ದೆಹಲಿ: ಕೊವಿಡ್ ಸೋಂಕು ನಿರೋಧಕವಾಗಿ ಕೆಲಸ ಮಾಡಬಲ್ಲ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ) ಔಷಧದ 10 ಸಾವಿರ ಡೋಸ್ಗಳನ್ನು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ವಿತರಿಸಲಿದ್ದಾರೆ. ಹೈದರಾಬಾದ್ನ ಡಾ.ರೆಡ್ಡಿಸ್ ಲ್ಯಾಬ್ನ ಸಹಯೋಗದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಈ ಔಷಧ ಕೊವಿಡ್ ವಿರುದ್ಧದ ಹೋರಾಟದಲ್ಲಿ ಅತ್ಯಂತ ಸಹಕಾರಿಯಾಗಲಿದೆ ಎಂದು ವ್ಯಾಖ್ಯಾನಿಸಲ್ಪಟ್ಟಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿಯೂ ಭರವಸೆ ನೀಡಬಲ್ಲ ಫಲಿತಾಂಶವನ್ನು ನೀಡಿರುವ 2ಡಿಜಿ, ಪೌಡರ್ ರೂಪದಲ್ಲಿ ಇರಲಿದ್ದು ನೀರಿನ ಜತೆ ಬೆರೆಸಿ ಸೇವಿಸಬಹುದಾಗಿದೆ.
ಹೆಸರು ಮತ್ತು ಇನ್ನಿತರೆ ಮಾಹಿತಿ ಏನು?
ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಸಹಾಯಕ ಔಷಧ ಎಂದು ಕರೆಯುತ್ತಾರೆ. ಅಂದರೆ ಇದೇ ಪ್ರಧಾನ ಔಷಧಿ ಅಲ್ಲ. ಉಳಿದ ಔಷಧಿ ಜೊತೆಗೆ ಇದನ್ನು ಕೊಟ್ಟಾಗ ಸೋಂಕಿನ ತೀವ್ರತೆ ಕಡಿಮೆ ಆಗುತ್ತ ಬರುತ್ತದೆ. ಪ್ರಾಥಮಿಕ ಚಿಕಿತ್ಸೆಗೆ ಸಹಾಯ ಮಾಡುವುದು ಇದರ ಉದ್ದೇಶ. ತೀವ್ರವಾದ ಕೊವಿಡ್ -19 ಪ್ರಕರಣಗಳಲ್ಲಿ ಸಹಾಯಕ ಚಿಕಿತ್ಸೆಯಾಗಿ ಬಳಸಲು ಕೊಟ್ಟ ಔಷಧಿಯ ಹೆಸರು 2-ಡಿಆಕ್ಸಿ-ಡಿ-ಗ್ಲೂಕೋಸ್ (2-ಡಿಜಿ). “ಗ್ಲೂಕೋಸ್‌ನ ಜೆನೆರಿಕ್ ಅಣು ಆಗಿರುವುದರಿಂದ ಇದನ್ನು ಸುಲಭವಾಗಿ ಉತ್ಪಾದಿಸಬಹುದು ಮತ್ತು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿಸಬಹುದು” ಎಂದು ಡಿಆರ್‌ಡಿಒ ಹೇಳಿಕೆಯಲ್ಲಿ ತಿಳಿಸಿದೆ.
“ಔಷಧಿಯನ್ನು ಡಿಆರ್‌ಡಿಒ ಲ್ಯಾಬ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ ಅವರು ಡಾ. ರೆಡ್ಡಿ ಅವರ ಪ್ರಯೋಗಾಲಯಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. ರೋಗಿಗಳ ಮೇಲಿನ ಪ್ರಯೋಗದಲ್ಲಿ, ಈ ಅಣುವು ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.”
ಹಾಗೆ ನೋಡಿದರೆ ರೆಮ್ಡಿಸಿವರ್ ಕೊಟ್ಟು ಈಗ ಆ ಪ್ರಯೋಗ ಮಾಡುತ್ತಿದ್ದರು. ಆದರೆ ರೆಮ್ಡಿಸಿವರ್ ಬಳಕೆಯಿಂದ ಯಾವ ಪ್ರಯೋಜನ ಇಲ್ಲ ಎಂಬುದನ್ನು ವೈದ್ಯರು ಕಂಡುಕೊಂಡ ಹಿನ್ನೆಲೆಯಲ್ಲಿ ಈ ಔಷಧಿ ಮುಖ್ಯ ಎನ್ನಿಸುತ್ತದೆ.
ಡಿಆರ್‌ಡಿಒ ಪ್ರಕಟಣೆಯ ಪ್ರಕಾರ, 2-ಡಿಜಿಯೊಂದಿಗೆ ಚಿಕಿತ್ಸೆ ಪಡೆದ ರೋಗಿಗಳು ರೋಗ ಲಕ್ಷಣದ ಆಧಾರದ ಮೇಲೆ ನೀಡುವ ಚಿಕಿತ್ಸೆಯಲ್ಲಿ (symptomatic treatment) ಕಡಿಮೆ ಎಂದರೂ 2.5 ದಿನ ಬೇಗ ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಪ್ರಕಟಣೆ ತಿಳಿಸಿದೆ. ಔಷಧವು ಪುಡಿ ರೂಪದಲ್ಲಿ ಸ್ಯಾಚೆಟ್‌ಗಳಲ್ಲಿ ಬರುತ್ತದೆ. ಇದನ್ನು ನೀರಿನಲ್ಲಿ ಕರಗಿಸಿ ಮೌಖಿಕವಾಗಿ ತೆಗೆದುಕೊಳ್ಳಲಾಗುತ್ತದೆ. ಇದನ್ನು ತೆಗೆದುಕೊಂಡಾಗ, ಇದರ ಪ್ರಭಾವ ವೈರಸ್ ಸೋಂಕಿತ ಜೀವಕೋಶವನ್ನು ತಲುಪುತ್ತದೆ. “ವೈರಲ್ ಸಂಶ್ಲೇಷಣೆ ಮತ್ತು ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ” ಎಂದು ಡಿಆರ್‌ಡಿಒ ಹೇಳಿದೆ.
ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಕೊವಿಡ್ ಗೈಡ್ಲೈನ್ಸ್; ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ
(10 thousand doses of DRDO Anti covid drugs distributed tomorrow )
Published On - 9:55 pm, Sun, 16 May 21