ದೆಹಲಿ: ಕೊವಿಡ್ 19 ಲಸಿಕೆ ನೀಡಿಕೆ ಅಭಿಯಾನ (Covid 19 Vaccine Drive)ದಲ್ಲಿ ಇಂದು ಭಾರತ ದಾಖಲೆ ನಿರ್ಮಿಸಿದೆ. ಲಸಿಕೆ ಅಭಿಯಾನ ಶುರುವಾದ ಜನವರಿ 16ರಿಂದ ಇಲ್ಲಿಯವರೆಗೆ 100 ಕೋಟಿ ಡೋಸ್ ಕೊವಿಡ್ 19 ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರ ಈ ಖುಷಿಯಲ್ಲಿ ಇರುವ ಹೊತ್ತಲ್ಲೇ ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮೂಲಕ ಕೊಂಕಾಡಿದ್ದಾರೆ. ಅಂತೂ ಕೇಂದ್ರ ಸರ್ಕಾರ ಈಗ ಭಾಗಶಃ ತನ್ನನ್ನು ತಾನು ಉದ್ಧಾರ ಮಾಡಿಕೊಂಡಿತು ಎಂದು ಹೇಳಿದ್ದಾರೆ. ಕೊವಿಡ್ 19 ಎರಡನೇ ಅಲೆಯಲ್ಲಿ ಸರ್ಕಾರದ ಅವ್ಯವಸ್ಥೆಯನ್ನು ನೆನಪಿಸಿದ್ದಾರೆ.
ಇಂದು ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಇಂದು ಭಾರತ 100 ಕೋಟಿ ಡೋಸ್ ಲಸಿಕೆ ನೀಡಿಕೆ ಸಾಧನೆ ಮಾಡಿದ್ದು ನಿಜಕ್ಕೂ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಚಾರ. ನಾವು ಈ ಕ್ರೆಡಿಟ್ನ್ನು ಕೇಂದ್ರ ಸರ್ಕಾರಕ್ಕೆ ಕೊಡೋಣ. ಯಾಕೆಂದರೆ ಕೊವಿಡ್ 19 ಎರಡನೇ ಅಲೆಯ ಹೊತ್ತಲ್ಲಿ ಅಸಮರ್ಪಕ ನಿರ್ವಹಣೆ ಮತ್ತು ಅದೇ ಹೊತ್ತಲ್ಲಿ ಕೊರೊನಾ ಲಸಿಕೆಯೂ ಸರಿಯಾಗಿ ಸಿಗದಂತೆ ಮಾಡಿದ ನಂತರ ಈಗ ಕೇಂದ್ರ ಸರ್ಕಾರ ಭಾಗಶಃ ತನ್ನನ್ನು ತಾನು ಉದ್ಧಾರ ಮಾಡಿಕೊಂಡಿತು ಎಂದು ಹೇಳಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರವನ್ನು ಟೀಕಾತ್ಮಕವಾಗಿಯೇ ಪ್ರಶಂಸಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ನಾಯಕ ಪವನ್ ಖೇರಾ ಕೂಡ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಶಶಿ ತರೂರ್ ಟ್ವೀಟ್ನ್ನೇ ಉಲ್ಲೇಖಿಸಿ ಟ್ವೀಟ್ ಮಾಡಿದ ಅವರು, ಇದೀಗ 100 ಕೋಟಿ ಡೋಸ್ ಲಸಿಕೆ ನೀಡಿಕೆ ಸಾಧನೆಯ ಮನ್ನಣೆಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದರೆ, ಕೊವಿಡ್ 19ನಿಂದ ಈಗಲೂ ಬಳಲುತ್ತಿರುವ, ಸರ್ಕಾರದ ಅಸಮರ್ಪಕ ಆಡಳಿತದಿಂದ ತೊಂದರೆಗೀಡಾದ, ಪ್ರಾಣ ಕಳೆದುಕೊಂಡ ಲಕ್ಷಾಂತರ ಕುಟುಂಬಗಳಿಗೆ ಅವಮಾನ ಮಾಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ನಾವು ಸರ್ಕಾರಕ್ಕೆ ಕ್ರೆಡಿಟ್ ಕೊಡುವುದಕ್ಕೂ ಮೊದಲು ಪ್ರಧಾನಿ ಮೋದಿ, ಅಂಥ ಸಂಕಷ್ಟಕ್ಕೀಡಾದ ಕುಟುಂಬಗಳ ಬಳಿ ಕ್ಷಮೆ ಕೇಳಬೇಕು. ಸಾಧನೆಯ ಮನ್ನಣೆ ಏನಿದ್ದರೂ ವಿಜ್ಞಾನಿಗಳು ಮತ್ತು ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗೆ ಸಲ್ಲಬೇಕು ಎಂದಿದ್ದಾರೆ.
ಇದನ್ನೂ ಓದಿ: Video: ಪತ್ರಕರ್ತನ ಮೊಬೈಲ್ ಕದ್ದು ಮಳ್ಳಾದ ಕಳ್ಳ; ಕದ್ದ ಮರುಕ್ಷಣವೇ ಅವನಿಗೇ ಗೊತ್ತಿಲ್ಲದೆ 20 ಸಾವಿರ ಜನರಿಗೆ ಮುಖ ತೋರಿಸಿದ !
Vittal Malekudiya: ವಿಠಲ್ ಮಲೆಕುಡಿಯ ನಕ್ಸಲ್ ನಂಟಿನ ಆರೋಪದಿಂದ ಮುಕ್ತ; 9 ವರ್ಷಗಳ ಬಳಿಕ ಮಹತ್ವದ ತೀರ್ಪು ಪ್ರಕಟ
Published On - 5:15 pm, Thu, 21 October 21