S.V. Parameshwar Bhat Birth Anniversary : ‘ಪ್ರೀತಿಯ ನಂದಾದೀಪ’ ಬೆಳಗಿದ ಎಸ್.ವಿ.ಪರಮೇಶ್ವರ ಭಟ್ಟರು

|

Updated on: Feb 08, 2022 | 2:30 PM

Kannada Poet : ಅಮರ ಶತಕ, ಗಾಥಾಸಪ್ತಶತಿ, ಗೀತಗೋವಿಂದ, ಭರ್ತೃಹರಿಯ ಶತಕತ್ರಯಗಳನ್ನು ಕನ್ನಡಕ್ಕೆ ತಂದ ಇವರು ಅನುವಾದದ ಮೂಲಕ ನೀಡಿದ ಕೊಡುಗೆ ಬಹಳ ದೊಡ್ಡದು. ಪ್ರಬಂಧಕಾರರಾಗಿ, ಕವಿಯಾಗಿ ಕೂಡ ಅವರ ಸಾಧನೆ ಬಹಳ ದೊಡ್ಡದು. ಕನ್ನಡ ಸಾಹಿತ್ಯದಲ್ಲಿ ಇವರ ಕುರಿತು ಏಕೆ ಚರ್ಚೆಗಳಾಗಲಿಲ್ಲ ಎನ್ನುವ ಅಚ್ಚರಿ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ.’ ಎನ್. ಎಸ್. ಶ್ರೀಧರಮೂರ್ತಿ

S.V. Parameshwar Bhat Birth Anniversary : ‘ಪ್ರೀತಿಯ ನಂದಾದೀಪ’ ಬೆಳಗಿದ ಎಸ್.ವಿ.ಪರಮೇಶ್ವರ ಭಟ್ಟರು
ಎಸ್. ವಿ. ಪರಮೇಶ್ವರ ಭಟ್ ಮತ್ತು ಎನ್. ಎಸ್. ಶ್ರೀಧರ ಮೂರ್ತಿ
Follow us on

ಎಸ್. ವಿ. ಪರಮೇಶ್ವರ ಭಟ್ | S.V. Parameshwar Bhat: ಶೃಂಗೇರಿ ವಿದ್ಯಾರಣ್ಯಪುರದ ಪರಮೇಶ್ವರ ಭಟ್ಟರು ಅನುವಾದಗಳ ಮೂಲಕ ಹೆಸರು ಮಾಡಿದ ಹಿರಿಯರು. ಕಾಳಿದಾಸ ಮತ್ತು ಭಾಸ ಮಹಾಕವಿಗಳನ್ನು ಸಮಗ್ರವಾಗಿ ಕನ್ನಡಕ್ಕೆ ತಂದ ಹೆಗ್ಗಳಿಕೆ ಅವರದು. ಮುದ್ದಣ್ಣ ಕವಿಯನ್ನು ಸಮಗ್ರವಾಗಿ ಕನ್ನಡಕ್ಕೆ ಪರಿಚಯಿಸಿವರು ಅವರು. ಅಮರ ಶತಕ, ಗಾಥಾಸಪ್ತಶತಿ, ಗೀತಗೋವಿಂದ, ಭರ್ತೃಹರಿಯ ಶತಕತ್ರಯಗಳನ್ನು ಕನ್ನಡಕ್ಕೆ ತಂದ ಅವರು ಅನುವಾದದ ಮೂಲಕ ನೀಡಿದ ಕೊಡುಗೆ ಬಹಳ ದೊಡ್ಡದು. ಪ್ರಬಂಧಕಾರರಾಗಿ ಕೂಡ ಅವರ ಮಹತ್ವದ ಕೃತಿಗಳನ್ನು ನೀಡಿದ್ದಾರೆ. ಅದರಂತೆ ಕವಿಯಾಗಿ ಕೂಡ ಅವರ ಸಾಧನೆ ಬಹಳ ದೊಡ್ಡದು ಅವರ ಬರವಣಿಗೆಯ ವಿಪುಲ ರಾಶಿಯನ್ನು ನೋಡಿದರೆ ಕನ್ನಡ ಸಾಹಿತ್ಯದಲ್ಲಿ ಇವರ ಕುರಿತು ಏಕೆ ಚರ್ಚೆಗಳಾಗಲಿಲ್ಲ ಎನ್ನುವ ಅಚ್ಚರಿ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. ಆರು ಕವನ ಸಂಕಲನಗಳು, ಸಾಂಗತ್ಯ, ತ್ರಿಪದಿ, ಏಳೆ ಮೊದಲಾದ ವಿಭಿನ್ನ ಛಂದಸ್ಸಿನಲ್ಲಿ ರಚಿತವಾಗಿರುವ ಸರಿ ಸುಮಾರು ಮೂರು ಸಾವಿರ ಮುಕ್ತಕಗಳು. ಸುಮಾರು ಎರಡು ಸಾವಿರ ವಚನಗಳು ಅವರ ಕಾವ್ಯ ಭಂಡಾರದಲ್ಲಿ ಸೇರಿವೆ.

ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತರು

*

ಭಾಗ -1 

ಪರಮೇಶ್ವರ ಭಟ್ಟರು ಜನಿಸಿದ್ದು ತೀರ್ಥಹಳ್ಳಿ ತಾಲ್ಲೂಕಿನ ಮಳೂರಿನಲ್ಲಿ 1914ರ ಫೆಬ್ರವರಿ 8ರಂದು. ತಂದೆ ಸದಾಶಿವ ರಾಯರು. ತಾಯಿ ಲಕ್ಷ್ಮಮ್ಮ. ಮಳೂರು, ತೂದೂರುಗಳಲ್ಲಿ ಪ್ರಾಥಮಿಕ ತೀರ್ಥಹಳ್ಳಿಯಲ್ಲಿ ಪ್ರೌಢಶಿಕ್ಷಣ ಮುಗಿಸಿ ಬಂಧುಗಳ ಸಹಕಾರದಿಂದ ಬೆಂಗಳೂರು ಮೈಸೂರುಗಳಲ್ಲಿ ಉನ್ನತ ಶಿಕ್ಷಣ ಪಡೆದರು. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ ನಂತರ ತುಮಕೂರು, ಶಿವಮೊಗ್ಗಗಳಲ್ಲಿ ಸೇವೆ ಸಲ್ಲಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಂತರ ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವೃತ್ತಿ ಜೀವನದ ಕೊನೆಯ ಹಂತದಲ್ಲಿ ಮಂಗಳೂರಿನ ಸ್ನಾತಕೊತ್ತರ ಕೇಂದ್ರ ನಿರ್ದೇಶಕರಾದರು. ಈ ಕೇಂದ್ರವನ್ನು ಕಟ್ಟಿ ಬೆಳೆಸುವಲ್ಲಿ ಅವರದು ಮುಖ್ಯಪಾತ್ರ. ಶ್ರೇಷ್ಠ ವಿದ್ಯಾಂಸರು ಎಂಬ ಖ್ಯಾತಿಯನ್ನು ಪಡೆದಿದ್ದ ಪರಮೇಶ್ವರ ಭಟ್ಟರು ತಾವು ಕಾರ್ಯನಿರ್ವಹಿಸಿದೆಲ್ಲೆಡೆಯೂ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದರು. ಬಡತನ ಮತ್ತು ಕೌಟಂಬಿಕ ಸಮಸ್ಯೆಗಳನ್ನು ಜೀವನದುದ್ದಕ್ಕೂ ಎದುರಿಸಿದರೂ ಅದೆಲ್ಲವನ್ನೂ ನುಂಗಿ ಸಂತಸವನ್ನೇ ಹಂಚಿದ ಅವರಿಗೆ ಪರಮೇಶ್ವರ ಎನ್ನುವ ಹೆಸರು ಅನ್ವರ್ಥಕವಾಗಿತ್ತು.

ಕನ್ನಡ, ಸಂಸ್ಕೃತ, ಇಂಗ್ಲಿಷ್ ಹೀಗೆ ಮೂರು ಭಾಷೆಗಳಲ್ಲಿ ಅಪಾರ ವಿದ್ವತ್ತನ್ನು ಪಡೆದ ಪರಮೇಶ್ವರ ಭಟ್ಟರು ಅಲ್ಲಿನ ತಂತ್ರ ವೈವಿಧ್ಯಗಳನ್ನೂ ತಮ್ಮ ಸಾಹಿತ್ಯದಲ್ಲಿ ಪ್ರಯೋಗಿಸಿದರು. ವಸ್ತುವಿನಲ್ಲಿ ಕೂಡ ಹೊಸತನಕ್ಕೆ ಪ್ರಯತ್ನಿಸಿದರು. ಪ್ರೇಮದ ನವಿರನ್ನು ಹಿಡಿದಿಟ್ಟಂತೆ ಬಡತನದ ಭೀಕರತೆಯನ್ನೂ ತೆರೆದಿಟ್ಟರು. ಪ್ರಕೃತಿ ಸೌಂದರ್ಯವನ್ನು ವರ್ಣಿಸಿದಂತೆ ಮಾವನ ಸ್ವಭಾವದ ವಿಕಾರಗಳನ್ನೂ ಕೂಡ ಚಿತ್ರಿಸಿದರು. ಸರಳತೆ ಅವರ ಬರಹಗಳ ದೊಡ್ಡ ಶಕ್ತಿ. ಅದರಲ್ಲಿ ತುಂಬಿದ ಅರ್ಥ ವೈವಿಧ್ಯ ಅವರ ಹಿರಿಮೆ.

ಬೆಂಕಿಯ ಪೊಟ್ಟಣದೊಳಗೊಂದೆ ಕಡ್ಡಿಯು

ಇರುವಾಗ ಜೋಪಾನವಾಗಿ

ಬಳಸುವ ತೆರೆದೊಳು ನನ್ನೆಲ್ಲಾ ಶಕ್ತಿಯ

ಬಳಸುವೆ ನಾ ಮಿತವಾಗಿ

ಎಂದು ತಮ್ಮ ಸಂಯಮದ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಆದರೆ ಬರವಣಿಗೆಯಲ್ಲಿ ಅವರ ಶಕ್ತಿ ಚದುರಿ ಹೋಗಿರುವುದೊಂತೂ ನಿಜ. ಸಂಸ್ಕೃತ ಮಹಾಕವಿಗಳನ್ನು ಕನ್ನಡಕ್ಕೆ ತಂದ ಪರಮೇಶ್ವರ ಭಟ್ಟರಿಗೆ ಕನ್ನಡದಲ್ಲಿ ಕೂಡ ಮಹಾಕಾವ್ಯವನ್ನು ಬರೆಯುವ ಸಾಮರ್ಥ್ಯವಿತ್ತು. ಆದರೆ ಅವರ ಮಹತ್ವಾಕಾಂಕ್ಷೆಗಳೆಲ್ಲವೂ ಬಿಡಿ ಬಿಡಿ ರಚನೆಗಳಲ್ಲಿ ಹಂಚಿ ಹೋಯಿತು. ಕನ್ನಡ ಸಾಹಿತ್ಯದಲ್ಲಿ ಅವರ ಕುರಿತು ಗಂಭೀರ ಚರ್ಚೆಗಳಾಗದಿರಲು ಇದೂ ಒಂದು ಕಾರಣ. ಅವರ ಬರಹಗಳ ಮಹಾಸಮುದ್ರದ ಕಡೆಗೆ ಕಣ್ಣ ಹಾಯಿಸಿದರೆ ಅಲೆಗಳ ತುಂಟತನದಂತೆ ಗಂಭೀರತೆಯೂ ಇದೆ. ಅವರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡ ಬೇಕಾದ ಅಗತ್ಯವಿರುವುದು ಈ ಕಾರಣದಿಂದಲೇ. ಆಧುನಿಕ ಕನ್ನಡ ಸಾಹಿತ್ಯವನ್ನು ನಿರ್ಮಿಸುವಲ್ಲಿ ಅವರ ಕೊಡುಗೆ ಮಹತ್ವದ್ದು ಎನ್ನುವ ಹಿನ್ನೆಲೆಯಲ್ಲಿಯೇ ಈ ಅಧ್ಯಯನ ನಡೆಯ ಬೇಕು. ಆಧುನಿಕ ಕನ್ನಡ ಸಾಹಿತ್ಯದ ಮೊದಲ ಹಂತದಲ್ಲಿ ಕೆಲಸ ಮಾಡಿದವರು ಪರಸ್ಪರ ವಿರುದ್ದ ಎನ್ನಿಸಬಲ್ಲ ಎರಡು ಹೊಣೆಗಾರಿಕೆಯನ್ನು ನಿರ್ವಹಿಸ ಬೇಕಿತ್ತು. ಪ್ರಾಚೀನ ಸಾಹಿತ್ಯದ ಕುರಿತು ಓದುಗರ ಗಮನವನ್ನು ಸೆಳೆಯಬೇಕಿತ್ತು. ಇನ್ನೊಂದು ಕಡೆ ಪ್ರಾಚೀನ ಕಾವ್ಯದ ರೂಪುಗಳನ್ನು ನಿರಾಕರಿಸಿ ಹೊಸ ಕಾವ್ಯ ಸೃಷ್ಟಿಯನ್ನೂ ಮಾಡಬೇಕಿತ್ತು. ಕನ್ನಡದ ಶ್ರೇಷ್ಠ ಅಧ್ಯಾಪಕರಲ್ಲೊಬ್ಬರಾದ ಎಸ್.ವಿ.ಪರಮೇಶ್ವರ ಭಟ್ಟರ ಸೃಜನಶೀಲ ಸ್ವರೂಪವನ್ನು ಈ ಹಿನ್ನೆಲೆಯಲ್ಲೇ ನೋಡಬೇಕು.

*

(ಮುಂದಿನ ಭಾಗವನ್ನು ನಿರೀಕ್ಷಿಸಿ)

ಇದನ್ನೂ ಓದಿ : Lata Mangeshkar; ‘ನನ್ನಿಂದ ತಪ್ಪಾಗಿದೆ ಕ್ಷಮಿಸಿ ಲತಾಜೀ, ನಿಮ್ಮನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ಕನಸು ಹಾಗೇ ಉಳಿಯಿತು’ 

Published On - 10:42 am, Tue, 8 February 22