ಲತಾ ಮಂಗೇಶ್ಕರ್ ನಿಧನ ಆಘಾತ ತಂದಿದೆ ಎಂದ ರಾಷ್ಟ್ರಪತಿ ರಾಮನಾಥ ಕೋವಿಂದ್; ಅಮಿತ್ ಶಾ, ರಾಜನಾಥ್ ಸಿಂಗ್ರಿಂದ ಸಂತಾಪ
ಲತಾ ದೀದಿ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರು ತಮ್ಮ ಸುಮಧುರ, ಮೋಡಿ ಮಾಡುವ ಕಂಠದಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯರಾಗಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ಭಾರತದ ಕೋಗಿಲೆ ಲತಾ ಮಂಗೇಶ್ಕರ್ ನಿಧನ ನನಗೆ ದೊಡ್ಡ ಆಘಾತ ತಂದಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind) ಟ್ವೀಟ್ ಮಾಡಿದ್ದಾರೆ. ಭಾರತ ರತ್ನ ಪುರಸ್ಕೃತ ಲತಾ ಜೀ ಅವರ ಸಾಧನೆಗಳು ಅಸದೃಶ. ಲತಾ ಜಿ ತಮ್ಮ ಹಾಡುಗಳಿಂದಲೇ ಭಾರತದ ಸೌಂದರ್ಯ, ಸಾರವನ್ನು ನಿರೂಪಿಸಿದ್ದರು. ಈ ದೇಶದ ಹಲವು ತಲೆಮಾರುಗಳ ಜನರು ಲತಾ ಮಂಗೇಶ್ಕರ್ ಹಾಡುಗಳ ಮೂಲಕ ತಮ್ಮ ಅಂತರಂಗದ ಭಾವನೆಗಳ ಅಭಿವ್ಯಕ್ತಿಯನ್ನು ಕಂಡುಕೊಂಡವು ಎಂದು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದಲೂ ಕೊವಿಡ್ 19 ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್ ಅವರು ಇಂದು ಬೆಳಗ್ಗೆ ನಿಧನರಾಗಿದ್ದು, ದೇಶಾದ್ಯಂತ ಹಲವರು ಸಂತಾಪ ಸೂಚಿಸುತ್ತಿದ್ದಾರೆ. ತಮ್ಮ ಇಂಪಾದ ಧ್ವನಿಯಿಂದ ಮನೆಮಾತಾಗಿದ್ದ ಲತಾ ಜಿ ಸಾವಿಗೆ ರಾಜಕೀಯ ಕ್ಷೇತ್ರದ ಪ್ರಮುಖರು ಟ್ವೀಟ್ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ: ಲತಾ ದೀದಿ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರು ತಮ್ಮ ಸುಮಧುರ, ಮೋಡಿ ಮಾಡುವ ಕಂಠದಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯರಾಗಿದ್ದಾರೆ. ಭಾರತೀಯ ಸಂಗೀತದ ಮಾಧುರ್ಯವನ್ನು ವಿಶ್ವಕ್ಕೇ ಪಸರಿಸಿದ್ದಾರೆ. ಅವರ ನಿಧನ ನನಗೆ ವೈಯಕ್ತಿಕ ನಷ್ಟ. ನಾನು ಹಲವು ಬಾರಿ ಲತಾ ದೀದಿಯನ್ನು ಭೇಟಿಯಾಗಿ ವಾತ್ಸಲ್ಯ, ಆಶೀರ್ವಾದವನ್ನು ಪಡೆದಿದ್ದೇನೆ. ಇದು ನನ್ನ ಅದೃಷ್ಟವೆಂದೇ ಭಾವಿಸುತ್ತೇನೆ. ಅವರಲ್ಲಿ ಅಪ್ರತಿಮ ದೇಶಭಕ್ತಿ ಇತ್ತು. ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು ಸದಾ ಪ್ರೀತಿಯಿಂದ ಮಾತನಾಡುತ್ತಿದ್ದರು. ಅವರ ಕುಟುಂಬ, ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
मैं खुद को सौभाग्यशाली समझता हूँ कि समय-समय पर मुझे लता दीदी का स्नेह और आशीर्वाद प्राप्त होता रहा। अपने अतुलनीय देशप्रेम, मधुर वाणी और सौम्यता से वो सदैव हमारे बीच रहेंगी। उनके परिजनों व असंख्य प्रशंसकों के प्रति अपनी संवेदनाएं व्यक्त करता हूँ। ॐ शांति शांति pic.twitter.com/52fy46tOmE
— Amit Shah (@AmitShah) February 6, 2022
ರಕ್ಷಣಾ ಸಚಿವ ರಾಜನಾಥ್ ಸಿಂಗ್: ಸ್ವರ ಕೋಗಿಲೆ ಲತಾ ಮಂಗೇಶ್ಕರ್ ನಿಧನದಿಂದ ಭಾರತದ ಧ್ವನಿ ಕಳೆದು ಹೋದಂತೆ ಭಾಸವಾಗುತ್ತಿದೆ. ಜೀವನದುದ್ದಕ್ಕೂ ಸ್ವರಗಳೊಂದಿಗೇ ಬದುಕಿದರು. ಲತಾ ಜೀ ಅಗಲಿಕೆ ಈ ದೇಶದ ಕಲೆ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್: ಅದೆಷ್ಟೋ ತಲೆಮಾರುಗಳಿಗೆ ಸಂಗೀತ ರಸದೌತಣ ನೀಡಿದ್ದ ಲತಾ ಮಂಗೇಶ್ಕರ್ ಇನ್ನಿಲ್ಲ. ಅವರ ಹಾಡುಗಳು ನಿತ್ಯ ಹರಿದ್ವರ್ಣದಂತೆ ಉಳಿಯುತ್ತವೆ. ಲತಾ ಜೀ ತಮ್ಮ ಇಡೀ ಜೀವನವನ್ನು ಸಂಗೀತಕ್ಕಾಗಿ ಮುಡಿಪಾಗಿಟ್ಟಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಾಂತ್ವನಗಳು.
ಸ್ಮೃತಿ ಇರಾನಿ: ನಮ್ಮ ರಾಷ್ಟ್ರದ ಸಂಪತ್ತು ಇಂದು ಕೊನೆಯುಸಿರೆಳೆದರು. ಅದೆಷ್ಟೋ ನೆನಪುಗಳನ್ನು ನಮ್ಮ ಪಾಲಿಗೆ ಕೊಟ್ಟು ಹೋದರು. ನಮ್ಮ ಆತ್ಮಸಾಕ್ಷಿಯ ಮೇಲೆ ಅವರು ಒತ್ತಿದ ಮುದ್ರೆಯನ್ನು ಸದಾ ಕಾಪಾಡಿಕೊಳ್ಳಲಾಗುತ್ತದೆ. ಅವರ ಕಾಳಜಿ, ಪ್ರೀತಿಯನ್ನು ಅನುಭವಿಸುವ ಅದೃಷ್ಟ ನನಗೆ ಸಿಕ್ಕಿತ್ತು. ಲಕ್ಷಾಂತರ ಅಭಿಮಾನಿಗಳಂತೆ ನಾನೂ ಕೂಡ ಅವರ ನಿಧನದಿಂದ ದುಃಖಿತನಾಗಿದ್ದೇನೆ.
ಪ್ರಲ್ಹಾದ್ ಜೋಶಿ: ಭಾರತದ ಸುಪ್ರಸಿದ್ಧ ಗಾಯಕಿ, ಹಿಂದಿ ಚಿತ್ರರಂಗದಲ್ಲಿ 36 ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿರುವುದಲ್ಲದೆ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಹಾಡಿದ್ದ ಭಾರತ ರತ್ನ, ಪದ್ಮ ವಿಭೂಷಣ, ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ನಿಧನರಾದ ಸುದ್ದಿ ಕೇಳಿ ಅತೀವ ಸಂತಾಪವಾಗಿದೆ.
ಇದನ್ನೂ ಓದಿ: ‘ಬೆಳ್ಳನೆ ಬೆಳಗಾಯಿತು..’ ಎಂದು ಕನ್ನಡಿಗರ ಮನ ಗೆದ್ದಿದ್ದ ಲತಾ ಮಂಗೇಶ್ಕರ್; ಇಲ್ಲಿದೆ ಅವರ ಕನ್ನಡ ಗೀತೆ ಬಗ್ಗೆ ವಿವರ