲಿ ಕೆಲಸ ಮಾಡುವ ಹುಡುಗರು ಬಹುತೇಕ ಹಿಂದೂ ಹುಡುಗರು. ಒಂದು ಕೃಷಿ ಹೇಗೆ ರೈತರನ್ನು, ಮುಸ್ಲಿಂ ಸಹೋದರರನ್ನು ಮತ್ತು ಕಾರ್ಮಿಕರನ್ನು ಬೆಸೆಯಬಲ್ಲದು ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.

ಬೆಂಗಳೂರಿನಲ್ಲಿ ಬಹುತೇಕ ಮಾರ್ವಾಡಿಗಳು ನಡೆಸುವ ವ್ಯವಹಾರದಲ್ಲಿ ಈ ರೇಷ್ಮ ನೂಲು ದೂರದ ವಾರಾಣಾಸಿ ತಲುಪಿ ಬನಾರಸ್ ಸಿಲ್ಕ್ ಹೆಸರಿನಲ್ಲಿ ಜಗತ್​ಪ್ರಸಿದ್ಧಿಯಾಗಿದೆ. ವಾರಾಣಾಸಿ ನಗರದಲ್ಲಿ ಬಹುತೇಕ ಕೈಮಗ್ಗಗಳ ಮಾಲೀಕರು ಗುಜರಾತ್ ಮೂಲದ ಹಿಂದುಗಳಾಗಿದ್ದರೆ, ಚಂದನೆಯ ರೇಷ್ಮೆಯ ಸೀರೆ ನೇಯುವ ನೇಕಾರರು ನೂರಕ್ಕೆ ನೂರರಷ್ಟು ಮುಸ್ಲಿಂರಾಗಿದ್ದಾರೆ. ಇವರು ಮೈಬೆವರನ್ನು ನೆತ್ತರಾಗಿ ಹರಿಸಿ ನಲವತ್ತರಿಂದ ನಲವತ್ತೈದು ಸೆಂಟಿಗ್ರೇಡ್ ಉಷ್ಣಾಂಶವಿರುವ ಪ್ರದೇಶದಲ್ಲಿ ರೇಷ್ಮೆ ಸೀರೆ ನೆಯುತ್ತಾರೆ. ಇದೇ ರೇಷ್ಮೆಯನ್ನು ತಮ್ಮ ಪತ್ನಿಯರಿಗೆ ಮತ್ತು ಮಕ್ಕಳಿಗೆ ಉಡಿಸುವ ಈ ಭಟ್ಟಂಗಿಗಳು ಬೀದಿಯಲ್ಲಿ ಮತ್ತು ವೇದಿಕೆಯಲ್ಲಿ ನಿಂತು ಮುಸ್ಲಿಂ ಸಮುದಾಯದ ಬಗ್ಗೆ ಭಾಷಣ ಬಿಗಿಯುತ್ತಾರೆ.

ನಿಮಗೆ ಗೊತ್ತಿರಲಿ ಸಂತ ಭಕ್ತ ಕಬೀರ್ ಓರ್ವ ಹಿಂದೂ ಬ್ರಾಹ್ಮಣ ವಿಧವೆಗೆ ಜನಿಸಿದ ಪುತ್ರ. ಆತನ ತಾಯಿ ಸಮಾಜಕ್ಕೆ ಹೆದರಿ ವಾರಾಣಾಸಿಯ ಗಂಗಾನದಿಯ ಮೆಟ್ಟಿಲುಗಳ ಮೇಲೆ ಹಸುಗೂಸನ್ನು ಬಿಟ್ಟು ಮರೆಯಾದಾಗ ಆ ಮಗುವನ್ನು ತಂದು ಸಾಕಿ ಬೆಳೆಸಿದವರು ನೇಕಾರ ಕುಟುಂಬದ ಮುಸ್ಲಿಂ ಬಡದಂಪತಿಗಳು. ಹಾಗಾಗಿ ಭಕ್ತ ಕಬೀರ್ ತನ್ನ ಬದುಕಿನುದ್ದಕ್ಕೂ ರಾಮ ರಹೀಮರನ್ನು ಜೊತೆಗಿಟ್ಟುಕೊಂಡು ಬದುಕಿದರು ಮತ್ತು ಧ್ಯಾನಿಸಿದರು. ಅವರ ದೋಹಗಳು ಎಂದು ಕರೆಯುವ ದ್ವಪದಿ ರಚನೆಗಳಲ್ಲಿ ಬಾತೃತ್ವದ ಮತ್ತು ವಿಶ್ವ ಮಾನವ ಸಂದೇಶಗಳು ಅಡಗಿವೆ. ಜೊತೆಗೆ ಕದಡಿ ಹೋಗಿರುವ ಈ ಜಗತ್ತಿಗೆ ಮದ್ದಾಗಬಲ್ಲವು.

ಈ ನೈಜ ಸಂಗತಿಗಳನ್ನು ನಾವು ಎದೆಯೊಳಗಿಟ್ಟುಕೊಂಡು ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೊಳ್ಳಿದೆವ್ವಗಳಿಗೆ ಪಾಠ ಕಲಿಸಬೇಕಾಗಿದೆ. ಇದಕ್ಕಾಗಿ ರೈತ ಮತ್ತು ದಲಿತ ಹಾಗೂ ಕೂಲಿ ಸಂಘಟನೆಗಳು ಕ್ರಿಯಾಶೀಲರಾಗಿ ಒಗ್ಗಟ್ಟಿನಿಂದ ಹೋರಾಡಬೇಕಾದ ಅನಿವಾರ್ಯತೆ ಈಗ ನಮ್ಮ ಮುಂದಿದೆ. ಎಲ್ಲರೂ ಈಗ ಈ ಹೋರಾಟಕ್ಕೆ ಕೈಜೋಡಿಸಬೇಕಿದೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Facebook : ನಿಮ್ಮ ಟೈಮ್​ಲೈನ್; ಅಲ್ಪಸಂಖ್ಯಾತರ ಪೀಡಕ ಇದಿ ಅಮೀನ್

Published On - 11:31 am, Sat, 9 April 22

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ