Dharwad: ಮಾನವ ಜಾತಿ ತಾನೊಂದೆ ವಲಂ; ಬಹುತ್ವದ ನಾಡಿನಲ್ಲಿ ಬಂಧುತ್ವದ ಬರಗಾಲ!

|

Updated on: Apr 13, 2022 | 2:33 PM

DavidKumar A : ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

Dharwad: ಮಾನವ ಜಾತಿ ತಾನೊಂದೆ ವಲಂ; ಬಹುತ್ವದ ನಾಡಿನಲ್ಲಿ ಬಂಧುತ್ವದ ಬರಗಾಲ!
ಡೇವಿಡ್ ಕುಮಾರ್ ಎ.
Follow us on

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

 

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಪರಿಸರ ಯೋಜನಾ ಮುಖ್ಯಸ್ಥರಾಗಿರುವ ಡೇವಿಡ್ ಕುಮಾರ್ ಎ. ಹಾಸನ ಮೂಲದವರು. ಅವರ ಕವನ ಓದಿಗೆ. 

ತಿರುಳಿನಲಿ ಎರಡೂ ಒಂದೇ
ಕರಬೂಜ- ಕಲ್ಲಂಗಡಿಗಳು
ರಾಮ-ರಹೀಮರಂತೆ!

ರಾಮನವಮಿಯ ದಿನ
ಕರಬೂಜದ ಪಾನಕ
ಕಲ್ಲಂಗಡಿಯ ಮಾರಣಹೋಮ
ಬೀದಿಯಲಿ ರುಂಡ-ಛೇದನ
ಕೆಂಪು ತಿರುಳು ಕಪ್ಪು ಬೀಜ
ಭ್ರಾತೃತ್ವದ ಗರ್ಭಪಾತ!

ಹಣ್ಣು ಕೊಯ್ಯುವ ಕತ್ತಿ
ಮಮ್ಮಲ ಮರುಗುತ್ತಿದೆ…
ಮಣ್ಣಾಗುವ ಮಾನವನ
ನೆತ್ತರ ಆಸೆಯ ಕಂಡು
ಹಬ್ಬದ ಪಾನಕವೂ ಕಹಿ!

ವಸಂತ ಕಾಲದಲೂ
ಕೋಗಿಲೆಗಳು ಹಾಡುತ್ತಿಲ್ಲಾ
ಚಿಗುರಿದ ಮಾಮರಕ್ಕೂ
ಹೊತ್ತಿ ಉರಿಯುವ ಭಯ

ಬಹುತ್ವದ ನಾಡಿನಲ್ಲಿ
ಬಂಧುತ್ವದ ಬರಗಾಲ!
ಸಹಬಾಳ್ವೆ ಸೊಲ್ಲಿಗೂ
ದೇಶದ್ರೋಹದ ಪಟ್ಟ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ‘ನಮ್ಮೆಲ್ಲರ ಗುಪ್ತ ಒಪ್ಪಿಗೆಯಿಲ್ಲದೇ ಯಾರೂ ಅಪರಾಧ ಮಾಡುವುದು ಸಾಧ್ಯವಿಲ್ಲ’

ಇದನ್ನೂ ಓದಿ : ಅನ್ನದಾತನೊಂದಿಗೆ ನಾವು: ಭೂಮಿಯಿಂದ ದೇವರು ಗುಳೆ ಹೋಗಬೇಕು ಇಲ್ಲಾ ಆಕಾಶದಲ್ಲಿ ಧಾನ್ಯ ಬೆಳೆಯಬೇಕು

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಗುತ್ತುಮನೆಯ ಶೆಟ್ಟರಿಗೆ ಸತ್ತಾರನ ಬೈಹುಲ್ಲು ಬೇಕು