Lata Mangeshkar; ‘ನನ್ನಿಂದ ತಪ್ಪಾಗಿದೆ ಕ್ಷಮಿಸಿ ಲತಾಜೀ, ನಿಮ್ಮನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ಕನಸು ಹಾಗೇ ಉಳಿಯಿತು’
Home Visit : ವಿಶಾಲವಾದ ಹಾಲ್ನ ಗೋಡೆಯಲ್ಲಿ ಆನೆಯ ದೊಡ್ಡ ಫೊಟೋ ಫ್ರೇಮ್ ಇತ್ತು. ಮಧುರವಾದ ಧ್ವನಿಯಿಂದ ಅವರು ನಮ್ಮನ್ನು ಕುಳಿತುಕೊಳ್ಳಿ ಎಂದರು. ಗೋಡೆ ಮೇಲೆ ಆನೆಯ ಚಿತ್ರ ಯಾಕೆ ಇದೆ? ನೀವು ಪ್ರಶಸ್ತಿಗಳನ್ನು ಸ್ವೀಕರಿಸಿದ ಫೊಟೋ ಏಕೆ ಹಾಕಿಲ್ಲ ಎಂದು ಆರಂಭದಲ್ಲೇ ಪ್ರಶ್ನಿಸಿದೆ.’ ಶಿವಸುಬ್ರಹ್ಮಣ್ಯ ಕೆ.
ಲತಾ ಮಂಗೇಶ್ಕರ್ | Lata Mangeshkar : ಸೋಫಾದಲ್ಲಿ ಕುಳಿತ ಲತಾಜಿ ಅವರ ಜಡೆ ಎದುರು ಬಿಟ್ಟಿದ್ದರಿಂದ ನೆಲದವರೆಗೆ ತಾಗಿತ್ತು. ಆ ಇಳಿವಯಸ್ಸಿನಲ್ಲೂ ಅವರಿಗೆ ಕೂದಲು ಕಡಿಮೆಯಾಗಿದೆ ಎಂಬ ಬೇಸರ ಇತ್ತು! ಸಣ್ಣ ಬಳ್ಳಿಯಷ್ಟು ಗಾತ್ರ ಇರುವ ಜಡೆಯನ್ನೂ ನೇಯ್ದು ಹಾಕಿದ್ದರು. ನಾವು ಬಂದ ಕಾರಣ ತಿಳಿಸಿದಾಗ ಎಲ್ಲಿಲ್ಲದ ಖುಷಿ. ಪತ್ರಿಕೆಗಳು ಹೀಗೆ ಸಂಗೀತ ಕಾರ್ಯಕ್ರಮ ಏರ್ಪಡಿಸುವುದೇ ವಿರಳ. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕಾ ಬಳಗ ಕಾರ್ಯಕ್ರಮ ಏರ್ಪಡಿಸುತ್ತಿದೆಯೆಂದರೆ ನಾನು ಒಲ್ಲೆ ಎನ್ನಲಾದೀತೇ ಎಂದು ಲತಾಜೀ ಹೇಳಿದಾಗ ನಾವು ಬೀಗಿದೆವು. ಆದರೆ ನನಗೆ ವಯಸ್ಸು ಆಗಿರುವುದರಿಂದ ಇಲ್ಲಿಂದ ಬೆಂಗಳೂರು ಅಥವಾ ಹುಬ್ಬಳ್ಳಿವರೆಗೆ ಕಾರಲ್ಲಿ, ರೈಲಿನಲ್ಲಿ ಪ್ರಯಾಣಿಸಲು ಕಷ್ಟ ಎಂದರು. ವಿಮಾನ ಟಿಕೆಟ್ ಬೇಕು ಎಂದು ಪಟ್ಟು ಹಿಡಿಯುವ ಕಲಾವಿದರೇ ಇರುವಾಗ, ಲತಾಜೀ ನಮಗೆ ಅಪರೂಪವಾಗಿ ಕಾಣಿಸಿದರು.
ಶಿವಸುಬ್ರಹ್ಮಣ್ಯ ಕೆ. ಹಿರಿಯ ಪತ್ರಕರ್ತ, ಬೆಂಗಳೂರು (Shivasubramanya K)
2010 ರ ಜುಲೈ 7 ರಂದು ಗಾನಕೋಗಿಲೆಯ ಭೇಟಿಯ ನೆನಪು ಕೊನೇ ಉಸಿರು ಇರುವವರೆಗೂ ಮರೆಯಲಾರೆ ಮತ್ತು ಗಾನಕೋಗಿಲೆಗೆ ಆಹ್ವಾನವಿತ್ತು ಅವರನ್ನು ಕರೆಸಿಕೊಳ್ಳಲು ಸಾಧ್ಯವಾಗದೇ ಹೋಯಿತಲ್ಲ ಎಂಬ ಪಶ್ಚಾತ್ತಾಪ ಕೂಡಾ ಶಾಶ್ವತ ಉಳಿದಿದೆ!
ಆಗ ನಾನು ಕನ್ನಡ ಪತ್ರಿಕೆಯೊಂದರ ಸಂಪಾದಕ. ಪತ್ರಿಕೆಯ ಹೆಸರಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮ ಏರ್ಪಡಿಸಬೇಕು ಎಂಬ ಪ್ರಸ್ತಾಪವನ್ನು ಮ್ಯಾನೇಜ್ಮೆಂಟ್ ಮುಂದಿಟ್ಟೆ. ಆ ಕಾರ್ಯಕ್ರಮ ಲತಾ ಮಂಗೇಶ್ಕರ್ ಅವರಿಂದ ಉದ್ಘಾಟನೆಗೊಂಡು, ಅವರ ಗಾಯನದೊಂದಿಗೇ ಶುಭಾರಂಭವಾಗಬೇಕು ಎಂಬ ನನ್ನ ಆಶಯವಾಗಿತ್ತು. ಮ್ಯಾನೇಜ್ಮೆಂಟ್ ಒಪ್ಪಿಗೆ ನೀಡಿತು. ಇನ್ನು ಹೊರಡುವ ಪ್ಲ್ಯಾನ್ ಮಾಡಿಕೊಂಡೆ. ಜತೆಗೆ ಕಂಪೆನಿಯ ಉಪಾಧ್ಯಕ್ಷರೂ ಇದ್ದರು. ಆದರೆ ಲತಾಜೀ ಭೇಟಿ ಹೇಗೆ? ಅವರನ್ನು ಒಪ್ಪಿಸುವುದು ಹೇಗೆ ಎಂಬುದೇ ಸವಾಲಾಗಿತ್ತು. ಕಂಪೆನಿಯ ಉಪಾಧ್ಯಕ್ಷರಿಗೆ ಮುಂಬೈಯಲ್ಲಿ ಸಿದ್ದಿವಿನಾಯಕ ದೇವಾಲಯದ ಅರ್ಚಕರ ಪರಿಚಯವಿತ್ತು. ಲತಾಜೀ ಆಗಾಗ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು ಹಾಗೂ ಅರ್ಚಕರು ಲತಾಜೀ ಅವರ ಮನೆಗೇ ದೇವರ ಪ್ರಸಾದ ತಲುಪಿಸುತ್ತಿದ್ದರು ಎಂಬ ಮಾಹಿತಿ ನಮಗೆ ತಿಳಿಯಿತು. ನಾವೂ ದೇವಾಲಯಕ್ಕೆ ತೆರಳಿ ದರ್ಶನ ಮಾಡಿದ ನಂತರ ಅರ್ಚಕರನ್ನು ಪ್ರತ್ಯೇಕ ಭೇಟಿ ಮಾಡಿದೆವು. ಅರ್ಚಕರು ಲತಾಜೀ ಭೇಟಿ ಮಾಡಿಸಲು ಒಪ್ಪಿದರು. ದೇವರ ಪ್ರಸಾದ ತೆಗೆದುಕೊಂಡು ಲತಾ ಜಿ ಮನೆಗೆ ಹೋದೆವು.
ವಿಶಾಲವಾದ ಹಾಲ್ನ ಗೋಡೆಯಲ್ಲಿ ಆನೆಯ ದೊಡ್ಡ ಫೊಟೋ ಫ್ರೇಮ್ ಇತ್ತು. ಅಡುಗೆಕೋಣೆಯಲ್ಲಿ ಇದ್ದ ಲತಾಜೀ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದರು. ಮಧುರವಾದ ಧ್ವನಿಯಿಂದ ಅವರು ನಮ್ಮನ್ನು ಕುಳಿತುಕೊಳ್ಳಿ ಎಂದರು. ಗೋಡೆ ಮೇಲೆ ಆನೆಯ ಚಿತ್ರ ಯಾಕೆ ಇದೆ? ನೀವು ಪ್ರಶಸ್ತಿಗಳನ್ನು ಸ್ವೀಕರಿಸಿದ ಫೊಟೋ ಏಕೆ ಹಾಕಿಲ್ಲ ಎಂದು ಆರಂಭದಲ್ಲೇ ಪ್ರಶ್ನಿಸಿದೆ. ಅವರಿಗೆ ಪರಿಸರ, ಪ್ರಾಣಿ, ಪಕ್ಷಿಯೆಂದರೆ ಬಲು ಪ್ರೀತಿ. ಆದ್ದರಿಂದ ಮುಂಬಯಿಯ ಖ್ಯಾತ ಫೊಟೋ ಗ್ರಾಫರ್ ಒಬ್ಬರಿಂದ ಆ ಫೊಟೋ ಫ್ರೇಮ್ ಪಡೆದುಕೊಂಡಿದ್ದರಂತೆ.
ಸೋಫಾದಲ್ಲಿ ಕುಳಿತ ಲತಾಜಿ ಅವರ ಜಡೆ ಎದುರು ಬಿಟ್ಟಿದ್ದರಿಂದ ನೆಲದವರೆಗೆ ತಾಗಿತ್ತು. ಆ ಇಳಿವಯಸ್ಸಿನಲ್ಲೂ ಅವರಿಗೆ ಕೂದಲು ಕಡಿಮೆಯಾಗಿದೆ ಎಂಬ ಬೇಸರ ಇತ್ತು! ಸಣ್ಣ ಬಳ್ಳಿಯಷ್ಟು ಗಾತ್ರ ಇರುವ ಜಡೆಯನ್ನೂ ನೇಯ್ದು ಹಾಕಿದ್ದರು. ನಾವು ಬಂದ ಕಾರಣ ತಿಳಿಸಿದಾಗ ಎಲ್ಲಿಲ್ಲದ ಖುಷಿ. ಪತ್ರಿಕೆಗಳು ಹೀಗೆ ಸಂಗೀತ ಕಾರ್ಯಕ್ರಮ ಏರ್ಪಡಿಸುವುದೇ ವಿರಳ. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕಾ ಬಳಗ ಕಾರ್ಯಕ್ರಮ ಏರ್ಪಡಿಸುತ್ತಿದೆಯೆಂದರೆ ನಾನು ಒಲ್ಲೆ ಎನ್ನಲಾದೀತೇ ಎಂದು ಲತಾಜೀ ಹೇಳಿದಾಗ ನಾವು ಬೀಗಿದೆವು. ಆದರೆ ನನಗೆ ವಯಸ್ಸು ಆಗಿರುವುದರಿಂದ ಇಲ್ಲಿಂದ ಬೆಂಗಳೂರು ಅಥವಾ ಹುಬ್ಬಳ್ಳಿವರೆಗೆ ಕಾರಲ್ಲಿ, ರೈಲಿನಲ್ಲಿ ಪ್ರಯಾಣಿಸಲು ಕಷ್ಟ ಎಂದರು. ವಿಮಾನ ಟಿಕೆಟ್ ಬೇಕು ಎಂದು ಪಟ್ಟು ಹಿಡಿಯುವ ಕಲಾವಿದರೇ ಇರುವಾಗ, ಲತಾಜೀ ನಮಗೆ ಅಪರೂಪವಾಗಿ ಕಾಣಿಸಿದರು. ಲತಾಜೀ, ನಾವು ನಿಮ್ಮನ್ನು ಕಾರು, ರೈಲು ಪ್ರಯಾಣ ಮಾಡಿಸುವುದಿಲ್ಲ. ನಿಮ್ಮನ್ನು ವಿಶೇಷ ವಿಮಾನದಲ್ಲಿ ಕರೆಸಿಕೊಳ್ಳುತ್ತೇವೆ ಎಂದಾಗ ಸಂತಸದಿಂದ ಒಪ್ಪಿ, ಸುಮಾರು ಒಂದು ಗಂಟೆಯ ಕಾರ್ಯಕ್ರಮ ನೀಡುವುದಾಗಿ ವಾಗ್ದಾನ ನೀಡಿದರು. ಕಾರ್ಯಕ್ರಮಕ್ಕಾಗಿ ಸಂಭಾವನೆ ಬಗ್ಗೆ ಆತಂಕಪಡಬೇಡಿ, ಇಂಡಿಯನ್ ಎಕ್ಸ್ಪ್ರೆಸ್ ಬಳಗದ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಅವರು ಹೆಮ್ಮೆ ಪಟ್ಟಿದ್ದರು.
ಇದನ್ನೂ ಓದಿ : ‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ
ಫ್ಲ್ಯಾಟ್ನೊಳಗೆ ಅವರ ಅಡುಗೆಕೋಣೆಗೂ ಕರೆದುಕೊಂಡು ಹೋದರು. ಪಕ್ಕದ ಕೋಣೆಯಲ್ಲಿ ಅವರ ಸಿಡಿ ಸಂಗ್ರಹ, ಫೊಟೋಗಳನ್ನು ತೋರಿಸಿದರು. ಕಾಫಿ, ತಿಂಡಿಯ ಉಪಚಾರ ನೀಡಿ, ಅಂದು ಅವರ ಮನೆಯಲ್ಲೇ ತಂಗಬೇಕು ಎಂದು ಒತ್ತಾಯಿಸಿದರು. ನಮಗೆ ವಿಮಾನ ಪ್ರಯಾಣ ಟಿಕೆಟ್ ಬುಕ್ ಆಗಿದ್ದರಿಂದ ಹೊರಡಲೇಬೇಕಾಯಿತು.
ಅವರೊಡನೆ ಇದ್ದ ಕ್ಷಣಗಳನ್ನು ದಾಖಲಿಸಲು ಮುಂಬೈಯಲ್ಲಿ ಫೊಟೋಗ್ರಾಫರ್ ಒಬ್ಬರಿಗೆ ಮನವಿ ಮಾಡಿ ಕರೆಸಿಕೊಂಡಿದ್ದೆ. ಆ ಆಸಾಮಿ ತನಗೆ ಬೇಕಾದಷ್ಟು ಫೊಟೋ ತೆಗೆದು ಹೋದವ ಮತ್ತೆಂದೂ ಸಿಗಲಿಲ್ಲ. ಫೊಟೋಗಳನ್ನೂ ಕೊಡಲಿಲ್ಲ!
ನನ್ನ ಅದೃಷ್ಟವೋ ಎಂಬಂತೆ ನನ್ನ ಕ್ಯಾಮೆರಾದಲ್ಲಿ ತೆಗೆದ ಕೆಲವೇ ಫೊಟೋಗಳು ದಾಖಲೆಯಾಗಿ ಉಳಿದವು. ಅವರ ಮನೆಯಲ್ಲೇ ಇದ್ದ ಎರಡು ಗಂಟೆ ನಮಗೆ ಒಂದು ಅತಿ ಅದ್ಭುತ ಅಯಸ್ಕಾಂತ ಶಕ್ತಿಯ ದರ್ಶನ ಮಾಡಿಸಿತು. ಲತಾಜೀ ಹಳೆಯ ಸಿನಿಮಾಗಳ ಕೆಲವು ಸಾಲುಗಳನ್ನು ಕೋರಿಕೆ ಮೇಲೆ ಗುನುಗಿದರು. ಪಕ್ಕದಲ್ಲೇ ಕೂರಿಸಿ ನಮ್ಮ ಕುಟುಂಬದ ಬಗ್ಗೆಯೂ ವಿಚಾರಿಸಿದರು. ಆಗ ತಾನೇ ಹೊರಬಂದಿದ್ದ ಅಣ್ಣಮ್ಮಯ್ಯ ಸ್ವರಲತಾರ್ಚನಂ ಸಂಸ್ಕೃತ ಸಿಡಿಯನ್ನು ಹಸ್ತಾಕ್ಷರೊಂದಿಗೆ ಉಡುಗೊರೆಯಾಗಿ ನೀಡಿದರು. ಅವರ ಪಾದ ಮುಟ್ಟಿ ನಮಸ್ಕರಿಸಿದಾಗ ನನ್ನ ಕೈಗಳನ್ನು ಅವರ ಕಣ್ಣಿಗೆ ಒತ್ತಿಕೊಂಡು ಆಶೀರ್ವಾದ ಮಾಡಿದರು. ಕನ್ನಡದ ಒಬ್ಬ ಸಾಮಾನ್ಯ ಪತ್ರಕರ್ತನಿಗೆ ಇದುವೇ ಬಹುದೊಡ್ಡ ನೆನಪು.
ಮುಂಬೈಯಿಂದ ಮರಳಿ ಬಂದೊಡನೆ ನಾನು ಕಾರ್ಯಕ್ರಮದ ತಯಾರಿ ಆರಂಭಿಸಿದೆ . ಆದರೆ ವಿಧಿ ಬೇರೆಯೇ ನಿರ್ಧರಿಸಿತು. ನನ್ನ ಹುದ್ದೆ ತ್ಯಜಿಸಬೇಕಾದ ಸನ್ನಿವೇಶ ನಿರ್ಮಾಣವಾಯಿತು. ಮ್ಯಾನೇಜ್ಮೆಂಟ್ ಕೂಡಾ ಮರೆಯಿತು. ಲತಾಜೀ ಅವರಿಗೆ ತಿಳಿಸುವ ಧೈರ್ಯ ನನಗೆ ಬಂದಿರಲಿಲ್ಲ. ಆ ಹಿರಿಯ ಜೀವ ಏನು ಭಾವಿಸಿತೋ…! ದಶಕ ಕಳೆದರೂ ನನ್ನನ್ನು ಕಾಡುವ ವಿಷಯವೇ ಇದು. ಹಕ್ಕಿಗಳ ಫೋಟೋಗ್ರಫಿಗೆ ಪ್ರಯಾಣ ಮಾಡುವಾಗ ಲತಾಜೀ ಹಾಡು ಆಲಿಸುತ್ತಾ, ಅವರನ್ನು ನೆನಪಿಸುವುದೇ ನನ್ನ ಈಗಿನ ಕೆಲಸ.
ನನ್ನಿಂದ ತಪ್ಪಾಗಿದೆ, ಕ್ಷಮಿಸಿ ಲತಾಜೀ. ನಿಮ್ಮನ್ನು ಕರೆಸಲಾಗಲಿಲ್ಲ.
ಇದನ್ನೂ ಓದಿ : Lata Mangeshkar Hit Songs : ಹೇಮಾ ಹೋಗಿ ಲತಾ ಆಗಿ ನೀವು ಇಂಥ ಸೂಪರ್ ಹಿಟ್ ಹಾಡುಗಳನ್ನು ಧಾರೆ ಎರೆದಿರಿ