Lata Mangeshkar: ಲತಾ ಮಂಗೇಶ್ಕರ್ ಹಾಡುಗಳನ್ನು ಕೇಳಿ, ಅರ್ಥ ಮಾಡಿಕೊಳ್ಳುವುದೇ ಅವರಿಗೆ ನೀಡುವ ನಿಜವಾದ ಗೌರವ; ಸಚ್ಚಿದಾನಂದ ಹೆಗಡೆ
Lata Mangeshkar Songs: ಇಂದಿನ ಸಮಯದಲ್ಲಿ ನಿಜವಾದ ಸಂಯಮವನ್ನಿಟ್ಟುಕೊಂಡು ಲತಾ ಮಂಗೇಶ್ಕರ್ ಹಾಗೂ ಆ ಕಾಲದ ಗಾಯಕರ, ಗಾಯನದ ಇಂಪು, ಗಾಯನದ ಭಾವನೆ, ಕಂಪೋಸಿಷನ್ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೇ ನಾವು ಅವರಿಗೆ ನಿಜವಾಗಿಯೂ ನೀಡುವ ದೊಡ್ಡ ಗೌರವ- ಸಚ್ಚಿದಾನಂದ ಹೆಗಡೆ.
ಲತಾ ಮಂಗೇಶ್ಕರ್ ಅವರ ಹಾಡುಗಳನ್ನು ಸಂಯಮದಿಂದ ಕೇಳಿ, ಅರ್ಥ ಮಾಡಿಕೊಳ್ಳುವುದೇ ಅವರಿಗೆ ನಾವು ನೀಡುವ ನಿಜವಾದ ಗೌರವ. ಲತಾ ಮಂಗೇಶ್ಕರ್ (Lata Mangeshkar) ಇಲ್ಲಿಯವರೆಗೂ ಬಹಳ ಅದ್ಭುತ ಹಾಡುಗಳನ್ನು ಹಾಡಿದ್ದರೂ ಆ ಸಂದರ್ಭದ ಹಾಡನ್ನು ಈಗ ಕೇಳಲು ಹೆಚ್ಚು ಸಂಯಮ ಬೇಕಾಗಿದೆ. ಆ ಸಂಯಮ, ಸೆನ್ಸಿಟಿವಿಟಿ ಇಲ್ಲದಿದ್ದರೆ ಲತಾ ಮಂಗೇಶ್ಕರ್ ನಮಗೆ ಇಷ್ಟವಾಗುವುದು ಕಷ್ಟ. ಇಂದಿನ ಸಮಯದಲ್ಲಿ ನಿಜವಾದ ಸಂಯಮವನ್ನಿಟ್ಟುಕೊಂಡು ಲತಾ ಮಂಗೇಶ್ಕರ್ ಹಾಗೂ ಆ ಕಾಲದ ಗಾಯಕರ, ಗಾಯನದ ಇಂಪು, ಗಾಯನದ ಭಾವನೆ, ಕಂಪೋಸಿಷನ್ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದೇ ನಾವು ಅವರಿಗೆ ನಿಜವಾಗಿಯೂ ನೀಡುವ ದೊಡ್ಡ ಗೌರವ ಎಂಬುದು ಕತೆಗಾರ ಸಚ್ಚಿದಾನಂದ ಹೆಗಡೆ ಅವರ ಅಭಿಪ್ರಾಯ.
ಭಾರತರತ್ನ ಪುರಸ್ಕೃತ ಗಾಯಕಿ ಲತಾ ಮಂಗೇಶ್ಕರ್ ಇಂದು ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಜೀವನ ಮತ್ತು ಸಂಗೀತಯಾನದ ಬಗ್ಗೆ ಸಚ್ಚಿದಾನಂದ ಹೆಗಡೆ ಅವರು ಟಿವಿ9 ಡಿಜಿಟಲ್ ಜೊತೆ ಮಾತನಾಡಿದ್ದು, ಲತಾ ಮಂಗೇಶ್ಕರ್ ಅವರ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಕುರಿತು ಪ್ರಮುಖ ಅಂಶಗಳು ಇಲ್ಲಿವೆ. ಲತಾ ಮಂಗೇಶ್ಕರ್ ಹಾಗೂ ಅವರ ಕಾಲದ ಗಾಯಕರ ಗೀತೆಗಳ ಇಂಪು, ಅವರ ಶೈಲಿಯನ್ನು ಸಂಯಮದಿಂದ ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದಕ್ಕೆ ಉದಾಹರಣೆ ಇಲ್ಲಿದೆ. ದೂರ್, ಲೆಹೆರ್ ಎಂಬ ಶಬ್ದಗಳನ್ನೆಲ್ಲ ಹಿಂದಿನ ಕಾಲದ ಗಾಯಕರು ಹೇಗೆ ಬಳಸುತ್ತಿದ್ದರು, ಯಾವ ರೀತಿಯಲ್ಲಿ ಹೇಳುತ್ತಿದ್ದರು ಎಂಬುದು ಮುಖ್ಯ. ಹಿಂದಿನ ಕಾಲದ ಗಾಯಕರು ಪ್ರತಿ ಶಬ್ದವನ್ನೂ ಅನುಭವಿಸಿ ಹಾಡುತ್ತಿದ್ದರು.
ಕತೆಗಾರ ಸಚ್ಚಿದಾನಂದ ಹೆಗಡೆ ಕೇವಲ ಸಿನಿಮಾ ಹಾಡು ಮಾತ್ರವಲ್ಲದೆ ಲತಾ ಮಂಗೇಶ್ಕರ್ ಭೀಮಸೇನ ಜೋಷಿಯ ಜೊತೆ ಹಾಡಿದ ಭಕ್ತಿಗೀತೆಗಳು ಕೂಡ ಪ್ರಸಿದ್ಧವಾದವು. ನಾವು ಯಾರ ಜೊತೆ ಹಾಡುತ್ತೇವೆ ಎಂಬುದರ ಆಧಾರದಲ್ಲಿ ನಮ್ಮ ಸಾಮರ್ಥ್ಯ ಏನೆಂಬುದು ನಿರ್ಧಾರವಾಗುತ್ತದೆ. ಕೇವಲ ಸಿನಿಮಾ ಹಾಡುಗಳಷ್ಟೇ ಅಲ್ಲದೆ ಶಾಸ್ತ್ರೀಯ ಸಂಗೀತ ಗಾಯಕರ ಜೊತೆಯೂ ಲತಾ ಮಂಗೇಶ್ಕರ್ ಹಾಡತೊಡಗಿದಾಗ ಅವರ ಸಾಮರ್ಥ್ಯ ಏನೆಂಬುದು ಗೊತ್ತಾಯಿತು. ಆಶಾ ಬೋಸ್ಲೆ ಗುಲಾಂ ಅಲಿ ಜೊತೆ ಹಾಡಿದಾಗಲೇ ಆಕೆಯ ಗಜಲ್ ಶಕ್ತಿ ಗೊತ್ತಾಗಿದ್ದು. ಅದೇ ರೀತಿ ಲತಾ ಮಂಗೇಶ್ಕರ್ – ಭೀಮಸೇನ ಜೋಶಿಯಂತಹ ದಿಗ್ಗಜರ ಜೊತೆ ಹಾಡಿದಾಗ ಆಕೆಯ ನಿಜವಾದ ಸಂಗೀತದ ಶಕ್ತಿ ಗೊತ್ತಾಯಿತು.
ಭಾರತ ವಿಭಜನೆ ಆಗುವುದಕ್ಕೂ ಮೊದಲಿನ ಸಂಗೀತ ದಿಗ್ಗಜರ ಪೈಕಿ ಸಲಾಮತ್ ಅಲಿ ಖಾನ್, ನಜಾಕತ್ ಅಲಿ ಖಾನ್, ಗುಲಾಂ ಅಲಿ ಸೇರಿದಂತೆ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಪಟ್ಟ ಎಲ್ಲರೂ ಲತಾ ಮಂಗೇಶ್ಕರ್ ಅವರನ್ನು ಗಾಯಕಿಯಾಗಿ ಸ್ವೀಕರಿಸಿದ್ದರು. ಸಿನಿಮಾ ಸಂಗೀತ ಎರಡನೇ ದರ್ಜೆಯ ಸಂಗೀತ ಎಂಬ ಅಭಿಪ್ರಾಯವಿದ್ದ ಕಾಲದಲ್ಲೇ ಸಿನಿಮಾ ಸಂಗೀತ ಗಾಯಕಿಯಾಗಿದ್ದರೂ ಲತಾರನ್ನು ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜರು ಒಪ್ಪಿಕೊಂಡು, ಅವರೊಂದಿಗೆ ಹಾಡಿದ್ದು ಬಹಳ ವಿಶೇಷವಾದುದು.
ಲತಾ ಮಂಗೇಶ್ಕರ್ ಅವರಿಗೆ ಕೇವಲ ಸಂಗೀತವಷ್ಟೇ ಅಲ್ಲದೆ ಅವರ ಸುತ್ತಲಿನ ರಾಜಕೀಯ, ಸಾಂಸ್ಕೃತಿಕ ಬದಲಾವಣೆಗಳಿಗೆ ಅವರದೇ ಆದ ರೀತಿಯಲ್ಲಿ ಅವರು ಸ್ಪಂದಿಸುತ್ತಿದ್ದರು. ಉದಾಹರಣೆಗೆ, ಸಚಿನ್ ತೆಂಡೂಲ್ಕರ್ ಮತ್ತು ಅವರ ನಡುವಿನ ಚರ್ಚೆಯನ್ನು ಗಮನಿಸಬಹುದು. ಲತಾ ಮಂಗೇಶ್ಕರ್ ಕ್ರಿಕೆಟ್ ನೋಡುತ್ತಿದ್ದರು, ಸಚಿನ್ ತೆಂಡೂಲ್ಕರ್ ನಿವೃತ್ತಿ ಪಡೆದಾಗ ಬೇಸರ ವ್ಯಕ್ತಪಡಿಸಿದ್ದರು. ಅದೇ ರೀತಿ ಸಮಾಜದ ಬೇರೆ ವಿಷಯಗಳಿಗೂ ಅವರು ಸ್ಪಂದಿಸುತ್ತಿದ್ದರು.
ಲತಾ ಮಂಗೇಶ್ಕರ್ ಅವರ ಸೋದರ ಹೃದಯನಾಥ್ ಮಂಗೇಶ್ಕರ್ ಓರ್ವ ಅತ್ಯುತ್ತಮ ಕಂಪೋಸರ್. ಅವರು ಕಂಪೋಸ್ ಮಾಡಿರುವ ಲತಾ ಮಂಗೇಶ್ಕರ್ ಅವರ ಗೀತೆಗಳು ನನಗೆ ಬಹಳ ಇಷ್ಟ. ಅಲ್ಲಿ ಕೇವಲ ಶ್ರೇಷ್ಠ ಸಂಗೀತ ಸಂಯೋಜನೆಯಷ್ಟೇ ಅಲ್ಲ ಮರಾಠಿಯ ನೇಟಿವಿಟಿಯನ್ನು ಕೂಡ ನಾವು ಗಮನಿಸಬಹುದು. ಮರಾಠಿ ನೇಟಿವಿಟಿ ಇದ್ದುದರಿಂದ ಲತಾ ಮಂಗೇಶ್ಕರ್ ಅವರ ಗಾಯನ ಬಹಳ ಪರಿಣಾಮಕಾರಿಯಾಗಿತ್ತು. ಸಂಗೀತ ಕ್ಷೇತ್ರಕ್ಕೆ ಲತಾ ಮಂಗೇಶ್ಕರ್ ಅವರ ಕುಟುಂಬದವರ ಕೊಡುಗೆ ಕೂಡ ಬಹಳ ಮುಖ್ಯವಾದುದು ಎಂದು ಸಚ್ಚಿದಾನಂದ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Lata Mangeshkar: ಲತಾ ಮಂಗೇಶ್ಕರ್ ಅವರ ಇಡೀ ಕುಟುಂಬವೇ ಸಂಗೀತಕ್ಕೆ ಮುಡಿಪಾಗಿತ್ತು
Lata Mangeshkar: ಲತಾ ಮಂಗೇಶ್ಕರ್ ಕೊನೆವರೆಗೂ ಏಕೆ ಮದುವೆಯೇ ಆಗಲಿಲ್ಲ?
Published On - 1:21 pm, Sun, 6 February 22