ಖ್ಯಾತ ಸಾಹಿತಿ ‘ಕಾಮರೂಪಿ’ ಎಂಎಸ್​​​​ ಪ್ರಭಾಕರ ಇನ್ನಿಲ್ಲ

ಕನ್ನಡ ಸಾಹಿತ್ಯ ವಲಯದಲ್ಲಿ ಕಾಮರೂಪಿ ಎಂದೇ ಚಿರಪರಿಚಿತರಾದ ಹಿರಿಯ ಪತ್ರಕರ್ತ, ಲೇಖಕ ಎಂ.ಎಸ್. ಪ್ರಭಾಕರ ನಿಧನರಾಗಿದ್ದಾರೆ. ಒಂದು ತೊಲ ಪುನುಗು ಮತ್ತು ಇತರ ಕತೆಗಳು’, ಕಿರು ಕಾದಂಬರಿಗಳಾದ ಕುದುರೆ ಮೊಟ್ಟೆ’ ಮತ್ತು ಅಂಜಿಕಿನ್ಯಾತಕಯ್ಯ ‘ ಇವರ ಪ್ರಮುಖ ಸಾಹಿತ್ಯ ಕೃತಿಗಳು.

ಖ್ಯಾತ ಸಾಹಿತಿ ಕಾಮರೂಪಿ ಎಂಎಸ್​​​​ ಪ್ರಭಾಕರ ಇನ್ನಿಲ್ಲ
ಕಾಮರೂಪಿ ಎಂ.ಎಸ್.ಪ್ರಭಾಕರ
Edited By:

Updated on: Dec 29, 2022 | 2:32 PM

ಕಾಮರೂಪಿ(Kamaroopi) ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಹಿರಿಯ ಪತ್ರಕರ್ತ, ಲೇಖಕ ಕೋಲಾರದ ಎಂ.ಎಸ್. ಪ್ರಭಾಕರ(87) (M.S.Prabhakar) ಅವರು ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’, ಕಿರು ಕಾದಂಬರಿಗಳಾದ ಕುದುರೆ ಮೊಟ್ಟೆ’ ಮತ್ತು ಅಂಜಿಕಿನ್ಯಾತಕಯ್ಯ ‘ ಇವರ ಪ್ರಮುಖ ಸಾಹಿತ್ಯ ಕೃತಿಗಳು. 1936ರಲ್ಲಿ ಹುಟ್ಟಿದ ಪ್ರಭಾಕರ ಅವರು  ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಇಂಗ್ಲೀಷಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಅಧ್ಯಾಪಕರಾಗಿ ಇವರು ಸೇವೆ ಸಲ್ಲಿಸಿದ್ದರು.ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅವರು ನಂತರ ಅಸ್ಸಾಂನ ಗುವಾಹಟಿ ವಿವಿಯಲ್ಲಿ ಪ್ರಾಧ್ಯಾಪಕರಾದರು. 1975ರ ತುರ್ತು ಪರಿಸ್ಥಿತಿಯ ಸಮಯ. ಆಗ ಗುವಾಹಟ ವಿವಿ ತೀವ್ರಗಾಮಿಗಳ ಚಟುವಟಿಕೆಯ ಕೇಂದ್ರವೆಂದು ಸರ್ಕಾರ ಅದರ ಮೇಲೆ ಕಣ್ಣಿಟ್ಟಿತ್ತು.ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಭಾಕರ ಅವರ ಗುವಾಹಟಿಯಿಂದ ಮುಂಬೈಗೆ ಬಂದರು. ಅಧ್ಯಾಪನ ವೃತ್ತಿಯಿಂದ ಪತ್ರಿಕಾರಂಗಕ್ಕೆ ಅವರು ಹೊರಳಿದ್ದು ಇಲ್ಲಿಯೇ.

ಮುಂಬೈಯಲ್ಲಿ ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ ಸೇರುವ ಮೂಲಕ ಅವರು ಪತ್ರಕರ್ತರಾದರು. ಏಳು ವರ್ಷ ಇಲ್ಲಿ ಕೆಲಸ ಮಾಡಿದ ನಂತರ 1983ರಲ್ಲಿ ದಿ ಹಿಂದೂ ಪತ್ರಿಕೆ ಸೇರಿದ ಅವರು  ಅಸ್ಸಾಂನ ವಿಶೇಷ ವರದಿಗಾರರಾಗಿದ್ದರು. ಅಸ್ಸಾಂ ರಾಜಕಾರಣ,ಸಾಂಸ್ಕೃತಿಕ ಚಟುವಟಿಕೆ, ಮಾನವೀಯ ಸಂವೇದನೆ ಬಗ್ಗೆ ವರದಿ ಮಾಡುತ್ತಿದ್ದ ಅವರನ್ನು  ದಿ ಹಿಂದೂ ದಕ್ಷಿಣ ಆಫ್ರಿಕಾಕ್ಕೆ ವರ್ಗ ಮಾಡಿತು. ಸುಮಾರು 10 ವರ್ಷ ಅವರು ಅಲ್ಲಿ ಕೆಲಸ ಮಾಡಿದ್ದರು.

ಪತ್ರಿಕೋದ್ಯಮದಿಂದ ಸಾಹಿತ್ಯ ಲೋಕಕ್ಕೆ

ಮಾತೃಭಾಷೆ ಕನ್ನಡದೊಂದಿಗೆ ತೆಲುಗು ಕೂಡಾ ಗೊತ್ತು. ವೃತ್ತಿ ಜೀವನದಲ್ಲಿ ಇಂಗ್ಲಿಷ್ ಅಧ್ಯಾಪರಾಗಿದ್ದು, ಇಂಗ್ಲಿಷ್ ಪತ್ರಿಕೆಯಲ್ಲೇ ದುಡಿದಿದ್ದರೂ ಸೃಜನಶೀಲ ಬರವಣಿಗೆಗೆ ಅವರು ಆಯ್ದುಕೊಂಡಿದ್ದು ಕನ್ನಡ. ಇವರ ಪೂರ್ವಿಕರ ಊರು ಮೋಟನಹಳ್ಳಿ. ಪೂರ್ತಿ ಹೆಸರು ಮೋಟನಹಳ್ಳಿ ಸೂರಪ್ಪ ಪ್ರಭಾಕರ್.

ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಪ್ರಭಾಕರ ಅವರು ಪಿಎಚ್ಡಿಗೆ ಆರಿಸಿಕೊಂಡಿದ್ದು ಜಾರ್ಜ್ ಆರ್ವೆಲ್ ಸಾಹಿತ್ಯವಾಗಿತ್ತು. ಬಹುಭಾಷಿಗರಾಗಿದ್ದ ಪ್ರಭಾಕರ್ ಕನ್ನಡದ ಸೃಜನಶೀಲ ಬರಹಗಾರರು. ಲುಕಿಂಗ್ ಬ್ಯಾಕ್ ಇಂಟು ದಿ ಪ್ಯೂಚರ್: ಐಡೆಂಟಿಟಿ ಆಂಡ್ ಇನ್ಸರ್ಜೆನ್ಸಿ ಇನ್ ನಾರ್ತ್ ಈಸ್ಟ್ ಇಂಡಿಯಾ ಎಂಬ ಪುಸ್ತಕದಲ್ಲಿ ಇವರು ಈಶಾನ್ಯ ಭಾರತದ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಕಾಮರೂಪಿಯವರ ಕಥೆ, ಕಾದಂಬರಿ, ಕವನ, ಬರಹ, ಬ್ಲಾಗ್ ಬರಹಗಳನ್ನೊಳಗೊಂಡ ಕೃತಿ  ಕಾಮರೂಪಿ ಸಮಗ್ರವನ್ನು ಸಂಚಯ ಪುಸ್ತಕ ಪ್ರಕಟಿಸಿದೆ.  ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಕಾಮರೂಪಿ ಅವರಿಗೆ 2018ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಸಂದಿದೆ.

ಆಸ್ಪತ್ರೆಗೆ ದೇಹ ದಾನ

ಕೋಲಾರದ ಕಠಾರಿುಪಾಳ್ಯ ನಿವಾಸಿಯಾಗಿದ್ದ ಕಾಮರೂಪಿ ಅವಿವಾಹಿತರು. ಅವರ ಮೃತದೇಹವನ್ನು ಎಂ.ಎಸ್ .ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮತ್ತಷ್ಟು ಸಾಹಿತ್ಯ-ಸಂಸ್ಕೃತಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:44 pm, Thu, 29 December 22